ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 48

ವಿವೇಕಿಗಳಾದ ಗಿಬ್ಯೋನ್ಯರು

ವಿವೇಕಿಗಳಾದ ಗಿಬ್ಯೋನ್ಯರು

ಕಾನಾನ್‌ ದೇಶದ ಅನೇಕ ಪಟ್ಟಣಗಳು ಈಗ ಇಸ್ರಾಯೇಲ್ಯರ ವಿರುದ್ಧ ಹೋರಾಡಲು ಸಿದ್ಧವಾಗುತ್ತವೆ. ತಮಗೆ ಜಯ ದೊರೆಯುವುದೆಂದು ಅವರೆಣಿಸುತ್ತಾರೆ. ಆದರೆ ಸಮೀಪದ ಗಿಬ್ಯೋನ್‌ ಪಟ್ಟಣದ ಜನರು ಹಾಗೆ ನೆನಸುವುದಿಲ್ಲ. ದೇವರು ಇಸ್ರಾಯೇಲ್ಯರಿಗೆ ಸಹಾಯ ಮಾಡುತ್ತಿದ್ದಾನೆಂದು ಅವರು ನಂಬುತ್ತಾರೆ. ಮಾತ್ರವಲ್ಲದೆ, ದೇವರ ವಿರುದ್ಧ ಹೋರಾಡಲು ಅವರು ಬಯಸುವುದಿಲ್ಲ. ಆದುದರಿಂದ ಗಿಬ್ಯೋನ್ಯರು ಏನು ಮಾಡುತ್ತಾರೆಂದು ನಿಮಗೆ ಗೊತ್ತೋ?

ತಾವು ಎಲ್ಲಿಯೋ ಬಹಳ ದೂರದಲ್ಲಿ ವಾಸಿಸುತ್ತಿರುವ ಜನರೆಂದು ಇಸ್ರಾಯೇಲ್ಯರಿಗೆ ತೋರಿಸಿಕೊಳ್ಳಲು ಅವರು ತೀರ್ಮಾನಿಸುತ್ತಾರೆ. ಆದುದರಿಂದ ಕೆಲವು ಪುರುಷರು ಹರಕು ಬಟ್ಟೆಗಳನ್ನು ತೊಟ್ಟು ಸವೆದ ಚಪ್ಪಲಿಗಳನ್ನು ಮೆಟ್ಟಿಕೊಳ್ಳುತ್ತಾರೆ. ಅಲ್ಲದೆ, ತಮ್ಮ ಕತ್ತೆಗಳ ಮೇಲೆ ಹರಕಲು ಗೋಣಿಗಳನ್ನು ಹಾಕುತ್ತಾರೆ ಮತ್ತು ಒಣಗಿಹೋದ ರೊಟ್ಟಿಗಳನ್ನು ತೆಗೆದುಕೊಳ್ಳುತ್ತಾರೆ. ಅನಂತರ ಅವರು ಯೆಹೋಶುವನ ಬಳಿಗೆ ಹೋಗಿ ಹೀಗನ್ನುತ್ತಾರೆ: ‘ನಿಮ್ಮ ಮಹಾ ದೇವರಾದ ಯೆಹೋವನ ಕುರಿತು ಕೇಳಿ ನಾವು ಬಹು ದೂರದ ದೇಶದಿಂದ ಬಂದಿದ್ದೇವೆ. ಆತನು ಐಗುಪ್ತದಲ್ಲಿ ನಿಮಗಾಗಿ ಮಾಡಿದ ಎಲ್ಲಾ ಸಂಗತಿಗಳನ್ನು ನಾವು ಕೇಳಿದ್ದೇವೆ. ಆದುದರಿಂದ ನಮ್ಮ ನಾಯಕರು ನಮಗೆ—ನೀವು ಪ್ರಯಾಣಕ್ಕಾಗಿ ಸ್ವಲ್ಪ ಆಹಾರವನ್ನು ಸಿದ್ಧಪಡಿಸಿಕೊಂಡು ಹೋಗಿ—“ನಾವು ನಿಮ್ಮ ಸೇವಕರು. ನೀವು ನಮ್ಮೊಂದಿಗೆ ಯುದ್ಧಮಾಡುವುದಿಲ್ಲವೆಂದು ವಚನಕೊಡಿರಿ” ಎಂದು ನಿಮ್ಮನ್ನು ಬೇಡಿಕೊಳ್ಳುವಂತೆ ತಿಳಿಸಿದ್ದಾರೆ. ದೂರದ ಪ್ರಯಾಣದಿಂದ ನಮ್ಮ ಬಟ್ಟೆಗಳು ಹರಿದಿವೆ, ನಮ್ಮ ರೊಟ್ಟಿ ಹಳಸಿ ಒಣಗಿ ಹೋಗಿವೆ ನೋಡಿರಿ.’

ಯೆಹೋಶುವ ಮತ್ತು ಇತರ ಪ್ರಧಾನರು ಗಿಬ್ಯೋನ್ಯರನ್ನು ನಂಬುತ್ತಾರೆ. ಆದುದರಿಂದ ಅವರ ವಿರುದ್ಧ ಯುದ್ಧಮಾಡುವುದಿಲ್ಲವೆಂದು ವಚನಕೊಡುತ್ತಾರೆ. ಆದರೆ ಮೂರು ದಿನಗಳ ತರುವಾಯ ಈ ಗಿಬ್ಯೋನ್ಯರು ನಿಜವಾಗಿ ಸಮೀಪದಲ್ಲೇ ವಾಸಿಸುವ ಜನರೆಂದು ಅವರಿಗೆ ತಿಳಿದುಬರುತ್ತದೆ.

‘ನೀವು ದೂರ ದೇಶದಿಂದ ಬಂದವರೆಂದು ನಮಗೆ ಹೇಳಿದ್ದೇಕೆ?’ ಎಂದು ಅವರನ್ನು ಕೇಳುತ್ತಾನೆ ಯೆಹೋಶುವನು.

ಅದಕ್ಕೆ ಗಿಬ್ಯೋನ್ಯರು, ‘ನಿಮ್ಮ ದೇವರಾದ ಯೆಹೋವನು ಈ ಕಾನಾನ್‌ ದೇಶವನ್ನೆಲ್ಲಾ ನಿಮಗೆ ಕೊಡುವುದಾಗಿ ವಾಗ್ದಾನಿಸಿದ್ದಾನೆಂದು ನಾವು ಕೇಳಿ, ನೀವು ನಮ್ಮನ್ನು ಕೊಂದುಬಿಡುವಿರೆಂದು ಹೆದರಿ ಹೀಗೆ ಮಾಡಿದೆವು’ ಎಂದು ಹೇಳುತ್ತಾರೆ. ಇಸ್ರಾಯೇಲ್ಯರು ತಾವು ಕೊಟ್ಟ ವಚನವನ್ನು ಪಾಲಿಸುತ್ತಾರೆ. ಅವರು ಗಿಬ್ಯೋನ್ಯರನ್ನು ಕೊಲ್ಲುವುದಿಲ್ಲ. ಬದಲಿಗೆ ಅವರನ್ನು ತಮ್ಮ ಸೇವಕರಾಗಿ ಮಾಡಿಕೊಳ್ಳುತ್ತಾರೆ.

ಗಿಬ್ಯೋನ್ಯರು ಇಸ್ರಾಯೇಲಿನೊಂದಿಗೆ ಶಾಂತಿಸಂಧಾನ ಮಾಡಿಕೊಂಡ ಕಾರಣ ಯೆರೂಸಲೇಮಿನ ಅರಸನು ಕೋಪಗೊಳ್ಳುತ್ತಾನೆ. ಆದುದರಿಂದ ಅವನು ಬೇರೆ ನಾಲ್ಕು ಅರಸರಿಗೆ, ‘ಗಿಬ್ಯೋನಿನೊಂದಿಗೆ ಯುದ್ಧಮಾಡಲು ನೀವು ಬಂದು ನನಗೆ ಸಹಾಯಮಾಡಿರಿ’ ಎಂದು ಹೇಳುತ್ತಾನೆ. ಈ ಐದು ಮಂದಿ ಅರಸರು ಗಿಬ್ಯೋನ್ಯರ ವಿರುದ್ಧ ಯುದ್ಧಕ್ಕೆ ಹೋಗುತ್ತಾರೆ. ಹೌದು, ಗಿಬ್ಯೋನ್ಯರು ಇಸ್ರಾಯೇಲಿನೊಂದಿಗೆ ಶಾಂತಿಸಂಧಾನ ಮಾಡಿಕೊಂಡ ಕಾರಣ ಈಗ ಈ ಅರಸರು ಅವರ ಮೇಲೆ ಯುದ್ಧಕ್ಕೆ ಬರುತ್ತಿದ್ದಾರೆ. ಹಾಗಾದರೆ, ಗಿಬ್ಯೋನ್ಯರು ಇಸ್ರಾಯೇಲಿನೊಂದಿಗೆ ಶಾಂತಿಸಂಧಾನ ಮಾಡಿಕೊಂಡದ್ದು ಬುದ್ಧಿವಂತಿಕೆಯಾಗಿತ್ತೋ? ನಾವೀಗ ಅದನ್ನು ನೋಡುವ.