ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 2

ಚಿಂತೆ-ಒತ್ತಡ—“ಎಲ್ಲ ವಿಧಗಳಲ್ಲಿ ಅದುಮಲ್ಪಟ್ಟಿದ್ದೇವೆ”

ಚಿಂತೆ-ಒತ್ತಡ—“ಎಲ್ಲ ವಿಧಗಳಲ್ಲಿ ಅದುಮಲ್ಪಟ್ಟಿದ್ದೇವೆ”

“ಮದುವೆಯಾಗಿ 25 ವರ್ಷಕ್ಕೆ ನಾನು ನನ್ನ ಗಂಡ ವಿಚ್ಛೇದನ ತೆಗೆದುಕೊಂಡೆವು. ನನ್ನ ಮಕ್ಕಳು ಸತ್ಯವನ್ನು ಬಿಟ್ಟು ಹೋದರು. ನನಗೆ ಒಂದರ ಮೇಲೆ ಒಂದು ಕಾಯಿಲೆ ಬರಲು ಶುರುವಾಯಿತು. ಹಗಲು ರಾತ್ರಿ ನೊಂದು ನೊಂದು ಮನಗುಂದಿ ಹೋದೆ. ಆಕಾಶವೇ ನನ್ನ ತಲೆ ಮೇಲೆ ಕಳಚಿ ಬಿದ್ದ ಹಾಗೆ ಅನಿಸುತ್ತಿತ್ತು. ಜೀವನ ಸಾಕಾಗಿ ಹೋಯ್ತು, ಇನ್ನು ನನ್ನ ಕೈಯಲ್ಲಿ ಸಹಿಸಿಕೊಳ್ಳಲು ಆಗಲ್ಲ ಅಂತ ಅನಿಸಿತು. ಕೂಟಗಳಿಗೆ ಹೋಗುವುದನ್ನೂ ನಿಲ್ಲಿಸಿಬಿಟ್ಟೆ, ಕೊನೆಗೆ ನಿಷ್ಕ್ರಿಯಳಾಗಿ ಹೋದೆ.”—ಸಹೋದರಿ ಜೂನ್‌.

ಚಿಂತೆ ಮಾಡದವರು ಯಾರೂ ಇಲ್ಲ. ದೇವರ ಸೇವಕರಿಗೂ ಚಿಂತೆಗಳಿವೆ. ‘ನನ್ನಲ್ಲಿ ಅನೇಕ ಚಿಂತೆಗಳಿವೆ’ ಎಂದು ಕೀರ್ತನೆಗಾರನೂ ಹೇಳಿದನು. (ಕೀರ್ತನೆ 94:19) ಕಡೇ ದಿವಸಗಳಲ್ಲಿ, “ಜೀವನದ ಚಿಂತೆಗಳಿಂದ” ದೇವರ ಸೇವೆ ಮಾಡಲು ಕಷ್ಟವಾಗಬಹುದೆಂದು ಯೇಸು ಸಹ ಹೇಳಿದ್ದನು. (ಲೂಕ 21:34) ನಿಮ್ಮ ಬಗ್ಗೆ ಏನು? ಹಣಕಾಸಿನ ತೊಂದರೆ, ಕುಟುಂಬದ ತಾಪತ್ರಯ ಮತ್ತು ಅನಾರೋಗ್ಯದ ಸಮಸ್ಯೆಗಳಿಂದ ನೀವು ಚಿಂತೆಯಲ್ಲಿ ಮುಳುಗಿ ಹೋಗಿದ್ದೀರಾ? ಅವನ್ನು ಸಹಿಸಿಕೊಳ್ಳಲು ಯೆಹೋವ ದೇವರು ನಿಮಗೆ ಹೇಗೆ ಸಹಾಯ ಮಾಡುತ್ತಾನೆ? ನೋಡೋಣ ಬನ್ನಿ.

‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ ಕೊಡುತ್ತಾನೆ’

ನಮ್ಮ ಸ್ವಂತ ಶಕ್ತಿ-ಸಾಮರ್ಥ್ಯದಿಂದ ನಾವು ಚಿಂತೆಗಳನ್ನು ಜಯಿಸಲು ಆಗುವುದಿಲ್ಲ. ಪೌಲನು ಹೇಳಿದಂತೆ ‘ನಾವು ಎಲ್ಲ ವಿಧಗಳಲ್ಲಿ ಅದುಮಲ್ಪಟ್ಟಿದ್ದೇವೆ, ದಿಕ್ಕುಕಾಣದವರಾಗಿದ್ದೇವೆ, ಕೆಡವಲ್ಪಟ್ಟಿದ್ದೇವೆ’ ನಿಜ. ಆದರೆ ಇವುಗಳಿಂದ ‘ಹೊರಬರದಿರುವಷ್ಟು ನಿರ್ಬಂಧಿಸಲ್ಪಟ್ಟಿಲ್ಲ, ದಾರಿ ಕಾಣದವರಾಗಿಲ್ಲ ಮತ್ತು ಈ ಚಿಂತೆಗಳಿಂದ ನಾವು ನಾಶವಾಗುವವರೂ ಅಲ್ಲ.’ ಕಾರಣ, “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಚಿಂತೆಗಳ ಮಧ್ಯದಲ್ಲೂ ನೆಮ್ಮದಿಯಿಂದಿರಲು ನಮಗೆ ಸಹಾಯ ಮಾಡುತ್ತದೆ. ಈ ಶಕ್ತಿಯನ್ನು ನಮ್ಮೆಲ್ಲರ ತಂದೆಯಾದ ಯೆಹೋವ ದೇವರು ಕೊಡುತ್ತಾನೆ.—2 ಕೊರಿಂಥ 4:7-9.

“ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ನಿಮಗೆ ಈ ಹಿಂದೆ ನಿಮಗೆ ಹೇಗೆ ಸಿಕ್ಕಿತ್ತು ಎಂದು ಸ್ವಲ್ಪ ಯೋಚಿಸಿ ನೋಡಿ. ಯೆಹೋವನು ನಿಮ್ಮನ್ನು ಎಷ್ಟು ಪ್ರೀತಿಸುತ್ತಾನೆಂದು ನೀವು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿದ ಯಾವುದಾದರೂ ಭಾಷಣ ನಿಮಗೆ ನೆನಪಿದೆಯಾ? ಇತರರಿಗೆ ಸುವಾರ್ತೆ ಸಾರಿದಾಗ ಯೆಹೋವನ ವಾಗ್ದಾನಗಳಲ್ಲಿ ನಿಮ್ಮ ನಂಬಿಕೆ ಹೆಚ್ಚಾಗಿತ್ತಲ್ವಾ? ಆದ್ದರಿಂದ, ಕೂಟಗಳಿಗೆ ಈಗಲೂ ಹಾಜರಾಗಿ, ನಿಮ್ಮ ನಂಬಿಕೆಯನ್ನು ಇತರರಿಗೆ ತಿಳಿಸಿ. ಆಗ ಜೀವನದ ಚಿಂತೆಗಳನ್ನು ಎದುರಿಸಲು ಬಲ ಮತ್ತು ಮನಶ್ಶಾಂತಿ ಪಡೆದುಕೊಳ್ಳುತ್ತೀರಿ. ಯೆಹೋವನ ಸೇವೆಯನ್ನೂ ಆನಂದದಿಂದ ಮಾಡುತ್ತೀರಿ.

ಯೆಹೋವನು ಒಳ್ಳೆಯವನೆಂದು ಸವಿದು ನೋಡಿರಿ

ಕೆಲವೊಮ್ಮೆ, ‘ಇದು ಮಾಡಬೇಕಾ ಅದು ಮಾಡಬೇಕಾ’ ಅನ್ನುವ ಗೊಂದಲ ನಿಮಗೆ ಇರಬಹುದು. ಉದಾಹರಣೆಗೆ, ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಟ್ಟು, ಆಧ್ಯಾತ್ಮಿಕ ವಿಷಯಗಳ ಒಳ್ಳೆ ರೂಢಿ ಇಟ್ಟುಕೊಳ್ಳಿ ಎಂದು ಯೆಹೋವ ದೇವರು ಹೇಳಿದ್ದಾನೆ. (ಮತ್ತಾಯ 6:33; ಲೂಕ 13:24) ಆದರೆ ‘ಕಾಯಿಲೆಗಳು, ಹಿಂಸೆ ಮತ್ತು ಕುಟುಂಬ ಸಮಸ್ಯೆಗಳು ಈಗಾಗಲೇ ನನ್ನ ಶಕ್ತಿಯನ್ನೆಲ್ಲಾ ಹೀರಿ ಬಿಡುತ್ತಿದೆ ಅಥವಾ ಕೆಲಸದಲ್ಲೇ ನನ್ನ ಸಮಯವೆಲ್ಲಾ ಕಳೆದು ಹೋಗಿ ಸೇವೆಗೆ, ಕೂಟಗಳಿಗೆ ಸಮಯವೇ ಉಳಿಯುತ್ತಿಲ್ಲವಲ್ಲಾ’ ಅಂತ ನೀವು ಚಿಂತಿಸಬಹುದು. ‘ಇರೋ ಇಷ್ಟು ಕಡಿಮೆ ಸಮಯದಲ್ಲಿ ಇದನೆಲ್ಲಾ ಹೇಗೆ ನಿಭಾಯಿಸಲಿ?’ ಎಂದು ಯೋಚಿಸಿ ಯೋಚಿಸಿ ನಿಮ್ಮ ಚಿಂತೆ ದುಪ್ಪಟ್ಟಾಗಬಹುದು. ‘ಯೆಹೋವನು ನಮ್ಮ ಕೈಯಲ್ಲಿ ಆಗುವುದಕ್ಕಿಂತ ಹೆಚ್ಚು ಕೇಳ್ತಿದ್ದಾನೆ’ ಎಂದು ಸಹ ಕೆಲವೊಮ್ಮೆ ನಿಮಗೆ ಅನಿಸಬಹುದು.

ಆದರೆ ದಯವಿಟ್ಟು ನೆನೆಪಿಡಿ, ನಮ್ಮ ಪರಿಸ್ಥಿತಿಯನ್ನು ನಮಗಿಂತಲೂ ಚೆನ್ನಾಗಿ ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ. ಆದ್ದರಿಂದ ನಮ್ಮ ಕೈಲಾಗುವುದಕ್ಕಿಂತ ಹೆಚ್ಚನ್ನು ಆತನು ಎಂದೂ ಕೇಳುವುದಿಲ್ಲ. ನಮಗಿರುವ ದೈಹಿಕ ಬಳಲುವಿಕೆ ಮತ್ತು ಮಾನಸಿಕ ಒತ್ತಡಗಳಿಂದ ಹೊರ ಬರಲು ಸಮಯ ಬೇಕಾಗುತ್ತದೆ ಎಂದು ಆತನಿಗೆ ಚೆನ್ನಾಗಿ ತಿಳಿದಿದೆ.—ಕೀರ್ತನೆ 103:13, 14.

ಈ ವಿಷಯವನ್ನು ಯೆಹೋವನು ಎಲೀಯನಿಗೆ ಕಾಳಜಿ ತೋರಿಸಿದ ವಿಧದಿಂದ ತಿಳಿದುಕೊಳ್ಳಬಹುದು. ಎಲೀಯ ಧೈರ್ಯಗುಂದಿ, ಭಯಭೀತನಾಗಿ ಕಾಡಿಗೆ ಓಡಿಹೋದಾಗ, ಯೆಹೋವ ದೇವರು ಅವನನ್ನು ತನ್ನ ಕೆಲಸಕ್ಕೆ ಮರಳುವಂತೆ ಗದರಿಸಿದನಾ? ಇಲ್ಲ. ಬಳಲಿ ನಿದ್ದೆ ಹೋಗಿದ್ದ ಎಲೀಯನನ್ನು ಮೆಲ್ಲನೆ ಎಬ್ಬಿಸಲು ಮತ್ತು ಅವನಿಗೆ ಆಹಾರವನ್ನು ನೀಡಲು ಎರಡು ಬಾರಿ ದೇವದೂತನೊಬ್ಬನನ್ನು ಯೆಹೋವನು ಕಳುಹಿಸಿದನು. ಅಷ್ಟು ಸಹಾಯ ನೀಡಿದರೂ ಸುಮಾರು 40 ದಿನಗಳಾದ ಮೇಲೆ ಎಲೀಯ ಇನ್ನೂ ಚಿಂತಾಕ್ರಾಂತನಾಗಿ, ಭಯಭೀತನಾಗಿಯೇ ಇದ್ದ. ಅವನಿಗೆ ಹೆಚ್ಚಿನ ಸಹಾಯ ಮಾಡಲು ಯೆಹೋವನು ಇನ್ನೇನು ಮಾಡಿದನು? ಮೊದಲಿಗೆ, ಅವನನ್ನು ಕಾಪಾಡುವ ಶಕ್ತಿ ತನಗಿದೆಯೆಂದು ತೋರಿಸಿದನು. ನಂತರ, ಸೌಮ್ಯವಾಗಿ ಮಾತಾಡುವ ಮೂಲಕ ಎಲೀಯನನ್ನು ಸಂತೈಸಿದನು. ಕೊನೆಗೆ, ತನ್ನ ಆರಾಧಕರಲ್ಲಿ ಇನ್ನೂ ಸಾವಿರಾರು ಜನ ಬದುಕಿದ್ದಾರೆ ಎನ್ನುವ ಸತ್ಯಾಂಶವನ್ನು ತಿಳಿಸಿ ಅವನನ್ನು ಸಮಾಧಾನಪಡಿಸಿದನು. ಇದರಿಂದ ಸ್ವಲ್ಪದರಲ್ಲೇ ಎಲೀಯ ನವಚೈತನ್ಯದಿಂದ ತನ್ನ ಸೇವೆಯನ್ನು ಮುಂದುವರಿಸಿದನು. (1 ಅರಸುಗಳು 19:1-19) ಇದರಿಂದ ನಮಗೇನು ತಿಳಿಯುತ್ತದೆ? ಎಲೀಯನು ಚಿಂತೆಗೀಡಾದಾಗ ತಕ್ಷಣವೇ ಅದರಿಂದ ಹೊರಬರಬೇಕೆಂದು ದೇವರು ಬಯಸಲಿಲ್ಲ. ಬದಲಿಗೆ ಅವನಿಗೆ ತಾಳ್ಮೆ, ದಯೆ ತೋರಿಸಿದನು. ಯೆಹೋವನು ಬದಲಾಗಿಲ್ಲ. ಅಂದು ಎಲೀಯನನ್ನು ಹೇಗೆ ಪ್ರೀತಿಯಿಂದ ನೋಡಿಕೊಂಡನೋ ಇಂದು ನಿಮ್ಮನ್ನೂ ಹಾಗೇ ನೋಡಿಕೊಳ್ಳುತ್ತಾನೆ.

ನೀವು ಪುನಃ ಯೆಹೋವನ ಸೇವೆ ಮಾಡಲು ಯೋಚಿಸುವಾಗ ಹಿಂದೆ ಮಾಡುತ್ತಿದ್ದಷ್ಟೇ ಸೇವೆಯನ್ನು ಈಗಲೂ ಮಾಡಬೇಕು ಎಂದು ಯೋಚಿಸಬೇಡಿ. ಯಾಕೆ? ಈ ಉದಾಹರಣೆ ನೋಡಿ: ಒಬ್ಬ ಓಟಗಾರ ಸುಮಾರು ತಿಂಗಳು ಅಥವಾ ವರ್ಷಗಳ ನಂತರ ಈಗ ಮತ್ತೆ ಓಡಲು ಶುರುಮಾಡಿದ್ದಾನೆಂದು ಊಹಿಸಿ. ಅವನು ತಕ್ಷಣವೇ ಮೊದಲು ಓಡುತ್ತಿದ್ದಷ್ಟೇ ವೇಗದಲ್ಲಿ ಓಡಬೇಕು ಎಂದು ಯೋಚಿಸುವುದು ಸರಿನಾ? ಸ್ವಲ್ಪ ಸ್ವಲ್ಪ ವ್ಯಾಯಾಮ ಮಾಡುತ್ತಾ ದಿನದಿಂದ ದಿನಕ್ಕೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳಬೇಕು. ಕ್ರೈಸ್ತರು ಕೂಡ ಓಟಗಾರರಂತಿದ್ದಾರೆ. ಆದ್ದರಿಂದ ನಿಧಾನವಾಗಿ ಪ್ರಗತಿ ಮಾಡಬೇಕು. (1 ಕೊರಿಂಥ 9:24-27) ನಿಮ್ಮ ಈಗಿನ ಪರಿಸ್ಥಿತಿಯಲ್ಲಿ ನೀವು ಯಾವುದಾದರೂ ಒಂದು ಗುರಿಯನ್ನಿಟ್ಟು ಅದನ್ನು ತಲುಪಲು ಪ್ರಯತ್ನಿಸಿ. ಉದಾಹರಣೆಗೆ, ಮೊದಲು ಕೂಟಗಳಿಗೆ ಹಾಜರಾಗುವ ಗುರಿಯನ್ನು ಇಡಬಹುದು. ಈ ಗುರಿಯನ್ನು ತಲುಪಲು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿ. ಕ್ರಮೇಣ ನೀವು ಆಧ್ಯಾತ್ಮಿಕ ಬಲವನ್ನು ಪಡೆಯುತ್ತಿದ್ದಂತೆ ‘ಯೆಹೋವನು ಒಳ್ಳೆಯವನೆಂದು ಅನುಭವದಿಂದ ಸವಿದು ನೋಡುವಿರಿ.’ (ಕೀರ್ತನೆ 34:8) ಯೆಹೋವನನ್ನು ನೀವು ಪ್ರೀತಿಸುತ್ತೀರೆಂದು ತೋರಿಸಲು ನೀವು ಒಂದು ಚಿಕ್ಕ ವಿಷಯವನ್ನು ಮಾಡಿದರೂ ಯೆಹೋವನು ಅದನ್ನು ಅತ್ಯಮೂಲ್ಯವೆಂದು ಎಣಿಸುತ್ತಾನೆ ಎನ್ನುವುದಂತೂ ನೂರಕ್ಕೆ ನೂರು ಸತ್ಯ.—ಲೂಕ 21:1-4.

ಯೆಹೋವನು ನಮ್ಮ ಕೈಯಲ್ಲಿ ಆಗುವುದಕ್ಕಿಂತ ಹೆಚ್ಚನ್ನು ನಿರೀಕ್ಷಿಸುವುದಿಲ್ಲ

“ನನಗೆ ಸಿಕ್ಕಿದ ಬಲ, ಚೈತನ್ಯ ಅಷ್ಟಿಷ್ಟಲ್ಲ”

ಆರಂಭದಲ್ಲಿ ತಿಳಿಸಲಾದ ಸಹೋದರಿ ಜೂನ್‌ಗೆ ಹಿಂದಿರುಗಿ ಬರಲು ಯೆಹೋವನು ಹೇಗೆ ಸಹಾಯ ಮಾಡಿದನು? ಆಕೆಯ ಮಾತಲ್ಲೇ ಕೇಳಿ, “ನಾನು ಯಾವಾಗಲೂ ಯೆಹೋವ ದೇವರ ಹತ್ತಿರ ‘ನನಗೆ ಸಹಾಯ ಮಾಡು’ ಎಂದು ಪ್ರಾರ್ಥಿಸುತ್ತಾ ಇದ್ದೆ. ಒಂದು ದಿನ ನನ್ನ ಸೊಸೆ ನಮ್ಮೂರಲ್ಲಿ ನಡೆಯಲಿದ್ದ ಸಮ್ಮೇಳನದ ಬಗ್ಗೆ ಹೇಳಿದಳು. ಆ ಸಮ್ಮೇಳನಕ್ಕೆ ಒಂದು ದಿನವಾದರೂ ಹೋಗಬೇಕು ಅಂತ ನಿರ್ಧರಿಸಿದೆ. ನಿಜ ಹೇಳ್ತೀನಿ, ಮತ್ತೆ ಯೆಹೋವನ ಜನರಗೆ ಹತ್ತಿರ ಹೋಗಿದ್ದು, ಯೆಹೋವನ ಬಳಿಗೆ ಮರಳಿದಂಥ ರೋಮಾಂಚಕ ಅನುಭವ ಕೊಟ್ಟಿತು. ಆ ಸಮ್ಮೇಳನದಲ್ಲಿ ನನಗೆ ಸಿಕ್ಕಿದ ಬಲ, ಚೈತನ್ಯ ಅಷ್ಟಿಷ್ಟಲ್ಲ. ಈಗ ನಾನು ಯೆಹೋವನನ್ನು ಪುನಃ ನವೋಲ್ಲಾಸದಿಂದ ಆರಾಧಿಸುತ್ತಿದ್ದೇನೆ. ನನ್ನ ಜೀವನಕ್ಕೊಂದು ಅರ್ಥ ಸಿಕ್ಕಿದೆ. ನನಗೆ ಸಹೋದರ ಸಹೋದರಿಯರ ಅಗತ್ಯ ಇದೆ ಮತ್ತು ಅವರು ಸಹಾಯ ನೀಡುವಾಗ ಅದನ್ನು ಪಡೆದುಕೊಳ್ಳಬೇಕು ಅಂತ ಈಗ ತಿಳಿದುಕೊಂಡಿದ್ದೇನೆ. ಅಂತ್ಯ ಬರುವ ಮೊದಲೇ ಹಿಂತಿರುಗಿ ಬರಲು ಅವಕಾಶ ಕೊಟ್ಟದ್ದಕ್ಕಾಗಿ ನಾನು ಯೆಹೋವನಿಗೆ ಸದಾ ಸರ್ವದಾ ಕೃತಜ್ಞಳು.”