ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 46

ಯೆರಿಕೋವಿನ ಗೋಡೆಗಳು

ಯೆರಿಕೋವಿನ ಗೋಡೆಗಳು

ಯೆರಿಕೋವಿನ ಈ ಗೋಡೆಗಳು ಯಾಕೆ ಈ ರೀತಿ ಚೂರುಚೂರಾಗಿ ಬೀಳುತ್ತಿವೆ? ಒಂದು ದೊಡ್ಡ ಬಾಂಬನ್ನು ಅವುಗಳ ಮೇಲೆ ಹಾಕಿದಂತೆ ಕಾಣುತ್ತಿದೆಯಲ್ಲವೆ? ಆದರೆ ಆ ದಿನಗಳಲ್ಲಿ ಬಾಂಬ್‌ಗಳಿರಲಿಲ್ಲ. ಫಿರಂಗಿಗಳು ಸಹ ಇರಲಿಲ್ಲ. ಅದು ಯೆಹೋವನ ಇನ್ನೊಂದು ಅದ್ಭುತ! ಅದು ಹೇಗೆ ಸಂಭವಿಸಿತೆಂದು ನಾವು ತಿಳಿಯೋಣ.

ಯೆಹೋವನು ಯೆಹೋಶುವನಿಗೆ ಏನು ಹೇಳುತ್ತಾನೆಂದು ಆಲಿಸಿರಿ: ‘ನೀನು ಮತ್ತು ನಿನ್ನ ಯೋಧರು ಪಟ್ಟಣದ ಸುತ್ತಲು ನಡೆದು ಹೋಗಿರಿ. ದಿನಕ್ಕೆ ಒಂದು ಸಾರಿಯಂತೆ ಆರು ದಿನಗಳ ತನಕ ಪಟ್ಟಣವನ್ನು ಸುತ್ತಿರಿ. ಒಡಂಬಡಿಕೆಯ ಮಂಜೂಷವನ್ನು ನಿಮ್ಮೊಂದಿಗೆ ಒಯ್ಯಿರಿ. ಏಳು ಮಂದಿ ಯಾಜಕರು ಕೊಂಬುಗಳನ್ನು ಊದುತ್ತಾ ಮಂಜೂಷದ ಮುಂದೆ ನಡೆಯಬೇಕು.

‘ಏಳನೆಯ ದಿನದಲ್ಲಿ ನೀವು ಪಟ್ಟಣದ ಸುತ್ತಲೂ ಏಳು ಸಾರಿ ನಡೆಯಬೇಕು. ಅನಂತರ ಕೊಂಬುಗಳನ್ನು ದೀರ್ಘವಾಗಿ ಊದಿರಿ ಮತ್ತು ಪ್ರತಿಯೊಬ್ಬನು ಒಂದು ಮಹಾ ರಣಘೋಷವನ್ನು ಮಾಡಲಿ. ಆಗ ಗೋಡೆಗಳು ತಾವಾಗಿಯೇ ಬಿದ್ದುಹೋಗುವವು!’

ಯೆಹೋಶುವ ಮತ್ತು ಅವನೊಂದಿಗಿದ್ದ ಜನರು ಯೆಹೋವನು ಹೇಳಿದಂತೆ ಮಾಡುತ್ತಾರೆ. ಪಟ್ಟಣವನ್ನು ಸುತ್ತುವಾಗ ಪ್ರತಿಯೊಬ್ಬರು ಮೌನವಾಗಿರುತ್ತಾರೆ. ಯಾರೂ ಒಂದು ಮಾತನ್ನೂ ಆಡುವುದಿಲ್ಲ. ಕೊಂಬುಗಳ ಧ್ವನಿ ಮತ್ತು ಜನರ ಕಾಲ್ನಡಿಗೆಯ ಸದ್ದು ಮಾತ್ರವೇ ಕೇಳಿಸುತ್ತಿತ್ತು. ಯೆರಿಕೋವಿನಲ್ಲಿನ ದೇವಜನರ ಶತ್ರುಗಳು ಹೆದರಿದ್ದಿರಬೇಕು. ಒಂದು ಕಿಟಿಕಿಯಿಂದ ತೂಗಾಡುತ್ತಿರುವ ಆ ಕೆಂಪು ಹಗ್ಗ ನಿಮಗೆ ಕಾಣಿಸುತ್ತಿದೆಯೋ? ಆ ಕಿಟಿಕಿ ಯಾರದ್ದು? ಹೌದು, ಆ ಇಬ್ಬರು ಗೂಢಚಾರರು ಹೇಳಿದಂತೆಯೇ ರಾಹಾಬಳು ಮಾಡಿದ್ದಾಳೆ. ಅವಳ ಕುಟುಂಬದವರೆಲ್ಲ ಒಳಗೆ ಅವಳೊಂದಿಗಿದ್ದು ನೋಡುತ್ತಿದ್ದಾರೆ.

ಕೊನೆಗೆ ಏಳನೆಯ ದಿನದಲ್ಲಿ, ಪಟ್ಟಣವನ್ನು ಏಳು ಸಾರಿ ಸುತ್ತಿಯಾದ ಮೇಲೆ ಕೊಂಬುಗಳ ಧ್ವನಿ ಮೊಳಗುತ್ತದೆ. ಯೋಧರು ಆರ್ಭಟಿಸುತ್ತಾರೆ, ಮತ್ತು ಗೋಡೆಗಳು ಕುಸಿದು ಬೀಳುತ್ತವೆ. ಆಗ ಯೆಹೋಶುವನು ಹೇಳುವುದು: ‘ಪಟ್ಟಣದಲ್ಲಿರುವ ಎಲ್ಲರನ್ನೂ ಕೊಂದು ಅದನ್ನು ಸುಟ್ಟುಹಾಕಿರಿ. ಎಲ್ಲವನ್ನೂ ದಹಿಸಿಬಿಡಿರಿ. ಬೆಳ್ಳಿ, ಬಂಗಾರ, ತಾಮ್ರ, ಮತ್ತು ಕಬ್ಬಿಣವನ್ನು ಮಾತ್ರ ಉಳಿಸಿರಿ. ಅವನ್ನು ಯೆಹೋವನ ಗುಡಾರದ ಭಂಡಾರಕ್ಕೆ ಕೊಡಿರಿ.’

ಈ ಪಟ್ಟಣವನ್ನು ಸಂಚರಿಸಿ ನೋಡಿದ್ದ ಆ ಇಬ್ಬರು ಗೂಢಚಾರರಿಗೆ ಯೆಹೋಶುವನು ಹೇಳುವುದು: ‘ರಾಹಾಬಳ ಮನೆಗೆ ಹೋಗಿ ಅವಳನ್ನೂ ಅವಳ ಕುಟುಂಬದವರೆಲ್ಲರನ್ನೂ ಹೊರಗೆ ಕರೆತನ್ನಿ.’ ಗೂಢಚಾರರು ರಾಹಬಳಿಗೆ ವಚನವಿತ್ತ ಪ್ರಕಾರ, ಅವಳು ಮತ್ತು ಅವಳ ಕುಟುಂಬದವರು ರಕ್ಷಿಸಲ್ಪಟ್ಟರು.