ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 32

ಹತ್ತು ಬಾಧೆಗಳು

ಹತ್ತು ಬಾಧೆಗಳು

ಈ ಚಿತ್ರಗಳನ್ನು ನೋಡಿರಿ. ಪ್ರತಿಯೊಂದು ಚಿತ್ರವು ಯೆಹೋವನು ಐಗುಪ್ತದ ಮೇಲೆ ತಂದ ಬಾಧೆಗಳನ್ನು ತೋರಿಸುತ್ತದೆ. ಒಂದನೆಯ ಚಿತ್ರದಲ್ಲಿ ಆರೋನನು ತನ್ನ ಕೋಲಿನಿಂದ ನೈಲ್‌ ನದಿಯನ್ನು ಹೊಡೆಯುವುದನ್ನು ನೀವು ಕಾಣಬಲ್ಲಿರಿ. ಅವನು ಹಾಗೆ ಮಾಡಿದಾಗ ನದಿಯ ನೀರು ರಕ್ತವಾಯಿತು. ಆದುದರಿಂದ ಮೀನುಗಳು ಸತ್ತುಹೋದವು ಮತ್ತು ನದಿಯು ಹೊಲಸು ನಾರಲು ತೊಡಗಿತು.

ಅನಂತರ, ಕಪ್ಪೆಗಳು ನೈಲ್‌ ನದಿಯಿಂದ ಹೊರಬರುವಂತೆ ಯೆಹೋವನು ಮಾಡಿದನು. ಅವು ಒಲೆಗಳಲ್ಲಿ, ಅಡುಗೆಪಾತ್ರೆಗಳಲ್ಲಿ, ಜನರ ಹಾಸಿಗೆಗಳಲ್ಲಿ, ಹೀಗೆ ಎಲ್ಲಾ ಕಡೆಗಳಲ್ಲಿಯೂ ಇದ್ದವು. ಕಪ್ಪೆಗಳು ಸತ್ತಾಗ ಐಗುಪ್ತ್ಯರು ಅವನ್ನು ರಾಶಿರಾಶಿಯಾಗಿ ಕೂಡಿಸಿದರು. ದೇಶವೆಲ್ಲಾ ಅವುಗಳ ದುರ್ವಾಸನೆಯಿಂದ ತುಂಬಿತು.

ಆಮೇಲೆ ಆರೋನನು ತನ್ನ ಕೋಲಿನಿಂದ ನೆಲವನ್ನು ಹೊಡೆದನು. ಆಗ ಧೂಳು ಹೇನುಗಳಾದವು. ಇವು ಕಚ್ಚುವಂತಹ ಚಿಕ್ಕ ಚಿಕ್ಕ ಹಾರಾಡುವ ಕೀಟಗಳಾಗಿವೆ. ಧೂಳು ಹೇನುಗಳು ಐಗುಪ್ತದ ಮೇಲೆ ಬಂದ ಮೂರನೆಯ ಬಾಧೆಯಾಗಿದ್ದವು.

ಉಳಿದ ಬಾಧೆಗಳು ಐಗುಪ್ತ್ಯರನ್ನು ಮಾತ್ರ ಬಾಧಿಸಿದವು, ಇಸ್ರಾಯೇಲ್ಯರನ್ನಲ್ಲ. ನಾಲ್ಕನೆಯದು ಎಲ್ಲಾ ಐಗುಪ್ತ್ಯರ ಮನೆಗಳನ್ನು ತುಂಬಿಕೊಂಡ ದೊಡ್ಡ ನೊಣಗಳಂಥ ವಿಷದ ಹುಳಗಳ ಕಾಟವಾಗಿತ್ತು. ಐದನೆಯ ಬಾಧೆಯು ಪಶುಗಳ ಮೇಲೆ ಬಂತು. ಇದರಿಂದ ಐಗುಪ್ತ್ಯರ ಅನೇಕ ದನಕುರಿಗಳೂ ಆಡುಗಳೂ ಸತ್ತುಹೋದವು.

ಅನಂತರ ಮೋಶೆ ಮತ್ತು ಆರೋನ ಸ್ವಲ್ಪ ಬೂದಿಯನ್ನು ತೆಗೆದುಕೊಂಡು ಅದನ್ನು ಗಾಳಿಗೆ ತೂರಿದರು. ಅದು ಜನರ ಮೇಲೆ ಮತ್ತು ಪಶುಗಳ ಮೇಲೆ ಕೆಟ್ಟ ಹುಣ್ಣುಗಳನ್ನು ಉಂಟುಮಾಡಿತು. ಇದು ಆರನೆಯ ಬಾಧೆಯಾಗಿತ್ತು.

ತದನಂತರ ಮೋಶೆಯು ತನ್ನ ಕೈಯನ್ನು ಆಕಾಶದ ಕಡೆಗೆ ಚಾಚಿದನು, ಆಗ ಯೆಹೋವನು ಗುಡುಗನ್ನೂ ಆಲಿಕಲ್ಲಿನ ಮಳೆಯನ್ನೂ ಬರಮಾಡಿದನು. ಇಷ್ಟು ಘೋರವಾದ ಕಲ್ಮಳೆಯು ಐಗುಪ್ತದಲ್ಲಿ ಹಿಂದೆಂದೂ ಬಂದಿರಲಿಲ್ಲ.

ಎಂಟನೆಯ ಬಾಧೆಯು ದೊಡ್ಡ ದೊಡ್ಡ ಗುಂಪಿನಲ್ಲಿ ಬಂದ ಮಿಡತೆಯಾಗಿತ್ತು. ಆ ಸಮಯಕ್ಕೆ ಮುಂಚೆ ಅಥವಾ ಅದರ ಬಳಿಕ ಎಂದೂ ಅಲ್ಲಿ ಅಷ್ಟು ಮಿಡತೆಗಳು ಇದ್ದಿರಲಿಲ್ಲ. ಕಲ್ಮಳೆಯಿಂದ ನಾಶವಾಗದೆ ಉಳಿದದ್ದೆಲ್ಲವನ್ನು ಆ ಮಿಡತೆಗಳು ತಿಂದುಬಿಟ್ಟವು.

ಒಂಬತ್ತನೆಯ ಬಾಧೆಯು ಕಾರ್ಗತ್ತಲಾಗಿತ್ತು. ಮೂರು ದಿನಗಳ ವರೆಗೆ ಕತ್ತಲು ದೇಶವನ್ನು ಮುಚ್ಚಿಕೊಂಡಿತ್ತು. ಆದರೆ ಇಸ್ರಾಯೇಲ್ಯರು ವಾಸವಾಗಿದ್ದ ಸ್ಥಳದಲ್ಲಿ ಮಾತ್ರ ಬೆಳಕಿತ್ತು.

ಕೊನೆಗೆ, ಒಂದು ಆಡುಮರಿಯ ಅಥವಾ ಕುರಿಮರಿಯ ರಕ್ತವನ್ನು ತಮ್ಮ ತಮ್ಮ ಮನೆಬಾಗಿಲಿನ ನಿಲುವು ಕಂಬಗಳಿಗೆ ಚಿಮುಕಿಸುವಂತೆ ದೇವರು ತನ್ನ ಜನರಿಗೆ ಹೇಳಿದನು. ಆಮೇಲೆ ದೇವದೂತನು ಐಗುಪ್ತ ದೇಶದ ನಡುವೆ ಹಾದುಹೋದನು. ಹಾಗೆ ಹಾದುಹೋಗುವಾಗ ಯಾವ ಮನೆಯ ಬಾಗಿಲಿನ ನಿಲುವು ಕಂಬಗಳಲ್ಲಿ ರಕ್ತವನ್ನು ಕಂಡನೋ ಆ ಮನೆಯಲ್ಲಿದ್ದ ಯಾರನ್ನೂ ಕೊಲ್ಲಲಿಲ್ಲ. ಆದರೆ ಯಾವ ಬಾಗಿಲ ನಿಲುವು ಕಂಬಗಳ ಮೇಲೆ ರಕ್ತವು ಇರಲಿಲ್ಲವೋ ಆ ಎಲ್ಲಾ ಮನೆಗಳಲ್ಲಿದ್ದ ಚೊಚ್ಚಲುಮಕ್ಕಳನ್ನು ಮತ್ತು ಪಶುಗಳ ಚೊಚ್ಚಲುಮರಿಗಳನ್ನು ಅವನು ಕೊಂದನು. ಇದೇ 10ನೆಯ ಬಾಧೆಯಾಗಿತ್ತು.

ಈ ಕೊನೆಯ ಬಾಧೆಯ ಅನಂತರ, ಫರೋಹನು ಇಸ್ರಾಯೇಲ್ಯರನ್ನು ಹೊರಟುಹೋಗುವಂತೆ ಹೇಳಿದನು. ದೇವರ ಜನರೆಲ್ಲರೂ ಹೋಗಲು ಸಿದ್ಧರಾಗಿದ್ದರು. ಅದೇ ರಾತ್ರಿಯಲ್ಲಿ ಅವರು ಐಗುಪ್ತವನ್ನು ಬಿಟ್ಟು ಹೊರಟರು.