ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 5

ಕಷ್ಟದ ಜೀವನ ಆರಂಭ

ಕಷ್ಟದ ಜೀವನ ಆರಂಭ

ಏದೆನ್‌ ತೋಟದ ಹೊರಗೆ ಆದಾಮಹವ್ವರಿಗೆ ಅನೇಕ ತೊಂದರೆಗಳಿದ್ದವು. ಆಹಾರಕ್ಕಾಗಿ ಅವರು ಬೆವರುಸುರಿಸಿ ಕಷ್ಟಪಟ್ಟು ದುಡಿಯಬೇಕಾಯಿತು. ಈಗ ಎಲ್ಲಿ ನೋಡಿದರೂ ಅಂದವಾದ ಫಲವೃಕ್ಷಗಳ ಬದಲಿಗೆ ಬಹಳ ಮುಳ್ಳುಗಳೂ ಕಳೆಗಳೂ ಸುತ್ತಮುತ್ತ ಬೆಳೆಯುತ್ತಿದ್ದವು. ಆದಾಮಹವ್ವರು ದೇವರಿಗೆ ಅವಿಧೇಯರಾದಾಗ ಮತ್ತು ಆತನ ಸ್ನೇಹವನ್ನು ಮುರಿದಾಗ ಸಂಭವಿಸಿದ್ದು ಇದೇ.

ಆದರೆ ಅದಕ್ಕಿಂತಲೂ ಕೆಟ್ಟ ವಿಷಯವೇನೆಂದರೆ, ಆದಾಮಹವ್ವರಿಗೆ ಶಾಶ್ವತವಾಗಿ ಜೀವಿಸಲು ಸಾಧ್ಯವಾಗಲಿಲ್ಲ. ಒಂದು ನಿರ್ದಿಷ್ಟ ಮರದ ಹಣ್ಣನ್ನು ತಿಂದರೆ ಅವರು ಸಾಯುವರೆಂದು ದೇವರು ಎಚ್ಚರಿಸಿದ್ದನ್ನು ಜ್ಞಾಪಿಸಿಕೊಳ್ಳಿರಿ. ಅವರು ಆ ಹಣ್ಣನ್ನು ತಿಂದ ದಿನದಿಂದಲೇ ವಯಸ್ಸಾಗುತ್ತಾ ಹೋಗಿ ಕೊನೆಗೆ ಸಾಯಲಿಕ್ಕಿದ್ದರು. ದೇವರ ಮಾತನ್ನು ಕೇಳದೆ ಎಂಥ ಅವಿವೇಕದ ಕೆಲಸಮಾಡಿದರು!

ಆದಾಮಹವ್ವರನ್ನು ದೇವರು ಏದೆನ್‌ ತೋಟದಿಂದ ಹೊರಗೆ ಹಾಕಿದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು. ಆ ಮಕ್ಕಳು ಸಹ ವೃದ್ಧರಾಗಿ ಸಾಯಲಿಕ್ಕಿದ್ದರು.

ಆದಾಮಹವ್ವರು ಯೆಹೋವನಿಗೆ ವಿಧೇಯರಾಗಿದ್ದಲ್ಲಿ, ಅವರ ಮತ್ತು ಅವರ ಮಕ್ಕಳ ಜೀವನವು ಸಂತೋಷಭರಿತವಾಗಿ ಇರುತ್ತಿತ್ತು. ಅವರೆಲ್ಲರೂ ಭೂಮಿಯ ಮೇಲೆ ಸಂತೋಷದಿಂದ ಸದಾಕಾಲ ಜೀವಿಸುತ್ತಿದ್ದರು. ಯಾರೊಬ್ಬರೂ ವೃದ್ಧರಾಗಿ ಕಾಯಿಲೆಬಿದ್ದು ಸಾಯುತ್ತಿರಲಿಲ್ಲ.

ಜನರು ಸದಾ ಸಂತೋಷದಿಂದ ಜೀವಿಸಬೇಕೆಂಬುದೇ ದೇವರ ಇಷ್ಟ. ಒಂದಾನೊಂದು ದಿನ ಜನರೆಲ್ಲರೂ ಸದಾ ಸಂತೋಷದಿಂದ ಜೀವಿಸುವರೆಂದು ಆತನು ವಾಗ್ದಾನಿಸಿದ್ದಾನೆ. ಆಗ ಇಡೀ ಭೂಮಿ ಸುಂದರವಾಗಿರುವುದು. ಮಾತ್ರವಲ್ಲ, ಎಲ್ಲಾ ಜನರೂ ಆರೋಗ್ಯವಂತರಾಗಿರುವರು. ಭೂಮಿಯ ಮೇಲಿರುವ ಪ್ರತಿಯೊಬ್ಬರು ಇತರರೊಂದಿಗೆ ಮತ್ತು ದೇವರೊಂದಿಗೆ ಒಳ್ಳೆಯ ಸ್ನೇಹಿತರಾಗಿ ಇರುವರು.

ಆದರೆ ಹವ್ವಳು ಇನ್ನು ಮುಂದೆ ದೇವರ ಸ್ನೇಹಿತೆಯಾಗಿರಲಿಲ್ಲ. ಹೀಗೆ ಆಕೆ ತನ್ನ ಮಕ್ಕಳನ್ನು ಹಡೆದಾಗ, ಅದು ಅವಳಿಗೆ ಸುಲಭವಾಗಿರಲಿಲ್ಲ. ಅವಳು ನೋವನ್ನು ಅನುಭವಿಸಿದಳು. ಯೆಹೋವನಿಗೆ ಅವಿಧೇಯಳಾದದ್ದು ಅವಳಿಗೆ ಬಹಳಷ್ಟು ಕಷ್ಟವನ್ನು ತಂದಿತೆಂದು ನೀವು ಒಪ್ಪುವುದಿಲ್ಲವೇ?

ಆದಾಮಹವ್ವರು ಅನೇಕ ಗಂಡು-ಹೆಣ್ಣು ಮಕ್ಕಳನ್ನು ಪಡೆದರು. ಮೊದಲ ಗಂಡುಮಗುವಿಗೆ ಕಾಯಿನ ಎಂದು ಹೆಸರಿಟ್ಟರು. ಎರಡನೆಯವನಿಗೆ ಹೇಬೆಲ ಎಂದು ಹೆಸರಿಟ್ಟರು. ಅವರಿಗೇನು ಸಂಭವಿಸಿತು? ನಿಮಗೆ ತಿಳಿದಿದೆಯೆ?