ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 14

ನಾವು ಏಕೆ ಕ್ಷಮಿಸಬೇಕು?

ನಾವು ಏಕೆ ಕ್ಷಮಿಸಬೇಕು?

ಯಾರಾದರೂ ನಿನ್ನ ಮನಸ್ಸು ನೋಯಿಸಿದ್ದಾರಾ?— ಅವರ ಚುಚ್ಚು ಮಾತುಗಳಿಂದ ನಿನಗೆ ದುಃಖ ಉಮ್ಮಳಿಸಿ ಬಂದಿದೆಯಾ?— ಸೇಡಿಗೆ ಪ್ರತಿಯಾಗಿ ಸೇಡು ಅಂತ ನೀನು ಅವರನ್ನು ಅದೇ ರೀತಿಯಲ್ಲಿ ನೋಯಿಸಬೇಕು ಎಂದು ನೆನಸುತ್ತೀಯಾ?—

ಕೆಲವರು ಹಾಗೆ ಮಾಡುತ್ತಾರೆ. ತಮ್ಮ ಮನಸ್ಸಿಗೆ ನೋವು ಮಾಡಿದವರಿಗೆ ತಕ್ಕ ಶಾಸ್ತಿ ಆಗಬೇಕೆಂದು ನೆನಸಿ ಅವರ ಮನಸ್ಸಿಗೂ ನೋವುಂಟು ಮಾಡುತ್ತಾರೆ. ಆದರೆ, ನಮಗೆ ತಪ್ಪು ಮಾಡುವವರನ್ನು ನಾವು ಕ್ಷಮಿಸಬೇಕು ಅಂತ ಯೇಸು ಕಲಿಸಿದನು. (ಮತ್ತಾಯ 6:12) ಒಬ್ಬ ವ್ಯಕ್ತಿ ಪುನಃ ಪುನಃ ನಮ್ಮ ಮನಸ್ಸನ್ನು ನೋಯಿಸುವುದಾದರೆ ಆಗೇನು? ಎಷ್ಟು ಸಾರಿ ನಾವು ಅವನನ್ನು ಕ್ಷಮಿಸಬೇಕು?—

ಪೇತ್ರನ ಮನಸ್ಸಿನಲ್ಲೂ ಇದೇ ಪ್ರಶ್ನೆ ಇತ್ತು. ಆದುದರಿಂದ ಅವನು ಒಂದು ದಿನ ಯೇಸುವಿಗೆ, ‘ನಾನು ಎಷ್ಟು ಸಾರಿ ಒಬ್ಬನನ್ನು ಕ್ಷಮಿಸಬೇಕು? ಏಳು ಸಾರಿಯೋ?’ ಎಂದು ಕೇಳಿದನು. ಅದಕ್ಕೆ ಯೇಸು ‘ಎಪ್ಪತ್ತೇಳು ಸಾರಿ ಕ್ಷಮಿಸಬೇಕು’ ಅಂದನು. ಅಂದರೆ ಒಬ್ಬನನ್ನು ಏಳು ಸಾರಿ ಕ್ಷಮಿಸಿದರೆ ಸಾಕಾಗುವುದಿಲ್ಲ. ಆ ವ್ಯಕ್ತಿ ನಿನ್ನ ವಿರುದ್ಧ ಎಪ್ಪತ್ತೇಳು ಸಾರಿ ತಪ್ಪುಮಾಡುವುದಾದರೆ ನೀನು ಅವನನ್ನು ಎಪ್ಪತ್ತೇಳು ಸಾರಿಯೂ ಕ್ಷಮಿಸಬೇಕು ಎಂದು ಯೇಸು ಹೇಳಿದನು.

ಕ್ಷಮಿಸುವ ಕುರಿತು ಪೇತ್ರನ ಮನಸ್ಸಿನಲ್ಲಿ ಯಾವ ಪ್ರಶ್ನೆ ಇತ್ತು?

ಅಬ್ಬಾ, ಅಷ್ಟೊಂದು ಸಾರಿ! ಒಬ್ಬನು ಅಷ್ಟು ಸಾರಿ ತಪ್ಪುಗಳನ್ನು ಮಾಡುವಾಗ ಅವೆಲ್ಲವನ್ನೂ ನೆನಪು ಇಟ್ಟುಕೊಳ್ಳಲು ನಮಗೆ ಆಗುತ್ತಾ. ಇಲ್ಲಲ್ವಾ. ಅದನ್ನೇ ಯೇಸು ಕೂಡ ಹೇಳುತ್ತಿದ್ದನು. ಇನ್ನೊಬ್ಬರು ಮಾಡಿದ ತಪ್ಪನ್ನು ನಾವು ಸದಾ ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಅವರು ಕ್ಷಮೆ ಕೇಳಿದ ಕೂಡಲೇ ಕ್ಷಮಿಸಿ ತಪ್ಪನ್ನು ಮರೆತುಬಿಡಬೇಕು.

ಕ್ಷಮಿಸುವುದು ಎಷ್ಟು ಪ್ರಾಮುಖ್ಯ ಅಂತ ಯೇಸು ತನ್ನ ಶಿಷ್ಯರಿಗೆ ಅರ್ಥಮಾಡಿಸಲು ಬಯಸಿದನು. ಅದಕ್ಕೆ ಅವನು ಪೇತ್ರನ ಪ್ರಶ್ನೆಗೆ ಉತ್ತರ ಕೊಟ್ಟ ಮೇಲೆ ಶಿಷ್ಯರಿಗೆ ಒಂದು ಕಥೆ ಹೇಳಿದನು. ಆ ಕಥೆ ಕೇಳಲು ಇಷ್ಟನಾ?—

ಒಂದಾನೊಂದು ಕಾಲದಲ್ಲಿ ಒಬ್ಬ ಒಳ್ಳೇ ಅರಸನಿದ್ದ. ಕಷ್ಟದಲ್ಲಿದ್ದ ಜನರಿಗೆಲ್ಲ ಕರುಣೆ ತೋರಿಸಿ ಸಹಾಯಮಾಡುತ್ತಿದ್ದ. ತನ್ನ ಆಳುಗಳಿಗೆ ಹಣದ ಅಗತ್ಯವಿದ್ದಾಗಲೆಲ್ಲ ಸಾಲವನ್ನೂ ಕೊಡುತ್ತಿದ್ದ. ಒಂದು ದಿನ ಆ ಅರಸನು ತನ್ನ ಸಾಲಗಾರರಿಂದ ಹಣ ವಸೂಲಿ ಮಾಡಲು ಯೋಚಿಸಿದ. 6 ಕೋಟಿ ನಾಣ್ಯಗಳನ್ನು ಸಾಲ ಪಡೆದುಕೊಂಡಿದ್ದ ಒಬ್ಬ ಆಳನ್ನು ಅವನ ಮುಂದೆ ಕರೆತರಲಾಯಿತು. ಅಬ್ಬಬ್ಬಾ! ಆರು ಕೋಟಿ.

ಈ ಆಳು ಅರಸನ ಬಳಿ ಸಾಲ ತೀರಿಸಲು ಸಮಯಕ್ಕಾಗಿ ಬೇಡಿಕೊಂಡಾಗ ಏನಾಯಿತು?

ಆ ಆಳು ಅರಸನು ಕೊಟ್ಟಿದ್ದ ಹಣವನ್ನೆಲ್ಲ ಖರ್ಚುಮಾಡಿಬಿಟ್ಟಿದ್ದ. ಹಾಗಾಗಿ ಅವನಿಗೆ ಸಾಲ ತೀರಿಸಲು ಆಗಲಿಲ್ಲ. ಆಗ, ಅರಸನು ಆ ಆಳು ತನ್ನನ್ನೇ ಮಾರಿಕೊಂಡಾದರೂ ಸಾಲ ತೀರಿಸುವಂತೆ ಅಪ್ಪಣೆ ಕೊಟ್ಟನು. ಮಾತ್ರವಲ್ಲ ಹೆಂಡತಿ ಮಕ್ಕಳನ್ನೂ ಮನೆಮಾರು ಮುಂತಾದ ಎಲ್ಲವನ್ನೂ ಮಾರಿ ಸಾಲ ತೀರಿಸುವಂತೆ ಹೇಳಿದ. ಪಾಪ, ಇದನ್ನು ಕೇಳಿ ಆ ಆಳಿಗೆ ಹೇಗೆ ಅನಿಸಿರಬೇಕು? ನಿನಗೇನು ಅನಿಸ್ತದೆ?—

ಅಯ್ಯೋ! ಮುಂದೇನು ಗತಿ ಎಂದು ನೆನಸಿದ ಆ ಅಳು ಅರಸನ ಮುಂದೆ ಮೊಣಕಾಲೂರಿ, ‘ದಯವಿಟ್ಟು ನನಗೆ ಇನ್ನೂ ಸ್ವಲ್ಪ ಸಮಯ ಕೊಡಿ. ನಾನು ನಿಮ್ಮ ಸಾಲವನ್ನೆಲ್ಲ ತೀರಿಸುತ್ತೇನೆ’ ಎಂದು ಬೇಡಿಕೊಂಡ. ನೀನು ಅರಸನ ಜಾಗದಲ್ಲಿದ್ದರೆ ಏನು ಮಾಡುತ್ತಿದ್ದೆ?— ಆ ಆಳಿನ ಗೋಳನ್ನು ನೋಡಿ ಅರಸನಿಗೆ ಅಯ್ಯೋ ಪಾಪ ಅಂತ ಮರುಕ ಹುಟ್ಟಿತು. ಅವನನ್ನು ಅರಸನು ಕ್ಷಮಿಸಿಬಿಟ್ಟನು. ಅಷ್ಟೇ ಅಲ್ಲ, ಸಾಲದ ಹಣದಲ್ಲಿ ನಯಾಪೈಸೆ ಕೂಡ ವಾಪಸ್‌ ಕೊಡಬೇಕಾಗಿಲ್ಲ ಎಂದು ಆ ಆಳಿಗೆ ಹೇಳಿದ. ಈ ಮಾತನ್ನು ಕೇಳಿ ಆ ಆಳಿಗೆ ಎಷ್ಟು ಸಂತೋಷ ಆಗಿರಬೇಕು ಊಹಿಸು!

ಆದರೆ, ಆ ಆಳು ಏನು ಮಾಡಿದ ಗೊತ್ತಾ? ತನ್ನಿಂದ ಕೇವಲ ನೂರು ನಾಣ್ಯಗಳನ್ನು ಸಾಲ ಪಡೆದುಕೊಂಡಿದ್ದ ಮತ್ತೊಬ್ಬ ಆಳನ್ನು ಹುಡುಕಿದ. ಅವನು ಸಿಕ್ಕಿದ ಕೂಡಲೇ ಅವನ ಕುತ್ತಿಗೆ ಹಿಸುಕುತ್ತಾ, ‘ನನಗೆ ಕೊಡಬೇಕಾಗಿರುವ ನೂರು ನಾಣ್ಯಗಳನ್ನು ಕೊಟ್ಟು ತೀರಿಸು’ ಎಂದು ಗದರಿಸಿದ. ಸ್ವಲ್ಪ ಯೋಚಿಸು! ದೊಡ್ಡ ಮೊತ್ತದ ಸಾಲವನ್ನು ಅರಸನು ಮನ್ನ ಮಾಡಿದ್ದ. ಆದರೆ ಇವನು? ಛೇ, ಕೇವಲ ನೂರು ನಾಣ್ಯಗಳಿಗೆ ಹೇಗೆ ನಡೆದುಕೊಂಡ ನೋಡು! ಇದು ಸರಿ ಅಂತ ನಿನಗೆ ಅನಿಸುತ್ತಾ?—

ಸಾಲ ತೀರಿಸಲಾಗದ ಬಡ ಆಳಿನೊಂದಿಗೆ ಜೊತೆ ಆಳು ಹೇಗೆ ವರ್ತಿಸಿದನು?

ಮುಂದೇನಾಯಿತು ಅಂತ ಕೇಳು. ನೂರು ನಾಣ್ಯಗಳನ್ನು ಕೊಡಬೇಕಾಗಿದ್ದ ಆಳು ತುಂಬ ಬಡವನಾಗಿದ್ದ. ಅದಕ್ಕೆ ಕೂಡಲೇ ಸಾಲ ತೀರಿಸಲಿಕ್ಕೆ ಅವನಿಂದ ಆಗಲಿಲ್ಲ. ಆದ್ದರಿಂದ ತನ್ನ ಜೊತೆ ಆಳಿನ ಕಾಲಿಗೆ ಬಿದ್ದು, ‘ದಯಮಾಡಿ ನನಗೆ ಇನ್ನೂ ಸ್ವಲ್ಪ ಸಮಯ ಕೊಡು. ನಿನ್ನ ಸಾಲವನ್ನೆಲ್ಲ ತೀರಿಸುತ್ತೇನೆ’ ಎಂದು ಬೇಡಿಕೊಂಡ. ಆಗ ಆ ಜೊತೆ ಆಳು ಏನು ಮಾಡಬೇಕಿತ್ತು? ಸಾಲ ತೀರಿಸಲು ಅವನಿಗೆ ಇನ್ನೂ ಸ್ವಲ್ಪ ಸಮಯ ಕೊಡಬೇಕಿತ್ತು ತಾನೆ?— ನೀನಾಗಿದ್ದರೆ ಏನು ಮಾಡುತ್ತಿದ್ದೆ? ಸಮಯ ಕೊಡುತ್ತಿದ್ಯಾ?—

ಆದರೆ ಅವನು ಕೊಡಲಿಲ್ಲ. ಅರಸನು ಕರುಣೆ ತೋರಿಸಿದ ಹಾಗೆ ಈ ಬಡ ಆಳಿಗೆ ಅವನು ಸ್ವಲ್ಪವೂ ಕರುಣೆ ತೋರಿಸಲಿಲ್ಲ. ಹಣವನ್ನು ಈಗಲೇ ಕೊಡು ಎಂದು ಒತ್ತಾಯ ಮಾಡಿದ. ಪಾಪ ಈ ಬಡ ಆಳು ಕೂಡಲೇ ಎಲ್ಲಿಂದ ಹಣ ತರುತ್ತಾನೆ ಹೇಳು! ಸಾಲ ತೀರಿಸಲಾಗದ ಈ ಆಳನ್ನು ಅವನು ಜೈಲಿಗೆ ಹಾಕಿಸಿದ. ಇದೆಲ್ಲವನ್ನೂ ಬೇರೆ ಆಳುಗಳು ನೋಡುತ್ತಿದ್ದರು. ಅವನು ಬಡ ಆಳಿನೊಂದಿಗೆ ನಡೆದುಕೊಂಡ ರೀತಿ ಅವರಿಗೆ ಇಷ್ಟವಾಗಲಿಲ್ಲ. ಜೈಲಿನಲ್ಲಿದ್ದ ಆಳನ್ನು ನೋಡಿ ಅವರಿಗೆ ಅಯ್ಯೋ ಪಾಪ ಅನಿಸಿತು. ಆದುದರಿಂದ ಅರಸನ ಬಳಿ ಹೋಗಿ ನಡೆದುದ್ದನ್ನೆಲ್ಲ ತಿಳಿಸಿದರು.

ಅದನ್ನು ಕೇಳಿ ಅರಸನಿಗೆ ತುಂಬಾ ಕೋಪ ಬಂತು. ಆ ಆಳು ಮಾಡಿದ ವಿಷಯ ಅರಸನಿಗೆ ಒಂದು ಚೂರು ಹಿಡಿಸಲಿಲ್ಲ. ಅದಕ್ಕೆ ಆ ಆಳನ್ನು ಕರೆಸಿ, ‘ದುಷ್ಟನೇ, ನಾನು ನಿನ್ನ ಸಾಲವನ್ನೆಲ್ಲ ಮನ್ನಿಸಲಿಲ್ಲವೆ? ಅದೇ ರೀತಿ ನೀನು ಸಹ ನಿನ್ನ ಜೊತೆ ಆಳಿನ ಸಾಲವನ್ನು ಮನ್ನಿಸಬೇಕಿತ್ತಲ್ಲವೆ?’ ಎಂದು ಕೇಳಿದನು.

ಸಾಲ ಮನ್ನ ಮಾಡದಿದ್ದ ಆಳನ್ನು ಅರಸನು ಏನು ಮಾಡಿದನು?

ಹೌದು, ಆ ಒಳ್ಳೇ ಅರಸನಿಂದ ಆ ಆಳು ಪಾಠವನ್ನು ಕಲಿಯಬೇಕಿತ್ತು. ಆದರೆ ಅವನು ಕಲಿಯಲಿಲ್ಲ. ಆದುದರಿಂದ 6 ಕೋಟಿ ನಾಣ್ಯಗಳನ್ನು ಹಿಂದಿರುಗಿಸುವ ತನಕ ಅರಸನು ಅವನನ್ನು ಜೈಲಿಗೆ ಹಾಕಿಸಿದನು. ಜೈಲಿನಲ್ಲಿ ಇದ್ದುಕೊಂಡು ಅರಸನ ಸಾಲ ತೀರಿಸಲು ಸಾಧ್ಯನಾ? ಇಲ್ಲ ಅಲ್ವಾ. ಜೈಲಿನಲ್ಲಿ ಅಷ್ಟೊಂದು ಹಣ ಸಂಪಾದಿಸಲು ಸಾಧ್ಯವಿಲ್ಲ. ಆದುದರಿಂದ ಸಾಯುವ ತನಕ ಅವನು ಜೈಲಿನಲ್ಲೇ ಬಿದ್ದಿರಬೇಕಿತ್ತು.

ಯೇಸು ಈ ಕಥೆಯನ್ನು ಹೇಳಿ ಮುಗಿಸಿದ ಮೇಲೆ ತನ್ನ ಹಿಂಬಾಲಕರಿಗೆ ಹೀಗೆ ಹೇಳಿದನು. ‘ಅದೇ ರೀತಿಯಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನನ್ನು ಮನಸ್ಸಾರೆ ಕ್ಷಮಿಸದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆಯು ಸಹ ನಿಮ್ಮನ್ನು ಕ್ಷಮಿಸುವುದಿಲ್ಲ.’—ಮತ್ತಾಯ 18:21-35.

ಒಂದರ್ಥದಲ್ಲಿ ದೇವರಿಗೆ ನಾವು ತುಂಬಾ ಸಾಲ ತೀರಿಸಬೇಕಾಗಿದೆ. ಆತನೇ ನಮ್ಮೆಲ್ಲರಿಗೆ ಜೀವ ನೀಡಿದ್ದಾನೆ. ಹಾಗಾಗಿ, ನಾವು ದೇವರಿಗೆ ತೀರಿಸಬೇಕಾಗಿರುವ ಸಾಲದ ಮುಂದೆ ಬೇರೆಯವರು ನಮಗೆ ತೀರಿಸಬೇಕಾಗಿರುವ ಸಾಲ ಏನೂ ಅಲ್ಲ. ಬೇರೆಯವರು ನಮಗೆ ಕೊಡಬೇಕಾಗಿರುವುದು ಕೇವಲ ನೂರು ನಾಣ್ಯಗಳ ಸಾಲದಂತಿದೆ ಅಷ್ಟೇ. ಆದರೆ ನಾವು ಮಾಡಿರುವ ತಪ್ಪುಗಳಿಗಾಗಿ ದೇವರಿಗೆ ತೀರಿಸಬೇಕಾದ ಸಾಲವನ್ನು ಲೆಕ್ಕ ಮಾಡುವುದಾದರೆ, ಅದು 6 ಕೋಟಿ ನಾಣ್ಯಗಳಷ್ಟು ದೊಡ್ಡದು. ಅದನ್ನು ತೀರಿಸಲು ನಮ್ಮಿಂದ ಸಾಧ್ಯವೇ ಇಲ್ಲ.

ಆದರೆ, ದೇವರು ದಯಾಮಯಿ. ಅವನು ನಮ್ಮ ಕಡೆಗೆ ಕರುಣೆ ಕನಿಕರ ತೋರಿಸುತ್ತಾನೆ. ನಾವು ತಪ್ಪುಗಳನ್ನು ಮಾಡಿರುವುದಾದರೂ ಆತನು ನಮ್ಮನ್ನು ಕ್ಷಮಿಸುತ್ತಾನೆ. ನಮ್ಮ ತಪ್ಪುಗಳಿಗೆ ಶಿಕ್ಷೆಯಾಗಿ ನಮ್ಮಿಂದ ನಿತ್ಯಜೀವವನ್ನು ಕಸಿದುಕೊಳ್ಳುವುದಿಲ್ಲ. ನಾವು ದೇವರ ಕರುಣೆಯನ್ನು ಪಡೆಯಬೇಕಾದರೆ ಒಂದು ಪಾಠವನ್ನು ಯಾವಾಗಲೂ ನೆನಪಿಡಬೇಕು. ಅದೇನೆಂದರೆ, ನಮಗೆ ತಪ್ಪುಮಾಡಿರುವವರನ್ನು ನಾವು ಕ್ಷಮಿಸುವುದಾದರೆ ಮಾತ್ರ ದೇವರು ನಮ್ಮನ್ನು ಕ್ಷಮಿಸುತ್ತಾನೆ. ಇದೊಂದು ಪ್ರಾಮುಖ್ಯ ಪಾಠವಲ್ವಾ?—

ಕ್ಷಮಿಸು ಅಂತ ಯಾರಾದರೂ ಕೇಳಿದರೆ ನೀನು ಏನು ಮಾಡುತ್ತೀ?

ಸರಿ, ಈಗ ಹೇಳು ಯಾರಾದರೂ ನಿನ್ನ ಮನಸ್ಸು ನೋಯಿಸಿ ಆಮೇಲೆ ಬಂದು ಕ್ಷಮೆ ಕೇಳಿದರೆ ನೀನು ಏನು ಮಾಡುತ್ತೀ? ಅವರನ್ನು ಕ್ಷಮಿಸುತ್ತೀಯಾ?— ಪುನಃ ಪುನಃ ನೋಯಿಸಿದರೆ? ಆಗಲೂ ಕ್ಷಮಿಸುತ್ತೀಯಾ?—

ನೀನು ಬೇರೆಯವರ ಹತ್ತಿರ ಕ್ಷಮೆ ಕೇಳ್ತಿಯಾ ಅಂತ ಇಟ್ಟುಕೋ. ಅವರು ನಿನಗೆ ಏನು ಮಾಡಬೇಕು ಅಂತ ಬಯಸುತ್ತೀ? ನಿನ್ನನ್ನು ಕ್ಷಮಿಸಬೇಕು ಅಂತ ತಾನೆ?— ಅದೇ ರೀತಿ ನೀನು ಸಹ ಬೇರೆಯವರನ್ನು ಕ್ಷಮಿಸಬೇಕು. ‘ಸರಿ, ನಿನ್ನನ್ನು ಕ್ಷಮಿಸಿದ್ದೇನೆ’ ಎಂದು ಹೇಳಿದರೆ ಸಾಕಾಗಲ್ಲ. ಅವರನ್ನು ನಾವು ಮನಸ್ಸಾರೆ ಕ್ಷಮಿಸಬೇಕು. ಹೀಗೆ ಕ್ಷಮಿಸುವಾಗ, ನಾವು ಯೇಸುವಿನ ಹಿಂಬಾಲಕರಾಗುತ್ತೇವೆ ಮತ್ತು ಇದನ್ನು ಬೇರೆಯವರೂ ಗಮನಿಸುತ್ತಾರೆ.

ಕ್ಷಮಿಸುವುದರ ಪ್ರಮುಖತೆಯನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ನಾವು, ಜ್ಞಾನೋಕ್ತಿ 19:11; ಮತ್ತಾಯ 6:14, 15 ಮತ್ತು ಲೂಕ 17:3, 4 ಓದಿ ನೋಡೋಣ.