ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 91

ಯೇಸು ಪರ್ವತದ ಮೇಲೆ ಕಲಿಸುತ್ತಾನೆ

ಯೇಸು ಪರ್ವತದ ಮೇಲೆ ಕಲಿಸುತ್ತಾನೆ

ಯೇಸು ಇಲ್ಲಿ ಕೂತಿರುವುದನ್ನು ನೋಡಿರಿ. ಗಲಿಲಾಯದ ಒಂದು ಪರ್ವತದ ಮೇಲೆ ಅವನು ಈ ಜನರಿಗೆ ಕಲಿಸುತ್ತಿದ್ದಾನೆ. ಅವನ ಪಕ್ಕದಲ್ಲಿ ಕೂತಿರುವವರು ಅವನ ಶಿಷ್ಯರು. ಅವರಲ್ಲಿ 12 ಮಂದಿಯನ್ನು ಅವನು ಅಪೊಸ್ತಲರನ್ನಾಗಿ ಆರಿಸಿಕೊಂಡಿದ್ದಾನೆ. ಅಪೊಸ್ತಲರು ಯೇಸುವಿನ ವಿಶೇಷ ಶಿಷ್ಯರಾಗಿದ್ದಾರೆ. ಅವರ ಹೆಸರುಗಳು ನಿಮಗೆ ತಿಳಿದಿವೆಯೇ?

ಅವರು ಯಾರ್ಯಾರೆಂದರೆ ಸೀಮೋನ್‌ ಪೇತ್ರ ಮತ್ತು ಅವನ ತಮ್ಮ ಅಂದ್ರೆಯ. ಯಾಕೋಬ ಮತ್ತು ಯೋಹಾನ, ಅವರು ಸಹ ಅಣ್ಣತಮ್ಮಂದಿರು. ಇನ್ನೊಬ್ಬ ಅಪೊಸ್ತಲನ ಹೆಸರು ಸಹ ಯಾಕೋಬ ಎಂದಾಗಿದೆ, ಮತ್ತು ಇನ್ನೊಬ್ಬನ ಹೆಸರು ಸಹ ಸೀಮೋನ. ಯೂದ ಎಂಬ ಹೆಸರಿನ ಇಬ್ಬರು ಅಪೊಸ್ತಲರಿದ್ದಾರೆ. ಅವರಲ್ಲಿ ಒಬ್ಬನು ಇಸ್ಕರಿಯೋತ ಯೂದ ಮತ್ತು ಇನ್ನೊಬ್ಬನು ತದ್ದಾಯ ಎಂದೂ ಕರೆಯಲ್ಪಡುವ ಯೂದ. ಆಮೇಲೆ ಫಿಲಿಪ್ಪ ಮತ್ತು ನತಾನಯೇಲ (ಬಾರ್ತೊಲೊಮಾಯನೆಂದೂ ಕರೆಯಲ್ಪಡುತ್ತಾನೆ), ಮತ್ತಾಯ ಮತ್ತು ತೋಮ ಆಗಿದ್ದಾರೆ.

ಸಮಾರ್ಯದಿಂದ ಹಿಂದೆ ಬಂದ ಬಳಿಕ ಯೇಸು ಮೊದಲ ಬಾರಿ, ‘ಪರಲೋಕ ರಾಜ್ಯವು ಸಮೀಪವಾಗಿದೆ’ ಎಂದು ಹೇಳಿ ಸಾರಲು ಪ್ರಾರಂಭಿಸುತ್ತಾನೆ. ಆ ರಾಜ್ಯ ಏನಾಗಿದೆಯೆಂದು ನಿಮಗೆ ತಿಳಿದಿದೆಯೇ? ಅದು ದೇವರ ಒಂದು ನಿಜ ಸರಕಾರವಾಗಿದೆ. ಯೇಸು ಅದರ ಅರಸನಾಗಿದ್ದಾನೆ. ಅವನು ಪರಲೋಕದಿಂದ ಆಳುವನು ಮತ್ತು ಲೋಕಕ್ಕೆ ಶಾಂತಿಯನ್ನು ತರುವನು. ದೇವರ ರಾಜ್ಯದ ಮೂಲಕ ಇಡೀ ಭೂಮಿಯು ಒಂದು ಸುಂದರ ಪರದೈಸವಾಗುವುದು.

ಇಲ್ಲಿ ಯೇಸು ದೇವರ ರಾಜ್ಯದ ಕುರಿತು ಜನರಿಗೆ ಕಲಿಸುತ್ತಿದ್ದಾನೆ. ‘ನೀವು ಹೀಗೆ ಪ್ರಾರ್ಥನೆ ಮಾಡತಕ್ಕದ್ದು, ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ಹೆಸರು ಪವಿತ್ರವಾಗಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ’ ಎಂದು ಅವರಿಗೆ ವಿವರಿಸುತ್ತಾನೆ. ಅನೇಕರು ಇದನ್ನು ‘ಕರ್ತನ ಪ್ರಾರ್ಥನೆ’ ಎಂದು ಕರೆಯುತ್ತಾರೆ. ಇತರರು ಅದನ್ನು ‘ಪರಲೋಕದಲ್ಲಿರುವ ನಮ್ಮ ತಂದೆ’ ಪ್ರಾರ್ಥನೆ ಎಂದು ಕರೆಯುತ್ತಾರೆ. ನೀವು ಇಡೀ ಪ್ರಾರ್ಥನೆಯನ್ನು ಹೇಳಬಲ್ಲಿರೋ?

ಜನರು ಒಬ್ಬರನ್ನೊಬ್ಬರು ಹೇಗೆ ಉಪಚರಿಸಬೇಕೆಂದು ಸಹ ಯೇಸು ಅವರಿಗೆ ಕಲಿಸುತ್ತಿದ್ದಾನೆ. ‘ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ’ ಎನ್ನುತ್ತಾನೆ ಅವನು. ಇತರರು ನಿಮ್ಮನ್ನು ದಯೆಯಿಂದ ಸತ್ಕರಿಸುವಾಗ ನೀವು ಅದನ್ನು ಮೆಚ್ಚುವುದಿಲ್ಲವೇ? ಅದೇ ರೀತಿ ನಾವು ಸಹ ಇತರರನ್ನು ದಯೆಯಿಂದ ಉಪಚರಿಸಬೇಕೆಂದು ಯೇಸು ಹೇಳುತ್ತಿದ್ದಾನೆ. ಭೂಪರದೈಸಿನಲ್ಲಿ ಎಲ್ಲರೂ ಒಬ್ಬರನ್ನೊಬ್ಬರು ದಯೆಯಿಂದ ಸತ್ಕರಿಸುವಾಗ ಅದು ತುಂಬಾ ಚೆನ್ನಾಗಿರುತ್ತದಲ್ಲವೆ?

ಮತ್ತಾಯ 5 ರಿಂದ 7 ಅಧ್ಯಾಯಗಳು; 10:1-4.