ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 62

ದೊಡ್ಡ ಮರದಂತಿರುವ ರಾಜ್ಯ

ದೊಡ್ಡ ಮರದಂತಿರುವ ರಾಜ್ಯ

ಒಂದು ರಾತ್ರಿ ನೆಬೂಕದ್ನೆಚ್ಚರನಿಗೆ ಒಂದು ಭಯಾನಕ ಕನಸು ಬಿತ್ತು. ಅವನು ವಿದ್ವಾಂಸರನ್ನು ಕರೆದು ಆ ಕನಸಿನ ಅರ್ಥವೇನೆಂದು ಕೇಳಿದನು. ಆದರೆ ಅವರಲ್ಲಿ ಯಾರಿಗೂ ಆ ಕನಸಿನ ಅರ್ಥ ಗೊತ್ತಾಗಲಿಲ್ಲ. ಕೊನೆಗೆ ರಾಜನು ದಾನಿಯೇಲನನ್ನು ಕರೆದನು.

ನೆಬೂಕದ್ನೆಚ್ಚರನು ದಾನಿಯೇಲನಿಗೆ, ‘ನಾನು ನನ್ನ ಕನಸಿನಲ್ಲಿ ಒಂದು ದೊಡ್ಡ ಮರವನ್ನು ಕಂಡೆ. ಅದು ಆಕಾಶ ಮುಟ್ಟುವಷ್ಟು ಎತ್ತರಕ್ಕೆ ಬೆಳೆಯಿತು. ಭೂಮಿಯಲ್ಲಿ ಎಲ್ಲಿಂದ ಬೇಕಾದರೂ ಅದನ್ನು ನೋಡಬಹುದಿತ್ತು. ಅದರಲ್ಲಿ ಹಚ್ಚಹಸಿರಿನ ಎಲೆ ಮತ್ತು ಹಣ್ಣುಗಳು ತುಂಬಿದ್ದವು. ಪ್ರಾಣಿಗಳು ಆ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು. ಪಕ್ಷಿಗಳು ಆ ಮರದ ಕೊಂಬೆಗಳಲ್ಲಿ ಗೂಡುಗಳನ್ನು ಕಟ್ಟಿಕೊಂಡು ವಾಸ ಮಾಡಿಕೊಂಡಿದ್ದವು. ಆಗ ಸ್ವರ್ಗದಿಂದ ಒಬ್ಬ ದೇವದೂತ ಬಂದು, “ಆ ಮರವನ್ನು ಕಡಿದು ಹಾಕಿ. ಅದರ ರೆಂಬೆಕೊಂಬೆಗಳನ್ನು ಕತ್ತರಿಸಿ. ಆದರೆ ಅದರ ಬುಡವನ್ನು ಹಾಗೇ ಬಿಡಿ. ಆ ಬುಡಕ್ಕೆ ಕಬ್ಬಿಣ ಮತ್ತು ತಾಮ್ರದ ಪಟ್ಟಿಯನ್ನು ಬಿಗಿಯಿರಿ. ಅದಕ್ಕೆ ಮನುಷ್ಯ ಹೃದಯ ಹೋಗಿ ಮೃಗದ ಹೃದಯ ಬರಲಿ. ಹೀಗೇ ಏಳು ವರ್ಷಗಳು ಕಳೆಯಲಿ. ಇಡೀ ವಿಶ್ವದ ರಾಜ ದೇವರು ಮತ್ತು ಆತನು ರಾಜ್ಯವನ್ನು ತನಗೆ ಇಷ್ಟ ಬಂದವರಿಗೆ ಕೊಡುವನು ಎಂದು ಎಲ್ಲರಿಗೂ ಗೊತ್ತಾಗುವುದು” ಎಂದು ಹೇಳಿದನು. ಇದೇ ನನಗೆ ಬಿದ್ದ ಕನಸು’ ಎಂದನು.

ಈ ಕನಸಿನ ಅರ್ಥ ಏನೆಂದು ಯೆಹೋವ ದೇವರು ದಾನಿಯೇಲನಿಗೆ ತಿಳಿಸಿದನು. ಇದನ್ನು ಅರ್ಥಮಾಡಿಕೊಂಡಾಗ ದಾನಿಯೇಲನಿಗೆ ತುಂಬಾ ಭಯವಾಯಿತು. ಅವನು ರಾಜನಿಗೆ, ‘ಅರಸನೇ, ಈ ಕನಸು ನಿನ್ನ ವೈರಿಗಳ ಬಗ್ಗೆ ಆಗಿದ್ದರೆ ಒಳ್ಳೇದಿತ್ತು. ಆದರೆ ಇದು ನಿನ್ನ ಬಗ್ಗೆ. ನಿನ್ನ ಕನಸಿನಲ್ಲಿ ಕಡಿದುಹಾಕಲ್ಪಟ್ಟ ಆ ದೊಡ್ಡ ಮರ ನೀನೇ. ನೀನು ನಿನ್ನ ರಾಜ್ಯವನ್ನು ಕಳೆದುಕೊಳ್ಳುವೆ ಮತ್ತು ಕಾಡು ಪ್ರಾಣಿಯಂತೆ ಹುಲ್ಲನ್ನು ತಿನ್ನುವೆ. ಆದರೆ ದೇವದೂತನು ಮರದ ಬುಡವನ್ನು ಹಾಗೇ ಬಿಡುವಂತೆ ಹೇಳಿದ್ದರಿಂದ ಸ್ವಲ್ಪ ಸಮಯದ ನಂತರ ನೀನು ಮತ್ತೆ ರಾಜನಾಗುವೆ’ ಎಂದು ಹೇಳಿದನು.

ಇದಾಗಿ ಒಂದು ವರ್ಷದ ನಂತರ ನೆಬೂಕದ್ನೆಚ್ಚರನು ತನ್ನ ಅರಮನೆಯ ಮಹಡಿಯ ಮೇಲೆ ತಿರುಗಾಡುತ್ತಾ ತನ್ನ ರಾಜ್ಯವಾದ ಬಾಬೆಲನ್ನು ನೋಡಿ ಜಂಭದಿಂದ ‘ನೋಡಿ, ನಾನು ಕಟ್ಟಿದ ಈ ಮಹಾ ಸಾಮ್ರಾಜ್ಯ. ನನ್ನಂಥ ರಾಜ ಬೇರೆ ಯಾರೂ ಇಲ್ಲ’ ಎಂದು ಕೊಚ್ಚಿಕೊಂಡನು. ಅವನು ಹೀಗೆ ಹೇಳುತ್ತಿರುವಾಗಲೇ ಸ್ವರ್ಗದಿಂದ, ‘ನೆಬೂಕದ್ನೆಚ್ಚರನೇ, ನೀನು ನಿನ್ನ ರಾಜ್ಯವನ್ನು ಕಳೆದುಕೊಂಡಿರುವೆ’ ಎಂಬ ಮಾತು ಕೇಳಿಸಿತು.

ಆ ಕ್ಷಣವೇ ನೆಬೂಕದ್ನೆಚ್ಚರನು ಹುಚ್ಚನಾಗಿ ಕಾಡು ಪ್ರಾಣಿಯಂತೆ ವರ್ತಿಸಲು ಆರಂಭಿಸಿದನು. ಆಮೇಲೆ ಅವನು ತನ್ನ ಅರಮನೆ ಬಿಟ್ಟು ಕಾಡುಪ್ರಾಣಿಗಳೊಟ್ಟಿಗೆ ಜೀವಿಸಬೇಕಾಯಿತು. ಅವನ ಕೂದಲು ಹದ್ದಿನ ರೆಕ್ಕೆಗಳಂತೆ, ಅವನ ಉಗುರುಗಳು ಪಕ್ಷಿಯ ಉಗುರುಗಳಂತೆ ಆಯಿತು.

ಹೀಗೆ ಏಳು ವರ್ಷಗಳು ಕಳೆದ ಮೇಲೆ ನೆಬೂಕದ್ನೆಚ್ಚರನು ಮೊದಲಿನಂತಾದನು. ಯೆಹೋವನು ಅವನನ್ನು ಮತ್ತೆ ಬಾಬೆಲಿನ ರಾಜನಾಗಿ ಮಾಡಿದನು. ಆಗ ನೆಬೂಕದ್ನೆಚ್ಚರನು, ‘ಸ್ವರ್ಗದ ರಾಜನಾದ ಯೆಹೋವನಿಗೆ ಸ್ತೋತ್ರ. ಯೆಹೋವನೊಬ್ಬನೇ ಅರಸನು ಎಂದು ನನಗೀಗ ಗೊತ್ತಾಯಿತು. ಆತನು ಅಹಂಕಾರಿಗಳನ್ನು ತಗ್ಗಿಸುತ್ತಾನೆ. ರಾಜ್ಯವನ್ನು ತನಗೆ ಬೇಕಾದವರಿಗೆ ಕೊಡುತ್ತಾನೆ’ ಅಂದನು.

“ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು.”—ಜ್ಞಾನೋಕ್ತಿ 16:18