ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 44

ರಾಹಾಬಳು ಗೂಢಚಾರರನ್ನು ಅಡಗಿಸಿಡುತ್ತಾಳೆ

ರಾಹಾಬಳು ಗೂಢಚಾರರನ್ನು ಅಡಗಿಸಿಡುತ್ತಾಳೆ

ಈ ಪುರುಷರು ಆಪತ್ತಿನಲ್ಲಿದ್ದಾರೆ. ಅವರು ತಪ್ಪಿಸಿಕೊಳ್ಳಲೇಬೇಕು, ಇಲ್ಲವಾದರೆ ಕೊಲ್ಲಲ್ಪಡುವರು. ಅವರು ಇಸ್ರಾಯೇಲ್ಯ ಗೂಢಚಾರರು. ಅವರಿಗೆ ಸಹಾಯಮಾಡುತ್ತಿರುವ ಸ್ತ್ರೀಯ ಹೆಸರು ರಾಹಾಬ್‌. ರಾಹಾಬಳು ಯೆರಿಕೋ ಪಟ್ಟಣದ ಗೋಡೆಯ ಮೇಲಿನ ಮನೆಯೊಂದರಲ್ಲಿ ವಾಸಿಸುತ್ತಾಳೆ. ಈ ಪುರುಷರು ಯಾಕೆ ಆಪತ್ತಿನಲ್ಲಿದ್ದಾರೆಂದು ನಾವೀಗ ನೋಡೋಣ.

ಇಸ್ರಾಯೇಲ್ಯರು ಯೊರ್ದನ್‌ ಹೊಳೆಯನ್ನು ದಾಟಿ ಕಾನಾನ್‌ ದೇಶಕ್ಕೆ ಹೋಗಲು ಸಿದ್ಧರಾಗಿದ್ದಾರೆ. ಆದರೆ ಅದಕ್ಕೆ ಮುಂಚೆ ಯೆಹೋಶುವನು ಇಬ್ಬರು ಗೂಢಚಾರರನ್ನು ಕಳುಹಿಸುತ್ತಾನೆ. ಅವನು ಅವರಿಗೆ, ‘ಹೋಗಿ ಆ ದೇಶವನ್ನೂ ಯೆರಿಕೋ ಪಟ್ಟಣವನ್ನೂ ನೋಡಿಕೊಂಡು ಬನ್ನಿರಿ’ ಎಂದು ಹೇಳುತ್ತಾನೆ.

ಗೂಢಚಾರರು ಯೆರಿಕೋವಿಗೆ ಬಂದಾಗ, ರಾಹಾಬಳ ಮನೆಗೆ ಹೋಗುತ್ತಾರೆ. ಆದರೆ ಯಾರೋ ಯೆರಿಕೋವಿನ ಅರಸನ ಬಳಿಗೆ ಹೋಗಿ ಹೀಗೆ ಹೇಳುತ್ತಾರೆ: ‘ಇಬ್ಬರು ಇಸ್ರಾಯೇಲ್ಯ ಗೂಢಚಾರರು ಈ ರಾತ್ರಿ ದೇಶವನ್ನು ಸಂಚರಿಸಿ ನೋಡುವುದಕ್ಕೆ ಬಂದಿದ್ದಾರೆ.’ ಇದನ್ನು ಕೇಳಿದ ಅರಸನು ರಾಹಾಬಳ ಬಳಿಗೆ ಪುರುಷರನ್ನು ಕಳುಹಿಸುತ್ತಾನೆ. ಆ ಪುರುಷರು ಅವಳಿಗೆ, ‘ನಿನ್ನ ಮನೆಯೊಳಗಿರುವ ಮನುಷ್ಯರನ್ನು ತಂದೊಪ್ಪಿಸು!’ ಎಂದು ಆಜ್ಞಾಪಿಸುತ್ತಾರೆ. ಆದರೆ ರಾಹಾಬಳು ಗೂಢಚಾರರನ್ನು ತನ್ನ ಚಾವಣಿಯ ಮೇಲೆ ಅಡಗಿಸಿದ್ದಳು. ಆದುದರಿಂದ ಅವಳು ‘ಕೆಲವು ಮನುಷ್ಯರು ನನ್ನ ಬಳಿಗೆ ಬಂದದ್ದು ನಿಜ. ಆದರೆ ಅವರು ಎಲ್ಲಿಯವರೆಂಬುದು ನನಗೆ ಗೊತ್ತಿಲ್ಲ. ಊರುಬಾಗಿಲನ್ನು ಮುಚ್ಚುವ ಮುಂಚೆ ಕತ್ತಲೆಯಾಗುತ್ತಿರುವಾಗಲೇ ಅವರು ಹೊರಟುಹೋದರು. ನೀವು ಬೇಗನೆ ಹೋದರೆ ಅವರನ್ನು ಹಿಡಿಯಬಹುದು’ ಎಂದು ಹೇಳುತ್ತಾಳೆ. ಆಗ ಆ ಮನುಷ್ಯರು ಅವರನ್ನು ಬೆನ್ನಟ್ಟಿ ಹಿಡಿಯಲು ಹೋಗುತ್ತಾರೆ.

ಅವರು ಹೋದನಂತರ ರಾಹಾಬಳು ಅವಸರದಿಂದ ಸರಸರನೆ ಮಾಳಿಗೆ ಹತ್ತುತ್ತಾಳೆ. ಆ ಗೂಢಚಾರರಿಗೆ ಅವಳನ್ನುವುದು: ‘ಯೆಹೋವನು ನಿಮಗೆ ಈ ದೇಶವನ್ನು ಕೊಡುತ್ತಾನೆಂದು ಬಲ್ಲೆನು. ನೀವು ಐಗುಪ್ತವನ್ನು ಬಿಟ್ಟುಬಂದಾಗ ಆತನು ಕೆಂಪು ಸಮುದ್ರವನ್ನು ಹೇಗೆ ಬತ್ತಿಸಿಬಿಟ್ಟನೆಂದೂ ನೀವು ಸೀಹೋನ್‌ ಮತ್ತು ಓಗ್‌ ಎಂಬ ಅರಸರನ್ನು ಹೇಗೆ ಸಂಹರಿಸಿಬಿಟ್ಟಿರೆಂದೂ ನಾವು ಕೇಳಿದ್ದೇವೆ. ನಾನು ನಿಮಗೆ ದಯೆತೋರಿಸಿದ್ದೇನೆ, ಅದೇ ರೀತಿ ನೀವೂ ನನಗೆ ದಯೆತೋರಿಸುವಿರೆಂದು ದಯವಿಟ್ಟು ವಚನಕೊಡಿರಿ. ನನ್ನ ತಂದೆತಾಯಿಯನ್ನೂ ಸಹೋದರ ಸಹೋದರಿಯರನ್ನೂ ಉಳಿಸಿರಿ.’

ಗೂಢಚಾರರು ತಾವು ಹಾಗೆಯೇ ಮಾಡುವೆವೆಂದು ವಚನಕೊಡುತ್ತಾರೆ. ಆದರೆ ರಾಹಾಬಳು ಮಾಡಬೇಕಾದ ಒಂದು ವಿಷಯವನ್ನು ಅವರು ಹೇಳುತ್ತಾರೆ: ‘ಈ ಕೆಂಪು ಹಗ್ಗವನ್ನು ನಿನ್ನ ಮನೆಯ ಕಿಟಿಕಿಗೆ ಕಟ್ಟು. ನಿನ್ನ ಮನೆಯಲ್ಲಿ ನಿನ್ನೊಂದಿಗೆ ನಿನ್ನೆಲ್ಲಾ ಸಂಬಂಧಿಕರನ್ನು ಸೇರಿಸಿಕೊ. ನಾವೆಲ್ಲರೂ ಯೆರಿಕೋ ಪಟ್ಟಣವನ್ನು ವಶಮಾಡಿಕೊಳ್ಳಲು ಬರುವಾಗ, ಈ ಹಗ್ಗವನ್ನು ನಿನ್ನ ಕಿಟಿಕಿಯಲ್ಲಿ ಕಂಡು ನಿನ್ನ ಮನೆಯಲ್ಲಿರುವ ಯಾರನ್ನೂ ಕೊಲ್ಲುವುದಿಲ್ಲ.’ ಗೂಢಚಾರರು ಯೆಹೋಶುವನ ಬಳಿಗೆ ಹಿಂದಿರುಗಿದಾಗ ನಡೆದ ಸಂಗತಿಯೆಲ್ಲವನ್ನು ಅವನಿಗೆ ತಿಳಿಸುತ್ತಾರೆ.