ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 12

ಮನುಷ್ಯರು ಒಂದು ದೊಡ್ಡ ಬುರುಜನ್ನು ಕಟ್ಟುತ್ತಾರೆ

ಮನುಷ್ಯರು ಒಂದು ದೊಡ್ಡ ಬುರುಜನ್ನು ಕಟ್ಟುತ್ತಾರೆ

ಅನೇಕ ವರ್ಷಗಳು ದಾಟಿಹೋದವು. ನೋಹನ ಪುತ್ರರಿಗೆ ಅನೇಕ ಮಕ್ಕಳಿದ್ದರು. ಅವರ ಮಕ್ಕಳು ಬೆಳೆದು ದೊಡ್ಡವರಾಗಿ ಇನ್ನು ಹೆಚ್ಚು ಮಕ್ಕಳನ್ನು ಪಡೆದರು. ಬಲುಬೇಗನೆ ಭೂಮಿಯ ಮೇಲೆ ಅನೇಕ ಜನರಾದರು.

ಈ ಜನರಲ್ಲಿ ನಿಮ್ರೋದನೆಂಬ ಹೆಸರಿನ ನೋಹನ ಮರಿಮಗನು ಒಬ್ಬನಾಗಿದ್ದನು. ಪ್ರಾಣಿಗಳನ್ನೂ ಮನುಷ್ಯರನ್ನೂ ಬೇಟೆಯಾಡಿ ಕೊಲ್ಲುತ್ತಿದ್ದ ಕೆಟ್ಟ ಮನುಷ್ಯನು ಅವನಾಗಿದ್ದನು. ಬೇರೆಯವರ ಮೇಲೆ ಆಡಳಿತ ನಡಿಸಲು ನಿಮ್ರೋದನು ತನ್ನನ್ನು ಒಬ್ಬ ರಾಜನನ್ನಾಗಿಯೂ ಮಾಡಿಕೊಂಡನು. ದೇವರು ನಿಮ್ರೋದನನ್ನು ಮೆಚ್ಚಲಿಲ್ಲ.

ಆ ಕಾಲದಲ್ಲಿ ಜನರೆಲ್ಲರು ಒಂದೇ ಭಾಷೆಯನ್ನು ಮಾತಾಡುತ್ತಿದ್ದರು. ತಾನು ಅವರನ್ನು ಆಳಲು ಸಾಧ್ಯವಾಗುವಂತೆ ಅವರನ್ನೆಲ್ಲಾ ಒಟ್ಟಿಗೆ ಇಡಲು ನಿಮ್ರೋದನು ಬಯಸಿದನು. ಅದಕ್ಕಾಗಿ ಅವನು ಏನು ಮಾಡಿದನೆಂದು ನಿಮಗೆ ಗೊತ್ತೋ? ಅವನು ಜನರಿಗೆ ಒಂದು ಪಟ್ಟಣವನ್ನು ಮತ್ತು ಅದರಲ್ಲಿ ಒಂದು ದೊಡ್ಡ ಬುರುಜನ್ನು ಕಟ್ಟುವಂತೆ ಹೇಳಿದನು. ಅವರು ಇಟ್ಟಿಗೆಗಳನ್ನು ಮಾಡುತ್ತಿರುವುದನ್ನು ಚಿತ್ರದಲ್ಲಿ ನೋಡಿರಿ.

ಈ ಕಟ್ಟಡ ಕಟ್ಟುವ ಕೆಲಸವನ್ನು ಯೆಹೋವ ದೇವರು ಮೆಚ್ಚಲಿಲ್ಲ. ಜನರು ಭೂಮಿಯ ಎಲ್ಲಾ ಕಡೆಗಳಲ್ಲಿ ಹೋಗಿ ವಾಸಿಸುವಂತೆ ದೇವರು ಬಯಸಿದ್ದನು. ಆದರೆ ಜನರು ಹೇಳಿದ್ದು: ‘ಬನ್ನಿರಿ! ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವಷ್ಟು ಎತ್ತರದ ಒಂದು ಗೋಪುರವನ್ನೂ ಕಟ್ಟೋಣ. ಆಗ ನಾವು ಪ್ರಖ್ಯಾತರಾಗುವೆವು!’ ಜನರು ತಮಗಾಗಿ ಗೌರವವನ್ನು ಬಯಸಿದರು, ದೇವರಿಗಾಗಿ ಅಲ್ಲ.

ಆದುದರಿಂದ ಜನರು ಆ ಬುರುಜು ಕಟ್ಟುವುದನ್ನು ದೇವರು ನಿಲ್ಲಿಸಿದನು. ಅವನದನ್ನು ಹೇಗೆ ನಿಲ್ಲಿಸಿದನೆಂದು ನಿಮಗೆ ತಿಳಿದಿದೆಯೇ? ಜನರು ಕೇವಲ ಒಂದೇ ಭಾಷೆಯನ್ನಾಡುವ ಬದಲಿಗೆ ಥಟ್ಟನೆ ವಿಭಿನ್ನ ಭಾಷೆಗಳನ್ನಾಡುವಂತೆ ದೇವರು ಮಾಡಿದನು. ಆದುದರಿಂದ, ಕಟ್ಟಡ ಕಟ್ಟುವವರಿಗೆ ಒಬ್ಬರ ಮಾತು ಇನ್ನೊಬ್ಬರಿಗೆ ಅರ್ಥವಾಗಲಿಲ್ಲ. ಈ ಕಾರಣದಿಂದಲೇ ಅವರ ಪಟ್ಟಣಕ್ಕೆ ಬಾಬೆಲ್‌ ಅಥವಾ ಬ್ಯಾಬಿಲನ್‌ ಎಂಬ ಹೆಸರಾಯಿತು. ಅದರ ಅರ್ಥ “ಗಲಿಬಿಲಿ” ಎಂದಾಗಿದೆ.

ಜನರು ಈಗ ಬಾಬೆಲಿನಿಂದ ದೂರ ಚದರಿ ಹೋಗಲು ಆರಂಭಿಸಿದರು. ಆಯಾ ಭಾಷೆಯನ್ನಾಡುವ ಜನರ ಗುಂಪುಗಳು ಭೂಮಿಯ ಬೇರೆ ಭಾಗಗಳಲ್ಲಿ ಒಟ್ಟಾಗಿ ಜೀವಿಸಲು ಹೊರಟುಹೋದರು.