ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 54

ಅತಿ ಬಲಿಷ್ಠ ಪುರುಷ

ಅತಿ ಬಲಿಷ್ಠ ಪುರುಷ

ಇದುವರೆಗೆ ಜೀವಿಸಿರುವವರಲ್ಲಿ ಅತಿ ಬಲಿಷ್ಠ ಪುರುಷನ ಹೆಸರು ನಿಮಗೆ ತಿಳಿದಿದೆಯೇ? ಅವನ ಹೆಸರು ಸಂಸೋನ. ಅವನೂ ಒಬ್ಬ ನ್ಯಾಯಸ್ಥಾಪಕನಾಗಿದ್ದನು. ಸಂಸೋನನಿಗೆ ಅಷ್ಟು ಬಲವನ್ನು ಕೊಟ್ಟಾತನು ಯಾರು ಗೊತ್ತಾ? ಆತನು ಯೆಹೋವ ದೇವರೇ. ಸಂಸೋನನು ಹುಟ್ಟುವುದಕ್ಕೆ ಮುಂಚೆ ಅವನ ತಾಯಿಗೆ ಯೆಹೋವನು ಹೇಳುವುದು: ‘ಬೇಗನೆ ನಿನಗೆ ಒಬ್ಬ ಮಗನು ಹುಟ್ಟುವನು. ಅವನು ಇಸ್ರಾಯೇಲನ್ನು ಫಿಲಿಷ್ಟಿಯರಿಂದ ರಕ್ಷಿಸುವುದರಲ್ಲಿ ನಾಯಕತ್ವ ವಹಿಸುವನು.’

ಕಾನಾನಿನಲ್ಲಿ ವಾಸಿಸುವ ಕೆಟ್ಟ ಜನರೇ ಫಿಲಿಷ್ಟಿಯರು. ಅವರಲ್ಲಿ ಅನೇಕ ಯೋಧರಿದ್ದಾರೆ. ಅವರು ಇಸ್ರಾಯೇಲ್ಯರಿಗೆ ಬಹಳವಾಗಿ ಕಷ್ಟಕೊಡುತ್ತಾರೆ. ಒಮ್ಮೆ ಸಂಸೋನನು ಫಿಲಿಷ್ಟಿಯರು ವಾಸಿಸುವಲ್ಲಿಗೆ ಹೋಗುತ್ತಿದ್ದಾಗ ದಾರಿಯಲ್ಲಿ ಒಂದು ದೊಡ್ಡ ಸಿಂಹವು ಗರ್ಜಿಸುತ್ತಾ ಅವನೆದುರಿಗೆ ಬರುತ್ತದೆ. ಆದರೆ ಸಂಸೋನನು ಬರಿಗೈಯಿಂದಲೇ ಸಿಂಹವನ್ನು ಕೊಲ್ಲುತ್ತಾನೆ. ಮಾತ್ರವಲ್ಲ, ದುಷ್ಟರಾದ ನೂರಾರು ಫಿಲಿಷ್ಟಿಯರನ್ನು ಸಹ ಅವನು ಕೊಲ್ಲುತ್ತಾನೆ.

ತದನಂತರ ಸಂಸೋನನು ದೆಲೀಲಾ ಎಂಬ ಹೆಸರಿನ ಒಬ್ಬ ಸ್ತ್ರೀಯಲ್ಲಿ ಮೋಹಿತನಾಗುತ್ತಾನೆ. ಫಿಲಿಷ್ಟಿಯ ಮುಖಂಡರು ಸಂಸೋನನಿಗೆ ಅಷ್ಟು ಶಕ್ತಿ ಎಲ್ಲಿಂದ ಬಂತ್ತೆಂದು ತಿಳಿಯಲು ಬಯಸುತ್ತಾರೆ. ಆದುದರಿಂದ ಅದನ್ನು ಕಂಡುಹಿಡಿಯುವಂತೆ ದೆಲೀಲಾಳಿಗೆ ಹೇಳುತ್ತಾರೆ. ಅದನ್ನು ಕಂಡುಹಿಡಿದು ತಿಳಿಸಿದರೆ ತಾವು ಒಬ್ಬೊಬ್ಬರು 1,100 ಬೆಳ್ಳಿಯ ನಾಣ್ಯಗಳನ್ನು ಕೊಡುತ್ತೇವೆಂದು ಆಕೆಗೆ ಮಾತುಕೊಡುತ್ತಾರೆ. ದೆಲೀಲಾಳಿಗೆ ಆ ಎಲ್ಲಾ ಹಣವನ್ನು ಪಡೆಯಬೇಕೆಂಬ ಆಶೆ. ಅವಳು ಸಂಸೋನನ ಅಥವಾ ದೇವರ ಜನರ ನಿಜ ಸ್ನೇಹಿತೆಯಲ್ಲ. ಆದುದರಿಂದ ಸಂಸೋನನು ಅಷ್ಟು ಶಕ್ತಿಶಾಲಿಯಾಗಿರಲು ಕಾರಣವೇನೆಂದು ತಿಳಿಸುವಂತೆ ಅವಳು ಪೀಡಿಸುತ್ತಾ ಇರುತ್ತಾಳೆ.

ಕೊನೆಗೆ ದೆಲೀಲಾಳ ಕಾಟ ತಾಳಲಾರದೆ ಸಂಸೋನನು ತನ್ನ ಶಕ್ತಿಯ ರಹಸ್ಯವನ್ನು ಹೇಳಿಬಿಡುತ್ತಾನೆ. ‘ಇವತ್ತಿನವರೆಗೆ ನನ್ನ ತಲೆಗೂದಲನ್ನು ಕತ್ತರಿಸಿಲ್ಲ. ನಾನು ಹುಟ್ಟಿದಂದಿನಿಂದಲೂ ದೇವರು ನನ್ನನ್ನು ನಾಜೀರನೆಂದು ಕರೆಯಲ್ಪಡುವ ಒಬ್ಬ ವಿಶೇಷ ಸೇವಕನಾಗಿರಲು ಆರಿಸಿದ್ದಾನೆ. ನನ್ನ ತಲೆಗೂದಲನ್ನು ಕತ್ತರಿಸಿದರೆ, ನಾನು ನನ್ನ ಶಕ್ತಿಯನ್ನು ಕಳೆದುಕೊಳ್ಳುವೆನು’ ಎಂದವನು ತಿಳಿಸುತ್ತಾನೆ.

ಅವನ ಶಕ್ತಿಯ ರಹಸ್ಯವನ್ನು ತಿಳಿದುಕೊಂಡಾಗ ದೆಲೀಲಾಳು ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿ ನಿದ್ರೆ ಮಾಡಿಸುತ್ತಾಳೆ. ಆಮೇಲೆ ಒಬ್ಬ ಮನುಷ್ಯನಿಂದ ಅವನ ಕೂದಲನ್ನು ಕತ್ತರಿಸುತ್ತಾಳೆ. ಸಂಸೋನನು ಏಳುವಾಗ ಅವನಲ್ಲಿ ಶಕ್ತಿಯೇ ಇರುವುದಿಲ್ಲ. ಆಗ ಫಿಲಿಷ್ಟಿಯರು ಬಂದು ಅವನನ್ನು ಬಂಧಿಸಿ ಅವನ ಎರಡೂ ಕಣ್ಣುಗಳನ್ನು ಕಿತ್ತುಹಾಕಿ ತಮ್ಮ ದಾಸನನ್ನಾಗಿ ಮಾಡಿಕೊಳ್ಳುತ್ತಾರೆ.

ಒಂದು ದಿನ ಫಿಲಿಷ್ಟಿಯರು ಅವರ ದೇವರಾದ ದಾಗೋನನ ಆರಾಧನೆಗಾಗಿ ಒಂದು ದೊಡ್ಡ ಉತ್ಸವವನ್ನು ನಡಿಸುತ್ತಾರೆ. ಆಗ ಸಂಸೋನನಿಗೆ ಗೇಲಿ ಮಾಡುವುದಕ್ಕಾಗಿ ಅವನನ್ನು ಸೆರೆಮನೆಯಿಂದ ಹೊರಗೆ ತರುತ್ತಾರೆ. ಅಷ್ಟರಲ್ಲಿ ಸಂಸೋನನ ತಲೆಗೂದಲುಗಳು ಪುನಃ ಬೆಳೆದಿರುತ್ತವೆ. ತನ್ನ ಕೈಹಿಡಿದು ನಡಿಸುತ್ತಿದ್ದ ಹುಡುಗನಿಗೆ ಸಂಸೋನನು ಹೇಳುವುದು: ‘ಈ ಕಟ್ಟಡಕ್ಕೆ ಆಧಾರವಾಗಿರುವ ಸ್ತಂಭಗಳಿಗೆ ನಾನು ಸ್ವಲ್ಪ ಒರಗಿಕೊಳ್ಳುತ್ತೇನೆ.’ ಆಗ ಸಂಸೋನನು ಶಕ್ತಿಗಾಗಿ ಯೆಹೋವನನ್ನು ಪ್ರಾರ್ಥಿಸಿ, ಸ್ತಂಭಗಳನ್ನು ಭದ್ರವಾಗಿ ಹಿಡಿದುಕೊಳ್ಳುತ್ತಾನೆ. ‘ನಾನೂ ಫಿಲಿಷ್ಟಿಯರ ಸಂಗಡ ಸಾಯುವೆನು’ ಎಂದವನು ಕೂಗಿ ಹೇಳುತ್ತಾನೆ. ಆ ಉತ್ಸವದಲ್ಲಿ 3,000 ಫಿಲಿಷ್ಟಿಯರು ಇರುತ್ತಾರೆ. ಸಂಸೋನನು ಸ್ತಂಭಗಳನ್ನು ಬಲವಾಗಿ ತಳ್ಳುತ್ತಾನೆ. ಆಗ ಕಟ್ಟಡವು ಕುಸಿದುಬಿದ್ದು ಈ ಎಲ್ಲಾ ದುರ್ಜನರು ಸಾಯುತ್ತಾರೆ.