ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 112

ದ್ವೀಪವೊಂದರಲ್ಲಿ ಹಡಗು ಒಡೆದುಹೋದದ್ದು

ದ್ವೀಪವೊಂದರಲ್ಲಿ ಹಡಗು ಒಡೆದುಹೋದದ್ದು

ನೋಡಿರಿ, ಹಡಗು ಆಪತ್ತಿಗೊಳಗಾಗಿದೆ! ಅದು ಚೂರು ಚೂರಾಗಿ ಒಡೆದುಹೋಗುತ್ತಲಿದೆ! ನೀರಿನೊಳಗೆ ಧುಮುಕಿರುವ ಜನರು ನಿಮಗೆ ಕಾಣಿಸುತ್ತಿದ್ದಾರೋ? ಕೆಲವರು ಈಗಾಗಲೆ ದಡ ಸೇರಿದ್ದಾರೆ. ಅಲ್ಲಿ ಬರುತ್ತಿರುವ ವ್ಯಕ್ತಿ ಪೌಲನೋ? ಹೌದು, ಅವನಿಗೆ ಏನಾಯಿತ್ತೆಂದು ನಾವು ನೋಡೋಣ.

ಎರಡು ವರ್ಷಗಳಿಂದ ಪೌಲನು ಕೈಸರೈಯದಲ್ಲಿ ಸೆರೆಯಾಳಾಗಿ ಇಡಲ್ಪಟ್ಟಿದ್ದಾನೆ ಎಂಬುದು ನಿಮಗೆ ನೆನಪಿರಬಹುದು. ಅನಂತರ ಅವನನ್ನು ಮತ್ತು ಬೇರೆ ಕೆಲವು ಬಂದಿಗಳನ್ನು ಒಂದು ಹಡಗಿನಲ್ಲಿ ಹತ್ತಿಸಿ ರೋಮ್‌ಗೆ ಕಳುಹಿಸುತ್ತಾರೆ. ಹಡಗು ಕ್ರೇತ ದ್ವೀಪದ ಸಮೀಪ ಹೋಗುತ್ತಿರುವಾಗ ಒಂದು ಭೀಕರ ಬಿರುಗಾಳಿ ಅವರನ್ನು ಹೊಡೆಯುತ್ತದೆ. ಗಾಳಿಯೆಷ್ಟು ಬಿರುಸಾಗಿ ಬೀಸುತ್ತದೆಂದರೆ ಜನರಿಗೆ ಹಡಗನ್ನು ನಡೆಸಲಾಗುವುದಿಲ್ಲ. ಹಗಲಲ್ಲಿ ಸೂರ್ಯನನ್ನಾಗಲಿ ರಾತ್ರಿಯಲ್ಲಿ ನಕ್ಷತ್ರಗಳನ್ನಾಗಲಿ ಅವರು ಕಾಣಶಕ್ತರಾಗುವುದಿಲ್ಲ. ಹೀಗೆ, ಅನೇಕ ದಿನಗಳು ಕಳೆಯುತ್ತವೆ. ಕೊನೆಗೆ ಹಡಗಿನಲ್ಲಿರುವವರು ತಾವು ಬದುಕಿ ಉಳಿಯುವೆವೆಂಬ ಆಶೆಯನ್ನೇ ಬಿಟ್ಟುಬಿಡುತ್ತಾರೆ.

ಆಗ ಪೌಲನು ಎದ್ದುನಿಂತು ಹೀಗನ್ನುತ್ತಾನೆ: ‘ಹಡಗು ನಷ್ಟವಾಗುವದೇ ಹೊರತು ನಿಮ್ಮಲ್ಲಿ ಒಬ್ಬರಿಗೂ ಪ್ರಾಣನಷ್ಟವಾಗುವುದಿಲ್ಲ. ಯಾಕೆಂದರೆ ಕಳೆದ ರಾತ್ರಿ ದೇವರ ದೂತನೊಬ್ಬನು ನನ್ನ ಬಳಿಗೆ ಬಂದು—“ಪೌಲನೇ, ಭಯಪಡಬೇಡ! ನೀನು ರೋಮ್‌ ಚಕ್ರವರ್ತಿಯಾದ ಕೈಸರನ ಮುಂದೆ ನಿಲ್ಲಬೇಕು. ಇದಲ್ಲದೆ ನಿನ್ನೊಂದಿಗೆ ಹಡಗಿನಲ್ಲಿ ಪ್ರಯಾಣಮಾಡುವವರೆಲ್ಲರನ್ನು ದೇವರು ರಕ್ಷಿಸುವನು” ಎಂದು ಹೇಳಿದನು.’

ಬಿರುಗಾಳಿ ಆರಂಭವಾಗಿ 14ನೆಯ ದಿನದ ಮಧ್ಯರಾತ್ರಿಯ ಸುಮಾರಿಗೆ ನೀರಿನಾಳವು ಕಡಿಮೆಯಾಗುತ್ತಿರುವುದನ್ನು ನಾವಿಕರು ಗಮನಿಸುತ್ತಾರೆ! ಕತ್ತಲೆಯಲ್ಲಿ ಹಡಗು ಬಂಡೆಗಳಿಗೆ ಅಪ್ಪಳಿಸಬಹುದೆಂದು ಭಯಪಟ್ಟ ಕಾರಣ ಅವರು ಲಂಗರಗಳನ್ನು ಇಳಿಯಬಿಡುತ್ತಾರೆ. ಮರುದಿನ ಅವರೊಂದು ಕೊಲ್ಲಿಯನ್ನು ಕಾಣುತ್ತಾರೆ. ಸೀದಾ ಅದರ ತೀರಕ್ಕೆ ತಮ್ಮ ಹಡಗನ್ನು ನಡಿಸುವಂತೆ ಪ್ರಯತ್ನಿಸಲು ಅವರು ನಿರ್ಧರಿಸುತ್ತಾರೆ.

ಆದರೆ ಅವರು ತೀರಕ್ಕೆ ಸಮೀಪಿಸುವಾಗ, ಹಡಗು ಒಂದು ಮರಳದಿಬ್ಬವನ್ನು ತಗಲಿ ಸಿಕ್ಕಿಕೊಳ್ಳುತ್ತದೆ. ತೆರೆಗಳು ಅದನ್ನು ಹೊಡೆಯಲು ತೊಡಗುತ್ತವೆ ಮತ್ತು ಹಡಗು ಚೂರು ಚೂರಾಗಿ ಒಡೆದುಹೋಗುತ್ತದೆ. ಆಗ ಸೇನಾಧಿಕಾರಿಯು, ‘ನಿಮ್ಮಲ್ಲಿ ಈಜು ಬಲ್ಲವರೆಲ್ಲರು ಮೊದಲಾಗಿ ಸಮುದ್ರಕ್ಕೆ ಧುಮುಕಿ ಈಜುತ್ತಾ ತೀರವನ್ನು ಸೇರಿರಿ. ಉಳಿದವರು ಅವರ ಹಿಂದೆ ಧುಮುಕಿ, ಆಸರೆಗಾಗಿ ಹಡಗಿನ ಕೆಲವು ತುಂಡುಗಳನ್ನು ಬಿಗಿಹಿಡಿದುಕೊಂಡು ಹೋಗಿರಿ’ ಎಂದು ಅಪ್ಪಣೆಕೊಡುತ್ತಾನೆ. ಅವರು ಹಾಗೆಯೇ ಮಾಡುತ್ತಾರೆ. ಈ ರೀತಿಯಲ್ಲಿ ಹಡಗಿನಲ್ಲಿದ್ದ ಎಲ್ಲಾ 276 ಮಂದಿ ಸಹ ದೇವದೂತನು ಹೇಳಿದಂತೆಯೇ ಸುರಕ್ಷಿತವಾಗಿ ದಡವನ್ನು ಸೇರುತ್ತಾರೆ.

ಆ ದ್ವೀಪದ ಹೆಸರು ಮೆಲೀತೆ. ದ್ವೀಪದ ಜನರು ಅತಿ ದಯಾಪರರು. ಅವರು ಹಡಗಿನಲ್ಲಿದ್ದವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹವಾಮಾನವು ಸುಧಾರಿಸಿದಾಗ, ಪೌಲನನ್ನು ಇನ್ನೊಂದು ಹಡಗಿನಲ್ಲಿ ಹತ್ತಿಸಿ ರೋಮ್‌ಗೆ ಕರೆದುಕೊಂಡು ಹೋಗುತ್ತಾರೆ.