ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 8

ದೇವರು ಎಲ್ಲರಿಗಿಂತಲೂ ಉನ್ನತನಾಗಿದ್ದಾನೆ

ದೇವರು ಎಲ್ಲರಿಗಿಂತಲೂ ಉನ್ನತನಾಗಿದ್ದಾನೆ

ನಮ್ಮೆಲ್ಲರಿಗಿಂತಲೂ ಉನ್ನತನಾದ, ಶ್ರೇಷ್ಠನಾದ ಮತ್ತು ಶಕ್ತಿಶಾಲಿಯಾದ ಒಬ್ಬನು ಇದ್ದಾನೆ ಎಂದು ನೀನು ಒಪ್ಪುತ್ತೀಯಾ ತಾನೇ. ಆತನು ಯಾರು ಹೇಳು ನೋಡೋಣ?— ಯೆಹೋವ ದೇವರೇ. ಹಾಗಾದರೆ ಆತನ ಮಗನಾದ ಯೇಸುವಿನ ಬಗ್ಗೆ ಏನು? ಅವನೂ ನಮಗಿಂತ ಉನ್ನತನಾ?— ಹೌದು, ಅನುಮಾನವೇ ಇಲ್ಲ.

ಯೇಸು ದೇವರೊಂದಿಗೆ ಸ್ವರ್ಗದಲ್ಲಿ ಇದ್ದವನು. ಅಲ್ಲಿ ಅವನು ಒಬ್ಬ ಆತ್ಮಪುತ್ರನಾಗಿ ಇದ್ದನು ಅಂದರೆ ಒಬ್ಬ ದೇವದೂತನಾಗಿದ್ದನು. ಯೇಸುವಿನೊಟ್ಟಿಗೆ ಇತರ ದೇವದೂತರು ಇದ್ದರಾ?— ಹೌದು. ಸಾವಿರವಲ್ಲ, ಲಕ್ಷವಲ್ಲ, ಕೋಟ್ಯಂತರ ದೇವದೂತರನ್ನು ದೇವರು ಸ್ವರ್ಗದಲ್ಲಿ ಉಂಟುಮಾಡಿದನು. ಈ ದೇವದೂತರು ನಮಗಿಂತಲೂ ಉನ್ನತರು, ನಮಗಿಂತಲೂ ಶಕ್ತಿಶಾಲಿಗಳು.—ಇಬ್ರಿಯ 1:7; ದಾನಿಯೇಲ 7:10.

ಮರಿಯಳೊಂದಿಗೆ ದೇವದೂತನು ಮಾತಾಡಿದ್ದು ನೆನಪಿದೆ ತಾನೇ? ಅವನ ಹೆಸರೇನು ಅಂತ ಹೇಳ್ತಿಯಾ?— ಅವನ ಹೆಸರು ಗಬ್ರಿಯೇಲ. ಮರಿಯಳಿಗೆ ಹುಟ್ಟುವ ಮಗು ‘ದೇವರ ಮಗ’ ಎನಿಸಿಕೊಳ್ಳುವನು ಎಂದು ಅವನು ಹೇಳಿದ್ದನು. ದೇವರು ತನ್ನ ಆತ್ಮಪುತ್ರ ಯೇಸುವಿನ ಜೀವವನ್ನು ಮರಿಯಳ ಗರ್ಭದೊಳಗೆ ಇಟ್ಟನು. ಹೀಗೆ ಯೇಸು ಭೂಮಿಯಲ್ಲಿ ಒಂದು ಮಗುವಾಗಿ ಜನಿಸಿದನು.—ಲೂಕ 1:26, 27.

ಮರಿಯ ಮತ್ತು ಯೋಸೇಫ ಯೇಸುವಿಗೆ ಏನು ಹೇಳುತ್ತಿರಬಹುದು?

ಇದೊಂದು ದೊಡ್ಡ ಅದ್ಭುತ ಅಲ್ಲವೇ. ಇದು ನಿಜವಾಗಿಯೂ ನಡೆಯಿತು ಅಂತ ನಿನಗನಿಸುತ್ತಾ? ಅದಿರಲಿ, ಯೇಸು ಮೊದಲು ದೇವರೊಂದಿಗೆ ಸ್ವರ್ಗದಲ್ಲಿ ಇದ್ದನು ಎಂಬ ವಿಷಯವನ್ನು ನೀನು ನಂಬುತ್ತೀಯಾ?— ದೇವರೊಂದಿಗೆ ತಾನು ಸ್ವರ್ಗದಲ್ಲಿದ್ದನು ಎಂದು ಯೇಸುವೇ ಹೇಳಿದ್ದಾನೆ. ಆದರೆ ತನ್ನ ಜನನ ಒಂದು ಅದ್ಭುತ ಎಂದು ಯೇಸುವಿಗೆ ಹೇಗೆ ಗೊತ್ತಾಯಿತು? ಬಹುಶಃ ಅವನ ತಾಯಿಯಾದ ಮರಿಯಳು ತಿಳಿಸಿರಬೇಕು. ಗಬ್ರಿಯೇಲನು ಹೇಳಿದ ವಿಷಯಗಳನ್ನೆಲ್ಲಾ ಮರಿಯಳು ಬಾಲಕನಾದ ಯೇಸುವಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಿರಬಹುದು. ಯೋಸೇಫನು ಸಹ ಯೇಸುವಿನ ತಂದೆ ತಾನಲ್ಲ ದೇವರೇ ಎಂಬ ಸತ್ಯವನ್ನು ಅವನಿಗೆ ವಿವರಿಸಿರಬಹುದು.

ದೇವರು ಸಹ ಯೇಸುವಿನ ದೀಕ್ಷಾಸ್ನಾನದ ಸಂದರ್ಭದಲ್ಲಿ, ‘ಇವನು ನನ್ನ ಮಗ’ ಎಂದು ಸ್ವರ್ಗದಿಂದ ಹೇಳಿದನು. (ಮತ್ತಾಯ 3:17) ತನ್ನ ಮರಣಕ್ಕೆ ಮುಂಚಿನ ರಾತ್ರಿ ಯೇಸು, “ತಂದೆಯೇ, ನೀನು ನಿನ್ನ ಬಳಿಯಲ್ಲಿ ನನ್ನನ್ನು ಮಹಿಮೆಪಡಿಸು; ಲೋಕ ಉಂಟಾಗುವದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆಪಡಿಸು” ಎಂದು ಪ್ರಾರ್ಥಿಸಿದನು. (ಯೋಹಾನ 17:5) ಹೌದು, ದೇವರೊಂದಿಗೆ ಜೀವಿಸಲು ಪುನಃ ತನ್ನನ್ನು ಸ್ವರ್ಗಕ್ಕೆ ಕರೆದುಕೊಳ್ಳುವಂತೆ ಯೇಸು ತನ್ನ ತಂದೆಯನ್ನು ಕೇಳಿಕೊಂಡನು. ಆದರೆ, ಮನುಷ್ಯನಾದ ಯೇಸು ಹೇಗೆ ಸ್ವರ್ಗದಲ್ಲಿ ಜೀವಿಸಸಾಧ್ಯ?— ಅಲ್ಲಿ ಯೇಸು ಪುನಃ ಜೀವಿಸಬೇಕಾದರೆ ಯೆಹೋವ ದೇವರು ಅವನನ್ನು ಮತ್ತೆ ಒಬ್ಬ ಆತ್ಮಜೀವಿಯಾಗಿ, ಅಂದರೆ ದೇವದೂತನಾಗಿ ಮಾಡಿದರೆ ಮಾತ್ರ ಸಾಧ್ಯ.

ಸರಿ. ಈಗ ನಿನಗೆ ಒಂದು ಮುಖ್ಯ ಪ್ರಶ್ನೆ ಕೇಳುತ್ತೇನೆ. ಉತ್ತರ ಕೊಡುತ್ತೀಯಾ? ಎಲ್ಲ ದೇವದೂತರು ಒಳ್ಳೆಯವರಾ? ನಿನಗೆ ಏನು ಅನಿಸುತ್ತೆ?— ಒಂದು ಕಾಲದಲ್ಲಿ ಎಲ್ಲಾ ದೇವದೂತರು ಒಳ್ಳೆಯವರಾಗಿಯೇ ಇದ್ದರು. ಯಾಕೆಂದರೆ ಅವರನ್ನೆಲ್ಲಾ ಸೃಷ್ಟಿಸಿದ್ದು ಯೆಹೋವ ದೇವರು. ಮತ್ತು ಯೆಹೋವನು ಏನೇ ಮಾಡಲಿ ಅದು ಒಳ್ಳೆಯದ್ದಾಗಿಯೇ ಇರುತ್ತದೆ. ಹೌದು ತಾನೇ? ಆದರೆ ಆ ದೇವದೂತರಲ್ಲಿ ಒಬ್ಬನು ಕೆಟ್ಟವನಾದನು. ಅದು ಹೇಗೆ?

ಹೇಗೆಂದು ತಿಳಿಯಲು ದೇವರು ಆದಾಮಹವ್ವರನ್ನು ಉಂಟುಮಾಡಿದ ಸಮಯದಲ್ಲಿ ಏನು ನಡೆಯಿತು ಅಂತ ನೋಡೋಣ. ಆಗ ನಡೆದ ಘಟನೆ ಬರೀ ಒಂದು ಕಟ್ಟುಕಥೆ ಅಂತ ಕೆಲವರು ಹೇಳುತ್ತಾರೆ. ಆದರೆ ಅದು ಕಥೆಯಲ್ಲ ನಿಜ ಘಟನೆ ಎಂದು ಮಹಾ ಬೋಧಕನಾದ ಯೇಸುವಿಗೆ ಗೊತ್ತಿತ್ತು.

ಆದಾಮಹವ್ವರನ್ನು ಸೃಷ್ಟಿ ಮಾಡಿ ದೇವರು ಒಂದು ವಿಶಾಲವಾದ ತೋಟದಲ್ಲಿ ಇರಿಸಿದನು. ಆ ತೋಟದ ಹೆಸರು ಏದೆನ್‌. ಆ ತೋಟ ಎಷ್ಟು ಸುಂದರವಾಗಿತ್ತು ಎಂದರೆ ಅದನ್ನು ಪರದೈಸ್‌ ಎಂದೂ ಕರೆಯುತ್ತಾರೆ. ಪರದೈಸ್‌ನಲ್ಲಿ ಆದಾಮಹವ್ವರು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಪಡೆದು ದೊಡ್ಡ ಕುಟುಂಬದೊಂದಿಗೆ ಸದಾಕಾಲ ಆನಂದವಾಗಿ ಜೀವಿಸಬಹುದಿತ್ತು. ಆದರೆ ಇದಕ್ಕೆ ಮುಂಚೆ ಅವರೊಂದು ಮುಖ್ಯ ಪಾಠ ಕಲಿಯುವ ಆವಶ್ಯಕತೆ ಇತ್ತು. ಈ ಪಾಠ ಯಾವುದು ಗೊತ್ತಾ? ನಾವೀಗಾಗಲೆ ಅದನ್ನು ಕಲಿತ್ತಿದ್ದೇವೆ. ಅದೇನು ಅಂತ ನೋಡೋಣ.

ಆದಾಮಹವ್ವರು ಪರದೈಸಿನಲ್ಲಿ ಸದಾಕಾಲ ಜೀವಿಸಬೇಕಾದರೆ ಏನು ಮಾಡಬೇಕಿತ್ತು?

ಏದೆನ್‌ ತೋಟದಲ್ಲಿದ್ದ ಎಲ್ಲಾ ಮರಗಳ ಹಣ್ಣನ್ನು ತಿನ್ನಬಹುದು ಎಂದು ಯೆಹೋವನು ಆದಾಮಹವ್ವರಿಗೆ ಹೇಳಿದ್ದನು. ಆದರೆ ಅವರು ಒಂದು ಮರದ ಹಣ್ಣನ್ನು ಮಾತ್ರ ತಿನ್ನಬಾರದಿತ್ತು. ತಿಂದರೆ ಏನಾಗುತ್ತದೆ ಎಂದು ಸಹ ದೇವರು ಅವರಿಗೆ ತಿಳಿಸಿದ್ದನು. ಆ ಹಣ್ಣನ್ನು “ತಿಂದರೆ ಸಾಯುವಿರಿ” ಎಂದು ಹೇಳಿದ್ದನು. (ಆದಿಕಾಂಡ 2:17; 3:3) ಹಾಗಾದರೆ, ಆದಾಮಹವ್ವರು ಯಾವ ಪಾಠ ಕಲಿಯಬೇಕಿತ್ತು?—

ಅವರು ವಿಧೇಯತೆಯ ಪಾಠ ಕಲಿಯಬೇಕಿತ್ತು. ಹೌದು, ವಿಧೇಯತೆ ತೋರಿಸುವುದು ಜೀವ ಮರಣದ ವಿಷಯವಾಗಿದೆ! ಹಾಗಾಗಿ ಆದಾಮಹವ್ವರು ಯೆಹೋವ ದೇವರಿಗೆ ವಿಧೇಯರಾಗಿ ಇರಬೇಕಿತ್ತು. ಬರೀ ಮಾತಿನಲ್ಲಿ ಅಲ್ಲ ತಮ್ಮ ಕ್ರಿಯೆಗಳಲ್ಲಿಯೂ ವಿಧೇಯತೆ ತೋರಿಸಬೇಕಿತ್ತು. ಹಾಗೆ ಮಾಡಿದಾಗ, ತಮಗೆ ದೇವರ ಮೇಲೆ ಪ್ರೀತಿಯಿದೆ ಮತ್ತು ಆತನನ್ನೇ ತಮ್ಮ ಅರಸನಾಗಿ ಒಪ್ಪಿಕೊಂಡಿದ್ದೇವೆ ಎಂದು ಅವರು ತೋರಿಸಿಕೊಡುತ್ತಿದ್ದರು. ಆಗ ಅವರು ಪರದೈಸಿನಲ್ಲಿ ಸದಾಕಾಲ ಜೀವಿಸಬಹುದಿತ್ತು. ಒಂದು ವೇಳೆ ಆ ಮರದ ಹಣ್ಣನ್ನು ಅವರು ತಿಂದರೆ ಅದು ಏನನ್ನು ತೋರಿಸಿಕೊಡುತ್ತಿತ್ತು?—

ಯೆಹೋವನು ಕೊಟ್ಟ ಎಲ್ಲಾ ವಿಷಯಗಳಿಗಾಗಿ ಅವರಿಗೆ ಸ್ವಲ್ಪವೂ ಕೃತಜ್ಞತೆ ಇಲ್ಲ ಅಂತ ಅದು ತೋರಿಸಿಕೊಡುತ್ತಿತ್ತು ಅಲ್ವಾ. ನೀನು ಅವರ ಜಾಗದಲ್ಲಿ ಇರುತ್ತಿದ್ದರೆ ಏನು ಮಾಡುತ್ತಿದ್ದೆ? ಯೆಹೋವನಿಗೆ ವಿಧೇಯತೆ ತೋರಿಸುತ್ತಿದ್ದೆಯಾ?— ಮೊದಮೊದಲು ಆದಾಮಹವ್ವರು ವಿಧೇಯತೆ ತೋರಿಸಿದರು. ಆದರೆ ಆಮೇಲೆ ಒಬ್ಬ ಮೋಸಗಾರನ ಮಾತು ಕೇಳಿ ಹವ್ವಳು ಮೋಸಹೋದಳು. ಅವನ ವಂಚನೆಯ ಮಾತಿನಿಂದ ಹವ್ವಳು ದೇವರ ಮಾತನ್ನು ಮೀರಿದಳು. ಆ ಮೋಸಗಾರ ಯಾರು ಗೊತ್ತಾ?—

ಹವ್ವಳೊಂದಿಗೆ ಹಾವು ಮಾತಾಡುವಂತೆ ಮಾಡಿದ್ದು ಯಾರು?

ಹವ್ವಳೊಂದಿಗೆ ಮಾತಾಡಿದ್ದು ಒಂದು ಹಾವು ಎಂದು ಬೈಬಲ್‌ ತಿಳಿಸುತ್ತದೆ. ಆದರೆ ನೀನೇ ಹೇಳು, ಹಾವೆಲ್ಲಾದರೂ ಮಾತಾಡುತ್ತಾ? ಇಲ್ಲ ಅಲ್ವಾ. ಹಾಗಾದರೆ ಈ ಹಾವು ಹೇಗೆ ಮಾತಾಡಿತು?— ಹೇಗೆಂದರೆ, ಹಾವೇ ಮಾತಾಡುತ್ತಿದೆ ಎಂದು ಹವ್ವಳಿಗೆ ಅನಿಸುವ ಹಾಗೆ ಒಬ್ಬ ದೇವದೂತನು ಮಾಡಿದನು. ನಿಜವೇನೆಂದರೆ ಮಾತಾಡುತ್ತಿದ್ದದ್ದು ಹಾವಲ್ಲ ಆ ದೇವದೂತನೇ! ಹಾಗ್ಯಾಕೆ ಮಾಡಿದನು? ಯಾಕೆಂದರೆ ಆ ದೇವದೂತನು ತನ್ನ ಮನಸ್ಸಿನಲ್ಲಿ ಕೆಟ್ಟ ಕೆಟ್ಟ ಆಲೋಚನೆಗಳನ್ನು ತುಂಬಿಸಿಕೊಂಡಿದ್ದನು. ಆದಾಮಹವ್ವರು ದೇವರನ್ನು ಬಿಟ್ಟು ತನ್ನನ್ನೇ ಆರಾಧಿಸಬೇಕೆಂದು ಅವನು ಆಸೆಪಟ್ಟನು. ತಾನು ಹೇಳಿದ್ದನ್ನೆ ಅವರು ಮಾಡಬೇಕೆಂದು ಬಯಸಿದನು. ಹೀಗೆ, ದೇವರಾಗಬೇಕು ಎಂಬ ದುರಾಸೆ ಅವನ ಮನಸ್ಸಿನಲ್ಲಿ ಹುಟ್ಟಿಕೊಂಡಿತು.

ತನ್ನಲ್ಲಿದ್ದ ಕೆಟ್ಟ ಆಸೆಗಳನ್ನು ಪೂರೈಸಲು ಆ ಕೆಟ್ಟ ದೂತನು ಹವ್ವಳ ಮನಸ್ಸಿನಲ್ಲಿ ತಪ್ಪುತಪ್ಪಾದ ವಿಷಯಗಳನ್ನು ತುಂಬಿಸಿದನು. ‘ದೇವರು ನಿಮಗೆ ಸುಳ್ಳು ಹೇಳಿದ್ದಾನೆ. ಆ ಮರದ ಹಣ್ಣನ್ನು ತಿಂದರೆ ನೀವು ಸಾಯುವಿರಿ ಎಂದು ದೇವರು ಹೇಳಿದನಲ್ಲವಾ. ಹಾಗೇನೂ ಆಗಲ್ಲ. ನೀವು ಸಾಯುವುದಿಲ್ಲ. ದೇವರಂತೆ ವಿವೇಕಿಗಳಾಗುತ್ತೀರಿ’ ಎಂದು ಅವನು ಹಾವಿನ ಮೂಲಕ ಹೇಳಿದನು. ನಿನಗೆ ಹೀಗೆ ಹೇಳಿದ್ದರೆ ನೀನು ನಂಬುತ್ತಿದ್ದೆಯಾ?—

ಯೆಹೋವನು ತಿನ್ನಬಾರದೆಂದು ಹೇಳಿದ ಹಣ್ಣಿಗಾಗಿ ಹವ್ವಳ ಮನಸ್ಸಿನಲ್ಲಿ ಆಸೆ ಹುಟ್ಟಿತು. ಆ ಆಸೆಯನ್ನು ತಡೆಯಲಾಗದೆ ಆಕೆ ಮರದಿಂದ ಹಣ್ಣನ್ನು ಕಿತ್ತು ತಿಂದಳು. ಆದಾಮನಿಗೂ ಸ್ವಲ್ಪ ಕೊಟ್ಟಳು. ಆದಾಮನು ಹಾವು ಹೇಳಿದ್ದ ಮಾತನ್ನು ನಂಬಲಿಲ್ಲ. ಆದರೆ ತನ್ನ ಹೆಂಡತಿಯ ಜೊತೆಗೆ ಇರಬೇಕೆಂಬ ಆಸೆ ಎಷ್ಟಿತ್ತೆಂದರೆ ಅವಳ ಮಾತನ್ನು ಕೇಳಿ ಆ ಹಣ್ಣನ್ನು ತಿಂದನು. ದೇವರ ಮೇಲಿನ ಪ್ರೀತಿಗಿಂತಲೂ ಹವ್ವಳ ಮೇಲಿನ ಪ್ರೀತಿ ಹೆಚ್ಚು ಬಲವಾಗಿತ್ತು ಎಂದು ಇದು ತೋರಿಸುತ್ತದೆ.—ಆದಿಕಾಂಡ 3:1-6; 1 ತಿಮೊಥೆಯ 2:14.

ಫಲಿತಾಂಶ ಏನಾಯಿತು?— ಅವರು ಅಪರಿಪೂರ್ಣರಾದರು, ಮುದುಕರಾಗಿ ಸತ್ತುಹೋದರು. ಅವರಿಗೆ ಹುಟ್ಟಿದ ಮಕ್ಕಳು ಸಹ ಅಪರಿಪೂರ್ಣರಾಗಿದ್ದರು. ಅವರೂ ಆದಾಮಹವ್ವರಂತೆ ಮುದುಕರಾಗಿ ಸತ್ತುಹೋದರು. ನೋಡಿದ್ಯಾ, ದೇವರು ಸುಳ್ಳು ಹೇಳಿರಲಿಲ್ಲ! ಯೆಹೋವ ದೇವರಿಗೆ ವಿಧೇಯತೆ ತೋರಿಸುವುದರ ಮೇಲೆ ನಮ್ಮ ಜೀವ ಹೊಂದಿಕೊಂಡಿದೆ ಎಂದು ಇದರಿಂದ ಗೊತ್ತಾಗುತ್ತದೆ ಅಲ್ವಾ. (ರೋಮನ್ನರಿಗೆ 5:12) ಹವ್ವಳಿಗೆ ಸುಳ್ಳು ಹೇಳಿ ಮೋಸಮಾಡಿದ ಆ ದೇವದೂತನನ್ನು ಬೈಬಲ್‌ ಪಿಶಾಚನಾದ ಸೈತಾನ ಎಂದು ಕರೆಯುತ್ತದೆ. ಸೈತಾನನಂತೆ ಬೇರೆ ದೇವದೂತರು ಸಹ ಕೆಟ್ಟವರಾದರು. ಅವರನ್ನು ದೆವ್ವಗಳು ಎಂದು ಬೈಬಲ್‌ ಕರೆಯುತ್ತದೆ.—ಯಾಕೋಬ 2:19; ಪ್ರಕಟನೆ 12:9.

ಆದಾಮಹವ್ವರು ದೇವರಿಗೆ ಅವಿಧೇಯರಾದ ಬಳಿಕ ಅವರಿಗೆ ಏನಾಯಿತು?

ದೇವರು ಸೃಷ್ಟಿಮಾಡಿದ ಒಬ್ಬ ಒಳ್ಳೆಯ ದೇವದೂತನು ಹೇಗೆ ಕೆಟ್ಟವನಾದನು ಅಂತ ನಿನಗೆ ಈಗ ಅರ್ಥ ಆಯಿತಾ?— ಹೌದು, ಆ ದೇವದೂತನು ತನ್ನ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ತುಂಬಿಸಿಕೊಂಡಿದ್ದನು. ದೇವರಿಗಿಂತಲೂ ಶ್ರೇಷ್ಠನಾಗಬೇಕೆಂಬ ಹೆಬ್ಬಯಕೆ ಅವನಿಗಿತ್ತು. ಅಷ್ಟೇ ಅಲ್ಲ, ಅವನಿಗೆ ಇನ್ನೊಂದು ಆಸೆ ಇತ್ತು. ದೇವರು ಆದಾಮಹವ್ವರಿಗೆ ಮಕ್ಕಳನ್ನು ಪಡೆಯಿರಿ ಎಂದು ಆಶೀರ್ವದಿಸಿದ್ದ ವಿಷಯ ಪಿಶಾಚನಿಗೆ ಗೊತ್ತಿತ್ತು. ಆ ಮಕ್ಕಳೆಲ್ಲರೂ ತನ್ನನ್ನು ಆರಾಧಿಸಬೇಕೆಂಬ ದುರಾಸೆ ಅವನಿಗಿತ್ತು. ಯೆಹೋವನ ಮಾತಿಗೆ ಯಾರೂ ವಿಧೇಯತೆ ತೋರಿಸದಂತೆ ಮಾಡುವುದೇ ಅವನ ಬಯಕೆ. ಆದುದರಿಂದ ಅವನು ನಮ್ಮ ಮನಸ್ಸುಗಳಲ್ಲಿ ಕೂಡ ಕೆಟ್ಟ ವಿಷಯಗಳನ್ನು ತುಂಬಿಸಲು ಪ್ರಯತ್ನಿಸುತ್ತಾನೆ.—ಯಾಕೋಬ 1:13-15.

ಯೆಹೋವನನ್ನು ಯಾರೂ ಮನಸ್ಸಾರೆ ಪ್ರೀತಿಸುವುದಿಲ್ಲ ಎಂದು ಪಿಶಾಚನು ವಾದಿಸುತ್ತಾನೆ. ನಿನಗಾಗಲಿ ನನಗಾಗಲಿ ದೇವರ ಮೇಲೆ ಕಿಂಚಿತ್ತೂ ಪ್ರೀತಿಯಿಲ್ಲ ಹಾಗೂ ದೇವರು ಹೇಳುವುದನ್ನು ಮಾಡಲು ನಮಗೆ ಇಷ್ಟವಿಲ್ಲ ಎಂದು ಪಿಶಾಚನು ಹೇಳುತ್ತಾನೆ. ಅಷ್ಟೇ ಅಲ್ಲ, ನಾವು ಸುಖವಾಗಿರುವಾಗ ಮಾತ್ರ ದೇವರಿಗೆ ವಿಧೇಯತೆ ತೋರಿಸುತ್ತೇವೆ ಇಲ್ಲದಿದ್ದರೆ ವಿಧೇಯತೆ ತೋರಿಸುವುದಿಲ್ಲ ಅಂತಾನೂ ಹೇಳುತ್ತಾನೆ. ನಾವು ಸ್ವಾರ್ಥ ಜನರು ಎನ್ನುವುದು ಪಿಶಾಚನ ಆರೋಪ. ಈ ಆರೋಪ ಸರಿನಾ? ನಾವು ಸ್ವಾರ್ಥಿಗಳಾ?

ಖಂಡಿತ ಇಲ್ಲ. ಪಿಶಾಚನು ಒಬ್ಬ ಸುಳ್ಳುಗಾರ ಎಂದು ಮಹಾ ಬೋಧಕನಾದ ಯೇಸು ಹೇಳಿದನು. ಯೇಸು ತನ್ನ ವಿಧೇಯತೆಯ ಮೂಲಕ ಯೆಹೋವನನ್ನು ಮನಸ್ಸಾರೆ ಪ್ರೀತಿಸುತ್ತಾನೆಂದು ರುಜುಪಡಿಸಿದನು. ತನಗೆ ಅನುಕೂಲವಾಗಿದ್ದಾಗ ಮಾತ್ರವಲ್ಲ ಎಲ್ಲಾ ಸಮಯ ಸಂದರ್ಭಗಳಲ್ಲೂ ದೇವರಿಗೆ ವಿಧೇಯತೆಯನ್ನು ತೋರಿಸಿದನು. ವಿಧೇಯತೆ ತೋರಿಸುವುದು ಅವನಿಗೆ ಎಲ್ಲಾ ಸಂದರ್ಭಗಳಲ್ಲೂ ಸುಲಭವಾಗಿರಲಿಲ್ಲ. ಜನರು ಅವನಿಗೆ ಎಷ್ಟೊ ಕಷ್ಟಕೊಟ್ಟರು, ಪ್ರಲೋಭನೆಗಳನ್ನು ತಂದಿಟ್ಟರು. ಆದರೂ ಯೇಸು ತನ್ನ ಕೊನೆ ಉಸಿರಿರುವ ತನಕ ಯೆಹೋವನಿಗೆ ವಿಧೇಯನಾಗಿಯೇ ಉಳಿದನು. ಯೇಸುವಿನ ವಿಧೇಯತೆಯನ್ನು ಮೆಚ್ಚಿದ ದೇವರು ಅವನನ್ನು ಪುನರುತ್ಥಾನಗೊಳಿಸಿ ಇನ್ನೆಂದೂ ಮರಣ ಹೊಂದದಂತೆ ಅಮರತ್ವವನ್ನು ಕೊಟ್ಟನು.

ಈಗ ಹೇಳು ನೋಡೋಣ ಯಾರು ನಮ್ಮ ದೊಡ್ಡ ಶತ್ರು?— ಹೌದು, ಪಿಶಾಚನಾದ ಸೈತಾನ. ನೀನು ಅವನನ್ನು ನೋಡಬಹುದಾ?— ಸಾಧ್ಯವಿಲ್ಲ! ಆದರೆ ಅವನು ನಿಜವಾಗಿಯೂ ಇದ್ದಾನೆ, ಮತ್ತು ನಮಗಿಂತ ಶಕ್ತಿಶಾಲಿಯೂ ಆಗಿದ್ದಾನೆ. ಇದನ್ನು ಕೇಳಿ ಭಯಪಟ್ಟುಕೊಳ್ಳಬೇಡ. ಏಕೆಂದರೆ, ಪಿಶಾಚನಿಗಿಂತ ಉನ್ನತನಾದವನು ಒಬ್ಬನಿದ್ದಾನೆ. ಅತನು ಯಾರೆಂದು ಹೇಳು ನೋಡೋಣ?— ಯೆಹೋವ ದೇವರು! ನಮ್ಮನ್ನು ಯೆಹೋವ ದೇವರು ಸಂರಕ್ಷಿಸುತ್ತಾನೆ, ಸೈತಾನನಿಂದ ತಪ್ಪಿಸಿ ಕಾಪಾಡುತ್ತಾನೆ.

ನಾವು ಆರಾಧಿಸಬೇಕಾದ ದೇವರ ಎಂಥವನು ಎಂದು ಓದಿ ತಿಳಿಯೋಣ: ಧರ್ಮೋಪದೇಶಕಾಂಡ 30:19, 20; ಯೆಹೋಶುವ 24:14, 15; ಜ್ಞಾನೋಕ್ತಿ 27:11 ಮತ್ತು ಮತ್ತಾಯ 4:10.