ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ

ಷೀಓಲ್‌ ಮತ್ತು ಹೇಡೀಸ್‌ ಎಂದರೇನು?

ಷೀಓಲ್‌ ಮತ್ತು ಹೇಡೀಸ್‌ ಎಂದರೇನು?

ಬೈಬಲು ಅದರ ಮೂಲ ಭಾಷೆಗಳಲ್ಲಿ, ಹೀಬ್ರು ಪದವಾದ ಷೀಓಲ್‌ ಮತ್ತು ಅದರ ಗ್ರೀಕ್‌ ಸಮಾನಾರ್ಥಕ ಪದವಾದ ಹೇಡೀಸ್‌ ಅನ್ನು 70ಕ್ಕೂ ಹೆಚ್ಚು ಬಾರಿ ಉಪಯೋಗಿಸುತ್ತದೆ. ಇವೆರಡೂ ಪದಗಳು ಮರಣಕ್ಕೆ ಸಂಬಂಧಪಟ್ಟ ಪದಗಳು. ಕೆಲವು ಬೈಬಲ್‌ಗಳು ಅವನ್ನು “ಸಮಾಧಿ,” “ನರಕ,” ಅಥವಾ “ಅಧೋಲೋಕ” ಎಂಬುದಾಗಿ ಭಾಷಾಂತರಿಸುತ್ತವೆ. ಆದರೂ, ಹೆಚ್ಚಿನ ಭಾಷೆಗಳಲ್ಲಿ ಈ ಹೀಬ್ರು ಮತ್ತು ಗ್ರೀಕ್‌ ಪದಗಳ ನಿಷ್ಕೃಷ್ಟ ಅರ್ಥವನ್ನು ತಿಳಿಯಪಡಿಸುವ ಪದಗಳಿರುವುದಿಲ್ಲ. ಆದಕಾರಣ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಬೈಬಲು ಷೀಓಲ್‌ ಮತ್ತು ಹೇಡೀಸ್‌ ಎಂಬ ಪದಗಳನ್ನೇ ಉಪಯೋಗಿಸುತ್ತದೆ. ಈ ಪದಗಳ ನಿಜಾರ್ಥವೇನು? ಬೈಬಲಿನ ವಿವಿಧ ಭಾಗಗಳಲ್ಲಿ ಅವನ್ನು ಹೇಗೆ ಉಪಯೋಗಿಸಲಾಗಿದೆ ಎಂಬುದನ್ನು ನಾವು ಗಮನಿಸೋಣ.

“ನೀನು ಸೇರಬೇಕಾದ ಪಾತಾಳ [ಹೀಬ್ರು, ಷೀಓಲ್‌]ದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ,” ಎನ್ನುತ್ತದೆ ಪ್ರಸಂಗಿ 9:10. ಇಲ್ಲಿ ಷೀಓಲ್‌ ಎಂಬ ಪದವು ನಾವು ಒಬ್ಬ ಪ್ರಿಯ ವ್ಯಕ್ತಿಯನ್ನು ಎಲ್ಲಿ ಸಮಾಧಿ ಮಾಡಿರಬಹುದೊ ಆ ನಿರ್ದಿಷ್ಟವಾದ ಒಂದೇ ಸ್ಥಳಕ್ಕೆ ಸೂಚಿಸುತ್ತದೊ? ಇಲ್ಲ. ಬೈಬಲು ಒಂದು ನಿರ್ದಿಷ್ಟ ಹೂಳುವ ಸ್ಥಳಕ್ಕೆ ಅಥವಾ ಸಮಾಧಿಗೆ ಸೂಚಿಸುವಾಗ, ಅದು ಷೀಓಲ್‌ ಮತ್ತು ಹೇಡೀಸ್‌ ಎಂಬ ಪದಗಳನ್ನಲ್ಲ ಬದಲಾಗಿ ಬೇರೆ ಹೀಬ್ರು ಮತ್ತು ಗ್ರೀಕ್‌ ಪದಗಳನ್ನು ಉಪಯೋಗಿಸುತ್ತದೆ. (ಆದಿಕಾಂಡ 23:7-9; ಮತ್ತಾಯ 28:1) ಅಲ್ಲದೆ, ಬೈಬಲು “ಷೀಓಲ್‌” ಎಂಬ ಪದವನ್ನು, ಕುಟುಂಬದ ಸಮಾಧಿ ಅಥವಾ ಒಂದು ಸಾಮೂಹಿಕ ಸಮಾಧಿಯಂಥ ಅನೇಕರನ್ನು ಹೂಳಲಾಗುವ ಒಂದು ಸಮಾಧಿಯನ್ನು ಸೂಚಿಸಲು ಬಳಸುವುದಿಲ್ಲ.—ಆದಿಕಾಂಡ 49:30, 31.

ಹಾಗಾದರೆ, “ಷೀಓಲ್‌” ಯಾವ ಸ್ಥಳವನ್ನು ಸೂಚಿಸುತ್ತದೆ? “ಷೀಓಲ್‌” ಅಥವಾ “ಹೇಡೀಸ್‌” ಎಂಬುದು ಒಂದು ದೊಡ್ಡ ಸಾಮೂಹಿಕ ಸಮಾಧಿಗಿಂತಲೂ ಹೆಚ್ಚಿನದ್ದನ್ನು ಸೂಚಿಸುತ್ತದೆಂದು ದೇವರ ವಾಕ್ಯವು ತೋರಿಸುತ್ತದೆ. ಉದಾಹರಣೆಗೆ, ಯೆಶಾಯ 5:14, ಪಾತಾಳವು (ಷೀಓಲ್‌) “ಹೆಚ್ಚು ಆತುರದಿಂದ ಅಪಾರವಾಗಿ ಬಾಯಿ”ತೆರೆದಿದೆಯೆಂದು ಹೇಳುತ್ತದೆ. ಷೀಓಲ್‌ ಈಗಾಗಲೇ ಅಸಂಖ್ಯಾತ ಮೃತಜನರನ್ನು ನುಂಗಿರುವುದಾದರೂ, ಅದು ಇನ್ನೂ ಹೆಚ್ಚು ಮಂದಿಗಾಗಿ ಹಸಿದಿರುವಂತೆ ತೋರುತ್ತದೆ. (ಜ್ಞಾನೋಕ್ತಿ 30:15, 16) ಕೇವಲ ಸೀಮಿತ ಸಂಖ್ಯೆಯ ಮೃತರನ್ನು ಮಾತ್ರ ಹೂಳಿಡಸಾಧ್ಯವಿರುವ ಒಂದು ಅಕ್ಷರಾರ್ಥಕ ಸ್ಥಳಕ್ಕೆ ಅಸದೃಶವಾಗಿ, ‘ಪಾತಾಳ [ಷೀಓಲ್‌]ಕ್ಕೆ ತೃಪ್ತಿಯೇ ಇರುವುದಿಲ್ಲ.’ (ಜ್ಞಾನೋಕ್ತಿ 27:20) ಷೀಓಲ್‌ನ ಹೊಟ್ಟೆಯು ತುಂಬುವುದೇ ಇಲ್ಲ, ಅದಕ್ಕೆ ಮಿತಿಯೇ ಇಲ್ಲ. ಹೀಗೆ ಷೀಓಲ್‌ ಅಥವಾ ಹೇಡೀಸ್‌ ಎಂಬುದು ಒಂದು ನಿರ್ದಿಷ್ಟ ಪ್ರದೇಶದಲ್ಲಿರುವ ಒಂದು ಅಕ್ಷರಾರ್ಥಕ ಸ್ಥಳವಲ್ಲ. ಬದಲಿಗೆ, ಅದು ಮೃತಮಾನವರಿಗೆ ಸಾಮಾನ್ಯವಾಗಿರುವ ಸಮಾಧಿಸ್ಥಳ, ಮಾನವಕುಲದಲ್ಲಿ ಹೆಚ್ಚಿನವರು ಮರಣದಲ್ಲಿ ಎಲ್ಲಿ ನಿದ್ರೆಹೋಗುತ್ತಾರೋ ಆ ಸಾಂಕೇತಿಕ ಸ್ಥಳವಾಗಿದೆ.

ಪುನರುತ್ಥಾನದ ಕುರಿತಾದ ಬೈಬಲ್‌ ಬೋಧನೆಯು, “ಷೀಓಲ್‌” ಮತ್ತು “ಹೇಡೀಸ್‌”ನ ಅರ್ಥದ ಕುರಿತು ನಾವು ಇನ್ನೂ ಹೆಚ್ಚಿನ ಒಳನೋಟವನ್ನು ಪಡೆದುಕೊಳ್ಳುವಂತೆ ಸಹಾಯಮಾಡುತ್ತದೆ. ದೇವರ ವಾಕ್ಯವು ಷೀಓಲ್‌ ಮತ್ತು ಹೇಡೀಸ್‌ ಅನ್ನು ಯಾವುದರಿಂದ ಪುನರುತ್ಥಾನವಿದೆಯೋ ಆ ರೀತಿಯ ಮರಣದೊಂದಿಗೆ ಜೊತೆಗೂಡಿಸುತ್ತದೆ. * ಕನ್ನಡ ಬೈಬಲ್‌ ಆ ಮೂಲ ಭಾಷಾ ಪದಗಳನ್ನು, “ಪಾತಾಳ,” “ಅಧೋಲೋಕ,” ಮತ್ತು “ಸಮಾಧಿ” ಎಂದು ಭಾಷಾಂತರಿಸುತ್ತದೆ. (ಯೋಬ 14:13; ಅ. ಕೃತ್ಯಗಳು 2:31; ಪ್ರಕಟನೆ 20:13) ಷೀಓಲ್‌ ಮತ್ತು ಹೇಡೀಸ್‌ನಲ್ಲಿ ಯೆಹೋವನನ್ನು ಸೇವಿಸಿದವರು ಮಾತ್ರವಲ್ಲ ಆತನನ್ನು ಸೇವಿಸದೆ ಇದ್ದ ಅನೇಕರು ಸಹ ಇದ್ದಾರೆಂದು ದೇವರ ವಾಕ್ಯವು ತೋರಿಸುತ್ತದೆ. (ಆದಿಕಾಂಡ 37:35; ಕೀರ್ತನೆ 55:15) ಆದುದರಿಂದಲೇ ಬೈಬಲು ಹೀಗೆ ಬೋಧಿಸುತ್ತದೆ: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.”—ಅ. ಕೃತ್ಯಗಳು 24:15.

^ ಪ್ಯಾರ. 1 ಇದಕ್ಕೆ ವೈದೃಶ್ಯವಾಗಿ, ಪುನಃ ಜೀವಕ್ಕೆ ಎಬ್ಬಿಸಲ್ಪಡದ ಮೃತರು, ಷೀಓಲ್‌ ಅಥವಾ ಹೇಡೀಸ್‌ನಲ್ಲಲ್ಲ ಬದಲಿಗೆ “ಗೆಹೆನ್ನ”ದಲ್ಲಿ ಇದ್ದಾರೆಂದು ವರ್ಣಿಸಲಾಗಿದೆ. (ಕನ್ನಡ ಬೈಬಲಿನಲ್ಲಿ ಮತ್ತಾಯ 5:30; 10:28; 23:33 ರಲ್ಲಿ “ನರಕ” ಎಂದು ಭಾಷಾಂತರಿಸಲಾಗಿದೆ) ಷೀಓಲ್‌ ಮತ್ತು ಹೇಡೀಸ್‌ನಂತೆಯೇ, ಗೆಹೆನ್ನ ಸಹ ಒಂದು ಅಕ್ಷರಾರ್ಥಕ ಸ್ಥಳವಾಗಿರುವುದಿಲ್ಲ.