ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 51

ರೂತ್‌ ಮತ್ತು ನೊವೊಮಿ

ರೂತ್‌ ಮತ್ತು ನೊವೊಮಿ

ಬೈಬಲ್‌ನಲ್ಲಿ ರೂತಳು ಎಂಬ ಒಂದು ಪುಸ್ತಕವಿದೆ. ಇಸ್ರಾಯೇಲ್ಯರಿಗೆ ನ್ಯಾಯಸ್ಥಾಪಕರುಗಳಿದ್ದ ಸಮಯದಲ್ಲಿ ಜೀವಿಸುತ್ತಿದ್ದ ಒಂದು ಕುಟುಂಬದ ಕಥೆ ಅದಾಗಿರುತ್ತದೆ. ರೂತಳು ಮೋವಾಬ್‌ ದೇಶದ ತರುಣಿ. ಆಕೆ ದೇವರ ಜನಾಂಗವಾದ ಇಸ್ರಾಯೇಲಿಗೆ ಸೇರಿದವಳಲ್ಲ. ಆದರೆ ಸತ್ಯ ದೇವರಾದ ಯೆಹೋವನ ಕುರಿತು ರೂತಳು ಕಲಿತಾಗ, ಆಕೆ ಆತನನ್ನು ಅತಿಯಾಗಿ ಪ್ರೀತಿಸುತ್ತಾಳೆ. ಯೆಹೋವನ ಕುರಿತು ಕಲಿಯಲು ರೂತಳಿಗೆ ಸಹಾಯಮಾಡಿದ ಒಬ್ಬ ವೃದ್ಧೆಯೇ ನೊವೊಮಿ.

ನೊವೊಮಿ ಒಬ್ಬ ಇಸ್ರಾಯೇಲ್ಯ ಸ್ತ್ರೀ. ಇಸ್ರಾಯೇಲಿನಲ್ಲಿ ಆಹಾರದ ಅಭಾವವು ಉಂಟಾದಾಗ ನೊವೊಮಿ, ಆಕೆಯ ಗಂಡ ಮತ್ತು ಇಬ್ಬರು ಪುತ್ರರು ಮೋವಾಬ್‌ ದೇಶಕ್ಕೆ ಬರುತ್ತಾರೆ. ಅನಂತರ ಒಂದು ದಿನ ನೊವೊಮಿಯ ಗಂಡನು ಸತ್ತನು. ತದನಂತರ ನೊವೊಮಿಯ ಪುತ್ರರು, ರೂತ್‌ ಮತ್ತು ಒರ್ಫಾ ಎಂಬ ಹೆಸರಿನ ಇಬ್ಬರು ಮೋವಾಬ್ಯ ಹುಡುಗಿಯರನ್ನು ಮದುವೆಯಾದರು. ಆದರೆ ಸುಮಾರು 10 ವರ್ಷಗಳ ನಂತರ ನೊವೊಮಿಯ ಇಬ್ಬರು ಪುತ್ರರು ಸಹ ತೀರಿಕೊಂಡರು. ಇದರಿಂದಾಗಿ ನೊವೊಮಿ ಮತ್ತು ಆ ಇಬ್ಬರು ಹುಡುಗಿಯರು ತುಂಬಾ ದುಃಖಿತರಾದರು. ನೊವೊಮಿ ಈಗ ಏನು ಮಾಡುವಳು?

ಒಂದು ದಿನ ನೊವೊಮಿಯು ತನ್ನ ಜನರಿರುವ ಸ್ವದೇಶಕ್ಕೆ ಹಿಂದಿರುಗಲು ತೀರ್ಮಾನಿಸುತ್ತಾಳೆ. ಅದು ತುಂಬಾ ದೂರ. ರೂತ್‌ ಮತ್ತು ಒರ್ಫಾ ಅವಳೊಂದಿಗೆ ಹೋಗಲು ಬಯಸುತ್ತಾರೆ. ಆದುದರಿಂದ ಅವರೂ ಅವಳ ಸಂಗಡ ಹೊರಡುತ್ತಾರೆ. ಆದರೆ ಸ್ವಲ್ಪ ದೂರ ಪ್ರಯಾಣಮಾಡಿದ ಮೇಲೆ ನೊವೊಮಿಯು ಹುಡುಗಿಯರ ಕಡೆಗೆ ತಿರುಗಿ, ‘ನೀವು ನಿಮ್ಮ ನಿಮ್ಮ ಮನೆಗೆ ಹೋಗಿ ನಿಮ್ಮ ತಾಯಂದಿರೊಂದಿಗೆ ಜೀವಿಸಿರಿ’ ಎಂದು ಹೇಳುತ್ತಾಳೆ.

ನೊವೊಮಿ ಹುಡುಗಿಯರಿಗೆ ಮುದ್ದಿಟ್ಟು ಬೀಳ್ಕೊಡುತ್ತಾಳೆ. ಆಗ ಅವರು ಅಳಲಾರಂಭಿಸುತ್ತಾರೆ. ಯಾಕೆಂದರೆ ಅವರು ನೊವೊಮಿಯನ್ನು ಬಹಳವಾಗಿ ಪ್ರೀತಿಸುತ್ತಾರೆ. ‘ಇಲ್ಲ! ನಾವು ನಿನ್ನ ಜೊತೆಯಲ್ಲೇ ನಿನ್ನ ಸ್ವಜನರ ಬಳಿಗೆ ಬರುತ್ತೇವೆ’ ಎಂದನ್ನುತ್ತಾರೆ ಅವರು. ಆದರೆ ನೊವೊಮಿ, ‘ನನ್ನ ಮಕ್ಕಳೇ, ನೀವು ಹಿಂದಿರುಗಿ ಹೋಗಬೇಕು. ನೀವು ನಿಮ್ಮ ಮನೆಯಲ್ಲಿರುವುದೇ ಒಳ್ಳೆಯದು’ ಎಂದು ಹೇಳುತ್ತಾಳೆ. ಆಗ ಒರ್ಫಾ ತನ್ನ ಮನೆಗೆ ಹೊರಡುತ್ತಾಳೆ. ರೂತಳಾದರೋ ನೊವೊಮಿಯನ್ನು ಬಿಟ್ಟು ಹೋಗುವುದಿಲ್ಲ.

ನೊವೊಮಿ ಅವಳೆಡೆಗೆ ತಿರುಗಿ, ‘ಇಗೋ, ಒರ್ಫಳು ಹೋಗುತ್ತಾಳೆ. ನೀನೂ ಆಕೆಯ ಜೊತೆಯಲ್ಲಿ ಹೋಗು’ ಎನ್ನುತ್ತಾಳೆ. ಆದರೆ ರೂತಳು ಉತ್ತರಿಸುವುದು: ‘ನಿನ್ನನ್ನು ಬಿಟ್ಟು ಹೋಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ! ನಾನು ನಿನ್ನೊಂದಿಗೇ ಬರುವೆ. ನೀನು ಎಲ್ಲಿಗೆ ಹೋದರೂ ಅಲ್ಲಿಗೆ ಬರುವೆನು, ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು. ನಿನ್ನ ಜನರೇ ನನ್ನ ಜನರು, ನಿನ್ನ ದೇವರೇ ನನ್ನ ದೇವರು. ನೀನು ಸಾಯುವಲ್ಲೇ ನಾನೂ ಸಾಯುವೆನು. ಅಲ್ಲೇ ನನಗೆ ಸಮಾಧಿಯಾಗಬೇಕು.’ ರೂತಳು ಹೀಗೆ ಹೇಳಿದ ಮೇಲೆ ನೊವೊಮಿ ಅವಳನ್ನು ಮತ್ತೆ ಒತ್ತಾಯಿಸುವುದಿಲ್ಲ.

ಕೊನೆಗೆ ಆ ಸ್ತ್ರೀಯರಿಬ್ಬರೂ ಇಸ್ರಾಯೇಲ್‌ಗೆ ಬಂದು ತಂಗುತ್ತಾರೆ. ರೂತಳು ಆ ಕೂಡಲೇ ಹೊಲಗಳಲ್ಲಿ ಕೆಲಸಮಾಡಲು ಪ್ರಾರಂಭಿಸುತ್ತಾಳೆ. ಯಾಕೆಂದರೆ ಅದು ಜವೆಗೋದಿಯ ಸುಗ್ಗಿಯ ಸಮಯವಾಗಿದೆ. ಬೋವಜನೆಂಬ ಪುರುಷನು ಅವಳನ್ನು ತನ್ನ ಹೊಲದಲ್ಲಿ ಜವೆಗೋದಿಯನ್ನು ಹೆಕ್ಕಲು ಬಿಡುತ್ತಾನೆ. ಬೋವಜನ ತಾಯಿ ಯಾರೆಂದು ನಿಮಗೆ ತಿಳಿದಿದೆಯೇ? ಅವಳು ಯೆರಿಕೋ ಪಟ್ಟಣದ ರಾಹಾಬಳಾಗಿದ್ದಳು.

ಒಂದು ದಿನ ಬೋವಜನು ರೂತಳಿಗೆ ಹೇಳುವುದು: ‘ನಿನ್ನ ಕುರಿತು ಮತ್ತು ನೀನು ನೊವೊಮಿಗೆ ತೋರಿಸಿರುವ ದಯಾಪರತೆಯ ಕುರಿತು ನಾನೆಲ್ಲವನ್ನು ಕೇಳಿದ್ದೇನೆ. ನೀನು ತಂದೆತಾಯಿಗಳನ್ನೂ ಸ್ವದೇಶವನ್ನೂ ಬಿಟ್ಟು ಹಿಂದೆಂದೂ ಅರಿಯದ ಜನರೊಂದಿಗೆ ಜೀವಿಸಲು ಬಂದಿರುವ ವಿಷಯವನ್ನೂ ನಾನು ಬಲ್ಲೆನು. ಯೆಹೋವನು ನಿನಗೆ ಒಳ್ಳೇದು ಮಾಡಲಿ!’

ರೂತಳು ಉತ್ತರಿಸುವುದು: ‘ಸ್ವಾಮೀ, ನೀವು ನನಗೆ ಬಹಳ ದಯೆತೋರಿಸಿದ್ದೀರಿ. ನೀವು ನನ್ನನ್ನು ಕನಿಕರಿಸಿ ಒಳ್ಳೇ ರೀತಿ ಮಾತಾಡಿಸಿದಿರಿ.’ ಬೋವಜನು ರೂತಳನ್ನು ತುಂಬಾ ಇಷ್ಟಪಡುತ್ತಾನೆ. ಸ್ವಲ್ಪ ಸಮಯದೊಳಗೆ ಅವರು ಮದುವೆಯಾಗುತ್ತಾರೆ. ಇದರಿಂದ ನೊವೊಮಿಗೆ ತುಂಬಾ ಸಂತೋಷವಾಗುತ್ತದೆ. ರೂತ್‌ ಮತ್ತು ಬೋವಜ ಓಬೇದನೆಂಬ ಗಂಡುಮಗುವನ್ನು ಪಡೆದಾಗಲಂತೂ ನೊವೊಮಿಯ ಆನಂದಕ್ಕೆ ಪಾರವೇ ಇರಲಿಲ್ಲ. ತರುವಾಯ ಓಬೇದನು ದಾವೀದನ ಅಜ್ಜನಾಗುತ್ತಾನೆ. ಈ ದಾವೀದನ ಕುರಿತು ನಾವು ಮುಂದಕ್ಕೆ ಹೆಚ್ಚನ್ನು ಕಲಿಯಲಿದ್ದೇವೆ.

ಬೈಬಲಿನ ರೂತಳು ಪುಸ್ತಕ.