ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 14

ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸುತ್ತಾನೆ

ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸುತ್ತಾನೆ

ಅಬ್ರಹಾಮನು ಇಲ್ಲಿ ಏನು ಮಾಡುತ್ತಿದ್ದಾನೆಂದು ನೋಡಿ! ಅವನ ಕೈಯಲ್ಲಿ ಒಂದು ಚೂರಿ ಇದೆ. ಅವನು ತನ್ನ ಮಗನನ್ನು ಕೊಲ್ಲಲಿದ್ದಾನೆಂದು ತೋರುತ್ತದೆ. ಯಾಕೆ ತನ್ನ ಮಗನನ್ನು ಕೊಲ್ಲಬೇಕು? ಅದು ಸರಿ, ಅಬ್ರಹಾಮನು ಮತ್ತು ಸಾರಳು ಮಗನನ್ನು ಪಡೆದದ್ದು ಹೇಗೆ? ಅದನ್ನು ಮೊದಲು ನಾವು ನೋಡೋಣ.

ಅವರಿಗೊಬ್ಬ ಮಗ ಹುಟ್ಟುವನು ಎಂದು ದೇವರು ಮಾತು ಕೊಟ್ಟದ್ದನ್ನು ನೆನಪಿಸಿಕೊಳ್ಳಿರಿ. ಆದರೆ ಅದು ಅಸಾಧ್ಯವೆಂದು ತೋರಿತು. ಯಾಕೆಂದರೆ ಅಬ್ರಹಾಮ ಮತ್ತು ಸಾರ ತುಂಬಾ ವೃದ್ಧರಾಗಿದ್ದರು. ಆದರೂ ಯಾವುದು ಅಸಾಧ್ಯವೋ ಅದು ದೇವರಿಗೆ ಸಾಧ್ಯವೆಂದು ಅಬ್ರಹಾಮನು ನಂಬಿದ್ದನು. ಹಾಗಾದರೆ ಸಂಭವಿಸಿದ್ದೇನು?

ದೇವರು ಮಾತುಕೊಟ್ಟು ಒಂದು ವರ್ಷವಾಯಿತು. ಅಬ್ರಹಾಮನು 100 ವರ್ಷದವನಾದಾಗ ಮತ್ತು ಸಾರಳು 90 ವರ್ಷ ಪ್ರಾಯದವಳಾದಾಗ, ಅವರಿಗೆ ಇಸಾಕನೆಂಬ ಹೆಸರಿನ ಗಂಡು ಮಗು ಹುಟ್ಟಿತು. ದೇವರು ಮಾತುಕೊಟ್ಟಂತೆ ನಡಕೊಂಡನು!

ಆದರೆ ಇಸಾಕನು ಬೆಳೆದು ದೊಡ್ಡವನಾದಾಗ ಯೆಹೋವನು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಆತನು ‘ಅಬ್ರಹಾಮನೇ!’ ಎಂದು ಕರೆದನು. ಅಬ್ರಹಾಮನು ಉತ್ತರಿಸುತ್ತಾ, ‘ಇಗೋ, ಇಲ್ಲಿದ್ದೇನೆ!’ ಅಂದನು. ಅನಂತರ ದೇವರು ಹೇಳಿದ್ದು: ‘ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಕರೆದುಕೊಂಡು ನಾನು ನಿನಗೆ ತೋರಿಸುವ ಬೆಟ್ಟಕ್ಕೆ ಹೋಗು. ಅಲ್ಲಿ ನಿನ್ನ ಮಗನನ್ನು ಕೊಂದು, ಅವನನ್ನು ಯಜ್ಞವಾಗಿ ಅರ್ಪಿಸು.’

ಇದನ್ನು ಕೇಳಿ ಅಬ್ರಹಾಮನಿಗೆ ದುಃಖವಾಯಿತು. ಯಾಕೆಂದರೆ ಅಬ್ರಹಾಮನು ತನ್ನ ಮಗನನ್ನು ತುಂಬ ಪ್ರೀತಿಸಿದ್ದನು. ಮಾತ್ರವಲ್ಲ, ಅಬ್ರಹಾಮನ ಮಕ್ಕಳು ಕಾನಾನ್‌ ದೇಶದಲ್ಲಿ ವಾಸಿಸುವರೆಂಬುದಾಗಿ ದೇವರು ಮಾತುಕೊಟ್ಟಿದ್ದನು ಎಂಬುದು ನಿಮಗೆ ನೆನಪಿರಬಹುದು. ಆದರೆ ಇಸಾಕನು ಸತ್ತುಹೋದಲ್ಲಿ ಆ ಮಾತು ಹೇಗೆ ಸತ್ಯವಾಗುತ್ತಿತ್ತು? ಈ ವಿಷಯ ಅಬ್ರಹಾಮನಿಗೆ ಸ್ವಲ್ಪವೂ ಅರ್ಥವಾಗದಿದ್ದರು ಸಹ ಅವನು ದೇವರಿಗೆ ವಿಧೇಯನಾದನು.

ಆ ಬೆಟ್ಟವನ್ನು ಬಂದು ತಲಪಿದಾಗ ಅಬ್ರಹಾಮನು ಇಸಾಕನ ಕೈಕಾಲುಗಳನ್ನು ಬಿಗಿದು, ತಾನು ಕಟ್ಟಿದ ಯಜ್ಞವೇದಿಯ ಮೇಲೆ ಅವನನ್ನು ಇಟ್ಟನು. ಅನಂತರ ತನ್ನ ಮಗನನ್ನು ಕೊಲ್ಲಲು ಅವನು ಚೂರಿಯನ್ನು ಹೊರತೆಗೆದನು. ಆದರೆ ಅದೇ ಕ್ಷಣದಲ್ಲಿ ದೇವರು ದೂತನ ಮೂಲಕ, ‘ಅಬ್ರಹಾಮನೇ, ಅಬ್ರಹಾಮನೇ!’ ಎಂದು ಕರೆದನು. ಅಬ್ರಹಾಮನು ‘ಇಗೋ, ಇದ್ದೇನೆ!’ ಎಂದನು.

‘ಹುಡುಗನಿಗೆ ಕೇಡು ಮಾಡಬೇಡ, ಅವನಿಗೆ ಏನೂ ಮಾಡಬೇಡ. ನನ್ನಲ್ಲಿ ನಿನಗೆ ನಂಬಿಕೆಯಿದೆಯೆಂದು ನನಗೀಗ ತಿಳಿಯಿತು. ಯಾಕೆಂದರೆ ನೀನು ನಿನ್ನ ಒಬ್ಬನೇ ಮಗನನ್ನೂ ನನಗೆ ಸಮರ್ಪಿಸುವದಕ್ಕೆ ಹಿಂದೆಗೆಯಲಿಲ್ಲ’ ಎಂದು ದೇವರು ಹೇಳಿದನು.

ಅಬ್ರಹಾಮನಿಗೆ ದೇವರಲ್ಲಿ ಎಂಥ ಬಲವಾದ ನಂಬಿಕೆಯಿತ್ತು! ಯೆಹೋವನಿಗೆ ಎಲ್ಲವೂ ಸಾಧ್ಯವೆಂದೂ ಆತನು ಇಸಾಕನನ್ನು ಸತ್ತವರೊಳಗಿಂದ ಸಹ ಎಬ್ಬಿಸಶಕ್ತನೆಂದೂ ಅವನು ನಂಬಿದನು. ಆದರೆ ಅಬ್ರಹಾಮನು ಇಸಾಕನನ್ನು ಕೊಲ್ಲಬೇಕೆಂದು ನಿಜವಾಗಿ ದೇವರು ಬಯಸಿರಲಿಲ್ಲ. ಆದುದರಿಂದ ಒಂದು ಕುರಿಯು ಸಮೀಪದ ಪೊದೆಗಳಲ್ಲಿ ಸಿಕ್ಕಿಕೊಳ್ಳುವಂತೆ ದೇವರು ಮಾಡಿದನು ಮತ್ತು ಇಸಾಕನ ಬದಲಿಗೆ ಅದನ್ನು ಅರ್ಪಿಸುವಂತೆ ಆತನು ಅಬ್ರಹಾಮನಿಗೆ ಹೇಳಿದನು.