ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 4

ದೋಷಿ ಭಾವನೆ—“ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು”

ದೋಷಿ ಭಾವನೆ—“ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು”

“ನನಗೆ ಸಿಕ್ಕಿದ ಹೊಸ ಕೆಲಸದಿಂದ ನಾವು ಶ್ರೀಮಂತರಾಗಿಬಿಟ್ಟೆವು. ಆದರೆ ಈ ಕೆಲಸದಿಂದಾಗಿ ಹಬ್ಬಗಳನ್ನು ಆಚರಿಸಲಿಕ್ಕೆ ಶುರುಮಾಡಿದೆ, ರಾಜಕೀಯ ವಿಷಯಗಳಲ್ಲೂ ಭಾಗವಹಿಸಿದೆ, ಚರ್ಚ್‌ಗೂ ಹೋಗುತ್ತಿದ್ದೆ. ಹೀಗೆ ಬರೋಬ್ಬರಿ 40 ವರ್ಷಗಳು ನಿಷ್ಕ್ರಿಯ ಪ್ರಚಾರಕಳಾದೆ. ಆದರೆ ಮನಸ್ಸಿನ ಮೂಲೆಯಲ್ಲಿ ‘ಯೆಹೋವ ದೇವರು ನನ್ನನ್ನು ಕ್ಷಮಿಸಲ್ಲ’ ಎನ್ನುವ ದೋಷಿ ಮನೋಭಾವ ಕಿತ್ತು ತಿನ್ನುತ್ತಿತ್ತು. ದಿನೇ ದಿನೇ ಅದು ಹೆಚ್ಚಾಗುತ್ತಿತ್ತು. ನಾನು ಮಾಡುತ್ತಿರುವುದು ಸತ್ಯಕ್ಕೆ ವಿರುದ್ಧವಾಗಿದೆ ಅಂತ ಗೊತ್ತಿದ್ದರೂ ಅದನ್ನೇ ಮಾಡುತ್ತಿದ್ದೆ. ಹಾಗಾಗಿ ‘ನಾನು ತುಂಬ ತಪ್ಪು ಮಾಡಿದ್ದೇನೆ’ ಅಂತ ಯಾವಾಗಲೂ ಕೊರಗುತ್ತಿದ್ದೆ.”—ಸಹೋದರಿ ಮಾರ್ಥ.

ದೋಷಿ ಭಾವನೆಯಿಂದ ಕುಗ್ಗಿ ಹೋಗಿದ್ದ ರಾಜ ದಾವೀದ, “ನನ್ನ ಅಪರಾಧಗಳು ನನ್ನನ್ನು ಮುಣುಗಿಸಿಬಿಟ್ಟವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತೆ ನನ್ನನ್ನು ಅದಿಮಿಬಿಟ್ಟಿವೆ” ಎಂದು ಬರೆದನು. (ಕೀರ್ತನೆ 38:4) ಹೌದು, ದೋಷಿ ಭಾವನೆ ನಮ್ಮ ಹೃದಯವನ್ನು ಹಿಂಡಿ ಹಾಕುತ್ತದೆ. ಕೆಲವು ಕ್ರೈಸ್ತರು ‘ನಾನು ಮಾಡಿದ ತಪ್ಪಿಗೆ ಯೆಹೋವನು ಖಂಡಿತ ನನ್ನನ್ನು ಕ್ಷಮಿಸುವುದಿಲ್ಲ’ ಅಂತ ತುಂಬ ಕೊರಗುತ್ತಲೇ ಇರುತ್ತಾರೆ. (2 ಕೊರಿಂಥ 2:7) ಆ ರೀತಿ ಕೊರಗುವುದು ಸರೀನಾ? ನೆನಪಿಡಿ, ನೀವು ಎಷ್ಟೇ ಘೋರವಾದ ತಪ್ಪು ಮಾಡಿದ್ದರೂ ಪಶ್ಚಾತ್ತಾಪ ಪಟ್ಟರೆ ಯೆಹೋವನು ಖಂಡಿತ ನಿಮ್ಮನ್ನು ಕ್ಷಮಿಸುತ್ತಾನೆ.

‘ಬನ್ನಿರಿ ವಿಷಯಗಳನ್ನು ಸರಿಪಡಿಸಿಕೊಳ್ಳೋಣ’

ಪಶ್ಚಾತ್ತಾಪ ಪಡುವವರನ್ನು ಯೆಹೋವನು ಎಂದಿಗೂ ತಿರಸ್ಕರಿಸುವುದಿಲ್ಲ. ಬದಲಿಗೆ ಅವರನ್ನು ಮತ್ತೆ ಮಂದೆಗೆ ಸೇರಿಸಲು ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾನೆ. ಪೋಲಿ ಹೋದ ಮಗನ ದೃಷ್ಟಾಂತವನ್ನು ಯೇಸು ಹೇಳುತ್ತಾ ಅದರಲ್ಲಿದ್ದ ತಂದೆಯನ್ನು ಯೆಹೋವ ದೇವರಿಗೆ ಹೋಲಿಸಿದನು. ಆ ದೃಷ್ಟಾಂತದಲ್ಲಿ ಮಗನು, ತನ್ನ ತಂದೆಯನ್ನೂ ಮನೆಯನ್ನೂ ಬಿಟ್ಟುಹೋಗಿ ನೀತಿಗೆಟ್ಟ ಅನೈತಿಕ ಜೀವನ ನಡೆಸುತ್ತಾನೆ. ಆದರೆ ಸಮಯಾನಂತರ ಪಶ್ಚಾತ್ತಾಪಪಟ್ಟು ತನ್ನ ಮನೆಗೆ ಹಿಂದಿರುಗಿ ಹೋಗಬೇಕೆಂದು ನಿರ್ಧರಿಸುತ್ತಾನೆ. ‘ಅವನು [ಮಗ] ಇನ್ನೂ ತುಂಬ ದೂರದಲ್ಲಿರುವಾಗಲೇ ಅವನ ತಂದೆಯು ಕನಿಕರಪಟ್ಟು ಓಡಿಹೋಗಿ ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಕೋಮಲವಾಗಿ ಮುದ್ದಿಡುತ್ತಾನೆ.’ (ಲೂಕ 15:11-20) ನಿಮಗೂ ಆ ಮಗನಂತೆ, ತಂದೆಯಾದ ‘ಯೆಹೋವನ ಹತ್ತಿರ ಬರಬೇಕು ಆದರೆ ಆತನಿಂದ ತುಂಬ ದೂರ ಹೋಗಿ ಬಿಟ್ಟಿದ್ದೇನೆ’ ಅಂತ ಅನಿಸುತ್ತಿದೆಯಾ? ಸಹೋದರರೇ ಯೇಸು ಹೇಳಿದ ದೃಷ್ಟಾಂತದಲ್ಲಿದ್ದ ತಂದೆಯಂತೆ ಯೆಹೋವನು ಸಹ ನಿಮ್ಮನ್ನು ಕರುಣೆಯಿಂದ ಕಾಣುತ್ತಿದ್ದಾನೆ. ನೀವು ಯಾವಾಗ ಹಿಂದಿರುಗಿ ಬರುತ್ತೀರೋ ಎಂದು ಆತನು ಕಾತುರದಿಂದ ಎದುರು ನೋಡುತ್ತಿದ್ದಾನೆ.

‘ಯೆಹೋವ ದೇವರಿಂದ ಕ್ಷಮಿಸುವುದಕ್ಕೆ ಆಗದೇ ಇರುವಷ್ಟು ದೊಡ್ಡ ತಪ್ಪು ನಾನು ಮಾಡಿಬಿಟ್ಟಿದ್ದೇನೆ ಅಥವಾ ತುಂಬ ತಪ್ಪುಗಳನ್ನು ಮಾಡಿಬಿಟ್ಟಿದ್ದೇನೆ’ ಅನಿಸುವಲ್ಲಿ, ಆಗೇನು? ಯೆಶಾಯ 1:18⁠ರಲ್ಲಿರುವ ಯೆಹೋವನ ಆಮಂತ್ರಣವನ್ನು ಪರಿಗಣಿಸಿ. ಅಲ್ಲಿ ಹೀಗಿದೆ: “‘ಬನ್ನಿರಿ ವಾದಿಸುವ’ [ವಿಷಯಗಳನ್ನು ಸರಿಪಡಿಸಿಕೊಳ್ಳೋಣ, NW] ಎಂದು ಯೆಹೋವನು ಅನ್ನುತ್ತಾನೆ; ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು.” ಹೌದು, ಎಷ್ಟೇ ಉಜ್ಜಿದರೂ ಹೋಗದ ಕಲೆಯಂತಿರುವ ಪಾಪಗಳನ್ನು ಸಹ ಯೆಹೋವನು ತೆಗೆದುಹಾಕಿ ಹಿಮದ ಹಾಗೆ ಮಾಡಬಲ್ಲನು.

ನೀವು ದೋಷಿ ಭಾವನೆಯಲ್ಲೇ ಮುಳುಗಿ ಹೋಗುವುದನ್ನು ಯೆಹೋವ ದೇವರು ನೋಡಲು ಇಷ್ಟ ಪಡುವುದಿಲ್ಲ. ಹಾಗಾದರೆ, ಅದರಿಂದ ಹೊರಬಂದು ಯೆಹೋವನ ಕ್ಷಮೆಯನ್ನು ಮತ್ತು ಶುದ್ಧ ಮನಸ್ಸಾಕ್ಷಿಯನ್ನು ಹೇಗೆ ಪಡೆದುಕೊಳ್ಳಬಹುದು? ಇದಕ್ಕೆ ದಾವೀದನು ತೆಗೆದುಕೊಂಡಂಥ ಹೆಜ್ಜೆಗಳು ನಿಮಗೆ ಸಹಾಯ ಮಾಡಬಹುದು. ಮೊದಲಿಗೆ, ಅವನು ‘ಯೆಹೋವನ ಬಳಿ ತನ್ನ ದ್ರೋಹವನ್ನು ಒಪ್ಪಿಕೊಂಡನು.’ (ಕೀರ್ತನೆ 32:5) ಯೆಹೋವ ದೇವರು ಅಂಥ ಪಶ್ಚಾತ್ತಾಪದ ಪ್ರಾರ್ಥನೆಯನ್ನು ಕೇಳುತ್ತಾನಾ? ಹೌದು ಖಂಡಿತ ಕೇಳುತ್ತಾನೆ. ಯಾಕೆಂದರೆ ‘ವಿಷಯಗಳನ್ನು ಸರಿಪಡಿಸಿಕೊಳ್ಳುವುದಕ್ಕೆ’ ಬನ್ನಿರಿ ಎಂದು ಆತನು ಈಗಾಗಲೇ ಆಮಂತ್ರಿಸಿದ್ದಾನೆ. ನೀವು ಸಹ ದಾವೀದನಂತೆ, ಮಾಡಿದ ತಪ್ಪನ್ನೆಲ್ಲ ಯೆಹೋವನ ಬಳಿ ಹೇಳಿಕೊಳ್ಳಿ. ನಿಮ್ಮ ಭಾವನೆಗಳನ್ನೆಲ್ಲ ತೋಡಿಕೊಳ್ಳಿ. ಇಂಥ ಪ್ರಾರ್ಥನೆಗಳನ್ನು ಯೆಹೋವನು ಕೇಳುತ್ತಾನೆಂದು ದಾವೀದನು ತನ್ನ ಜೀವನದಲ್ಲಿ ಎಷ್ಟೋ ಸಲ ನೋಡಿದ್ದನು. ಹಾಗಾಗಿಯೇ ಅವನು ಪ್ರಾರ್ಥಿಸಿದ್ದು: “ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು . . . ದೇವರೇ ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವುದಿಲ್ಲ.”—ಕೀರ್ತನೆ 51:2, 17.

ಎರಡನೆಯದಾಗಿ ದಾವೀದನು, ಯೆಹೋವನ ಪ್ರತಿನಿಧಿಯಾದ ಪ್ರವಾದಿ ನಾತಾನನ ಸಹಾಯ ಪಡೆದುಕೊಂಡನು. (2 ಸಮುವೇಲ 12:13) ಇಂದು ಸಹ ಹಿರಿಯರಿರುವುದು ನಿಮಗೆ ಸಹಾಯ ಮಾಡಲಿಕ್ಕೆಂದೇ. ನೀವು ಪಶ್ಚಾತ್ತಾಪಪಟ್ಟರೆ ಯೆಹೋವನೊಂದಿಗಿನ ನಿಮ್ಮ ಸ್ನೇಹ ಮತ್ತೆ ಚಿಗುರಲು ಅವರು ಸಹಾಯ ಮಾಡುತ್ತಾರೆ. ಅದಕ್ಕಾಗಿ ಅವರಿಗೆ ತರಬೇತಿಯನ್ನು ಕೊಡಲಾಗಿದೆ. ನೀವು ಹಿರಿಯರ ಬಳಿ ಹೋದಲ್ಲಿ ಅವರು ಬೈಬಲಿನಿಂದ ವಚನಗಳನ್ನು ತೋರಿಸಿ, ನಿಮಗಾಗಿ ಹೃದಯದಾಳದ ಪ್ರಾರ್ಥನೆ ಮಾಡುತ್ತಾರೆ. ಇದರಿಂದ ನಿಮ್ಮ ಮನಸ್ಸು ನಿರಾಳವಾಗುತ್ತದೆ. ನಿಮ್ಮಲ್ಲಿರುವ ದೋಷಿ ಭಾವನೆ ಕಡಿಮೆಯಾಗುತ್ತದೆ ಅಥವಾ ಇಲ್ಲದೆ ಹೋಗುತ್ತದೆ. ಅವರು ಆಧ್ಯಾತ್ಮಿಕವಾಗಿ ನಿಮ್ಮನ್ನು ಬಲಪಡಿಸುತ್ತಾರೆ.—ಯಾಕೋಬ 5:14-16.

ಶುದ್ಧ ಮನಸ್ಸಾಕ್ಷಿಯಿಂದ ಸಿಗುವಂಥ ನೆಮ್ಮದಿಯನ್ನು ನೀವು ಪಡೆಯಬೇಕೆಂದು ಯೆಹೋವನು ಬಯಸುತ್ತಾನೆ

‘ಯಾರ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು’

ಯೆಹೋವ ದೇವರ ಹತ್ತಿರ, ಹಿರಿಯರ ಹತ್ತಿರ ತಪ್ಪನ್ನು ಹೇಳಿಕೊಳ್ಳುವುದಕ್ಕೆ ತುಂಬ ಕಷ್ಟ ಅಂತ ನಿಮಗನಿಸಬಹುದು. ದಾವೀದನಿಗೂ ಕಷ್ಟವಾಗಿತ್ತು. ಅವನು ತಾನು ಮಾಡಿದ ತಪ್ಪನ್ನು ಸ್ವಲ್ಪ ಸಮಯ ಮುಚ್ಚಿಟ್ಟಿದ್ದ ಅಥವಾ ಅರಿಕೆ ಮಾಡಲಿಲ್ಲ. (ಕೀರ್ತನೆ 32:3) ಆದರೆ ನಂತರ, ತನ್ನ ತಪ್ಪನ್ನು ಯೆಹೋವನಲ್ಲಿ ಹೇಳಿಕೊಂಡಾಗ ಅವನು ಪ್ರಯೋಜನ ಪಡೆದುಕೊಂಡನು ಮತ್ತು ತಪ್ಪನ್ನು ತಿದ್ದಿಕೊಂಡನು.

ದಾವೀದನು ಅನೇಕ ಆಶೀರ್ವಾದಗಳನ್ನು ಪಡೆದನು. ಮುಖ್ಯವಾಗಿ, ಅವನು ಸಂತೋಷವನ್ನು ಪುನಃ ಪಡೆದನು. ಆ ಅನುಭವದಿಂದಲೇ “ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು” ಎಂದು ಬರೆದನು. (ಕೀರ್ತನೆ 32:1) “ಕರ್ತನೇ ನನ್ನ ಬಾಯಿ ನಿನ್ನನ್ನು ಸ್ತೋತ್ರಮಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು” ಎಂದು ಕೂಡ ಪ್ರಾರ್ಥಿಸಿದನು. (ಕೀರ್ತನೆ 51:15) ತನಗಿದ್ದ ದೋಷಿ ಭಾವನೆಯಿಂದ ಮುಕ್ತನಾಗಿದ್ದಕ್ಕೆ, ದೇವರು ಆತನ ತಪ್ಪನ್ನು ಕ್ಷಮಿಸಿದ್ದಕ್ಕೆ ಎಷ್ಟು ಸಂತೋಷಪಟ್ಟನೆಂದರೆ ಬೇರೆಯವರಿಗೂ ಯೆಹೋವನ ಬಗ್ಗೆ ತಿಳಿಸಲು ಮುಂದಾದನು.

ಶುದ್ಧ ಮನಸ್ಸಾಕ್ಷಿಯಿಂದ ಸಿಗುವಂಥ ನೆಮ್ಮದಿಯನ್ನು ನೀವು ಪಡೆದುಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. ದೋಷಿ ಭಾವನೆಯಿಂದ ಹೊರಬಂದು ಖುಷಿ-ಖುಷಿಯಾಗಿ ಇತರರ ಹತ್ತಿರ ತನ್ನ ಬಗ್ಗೆ, ತನ್ನ ಉದ್ದೇಶದ ಬಗ್ಗೆ ನೀವು ಮಾತಾಡಬೇಕೆಂದು ಇಷ್ಟಪಡುತ್ತಾನೆ. (ಕೀರ್ತನೆ 65:1-4) ನೀವು ತಪ್ಪನ್ನು ಒಪ್ಪಿಕೊಂಡರೆ ‘ನಿಮ್ಮ ಪಾಪಗಳು ಅಳಿಸಿಹಾಕಲ್ಪಟ್ಟು ಯೆಹೋವನ ಸಮ್ಮುಖದಿಂದ ಚೈತನ್ಯದಾಯಕ ಸಮಯಗಳು ಬರುತ್ತವೆ’ ಎನ್ನುವುದನ್ನು ಮರೆಯದಿರಿ.—ಅಪೊಸ್ತಲರ ಕಾರ್ಯಗಳು 3:19.

ಮಾರ್ಥಳಿಗೂ ಇದೇ ಅನುಭವವಾಯಿತು. “ನನ್ನ ಮಗ ನನಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಕಳುಹಿಸುತ್ತಲೇ ಇದ್ದ. ಯೆಹೋವನ ಬಗ್ಗೆ ನಾನು ಮತ್ತೆ ಸ್ವಲ್ಪ ಸ್ವಲ್ಪವೇ ಕಲಿಯುತ್ತಾ ಬಂದೆ. ಹಿಂದಿರುಗಿ ಬರಲು ಕ್ಷಮೆ ಕೇಳುವುದು ಪ್ರಾಮುಖ್ಯ. ಆದರೆ ನನಗೆ ಅದೇ ತುಂಬ ಕಷ್ಟಕರವಾಗಿತ್ತು. ಕೊನೆಗೂ, ಪ್ರಾರ್ಥನೆಯಲ್ಲಿ ಯೆಹೋವನ ಹತ್ತಿರ ನನ್ನ ತಪ್ಪನ್ನೆಲ್ಲ ಹೇಳಿಕೊಂಡೆ. ‘ಯೆಹೋವನ ಹತ್ತಿರ ನಾನು ವಾಪಸ್‌ ಬರಕ್ಕೆ 40 ವರ್ಷ ಬೇಕಾಯಿತಾ!’ ಅಂತ ನನಗೇ ಆಶ್ಚರ್ಯ ಆಗುತ್ತೆ. ಯೆಹೋವನಿಂದ ದೂರ ಆಗಿ ಎಷ್ಟೇ ವರ್ಷಗಳಾಗಿದ್ದರೂ ಮತ್ತೆ ತನ್ನನ್ನು ಆರಾಧಿಸಲು ಆತನು ಅವಕಾಶವನ್ನು ಕೊಟ್ಟೇ ಕೊಡುತ್ತಾನೆ ಮತ್ತು ಅವನ ಪ್ರೀತಿಯನ್ನು ಗಳಿಸಲು ಸಾಧ್ಯ ಅನ್ನುವುದಕ್ಕೆ ನಾನೇ ಜೀವಂತ ಸಾಕ್ಷಿ” ಎಂದು ಆಕೆ ಹೇಳುತ್ತಾಳೆ.