ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 67

ಯೆಹೋಷಾಫಾಟನು ಯೆಹೋವನಲ್ಲಿ ಭರವಸೆಯಿಡುತ್ತಾನೆ

ಯೆಹೋಷಾಫಾಟನು ಯೆಹೋವನಲ್ಲಿ ಭರವಸೆಯಿಡುತ್ತಾನೆ

ಈ ಜನರು ಯಾರು? ಅವರೇನು ಮಾಡುತ್ತಿದ್ದಾರೆ? ನಿಮಗೆ ತಿಳಿದಿದೆಯೇ? ಅವರು ಯುದ್ಧಕ್ಕೆ ಹೋಗುತ್ತಿದ್ದಾರೆ. ಮುಂದೆ ಇರುವ ಜನರು ಹಾಡುತ್ತಿದ್ದಾರೆ. ಆದರೆ, ‘ಈ ಗಾಯಕರು ಹೋರಾಟಕ್ಕೆ ಹೋಗುವಾಗ ಕತ್ತಿ, ಈಟಿಗಳನ್ನು ಏಕೆ ತೆಗೆದುಕೊಂಡು ಹೋಗುತ್ತಿಲ್ಲ?’ ಎಂದು ನೀವು ಕೇಳಬಹುದು. ಏಕೆಂದು ನಾವೀಗ ನೋಡೋಣ.

ಯೆಹೋಷಾಫಾಟನು ಇಸ್ರಾಯೇಲಿನ ಎರಡು-ಕುಲಗಳ ರಾಜ್ಯದ ಅರಸನು. ಅವನು ಉತ್ತರದ ಹತ್ತು-ಕುಲಗಳ ರಾಜ್ಯದ ಅರಸನಾದ ಅಹಾಬ ಮತ್ತು ಈಜೆಬೆಲರು ಜೀವಿಸಿದ್ದ ಅದೇ ಸಮಯದಲ್ಲಿ ಜೀವಿಸುತ್ತಾನೆ. ಆದರೆ ಯೆಹೋಷಾಫಾಟನು ತುಂಬಾ ಒಳ್ಳೆಯ ಅರಸ. ಅವನ ತಂದೆಯಾದ ಆಸನು ಸಹ ಒಳ್ಳೆಯ ಅರಸನಾಗಿದ್ದನು. ಆದುದರಿಂದ ಅನೇಕ ವರ್ಷಗಳ ತನಕ ದಕ್ಷಿಣದ ಎರಡು-ಕುಲಗಳ ರಾಜ್ಯದ ಜನರು ನೆಮ್ಮದಿಯ ಜೀವನದಲ್ಲಿ ಆನಂದಿಸುತ್ತಾರೆ.

ಆದರೆ ಈಗ ಸಂಭವಿಸುವ ಒಂದು ಸಂಗತಿಯು ಜನರಲ್ಲಿ ಹೆದರಿಕೆಯನ್ನು ಉಂಟುಮಾಡುತ್ತದೆ. ಸಂದೇಶವಾಹಕರು ಯೆಹೋಷಾಫಾಟನಿಗೆ ವರದಿಸುವುದು: ‘ಮೋವಾಬ್‌, ಅಮ್ಮೋನ್‌ ಮತ್ತು ಸೇಯೀರ್‌ ಪರ್ವತ ದೇಶಗಳಿಂದ ಒಂದು ದೊಡ್ಡ ಸೈನ್ಯವು ನಿಮ್ಮನ್ನು ಆಕ್ರಮಿಸಲು ಬರುತ್ತಿದೆ.’ ಆದುದರಿಂದ, ಯೆಹೋವನ ಸಹಾಯವನ್ನು ಕೋರುವುದಕ್ಕಾಗಿ ಅನೇಕ ಇಸ್ರಾಯೇಲ್ಯರು ಯೆರೂಸಲೇಮಿನಲ್ಲಿ ಒಟ್ಟುಸೇರುತ್ತಾರೆ. ಅವರು ಆಲಯಕ್ಕೆ ಹೋದಾಗ ಯೆಹೋಷಾಫಾಟನು ಹೀಗೆಂದು ಪ್ರಾರ್ಥಿಸುತ್ತಾನೆ: ‘ಯೆಹೋವನೇ, ನಮ್ಮ ದೇವರೇ, ನಮಗೆ ಏನು ಮಾಡಬೇಕೆಂದು ತಿಳಿಯದು. ಈ ದೊಡ್ಡ ಸೈನ್ಯದ ಎದುರು ನಾವು ನಿಸ್ಸಹಾಯಕರಾಗಿದ್ದೇವೆ. ಸಹಾಯಕ್ಕಾಗಿ ನಾವು ನಿನ್ನನ್ನೇ ನೋಡುತ್ತೇವೆ.’

ಆ ಪ್ರಾರ್ಥನೆಯನ್ನು ಯೆಹೋವನು ಆಲಿಸುತ್ತಾನೆ. ಮತ್ತು ತನ್ನ ಸೇವಕರಲ್ಲಿ ಒಬ್ಬನು ಜನರಿಗೆ ಹೀಗನ್ನುವಂತೆ ಹೇಳುತ್ತಾನೆ: ‘ಯುದ್ಧವು ನಿಮ್ಮದಲ್ಲ, ದೇವರದೇ. ನಿಮಗೆ ಯುದ್ಧಮಾಡಲಿಕ್ಕೆ ಇರುವುದಿಲ್ಲ. ಸುಮ್ಮನೆ ನಿಂತುಕೊಂಡು ಯೆಹೋವನು ನಿಮ್ಮನ್ನು ರಕ್ಷಿಸುವ ವಿಧವನ್ನು ನೋಡಿರಿ.’

ಆದುದರಿಂದ, ಮರುದಿನ ಯೆಹೋಷಾಫಾಟನು ಜನರಿಗೆ, ‘ಯೆಹೋವನಲ್ಲಿ ಭರವಸೆಯಿಡಿರಿ!’ ಎಂದು ಹೇಳುತ್ತಾನೆ. ಅನಂತರ ಅವನು ತನ್ನ ಸೈನಿಕರ ಮುಂದುಗಡೆ ಗಾಯಕರನ್ನು ಕಳುಹಿಸುತ್ತಾನೆ. ಅವರು ಮುನ್ನಡೆಯುವಾಗ ಯೆಹೋವನಿಗೆ ಸ್ತುತಿಗಳನ್ನು ಹಾಡುತ್ತಾರೆ. ಅವರು ಯುದ್ಧರಂಗದ ಹತ್ತಿರಕ್ಕೆ ಬರುವಾಗ ಏನು ಸಂಭವಿಸುತ್ತದೆಂದು ನಿಮಗೆ ಗೊತ್ತೋ? ಶತ್ರು ಸೈನಿಕರು ತಮ್ಮೊಳಗೆ ತಾವೇ ಹೋರಾಡುವಂತೆ ಯೆಹೋವನು ಮಾಡುತ್ತಾನೆ. ಇಸ್ರಾಯೇಲ್ಯರು ಅಲ್ಲಿಗೆ ಬಂದಾಗ ಎಲ್ಲ ಶತ್ರು ಸೈನಿಕರು ಸತ್ತು ಬಿದ್ದಿರುತ್ತಾರೆ!

ಯೆಹೋಷಾಫಾಟನು ಯೆಹೋವನಲ್ಲಿ ಭರವಸೆಯಿಟ್ಟದ್ದು ವಿವೇಕಯುತವಲ್ಲವೋ? ನಾವು ಸಹ ಆತನಲ್ಲಿ ಭರವಸೆಯಿಡುವುದಾದರೆ ವಿವೇಕಿಗಳಾಗಿರುವೆವು.