ಮನಗುಂದಿದವರಿಗೆ ಸಾಂತ್ವನ
ಮನಗುಂದಿದವರಿಗೆ ಸಾಂತ್ವನ
“ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ.” (ರೋಮಾಪುರ 8:22) ಅದು 1,900 ವರ್ಷಗಳ ಹಿಂದೆ ಬರೆಯಲ್ಪಟ್ಟಾಗ ಮಾನವ ನರಳಾಟ ಅಧಿಕವಾಗಿತ್ತು. ಅನೇಕರು ಮನಗುಂದಿದ್ದರು. ಆದುದರಿಂದ, ಕ್ರೈಸ್ತರು ಹೀಗೆ ಪ್ರೋತ್ಸಾಹಿಸಲ್ಪಟ್ಟರು: “ಮನಗುಂದಿದವರ ಸಂಗಡ ಸಂತೈಸುತ್ತಾ ಮಾತಾಡಿರಿ.”—1 ಥೆಸಲೊನೀಕ 5:14, NW.
ಇಂದು, ಮಾನವ ಸಂಕಟ ಇನ್ನೂ ಅಧಿಕವಾಗಿದೆ, ಮತ್ತು ಹಿಂದೆಂದಿಗಿಂತಲೂ ಅಧಿಕ ಜನರು ಮನಗುಂದಿದ್ದಾರೆ. ಆದರೆ ಅದು ನಮ್ಮನ್ನು ಆಶ್ಚರ್ಯಗೊಳಿಸಬೇಕೇ? ನಿಜವಾಗಿಯೂ ಇಲ್ಲ, ಯಾಕಂದರೆ ಬೈಬಲ್ ಇವುಗಳನ್ನು “ಕಡೇ ದಿವಸಗಳು” ಎಂದು ಗುರುತಿಸಿ, ಅವು “ಕಠಿನಕಾಲಗಳು” ಎಂದು ಕರೆಯುತ್ತದೆ. (2 ತಿಮೊಥೆಯ 3:1-5) ಕಡೇ ದಿವಸಗಳಲ್ಲಿ, “ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವದು” ಮತ್ತು “ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು” ಎಂದು ಯೇಸು ಕ್ರಿಸ್ತನು ಮುಂತಿಳಿಸಿದನು.—ಲೂಕ 21:7-11, 25-27; ಮತ್ತಾಯ 24:3-14.
ಜನರು ಸುದೀರ್ಘ ಕಾಲ ಚಿಂತೆ, ಭಯ, ದುಃಖ, ಯಾ ಈ ರೀತಿಯ ಇನ್ನಿತರ ನಕಾರಾತ್ಮಕ ಮನೋಭಾವನೆಗಳನ್ನು ಅನುಭವಿಸುವಾಗ, ಅವರು ಅನೇಕ ವೇಳೆ ಮನಗುಂದುತ್ತಾರೆ. ಮನಗುಂದುವಿಕೆಗೆ ಅಥವಾ ವಿಪರೀತ ದುಃಖಕ್ಕೆ ಒಬ್ಬ ಪ್ರಿಯ ವ್ಯಕ್ತಿಯ ಮರಣ, ವಿವಾಹ ವಿಚ್ಛೇದನ, ಕೆಲಸದ ನಷ್ಟ, ಅಥವಾ ಒಂದು ಪಟ್ಟುಹಿಡಿದಿರುವ ರೋಗವು ಕಾರಣವಾಗಿರಬಹುದು. ಜನರು ತಾವು ಅಯೋಗ್ಯರೆಂಬ ಭಾವನೆಯನ್ನು ಬೆಳೆಸಿದಾಗ, ತಾವು ಅಸಫಲರು ಮತ್ತು ಎಲ್ಲರನ್ನು ನಿರಾಶೆಗೊಳಿಸಿದ್ದೇವೆಂಬ ಅನಿಸಿಕೆಯಿಂದಲೂ ಮನಗುಂದುತ್ತಾರೆ. ಒತ್ತಡದ ಪರಿಸ್ಥಿತಿಯಲ್ಲಿ ಯಾವನೂ ಚಿಂತಾಪರವಶತೆಯನ್ನು ಅನುಭವಿಸಬಹುದು, ಆದರೆ ವ್ಯಕ್ತಿಯು ಹತಾಶೆಯ ಭಾವನೆಯನ್ನು ಬೆಳೆಸಿದಾಗ ಮತ್ತು ಈ ಕೆಟ್ಟ ಪರಿಸ್ಥಿತಿಯಿಂದ ಹೊರಬರುವ ದಾರಿಯನ್ನು ನೋಡಲು ಅಸಮರ್ಥನಾದಾಗ, ವಿಪರೀತ ಮಾನಸಿಕ ಕುಸಿತ ಪರಿಣಮಿಸಬಹುದು.
ಪ್ರಾಚೀನ ಸಮಯದಲ್ಲಿ ಜನರು ತದ್ರೀತಿಯ ಭಾವನೆಗಳನ್ನು ಅನುಭವಿಸಿದರು. ಯೋಬನು ರೋಗವನ್ನು ಮತ್ತು ವೈಯಕ್ತಿಕ ದೌರ್ಭಾಗ್ಯವನ್ನು ಅನುಭವಿಸಿದನು. ದೇವರು ತನ್ನನ್ನು ತೊರೆದಿದ್ದಾನೆಂದು ಎಣಿಸಿ, ಅವನು ಜೀವನದ ಕಡೆ ಜುಗುಪ್ಸೆಯನ್ನು ವ್ಯಕ್ತಪಡಿಸಿದನು. (ಯೋಬ 10:1; 29:2, 4, 5) ಯಾಕೋಬನು ತನ್ನ ಮಗನ ವ್ಯಕ್ತವಾಗಿದ್ದ ಮರಣಕ್ಕಾಗಿ ಮನಗುಂದಿ, ಉಪಶಮನವನ್ನು ನಿರಾಕರಿಸಿದನು ಮತ್ತು ಸಾಯಲು ಬಯಸಿದನು. (ಆದಿಕಾಂಡ 37:33-35) ಗಂಭೀರ ತಪ್ಪಿನ ಅಪರಾಧ ಪ್ರಜ್ಞೆಯಿಂದ, ರಾಜ ದಾವೀದನು ಪ್ರಲಾಸಿಸಿದ್ದು: “ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ; ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ.”—ಕೀರ್ತನೆ 38:6, 8; 2 ಕೊರಿಂಥ 7:5, 6.
ಇಂದು, ಅನೇಕರು ತಮ್ಮ ಮಾನಸಿಕ, ಭಾವನಾತ್ಮಕ, ಹಾಗೂ ಶಾರೀರಿಕ ಸಾಧನೆಗಳನ್ನು ಮೀರಿ ಒಂದು ದಿನಚರಿಯನ್ನು ಅನುಸರಿಸಲು ತಮ್ಮನ್ನು ತಾವೇ ಹೆಚ್ಚು ಕೆಲಸಕ್ಕೊಳಪಡಿಸಿಕೊಳ್ಳುವುದರಿಂದ ಮನಗುಂದುತ್ತಾರೆ. ಸ್ಪಷ್ಟವಾಗಿ ಒತ್ತಡವು, ನಕಾರಾತ್ಮಕ ಯೋಚನೆಗಳು ಮತ್ತು ಭಾವನೆಗಳ ಜೊತೆಗೆ, ದೇಹವನ್ನು ಪ್ರಭಾವಿಸಿ ಮತ್ತು ಮಿದುಳಿನ ರಾಸಾಯನಿಕ ಅಸಮತೂಕಕ್ಕೆ ನೆರವು ನೀಡಿ, ಹೀಗೆ ಮನಗುಂದುವಿಕೆಯನ್ನು ಉಂಟುಮಾಡಬಲ್ಲದು.—ಜ್ಞಾನೋಕ್ತಿ 14:30 ಹೋಲಿಸಿ.
ಅವರಿಗೆ ಬೇಕಾಗುವ ಸಹಾಯ
ಫಿಲಿಪ್ಪಿಯ ಮೊದಲನೆಯ ಶತಮಾನದ ಕ್ರೈಸ್ತನಾಗಿದ್ದ ಎಪಫ್ರೊದೀತನು, “ತಾನು ಅಸ್ವಸ್ಥನಾಗಿದ್ದ ವರ್ತಮಾನವನ್ನು [ತನ್ನ ಗೆಳೆಯರು] ಕೇಳಿದ್ದರಿಂದ ವ್ಯಸನಪಟ್ಟನು.” ಮಿತ್ರರಿಂದ ಅಪೊಸ್ತಲ ಪೌಲನಿಗೆ ಒದಗಿಸುವಿಕೆಗಳೊಂದಿಗೆ ಕಳುಹಿಸಲ್ಪಟ್ಟ ಮೇಲೆ ಅಸ್ವಸ್ಥನಾದ ಎಪಫ್ರೊದೀತನು, ತಾನು ತನ್ನ ಮಿತ್ರರನ್ನು ನಿರಾಶೆಗೊಳಿಸಿದನೆಂದೂ, ತಾನು ಅಸಫಲನೆಂದು ಅವರು ಪರಿಗಣಿಸುವರೆಂದೂ ಪ್ರಾಯಶಃ ಅಭಿಪ್ರಯಿಸಿದನು. (ಫಿಲಿಪ್ಪಿ 2:25-27; 4:18) ಅಪೊಸ್ತಲ ಪೌಲನು ಹೇಗೆ ಸಹಾಯ ಮಾಡಿದನು?
ಆತನು ಎಪಫ್ರೊದೀತನನ್ನು ಮನೆಗೆ, ಫಿಲಿಪ್ಪಿಯ ಗೆಳೆಯರಿಗೆ ಹೀಗೆ ಹೇಳುವ ಒಂದು ಪತ್ರದೊಂದಿಗೆ ಕಳುಹಿಸಿದನು: “[ಎಪಫ್ರೊದೀತನನ್ನು] ಪೂರ್ಣ ಸಂತೋಷದಿಂದ ಕರ್ತನ ಹೆಸರಿನಲ್ಲಿ ಸೇರಿಸಿಕೊಳ್ಳಿರಿ. ಅಂಥವರನ್ನು ಮಾನ್ಯರೆಂದೆಣಿಸಿರಿ.” (ಫಿಲಿಪ್ಪಿ 2:28-30) ಪೌಲನು ಅವನ ಬಗ್ಗೆ ಅಷ್ಟು ಅತಿಶಯವಾಗಿ ಮಾತಾಡಿದ ಮತ್ತು ಫಿಲಿಪ್ಪಿಯವರು ಅವನನ್ನು ಆದರ ಮತ್ತು ವಾತ್ಸಲ್ಯದಿಂದ ಸ್ವಾಗತಿಸಿದ ನಿಜತ್ವವು, ಎಪಫ್ರೊದೀತನನ್ನು ನಿಜವಾಗಿಯೂ ಸಾಂತ್ವನಗೊಳಿಸಿ, ಅವನ ಮನಗುಂದುವಿಕೆಯನ್ನು ಹಗುರಗೊಳಿಸುವುದರಲ್ಲಿ ಸಹಾಯ ಮಾಡಿದಿರ್ದಬೇಕು.
ನಿಸ್ಸಂದೇಹವಾಗಿ, “ಮನಗುಂದಿದವರ ಸಂಗಡ ಸಂತೈಸುತ್ತಾ ಮಾತಾಡಿರಿ” ಎಂಬ ಬೈಬಲ್ ಸಲಹೆಯು ಅತಿ ಉತ್ತಮವಾದದ್ದು. “ಬೇರೆಯವರು ನಿಮ್ಮ ಬಗ್ಗೆ ವೈಯಕ್ತಿಕವಾಗಿ ಕಾಳಜಿ ವಹಿಸುತ್ತಾರೆಂದು ನೀವು ತಿಳಿಯುವುದು ಆವಶ್ಯಕವು,” ಎಂದು ಮನಗುಂದುವಿಕೆಯನ್ನು ಅನುಭವಿಸಿದ ಒಬ್ಬಾಕೆ ಸ್ತ್ರೀ ಹೇಳಿದಳು. “‘ನನಗೆ ಅರ್ಥವಾಗುತ್ತದೆ; ನೀನು ಸ್ವಸ್ಥಳಾಗುವೆ’, ಎಂದು ಯಾರಾದರೂ ಹೇಳುವುದನ್ನು ನೀವು ಕೇಳುವುದು ಆವಶ್ಯಕವಾಗಿದೆ.”
ಮನಗುಂದಿದ ವ್ಯಕ್ತಿಯೇ ಅನೇಕ ಬಾರಿ ಮೊದಲ ಹೆಚ್ಚೆಯನ್ನಿಟ್ಟು ತಾನು ನಂಬಬಹುದಾದ ಒಬ್ಬ ಸಹಾನುಭೂತಿಯುಳ್ಳ ವ್ಯಕ್ತಿಯನ್ನು ಕಂಡುಹಿಡಿಯ ಬೇಕು. ಆತನು ಒಳ್ಳೆಯ ಕಿವಿಗೊಡುವವನೂ, ಬಹು ತಾಳ್ಮೆಯುಳ್ಳವನೂ ಆಗಿರಬೇಕು. ಅವನು ಯಾ ಅವಳು ಮನಗುಂದಿದ ವ್ಯಕ್ತಿಗೆ ಭಾಷಣ ಕೊಡುವುದಾಗಲಿ ಯಾ ‘ನಿನಗೆ ಹಾಗೆನಿಸಬಾರದು’ ಅಥವಾ ‘ಅದು ತಪ್ಪಾದ ಮನೋಭಾವನೆ’ ಎಂಬ ಖಂಡನೆಯ ಹೇಳಿಕೆಯನ್ನಾಗಲಿ ಮಾಡುವುದನ್ನು ತ್ಯಜಿಸಬೇಕು. ಮನಗುಂದಿದ ವ್ಯಕ್ತಿಯ ಭಾವನೆಗಳು ಭಿದುರವಾಗಿರುತ್ತವೆ, ಮತ್ತು
ಇಂತಹ ಟೀಕಾತ್ಮಕ ಹೇಳಿಕೆಗಳು ಅವನು ತನ್ನ ಬಗ್ಗೆ ಇನ್ನೂ ಕೀಳಾಗಿ ಭಾವಿಸುವಂತೆ ಮಾತ್ರ ಮಾಡುವುವು.ಮನಗುಂದಿದವನು ತಾನು ಅಯೋಗ್ಯನೆಂದೂ ಎಣಿಸಬಹುದು. (ಯೋನ 4:3) ಆದರೂ, ಒಬ್ಬನನ್ನು ದೇವರು ಹೇಗೆ ಎಣಿಸುತ್ತಾನೆಂಬುದೇ ನಿಜವಾಗಿಯೂ ಗಣನೆಗೆ ಬರುತ್ತದೆಂದು ಒಬ್ಬ ವ್ಯಕ್ತಿಯು ಯಾವಾಗಲೂ ನೆನಪಿನಲ್ಲಡಬೇಕು. ಜನರು ಯೇಸು ಕ್ರಿಸ್ತನನ್ನು “ಲಕ್ಷ್ಯಕ್ಕೇ ತರಲಿಲ್ಲ,” ಆದರೆ ಇದು ದೇವರ ಎದುರು ಅವನ ನಿಜ ಮೌಲ್ಯವನ್ನು ಬದಲಾಯಿಸಲಿಲ್ಲ. (ಯೆಶಾಯ 53:3) ದೇವರು ತನ್ನ ಪ್ರಿಯ ಮಗನನ್ನು ಪ್ರೀತಿಸುವ ಹಾಗೆ, ನಿಮ್ಮನ್ನು ಕೂಡ ಪ್ರೀತಿಸುತ್ತಾನೆಂಬ ಭರವಸೆಯಿಂದಿರ್ರಿ.—ಯೋಹಾನ 3:16.
ಯೇಸು ಸಂಕಟದಲ್ಲಿ ಇದ್ದವರಿಗೆ ಕನಿಕರ ತೋರಿಸಿ, ಅವರು ತಮ್ಮ ವೈಯಕ್ತಿಕ ಮೌಲ್ಯವನ್ನು ನೋಡುವಂತೆ ಸಹಾಯ ಮಾಡಲು ಪ್ರಯತ್ನಿಸಿದನು. (ಮತ್ತಾಯ 9:36; 11:28-30; 14:14) ದೇವರು ಚಿಕ್ಕ, ಅಲ್ಪ ಗುಬ್ಬಿಗಳಿಗೆ ಕೂಡ ಮಹತ್ವ ಕೊಡುತ್ತಾನೆಂದು ಅವನು ವಿವರಿಸಿದನು. “ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತುಹೋಗುವದಿಲ್ಲ,” ಎಂದು ಆತನು ಹೇಳಿದನು. ತನ್ನ ಚಿತ್ತವನ್ನು ಮಾಡಲು ಪ್ರಯತ್ನಿಸುವ ಮನುಷ್ಯರನ್ನು ಆತನು ಎಷ್ಟೋ ಹೆಚ್ಚು ಬೆಲೆಯುಳ್ಳವರೆಂದು ಎಣಿಸುವನು! ಅಂಥವರ ಬಗ್ಗೆ ಯೇಸು ಹೇಳಿದ್ದು: “ನಿಮ್ಮ ತಲೆಕೂದಲುಗಳು ಸಹ ಎಲ್ಲವು ಎಣಿಕೆಯಾಗಿವೆ.”—ಲೂಕ 12:6, 7.
ನಿಜ, ತನ್ನ ಕುಂದು ಕೊರತೆಯಲ್ಲಿ ಪೂರ್ತಿ ಮುಳುಗಿರುವ, ಅತಿಯಾಗಿ ಮನಗುಂದಿರುವ ಒಬ್ಬ ವ್ಯಕ್ತಿಗೆ, ದೇವರು ತನ್ನನ್ನು ಅಷ್ಟು ಅಮೂಲ್ಯನೆಂದು ಎಣಿಸುತ್ತಾನೆಂದು ನಂಬಲು ಕಷ್ಟವಾಗಬಹುದು. ತಾನು ದೇವರ ಪ್ರೀತಿ ಮತ್ತು ಪರಾಮರಿಕೆಗೆ ನಿಶ್ಚಯವಾಗಿಯೂ ಅಯೋಗ್ಯನು ಎಂದು ಅವನಿಗೆ ಅನಿಸಬಹುದು. “ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ನಿರ್ಣಯಿಸಬಹುದು,” ಎಂದು ದೇವರ ವಾಕ್ಯವು ಒಪ್ಪುತ್ತದೆ. ಆದರೆ ಅದೇ ನಿರ್ಣಯಿಸುವಂತಹ ಅಂಶವಾಗಿದೆಯೇ? ಇಲ್ಲ, ಹಾಗಿಲ್ಲ. ಪಾಪಪೂರ್ಣ ಮಾನವರು ನಕಾರಾತ್ಮಕವಾಗಿ ಯೋಚಿಸಬಹುದೆಂದೂ, ತಮ್ಮನ್ನೇ ದೋಷಿಗಳೆಂದು ಖಂಡಿಸಬಹುದೆಂದೂ ದೇವರು ಗ್ರಹಿಸುತ್ತಾನೆ. ಆದುದರಿಂದ ಆತನ ವಾಕ್ಯವು ಅವರನ್ನು ಹೀಗೆ ಸಾಂತ್ವನಗೊಳಿಸುತ್ತದೆ: “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆ.”—1 ಯೋಹಾನ 3:19, 20.
ಹೌದು, ನಮ್ಮ ಪ್ರೀತಿಪರನಾದ ಪರಲೋಕದ ತಂದೆಯು ನಮ್ಮ ಪಾಪಗಳು ಹಾಗೂ ತಪ್ಪುಗಳಿಗಿಂತ ಹೆಚ್ಚಿನದನ್ನು ನೋಡುತ್ತಾನೆ. ದುರ್ಬಲ ಮಾಡುವ ಪರಿಸ್ಥಿತಿಗಳು, ನಮ್ಮ ಇಡೀ ಜೀವನ ಕ್ರಮ, ನಮ್ಮ ಉದ್ದೇಶ ಹಾಗೂ ಭಾವನೆಗಳ ಬಗ್ಗೆ ಆತನಿಗೆ ಗೊತ್ತಿದೆ. ನಾವು ಪಾಪ, ರೋಗ, ಮತ್ತು ಮರಣವನ್ನು ವಂಶಾನುಕ್ರಮವಾಗಿ ಪಡೆದಿದ್ದೇವೆ ಹಾಗೂ ನಮಗೆ ಹೆಚ್ಚಾದ ಮಿತಿಗಳುಂಟು ಎಂದು ಆತನಿಗೆ ಗೊತ್ತಿದೆ. ನಾವು ದುಃಖಿಸುವ ಮತ್ತು ನಮ್ಮ ಮೇಲೆಯೇ ಕೋಪಿಸಿಕೊಳ್ಳುವ ನಿಜತ್ವವು ತಾನೇ ನಾವು ಪಾಪ ಮಾಡಲು ಇಷ್ಟಪಡುವುದಿಲ್ಲ ಮತ್ತು ನಾವು ಬಹುದೂರ ಹೋಗಿಲ್ಲವೆಂದು ರುಜುಪಡಿಸುತ್ತದೆ. ನಾವು ನಮ್ಮ ಚಿತ್ತಕ್ಕೆ ವಿರುದ್ಧವಾಗಿ ‘ವ್ಯರ್ಥತ್ವಕ್ಕೆ ಒಳಗಾದೆವು’ ಎಂದು ಬೈಬಲ್ ಹೇಳುತ್ತದೆ. ಆದುದರಿಂದ ದೇವರು ನಮ್ಮ ರೋಮಾಪುರ 5:12; 8:20.
ದುಃಖಕರ ಅವಸ್ಥೆಗೆ ಅನುಕಂಪ ತೋರಿಸಿ, ನಮ್ಮ ಕುಂದುಗಳನ್ನು ಕನಿಕರದಿಂದ ಗಣನೆಗೆ ತಂದುಕೊಳ್ಳುತ್ತಾನೆ.—“ಯೆಹೋವನು ಕನಿಕರವೂ ದಯೆಯೂ ಉಳ್ಳವನು,” ಎಂದು ನಮಗೆ ಭರವಸೆ ನೀಡಲಾಗಿದೆ. “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೂ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:8, 12, 14) ನಿಜವಾಗಿಯೂ, ಯೆಹೋವನು “ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ” ಆಗಿದ್ದಾನೆ.—2 ಕೊರಿಂಥ 1:3, 4.
ಮನಗುಂದಿದವರಿಗೆ ಬೇಕಾಗುವ ಹೆಚ್ಚಿನ ಸಹಾಯವು ತಮ್ಮ ಕನಿಕರವುಳ್ಳ ದೇವರ ಹತ್ತಿರಕ್ಕೆ ಹೋಗುವುದರಿಂದ ಮತ್ತು ‘ಚಿಂತಾಭಾರವನ್ನು ಕರ್ತನ ಮೇಲೆ ಹಾಕು’ ಎಂಬ ಆತನ ಆಮಂತ್ರಣವನ್ನು ಸ್ವೀಕರಿಸುವ ಮೂಲಕ ಬರುತ್ತದೆ. ಆತನು ನಿಜವಾಗಿಯೂ ‘ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸಲು’ ಶಕ್ತನಾಗಿದ್ದಾನೆ. (ಕೀರ್ತನೆ 55:22; ಯೆಶಾಯ 57:15) ಆದುದರಿಂದ ದೇವರ ವಾಕ್ಯವು ಪ್ರಾರ್ಥನೆಯನ್ನು ಪ್ರೋತ್ಸಾಹಿಸುತ್ತಾ, ಹೀಗನ್ನುತ್ತದೆ: “ನಿಮ್ಮ ಚಿಂತೆಯನ್ನೆಲ್ಲಾ [ಯೆಹೋವನ] ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ಹೌದು, ಪ್ರಾರ್ಥನೆ ಮತ್ತು ವಿಜ್ಞಾಪನೆಗಳ ಮುಖಾಂತರ ವ್ಯಕ್ತಿಗಳು ದೇವರ ಹತ್ತಿರಕ್ಕೆ ಸೆಳೆಯಲ್ಪಡಬಲ್ಲರು ಮತ್ತು “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿ” ಯಲ್ಲಿ ಆನಂದಿಸಬಲ್ಲರು.—ಫಿಲಿಪ್ಪಿ 4:6, 7; ಕೀರ್ತನೆ 16:8, 9.
ಜೀವನಶೈಲಿಯಲ್ಲಿ ಪ್ರಾಯೋಗಿಕ ಹೊಂದಾಣಿಕೆಗಳು ಕೂಡ ಒಬ್ಬನು ಮನಗುಂದಿದ ಮನೋಸ್ಥಿತಿಯನ್ನು ಜಯಿಸಲು ಸಹಾಯ ಮಾಡಬಲ್ಲವು. ಶಾರೀರಿಕ ವ್ಯಾಯಾಮ, ಆರೋಗ್ಯಕರ ಆಹಾರವನ್ನು ತಿನ್ನುವುದು, ಶುದ್ಧ ಗಾಳಿ ಹಾಗೂ ಸಾಕಷ್ಟು ಆರಾಮವನ್ನು ಪಡೆಯುವುದು, ಮತ್ತು ಅತಿರೇಕ ಟಿವಿ ವೀಕ್ಷಣವನ್ನು ತ್ಯಜಿಸುವುದು ಇವೆಲ್ಲವು ಪ್ರಾಮುಖ್ಯವಾಗಿವೆ. ಒಬ್ಬಾಕೆ ಸ್ತ್ರೀಯು ಮನಗುಂದಿದವರನ್ನು, ಅವರು ರಭಸವಾಗಿ ನಡೆಯುವಂತೆ ಮಾಡುವುದರ ಮೂಲಕ ಸಹಾಯ ಮಾಡಿದ್ದಾಳೆ. ಮನಗುಂದಿದ ಒಬ್ಬ ಹೆಂಗಸು: “ನಾನು ನಡೆಯಲು ಬಯಸುವದಿಲ್ಲ” ಎಂದು ಹೇಳಿದಾಗ, ಆ ಸ್ತ್ರೀಯು ನಯವಾಗಿ, ಆದರೆ ದೃಢವಾಗಿ ಉತ್ತರಿಸಿದ್ದು: “ಹೌದು, ನೀನು ಹೋಗುವೆ.” ಆ ಸ್ತ್ರೀಯು ವರದಿಸಿದ್ದು: ‘ನಾವು ನಾಲ್ಕು ಮೈಲು ನಡೆದೆವು. ನಾವು ಹಿಂದಿರುಗಿದಾಗ, ಅವಳು ದಣಿದಿದ್ದರೂ, ತುಸು ಸುಧಾರಿಸಿಕೊಂಡಿದ್ದಳು. ರಭಸವಾದ ವ್ಯಾಯಾಮ ಎಷ್ಟು ಸಹಾಯಕಾರಿಯೆಂದು ಅದನ್ನು ಪ್ರಯೋಗಿಸುವ ತನಕ ನೀವು ನಂಬಲಾರಿರಿ.’
ಆದರೂ, ಕೆಲವು ಸಲ ವೈದ್ಯಕೀಯ ಚಿಕಿತ್ಸೆಯನ್ನು ಸೇರಿಸಿ, ಎಲ್ಲವನ್ನು ಪ್ರಯೋಗಿಸಿದ ಅನಂತರವೂ, ಮನಗುಂದುವಿಕೆಯನ್ನು ಸಂಪೂರ್ಣವಾಗಿ ಸೋಲಿಸಲು ಅಸಾಧ್ಯವಾಗುತ್ತದೆ. “ನಾನು ಎಲ್ಲವನ್ನೂ ಪ್ರಯೋಗಿಸಿದ್ದೇನೆ,” ಎಂದು ಮಧ್ಯ ವಯಸ್ಸಿನ ಒಬ್ಬ ಹೆಂಗಸು ಹೇಳಿದಳು, “ಆದರೆ ಮನಗುಂದುವಿಕೆ ಇನ್ನೂ ಉಳಿದಿದೆ.” ಅದೇ ರೀತಿಯಲ್ಲಿ, ಇಂದು ಅನೇಕ ಬಾರಿ ಕುರುಡರನ್ನು, ಕಿವುಡರನ್ನು, ಯಾ ಕುಂಟರನ್ನು ಗುಣಪಡಿಸಲು ಅಸಾಧ್ಯವಾಗುತ್ತದೆ. ಆದರೂ, ಮನಗುಂದಿದವರು ಎಲ್ಲಾ ಮಾನವ ರೋಮಾಪುರ 12:12; 15:4.
ಅಸ್ವಸ್ಥತೆಗಳಿಂದ ಶಾಶ್ವತವಾದ ಬಿಡುಗಡೆಯ ನಿಶ್ಚಯ ನಿರೀಕ್ಷೆಯನ್ನು ಒದಗಿಸುವ ದೇವರ ವಾಕ್ಯವನ್ನು ಕ್ರಮವಾಗಿ ಓದುವ ಮೂಲಕ ಸಾಂತ್ವನ ಮತ್ತು ನಿರೀಕ್ಷೆಯನ್ನು ಕಂಡುಕೊಳ್ಳಬಲ್ಲರು.—ಯಾರೂ ಮತ್ತೆ ಮನಗುಂದದೆ ಇರುವ ಸಮಯ
ಕಡೇ ದಿವಸಗಳಲ್ಲಿ ಭೂಮಿಯ ಮೇಲೆ ಬರುವ ಭಯಂಕರ ವಿಷಯಗಳನ್ನು ಯೇಸು ವಿವರಿಸಿದಾಗ, ಅವನು ಸೇರಿಸಿ ಹೇಳಿದ್ದು: “ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.” (ಲೂಕ 21:28) ಯೇಸು, ದೇವರ ನೀತಿಯ ಹೊಸ ಲೋಕದೊಳಗೆ, ಎಲ್ಲಿ “ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲು” ಹೊಂದುವದೋ, ಆ ಬಿಡುಗಡೆಯ ಕುರಿತು ಮಾತಾಡಿದನು.—ರೋಮಾಪುರ 8:21.
ಪೂರ್ವದ ಭಾರಗಳಿಂದ ಮುಕ್ತಾರಾಗಿರಲು ಮತ್ತು ಪ್ರತಿ ದಿನ ಸ್ಫಟಿಕದಂತೆ ಸ್ಪಷ್ಟವಾದ ಮನಸ್ಸಿನೊಂದಿಗೆ ಎದ್ದು, ಆ ದಿನದ ಕಾರ್ಯವನ್ನು ಎದುರಿಸಲು ಉತ್ಸಾಹದಿಂದ ಇರುವುದು ಮಾನವಕುಲಕ್ಕೆ ಅದೆಂತಹ ಬಿಡುಗಡೆಯಾಗಲಿರುವುದು! ಇನ್ನು ಮುಂದೆ ಯಾರೂ ಮನಗುಂದುವಿಕೆಯ ಮೋಡದಿಂದ ಪ್ರತಿಬಂಧಿತರಾಗರು. ಮಾನವಕುಲಕ್ಕೆ ಇರುವ ದೃಢ ವಾಗ್ದಾನವೇನಂದರೆ, ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4.
ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ ಉಪಯೋಗಿಸಲ್ಪಟ್ಟ ಬೈಬಲ್ ಭಾಷಾಂತರವು ‘ಇಂಡಿಯಾ ಸಿಲೋನ್ ದೇಶಗಳ ಸತ್ಯವೇದ ಸಂಘದ ಕನ್ನಡ ಬೈಬಲ್’ ಆಗಿದೆ.