ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 52

ಗಿದ್ಯೋನ ಮತ್ತು ಅವನ 300 ಪುರುಷರು

ಗಿದ್ಯೋನ ಮತ್ತು ಅವನ 300 ಪುರುಷರು

ಇಲ್ಲಿ ಏನು ಸಂಭವಿಸುತ್ತಿರುವುದನ್ನು ನೀವು ನೋಡುತ್ತೀರಿ? ಇವರೆಲ್ಲರು ಇಸ್ರಾಯೇಲ್ಯ ಯೋಧರು. ಅವರಲ್ಲಿ ಕೆಲವರು ಬಗ್ಗಿಕೊಂಡು ನೀರನ್ನು ಕುಡಿಯುತ್ತಿದ್ದಾರೆ. ಅವರ ಹತ್ತಿರ ನಿಂತಿರುವವನು ನ್ಯಾಯಸ್ಥಾಪಕ ಗಿದ್ಯೋನನು. ಅವರೆಲ್ಲರೂ ಹೇಗೆ ನೀರು ಕುಡಿಯುತ್ತಿದ್ದಾರೆಂಬುದನ್ನು ಅವನು ಗಮನಿಸುತ್ತಿದ್ದಾನೆ.

ಆ ಪುರುಷರು ಹೇಗೆ ನೀರು ಕುಡಿಯುತ್ತಿದ್ದಾರೆಂದು ಗಮನವಿಟ್ಟು ನೋಡಿ. ಕೆಲವರು ಬಗ್ಗಿ ನೀರಿಗೆ ಬಾಯಿಹಾಕಿ ಕುಡಿಯುತ್ತಿದ್ದಾರೆ. ಆದರೆ ಒಬ್ಬನು ತನ್ನ ಸುತ್ತಲೂ ಏನು ನಡಿಯುತ್ತಿದೆಯೆಂದು ನೋಡುತ್ತಾ ನೀರನ್ನು ಕೈಯಲ್ಲಿ ಎತ್ತಿಕೊಂಡು ಕುಡಿಯುತ್ತಿದ್ದಾನೆ. ಹೀಗೆ ಮಾಡುವುದು ಪ್ರಾಮುಖ್ಯ. ಯಾಕೆಂದರೆ ನೀರು ಕುಡಿಯುವಾಗ ಯಾರು ಜಾಗರೂಕತೆಯಿಂದ ಸುತ್ತಲೂ ನಡೆಯುವುದನ್ನು ಗಮನಿಸುತ್ತಾರೋ ಅಂಥ ಪುರುಷರನ್ನು ಮಾತ್ರ ಆರಿಸುವಂತೆ ಯೆಹೋವನು ಗಿದ್ಯೋನನಿಗೆ ಹೇಳಿದನು. ಉಳಿದವರನ್ನು ಮನೆಗೆ ಕಳುಹಿಸಬೇಕೆಂದು ದೇವರಂದನು. ಯಾಕೆಂದು ನಾವು ನೋಡೋಣ.

ಇಸ್ರಾಯೇಲ್ಯರು ಪುನಃ ತುಂಬಾ ತೊಂದರೆಯಲ್ಲಿ ಬಿದ್ದಿದ್ದಾರೆ. ಕಾರಣವೇನೆಂದರೆ ಅವರು ಯೆಹೋವನಿಗೆ ವಿಧೇಯರಾಗಿರುವುದಿಲ್ಲ. ಮಿದ್ಯಾನಿನ ಜನರು ಅವರ ಮೇಲೆ ಅಧಿಕಾರ ವಹಿಸಿಕೊಂಡು ಅವರನ್ನು ಬಾಧಿಸುತ್ತಿದ್ದಾರೆ. ಆದುದರಿಂದ ಇಸ್ರಾಯೇಲ್ಯರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಾರೆ. ಯೆಹೋವನು ಅವರ ಮೊರೆಗಳಿಗೆ ಕಿವಿಗೊಡುತ್ತಾನೆ.

ಯೆಹೋವನು ಗಿದ್ಯೋನನಿಗೆ ಒಂದು ಸೇನೆಯನ್ನು ಒಟ್ಟುಗೂಡಿಸುವಂತೆ ಹೇಳುತ್ತಾನೆ. ಆದುದರಿಂದ ಗಿದ್ಯೋನನು 32,000 ಯೋಧರನ್ನು ಒಟ್ಟುಗೂಡಿಸುತ್ತಾನೆ. ಆದರೆ ಇಸ್ರಾಯೇಲ್ಯರ ಶತ್ರುಗಳ ಸೈನ್ಯದಲ್ಲಿ 1,35,000 ಮಂದಿಯಿದ್ದಾರೆ. ಹಾಗಿದ್ದರೂ ಯೆಹೋವನು ಗಿದ್ಯೋನನಿಗೆ ‘ನಿನ್ನೊಂದಿಗೆ ಇರುವ ಜನರು ತೀರ ಹೆಚ್ಚಾಗಿದ್ದಾರೆ’ ಎಂದು ಹೇಳುತ್ತಾನೆ. ಯೆಹೋವನು ಹಾಗೆ ಹೇಳಿದ್ದೇಕೆ?

ಯಾಕೆಂದರೆ ಒಂದುವೇಳೆ ಇಸ್ರಾಯೇಲ್ಯರು ಯುದ್ಧವನ್ನು ಗೆದ್ದಲ್ಲಿ, ತಮ್ಮ ಸ್ವಂತ ಬಲದಿಂದಲೇ ಗೆದ್ದೆವೆಂದು ಎಣಿಸಬಹುದು. ಗೆಲ್ಲಲಿಕ್ಕೆ ಯೆಹೋವನ ಸಹಾಯದ ಅಗತ್ಯ ತಮಗಿಲ್ಲವೆಂದು ಅವರು ನೆನಸಲೂಬಹುದು. ಆದುದರಿಂದ ಯೆಹೋವನು ಗಿದ್ಯೋನನಿಗೆ ಹೇಳುವುದು: ‘ಧೈರ್ಯವಿಲ್ಲದ ಎಲ್ಲರೂ ಮನೆಗೆ ಹಿಂದಿರುಗಿ ಹೋಗುವಂತೆ ಹೇಳು.’ ಗಿದ್ಯೋನನು ಹಾಗೆ ಮಾಡಿದಾಗ 22,000 ಯೋಧರು ಮನೆಗೆ ಹೋಗುತ್ತಾರೆ. ಈಗ ಅವನಲ್ಲಿ ಆ 1,35,000 ಶತ್ರುಸೈನಿಕರ ವಿರುದ್ಧ ಹೋರಾಡಲು ಕೇವಲ 10,000 ಪುರುಷರು ಮಾತ್ರ ಉಳಿಯುತ್ತಾರೆ.

ಆದರೆ ಯೆಹೋವನು ಏನು ಹೇಳುತ್ತಾನೆಂದು ಕೇಳಿರಿ! ‘ನಿನ್ನ ಬಳಿಯಲ್ಲಿರುವ ಜನರು ಇನ್ನೂ ಹೆಚ್ಚಾಗಿದ್ದಾರೆ’ ಎಂದು ಅನ್ನುತ್ತಾನೆ ಆತನು. ಆದುದರಿಂದ ಆ ಜನರನ್ನು ಈ ಹಳ್ಳದ ಬಳಿ ಕರೆತಂದು ನೀರು ಕುಡಿಯುವಂತೆ ಹೇಳಬೇಕೆಂದು ಯೆಹೋವನು ತಿಳಿಸುತ್ತಾನೆ. ಅನಂತರ ಬಗ್ಗಿ ನೀರಿಗೆ ಬಾಯಿಹಾಕಿ ಕುಡಿದವರೆಲ್ಲರನ್ನು ಮನೆಗೆ ಕಳುಹಿಸುವಂತೆ ಗಿದ್ಯೋನನಿಗೆ ಹೇಳುತ್ತಾನೆ. ‘ಕುಡಿಯುತ್ತಿರುವಾಗ ಸುತ್ತಲೂ ಗಮನಿಸುತ್ತಾ ಇದ್ದ ಈ 300 ಮಂದಿಯಿಂದಲೇ ನಿಮಗೆ ಜಯವನ್ನು ಕೊಡುವೆನು’ ಎಂದು ಯೆಹೋವನು ವಾಗ್ದಾನಿಸುತ್ತಾನೆ.

ಹೋರಾಟದ ಸಮಯವು ಬರುತ್ತದೆ. ಗಿದ್ಯೋನನು ತನ್ನ 300 ಮಂದಿ ಪುರುಷರನ್ನು ಮೂರು ಗುಂಪುಗಳನ್ನಾಗಿ ಮಾಡುತ್ತಾನೆ. ಅವನು ಪ್ರತಿಯೊಬ್ಬನಿಗೆ ಒಂದು ಕೊಂಬನ್ನೂ ಒಳಗೆ ಪಂಜಿರುವ ಒಂದು ಕೊಡವನ್ನೂ ಕೊಡುತ್ತಾನೆ. ಸುಮಾರು ಮಧ್ಯರಾತ್ರಿಯಾಗುವಾಗ ಅವರೆಲ್ಲರೂ ಶತ್ರು ಸೈನಿಕರ ಪಾಳೆಯದ ಸುತ್ತಲೂ ಒಟ್ಟುಸೇರುತ್ತಾರೆ. ಆಗ ಏಕಕಾಲದಲ್ಲಿ ಅವರೆಲ್ಲರೂ ತಮ್ಮ ಕೊಂಬುಗಳನ್ನು ಊದುತ್ತಾ ಕೊಡಗಳನ್ನು ಒಡೆದು, ‘ಯೆಹೋವನ ಕತ್ತಿ, ಗಿದ್ಯೋನನ ಕತ್ತಿ!’ ಎಂದು ಕೂಗುತ್ತಾರೆ. ಶತ್ರು ಸೈನಿಕರು ಎಚ್ಚರಗೊಂಡಾಗ ಅವರೆಲ್ಲರೂ ಗಲಿಬಿಲಿಗೊಂಡು ಭಯಭ್ರಾಂತರಾಗಿ ಓಡಿಹೋಗಲು ಪ್ರಾರಂಭಿಸುತ್ತಾರೆ. ಹೀಗೆ ಇಸ್ರಾಯೇಲ್ಯರು ಯುದ್ಧದಲ್ಲಿ ಜಯಹೊಂದುತ್ತಾರೆ.