ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 31

ಮೋಶೆ-ಆರೋನರು ಫರೋಹನನ್ನು ಭೇಟಿಯಾಗುತ್ತಾರೆ

ಮೋಶೆ-ಆರೋನರು ಫರೋಹನನ್ನು ಭೇಟಿಯಾಗುತ್ತಾರೆ

ಮೋಶೆ ಐಗುಪ್ತಕ್ಕೆ ಹಿಂದಿರುಗಿದೊಡನೆ ಆ ಎಲ್ಲ ಅದ್ಭುತಗಳ ಕುರಿತು ತನ್ನ ಅಣ್ಣನಾದ ಆರೋನನಿಗೆ ಹೇಳಿದನು. ಮೋಶೆ ಮತ್ತು ಆರೋನರು ಇಸ್ರಾಯೇಲ್ಯರಿಗೆ ಈ ಅದ್ಭುತಗಳನ್ನು ತೋರಿಸಿದಾಗ, ಯೆಹೋವನು ಅವರೊಂದಿಗಿದ್ದಾನೆಂದು ಜನರೆಲ್ಲರು ನಂಬಿದರು.

ಅನಂತರ ಮೋಶೆ ಮತ್ತು ಆರೋನ ಫರೋಹನನ್ನು ಭೇಟಿಮಾಡಲು ಹೋದರು. ಅವರು ಫರೋಹನಿಗೆ, ‘ಇಸ್ರಾಯೇಲ್ಯರ ದೇವರಾದ ಯೆಹೋವನು—ನನ್ನ ಜನರು ನನ್ನನ್ನು ಅರಣ್ಯದಲ್ಲಿ ಆರಾಧಿಸುವಂತೆ ಅವರನ್ನು ಮೂರು ದಿನಗಳ ತನಕ ಹೋಗಗೊಡಿಸಬೇಕೆಂದು ಹೇಳಿದ್ದಾನೆ’ ಎಂದು ಹೇಳಿದರು. ಆದರೆ ಫರೋಹನು ‘ನಾನು ಯೆಹೋವನನ್ನು ನಂಬುವುದಿಲ್ಲ. ಅಲ್ಲದೆ, ಇಸ್ರಾಯೇಲ್ಯರನ್ನು ನಾನು ಹೋಗಗೊಡಿಸುವುದೂ ಇಲ್ಲ’ ಎಂದು ಉತ್ತರಿಸುತ್ತಾನೆ.

ಇಸ್ರಾಯೇಲ್ಯರು ಯೆಹೋವನ ಆರಾಧನೆಗಾಗಿ ತಮ್ಮ ಕೆಲಸದಿಂದ ಬಿಡುವು ತೆಗೆದುಕೊಳ್ಳಲು ಬಯಸಿದರಿಂದ ಫರೋಹನು ಕೋಪಗೊಂಡನು. ಆದುದರಿಂದ ಅವನು ಅವರನ್ನು ಇನ್ನಷ್ಟು ಕಠಿನವಾಗಿ ದುಡಿಯಲು ಬಲಾತ್ಕರಿಸಿದನು. ತಮ್ಮ ಕಷ್ಟ ಇನ್ನಷ್ಟು ಹೆಚ್ಚಾದ ಕಾರಣ ಇಸ್ರಾಯೇಲ್ಯರು ಮೋಶೆಯನ್ನು ದೂರಿದರು. ಆಗ ಮೋಶೆಯು ಬೇಸರಗೊಂಡನು. ಆದರೆ ಚಿಂತೆ ಮಾಡದಿರುವಂತೆ ಯೆಹೋವನು ಅವನಿಗೆ ಹೇಳಿದನು. ‘ಫರೋಹನು ನನ್ನ ಜನರನ್ನು ಹೋಗಗೊಡಿಸುವಂತೆ ನಾನು ಮಾಡುವೆನು’ ಎಂದನು ಯೆಹೋವನು.

ಮೋಶೆ ಮತ್ತು ಆರೋನರು ಪುನಃ ಫರೋಹನನ್ನು ನೋಡಲು ಹೋದರು. ಈ ಸಾರಿ ಅವರೊಂದು ಅದ್ಭುತವನ್ನು ಮಾಡಿ ತೋರಿಸಿದರು. ಅದೇನೆಂದರೆ, ಆರೋನನು ತನ್ನ ಕೋಲನ್ನು ಕೆಳಗೆ ಬಿಸಾಡಿದನು, ಅದು ಒಂದು ದೊಡ್ಡ ಹಾವಾಯಿತು. ಫರೋಹನ ಜೋಯಿಸರು ಸಹ ಕೋಲುಗಳನ್ನು ನೆಲಕ್ಕೆ ಬಿಸಾಡಲು ಅವು ಹಾವಾದವು. ಆದರೆ ಈ ಚಿತ್ರವನ್ನು ನೋಡಿ! ಆರೋನನ ಹಾವು ಜೋಯಿಸರ ಹಾವುಗಳನ್ನು ನುಂಗುತ್ತಾ ಇದೆ. ಆದರೂ ಫರೋಹನು ಇಸ್ರಾಯೇಲ್ಯರನ್ನು ಹೋಗಗೊಡಿಸುವುದಿಲ್ಲ.

ಆದುದರಿಂದ ಫರೋಹನಿಗೆ ಒಂದು ಪಾಠವನ್ನು ಕಲಿಸಲು ಯೆಹೋವನಿಗೆ ಸರಿಯಾದ ಸಮಯವು ಬಂತು. ಅವನು ಅದನ್ನು ಹೇಗೆ ಮಾಡಿದನೆಂದು ನಿಮಗೆ ತಿಳಿದಿದೆಯೇ? ಐಗುಪ್ತದ ಮೇಲೆ ಹತ್ತು ಬಾಧೆಗಳನ್ನು ಅಥವಾ ಮಹಾ ತೊಂದರೆಗಳನ್ನು ತರುವ ಮೂಲಕವೇ.

ಅನೇಕ ಬಾಧೆಗಳ ಅನಂತರ ಫರೋಹನು ಮೋಶೆಗಾಗಿ ಕರೇಕಳುಹಿಸಿ ಅಂದದ್ದು: ‘ಬಾಧೆಯನ್ನು ನಿಲ್ಲಿಸು. ನಾನು ಇಸ್ರಾಯೇಲ್ಯರನ್ನು ಹೋಗಗೊಡಿಸುವೆನು.’ ಆದರೆ ಬಾಧೆಯು ನಿಂತಾಗ ಫರೋಹನು ತನ್ನ ಮನಸ್ಸನ್ನು ಬದಲಾಯಿಸುತ್ತಿದ್ದನು. ಜನರನ್ನು ಹೋಗಗೊಡಿಸುತ್ತಿರಲಿಲ್ಲ. ಆದರೆ ಕೊನೆಗೆ, 10ನೆಯ ಬಾಧೆಯ ಅನಂತರ, ಫರೋಹನು ಇಸ್ರಾಯೇಲ್ಯರನ್ನು ಹೋಗಗೊಟ್ಟನು.

ಆ 10 ಬಾಧೆಗಳಲ್ಲಿ ಪ್ರತಿಯೊಂದು ನಿಮಗೆ ತಿಳಿದಿದೆಯೇ? ಪುಟವನ್ನು ಮಗುಚಿರಿ. ಅವುಗಳ ಕುರಿತು ಕಲಿಯೋಣ.