ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 5

‘ಕುರುಬನೂ ಮೇಲ್ವಿಚಾರಕನೂ ಆಗಿರುವಾತನ ಬಳಿಗೆ ಮರಳಿ’

‘ಕುರುಬನೂ ಮೇಲ್ವಿಚಾರಕನೂ ಆಗಿರುವಾತನ ಬಳಿಗೆ ಮರಳಿ’

ಮರಳಿ ಯೆಹೋವನ ಬಳಿಗೆ ಬರಲು ಇರುವ ಅಡ್ಡಿತಡೆಗಳ ಬಗ್ಗೆ ಈ ಕಿರುಹೊತ್ತಗೆಯಲ್ಲಿ ಓದುವಾಗ, ‘ನನಗೂ ಇದೇ ಸಮಸ್ಯೆ’ ಎಂದು ನಿಮಗನಿಸಿತಾ? ಹಾಗನಿಸಿದ್ದು ಒಳ್ಳೇದು. ಯಾಕೆಂದರೆ ಬೈಬಲ್‌ ಕಾಲದಲ್ಲಿದ್ದ ಮತ್ತು ಈಗಿರುವ ಅನೇಕ ನಂಬಿಗಸ್ತ ಸೇವಕರಿಗೂ ಇಂಥ ಸಮಸ್ಯೆಗಳು ಎದುರಾಗಿವೆ. ಆಗ ಅವರು ಯೆಹೋವನಿಂದ ಸಹಾಯ ಪಡೆದು ಅವುಗಳನ್ನು ಜಯಿಸಿದ್ದಾರೆ. ಯೆಹೋವನ ಸಹಾಯ ಪಡೆದರೆ ನೀವೂ ಈ ಸಮಸ್ಯೆಗಳನ್ನು ಜಯಿಸಬಲ್ಲಿರಿ.

ನೀವು ಹಿಂದಿರುಗಿ ಬಂದಾಗ ಯೆಹೋವನು ಖಂಡಿತ ನಿಮ್ಮ ಜೊತೆಯಲ್ಲಿರುತ್ತಾನೆ

ನೀವು ಹಿಂದಿರುಗಿ ಬಂದಾಗ ಯೆಹೋವನು ಖಂಡಿತ ನಿಮ್ಮ ಜೊತೆಯಲ್ಲಿರುತ್ತಾನೆ. ಚಿಂತೆಗಳನ್ನು ಎದುರಿಸಲು, ಇತರರಿಂದಾದ ನೋವನ್ನು ಮರೆಯಲು, ಶುದ್ಧ ಮನಸ್ಸಾಕ್ಷಿ ಮತ್ತು ಮನಶ್ಶಾಂತಿ ಪಡೆಯಲು ಆತನು ನಿಮಗೆ ಸಹಾಯ ಮಾಡೇ ಮಾಡುತ್ತಾನೆ. ಆಗ ನಿಮಗೆ ಪುನಃ ಜೊತೆ ಆರಾಧಕರೊಂದಿಗೆ ಸೇರಿ ಯೆಹೋವನ ಸೇವೆ ಮಾಡಬೇಕೆಂಬ ಹುಮ್ಮಸ್ಸು ಬರುವುದು. ಮೊದಲನೇ ಶತಮಾನದ ಕ್ರೈಸ್ತರು ಸಹ ಇಂತಹದ್ದೇ ಪರಿಸ್ಥಿತಿಯಲ್ಲಿದ್ದರು. ಅವರ ಬಗ್ಗೆ ಅಪೊಸ್ತಲ ಪೇತ್ರನು ಹೀಗೆ ಹೇಳಿದ್ದಾನೆ: “ನೀವು ದಾರಿತಪ್ಪಿದ ಕುರಿಗಳಂತಿದ್ದಿರಿ, ಆದರೆ ಈಗ ನೀವು ನಿಮ್ಮ ಪ್ರಾಣಗಳನ್ನು ಕಾಯುವ ಕುರುಬನೂ ಮೇಲ್ವಿಚಾರಕನೂ ಆಗಿರುವಾತನ ಬಳಿಗೆ ಹಿಂದಿರುಗಿದ್ದೀರಿ.”—1 ಪೇತ್ರ 2:25.

ನೀವು ಸಹ ಯೆಹೋವನ ಬಳಿಗೆ ಹಿಂದಿರುಗಿ ಬನ್ನಿ, ಇದೇ ಅತ್ಯುತ್ತಮ ಮಾರ್ಗ. ಯಾಕೆಂದರೆ, ಹೀಗೆ ಮಾಡುವುದರಿಂದ ನೀವು ಯೆಹೋವನ ಹೃದಯವನ್ನು ಸಂತೋಷಪಡಿಸುತ್ತೀರಿ. (ಜ್ಞಾನೋಕ್ತಿ 27:11) ಯೆಹೋವನಿಗೂ ಭಾವನೆಗಳಿವೆ. ನಾವು ಮಾಡುವ ಕೆಲಸಗಳಿಂದ ಆತನಿಗೆ ಒಂದೋ ಸಂತೋಷವಾಗುತ್ತದೆ, ಇಲ್ಲ ದುಃಖವಾಗುತ್ತದೆ. ಹಾಗಂತ ನಾವಾತನನ್ನು ಪ್ರೀತಿಸಲೇಬೇಕು ಮತ್ತು ಆರಾಧಿಸಲೇಬೇಕು ಎಂದು ಆತನು ಬಲವಂತ ಮಾಡುವುದಿಲ್ಲ. (ಧರ್ಮೋಪದೇಶಕಾಂಡ 30:19, 20) ಒಬ್ಬ ಬೈಬಲ್‌ ವಿದ್ವಾಂಸನು ಹೀಗೆ ಹೇಳಿದ್ದಾನೆ: ‘ನಮ್ಮ ಹೃದಯವನ್ನು ಬೇರೆಯವರು ತೆರೆಯಲು ಸಾಧ್ಯವಿಲ್ಲ. ಅದನ್ನು ನಾವೇ ತೆರೆಯಬೇಕು.’ ಪೂರ್ಣ ಹೃದಯದಿಂದ ಯೆಹೋವನನ್ನು ಪ್ರೀತಿಸಿ, ಆರಾಧಿಸುವ ಮೂಲಕ ನಾವು ನಮ್ಮ ಹೃದಯವನ್ನು ತೆರೆಯಬಲ್ಲೆವು. ಹೀಗೆ ಮಾಡುವಾಗ ನಾವು ಯೆಹೋವನ ಮನಸ್ಸನ್ನು ಸಂತೋಷಪಡಿಸುತ್ತೇವೆ ಮತ್ತು ನಮಗೂ ತುಂಬ ಸಂತೋಷವಾಗುತ್ತದೆ. ಯಾಕೆಂದರೆ ಯೆಹೋವನು ಮಾತ್ರ ನಮ್ಮ ಆರಾಧನೆಯನ್ನು ಪಡೆಯಲು ಅರ್ಹನು. ಹಾಗೆ ಮಾಡುವಾಗ ಸಿಗುವ ಸಂತೋಷವನ್ನು ನಾವು ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ.—ಅಪೊಸ್ತಲರ ಕಾರ್ಯಗಳು 20:35; ಪ್ರಕಟನೆ 4:11.

ಎಲ್ಲರಿಗೂ ಆಧ್ಯಾತ್ಮಿಕ ವಿಷಯಗಳ ಅಗತ್ಯ ಇದೆ. ನೀವು ಪುನಃ ಯೆಹೋವನನ್ನು ಆರಾಧಿಸಲು ಪ್ರಾರಂಭಿಸಿದರೆ ಆ ಅಗತ್ಯವನ್ನು ಪೂರೈಸಿಕೊಳ್ಳುತ್ತೀರಿ. (ಮತ್ತಾಯ 5:3) ಲೋಕದ ಜನರಿಗೆ ತಮ್ಮ ಜೀವನದ ಉದ್ದೇಶವೇನೆಂದು ಗೊತ್ತಿಲ್ಲ. ಅವರು ಈ ಪ್ರಶ್ನೆಗೆ ಉತ್ತರ ಎಲ್ಲಿ ಸಿಗುತ್ತೆ ಅಂತ ಹುಡುಕಾಡುತ್ತಿದ್ದಾರೆ. ಕಾರಣ, ಯೆಹೋವ ದೇವರು ಮನುಷ್ಯರನ್ನು ಸೃಷ್ಟಿಸುವಾಗ ಇಂತಹ ಪ್ರಶ್ನೆಗಳಿಗೆ ಉತ್ತರ ತಿಳಿಯುವ ಬಯಕೆ ಅಥವಾ ಆಧ್ಯಾತ್ಮಿಕ ವಿಷಯಗಳ ಅಗತ್ಯವನ್ನಿಟ್ಟು ಸೃಷ್ಟಿಸಿದ್ದಾನೆ. ಆತನನ್ನು ಆರಾಧಿಸಿದಾಗ ಮಾತ್ರ ಈ ಅಗತ್ಯ ಪೂರೈಕೆಯಾಗುತ್ತದೆ. ಆದ್ದರಿಂದಲೇ, ಯೆಹೋವನನ್ನು ಪ್ರೀತಿಸಿ, ಆರಾಧಿಸುವುದರಲ್ಲಿ ಸಿಗುವಷ್ಟು ತೃಪ್ತಿ ಇನ್ಯಾವುದರಲ್ಲೂ ಸಿಗುವುದಿಲ್ಲ.—ಕೀರ್ತನೆ 63:1-5.

ಯೆಹೋವನು ನೀವು ಯಾವಾಗ ಹಿಂದಿರುಗಿ ಬರುವಿರೋ ಎಂದು ಕಾಯುತ್ತಿದ್ದಾನೆ. ಇದು ನಿಜನಾ? ನಿಮ್ಮ ಕೈಯಲ್ಲಿರುವ ಈ ಕಿರುಹೊತ್ತಗೆಯೇ ಇದಕ್ಕೆ ಸಾಕ್ಷಿ. ತುಂಬ ಪ್ರಾರ್ಥನೆ ಮಾಡಿ, ಹೆಚ್ಚಿನ ಕಾಳಜಿವಹಿಸಿ ಈ ಕಿರುಹೊತ್ತಗೆಯನ್ನು ತಯಾರಿಸಲಾಗಿದೆ. ಈ ಕಿರುಹೊತ್ತಗೆ ಒಬ್ಬ ಹಿರಿಯನ ಅಥವಾ ಪ್ರಚಾರಕನ ಮೂಲಕ ನಿಮ್ಮ ಕೈ ಸೇರಿದೆ. ನಿಮಗೆ ಇದನ್ನು ಓದಬೇಕು ಅಂತ ಅನಿಸಿದೆ. ಓದಿದಾಗ ಇದರಲ್ಲಿ ಇರುವ ಪ್ರಕಾರ ನಡೆದುಕೊಳ್ಳಬೇಕು ಎಂದೂ ಅನಿಸಿದೆ. ಇದಕ್ಕೆಲ್ಲಾ ಯೆಹೋವನೇ ಕಾರಣ. ಇದು ತಾನೇ ಯೆಹೋವನು ನಿಮ್ಮನ್ನು ಮರೆತಿಲ್ಲ ಅಂತ ತೋರಿಸಿಕೊಡುತ್ತದೆ. ಆತನು ಮತ್ತೆ ನಿಮ್ಮನ್ನು ಮಂದೆಗೆ ಸೇರಿಸಿಕೊಳ್ಳಲು ಹಾತೊರೆಯುತ್ತಿದ್ದಾನೆ.—ಯೋಹಾನ 6:44.

ತಪ್ಪಿಹೋದ ತನ್ನ ಸೇವಕರನ್ನು ಯೆಹೋವನು ಯಾವತ್ತೂ ಮರೆಯೋದಿಲ್ಲ. ಇದು ನೂರಕ್ಕೆ ನೂರರಷ್ಟು ಸತ್ಯ ಅಂತ ಡೋನ ಎಂಬ ಸಹೋದರಿ ತನ್ನ ಅನುಭವದಿಂದ ತಿಳಿದುಕೊಂಡಳು. “ನಾನು ನಿಧಾನವಾಗಿ ಸತ್ಯದಿಂದ ದೂರಹೋಗಿದ್ದೆ. ಆದರೂ ನಾನು ಅನೇಕ ಸಲ ಕೀರ್ತನೆ 139:23, 24⁠ರಲ್ಲಿರುವಂತೆಯೇ ಪ್ರಾರ್ಥಿಸುತ್ತಿದ್ದೆ. ಆ ವಚನಗಳಲ್ಲಿ ‘ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು’ ಎಂದು ಹೇಳಲಾಗಿದೆ. ನಾನು ಈ ಲೋಕದ ಭಾಗವಲ್ಲ ಎಂದು ನನಗೆ ಗೊತ್ತಿತ್ತು, ಸತ್ಯದಿಂದ ದೂರ ಹೋದರೂ ಈ ಲೋಕದವರಂತೆ ಇರಲು ನನ್ನಿಂದಾಗಲಿಲ್ಲ. ಯಾಕೆಂದರೆ ನಾನು ಯೆಹೋವನ ಸಂಘಟನೆಯ ಭಾಗವಾಗಿರಬೇಕು ಅಂತ ನನಗೆ ಗೊತ್ತಿತ್ತು. ಯೆಹೋವನು ಯಾವತ್ತೂ ನನ್ನಿಂದ ದೂರ ಹೋಗಿರಲಿಲ್ಲ, ನಾನೇ ಆತನ ಬಳಿಗೆ ಹೋಗಬೇಕು ಎಂದು ನನಗೆ ನಿಧಾನವಾಗಿ ಅರ್ಥ ಆಯಿತು. ಯೆಹೋವನ ಬಳಿಗೆ ಹಿಂದಿರುಗಿದ್ದಕ್ಕಾಗಿ ಈಗ ನಾನು ತುಂಬ ಸಂತೋಷದಿಂದಿದ್ದೇನೆ.”

ಯೆಹೋವನು ನನ್ನಿಂದ ಯಾವತ್ತೂ ದೂರ ಹೋಗಿರಲಿಲ್ಲ, ನಾನೇ ಆತನ ಬಳಿಗೆ ಹೋಗಬೇಕು ಎಂದು ನನಗೆ ನಿಧಾನವಾಗಿ ಅರ್ಥ ಆಯಿತು

ದಯವಿಟ್ಟು ನೀವೂ ಹಿಂದಿರುಗಿ ಬನ್ನಿ, ಆಗ ನೀವು ಸಹ ಯೆಹೋವನು ಕೊಡುವ ಆನಂದವನ್ನು ಅನುಭವಿಸುವಂತಾಗಲಿ ಎನ್ನುವುದು ನಮ್ಮ ವಿನಮ್ರ ಪ್ರಾರ್ಥನೆ. (ನೆಹೆಮೀಯ 8:10) ಒಂದಂತೂ ಸತ್ಯ, ಹಿಂದಿರುಗಿ ಬಂದದ್ದಕ್ಕಾಗಿ ನೀವೆಂದಿಗೂ ವಿಷಾದಿಸುವುದಿಲ್ಲ.