ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 18

ಯಾಕೋಬನು ಖಾರಾನಿಗೆ ಹೋಗುತ್ತಾನೆ

ಯಾಕೋಬನು ಖಾರಾನಿಗೆ ಹೋಗುತ್ತಾನೆ

ಯಾಕೋಬನು ಯಾರ ಹತ್ತಿರ ಮಾತಾಡುತ್ತಿದ್ದಾನೆಂದು ನಿಮಗೆ ಗೊತ್ತೋ? ಅನೇಕ ದಿನಗಳ ಪ್ರಯಾಣದ ಅನಂತರ ಯಾಕೋಬನು ಒಂದು ಬಾವಿಯ ಬಳಿ ಈ ಪುರುಷರನ್ನು ಭೇಟಿಯಾದನು. ಅವರು ತಮ್ಮ ಕುರಿಗಳನ್ನು ಮೇಯಿಸುತ್ತಿದ್ದರು. ‘ನೀವು ಯಾವ ಊರಿನವರು?’ ಎಂದು ಯಾಕೋಬನು ಕೇಳಿದನು.

‘ಖಾರಾನ್‌ ಊರಿನವರು’ ಎಂದರು ಅವರು.

‘ನೀವು ಲಾಬಾನನನ್ನು ಬಲ್ಲಿರಾ?’ ಎಂದು ಕೇಳಿದನು ಯಾಕೋಬ.

‘ಬಲ್ಲೆವು. ಅಗೋ, ಅವನ ಮಗಳಾದ ರಾಹೇಲಳು ಅವನ ಕುರಿ ಹಿಂಡುಗಳ ಸಂಗಡ ಬರುತ್ತಿದ್ದಾಳೆ’ ಎಂದು ಅವರು ಉತ್ತರಿಸಿದರು. ರಾಹೇಲಳು ಅಲ್ಲಿ ದೂರದಲ್ಲಿ ಬರುವುದು ನಿಮಗೆ ಕಾಣಿಸುತ್ತದೋ?

ತನ್ನ ಮಾವನಾದ ಲಾಬಾನನ ಕುರಿಗಳೊಂದಿಗೆ ರಾಹೇಲಳು ಬರುವುದನ್ನು ಯಾಕೋಬನು ಕಂಡಾಗ, ಕುರಿಗಳು ನೀರು ಕುಡಿಯುವಂತೆ ಅವನು ಬಾವಿಯ ಹತ್ತಿರ ಹೋಗಿ ಅದರ ಮೇಲೆ ಮುಚ್ಚಿದ್ದ ಕಲ್ಲನ್ನು ಪಕ್ಕಕ್ಕೆ ಸರಿಸಿದನು. ಅನಂತರ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು ತಾನು ಯಾರೆಂದು ತಿಳಿಸಿದನು. ಆಕೆ ತುಂಬಾ ಖುಷಿಯಿಂದ ಮನೆಗೆ ಹೋಗಿ ತನ್ನ ತಂದೆ ಲಾಬಾನನಿಗೆ ನಡೆದದ್ದನ್ನು ತಿಳಿಸಿದಳು.

ಯಾಕೋಬನು ತನ್ನ ಮನೆಯಲ್ಲೇ ಉಳಿದುಕೊಳ್ಳುತ್ತಾನೆಂದು ಲಾಬಾನನು ತಿಳಿದಾಗ ಅವನು ಬಹು ಸಂತೋಷಪಟ್ಟನು. ಮಾತ್ರವಲ್ಲ ರಾಹೇಲಳನ್ನು ತಾನು ಮದುವೆಯಾಗುತ್ತೇನೆಂದು ಯಾಕೋಬನು ಕೇಳಿಕೊಂಡಾಗಲಂತೂ ಅವನಿಗೆ ತುಂಬಾ ಆನಂದವಾಯಿತು. ಆದರೂ ರಾಹೇಲಳಿಗಾಗಿ ತನ್ನ ಹೊಲದಲ್ಲಿ ಏಳು ವರ್ಷ ಕೆಲಸಮಾಡುವಂತೆ ಅವನು ಯಾಕೋಬನನ್ನು ಕೇಳಿಕೊಂಡನು. ಯಾಕೋಬನು ಹಾಗೆ ಮಾಡಿದನು. ಯಾಕೆಂದರೆ ಅವನು ರಾಹೇಲಳನ್ನು ಬಹಳಷ್ಟು ಪ್ರೀತಿಸಿದ್ದನು. ಆದರೆ ಮದುವೆಯ ಸಮಯವು ಬಂದಾಗ ಏನಾಯಿತೆಂದು ನಿಮಗೆ ಗೊತ್ತೋ?

ಲಾಬಾನನು ರಾಹೇಲಳ ಬದಲಿಗೆ ತನ್ನ ದೊಡ್ಡ ಮಗಳಾದ ಲೇಯಳನ್ನು ಯಾಕೋಬನಿಗೆ ಮದುವೆ ಮಾಡಿಕೊಟ್ಟನು. ಇನ್ನೂ ಏಳು ವರ್ಷಗಳ ತನಕ ಲಾಬಾನನಿಗಾಗಿ ಕೆಲಸ ಮಾಡಲು ಯಾಕೋಬನು ಒಪ್ಪಿದಾಗ, ರಾಹೇಲಳನ್ನೂ ಅವನ ಪತ್ನಿಯಾಗಿ ಕೊಟ್ಟನು. ಆ ಕಾಲದಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರಿರುವಂತೆ ದೇವರು ಅನುಮತಿಸಿದನು. ಆದರೆ ಈಗ, ಬೈಬಲ್‌ ತೋರಿಸುವಂತೆ, ಒಬ್ಬ ಪುರುಷನಿಗೆ ಒಬ್ಬಳೇ ಪತ್ನಿ ಇರತಕ್ಕದ್ದು.