ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 43

ಯೆಹೋಶುವನು ನಾಯಕನಾಗುತ್ತಾನೆ

ಯೆಹೋಶುವನು ನಾಯಕನಾಗುತ್ತಾನೆ

ಇಸ್ರಾಯೇಲ್ಯರೊಂದಿಗೆ ತಾನು ಸಹ ಕಾನಾನಿಗೆ ಹೋಗಬೇಕೆಂದು ಮೋಶೆಗೆ ಇಷ್ಟ. ಆದುದರಿಂದ ಅವನು, ‘ಯೆಹೋವನೇ, ನಾನು ಯೊರ್ದನ್‌ ಹೊಳೆಯನ್ನು ದಾಟಿ ಆ ಒಳ್ಳೆಯ ದೇಶವನ್ನು ನೋಡುವುದಕ್ಕೆ ಅಪ್ಪಣೆಯಾಗಲಿ’ ಎಂದು ಕೇಳುತ್ತಾನೆ. ಆದರೆ ಯೆಹೋವನು, ‘ಸಾಕು! ಇದರ ವಿಷಯದಲ್ಲಿ ನನ್ನ ಹತ್ತಿರ ಪುನಃ ಮಾತೆತ್ತಬೇಡ!’ ಎಂದು ಹೇಳುತ್ತಾನೆ. ಯೆಹೋವನು ಹಾಗೇಕೆ ಹೇಳಿದನೆಂದು ನಿಮಗೆ ಗೊತ್ತೋ?

ಮೋಶೆ ಬಂಡೆಯನ್ನು ಹೊಡೆದಾಗ ಏನು ಸಂಭವಿಸಿತ್ತೆಂದು ನಿಮಗೆ ನೆನಪಿದೆಯೋ? ಅವನೂ ಆರೋನನೂ ಯೆಹೋವನನ್ನು ಗೌರವಿಸಲಿಲ್ಲ. ಬಂಡೆಯಿಂದ ನೀರನ್ನು ತಂದಾತನು ಯೆಹೋವನೇ ಎಂದು ಅವರು ಜನರಿಗೆ ತಿಳಿಸಲಿಲ್ಲ. ಈ ಕಾರಣದಿಂದ ಕಾನಾನ್‌ ದೇಶದೊಳಗೆ ಅವರಿಗೆ ಪ್ರವೇಶವಿಲ್ಲ ಎಂದು ಯೆಹೋವನು ಹೇಳಿದನು.

ಆರೋನನು ಸತ್ತು ಕೆಲವು ತಿಂಗಳುಗಳ ನಂತರ ಯೆಹೋವನು ಮೋಶೆಗೆ ಹೀಗೆ ಹೇಳುತ್ತಾನೆ: ‘ಯೆಹೋಶುವನನ್ನು ಯಾಜಕನಾದ ಎಲ್ಲಾಜಾರನ ಮುಂದೆಯೂ ಜನರ ಮುಂದೆಯೂ ನಿಲ್ಲಿಸು. ಯೆಹೋಶುವನು ಹೊಸ ನಾಯಕನೆಂದು ಅವರೆಲ್ಲರಿಗೂ ತಿಳಿಸು.’ ನೀವು ಚಿತ್ರದಲ್ಲಿ ನೋಡುವಂತೆ, ಯೆಹೋವನು ಹೇಳಿದ ಹಾಗೆಯೇ ಮೋಶೆಯು ಮಾಡುತ್ತಾನೆ.

ಆಮೇಲೆ ಯೆಹೋವನು ಯೆಹೋಶುವನಿಗೆ ಹೇಳುವುದು: ‘ದೃಢಚಿತ್ತನಾಗಿರು, ಹೆದರಬೇಡ. ನಾನು ಇಸ್ರಾಯೇಲ್ಯರಿಗೆ ವಾಗ್ದಾನಿಸಿದ ಕಾನಾನ್‌ ದೇಶದೊಳಗೆ ನೀನು ಅವರನ್ನು ನಡೆಸುವಿ. ನಾನು ನಿನ್ನ ಸಂಗಡ ಇರುತ್ತೇನೆ.’

ತದನಂತರ ಯೆಹೋವನು ಮೋಶೆಗೆ ಮೋವಾಬ್‌ ದೇಶದ ನೆಬೋ ಬೆಟ್ಟವನ್ನು ಹತ್ತುವಂತೆ ಹೇಳುತ್ತಾನೆ. ಅಲ್ಲಿ ಮೇಲಿನಿಂದ ಮೋಶೆಗೆ ಯೊರ್ದನ್‌ ಹೊಳೆಯ ಆಚೆಯಿರುವ ಆ ಸುಂದರವಾದ ಕಾನಾನ್‌ ದೇಶವನ್ನು ನೋಡಲು ಆಗುತ್ತದೆ. ಯೆಹೋವನು ಹೇಳುವುದು: ‘ನಾನು ಅಬ್ರಹಾಮ್‌ ಇಸಾಕ್‌ ಮತ್ತು ಯಾಕೋಬನ ಸಂತತಿಯವರಿಗೆ ಕೊಡುವೆನೆಂದು ವಾಗ್ದಾನಮಾಡಿದ ದೇಶವು ಇದೇ. ಇದನ್ನು ನಿನಗೆ ತೋರಿಸಿದ್ದೇನೆ. ಆದರೆ ನೀನು ಅದರೊಳಗೆ ಹೋಗಬಾರದು.’

ಆ ನೆಬೋ ಬೆಟ್ಟದ ಮೇಲೆ ಮೋಶೆ ಸಾಯುತ್ತಾನೆ. ಆಗ ಅವನಿಗೆ 120 ವರ್ಷವಾಗಿತ್ತು. ಅವನಿನ್ನೂ ದೃಢಕಾಯನಾಗಿದ್ದನು, ದೃಷ್ಟಿಯೂ ಒಳ್ಳೇದಿತ್ತು. ಮೋಶೆಯು ಸತ್ತದಕ್ಕಾಗಿ ಜನರು ಅತಿ ದುಃಖಪಟ್ಟು ಗೋಳಾಡುತ್ತಾರೆ. ಆದರೂ ಯೆಹೋಶುವನನ್ನು ತಮ್ಮ ಹೊಸ ನಾಯಕನಾಗಿ ಹೊಂದಿದಕ್ಕಾಗಿ ಸಂತೋಷಪಡುತ್ತಾರೆ.