ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 105

ಯೆರೂಸಲೇಮಿನಲ್ಲಿ ಕಾಯುವುದು

ಯೆರೂಸಲೇಮಿನಲ್ಲಿ ಕಾಯುವುದು

ಇಲ್ಲಿರುವ ಈ ಜನರು ಯೇಸುವಿನ ಹಿಂಬಾಲಕರಾಗಿದ್ದಾರೆ. ಅವರು ಅವನಿಗೆ ವಿಧೇಯರಾಗಿ ಯೆರೂಸಲೇಮಿನಲ್ಲೇ ಉಳಿದಿರುತ್ತಾರೆ. ಅಲ್ಲಿ ಅವರೆಲ್ಲರೂ ಒಂದೇ ಸ್ಥಳದಲ್ಲಿ ಒಟ್ಟುಗೂಡಿ ಕಾಯುತ್ತಿರುತ್ತಾರೆ. ಆಗ, ಒಂದು ದೊಡ್ಡ ಶಬ್ದವು ಅವರು ಕೂತಿದ್ದ ಇಡೀ ಮನೆಯಲ್ಲಿ ಕೇಳಿಸುತ್ತದೆ. ಅದು ರಭಸವಾಗಿ ಬೀಸುವ ಬಿರುಗಾಳಿಯ ಶಬ್ದದಂತಿದೆ. ಆಗ ಬೆಂಕಿಯ ನಾಲಿಗೆಗಳು ಪ್ರತಿಯೊಬ್ಬ ಶಿಷ್ಯನ ತಲೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಅದು ನಿಮಗೆ ಚಿತ್ರದಲ್ಲಿ ಕಾಣಿಸುತ್ತದೋ? ಇದರ ಅರ್ಥವೇನು?

ಅದು ಒಂದು ಅದ್ಭುತವಾಗಿದೆ! ಯೇಸು ಪುನಃ ಪರಲೋಕದಲ್ಲಿ ತನ್ನ ತಂದೆಯೊಂದಿಗಿದ್ದಾನೆ. ಅಲ್ಲಿಂದ ಅವನು ದೇವರ ಪವಿತ್ರಾತ್ಮವನ್ನು ತನ್ನ ಹಿಂಬಾಲಕರ ಮೇಲೆ ಸುರಿಸುತ್ತಿದ್ದಾನೆ. ಈ ಆತ್ಮವು ಅವರೇನು ಮಾಡುವಂತೆ ಪ್ರಚೋದಿಸುತ್ತದೆಂದು ನಿಮಗೆ ಗೊತ್ತಿದೆಯೇ? ಅವರೆಲ್ಲರೂ ವಿವಿಧ ಭಾಷೆಗಳಲ್ಲಿ ಮಾತಾಡುವಂತೆ ಮಾಡುತ್ತದೆ.

ಬಿರುಸಾದ ಗಾಳಿಯಂತೆ ಕೇಳಿಸಿದ ಸದ್ದಿಗೆ ಯೆರೂಸಲೇಮಿನಲ್ಲಿದ್ದ ಅನೇಕ ಜನರು, ಏನು ನಡಿಯುತ್ತಿದೆಯೆಂದು ನೋಡುವುದಕ್ಕಾಗಿ ಕೂಡಿಬರುತ್ತಾರೆ. ಇವರಲ್ಲಿ ಕೆಲವರು ಇಸ್ರಾಯೇಲ್ಯ ಹಬ್ಬವಾದ ಪಂಚಾಶತ್ತಮಕ್ಕಾಗಿ ಬೇರೆ ಬೇರೆ ದೇಶಗಳಿಂದ ಬಂದವರಾಗಿದ್ದಾರೆ. ಹೀಗೆ ಬಂದವರಿಗೆ ಎಂಥಾ ಆಶ್ಚರ್ಯ! ತಮ್ಮ ಸ್ವಂತ ಭಾಷೆಯಲ್ಲಿಯೇ ದೇವರ ಮಹತ್ತುಗಳ ಕುರಿತು ಯೇಸುವಿನ ಶಿಷ್ಯರು ಮಾತಾಡುವುದನ್ನು ಅವರು ಕೇಳುತ್ತಾರೆ.

‘ಈ ಜನರೆಲ್ಲರೂ ಗಲಿಲಾಯದವರಲ್ಲವೇ ಹೀಗಿರಲಾಗಿ ಇವರು ನಮ್ಮ ಭಾಷೆಗಳಲ್ಲಿ ಮಾತಾಡುವುದು ಹೇಗೆ?’ ಎಂದು ಅವರು ಒಬ್ಬರಿಗೊಬ್ಬರು ಕೇಳುತ್ತಾರೆ.

ಪೇತ್ರನು ಈಗ ಎದ್ದು ನಿಂತು ಅವರಿಗೆ ವಿವರಿಸಲಾರಂಭಿಸುತ್ತಾನೆ. ಅವನು ಗಟ್ಟಿಯಾದ ಸ್ವರದಿಂದ ಯೇಸು ಹೇಗೆ ಕೊಲ್ಲಲ್ಪಟ್ಟನೆಂಬದನ್ನು ಮತ್ತು ಯೆಹೋವನು ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದನ್ನು ಜನರಿಗೆ ತಿಳಿಸುತ್ತಾನೆ. ‘ಯೇಸು ಈಗ ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿದ್ದಾನೆ. ಅವನು ತಾನು ಹೇಳಿದಂತೆ ಪವಿತ್ರಾತ್ಮವನ್ನು ಸುರಿಸಿದ್ದಾನೆ. ಆದುದರಿಂದಲೇ ಈ ಅದ್ಭುತಗಳನ್ನು ನೀವು ನೋಡಿದ್ದೀರಿ ಮತ್ತು ಕೇಳಿದ್ದೀರಿ’ ಎಂದು ಪೇತ್ರನು ವಿವರಿಸುತ್ತಾನೆ.

ಪೇತ್ರನು ಈ ವಿಷಯಗಳನ್ನು ಹೇಳುವಾಗ, ಯೇಸುವಿಗೆ ಏನು ಮಾಡಲ್ಪಟ್ಟಿತೋ ಅದರ ಕುರಿತು ಜನರಲ್ಲಿ ಹೆಚ್ಚಿನವರು ಅತಿ ದುಃಖಿತರಾಗುತ್ತಾರೆ. ‘ನಾವೇನು ಮಾಡಬೇಕು?’ ಎಂದವರು ಕೇಳುತ್ತಾರೆ. ಪೇತ್ರನು ಅವರಿಗೆ, ‘ನೀವು ನಿಮ್ಮ ನಿಮ್ಮ ಜೀವನಗಳನ್ನು ಬದಲಾಯಿಸಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ’ ಎಂದು ತಿಳಿಸುತ್ತಾನೆ. ಹೀಗೆ ಅದೇ ದಿನದಲ್ಲಿ ಸುಮಾರು 3,000 ಜನರು ದೀಕ್ಷಾಸ್ನಾನ ಪಡೆದುಕೊಂಡು ಯೇಸುವಿನ ಹಿಂಬಾಲಕರಾಗುತ್ತಾರೆ.