ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 76

ಯೆರೂಸಲೇಮ್‌ ನಾಶವಾಗುತ್ತದೆ

ಯೆರೂಸಲೇಮ್‌ ನಾಶವಾಗುತ್ತದೆ

ಅರಸ ನೆಬೂಕದ್ನೆಚ್ಚರನು ಸುಶಿಕ್ಷಿತ ಇಸ್ರಾಯೇಲ್ಯರನ್ನೆಲ್ಲಾ ಬಾಬೆಲಿಗೆ ಒಯ್ದು ಈಗ 10ಕ್ಕಿಂತಲೂ ಹೆಚ್ಚು ವರ್ಷಗಳಾಗಿವೆ. ಯೆರೂಸಲೇಮ್‌ಗೆ ಈಗ ಏನು ಸಂಭವಿಸುತ್ತಾ ಇದೆಯೆಂದು ನೋಡಿರಿ! ಅದು ಸುಟ್ಟುಹಾಕಲ್ಪಡುತ್ತಿದೆ. ಬದುಕುಳಿದ ಇಸ್ರಾಯೇಲ್ಯರನ್ನು ಬಾಬೆಲಿಗೆ ಸೆರೆವಾಸಿಗಳಾಗಿ ಒಯ್ಯಲಾಗುತ್ತಿದೆ.

ಜನರು ತಮ್ಮ ದುರ್ಮಾರ್ಗಗಳನ್ನು ಬಿಟ್ಟು ಹಿಂದಿರುಗದಿದ್ದಲ್ಲಿ ಈ ರೀತಿ ಸಂಭವಿಸುವುದೆಂದು ಯೆಹೋವನ ಪ್ರವಾದಿಗಳು ಎಚ್ಚರಿಸಿದ್ದು ನಿಮಗೆ ನೆನಪಿರಬಹುದು. ಆದರೆ ಇಸ್ರಾಯೇಲ್ಯರು ಆ ಪ್ರವಾದಿಗಳಿಗೆ ಕಿವಿಗೊಡಲಿಲ್ಲ. ಅವರು ಯೆಹೋವನನ್ನು ಬಿಟ್ಟು ಸುಳ್ಳು ದೇವರುಗಳನ್ನು ಆರಾಧಿಸುತ್ತಾ ಇದ್ದರು. ಆದುದರಿಂದ ಜನರಿಗೆ ಈ ರೀತಿಯ ಶಿಕ್ಷೆ ನೀಡಿದ್ದು ಸರಿಯಾಗಿತ್ತು. ಇಸ್ರಾಯೇಲ್ಯರು ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದರೆಂದು ನಮಗೆ ಹೇಗೆ ಗೊತ್ತು? ಹೇಗೆಂದರೆ, ದೇವರ ಪ್ರವಾದಿಯಾದ ಯೆಹೆಜ್ಕೇಲನು ಅದನ್ನು ನಮಗೆ ತಿಳಿಸುತ್ತಾನೆ.

ಯೆಹೆಜ್ಕೇಲನು ಯಾರೆಂದು ನಿಮಗೆ ತಿಳಿದಿದೆಯೇ? ಅರಸ ನೆಬೂಕದ್ನೆಚ್ಚರನು ಬಾಬೆಲಿಗೆ ಕರೆದುಕೊಂಡು ಹೋಗಿದ್ದವರಲ್ಲಿ ಇವನೂ ಒಬ್ಬನು. ಯೆರೂಸಲೇಮ್‌ ಭೀಕರವಾಗಿ ನಾಶವಾಗುವ ಸುಮಾರು 10ವರ್ಷಗಳ ಮೊದಲು ನೆಬೂಕದ್ನೆಚ್ಚರನು ಅವರನ್ನು ಬಾಬೆಲಿಗೆ ಕರೆದುಕೊಂಡು ಹೋಗಿದ್ದನು. ಆ ಸಮಯದಲ್ಲಿಯೇ ದಾನಿಯೇಲ ಮತ್ತು ಅವನ ಮೂವರು ಮಿತ್ರರಾದ ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋರನ್ನು ಬಾಬೆಲಿಗೆ ಕರೆದೊಯ್ಯಲಾಗಿತ್ತು.

ಯೆಹೆಜ್ಕೇಲನು ಇನ್ನೂ ಬಾಬೆಲಿನಲ್ಲಿದ್ದಾಗ, ಯೆರೂಸಲೇಮಿನ ಆಲಯದಲ್ಲಿ ನಡೆಯುತ್ತಿರುವ ಕೆಟ್ಟ ಸಂಗತಿಗಳನ್ನು ಯೆಹೋವನು ಅವನಿಗೆ ತೋರಿಸುತ್ತಾನೆ. ಯೆಹೋವನು ಇದನ್ನು ಒಂದು ಅದ್ಭುತದ ಮೂಲಕ ಮಾಡುತ್ತಾನೆ. ಯೆಹೆಜ್ಕೇಲನು ನಿಜವಾಗಿ ಬಾಬೆಲಿನಲ್ಲೇ ಇರುವುದಾದರೂ, ಯೆರೂಸಲೇಮಿನ ಆಲಯದಲ್ಲಿ ನಡೆಯುತ್ತಿರುವ ಎಲ್ಲಾ ಸಂಗತಿಗಳನ್ನು ಅವನು ನೋಡುವಂತೆ ಯೆಹೋವನು ಮಾಡುತ್ತಾನೆ. ತಾನು ನೋಡುವ ವಿಷಯಗಳು ಯೆಹೆಜ್ಕೇಲನಿಗೆ ಆಘಾತವನ್ನು ಉಂಟುಮಾಡುತ್ತವೆ!

‘ಜನರು ಆಲಯದಲ್ಲಿ ನಡಿಸುತ್ತಿರುವ ಕೆಟ್ಟ, ಅಸಹ್ಯ ಕಾರ್ಯಗಳನ್ನು ನೋಡು. ಹಾವುಗಳ, ಎಲ್ಲಾ ತರದ ಪ್ರಾಣಿಗಳ ಚಿತ್ರಗಳು ಗೋಡೆಗಳ ಮೇಲೆ ಬಿಡಿಸಲ್ಪಟ್ಟಿವೆ. ಇಸ್ರಾಯೇಲ್ಯರು ಅವುಗಳನ್ನು ಪೂಜಿಸುತ್ತಿರುವುದನ್ನು ನೋಡಿದಿಯಾ!’ ಎಂದು ಯೆಹೋವನು ಯೆಹೆಜ್ಕೇಲನಿಗೆ ಕೇಳುತ್ತಾನೆ. ಯೆಹೆಜ್ಕೇಲನಿಗೆ ಈ ಸಂಗತಿಗಳನ್ನು ನೋಡಲು ಸಾಧ್ಯವಾಗುತ್ತದೆ. ಮಾತ್ರವಲ್ಲ ಅವನ್ನು ಬರೆದಿಡುತ್ತಾನೆ.

ಯೆಹೋವನು ಯೆಹೆಜ್ಕೇಲನಿಗೆ, ‘ಇಸ್ರಾಯೇಲ್ಯ ನಾಯಕರು ರಹಸ್ಯವಾಗಿ ನಡಿಸುತ್ತಿರುವ ಕೆಲಸವನ್ನು ನೋಡಿದೆಯಾ?’ ಎಂದು ಕೇಳುತ್ತಾನೆ. ಹೌದು, ಅವನು ಅದನ್ನೂ ನೋಡುತ್ತಾನೆ. ಅಲ್ಲಿರುವ 70 ಮಂದಿ ಪುರುಷರು ಸುಳ್ಳು ದೇವರುಗಳನ್ನು ಪೂಜಿಸುತ್ತಿದ್ದಾರೆ. ‘ಯೆಹೋವನು ನಮ್ಮನ್ನು ನೋಡುತ್ತಿಲ್ಲ. ಆತನು ಈ ದೇಶವನ್ನು ತೊರೆದು ಬಿಟ್ಟಿದ್ದಾನೆ’ ಎಂದು ಅವರು ಹೇಳುತ್ತಿದ್ದಾರೆ.

ಅನಂತರ ಯೆಹೋವನು ಆಲಯದ ಉತ್ತರ ಬಾಗಿಲ ಬಳಿ ಇರುವ ಕೆಲವು ಸ್ತ್ರೀಯರನ್ನು ಯೆಹೆಜ್ಕೇಲನಿಗೆ ತೋರಿಸುತ್ತಾನೆ. ಅವರು ಅಲ್ಲಿ ಕೂತುಕೊಂಡು ಸುಳ್ಳು ದೇವರಾದ ತಮ್ಮೂಜನ್ನು ಆರಾಧಿಸುತ್ತಿದ್ದಾರೆ. ತನ್ನ ಆಲಯದ ಪ್ರವೇಶದ್ವಾರದಲ್ಲಿರುವ ಪುರುಷರನ್ನು ಸಹ ನೋಡಲು ಯೆಹೋವನು ಹೇಳುತ್ತಾನೆ. ಅಲ್ಲಿ ಸುಮಾರು 25 ಮಂದಿ ಪೂರ್ವದ ಕಡೆ ತಿರುಗಿ ತಲೆಬಾಗಿ ಸೂರ್ಯನನ್ನು ಆರಾಧಿಸುತ್ತಿರುವುದು ಯೆಹೆಜ್ಕೇಲನಿಗೆ ಕಾಣಿಸುತ್ತದೆ!

‘ಈ ಜನರಿಗೆ ನನ್ನೆಡೆಗೆ ಗೌರವವೇ ಇಲ್ಲ. ಅವರು ದುಷ್ಕಾರ್ಯಗಳನ್ನು ಮಾಡಿದ್ದು ಮಾತ್ರವಲ್ಲ, ಅವನ್ನು ನನ್ನ ಆಲಯದೊಳಗೆ ಬಂದು ನಡೆಸುತ್ತಿದ್ದಾರೆ!’ ಎಂದು ಹೇಳುತ್ತಾನೆ ಯೆಹೋವನು. ಆದುದರಿಂದ ಯೆಹೋವನು ವಚನ ಕೊಡುವುದು: ‘ಅವರು ನನ್ನ ಕೋಪಕ್ಕೆ ಗುರಿಯಾಗುವರು. ಅವರು ನಾಶವಾಗಿ ಹೋಗುವಾಗ ನಾನು ವಿಷಾದಪಡುವುದಿಲ್ಲ.’

ಯೆಹೋವನು ಯೆಹೆಜ್ಕೇಲನಿಗೆ ಈ ವಿಷಯಗಳನ್ನು ತೋರಿಸಿದ ಕೇವಲ ಮೂರು ವರ್ಷಗಳ ನಂತರ ಇಸ್ರಾಯೇಲ್ಯರು ಅರಸ ನೆಬೂಕದ್ನೆಚ್ಚರನ ವಿರುದ್ಧವಾಗಿ ದಂಗೆಯೇಳುತ್ತಾರೆ. ಆದುದರಿಂದ ಅವನು ಅವರ ವಿರುದ್ಧ ಯುದ್ಧಕ್ಕೆ ಹೋಗುತ್ತಾನೆ. ಒಂದೂವರೆ ವರ್ಷದ ಬಳಿಕ ಬಾಬೆಲಿನವರು ಯೆರೂಸಲೇಮಿನ ಗೋಡೆಗಳನ್ನು ಒಡೆದುಹಾಕಿ, ಪಟ್ಟಣವನ್ನು ಸುಟ್ಟು ಧ್ವಂಸಮಾಡುತ್ತಾರೆ. ಅನೇಕ ಜನರು ಕೊಲ್ಲಲ್ಪಡುತ್ತಾರೆ. ಇನ್ನೂ ಅನೇಕರು ಸೆರೆವಾಸಿಗಳಾಗಿ ಬಾಬೆಲಿಗೆ ಒಯ್ಯಲ್ಪಡುತ್ತಾರೆ.

ಇಸ್ರಾಯೇಲ್ಯರಿಗೆ ಇಂಥ ಭೀಕರ ನಾಶನವು ಸಂಭವಿಸುವಂತೆ ಯೆಹೋವನು ಅನುಮತಿಸಿದ್ದೇಕೆ? ಏಕೆಂದರೆ ಅವರು ಯೆಹೋವನಿಗೆ ಕಿವಿಗೊಡದೆ ಹೋದರು. ಮತ್ತು ಆತನ ನಿಯಮಗಳಿಗೆ ವಿಧೇಯರಾಗಲಿಲ್ಲ. ದೇವರು ಹೇಳುವುದನ್ನೇ ಯಾವಾಗಲೂ ಮಾಡುವುದು ಎಷ್ಟು ಪ್ರಾಮುಖ್ಯವೆಂದು ಇದು ತೋರಿಸುತ್ತದೆ.

ಮೊದಮೊದಲು ಇಸ್ರಾಯೇಲ್‌ ದೇಶದಲ್ಲಿ ಸ್ವಲ್ಪ ಜನರು ಉಳಿಯುವಂತೆ ನೆಬೂಕದ್ನೆಚ್ಚರನು ಬಿಡುತ್ತಾನೆ. ಮಾತ್ರವಲ್ಲ, ಈ ಜನರ ಮೇಲೆ ಗೆದಲ್ಯನೆಂಬ ಯೆಹೂದ್ಯನೊಬ್ಬನನ್ನು ಅಧಿಪತಿಯನ್ನಾಗಿ ನೆಮಿಸುತ್ತಾನೆ. ಆದರೆ ಕೆಲವು ಇಸ್ರಾಯೇಲ್ಯರು ಗೆದಲ್ಯನನ್ನು ಕೊಲ್ಲುತ್ತಾರೆ. ಈ ದುಷ್ಕೃತ್ಯದ ಕಾರಣ ಬಾಬೆಲಿನವರು ಬಂದು ಅವರೆಲ್ಲರನ್ನು ನಾಶಮಾಡುವರೆಂದು ಈಗ ಜನರು ಹೆದರುತ್ತಾರೆ. ಆದುದರಿಂದ ಅವರು ಯೆರೆಮೀಯನನ್ನು ತಮ್ಮೊಂದಿಗೆ ಬರುವಂತೆ ಒತ್ತಾಯಿಸುತ್ತಾರೆ ಮತ್ತು ಐಗುಪ್ತಕ್ಕೆ ಓಡಿಹೋಗುತ್ತಾರೆ.

ಇದರಿಂದ ಇಸ್ರಾಯೇಲ್‌ ದೇಶವು ನಿರ್ಜನವಾಗುತ್ತದೆ. ದೇಶದಲ್ಲಿ 70 ವರ್ಷಗಳ ತನಕ ಯಾರೂ ಜೀವಿಸುವುದಿಲ್ಲ, ಪೂರ್ಣವಾಗಿ ಬರಿದಾಗುತ್ತದೆ. ಆದರೆ 70 ವರ್ಷಗಳ ಅನಂತರ ತನ್ನ ಜನರನ್ನು ಅವರ ದೇಶಕ್ಕೆ ಹಿಂದೆ ಕರೆತರುವೆನೆಂದು ಯೆಹೋವನು ವಾಗ್ದಾನಿಸುತ್ತಾನೆ. ಈ ಮಧ್ಯೆ, ದೇವಜನರು ಎಲ್ಲಿಗೆ ಒಯ್ಯಲ್ಪಟ್ಟರೋ ಆ ಬಾಬೆಲ್‌ ದೇಶದಲ್ಲಿ ಅವರಿಗೇನು ಸಂಭವಿಸುತ್ತಾ ಇದೆ? ನಾವು ನೋಡೋಣ.