ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 62

ದಾವೀದನ ಮನೆಯಲ್ಲಿ ತೊಂದರೆ

ದಾವೀದನ ಮನೆಯಲ್ಲಿ ತೊಂದರೆ

ದಾವೀದನು ಯೆರೂಸಲೇಮಿನಲ್ಲಿ ಆಳಲು ಪ್ರಾರಂಭಿಸಿದ ನಂತರ, ಯೆಹೋವನು ದಾವೀದನ ಸೈನ್ಯಕ್ಕೆ ತಮ್ಮ ವೈರಿಗಳ ಮೇಲೆ ಅನೇಕ ವಿಜಯಗಳನ್ನು ಕೊಡುತ್ತಾನೆ. ಕಾನಾನ್‌ ದೇಶವನ್ನು ಇಸ್ರಾಯೇಲ್ಯರಿಗೆ ಕೊಡುವುದಾಗಿ ಯೆಹೋವನು ವಾಗ್ದಾನಿಸಿದ್ದನು. ಈಗ ಕೊನೆಗೆ ಯೆಹೋವನ ಸಹಾಯದಿಂದ ಆ ವಾಗ್ದತ್ತ ದೇಶವೆಲ್ಲವು ಅವರದ್ದಾಗುತ್ತದೆ.

ದಾವೀದನು ಒಬ್ಬ ಒಳ್ಳೆಯ ಅರಸನು. ಅವನು ಯೆಹೋವನನ್ನು ಪ್ರೀತಿಸುತ್ತಾನೆ. ಆದುದರಿಂದ ಯೆರೂಸಲೇಮನ್ನು ವಶಪಡಿಸಿಕೊಂಡ ಮೇಲೆ ಅವನು ಮಾಡುವ ಮೊದಲನೆಯ ಕೆಲಸವೆಂದರೆ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ತರುವುದೇ. ಅದನ್ನು ಇಡಲಿಕ್ಕಾಗಿ ಒಂದು ಆಲಯವನ್ನು ಕಟ್ಟಲು ಅವನು ಬಯಸುತ್ತಾನೆ.

ಹಲವು ವರ್ಷಗಳ ನಂತರ ದಾವೀದನು ಒಂದು ತಪ್ಪನ್ನು ಮಾಡುತ್ತಾನೆ. ಬೇರೊಬ್ಬರಿಗೆ ಸೇರಿರುವ ಏನನ್ನಾದರೂ ತೆಗೆದುಕೊಳ್ಳುವುದು ತಪ್ಪೆಂದು ದಾವೀದನಿಗೆ ಗೊತ್ತು. ಆದರೆ ಒಂದು ಸಂಜೆ, ಅವನು ತನ್ನ ಅರಮನೆಯ ಮಾಳಿಗೆಯ ಮೇಲಿರುವಾಗ ಕೆಳಗೆ ಬಹುಸುಂದರಿಯಾದ ಸ್ತ್ರೀಯೊಬ್ಬಳನ್ನು ಕಾಣುತ್ತಾನೆ. ಅವಳ ಹೆಸರು ಬತ್ಷೆಬೆ. ದಾವೀದನ ಒಬ್ಬ ಸೈನಿಕನಾದ ಊರೀಯ ಎಂಬವನು ಅವಳ ಗಂಡ.

ದಾವೀದನು ಬತ್ಷೆಬೆಯನ್ನು ಎಷ್ಟು ಆಶಿಸುತ್ತಾನೆಂದರೆ ಆಕೆಯನ್ನು ಅರಮನೆಗೆ ಕರೆತರಿಸುತ್ತಾನೆ. ಅವಳ ಗಂಡನೋ ಯುದ್ಧಮಾಡಲು ಹೋಗಿರುತ್ತಾನೆ. ದಾವೀದನು ಆಕೆಯನ್ನು ಕೂಡುತ್ತಾನೆ. ಬಳಿಕ, ಆಕೆ ತನಗೆ ಮಗುವಾಗಲಿದೆಯೆಂದು ಕಂಡುಕೊಳ್ಳುತ್ತಾಳೆ. ದಾವೀದನಿಗೆ ತುಂಬಾ ಚಿಂತೆಯಾಗುತ್ತದೆ ಮತ್ತು ಊರೀಯನು ಯುದ್ಧದಲ್ಲಿ ಕೊಲ್ಲಲ್ಪಡುವಂತೆ ರಣರಂಗದ ಮುಂಭಾಗದಲ್ಲಿ ಅವನನ್ನು ನಿಲ್ಲಿಸಲು ತನ್ನ ಸೇನಾಪತಿ ಯೋವಾಬನಿಗೆ ಹೇಳಿಕಳುಹಿಸುತ್ತಾನೆ. ಊರೀಯನು ಸತ್ತಾಗ, ದಾವೀದನು ಬತ್ಷೆಬೆಯನ್ನು ಮದುವೆಯಾಗುತ್ತಾನೆ.

ದಾವೀದನು ಹೀಗೆ ಮಾಡಿದ್ದರಿಂದ ಅವನ ಮೇಲೆ ಯೆಹೋವನಿಗೆ ಬಹಳ ಸಿಟ್ಟುಬರುತ್ತದೆ. ಆದುದರಿಂದ ದಾವೀದನ ದುಷ್ಕೃತ್ಯಗಳ ಕುರಿತು ತಿಳಿಸುವುದಕ್ಕೆ ಯೆಹೋವನು ತನ್ನ ಸೇವಕ ನಾತಾನನನ್ನು ಕಳುಹಿಸುತ್ತಾನೆ. ಇಲ್ಲಿ ನಾತಾನನು ದಾವೀದನೊಂದಿಗೆ ಮಾತಾಡುವುದನ್ನು ನೀವು ನೋಡಬಹುದು. ತಾನು ಅಂಥ ಕೆಲಸ ಮಾಡಿದ್ದಕ್ಕಾಗಿ ದಾವೀದನು ಅತ್ಯಂತ ದುಃಖಪಡುತ್ತಾನೆ. ಆದುದರಿಂದ ಯೆಹೋವನು ಅವನನ್ನು ಸಾಯಿಸುವುದಿಲ್ಲ. ಆದರೆ ಯೆಹೋವನು ದಾವೀದನಿಗೆ ‘ಈ ಕೆಟ್ಟ ವಿಷಯಗಳನ್ನು ಮಾಡಿದ ಕಾರಣ ನಿನ್ನ ಮನೆಯಲ್ಲಿ ನಿನಗೆ ತುಂಬಾ ತೊಂದರೆಯಿರುವುದು’ ಎಂದು ತಿಳಿಸುತ್ತಾನೆ. ಅಂತೆಯೇ ದಾವೀದನು ಬಹಳ ತೊಂದರೆಯನ್ನು ಅನುಭವಿಸುತ್ತಾನೆ!

ಮೊದಲಾಗಿ, ಬತ್ಷೆಬೆಯ ಗಂಡು ಮಗು ಸತ್ತುಹೋಗುತ್ತದೆ. ಆಮೇಲೆ ದಾವೀದನ ಜೇಷ್ಠ ಪುತ್ರ ಅಮ್ನೋನನು ತನ್ನ ತಂಗಿ ತಾಮಾರಳನ್ನು ತನ್ನೊಂದಿಗೆ ಒಬ್ಬಳೇ ಇರುವಂತೆ ಮಾಡಿ ಅವಳನ್ನು ಬಲಾತ್ಕಾರದಿಂದ ಪ್ರೇಮಿಸುತ್ತಾನೆ. ದಾವೀದನ ಮಗ ಅಬ್ಷಾಲೋಮನು ಇದರಿಂದ ಎಷ್ಟು ಸಿಟ್ಟುಗೊಂಡನೆಂದರೆ, ಅಮ್ನೋನನನ್ನು ಕೊಂದುಹಾಕುತ್ತಾನೆ. ತದನಂತರ, ಅಬ್ಷಾಲೋಮನು ಹೆಚ್ಚಿನ ಜನರ ಮೆಚ್ಚಿಕೆಯನ್ನು ಸಂಪಾದಿಸಿ ತನ್ನನ್ನು ರಾಜನಾಗಿ ಮಾಡಿಕೊಳ್ಳುತ್ತಾನೆ. ಕೊನೆಗೆ, ಯುದ್ಧದಲ್ಲಿ ಅಬ್ಷಾಲೋಮನ ವಿರುದ್ಧ ದಾವೀದನು ಜಯಹೊಂದುತ್ತಾನೆ. ಅಬ್ಷಾಲೋಮನು ಕೊಲ್ಲಲ್ಪಡುತ್ತಾನೆ. ಹೌದು, ದಾವೀದನಿಗೆ ಬಹಳಷ್ಟು ತೊಂದರೆ ಬರುತ್ತದೆ.

ಈ ಮಧ್ಯೆ ಬತ್ಷೆಬೆಗೆ ಒಬ್ಬ ಮಗನು ಹುಟ್ಟುತ್ತಾನೆ. ಅವನ ಹೆಸರು ಸೊಲೊಮೋನ. ದಾವೀದನು ವೃದ್ಧನೂ ಅಸ್ವಸ್ಥನೂ ಆಗುವಾಗ, ಅವನ ಮಗನಾದ ಅದೋನೀಯನು ತನ್ನನ್ನು ಅರಸನನ್ನಾಗಿ ಮಾಡಿಕೊಳ್ಳುತ್ತಾನೆ. ಆಗ ದಾವೀದನು ಚಾದೋಕನೆಂಬ ಹೆಸರಿನ ಯಾಜಕನಿಂದ ಸೊಲೊಮೋನನ ತಲೆಯ ಮೇಲೆ ತೈಲವನ್ನು ಹೊಯ್ದು ಸೊಲೊಮೋನನು ಅರಸನಾಗುವನೆಂದು ತೋರಿಸುತ್ತಾನೆ. ಇದಾಗಿ ಸ್ವಲ್ಪದರಲ್ಲೇ ದಾವೀದನು ಸಾಯುತ್ತಾನೆ. ಆಗ ಅವನಿಗೆ 70 ವರ್ಷ ಪ್ರಾಯ. ಅವನು 40 ವರ್ಷ ರಾಜ್ಯವಾಳಿದನು. ಈಗ ಸೊಲೊಮೋನನು ಇಸ್ರಾಯೇಲಿನ ಅರಸನಾಗುತ್ತಾನೆ.