ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 13

ಅಬ್ರಹಾಮ—ದೇವರ ಸ್ನೇಹಿತ

ಅಬ್ರಹಾಮ—ದೇವರ ಸ್ನೇಹಿತ

ಜಲಪ್ರಳಯದ ಅನಂತರ ಜನರು ಎಲ್ಲಿ ವಾಸಿಸಲು ಹೋದರೋ ಆ ಸ್ಥಳಗಳಲ್ಲೊಂದು ಊರ್‌ ಎಂದು ಕರೆಯಲ್ಪಟ್ಟಿತು. ಅದು ಒಂದು ಪ್ರಾಮುಖ್ಯ ಪಟ್ಟಣವಾಗಿತ್ತು. ಒಳ್ಳೊಳ್ಳೆಯ ಮನೆಗಳು ಅಲ್ಲಿದ್ದವು. ಆದರೆ ಅಲ್ಲಿನ ಜನರು ಸುಳ್ಳು ದೇವರುಗಳನ್ನು ಪೂಜಿಸುತ್ತಿದ್ದರು. ಬಾಬೆಲಿನಲ್ಲಿಯೂ ಅವರು ಮಾಡಿದ್ದು ಅದನ್ನೇ. ಊರ್‌ ಮತ್ತು ಬಾಬೆಲಿನ ಜನರು, ಯೆಹೋವನನ್ನು ಸೇವಿಸುತ್ತಾ ಮುಂದರಿದ ನೋಹ ಮತ್ತು ಅವನ ಪುತ್ರ ಶೇಮ್‌ನಂತೆ ಇರಲಿಲ್ಲ.

ಕೊನೆಗೆ, ಜಲಪ್ರಳಯದ ಅನಂತರ 350 ವರ್ಷಗಳಾದ ಮೇಲೆ ನಂಬಿಗಸ್ತ ನೋಹನು ಸತ್ತನು. ಅನಂತರ ಕೇವಲ ಎರಡು ವರ್ಷಗಳ ಬಳಿಕ ಈ ಚಿತ್ರದಲ್ಲಿರುವ ಮನುಷ್ಯನು ಜನಿಸಿದನು. ಅವನು ದೇವರಿಗೆ ಒಬ್ಬ ಅತಿ ಪ್ರಿಯ ವ್ಯಕ್ತಿಯಾಗಿದ್ದನು. ಅವನ ಹೆಸರು ಅಬ್ರಹಾಮ. ಅವನು ತನ್ನ ಕುಟುಂಬದೊಂದಿಗೆ ಆ ಊರ್‌ ಪಟ್ಟಣದಲ್ಲಿ ವಾಸಿಸುತ್ತಿದ್ದನು.

ಒಂದು ದಿನ ಯೆಹೋವನು ಅಬ್ರಹಾಮನಿಗೆ ಹೇಳಿದ್ದು: ‘ನೀನು ಊರ್‌ ಪಟ್ಟಣವನ್ನು ಮತ್ತು ನಿನ್ನ ಸಂಬಂಧಿಕರನ್ನು ಬಿಟ್ಟು ನಾನು ನಿನಗೆ ತೋರಿಸುವ ದೇಶಕ್ಕೆ ಹೊರಟು ಹೋಗು.’ ಅಬ್ರಹಾಮನು ದೇವರಿಗೆ ವಿಧೇಯನಾಗಿ ಊರ್‌ನ ಎಲ್ಲಾ ಸುಖಸೌಕರ್ಯಗಳನ್ನು ತ್ಯಜಿಸಿಬಿಟ್ಟನೋ? ಹೌದು, ತ್ಯಜಿಸಿಬಿಟ್ಟನು. ಅಬ್ರಹಾಮನು ದೇವರಿಗೆ ಯಾವಾಗಲೂ ವಿಧೇಯನಾಗಿ ಇದ್ದುದರಿಂದಲೇ ಅವನನ್ನು ದೇವರ ಸ್ನೇಹಿತನೆಂದು ಕರೆಯಲಾಯಿತು.

ಅಬ್ರಹಾಮನ ಕುಟುಂಬದಲ್ಲಿ ಕೆಲವರು ಅವನು ಊರ್‌ ಪಟ್ಟಣವನ್ನು ಬಿಟ್ಟಾಗ ಅವನೊಂದಿಗೆ ಹೋದರು. ಅವನ ತಂದೆಯಾದ ತೆರಹನು ಹೋದನು. ಅಂತೆಯೇ ಅವನ ಸೋದರಳಿಯ ಲೋಟನು ಹೋದನು. ಅಬ್ರಹಾಮನ ಪತ್ನಿ ಸಾರ ಸಹ ಹೋದಳು. ಸಮಯಾನಂತರ ಅವರೆಲ್ಲರೂ ಖಾರಾನ್‌ ಎಂಬ ಸ್ಥಳಕ್ಕೆ ಬಂದರು. ಅಲ್ಲಿ ತೆರಹನು ಸತ್ತನು. ಅವರು ಊರ್‌ನಿಂದ ಬಹಳ ದೂರ ಬಂದಿದ್ದರು.

ಸ್ವಲ್ಪ ಸಮಯದ ಬಳಿಕ ಅಬ್ರಹಾಮ ಮತ್ತು ಅವನ ಮನೆಯವರು ಖಾರಾನನ್ನು ಬಿಟ್ಟು ಕಾನಾನ್‌ ಎಂಬ ದೇಶಕ್ಕೆ ಬಂದರು. ಅಲ್ಲಿ ಯೆಹೋವನು ಹೇಳಿದ್ದು: ‘ನಿನ್ನ ಮಕ್ಕಳಿಗೆ ನಾನು ಕೊಡಲಿರುವ ದೇಶವು ಇದೇ.’ ಅಬ್ರಹಾಮನು ಕಾನಾನಿನಲ್ಲಿ ಇಳುಕೊಂಡು ಡೇರೆಗಳಲ್ಲಿ ವಾಸಿಸಿದನು.

ದೇವರು ಅಬ್ರಹಾಮನಿಗೆ ಸಹಾಯ ಮಾಡಿದ್ದರಿಂದ ಅಬ್ರಹಾಮನಿಗೆ ಬಹು ದೊಡ್ಡ ಕುರೀ ಹಿಂಡುಗಳೂ ಬೇರೆ ಪಶುಗಳೂ ಮತ್ತು ನೂರಾರು ಸೇವಕರೂ ದೊರೆತರು. ಆದರೆ ಅವನಿಗೆ ಮತ್ತು ಸಾರಳಿಗೆ ಸ್ವಂತ ಮಕ್ಕಳು ಇರಲಿಲ್ಲ.

ಅಬ್ರಹಾಮನು 99 ವಯಸ್ಸಿನವನಾದಾಗ, ಯೆಹೋವನು ಅಂದದ್ದು: ‘ನೀನು ಅನೇಕ ಜನಾಂಗಗಳ ಜನರ ಪಿತನಾಗುವಿ ಎಂದು ನಾನು ವಾಗ್ದಾನ ಮಾಡುತ್ತೇನೆ.’ ಆದರೆ ಅಬ್ರಹಾಮ ಮತ್ತು ಸಾರ ತೀರ ವೃದ್ಧರಾಗಿರುವಾಗ ಒಂದು ಮಗುವನ್ನು ಪಡೆಯಲು ಹೇಗೆ ಸಾಧ್ಯ?