ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 63

ವಿವೇಕಿ ಅರಸ ಸೊಲೊಮೋನ

ವಿವೇಕಿ ಅರಸ ಸೊಲೊಮೋನ

ಸೊಲೊಮೋನನು ರಾಜನಾಗುವಾಗ ಅವನಿನ್ನೂ ಚಿಕ್ಕವನಾಗಿದ್ದನು. ಅವನು ಯೆಹೋವನನ್ನು ಪ್ರೀತಿಸುತ್ತಾನೆ ಮತ್ತು ತನ್ನ ತಂದೆಯಾದ ದಾವೀದನು ಕೊಟ್ಟ ಉತ್ತಮ ಸಲಹೆಯನ್ನು ಪಾಲಿಸುತ್ತಾನೆ. ಯೆಹೋವನು ಸೊಲೊಮೋನನನ್ನು ಮೆಚ್ಚುತ್ತಾನೆ. ಆದುದರಿಂದ ಒಂದು ರಾತ್ರಿ ಆತನು ಕನಸಿನಲ್ಲಿ, ‘ಸೊಲೊಮೋನನೇ, ನಿನಗೆ ಯಾವ ವರ ಬೇಕು ಕೇಳಿಕೋ?’ ಎಂದು ಹೇಳುತ್ತಾನೆ.

ಆಗ ಸೊಲೊಮೋನನು, ‘ನನ್ನ ದೇವರಾದ ಯೆಹೋವನೇ, ನಾನು ಇನ್ನೂ ಚಿಕ್ಕವನು. ರಾಜ್ಯವನ್ನಾಳುವುದು ಹೇಗೆಂದು ನನಗೆ ತಿಳಿಯದು. ಆದುದರಿಂದ ನಿನ್ನ ಜನರನ್ನು ಯೋಗ್ಯ ರೀತಿಯಲ್ಲಿ ಆಳುವುದಕ್ಕೆ ನನಗೆ ವಿವೇಕವನ್ನು ದಯಪಾಲಿಸು’ ಎಂದು ಬೇಡಿಕೊಳ್ಳುತ್ತಾನೆ.

ಸೊಲೊಮೋನನು ಏನನ್ನು ಕೇಳಿಕೊಂಡನೋ ಅದನ್ನು ಯೆಹೋವನು ಮೆಚ್ಚುತ್ತಾನೆ. ಆದುದರಿಂದ ಆತನು ‘ನೀನು ದೀರ್ಘಾಯುಷ್ಯವನ್ನಾಗಲಿ ಐಶ್ವರ್ಯವನ್ನಾಗಲಿ ಕೇಳಿಕೊಳ್ಳದೆ ವಿವೇಕವನ್ನು ಕೇಳಿಕೊಂಡೆಯಲ್ಲಾ. ಆದುದರಿಂದ, ಇದುವರೆಗೆ ಯಾರಿಗೂ ಇರುವುದಕ್ಕಿಂತ ಹೆಚ್ಚಿನ ವಿವೇಕವನ್ನು ನಾನು ನಿನಗೆ ಕೊಡುವೆನು. ಅಷ್ಟೇ ಅಲ್ಲ, ನೀನು ಕೇಳದಂಥದ್ದನ್ನೂ ಅಂದರೆ ಐಶ್ವರ್ಯವನ್ನು, ಘನವನ್ನು ಸಹ ನಿನಗೆ ಕೊಡುವೆನು’ ಎಂದು ಹೇಳಿ ಆಶೀರ್ವದಿಸುತ್ತಾನೆ.

ಸ್ವಲ್ಪ ಸಮಯ ಕಳೆದ ಬಳಿಕ ಇಬ್ಬರು ಸ್ತ್ರೀಯರು ತುಂಬಾ ಕಷ್ಟಕರ ಸಮಸ್ಯೆಯೊಂದನ್ನು ಬಗೆಹರಿಸುವುದಕ್ಕಾಗಿ ಸೊಲೊಮೋನನ ಬಳಿಗೆ ಬರುತ್ತಾರೆ. ಅವರಲ್ಲೊಬ್ಬಳು, ‘ನಾನು ಮತ್ತು ಇವಳು ಒಂದೇ ಮನೆಯಲ್ಲಿ ವಾಸಿಸುತ್ತೇವೆ. ನಾನು ಒಂದು ಗಂಡು ಮಗುವನ್ನು ಹೆತ್ತೆ. ಎರಡು ದಿನಗಳ ಅನಂತರ ಇವಳೂ ಒಂದು ಗಂಡು ಮಗುವಿಗೆ ಜನ್ಮ ನೀಡಿದಳು. ಆಮೇಲೆ ಒಂದು ರಾತ್ರಿ ಇವಳ ಮಗು ಸತ್ತಿತು. ಆದರೆ ನಾನು ನಿದ್ದೆಯಲ್ಲಿದ್ದಾಗ ಅವಳು ತನ್ನ ಸತ್ತ ಮಗುವನ್ನು ನನ್ನ ಪಕ್ಕದಲ್ಲಿ ಹಾಕಿ ನನ್ನ ಕೂಸನ್ನು ತೆಗೆದುಕೊಂಡಳು. ನಾನು ಎಚ್ಚತ್ತು ಸತ್ತ ಮಗುವಿನೆಡೆಗೆ ನೋಡಿದಾಗ, ಅದು ನನ್ನದಲ್ಲವೆಂದು ಕಂಡೆನು’ ಎಂದು ವಿವರಿಸುತ್ತಾಳೆ.

ಆಗ ಇನ್ನೊಬ್ಬಳು ‘ಇಲ್ಲ! ಬದುಕಿರುವ ಮಗು ನನ್ನದು. ಸತ್ತಿರುವ ಮಗು ಅವಳದ್ದು!’ ಎಂದನ್ನುತ್ತಾಳೆ. ಅದಕ್ಕೆ ಮೊದಲನೆಯ ಸ್ತ್ರೀ ಮತ್ತೆ, ‘ಅಲ್ಲ! ಸತ್ತ ಮಗು ನಿನ್ನದು, ಬದುಕಿರುವುದು ನನ್ನದು!’ ಎಂದು ಉತ್ತರಿಸುತ್ತಾಳೆ. ಈ ರೀತಿಯಲ್ಲಿ ಆ ಸ್ತ್ರೀಯರು ಜಗಳವಾಡುತ್ತಾರೆ. ಸೊಲೊಮೋನನು ಏನು ಮಾಡುವನು?

ಅವನು ಒಂದು ಕತ್ತಿಯನ್ನು ತರುವಂತೆ ತನ್ನ ಸೇವಕರಿಗೆ ಹೇಳುತ್ತಾನೆ. ಅವರು ತರಲು, ‘ಜೀವದಿಂದಿರುವ ಈ ಕೂಸನ್ನು ಎರಡು ಭಾಗ ಮಾಡಿ ಅರ್ಧ ಇವಳಿಗೂ ಇನ್ನರ್ಧ ಅವಳಿಗೂ ಕೊಡಿರಿ’ ಎಂದು ಆಜ್ಞಾಪಿಸುತ್ತಾನೆ.

ಕೂಡಲೆ ಆ ಮಗುವಿನ ನಿಜವಾದ ತಾಯಿ, ‘ಅಯ್ಯೋ, ಬೇಡ! ದಯವಿಟ್ಟು ಮಗುವನ್ನು ಕೊಲ್ಲಬೇಡಿ. ಅದನ್ನು ಅವಳಿಗೇ ಕೊಟ್ಟುಬಿಡಿ!’ ಎಂದು ಕೂಗುತ್ತಾಳೆ. ಆದರೆ ಇನ್ನೊಬ್ಬಳು, ‘ನಮ್ಮಿಬ್ಬರಿಗೂ ಆ ಮಗುವನ್ನು ಕೊಡಬೇಡಿ. ಅದನ್ನು ಕಡಿದು ಎರಡು ತುಂಡು ಮಾಡಿ’ ಎಂದು ಹೇಳುತ್ತಾಳೆ.

ಕೊನೆಗೆ ಸೊಲೊಮೋನನು ಮಾತಾಡುತ್ತಾ ಅನ್ನುವುದು, ‘ಕೂಸನ್ನು ಕೊಲ್ಲಬೇಡಿರಿ! ಅದನ್ನು ಮೊದಲನೆಯ ಸ್ತ್ರೀಗೆ ಕೊಡಿರಿ. ಅವಳೇ ನಿಜವಾದ ತಾಯಿ.’ ಇದು ಸೊಲೊಮೋನನಿಗೆ ಹೇಗೆ ಗೊತ್ತಾಯಿತು? ಹೇಗೆಂದರೆ, ನಿಜವಾದ ತಾಯಿ ತನ್ನ ಮಗುವನ್ನು ಬಹಳ ಪ್ರೀತಿಸುತ್ತಾಳೆ. ಆದುದರಿಂದಲೇ ಅದನ್ನು ಕೊಲ್ಲಬಾರದೆಂಬ ಕಾರಣಕ್ಕಾಗಿ ಇನ್ನೊಬ್ಬಳಿಗೆ ಕೊಟ್ಟುಬಿಡುವಂತೆ ಹೇಳುತ್ತಾಳೆ. ಹೀಗೆ, ಅವಳೇ ಮಗುವಿನ ನಿಜವಾದ ತಾಯಿಯೆಂದು ಸೊಲೊಮೋನನಿಗೆ ಗೊತ್ತಾಗುತ್ತದೆ. ಸೊಲೊಮೋನನು ಹೇಗೆ ಈ ಸಮಸ್ಯೆಯನ್ನು ಪರಿಹರಿಸಿದನೆಂದು ಜನರು ಕೇಳಿದಾಗ, ಅಂಥ ಒಬ್ಬ ವಿವೇಕಿ ರಾಜನು ತಮ್ಮನ್ನು ಆಳುತ್ತಿರುವುದಕ್ಕಾಗಿ ಅವರೆಲ್ಲರೂ ಸಂತೋಷಿಸುತ್ತಾರೆ.

ಸೊಲೊಮೋನನ ಆಳಿಕೆಯ ಸಮಯದಲ್ಲಿ, ಭೂಮಿಯಲ್ಲಿ ಗೋದಿ, ಜವೆಗೋದಿ, ದ್ರಾಕ್ಷೆ, ಅಂಜೂರ ಹಾಗೂ ಇತರ ಬೆಳೆಗಳು ಸಮೃದ್ಧಿಯಾಗಿ ಬೆಳೆಯುವಂತೆ ಮಾಡುವ ಮೂಲಕ ಯೆಹೋವನು ಜನರನ್ನು ಆಶೀರ್ವದಿಸುತ್ತಾನೆ. ಜನರು ಉತ್ತಮವಾದ ವಸ್ತ್ರಗಳನ್ನು ತೊಟ್ಟು ಒಳ್ಳೆಯ ಮನೆಗಳಲ್ಲಿ ವಾಸಿಸುತ್ತಾರೆ. ಪ್ರತಿಯೊಬ್ಬರಿಗೆ ಬೇಕಾದಷ್ಟು ಒಳ್ಳೆಯ ಸೌಕರ್ಯಗಳು ಅಲ್ಲಿರುತ್ತವೆ.