ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 71

ದೇವರು ವಾಗ್ದಾನಿಸುವ ಪರದೈಸ್‌

ದೇವರು ವಾಗ್ದಾನಿಸುವ ಪರದೈಸ್‌

ದೇವರು ತನ್ನ ಪ್ರವಾದಿ ಯೆಶಾಯನಿಗೆ ತೋರಿಸಿದ್ದಿರಬಹುದಾದ ಪರದೈಸ್‌ ಚಿತ್ರವಿದು. ಯೋನನು ಬದುಕಿದ್ದ ಸ್ವಲ್ಪ ಕಾಲದ ನಂತರವೇ ಈ ಯೆಶಾಯನು ಜೀವಿಸಿದ್ದನು.

ಪರದೈಸ್‌ನ ಅರ್ಥ “ತೋಟ” ಅಥವಾ “ಉದ್ಯಾನವನ.” ಇದು, ಈ ಪುಸ್ತಕದಲ್ಲಿ ಈ ಮೊದಲೇ ನೀವು ನೋಡಿದ ಒಂದು ಚಿತ್ರವನ್ನು ನೆನಪಿಸುತ್ತದೋ? ಇದು ಆದಾಮಹವ್ವರಿಗಾಗಿ ಯೆಹೋವ ದೇವರು ಮಾಡಿದ ಆ ಸುಂದರವಾದ ತೋಟದಂತೆಯೇ ಇದೆ ಅಲ್ಲವೇ? ಆದರೆ ಇಡೀ ಭೂಮಿಯು ಹೀಗೆ ಎಂದಾದರೂ ಒಂದು ಪರದೈಸ್‌ ಆಗಲಿದೆಯೇ?

ದೇವಜನರು ಜೀವಿಸಲಿರುವ ಒಂದು ಹೊಸ ಪರದೈಸ್‌ನ ಕುರಿತು ಬರೆಯುವಂತೆ ಯೆಹೋವ ದೇವರು ತನ್ನ ಪ್ರವಾದಿ ಯೆಶಾಯನಿಗೆ ತಿಳಿಸಿದನು. ಅವನಂದದ್ದು: ‘ತೋಳಗಳೂ ಕುರಿಗಳೂ ಒಟ್ಟಿಗೆ ಶಾಂತಿಯಿಂದ ಜೀವಿಸುವುವು. ಕರುಗಳೂ ಸಿಂಹದ ಮರಿಗಳೂ ಒಟ್ಟಿಗೆ ಮೇಯುವುವು. ಇವುಗಳನ್ನು ಚಿಕ್ಕ ಮಕ್ಕಳು ನೋಡಿಕೊಳ್ಳುವರು. ವಿಷಕಾರಿ ಹಾವಿನ ಸಮೀಪದಲ್ಲಿ ಮಗು ಆಡಿದರೂ ಅದಕ್ಕೆ ಕೇಡಾಗದು.’

‘ಹೀಗೆಲ್ಲ ಆಗುವುದು ಸಾಧ್ಯವೇ ಇಲ್ಲ’ ಎಂದು ಅನೇಕರು ಹೇಳಬಹುದು. ‘ಭೂಮಿಯಲ್ಲಿ ಕಷ್ಟತೊಂದರೆ ಯಾವಾಗಲೂ ಇದ್ದೇ ಇದೆ. ಮುಂದೆ ಸಹ ಇರುತ್ತದೆ’ ಎಂದು ಅವರು ಹೇಳಬಹುದು. ಆದರೆ ಇದರ ಕುರಿತು ಸ್ವಲ್ಪ ಯೋಚಿಸಿ, ದೇವರು ಆದಾಮಹವ್ವರಿಗೆ ಯಾವ ವಿಧದ ಬೀಡನ್ನು ಕೊಟ್ಟನು?

ದೇವರು ಆದಾಮಹವ್ವರನ್ನು ಒಂದು ಪರದೈಸ್‌ನಲ್ಲಿ ಇಟ್ಟನು. ದೇವರಿಗೆ ಅವಿಧೇಯರಾದ ಕಾರಣದಿಂದಾಗಿ ಮಾತ್ರ ಅವರು ತಮ್ಮ ಸುಂದರವಾದ ಮನೆಯನ್ನು ಕಳೆದುಕೊಂಡರು. ಆಮೇಲೆ ವೃದ್ಧರಾಗಿ ಸತ್ತರು. ಆದಾಮಹವ್ವರು ಕಳೆದುಕೊಂಡ ವಿಷಯಗಳನ್ನೇ ತನ್ನನ್ನು ಪ್ರೀತಿಸುವ ಜನರಿಗೂ ಕೊಡುತ್ತೇನೆಂದು ದೇವರು ವಾಗ್ದಾನಿಸಿದ್ದಾನೆ.

ಬರಲಿರುವ ಆ ಹೊಸ ಪರದೈಸ್‌ನಲ್ಲಿ ಯಾವುದು ಸಹ ಕೇಡು ಇಲ್ಲವೆ ಹಾನಿ ಮಾಡುವುದಿಲ್ಲ. ಪರಿಪೂರ್ಣ ಶಾಂತಿ ನೆಲೆಸಿರುವುದು. ಜನರೆಲ್ಲರೂ ಆರೋಗ್ಯವಂತರೂ ಸಂತೋಷಿತರೂ ಆಗಿರುವರು. ದೇವರು ಆರಂಭದಲ್ಲಿ ಬಯಸಿದಂತೆಯೇ ಎಲ್ಲವೂ ಇರುವುದು. ಆದರೆ ದೇವರು ಇದನ್ನು ಹೇಗೆ ಮಾಡುವನೆಂದು ನಾವು ಮುಂದಕ್ಕೆ ಕಲಿಯುವೆವು.