ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 49

ಸೂರ್ಯನು ಕದಲದೆ ನಿಲ್ಲುತ್ತಾನೆ

ಸೂರ್ಯನು ಕದಲದೆ ನಿಲ್ಲುತ್ತಾನೆ

ಯೆಹೋಶುವನನ್ನು ನೋಡಿರಿ. ಅವನು, ‘ಸೂರ್ಯನೇ, ಕದಲದೆ ನಿಲ್ಲು!’ ಎಂದು ಹೇಳುತ್ತಿದ್ದಾನೆ. ಅದರಂತೆ ಸೂರ್ಯನು ಅಲುಗಾಡದೆ ಸ್ತಬ್ಧನಾಗಿ ನಿಲ್ಲುತ್ತಾನೆ. ಅವನು ಅಲ್ಲಿ ಆಕಾಶದ ಮಧ್ಯದಲ್ಲೇ ಒಂದು ಇಡೀ ದಿವಸ ಇರುತ್ತಾನೆ. ಹಾಗಾಗುವಂತೆ ಮಾಡಿದಾತನು ಯೆಹೋವನೇ! ಆದರೆ ಸೂರ್ಯನು ಬೆಳಕು ನೀಡುತ್ತಾ ನಿಲ್ಲುವಂತೆ ಯೆಹೋಶುವನು ಬಯಸುವುದೇಕೆ? ನಾವದನ್ನು ನೋಡೋಣ.

ಕಾನಾನ್‌ ದೇಶದ ಆ ಐದು ಮಂದಿ ಕೆಟ್ಟ ಅರಸರು ಗಿಬ್ಯೋನ್ಯರ ವಿರುದ್ಧವಾಗಿ ಯುದ್ಧಮಾಡಲು ಬರುತ್ತಾರೆ. ಕೂಡಲೆ ಗಿಬ್ಯೋನ್ಯರು ಸಹಾಯಕ್ಕಾಗಿ ಮೊರೆಯಿಡುತ್ತಾ ಒಬ್ಬ ಮನುಷ್ಯನನ್ನು ಯೆಹೋಶುವನ ಬಳಿಗೆ ಕಳುಹಿಸುತ್ತಾರೆ. ‘ಬೇಗನೆ ಬಂದು ನಮ್ಮನ್ನು ಕಾಪಾಡಿ! ನಿಮ್ಮ ಸೇವಕರ ವಿರುದ್ಧವಾಗಿ ಬೆಟ್ಟ ಪ್ರದೇಶದ ಅರಸರೆಲ್ಲರೂ ಯುದ್ಧಮಾಡಲು ಬಂದಿದ್ದಾರೆ’ ಎಂದು ಆ ಮನುಷ್ಯನು ಹೇಳುತ್ತಾನೆ.

ಆ ಕೂಡಲೆ ಯೆಹೋಶುವನು ಮತ್ತು ಅವನ ಯೋಧರೆಲ್ಲರೂ ಅಲ್ಲಿಗೆ ಹೋಗುತ್ತಾರೆ. ರಾತ್ರಿಯೆಲ್ಲಾ ಅವರು ನಡಿಯುತ್ತಾರೆ. ಗಿಬ್ಯೋನಿಗೆ ಅವರು ಬಂದಾಗ, ಆ ಐದು ಮಂದಿ ಅರಸರ ಸೈನಿಕರು ಹೆದರಿ ಓಡಲಾರಂಭಿಸುತ್ತಾರೆ. ಆಗ ಯೆಹೋವನು ಆಕಾಶದಿಂದ ದೊಡ್ಡ ಕಲ್ಮಳೆಯನ್ನು ಸುರಿಸುತ್ತಾನೆ. ಯೆಹೋಶುವನ ಯೋಧರಿಂದ ಕೊಲ್ಲಲ್ಪಟ್ಟವರಿಗಿಂತ ಹೆಚ್ಚು ಸೈನಿಕರು ಕಲ್ಮಳೆಯಿಂದಾಗಿ ಸಾಯುತ್ತಾರೆ.

ಸೂರ್ಯನು ಮುಳುಗಿ ಕತ್ತಲಾದರೆ ಆ ಕೆಟ್ಟ ಅರಸರ ಸೈನಿಕರು ತಪ್ಪಿಸಿಕೊಂಡು ಓಡಿ ಹೋಗುವರೆಂದು ಯೆಹೋಶುವನಿಗೆ ಗೊತ್ತು. ಆದುದರಿಂದಲೇ ಯೆಹೋಶುವನು ಯೆಹೋವನಿಗೆ ಪ್ರಾರ್ಥಿಸುತ್ತಾ, ಬಳಿಕ ‘ಸೂರ್ಯನೇ, ಕದಲದೆ ನಿಲ್ಲು!’ ಎಂದು ಹೇಳುತ್ತಾನೆ. ಹೀಗೆ ಸೂರ್ಯ ಪ್ರಕಾಶಿಸುತ್ತಾ ಇರುವಾಗಲೇ ಇಸ್ರಾಯೇಲ್ಯರು ಯುದ್ಧ ಮಾಡಿ ಜಯಗಳಿಸುತ್ತಾರೆ.

ದೇವಜನರನ್ನು ದ್ವೇಷಿಸುವ ಇನ್ನು ಎಷ್ಟೋ ಕೆಟ್ಟ ಅರಸರು ಕಾನಾನಿನಲ್ಲಿದ್ದಾರೆ. ದೇಶದಲ್ಲಿರುವ 31 ಮಂದಿ ಅರಸರುಗಳನ್ನು ಸೋಲಿಸಲು ಯೆಹೋಶುವನಿಗೆ ಮತ್ತು ಅವನ ಸೇನೆಗೆ ಸುಮಾರು ಆರು ವರ್ಷ ತಗಲುತ್ತದೆ. ಬಳಿಕ, ಯೆಹೋಶುವನು ಕಾನಾನ್‌ ದೇಶವನ್ನು ವಿಭಾಗಿಸಿ ಇನ್ನೂ ಪ್ರದೇಶಗಳ ಅಗತ್ಯವಿದ್ದ ಕುಲಗಳಿಗೆ ಹಂಚಿಕೊಡುತ್ತಾನೆ.

ಇದಾಗಿ ಅನೇಕ ವರ್ಷಗಳು ದಾಟುತ್ತವೆ. ಕೊನೆಗೆ 110 ವರ್ಷ ಪ್ರಾಯದಲ್ಲಿ ಯೆಹೋಶುವನು ಸಾಯುತ್ತಾನೆ. ಅವನು ಮತ್ತು ಅವನ ಸ್ನೇಹಿತರು ಎಷ್ಟರ ವರೆಗೆ ಜೀವಿತರಾಗಿದ್ದಾರೋ ಆ ತನಕ ಜನರು ಯೆಹೋವನಿಗೆ ವಿಧೇಯರಾಗಿರುತ್ತಾರೆ. ಆದರೆ ಈ ಸತ್ಪುರುಷರು ಸತ್ತ ಬಳಿಕ ಜನರು ಕೆಟ್ಟದ್ದನ್ನು ಮಾಡಲಾರಂಭಿಸುತ್ತಾರೆ. ಈ ಕಾರಣ ಆಪತ್ತಿಗೆ ಗುರಿಯಾಗುತ್ತಾರೆ. ಅವರಿಗೆ ದೇವರ ಸಹಾಯದ ನಿಜ ಅಗತ್ಯವಿರುವದು ಆಗಲೇ.