ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 103

ಬಾಗಿಲುಮುಚ್ಚಿದ್ದ ಕೋಣೆಯಲ್ಲಿ

ಬಾಗಿಲುಮುಚ್ಚಿದ್ದ ಕೋಣೆಯಲ್ಲಿ

ಪೇತ್ರ ಮತ್ತು ಯೋಹಾನನು ಯೇಸುವಿನ ದೇಹವನ್ನು ಇಡಲಾಗಿದ್ದ ಆ ಸಮಾಧಿಯನ್ನು ಬಿಟ್ಟು ಹೊರಟ ನಂತರ ಮರಿಯಳು ಅಲ್ಲಿ ಒಬ್ಬಳೆ ಇರುತ್ತಾಳೆ. ಆಕೆ ಅಳುತ್ತಾ ಅಲ್ಲಿ ನಿಂತಿರುತ್ತಾಳೆ. ಅನಂತರ ಬಗ್ಗಿ ಸಮಾಧಿಯೊಳಗೆ ನೋಡುತ್ತಾಳೆ. ಹಿಂದಿನ ಚಿತ್ರದಲ್ಲಿ ನಾವು ನೋಡಿದ್ದು ಇದನ್ನೇ. ಅಲ್ಲಿ ಅವಳು ಇಬ್ಬರು ದೇವದೂತರನ್ನು ಕಾಣುತ್ತಾಳೆ! ‘ನೀನು ಯಾಕೆ ಅಳುತ್ತೀ?’ ಎಂದು ಕೇಳುತ್ತಾರೆ ಅವರು.

ಅದಕ್ಕೆ ಮರಿಯಳು ‘ನನ್ನ ಸ್ವಾಮಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ’ ಎಂದು ಉತ್ತರಿಸುತ್ತಾಳೆ. ಮರಿಯಳು ಅದನ್ನು ಹೇಳಿ ತಿರುಗಿಕೊಂಡು ಒಬ್ಬ ಮನುಷ್ಯನನ್ನು ಕಾಣುತ್ತಾಳೆ. ‘ಅಮ್ಮಾ, ಯಾರನ್ನು ಹುಡುಕುತ್ತೀ?’ ಎಂದವನು ಕೇಳುತ್ತಾನೆ.

ಅವನೊಬ್ಬ ತೋಟಗಾರನಾಗಿರಬಹುದು ಮತ್ತು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗಿರಬಹುದೆಂದು ಮರಿಯಳು ನೆನಸುತ್ತಾಳೆ. ಆದುದರಿಂದ ಅವಳನ್ನುವುದು: ‘ನೀನು ಆತನನ್ನು ತೆಗೆದುಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು.’ ಆದರೆ ನಿಜವೇನೆಂದರೆ ಆ ಮನುಷ್ಯನೇ ಯೇಸು. ಬೇರೆ ರೀತಿಯ ಒಂದು ದೇಹವನ್ನು ತೆಗೆದುಕೊಂಡಿರುವುದರಿಂದ ಮರಿಯಳಿಗೆ ಅವನ ಗುರುತು ಸಿಗುವುದಿಲ್ಲ. ಆದರೆ ಅವನು ‘ಮರಿಯಳೇ’ ಎಂದು ಅವಳನ್ನು ಹೆಸರು ಹೇಳಿ ಕರೆಯುವಾಗ ಅವನು ಯೇಸುವೇ ಎಂದು ಮರಿಯಳಿಗೆ ತಿಳಿಯುತ್ತದೆ. ಅವಳು ಓಡಿಹೋಗಿ ಶಿಷ್ಯರಿಗೆ, ‘ನಾನು ಸ್ವಾಮಿಯನ್ನು ನೋಡಿದೆ!’ ಎಂದು ಹೇಳುತ್ತಾಳೆ.

ತರುವಾಯ ಅದೇ ದಿನ, ಇಬ್ಬರು ಶಿಷ್ಯರು ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಾ ಇರುವಾಗ ಒಬ್ಬ ಮನುಷ್ಯನು ಅವರ ಜೊತೆಗೆ ಬರುತ್ತಾನೆ. ಯೇಸುವು ಕೊಲ್ಲಲ್ಪಟ್ಟಿರುವ ಕಾರಣ ಶಿಷ್ಯರು ತುಂಬಾ ದುಃಖಿತರಾಗಿದ್ದಾರೆ. ಆದರೆ ಅವರು ದಾರಿಯಲ್ಲಿ ನಡೆಯುತ್ತಿರುವಾಗ ಆ ಮನುಷ್ಯನು ಬೈಬಲ್‌ನಿಂದ ಅನೇಕ ವಿಷಯಗಳನ್ನು ಅವರಿಗೆ ವಿವರಿಸುತ್ತಾನೆ. ಅದರಿಂದ ಅವರ ಮನಸ್ಸಿಗೆ ನೆಮ್ಮದಿಯಾಗುತ್ತದೆ. ಕೊನೆಗೆ, ಊಟ ಮಾಡಲು ಒಂದೆಡೆ ಅವರು ನಿಲ್ಲುವಾಗಲೇ ಆ ಮನುಷ್ಯನು ಯೇಸುವೆಂದು ಆ ಶಿಷ್ಯರು ಗುರುತಿಸುತ್ತಾರೆ. ಆಗ ಯೇಸು ಕಣ್ಮರೆಯಾಗುತ್ತಾನೆ. ಕೂಡಲೇ ಈ ಇಬ್ಬರು ಶಿಷ್ಯರು ಅಪೊಸ್ತಲರಿಗೆ ಯೇಸುವಿನ ಕುರಿತು ತಿಳಿಸಲು ಯೆರೂಸಲೇಮಿಗೆ ಹಿಂದಿರುಗಿ ಹೋಗುತ್ತಾರೆ.

ಅದೇ ಸಮಯದಲ್ಲಿ ಯೇಸು ಪೇತ್ರನಿಗೂ ಕಾಣಿಸಿಕೊಳ್ಳುತ್ತಾನೆ. ಇತರರು ಇದನ್ನು ಕೇಳುವಾಗ ಪ್ರಚೋದಿತರಾಗುತ್ತಾರೆ. ಅನಂತರ ಆ ಇಬ್ಬರು ಶಿಷ್ಯರು ಯೆರೂಸಲೇಮಿಗೆ ಹೋಗಿ ಅಪೊಸ್ತಲರನ್ನು ಕಂಡು ಯೇಸು ತಮಗೂ ದಾರಿಯಲ್ಲಿ ಹೇಗೆ ಕಾಣಿಸಿಕೊಂಡನೆಂದು ತಿಳಿಸುತ್ತಾರೆ. ಅವರು ಇದರ ಕುರಿತು ತಿಳಿಸುತ್ತಾ ಇರುವಾಗಲೇ ಯಾವ ಆಶ್ಚರ್ಯಕರ ಸಂಗತಿ ನಡೆಯಿತು ಗೊತ್ತೇ?

ಚಿತ್ರವನ್ನು ನೋಡಿರಿ. ಬಾಗಿಲು ಮುಚ್ಚಲ್ಪಟ್ಟಿದ್ದರೂ ಯೇಸು ಆ ಕೋಣೆಯೊಳಗೆ ಕಾಣಿಸಿಕೊಳ್ಳುತ್ತಾನೆ. ಶಿಷ್ಯರು ಅದೆಷ್ಟು ಸಂತೋಷಪಡುತ್ತಾರೆ! ಅದೊಂದು ರೋಮಾಂಚಕ ದಿನವಾಗಿದೆಯಲ್ಲವೇ? ಈ ತನಕ ಯೇಸು ತನ್ನ ಹಿಂಬಾಲಕರಿಗೆ ಎಷ್ಟು ಸಲ ಕಾಣಿಸಿಕೊಂಡನೆಂದು ನೀವು ಲೆಕ್ಕಿಸಬಲ್ಲಿರೋ? ಐದು ಸಲವೆಂದು ಲೆಕ್ಕ ಸಿಕ್ಕಿತ್ತೋ?

ಅಲ್ಲಿ ಯೇಸು ಗೋಚರಿಸುವಾಗ ಅಪೊಸ್ತಲ ತೋಮನು ಅವರೊಂದಿಗಿರುವುದಿಲ್ಲ. ಆದುದರಿಂದ ಶಿಷ್ಯರು ಅವನಿಗೆ, ‘ನಾವು ಸ್ವಾಮಿಯನ್ನು ನೋಡಿದೆವು!’ ಎಂದು ಹೇಳುತ್ತಾರೆ. ಆದರೆ ತೋಮನು, ತಾನೇ ಸ್ವತಃ ಯೇಸುವನ್ನು ನೋಡಿದರೆ ಮಾತ್ರ ನಂಬುತ್ತೇನೆಂದು ಹೇಳುತ್ತಾನೆ. ಎಂಟು ದಿನಗಳ ಬಳಿಕ ಶಿಷ್ಯರು ತಿರಿಗಿ ಬಾಗಿಲುಮುಚ್ಚಿದ್ದ ಕೋಣೆಯೊಳಗೆ ಕೂಡಿಬರುತ್ತಾರೆ. ಈ ಸಲ ತೋಮನು ಅವರೊಂದಿಗಿದ್ದಾನೆ. ಥಟ್ಟನೆ ಯೇಸು ಆ ಕೋಣೆಯೊಳಗೆ ಕಾಣಿಸಿಕೊಳ್ಳುತ್ತಾನೆ. ಈಗ ತೋಮನು ನಂಬುತ್ತಾನೆ.