ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 9

ನೋಹನು ಒಂದು ನಾವೆಯನ್ನು ಕಟ್ಟುತ್ತಾನೆ

ನೋಹನು ಒಂದು ನಾವೆಯನ್ನು ಕಟ್ಟುತ್ತಾನೆ

ನೋಹನಿಗೆ ಒಬ್ಬಾಕೆ ಪತ್ನಿ ಮತ್ತು ಮೂವರು ಪುತ್ರರು ಇದ್ದರು. ಅವನ ಪುತ್ರರ ಹೆಸರುಗಳು ಶೇಮ್‌, ಹಾಮ್‌ ಮತ್ತು ಯೆಫೆತ್‌. ಈ ಮೂರು ಪುತ್ರರಿಗೆ ಹೆಂಡತಿಯರಿದ್ದರು. ಹೀಗೆ ನೋಹನ ಕುಟುಂಬದಲ್ಲಿ ಎಂಟು ಮಂದಿಯಿದ್ದರು.

ಒಂದು ಅಪೂರ್ವ ಕೆಲಸವನ್ನು ಮಾಡುವಂತೆ ದೇವರು ನೋಹನಿಗೆ ತಿಳಿಸಿದನು. ಒಂದು ದೊಡ್ಡ ನಾವೆಯನ್ನು ಕಟ್ಟುವಂತೆ ಅವನಿಗೆ ಹೇಳಿದನು. ಈ ನಾವೆಯು ಹಡಗಿನಂತೆ ದೊಡ್ಡದಾಗಿತ್ತು. ಆದರೆ ಅದು ದೊಡ್ಡದಾದ ಮತ್ತು ಉದ್ದವಾದ ಪೆಟ್ಟಿಗೆಯಂತೆ ಕಾಣುತಿತ್ತು. ‘ಅದನ್ನು ಮೂರು ಅಂತಸ್ತುಗಳಿರುವಷ್ಟು ಎತ್ತರವಾಗಿ ಕಟ್ಟು ಮತ್ತು ಅದರಲ್ಲಿ ಕೋಣೆಗಳಿರಲಿ’ ಎಂದು ದೇವರು ಹೇಳಿದನು. ನೋಹನೂ ಅವನ ಕುಟುಂಬವೂ ಪ್ರಾಣಿಗಳೂ ಇರಲಿಕ್ಕಾಗಿ ಮತ್ತು ಅವರೆಲ್ಲರಿಗೆ ಬೇಕಾಗುವಷ್ಟು ಆಹಾರವನ್ನು ಶೇಖರಿಸಿಡಲಿಕ್ಕಾಗಿ ಕೋಣೆಗಳನ್ನು ಮಾಡುವಂತೆ ದೇವರು ಹೇಳಿದನು.

ಸ್ವಲ್ಪವೂ ನೀರು ಒಳಗೆ ಬರದಂತೆ ಆ ನಾವೆಯನ್ನು ಭದ್ರಪಡಿಸಲು ಸಹ ದೇವರು ನೋಹನಿಗೆ ಹೇಳಿದನು. ದೇವರು ಅಂದದ್ದು: ‘ನಾನಂತೂ ಭೂಮಿಯ ಮೇಲೆ ಮಹಾ ಜಲಪ್ರಳಯವನ್ನು ಬರಮಾಡಿ ಇಡೀ ಲೋಕವನ್ನು ನಾಶಮಾಡುವೆನು. ನಾವೆಯೊಳಗೆ ಇಲ್ಲದ ಪ್ರತಿಯೊಬ್ಬನೂ ಸಾಯುವನು.’

ನೋಹ ಮತ್ತು ಅವನ ಪುತ್ರರು ಯೆಹೋವನು ಹೇಳಿದ ಮಾತಿಗೆ ವಿಧೇಯರಾಗಿ ನಾವೆಯನ್ನು ಕಟ್ಟಲು ಪ್ರಾರಂಭಿಸಿದರು. ಆದರೆ ಬೇರೆ ಜನರು ಅದನ್ನು ನೋಡಿ ನಗಾಡಿದರು. ಅವರು ಕೆಟ್ಟದ್ದನ್ನು ಮಾಡುತ್ತಾ ಇದ್ದರು. ದೇವರು ಏನು ಮಾಡಲಿದ್ದಾನೆಂದು ನೋಹನು ಅವರಿಗೆ ಹೇಳಿದಾಗ ಯಾರೊಬ್ಬರೂ ಅವನನ್ನು ನಂಬಲಿಲ್ಲ.

ನಾವೆಯು ತುಂಬಾ ದೊಡ್ಡದಾಗಿದ್ದುದರಿಂದ ಅದನ್ನು ಕಟ್ಟಲು ಬಹಳ ಸಮಯವು ತಗಲಿತು. ಕೊನೆಗೆ, ಅನೇಕ ವರ್ಷಗಳು ಕಳೆದ ಬಳಿಕ ಅದು ಮುಗಿಯಿತು. ಆಗ ದೇವರು ನೋಹನಿಗೆ ಪ್ರಾಣಿಗಳನ್ನು ನಾವೆಯೊಳಗೆ ತರುವಂತೆ ಹೇಳಿದನು. ಕೆಲವು ಜಾತಿಯ ಪ್ರಾಣಿಗಳಲ್ಲಿ ಒಂದು ಗಂಡು ಒಂದು ಹೆಣ್ಣು ಹೀಗೆ ಎರಡೆರಡಾಗಿ ತರುವಂತೆ ದೇವರು ಹೇಳಿದನು. ಆದರೆ ಬೇರೆ ಜಾತಿಯ ಪ್ರಾಣಿಗಳಲ್ಲಿ ಏಳೇಳನ್ನು ತರುವಂತೆ ದೇವರು ನೋಹನಿಗೆ ತಿಳಿಸಿದನು. ಎಲ್ಲಾ ಜಾತಿಯ ಪಕ್ಷಿಗಳನ್ನು ತರುವಂತೆಯೂ ದೇವರು ನೋಹನಿಗೆ ಹೇಳಿದನು. ದೇವರು ಹೇಳಿದಂತೆಯೇ ನೋಹನು ಮಾಡಿದನು.

ಆಮೇಲೆ ನೋಹ ಮತ್ತು ಅವನ ಕುಟುಂಬದವರು ಸಹ ನಾವೆಯೊಳಗೆ ಹೋದರು. ಆಗ ದೇವರು ಬಾಗಿಲನ್ನು ಮುಚ್ಚಿದನು. ಒಳಗೆ ನೋಹನೂ ಅವನ ಕುಟುಂಬದವರೂ ಕಾದುಕೂತಿದ್ದರು. ಅಲ್ಲಿ ನಾವೆಯೊಳಗೆ ನೀವೂ ಅವರೊಂದಿಗೆ ಕಾಯುತ್ತಾ ಇದ್ದೀರಿ ಎಂದು ಊಹಿಸಿಕೊಳ್ಳಿರಿ. ದೇವರು ಹೇಳಿದಂತೆಯೇ ನಿಜವಾಗಿ ಅಲ್ಲಿ ಒಂದು ಜಲಪ್ರಳಯವಾಗಲಿಕ್ಕಿತ್ತೋ?