ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 1

‘ಕಳೆದುಹೋದ ಕುರಿಯನ್ನು ನಾನೇ ಹುಡುಕುವೆನು’

‘ಕಳೆದುಹೋದ ಕುರಿಯನ್ನು ನಾನೇ ಹುಡುಕುವೆನು’

ಹಸಿರನ್ನು ನೋಡಿ ಮೈಮರೆತ ಕುರಿ, ಹುಲ್ಲನ್ನು ಮೇಯುತ್ತಾ ಮುಂದೆ ಮುಂದೆ ಹೋಯಿತು. ಸ್ವಲ್ಪ ಸಮಯದ ನಂತರ ತಲೆ ಎತ್ತಿ ನೋಡಿದಾಗ, ಸುತ್ತಮುತ್ತ ಒಂದೇ ಒಂದು ಕುರಿನೂ ಇಲ್ಲ, ಕುರುಬನೂ ಕಾಣಿಸುತ್ತಿಲ್ಲ. ಕತ್ತಲು ಕವಿಯುತ್ತಿದೆ! ಕ್ರೂರ ಪ್ರಾಣಿಗಳು ತಿರುಗಾಡುತ್ತಿರುವ ಕಣಿವೆಯಲ್ಲಿ ಅದು ನಿಂತಿತ್ತು, ಹಾಗಾಗಿ ಕುರಿ ದಿಕ್ಕೇ ತೋಚದೆ ಕಂಗಾಲಾಗಿ ಹೋಯಿತು. ಅಷ್ಟರಲ್ಲೇ ಯಾರದೋ ಸ್ವರ ಕೇಳಿಸಿತು. ಕಿವಿನಿಮಿರಿಸಿ, ಸರಿಯಾಗಿ ಕೇಳಿಸಿಕೊಂಡಾಗ ‘ಅಬ್ಬಾ! ಅದು ನನ್ನ ಕುರುಬನ ಸ್ವರ’ ಅಂತ ನಿಟ್ಟುಸಿರು ಬಿಟ್ಟಿತು. ಕುರುಬನು ಓಡಿ ಬಂದು ಅದನ್ನು ತನ್ನ ಎದೆಗೆ ಅಪ್ಪಿಕೊಂಡು ಮುದ್ದಾಡಿ ತನ್ನ ಬಟ್ಟೆಯಲ್ಲಿ ಸುತ್ತಿ ಭದ್ರವಾಗಿ ತೆಗೆದುಕೊಂಡು ಹೋಗಿ ಮಂದೆಗೆ ಸೇರಿಸಿದನು.

ಯೆಹೋವನು ಸಹ ಪದೇ ಪದೇ ತನ್ನನ್ನು ಇಂಥ ಕುರುಬನಿಗೆ ಹೋಲಿಸಿಕೊಂಡಿದ್ದಾನೆ. ಆದ್ದರಿಂದಲೇ ಆತನು, ‘ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು, ನಾನೇ ಅವುಗಳನ್ನು ಪೋಷಿಸಿ, ಸಂರಕ್ಷಿಸುವೆನು’ ಎಂದು ಮಾತು ಕೊಟ್ಟಿದ್ದಾನೆ.—ಯೆಹೆಜ್ಕೇಲ 34:11, 12.

‘ನಾನು ಕಾಯುವ ಕುರಿಗಳು’

ಯೆಹೋವನ ಕುರಿಗಳು ಯಾರು? ಯೆಹೋವನನ್ನು ಪ್ರೀತಿಸಿ, ಆರಾಧಿಸುವವರೇ ಆತನ ಕುರಿಗಳು. ಆದ್ದರಿಂದಲೇ ಬೈಬಲ್‌ ಹೀಗೆ ಹೇಳುತ್ತದೆ: “ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ. ಆತನು ನಮ್ಮ ದೇವರು; ನಾವೋ ಆತನು ಪಾಲಿಸುವ ಪ್ರಜೆಯೂ ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ.” (ಕೀರ್ತನೆ 95:6, 7) ಕುರಿ ತನ್ನ ಕುರುಬನನ್ನು ಹಿಂಬಾಲಿಸುವಂತೆಯೇ ಯೆಹೋವನನ್ನು ಆತನ ಆರಾಧಕರು ಹಿಂಬಾಲಿಸಲು ಹಂಬಲಿಸುತ್ತಾರೆ. ಇದರರ್ಥ ಅವರು ತಪ್ಪೇ ಮಾಡುವುದಿಲ್ಲ ಎಂದಾ? ಖಂಡಿತ ಇಲ್ಲ. ದೇವರ ಸೇವಕರಲ್ಲಿ ಕೆಲವರು ‘ಚದರಿಹೋಗಿದ್ದಾರೆ’, ‘ತಪ್ಪಿಸಿಕೊಂಡಿದ್ದಾರೆ’ ಮತ್ತು ‘ದಾರಿತಪ್ಪಿ ತೊಳಲಿಹೋಗಿದ್ದಾರೆ.’ (ಯೆಹೆಜ್ಕೇಲ 34:12; ಮತ್ತಾಯ 15:24; 1 ಪೇತ್ರ 2:25) ಯಾರಾದರೂ ತನ್ನಿಂದ ದೂರ ಹೋದರೆ ಯೆಹೋವ ದೇವರು ಅವರನ್ನು ಮರೆತು ಬಿಡುವುದಿಲ್ಲ.

ಯೆಹೋವನು ಈಗಲೂ ನಿಮ್ಮ ಕುರುಬನಾಗಿದ್ದಾನೆ ಅಂತ ನಿಮಗನಿಸುತ್ತಾ? ಆತನು ಈಗಲೂ ನಿಮ್ಮ ಕುರುಬ ಅನ್ನಲು ಮೂರು ಕಾರಣಗಳನ್ನು ನೋಡೋಣ:

ಯೆಹೋವನು ನಮ್ಮ ಪೋಷಕ. ‘ನನ್ನ ಕುರಿಗಳಿಗೆ ಒಳ್ಳೆಯ ಹುಲ್ಲನ್ನು ಮೇಯಿಸುವೆನು, ಅವುಗಳು ಹುಲ್ಗಾವಲಿನಲ್ಲಿ ಮಲಗುವವು. ಹಸಿಹುಲ್ಲನ್ನು ಮೇಯುವವು’ ಎಂದು ಯೆಹೋವನು ಹೇಳಿದ್ದಾನೆ. (ಯೆಹೆಜ್ಕೇಲ 34:14) ನಮಗೆ ಅಗತ್ಯವಿರುವ, ಚೈತನ್ಯ ನೀಡುವ ಆಧ್ಯಾತ್ಮಿಕ ಆಹಾರ ನೀಡುವುದನ್ನು ಯೆಹೋವನು ಎಂದಿಗೂ ತಪ್ಪಿಸಿಲ್ಲ. ನಿಮ್ಮ ಪ್ರಾರ್ಥನೆಗೆ ಉತ್ತರ ಕೊಟ್ಟ ಯಾವುದಾದರೂ ಲೇಖನ, ಭಾಷಣ ಅಥವಾ ವಿಡಿಯೋ ನಿಮಗೆ ನೆನಪಿದೆಯಾ? ಆಗ ಯೆಹೋವನು ನಿಜವಾಗಿಯೂ ನಿಮ್ಮ ಬಗ್ಗೆ ಕಾಳಜಿ ತೋರಿಸುತ್ತಿದ್ದಾನೆ ಅಂತ ನಿಮಗನಿಸಿತ್ತಲ್ವಾ?

ಯೆಹೋವನು ನಮ್ಮ ಪಾಲಕ. “ತಪ್ಪಿಸಿಕೊಂಡದನ್ನು . . . ಮಂದೆಗೆ ಸೇರಿಸುವೆನು, ದುರ್ಬಲವಾದದ್ದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು.” (ಯೆಹೆಜ್ಕೇಲ 34:16) ಯೆಹೋವನು ಬಲಹೀನರಿಗೆ, ಚಿಂತೆಯಲ್ಲಿ ಮುಳುಗಿಹೋಗಿರುವವರಿಗೆ ಬಲ ಕೊಡುತ್ತಾನೆ. ಜೊತೆ ಆರಾಧಕರಿಂದ ಅಥವಾ ಇನ್ಯಾವುದೇ ಕಾರಣದಿಂದ ನೋವಾಗಿರುವವರಿಗೆ ಔಷಧಿ ಹಚ್ಚಿ ಗುಣಪಡಿಸುತ್ತಾನೆ. ತನ್ನಿಂದ ದೂರ ಹೋಗಿರುವವರನ್ನು ಮತ್ತು ದೋಷಿ ಭಾವನೆಯಿಂದ ಕುಗ್ಗಿಹೋದವರನ್ನು ಸಂತೈಸಿ ಮಂದೆಗೆ ಸೇರಿಸಿಕೊಳ್ಳುತ್ತಾನೆ.

ಯೆಹೋವನು ನಮ್ಮ ಸಂರಕ್ಷಕ. ‘ಚೆಲ್ಲಾಪಿಲ್ಲಿಯಾದ ಎಲ್ಲಾ ಸ್ಥಳಗಳಿಂದ ಅವುಗಳನ್ನು ಕಾಪಾಡುವೆನು.’ “ತಪ್ಪಿಸಿಕೊಂಡದನ್ನು ಹುಡುಕುವೆನು” ಎಂದು ಯೆಹೋವನು ಹೇಳಿದ್ದಾನೆ. (ಯೆಹೆಜ್ಕೇಲ 34:12, 13, 16) ಯಾರಾದರೊಬ್ಬರು ತಪ್ಪಿಹೋದಾಗ ಅವರು ಹಿಂದಿರುಗಿ ಬರುವುದೇ ಇಲ್ಲವೆಂದು ಯೆಹೋವನು ಖಂಡಿತ ನೆನಸಲ್ಲ. ಒಂದು ಕುರಿ ತಪ್ಪಿಹೋದರೂ ಆತನಿಗೆ ಗೊತ್ತಾಗುತ್ತದೆ, ಅದನ್ನು ಹುಡುಕುತ್ತಾನೆ. ಅದು ಸಿಕ್ಕಿದಾಗ ಆತನು ತುಂಬಾ ಸಂತೋಷಪಡುತ್ತಾನೆ. (ಮತ್ತಾಯ 18:12-14) ಹಾಗಾಗಿಯೇ, ಯೆಹೋವನು ತನ್ನ ಆರಾಧಕರನ್ನು “ನೀವು ನನ್ನ ಕುರಿಗಳು, ನನ್ನ ಕಾವಲಿನ ಕುರಿಗಳು” ಎಂದು ಕರೆದಿದ್ದಾನೆ. (ಯೆಹೆಜ್ಕೇಲ 34:31) ಆ ಕುರಿಗಳಲ್ಲಿ ನೀವು ಸಹ ಒಬ್ಬರು.

ಯಾರಾದರೊಬ್ಬರು ತಪ್ಪಿ ಹೋದಾಗ ಅವರು ಹಿಂದಿರುಗಿ ಬರುವುದೇ ಇಲ್ಲವೆಂದು ಯೆಹೋವನು ಖಂಡಿತ ನೆನಸಲ್ಲ. ಅವರು ಸಿಕ್ಕಿದಾಗ ಆತನ ಸಂತೋಷಕ್ಕೆ ಪಾರವೇ ಇರುವುದಿಲ್ಲ.

“ಪೂರ್ವಕಾಲದ ಸುಸ್ಥಿತಿಯನ್ನು ನಮಗೆ ಮತ್ತೆ ದಯಪಾಲಿಸು”

ಯೆಹೋವನು ನಿಮ್ಮನ್ನು ಹುಡುಕಿ, ಹಿಂದಿರುಗುವಂತೆ ಯಾಕೆ ಕರೆಯುತ್ತಿದ್ದಾನೆ? ಯಾಕೆಂದರೆ ನೀವು ಸಂತೋಷದಿಂದ ಇರಬೇಕು ಅಂತ ಆತನು ಬಯಸುತ್ತಾನೆ. ತನ್ನ ಕುರಿಗಳ ಮೇಲೆ ಆಶೀರ್ವಾದಗಳ ಮಳೆಯನ್ನೇ ಸುರಿಸುವೆನು ಎಂದು ಮಾತು ಕೊಟ್ಟಿದ್ದಾನೆ. (ಯೆಶಾಯ 44:3) ಇದು ಪೊಳ್ಳು ಮಾತಲ್ಲ. ನೀವು ಈಗಾಗಲೇ ಇದನ್ನು ಅನುಭವಿಸಿ ನೋಡಿದ್ದೀರಿ.

ಯೆಹೋವನ ಬಗ್ಗೆ ಮೊದಲ ಬಾರಿ ತಿಳಿದುಕೊಂಡಾಗ ನಿಮಗೆ ಹೇಗನಿಸಿತು ಎಂದು ನೆನಪಿಸಿಕೊಳ್ಳಿ. ದೇವರ ಹೆಸರ ಕುರಿತು ಮತ್ತು ಮಾನವರಿಗಾಗಿ ಆತನಿಗಿರುವ ಉದ್ದೇಶದ ಕುರಿತು ರೋಮಾಂಚನಗೊಳಿಸುವ ಸತ್ಯವನ್ನು ತಿಳಿದುಕೊಂಡಾಗ ನಿಮಗೆ ಹೇಗನಿಸಿತು? ಸಮ್ಮೇಳನ ಮತ್ತು ಅಧಿವೇಶನಗಳಲ್ಲಿ ಜೊತೆ ಕ್ರೈಸ್ತರ ಒಡನಾಟದಿಂದ ನಿಮಗೆಷ್ಟು ಸಂತೋಷ, ಚೈತನ್ಯ ಸಿಕ್ಕಿರಬೇಕಲ್ವಾ? ನೀವು ತಿಳಿಸಿದ ಸುವಾರ್ತೆಗೆ ಒಬ್ಬ ವ್ಯಕ್ತಿ ತುಂಬ ಆಸಕ್ತಿ ತೋರಿಸಿದಾಗ ನೀವು ಮನಸ್ಸಿನಲ್ಲೇ ಖುಷಿಯಿಂದ ಕುಣಿದು ಕುಪ್ಪಳಿಸಿರಬೇಕಲ್ವಾ?

ಈಗಲೂ ಕಾಲ ಮಿಂಚಿಲ್ಲ, ಅಂಥ ಸಂತೋಷವನ್ನು ನೀವು ಮತ್ತೆ ಪಡೆಯಬಹುದು. “ನಮ್ಮನ್ನು ನಿನ್ನ ಕಡೆಗೆ ತಿರುಗಿಸು; ನೀನು ತಿರುಗಿಸಿದ ಹಾಗೆ ತಿರುಗುವೆವು; ಪೂರ್ವಕಾಲದ ಸುಸ್ಥಿತಿಯನ್ನು ನಮಗೆ ಮತ್ತೆ ದಯಪಾಲಿಸು” ಎಂದು ಬೈಬಲ್‌ ಕಾಲದ ದೇವರ ಸೇವಕರು ಪ್ರಾರ್ಥಿಸಿದಾಗ ಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿದನು. (ಪ್ರಲಾಪಗಳು 5:21, 22) ಪರಿಣಾಮ, ಅವರು ನವೋಲ್ಲಾಸದಿಂದ ಯೆಹೋವನನ್ನು ಆರಾಧಿಸಲು ಪುನಃ ಬಂದರು. (ನೆಹೆಮೀಯ 8:17) ಅವರಿಗೆ ಸಹಾಯ ಮಾಡಿದಂತೆಯೇ ಯೆಹೋವನು ನಿಮಗೂ ಸಹಾಯ ಮಾಡಲು ಹಂಬಲಿಸುತ್ತಿದ್ದಾನೆ.

ಯೆಹೋವನ ಹತ್ತಿರಕ್ಕೆ ಹಿಂತಿರುಗಿ ಬರುವುದು ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ ಅನ್ನುವುದೇನೋ ನಿಜ. ಆದ್ದರಿಂದ ಹಿಂದಿರುಗಿ ಬರುವಾಗ ಯಾವೆಲ್ಲಾ ಅಡ್ಡಿಗಳು ಎದುರಾಗಬಹುದು ಮತ್ತು ಅವುಗಳನ್ನು ಹೇಗೆ ಜಯಿಸಬಹುದು ಎಂದು ತಿಳಿದುಕೊಳ್ಳೋಣ.