ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಡಳಿತ ಮಂಡಲಿಯಿಂದ ಪತ್ರ

ಆಡಳಿತ ಮಂಡಲಿಯಿಂದ ಪತ್ರ

ಪ್ರೀತಿಯ ಜೊತೆ ಸೇವಕರೇ,

ನಿಮಗೆ ಈಗಾಗಲೇ ತಿಳಿದಿರುವಂತೆ, ಬೈಬಲಲ್ಲಿ ಹೆಚ್ಚಾಗಿ ಮನುಷ್ಯರ ಬಗ್ಗೆ ತಿಳಿಸಲಾಗಿದೆ. ಅವರಲ್ಲಿ ಹಲವರು ನಮ್ಮಂಥದ್ದೇ ಪರಿಸ್ಥಿತಿಯಲ್ಲಿ ಜೀವಿಸಿದ್ದ, ‘ನಮ್ಮಂಥ ಭಾವನೆಗಳಿದ್ದ’ ನಂಬಿಗಸ್ತ ಜನರಾಗಿದ್ದರು. (ಯಾಕೋಬ 5:17) ಕೆಲವರು ಚಿಂತೆ-ಒತ್ತಡಗಳಲ್ಲಿ ಸಿಲುಕಿ ನಲುಗಿ ಹೋಗಿದ್ದರು. ಇನ್ನು ಕೆಲವರು ಸ್ವಂತ ಕುಟುಂಬವರಿಂದ, ಜೊತೆ ಆರಾಧಕರಿಂದಲೇ ತುಂಬ ನೋವನ್ನು ಅನುಭವಿಸಿದ್ದರು. ಇನ್ನು ಎಷ್ಟೋ ಜನ ತಾವು ಮಾಡಿದ ತಪ್ಪಿನಿಂದ ದೋಷಿ ಭಾವನೆಯಲ್ಲಿ ಮುಳುಗಿ ಹೋಗಿದ್ದರು.

ಅವರೆಲ್ಲ ಯೆಹೋವನಿಂದ ಪೂರ್ತಿಯಾಗಿ ದೂರವಾದರಾ? ಖಂಡಿತ ಇಲ್ಲ. ಅವರಲ್ಲಿ ಎಷ್ಟೋ ಜನ, ಕೀರ್ತನೆಗಾರನಂತೆ “ನಾನು ತಪ್ಪಿಹೋದ ಕುರಿಯಂತೆ ಅಲೆಯುತ್ತಿದ್ದೇನೆ; ನಿನ್ನ ಸೇವಕನನ್ನು ಪರಾಂಬರಿಸು. ನಾನು ನಿನ್ನ ಆಜ್ಞೆಗಳನ್ನು ಮರೆಯುವದಿಲ್ಲ” ಎಂದು ಪ್ರಾರ್ಥಿಸಿದರು. ಹೀಗೆ ಅವರು ಮಂದೆಗೆ ಮರಳುವ ಆಸೆಯನ್ನು ವ್ಯಕ್ತ ಪಡಿಸಿದರು. (ಕೀರ್ತನೆ 119:176) ನಿಮಗೂ ಅವರಂತೆಯೇ ಅನಿಸುತ್ತಿದೆಯಾ?

ಮಂದೆಯಿಂದ ದೂರವಾದ ಕುರಿಯನ್ನು ಯೆಹೋವ ದೇವರು ಎಂದಿಗೂ ಮರೆಯುವುದಿಲ್ಲ. ತನ್ನ ಆರಾಧಕರನ್ನು ಬಳಸಿ ಆ ಕುರಿಯ ಕಡೆಗೆ ಸಹಾಯಹಸ್ತವನ್ನು ಚಾಚುತ್ತಾನೆ. ಉದಾಹರಣೆಗೆ, ಯೆಹೋವ ದೇವರು ತನ್ನ ಸೇವಕನಾದ ಯೋಬನಿಗೆ ಹೇಗೆ ಸಹಾಯ ಮಾಡಿದನು ಅಂತ ಯೋಚಿಸಿ ನೋಡಿ. ಯೋಬನಿಗೆ ಒಂದರ ನಂತರ ಒಂದಾಗಿ ಕಷ್ಟಗಳು ಬಂದವು. ಆಸ್ತಿ ನಷ್ಟ, ಪ್ರಿಯರ ಮರಣ ಮತ್ತು ಗಂಭೀರ ಅನಾರೋಗ್ಯದ ಪರಿಸ್ಥಿತಿ ಹೀಗೆ ಸಂಕಷ್ಟಗಳ ಸುರಿಮಳೆಯೇ ಬಂತು. ಅವನಿಗೆ ಆಶ್ರಯ ನೀಡಬೇಕಿದ್ದ ಆಪ್ತರಿಂದಲೇ ತುಂಬ ಮನ ನೋಯಿಸುವ ಮಾತುಗಳನ್ನು ಸಹ ಕೇಳಬೇಕಾಗಿ ಬಂತು. ಇಷ್ಟೆಲ್ಲ ಕಷ್ಟಗಳು ಬಂದಾಗ ಅವನು ತಪ್ಪು ಯೋಚನೆಗಳನ್ನು ಮಾಡಿದ್ದು ನಿಜ. ಆದರೆ ಯೆಹೋವನನ್ನು ಬಿಟ್ಟು ದೂರ ಹೋಗಲಿಲ್ಲ. (ಯೋಬ 1:22; 2:10) ಹಾಗಾದರೆ, ಯೋಬನಿಗೆ ಯೆಹೋವನು ಹೇಗೆ ಸಹಾಯ ಮಾಡಿದನು?

ಯೆಹೋವ ದೇವರು ಯೋಬನ ಜೊತೆ ಸೇವಕನಾದ ಎಲೀಹುವಿನ ಮೂಲಕ ಅವನಿಗೆ ಸಹಾಯ ಮಾಡಿದನು. ಯೋಬನ ವ್ಯಥೆಯನ್ನೆಲ್ಲಾ ತಾಳ್ಮೆಯಿಂದ ಕೇಳಿಸಿಕೊಂಡಿದ್ದರಿಂದ, ಎಲೀಹು ಅವನನ್ನು ಸಂತೈಸಲು ಮುಂದಾದನು. ಎಲೀಹು ಏನು ಮಾತಾಡಿರಬಹುದು? ಯೋಬನನ್ನು ಅಪಹಾಸ್ಯ ಮಾಡಿ, ಅವನು ಪಾಪಿ ಅಂತ ಚುಚ್ಚಿ ಮಾತಾಡಿದನಾ? ಯೋಬನಿಗಿಂತ ತಾನೇ ನೀತಿವಂತ ಎಂದು ತೋರಿಸಿಕೊಂಡನಾ? ಇಲ್ಲವೇ ಇಲ್ಲ. ಪವಿತ್ರಾತ್ಮದ ಸಹಾಯದಿಂದ ಅವನು, ‘ನೋಡು, ನಾನೂ ಜೇಡಿಮಣ್ಣಿನಿಂದ ರೂಪಿಸಲ್ಪಟ್ಟು ದೇವರ ದೃಷ್ಟಿಯಲ್ಲಿ ನಿನ್ನ ಹಾಗೆಯೇ ಇದ್ದೇನೆ. ನನಗೆ ನೀನು ಭಯ ಪಡಬೇಡ, ನಾನು ಹೇಳುವ ವಿಷಯ ನಿನಗೆ ಭಾರವಾಗಿರುವುದಿಲ್ಲ’ ಎಂಬ ಆಶ್ವಾಸನೆ ನೀಡಿದನು. (ಯೋಬ 33:6, 7) ಈಗಾಗಲೇ ದುಃಖತಪ್ತನಾಗಿದ್ದ ಯೋಬನು ಇನ್ನಷ್ಟು ದುಃಖದಲ್ಲಿ ಮುಳುಗಿ ಹೋಗದಂತೆ ಎಚ್ಚರವಹಿಸಿ ಎಲೀಹು ಪ್ರೀತಿಯಿಂದ ಸಲಹೆ ಮತ್ತು ಪ್ರೋತ್ಸಾಹ ನೀಡಿದನು.

ಎಲೀಹುವಿನ ಮನೋಭಾವವನ್ನು ಮನಸ್ಸಿನಲ್ಲಿಟ್ಟು ಈ ಕಿರುಹೊತ್ತಗೆಯನ್ನು ತಯಾರಿಸಿದ್ದೇವೆ. ಮೊದಲು, ಯೆಹೋವನಿಂದ ದೂರ ಹೋಗಿದ್ದವರು ತಮ್ಮ ಭಾವನೆಗಳನ್ನು ತಿಳಿಸುವಾಗ ಕಿವಿಗೊಟ್ಟು ಕೇಳಿಸಿಕೊಂಡೆವು. (ಜ್ಞಾನೋಕ್ತಿ 18:13) ನಂತರ ಅದೇ ರೀತಿಯ ಸಮಸ್ಯೆಯನ್ನು ಎದುರಿಸಿದ ತನ್ನ ಸೇವಕರಿಗೆ, ಯೆಹೋವ ದೇವರು ಹೇಗೆ ಸಹಾಯ ಮಾಡಿದನು ಎಂದು ಪ್ರಾರ್ಥನಾಪೂರ್ವಕವಾಗಿ ಬೈಬಲಿನಿಂದ ಪರಿಶೀಲಿಸಿದೆವು. ಕೊನೆಗೆ ಈ ಬೈಬಲ್‌ ಉದಾಹರಣೆಗಳನ್ನು ಮತ್ತು ಆಧುನಿಕ ದಿನದ ಅನುಭವಗಳನ್ನು ಜೊತೆ ಸೇರಿಸಿ ಈ ಕಿರುಹೊತ್ತಗೆಯನ್ನು ತಯಾರಿಸಿದೆವು. ಈ ಕಿರುಹೊತ್ತಗೆಯನ್ನು ದಯವಿಟ್ಟು ಓದಿ. ಇದು ನಮ್ಮ ವಿನಂತಿ. ನಾವು ನಿಮ್ಮನ್ನು ತುಂಬ ಪ್ರೀತಿಸುತ್ತೇವೆ ಎಂಬ ಭರವಸೆ ನಿಮಗಿರಲಿ.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ