ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 3

ಇತರರಿಂದಾದ ನೋವು—ನಮಗೆ ‘ದೂರುಹೊರಿಸಲು ಕಾರಣವಿದ್ದಾಗ’

ಇತರರಿಂದಾದ ನೋವು—ನಮಗೆ ‘ದೂರುಹೊರಿಸಲು ಕಾರಣವಿದ್ದಾಗ’

“ನನ್ನ ಸಭೆಯಲ್ಲಿದ್ದ ಒಬ್ಬ ಸಹೋದರಿ ನಾನು ಅವರ ದುಡ್ಡು ಕದ್ದಿದ್ದೇನೆಂದು ನನ್ನ ಮೇಲೆ ತಪ್ಪು ಆರೋಪ ಹೊರಿಸಿದರು. ಸಭೆಯಲ್ಲಿದ್ದ ಕೆಲವರು ಇದನ್ನು ನಂಬಿಯೇ ಬಿಟ್ಟರು. ಆದರೆ ಸ್ವಲ್ಪದರಲ್ಲೇ ನನ್ನದೇನು ತಪ್ಪಿಲ್ಲ ಅಂತ ಗೊತ್ತಾಗಿ ಆರೋಪ ಹೊರಿಸಿದ ಸಹೋದರಿ ನನ್ನ ಹತ್ತಿರ ಕ್ಷಮೆ ಕೇಳಿದರು. ಅವರೇನೋ ಸುಲಭವಾಗಿ ‘ನನ್ನನ್ನು ಕ್ಷಮಿಸಿಬಿಡಿ’ ಅಂತ ಹೇಳಿಬಿಟ್ಟರು. ಆದರೆ ‘ಅವರು ಹೇಳಿದಷ್ಟು ಸುಲಭವಾಗಿ ಕ್ಷಮಿಸಲಿಕ್ಕೆ ನನ್ನ ಕೈಲಿ ಆಗಲ್ಲ, ಸಾಯೋವರೆಗೂ ಆ ನೋವನ್ನು ಮರೆಯೋಕೆ ಸಾಧ್ಯನೇ ಇಲ್ಲ’ ಅಂತ ಅಂದುಕೊಂಡೆ.”—ಸಹೋದರಿ ಲಿಂಡಾ.

ಸಹೋದರಿ ಲಿಂಡಾಗೆ ಆದಂತೆ ನಿಮಗೂ ಜೊತೆ ಕ್ರೈಸ್ತರಿಂದ ಮನಸ್ಸಿಗೆ ನೋವಾಗಿದೆಯಾ? ದುಃಖಕರವಾಗಿ ಈ ರೀತಿ ಇತರರಿಂದ ನೋವನ್ನು ಅನುಭವಿಸಿರುವವರಲ್ಲಿ ಕೆಲವರು ಎಷ್ಟೊಂದು ದುಃಖಿತರಾದರೆಂದರೆ ಅವರು ಯೆಹೋವ ದೇವರಿಂದಲೇ ದೂರ ಹೋಗಿದ್ದಾರೆ. ನಿಮ್ಮ ವಿಷಯದಲ್ಲೂ ಹೀಗೇ ಆಗಿದೆಯಾ?

‘ದೇವರ ಪ್ರೀತಿಯಿಂದ ನಮ್ಮನ್ನು ಯಾರಾದರೂ ದೂರ ಮಾಡಲು’ ಸಾಧ್ಯನಾ?

ಜೊತೆ ಕ್ರೈಸ್ತರು ನಮಗೆ ನೋವು ಮಾಡಿದಾಗ ಅವರನ್ನು ಕ್ಷಮಿಸುವುದಕ್ಕೆ ತುಂಬ ಕಷ್ಟ ಅನ್ನುವುದು ನಿಜನೇ. ಕಾರಣ, ಕ್ರೈಸ್ತರು ಒಬ್ಬರನ್ನೊಬ್ಬರು ಮನಃಪೂರ್ವಕವಾಗಿ ಪ್ರೀತಿಸಬೇಕು. (ಯೋಹಾನ 13:34, 35) ಹಾಗಾಗಿ, ಒಡಹುಟ್ಟಿದವರಂತಿರುವ ನಮ್ಮ ಸಹೋದರ-ಸಹೋದರಿಯರು ನೋವು ಮಾಡಿದಾಗ ನಮಗಾಗುವ ದುಃಖ-ನಿರಾಸೆ ಅಷ್ಟಿಷ್ಟಲ್ಲ.—ಕೀರ್ತನೆ 55:12, 13.

ಕೆಲವೊಮ್ಮೆ ಕ್ರೈಸ್ತರಲ್ಲೂ ಒಬ್ಬರ ಮೇಲೊಬ್ಬರಿಗೆ ಮನಸ್ತಾಪಗಳು ಬಂದು ‘ದೂರುಹೊರಿಸಲು ಕಾರಣವಿರುತ್ತದೆ’ ಎಂದು ಬೈಬಲ್‌ ಸಹ ತಿಳಿಸುತ್ತದೆ. (ಕೊಲೊಸ್ಸೆ 3:13) ನಮಗೆ ಯಾರಿಂದಾದರೂ ನೋವಾದಾಗ ಆ ಪರಿಸ್ಥಿತಿಯನ್ನು ಸರಿಯಾಗಿ ಹೇಗೆ ನಿಭಾಯಿಸಬೇಕು ಎನ್ನುವುದು ತಿಳಿಯದೇ ಇರಬಹುದು. ಈ ವಿಷಯದಲ್ಲಿ ಸಹಾಯ ಮಾಡುವ ಮೂರು ಬೈಬಲ್‌ ಮೂಲತತ್ವಗಳನ್ನು ಈಗ ನೋಡೋಣ.

ದೇವರಿಗೆ ಎಲ್ಲಾ ಗೊತ್ತಿದೆ. ನಮಗಾಗಿರುವ ಅನ್ಯಾಯ, ನಾವು ಅನುಭವಿಸುವ ನೋವನ್ನು ಸೇರಿಸಿ ನಡೆದದ್ದೆಲ್ಲವನ್ನೂ ಯೆಹೋವ ದೇವರು ನೋಡಿರುತ್ತಾನೆ. (ಇಬ್ರಿಯ 4:13) ಜೊತೆಗೆ, ನಮಗಾಗುವ ನೋವನ್ನು ನೋಡಿ ಯೆಹೋವ ದೇವರೂ ದುಃಖ ಪಡುತ್ತಾನೆ. (ಯೆಶಾಯ 63:9) ‘ಕಷ್ಟ-ಸಂಕಟ’ ಅಥವಾ ನಮ್ಮ ಸಹೋದರರಿಂದಾಗುವ ನೋವು ಇದ್ಯಾವುದೂ ‘ತನ್ನ ಪ್ರೀತಿಯಿಂದ ನಮ್ಮನ್ನು ದೂರಮಾಡುವುದಕ್ಕೆ ಯೆಹೋವನು ಎಂದಿಗೂ ಬಿಡುವುದಿಲ್ಲ.’ (ರೋಮನ್ನರಿಗೆ 8:35, 38, 39) ಅಂದ ಮೇಲೆ, ಯಾವುದೇ ವಿಷಯ ಅಥವಾ ವ್ಯಕ್ತಿ ನಮ್ಮನ್ನು ಯೆಹೋವ ದೇವರಿಂದ ದೂರ ಮಾಡುವಂತೆ ನಾವು ಬಿಡಬಾರದಲ್ವಾ?

ಕ್ಷಮಿಸುವುದು ಅಂದರೆ ತಪ್ಪನ್ನು ನೋಡಿಯೂ ನೋಡದ ಹಾಗೆ ಇರುವುದು ಅಂತಲ್ಲ. ಇತರರ ತಪ್ಪನ್ನು ಕ್ಷಮಿಸುತ್ತಿದ್ದೇವೆಂದರೆ ಅದರರ್ಥ ಅವರು ಮಾಡಿದ್ದು ದೊಡ್ಡ ತಪ್ಪೇನಲ್ಲ ಅಂತಾನೋ, ಅವರ ತಪ್ಪನ್ನು ನೋಡಿಯೂ ನೋಡದೆ ಹಾಗೇ ಇರಬೇಕು ಅಂತಾನೋ ಅಥವಾ ಏನೂ ಮಾತಾಡದೆ ಬಿಟ್ಟುಬಿಡಬೇಕು ಅಂತಾನೋ ಅಲ್ಲ. ನೆನಪಿಡಿ, ಯೆಹೋವ ದೇವರು ಯಾವತ್ತೂ ಪಾಪವನ್ನು ಸಹಿಸುವುದಿಲ್ಲ, ಆದರೆ ಮಾಡಿದ ಪಾಪಕ್ಕೆ ನಿಜವಾದ ಪಶ್ಚಾತ್ತಾಪ ತೋರಿಸಿದರೆ ಅದನ್ನು ಕ್ಷಮಿಸಲು ಸದಾ ಸಿದ್ಧನಿರುತ್ತಾನೆ. (ಕೀರ್ತನೆ 103:12, 13; ಹಬಕ್ಕೂಕ 1:13) ಇತರರನ್ನು ಕ್ಷಮಿಸಿ ಎಂದು ನಮ್ಮನ್ನು ಉತ್ತೇಜಿಸುವಾಗ ‘ನನ್ನನ್ನು ಅನುಕರಿಸಿ’ ಎಂದು ಯೆಹೋವ ದೇವರು ನಮ್ಮನ್ನು ಕೇಳಿಕೊಳ್ಳುತ್ತಿದ್ದಾನೆ. ಯೆಹೋವ ದೇವರು ಕೋಪವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳವವನಲ್ಲ.—ಕೀರ್ತನೆ 103:9; ಮತ್ತಾಯ 6:14.

ನೋವನ್ನು ಮರೆತರೆ ನಮಗೇ ಪ್ರಯೋಜನ. ಅದು ಹೇಗೆ? ನೀವು ಒಂದು ಕಲ್ಲನ್ನು ಕೈಯಲ್ಲಿ ಹಿಡಿದುಕೊಂಡಿದ್ದೀರೆಂದು ಊಹಿಸಿ. ಅದರ ತೂಕ ಜಾಸ್ತಿಯೇನಿಲ್ಲ. ಅದನ್ನು ಹಿಡಿದುಕೊಂಡು ನಿಮ್ಮ ಕೈಯನ್ನು ಚಾಚಿದ್ದೀರ. ಸ್ವಲ್ಪ ಹೊತ್ತೇನೋ ಅದನ್ನು ಹಾಗೇ ಇಟ್ಟುಕೊಳ್ಳಬಹುದು. ಎಷ್ಟು ಹೊತ್ತು ಹಾಗೆ ಹಿಡಿದಿರಲು ಸಾಧ್ಯ? ಕೆಲವು ನಿಮಿಷಗಳು, ಗಂಟೆಗಳು ಅಥವಾ ಅದಕ್ಕಿಂತ ಇನ್ನೂ ಹೆಚ್ಚು ಹೊತ್ತು ಹಿಡಿದುಕೊಂಡೇ ಇದ್ದರೆ ಏನಾಗಬಹುದು? ಖಂಡಿತವಾಗಿ ನಿಮಗೆ ಕೈ ನೋವು ಬರುತ್ತದೆ. ಗಮನಿಸಿ, ಕಲ್ಲಿನ ತೂಕ ಜಾಸ್ತಿಯಾಗಲ್ಲ. ಆದರೆ ನೀವು ಕಲ್ಲನ್ನು ಹಾಗೇ ಹಿಡಿದುಕೊಂಡು ನಿಂತಿದ್ದರೆ ಅದರ ಭಾರ ಹೆಚ್ಚಾಗುತ್ತಾ ಹೋದಂತೆ ಅನಿಸುತ್ತದೆ. ನಮಗಾದ ಮನಸ್ತಾಪವನ್ನು, ನೋವನ್ನು ತುಂಬ ದಿನ ಮನಸ್ಸಿನಲ್ಲಿ ಇಟ್ಟುಕೊಂಡರೆ ನೋವು ಇನ್ನೂ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಂತೂ ಆಗಲ್ಲ. ಹಾಗಾಗಿಯೇ ಯೆಹೋವ ದೇವರು ನೋವನ್ನು ಮರೆಯಿರಿ ಅಂತ ನಮ್ಮನ್ನು ಉತ್ತೇಜಿಸುತ್ತಾನೆ. ಇದರಿಂದ ನಮಗೇ ಪ್ರಯೋಜನ.—ಜ್ಞಾನೋಕ್ತಿ 11:17.

ನೋವನ್ನು ಮರೆತರೆ ನಮಗೇ ಪ್ರಯೋಜನ

“ಯೆಹೋವ ದೇವರೇ ನನ್ನ ಜೊತೆ ಮಾತನಾಡುತ್ತಿದ್ದಾನೆ ಅಂತನಿಸಿತು”

ಸಹೋದರಿ ಮಾಡಿದ ನೋವನ್ನು ಮರೆಯಲು ಲಿಂಡಾಳಿಗೆ ಸಾಧ್ಯವಾಯಿತಾ? ‘ಕ್ಷಮಿಸುವುದರ ಬಗ್ಗೆ ಬೈಬಲ್‌ ವಚನಗಳಲ್ಲಿರುವ ಸಲಹೆಗಳನ್ನು ಓದಿ, ಧ್ಯಾನಿಸಿದ್ದರಿಂದ ಆ ನೋವನ್ನು ಮರೆತೆ’ ಎಂದಾಕೆ ಹೇಳುತ್ತಾಳೆ. (ಕೀರ್ತನೆ 130:3, 4) ನಾವು ಇತರರ ತಪ್ಪನ್ನು ಕ್ಷಮಿಸಿದರೆ ದೇವರು ನಮ್ಮ ತಪ್ಪನ್ನು ಕ್ಷಮಿಸುತ್ತಾನೆ ಎನ್ನುವ ಮಾತು ಲಿಂಡಾಳನ್ನು ಪ್ರಚೋದಿಸಿತು. (ಎಫೆಸ 4:32-5:2) ಆ ವಚನಗಳಲ್ಲಿರುವ ಭಾವನೆಗಳು ಅವಳನ್ನು ಎಷ್ಟು ಪ್ರಭಾವಿಸಿತೆಂದು ಅವಳ ಮಾತಲ್ಲೇ ಕೇಳಿ: “ಯೆಹೋವ ದೇವರೇ ನನ್ನ ಜೊತೆ ಮಾತನಾಡುತ್ತಿದ್ದಾನೆ ಅಂತನಿಸಿತು”.

ಈಗ ಲಿಂಡಾ ಯೆಹೋವ ದೇವರ ಸೇವೆಯನ್ನು ಇನ್ನೂ ಹೆಚ್ಚು ಸಂತೋಷದಿಂದ ಮಾಡುತ್ತಿದ್ದಾಳೆ. ಕಾರಣ ತನ್ನ ನೋವನ್ನೆಲ್ಲ ಮರೆತು ಆ ಸಹೋದರಿಯನ್ನು ಮನಸಾರೆ ಕ್ಷಮಿಸಿದ್ದಾಳೆ. ಅವರಿಬ್ಬರೂ ಈಗ ಆಪ್ತ ಸ್ನೇಹಿತೆಯರಾಗಿದ್ದಾರೆ. ಇತರರ ತಪ್ಪನ್ನು ಕ್ಷಮಿಸಲು ನಿಮಗೂ ಯೆಹೋವ ದೇವರು ಸಹಾಯ ಮಾಡುತ್ತಾನೆ ಎಂಬ ದೃಢ ಭರವಸೆ ನಿಮಗಿರಲಿ.