ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 73

ಇಸ್ರಾಯೇಲಿನ ಕೊನೆಯ ಒಳ್ಳೆಯ ಅರಸ

ಇಸ್ರಾಯೇಲಿನ ಕೊನೆಯ ಒಳ್ಳೆಯ ಅರಸ

ಯೋಷೀಯನು ಇಸ್ರಾಯೇಲಿನ ದಕ್ಷಿಣದ ಎರಡು ಕುಲಗಳ ಅರಸನಾದಾಗ ಕೇವಲ ಎಂಟು ವರ್ಷದವನು. ಅರಸನಾಗುವುದಕ್ಕೆ ಇದು ತೀರಾ ಚಿಕ್ಕ ಪ್ರಾಯ. ಆದುದರಿಂದ ಮೊದಲು ಕೆಲವು ಹಿರಿಯ ವ್ಯಕ್ತಿಗಳು ರಾಜ್ಯವಾಳಲು ಅವನಿಗೆ ಸಹಾಯಮಾಡುತ್ತಾರೆ.

ಯೋಷೀಯನು ರಾಜನಾಗಿ ಏಳು ವರ್ಷಗಳಾದಾಗ ಅವನು ಯೆಹೋವನನ್ನು ಆಶ್ರಯಿಸಲಾರಂಭಿಸುತ್ತಾನೆ. ದಾವೀದ, ಯೆಹೋಷಾಫಾಟ್‌, ಹಿಜ್ಕೀಯರಂತಹ ಒಳ್ಳೇ ಅರಸರ ಮಾದರಿಯನ್ನು ಅವನು ಅನುಸರಿಸುತ್ತಾನೆ. ಅನಂತರ ಅವನಿನ್ನೂ ಹದಿವಯಸ್ಸಿನಲ್ಲಿರುವಾಗಲೇ ಒಂದು ಧೀರ ಕೃತ್ಯವನ್ನು ಮಾಡುತ್ತಾನೆ.

ಬಹು ಸಮಯದಿಂದ ಹೆಚ್ಚಿನ ಇಸ್ರಾಯೇಲ್ಯರು ತುಂಬಾ ಕೆಟ್ಟವರಾಗಿದ್ದಾರೆ. ಸುಳ್ಳು ದೇವರುಗಳನ್ನು ಪೂಜಿಸುತ್ತಿದ್ದಾರೆ. ವಿಗ್ರಹಗಳಿಗೆ ಅಡ್ಡಬೀಳುತ್ತಿದ್ದಾರೆ. ಆದುದರಿಂದ ಯೋಷೀಯನು ತನ್ನ ಜನರೊಂದಿಗೆ ಹೋಗಿ ದೇಶದಿಂದ ಸುಳ್ಳು ಆರಾಧನೆಯನ್ನು ತೆಗೆದುಹಾಕಲು ತೊಡಗುತ್ತಾನೆ. ಇದೇನು ಒಂದು ಚಿಕ್ಕ ಕೆಲಸವಲ್ಲ. ಯಾಕೆಂದರೆ ಹೆಚ್ಚಿನ ಜನರು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದಾರೆ. ಯೋಷೀಯನೂ ಅವನ ಜನರೂ ಇಲ್ಲಿ ವಿಗ್ರಹಗಳನ್ನು ಒಡೆದುಹಾಕುತ್ತಿರುವುದನ್ನು ನೀವು ನೋಡಬಹುದು.

ತದನಂತರ ಯೋಷೀಯನು ಯೆಹೋವನ ಆಲಯದ ರಿಪೇರಿ ಕೆಲಸವನ್ನು ನೋಡಿಕೊಳ್ಳಲು ಮೂವರು ಪುರುಷರನ್ನು ನೇಮಿಸುತ್ತಾನೆ. ಈ ಕೆಲಸ ಮಾಡಲಿಕ್ಕಾಗಿ ಜನರಿಂದ ಒಟ್ಟುಗೂಡಿಸಿದ ಹಣವನ್ನು ಇವರಿಗೆ ಕೊಡಲಾಗುತ್ತದೆ. ಅವರು ಆಲಯದ ಕೆಲಸ ಮಾಡುತ್ತಿರುವಾಗ, ಮಹಾಯಾಜಕ ಹಿಲ್ಕೀಯನು ಅಲ್ಲಿ ಒಂದು ಅತಿ ಪ್ರಾಮುಖ್ಯವಾದ ವಸ್ತುವನ್ನು ಕಂಡುಕೊಳ್ಳುತ್ತಾನೆ. ಯೆಹೋವನು ಬಹಳ ಕಾಲದ ಹಿಂದೆ ಮೋಶೆಯ ಮೂಲಕ ತನ್ನ ನಿಯಮಗಳನ್ನು ಬರೆಸಿದ ನಿಬಂಧನ ಗ್ರಂಥವೇ ಅದಾಗಿದೆ. ಅನೇಕ ವರ್ಷಗಳಿಂದ ಅದು ಕಳೆದುಹೋಗಿತ್ತು.

ಆ ಗ್ರಂಥವನ್ನು ಯೋಷೀಯನ ಬಳಿಗೆ ತರಲಾಗುತ್ತದೆ. ಅದನ್ನು ಓದುವಂತೆ ಅವನು ಹೇಳುತ್ತಾನೆ. ಅವನದನ್ನು ಆಲಿಸುವಾಗ, ಜನರು ಯೆಹೋವನ ನಿಯಮವನ್ನು ಪಾಲಿಸುತ್ತಿಲ್ಲವೆಂದು ಅವನಿಗೆ ಸ್ಪಷ್ಟವಾಗುತ್ತದೆ. ಅದರ ಕುರಿತು ಅವನಿಗೆ ತುಂಬಾ ದುಃಖವಾಗುತ್ತದೆ. ಆದುದರಿಂದ ನೀವಿಲ್ಲಿ ನೋಡುವ ಪ್ರಕಾರ ಅವನು ತನ್ನ ಬಟ್ಟೆಗಳನ್ನು ಹರಿದುಕೊಳ್ಳುತ್ತಾನೆ. ಅವನನ್ನುವುದು: ‘ಈ ಗ್ರಂಥದಲ್ಲಿ ಬರೆದಿರುವ ನಿಯಮಗಳನ್ನು ನಮ್ಮ ಪಿತೃಗಳು ಅನುಸರಿಸದೆ ಹೋದದರಿಂದ ಯೆಹೋವನು ನಮ್ಮ ಮೇಲೆ ಕೋಪಗೊಂಡಿದ್ದಾನೆ.’

ಯೆಹೋವನು ತಮಗೆ ಏನು ಮಾಡಲಿದ್ದಾನೆಂದು ತಿಳಿದುಕೊಳ್ಳುವಂತೆ ಯೋಷೀಯನು ಮಹಾಯಾಜಕ ಹಿಲ್ಕೀಯನಿಗೆ ಅಪ್ಪಣೆಕೊಡುತ್ತಾನೆ. ಹಿಲ್ಕೀಯನು ಪ್ರವಾದಿನಿಯಾದ ಹುಲ್ದ ಎಂಬ ಸ್ತ್ರೀಯ ಬಳಿಗೆ ಹೋಗಿ ಅವಳನ್ನು ವಿಚಾರಿಸುತ್ತಾನೆ. ಅವಳು ಅವನ ಮೂಲಕ ಯೆಹೋವನ ಈ ಸಂದೇಶವನ್ನು ಯೋಷೀಯನಿಗೆ ಕಳುಹಿಸುತ್ತಾಳೆ: ‘ಅವರು ಸುಳ್ಳು ದೇವರುಗಳನ್ನು ಆರಾಧಿಸಿ ತಮ್ಮ ದುಷ್ಕೃತ್ಯಗಳಿಂದ ದೇಶವನ್ನು ತುಂಬಿಸಿರುವುದರಿಂದ ಯೆರೂಸಲೇಮ್‌ ಮತ್ತು ಅದರ ಎಲ್ಲಾ ಜನರು ಶಿಕ್ಷೆಗೆ ಗುರಿಯಾಗುವರು. ಆದರೆ ಯೋಷೀಯನೇ, ನೀನು ಯಾವುದು ಒಳ್ಳೆಯದೋ ಅದನ್ನು ಮಾಡಿದ ಕಾರಣ ಈ ಶಿಕ್ಷೆಯು ನಿನ್ನ ಮರಣದ ತನಕ ಬಾರದೆ ಇರುವುದು.’