ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 90

ಬಾವಿಯ ಬಳಿ ಸ್ತ್ರೀಯೊಂದಿಗೆ

ಬಾವಿಯ ಬಳಿ ಸ್ತ್ರೀಯೊಂದಿಗೆ

ಯೇಸು ಸಮಾರ್ಯದ ಒಂದು ಬಾವಿಯ ಬಳಿ ಸ್ವಲ್ಪ ವಿಶ್ರಮಿಸುವುದಕ್ಕಾಗಿ ಕೂತುಕೊಳ್ಳುತ್ತಾನೆ. ಅವನ ಶಿಷ್ಯರು ಊಟಕ್ಕೆ ಏನಾದರೂ ಕೊಂಡುತರಲು ಊರೊಳಗೆ ಹೋಗಿದ್ದಾರೆ. ಆಗ ಈ ಸ್ತ್ರೀ ನೀರು ಸೇದಲು ಅಲ್ಲಿಗೆ ಬರುತ್ತಾಳೆ. ಯೇಸು ಅವಳೊಂದಿಗೆ ಮಾತಾಡುತ್ತಾ, ‘ಸ್ವಲ್ಪ ನೀರು ಕುಡಿಯುವುದಕ್ಕೆ ಕೊಡಮ್ಮ’ ಎಂದು ಕೇಳುತ್ತಾನೆ.

ಅದನ್ನು ಕೇಳಿ ಈ ಸ್ತ್ರೀಗೆ ಆಶ್ಚರ್ಯವಾಗುತ್ತದೆ. ಯಾಕೆಂದು ನಿಮಗೆ ಗೊತ್ತೋ? ಯಾಕೆಂದರೆ ಯೇಸು ಒಬ್ಬ ಯೆಹೂದ್ಯನು. ಆಕೆ ಸಮಾರ್ಯದವಳು. ಹೆಚ್ಚಿನ ಯೆಹೂದ್ಯರಿಗೆ ಸಮಾರ್ಯದವರನ್ನು ಕಂಡರೆ ಆಗುತ್ತಿರಲಿಲ್ಲ. ಅವರೊಂದಿಗೆ ಯೆಹೂದ್ಯರು ಮಾತಾಡುತ್ತಲೂ ಇರಲಿಲ್ಲ! ಆದರೆ ಯೇಸು ಎಲ್ಲಾ ವರ್ಗದ ಜನರನ್ನು ಪ್ರೀತಿಸುತ್ತಾನೆ. ಹಾಗಾಗಿ ಅವನು ‘ನೀರು ಕೊಡು ಎಂದು ನಿನ್ನನ್ನು ಕೇಳಿದವನು ಯಾರೆಂಬದು ನಿನಗೆ ತಿಳಿದಿದ್ದರೆ ನೀನು ಅವನನ್ನು ಬೇಡಿಕೊಳ್ಳುತ್ತಿದ್ದಿ. ಅವನು ನಿನಗೆ ಜೀವದಾಯಕ ನೀರನ್ನು ಕೊಡುತ್ತಿದ್ದನು’ ಎಂದು ಹೇಳುತ್ತಾನೆ.

ಅದಕ್ಕೆ ಅವಳು, ‘ಅಯ್ಯಾ, ಬಾವಿ ಆಳವಾಗಿದೆ, ಸೇದುವುದಕ್ಕೆ ನಿನ್ನ ಬಳಿ ಒಂದು ಬಕೆಟ್ಟು ಕೂಡ ಇಲ್ಲ. ಹೀಗಿರುವಾಗ ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಸಿಗುತ್ತದೆ?’ ಎಂದು ಹೇಳುತ್ತಾಳೆ.

ಆಗ ಯೇಸು, ‘ಈ ಬಾವಿಯ ನೀರನ್ನು ಕುಡಿದರೆ ನಿನಗೆ ತಿರಿಗಿ ಬಾಯಾರಿಕೆಯಾಗುವದು. ಆದರೆ ನಾನು ಕೊಡುವ ನೀರು ನಿತ್ಯಜೀವವನ್ನು ಉಂಟುಮಾಡುವದು’ ಎಂದು ಉತ್ತರಿಸುತ್ತಾನೆ.

‘ಅಯ್ಯಾ, ನನಗೆ ಆ ನೀರನ್ನು ಕೊಡು! ಕೊಟ್ಟರೆ ನನಗೆಂದೂ ಬಾಯಾರಿಕೆಯಾಗಲಿಕ್ಕಿಲ್ಲ. ಇನ್ನು ಮುಂದೆ ನೀರು ಸೇದುವುದಕ್ಕೆ ಇಷ್ಟು ದೂರ ಬರಬೇಕಾದದ್ದೂ ಇಲ್ಲ’ ಎಂದು ಹೇಳುತ್ತಾಳೆ ಆ ಸ್ತ್ರೀ.

ಯೇಸು ನಿಜವಾದ ನೀರಿನ ಕುರಿತು ಮಾತಾಡುತ್ತಿದ್ದಾನೆಂದು ಆ ಸ್ತ್ರೀ ನೆನಸುತ್ತಾಳೆ. ಆದರೆ ಅವನು ಮಾತಾಡುತ್ತಿರುವುದು ದೇವರ ಮತ್ತು ಆತನ ರಾಜ್ಯದ ವಿಷಯವಾದ ಸತ್ಯದ ಕುರಿತು. ಈ ಸತ್ಯವು ಜೀವದಾಯಕ ನೀರಿನಂತಿದೆ. ಅದು ಒಬ್ಬನಿಗೆ ನಿತ್ಯಜೀವವನ್ನು ಕೊಡಬಲ್ಲದು.

ಈಗ ಯೇಸು ಸ್ತ್ರೀಗೆ, ‘ಹೋಗಿ ನಿನ್ನ ಗಂಡನನ್ನು ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳುತ್ತಾನೆ.

‘ನನಗೆ ಗಂಡನಿಲ್ಲ’ ಅನ್ನುತ್ತಾಳೆ ಆಕೆ.

‘ನೀನು ಹೇಳಿದ್ದು ಸರಿಯಾದ ಮಾತು. ನಿನಗೆ ಐದು ಮಂದಿ ಗಂಡಂದಿರಿದ್ದರು. ಈಗ ನಿನ್ನೊಂದಿಗಿರುವವನು ನಿನ್ನ ಗಂಡನಲ್ಲ’ ಅನ್ನುತ್ತಾನೆ ಯೇಸು.

ಇದನ್ನು ಕೇಳಿ ಆ ಸ್ತ್ರೀಗಂತೂ ಒಂದೇ ಆಶ್ಚರ್ಯ. ಯಾಕೆಂದರೆ ಅವನು ಅಂದದ್ದೆಲ್ಲಾ ಸತ್ಯವಾಗಿವೆ. ಯೇಸುವಿಗೆ ಈ ವಿಷಯಗಳೆಲ್ಲ ಹೇಗೆ ತಿಳಿಯಿತು? ಯೇಸು ದೇವರಿಂದ ಕಳುಹಿಸಲ್ಪಟ್ಟ ವಾಗ್ದತ್ತ ವ್ಯಕ್ತಿ. ಹಾಗಾಗಿ ದೇವರು ಅವನಿಗೆ ಈ ಮಾಹಿತಿಯನ್ನು ಕೊಡುತ್ತಾನೆ. ಅಷ್ಟರೊಳಗೆ ಯೇಸುವಿನ ಶಿಷ್ಯರು ಬಂದು ಆತನು ಒಬ್ಬ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡುತ್ತಿರುವುದನ್ನು ಕಂಡು ಆಶ್ಚರ್ಯಪಡುತ್ತಾರೆ.

ಇದೆಲ್ಲದರಿಂದ ನಾವೇನನ್ನು ಕಲಿಯುತ್ತೇವೆ? ಎಲ್ಲಾ ಜಾತಿಯ ಜನರಿಗೆ ಯೇಸು ದಯೆತೋರಿಸುತ್ತಾನೆಂದು ಅದು ತೋರಿಸುತ್ತದೆ. ನಾವು ಕೂಡ ಎಲ್ಲಾ ಜಾತಿಯ ಜನರಿಗೆ ದಯೆ ತೋರಿಸಬೇಕು. ಒಂದು ನಿರ್ದಿಷ್ಟ ಜಾತಿಯವರೆಂದ ಮಾತ್ರಕ್ಕೆ ಆ ಜನರು ಕೆಟ್ಟವರೆಂದು ನಾವು ಭಾವಿಸಬಾರದು. ನಿತ್ಯಜೀವಕ್ಕೆ ನಡಿಸುವ ಸತ್ಯವನ್ನು ಎಲ್ಲಾ ಜನರು ತಿಳಿಯುವಂತೆ ಯೇಸು ಬಯಸುತ್ತಾನೆ. ಅದೇ ರೀತಿ, ಜನರು ಸತ್ಯವನ್ನು ಕಲಿಯುವಂತೆ ಸಹಾಯಮಾಡುವ ಇಚ್ಛೆ ನಮ್ಮಲ್ಲೂ ಇರಬೇಕು.