ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 31

ಯೆಹೋಶುವ ಮತ್ತು ಗಿಬ್ಯೋನ್ಯರು

ಯೆಹೋಶುವ ಮತ್ತು ಗಿಬ್ಯೋನ್ಯರು

ಯೆರಿಕೋ ಪಟ್ಟಣದ ಸುದ್ದಿ ಕಾನಾನಿನ ಬೇರೆ ಜನಾಂಗಗಳಿಗೆ ಹಬ್ಬಿತು. ಅಲ್ಲಿನ ರಾಜರು ಒಟ್ಟಿಗೆ ಸೇರಿ ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡಲು ತೀರ್ಮಾನ ಮಾಡಿದರು. ಆದರೆ ಗಿಬ್ಯೋನ್ಯರ ಯೋಚನೆಯೇ ಬೇರೆ ಆಗಿತ್ತು. ಅವರು ಹರಿದು ಹೋದ ಬಟ್ಟೆಗಳನ್ನು ಹಾಕಿಕೊಂಡು ಯೆಹೋಶುವನ ಹತ್ತಿರ ಬಂದು ‘ನಾವು ದೂರದ ದೇಶದಿಂದ ಬಂದಿದ್ದೇವೆ. ನಾವು ಯೆಹೋವನ ಬಗ್ಗೆ ಮತ್ತು ಆತನು ನಿಮಗಾಗಿ ಈಜಿಪ್ಟಿನಲ್ಲಿ ಹಾಗೂ ಮೋವಾಬ್‌ನಲ್ಲಿ ಮಾಡಿದ್ದೆಲ್ಲವನ್ನು ಕೇಳಿಸಿಕೊಂಡಿದ್ದೇವೆ. ನೀವು ನಮ್ಮ ವಿರುದ್ಧ ಯುದ್ಧ ಮಾಡಲ್ಲ ಎಂದು ಮಾತು ಕೊಡಿ. ನಾವು ನಿಮ್ಮ ಸೇವಕರಾಗಿರುತ್ತೇವೆ’ ಅಂದರು.

ಯೆಹೋಶುವ ಅವರ ಮಾತನ್ನು ನಂಬಿ ಯುದ್ಧ ಮಾಡದಿರಲು ಒಪ್ಪಿದ. ಮೂರು ದಿನ ಆದ ಮೇಲೆ ಅವರು ದೂರದ ದೇಶದವರಲ್ಲ, ಕಾನಾನ್‌ ದೇಶದವರೇ ಎಂದು ಗೊತ್ತಾಯಿತು. ಆಗ ಯೆಹೋಶುವನು ಗಿಬ್ಯೋನ್ಯರಿಗೆ ‘ನೀವು ಯಾಕೆ ನಮಗೆ ಸುಳ್ಳು ಹೇಳಿದಿರಿ?’ ಎಂದು ಕೇಳಿದ. ಅದಕ್ಕೆ ಅವರು ‘ನಮಗೆ ತುಂಬ ಭಯ ಆಗಿತ್ತು! ನಿಮ್ಮ ದೇವರಾದ ಯೆಹೋವನು ನಿಮಗಾಗಿ ಯುದ್ಧ ಮಾಡುತ್ತಿದ್ದಾನೆ ಎಂದು ನಮಗೆ ಗೊತ್ತು. ದಯವಿಟ್ಟು ನಮ್ಮನ್ನು ಕೊಲ್ಲಬೇಡಿ’ ಎಂದು ಉತ್ತರ ಕೊಟ್ಟರು. ಯೆಹೋಶುವನು ಕೊಟ್ಟ ಮಾತಿನಂತೆ ನಡೆದುಕೊಂಡನು ಮತ್ತು ಅವರನ್ನು ಕೊಲ್ಲಲಿಲ್ಲ.

ಇದಾದ ಸ್ವಲ್ಪ ಸಮಯದಲ್ಲೇ ಕಾನಾನಿನ ಐದು ರಾಜರು ಮತ್ತು ಅವರ ಸೈನ್ಯ ಗಿಬ್ಯೋನ್ಯರಿಗೆ ಬೆದರಿಕೆ ಹಾಕಿತು. ಯೆಹೋಶುವ ಮತ್ತು ಅವನ ಸೈನ್ಯ ಗಿಬ್ಯೋನ್ಯರನ್ನು ಕಾಪಾಡಲು ರಾತ್ರಿಯಿಡೀ ನಡೆದರು. ಮಾರನೇ ದಿನ ಬೆಳಗ್ಗೆ ಯುದ್ಧ ಶುರು ಆಯಿತು. ಕಾನಾನ್ಯರು ದಿಕ್ಕಾಪಾಲಾಗಿ ಓಡಿಹೋಗಲು ಆರಂಭಿಸಿದರು. ಅವರು ಹೋದಲ್ಲೆಲ್ಲಾ ಯೆಹೋವನು ಅವರ ಮೇಲೆ ದೊಡ್ಡ ಕಲ್ಮಳೆಯನ್ನು ಸುರಿಸಿದನು. ಆಮೇಲೆ ಸೂರ್ಯನು ಸ್ತಬ್ಧನಾಗಿ ನಿಲ್ಲುವಂತೆ ಮಾಡಲು ಯೆಹೋಶುವ ಯೆಹೋವನನ್ನು ಬೇಡಿಕೊಂಡ. ಈ ಹಿಂದೆ ನಡೆದಿರದ ವಿಷಯವನ್ನು ಅಂದರೆ ಯಾವತ್ತೂ ಸ್ತಬ್ಧನಾಗಿ ನಿಲ್ಲದ ಸೂರ್ಯನು ಒಂದೇ ಕಡೆ ನಿಲ್ಲುವಂತೆ ಯೆಹೋಶುವನು ಯಾಕೆ ಕೇಳಿಕೊಂಡ? ಯಾಕೆಂದರೆ ಯೆಹೋಶುವನಿಗೆ ಯೆಹೋವನ ಮೇಲೆ ಭರವಸೆ ಇತ್ತು. ಇಸ್ರಾಯೇಲ್ಯರು ಕಾನಾನಿನ ರಾಜರನ್ನು ಹಾಗೂ ಅವರ ಸೈನಿಕರನ್ನು ಸೋಲಿಸುವ ತನಕ ಒಂದು ಇಡೀ ದಿನ ಸೂರ್ಯ ಮುಳುಗಲೇ ಇಲ್ಲ.

“ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ; ಏಕೆಂದರೆ ಇವುಗಳಿಗಿಂತ ಹೆಚ್ಚಿನದ್ದು ಕೆಡುಕನಿಂದ ಬಂದದ್ದಾಗಿದೆ.”—ಮತ್ತಾಯ 5:37