ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 9

ನಾವು ಪ್ರಲೋಭನೆಗಳಿಗೆ ಬಲಿಯಾಗಬಾರದು

ನಾವು ಪ್ರಲೋಭನೆಗಳಿಗೆ ಬಲಿಯಾಗಬಾರದು

ಯಾರಾದರೂ ಕೆಟ್ಟ ಕೆಲಸವನ್ನು ಮಾಡುವಂತೆ ನಿನ್ನನ್ನು ಒತ್ತಾಯಿಸಿದ್ದಾರಾ?— ಧಮ್‌ ಇದ್ದರೆ ಇದನ್ನು ಮಾಡು ನೋಡೋಣ ಅಂತ ಸವಾಲು ಹಾಕಿದ್ದಾರಾ? ಮಜಾ ಸಿಗುತ್ತೆ, ಇದರಲ್ಲಿ ಏನು ತಪ್ಪಿಲ್ಲ, ಎಲ್ಲರೂ ಮಾಡುತ್ತಾರೆ ಎಂದು ಪುಸಲಾಯಿಸಿದ್ದಾರಾ?— ಇಂಥ ಮಾತುಗಳನ್ನು ಯಾರಾದರೂ ನಿನಗೆ ಹೇಳಿರುವುದಾದರೆ ಅವರು ನಿನ್ನಲ್ಲಿ ಕೆಟ್ಟ ಆಸೆಗಳನ್ನು ಹುಟ್ಟಿಸುತ್ತಿದ್ದಾರೆ. ಕೆಟ್ಟ ಆಸೆಯನ್ನು ಹುಟ್ಟಿಸುವುದೇ ಪ್ರಲೋಭನೆ ಆಗಿದೆ.

ಯಾರಾದರೂ ನಮ್ಮನ್ನು ಪ್ರಲೋಭನೆಗೊಳಿಸಿದಾಗ ನಾವು ಏನು ಮಾಡಬೇಕು? ಎಲ್ಲರೂ ಮಾಡುತ್ತಾರೆ ತಪ್ಪೇನಿಲ್ಲ ಅಂತ ನಾವೂ ಮಾಡೋದಾ?— ಹಾಗೆ ಮಾಡಿದರೆ ಯೆಹೋವ ದೇವರಿಗಂತೂ ಖಂಡಿತ ಸಂತೋಷ ಆಗುವುದಿಲ್ಲ. ಆದರೆ ಒಬ್ಬರಿಗೆ ಮಾತ್ರ ಸಂತೋಷ ಆಗುತ್ತೆ. ಯಾರಿಗೆ ಗೊತ್ತಾ?— ಹೌದು, ಪಿಶಾಚನಾದ ಸೈತಾನನಿಗೆ ತುಂಬಾ ಖುಷಿಯಾಗುತ್ತದೆ.

ಸೈತಾನನು ದೇವರ ಶತ್ರು. ನಮಗೂ ಶತ್ರು. ದೇವದೂತರಂತೆ ಅವನೊಬ್ಬ ಆತ್ಮಜೀವಿ ಅಗಿರುವುದರಿಂದ ಅವನು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅವನು ಎಲ್ಲವನ್ನೂ ನೋಡುತ್ತಾನೆ. ಯೇಸು ಭೂಮಿಯಲ್ಲಿ ಇದ್ದಾಗ ಮಾಡುತ್ತಿದ್ದ ಎಲ್ಲ ವಿಷಯಗಳನ್ನು ಪಿಶಾಚನು ಗಮನಿಸುತ್ತಿದ್ದನು. ಒಮ್ಮೆ ಅವನು ಯೇಸುವನ್ನು ಪ್ರಲೋಭನೆಗೊಳಿಸಲು ಪ್ರಯತ್ನಿಸಿದನು. ಆ ಸಂದರ್ಭದಲ್ಲಿ ಯೇಸು ಏನು ಮಾಡಿದನು ಗೊತ್ತಾ? ಅದನ್ನು ತಿಳಿದುಕೊಳ್ಳೋದು ಒಳ್ಳೇದು. ಏಕೆಂದರೆ ಪ್ರಲೋಭನೆಗಳು ಬಂದಾಗ ನಾವೇನು ಮಾಡಬೇಕು ಅಂತ ಇದರಿಂದ ಗೊತ್ತಾಗುತ್ತೆ.

ಯೇಸು ದೀಕ್ಷಾಸ್ನಾನ ಪಡೆದುಕೊಂಡ ಸಮಯದಲ್ಲಿ ಯಾವೆಲ್ಲ ವಿಷಯಗಳು ಅವನ ನೆನಪಿಗೆ ಬಂದವು?

ಯೇಸು ಯಾವಾಗಲೂ ದೇವರ ಚಿತ್ತವನ್ನು ಮಾಡಲು ಬಯಸಿದನು. ಯೋರ್ದನ್‌ ನದಿಯಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ತನ್ನ ಆ ಬಯಕೆಯನ್ನು ಅವನು ಎಲ್ಲರಿಗೂ ತಿಳಿಯಪಡಿಸಿದನು. ಸೈತಾನನು ಯೇಸುವನ್ನು ಪ್ರಲೋಭನೆಗೊಳಿಸಲು ಪ್ರಯತ್ನಿಸಿದ್ದು ಯೇಸುವಿನ ದೀಕ್ಷಾಸ್ನಾನದ ನಂತರವೇ. ಸರಿ ಈಗ ದೀಕ್ಷಾಸ್ನಾನದ ಸಮಯದಲ್ಲಿ ಏನು ನಡೆಯಿತು ಅಂತ ನೋಡೋಣ. ಆ ಸಮಯದಲ್ಲಿ ಯೇಸುವಿಗೆ “ಆಕಾಶವು ತೆರೆಯಲ್ಪಟ್ಟಿತು” ಎಂದು ಬೈಬಲ್‌ ಹೇಳುತ್ತದೆ. (ಮತ್ತಾಯ 3:16) ಇದರರ್ಥ ಏನು? ಯೇಸು ಸ್ವರ್ಗದಲ್ಲಿ ತನ್ನ ತಂದೆಯೊಂದಿಗೆ ಇದ್ದಾಗ ನಡೆದ ಎಲ್ಲಾ ವಿಷಯಗಳು ಈಗ ಅವನ ನೆನಪಿಗೆ ಮತ್ತೆ ಬರಲಾರಂಭಿಸಿದವು ಅಂತ ಇದು ಸೂಚಿಸುತ್ತಿರಬಹುದು.

ನೆನಪಿಗೆ ಬರಲಾರಂಭಿಸಿದ ಈ ಎಲ್ಲಾ ವಿಷಯಗಳ ಕುರಿತು ಆಲೋಚಿಸಲು ಯೇಸು ಒಂದು ಅರಣ್ಯಕ್ಕೆ ಹೋದನು. ಹಾಗೆಯೇ ನಲವತ್ತು ದಿನಗಳು ಕಳೆದವು. ಅಷ್ಟು ದಿನವೂ ಯೇಸು ಏನನ್ನು ತಿಂದಿರಲಿಲ್ಲ. ಸ್ವಲ್ಪ ಯೋಚಿಸು, ಅವನಿಗೆ ಎಷ್ಟು ಹಸಿವಾಗಿರಬೇಕು ಅಲ್ವಾ? ಯೇಸುವನ್ನು ಪ್ರಲೋಭಿಸಲು ಇದೇ ಸರಿಯಾದ ಸಮಯ ಅಂತ ಸೈತಾನನು ನೆನಸಿದನು.

ಪಿಶಾಚನು ಕಲ್ಲುಗಳನ್ನು ತೋರಿಸಿ ಯೇಸುವನ್ನು ಹೇಗೆ ಪ್ರಲೋಭಿಸಿದನು?

ಪಿಶಾಚನು ಯೇಸುವಿನ ಬಳಿ ಬಂದು, “ನೀನು ದೇವರ ಮಗನಾಗಿರುವಲ್ಲಿ ಈ ಕಲ್ಲುಗಳಿಗೆ ರೊಟ್ಟಿಗಳಾಗುವಂತೆ ಹೇಳು” ಅಂದನು. ಹೊಟ್ಟೆ ಹಸಿದಿರುವಾಗ ರೊಟ್ಟಿ ಸಿಕ್ಕಿದರೆ ಹೇಗಿರುತ್ತೆ ಅಲ್ವಾ! ಆದರೆ ಕಲ್ಲುಗಳನ್ನು ರೊಟ್ಟಿಗಳಾಗಿ ಮಾಡುವ ಶಕ್ತಿ ಯೇಸುವಿಗೆ ಇತ್ತಾ?— ಇತ್ತು. ಏಕೆಂದರೆ, ಯೇಸು ಸಾಧಾರಣ ಮನುಷ್ಯನಾಗಿರಲಿಲ್ಲ. ದೇವರ ಮಗನಾಗಿದ್ದನು. ಆದ್ದರಿಂದ ಅವನಿಗೆ ವಿಶೇಷ ಶಕ್ತಿ ಇತ್ತು.

ನಿನಗೂ ಆ ವಿಶೇಷ ಶಕ್ತಿಯಿದೆ ಅಂತ ಇಟ್ಕೋ. ಕಲ್ಲನ್ನು ರೊಟ್ಟಿಯಾಗಿ ಮಾಡು ಅಂತ ಪಿಶಾಚನು ಹೇಳಿದ್ದರೆ ನೀನೇನು ಮಾಡುತ್ತಿದ್ದೆ?— ಆ ಸಮಯದಲ್ಲಿ ಯೇಸುವಿಗೆ ತುಂಬಾ ಹಸಿವೆಯಾಗಿತ್ತು. ಹೀಗಿರುವಾಗ ಅವನು ಆ ಅದ್ಭುತವನ್ನು ಮಾಡಿ ಹೊಟ್ಟೆತುಂಬ ತಿಂದಿರಬಹುದಿತ್ತಲ್ವಾ?— ಆದರೆ ಹೀಗೆ ಮಾಡುವುದು ತಪ್ಪು ಅಂತ ಯೇಸುವಿಗೆ ಗೊತ್ತಿತ್ತು. ದೇವರು ಆ ವಿಶೇಷ ಶಕ್ತಿಯನ್ನು ತನಗೆ ಕೊಟ್ಟಿರುವುದು ದೇವರ ಕಡೆಗೆ ಜನರನ್ನು ಆಕರ್ಷಿಸಲು ಎಂದು ಯೇಸುವಿಗೆ ತಿಳಿದಿತ್ತು. ಆ ಶಕ್ತಿಯನ್ನು ತನ್ನ ಸ್ವಂತ ಇಚ್ಛೆಗಳ ಪೂರೈಕೆಗೆ ಬಳಸುವುದು ಅವನಿಗೆ ಇಷ್ಟವಿರಲಿಲ್ಲ.

ಆದುದರಿಂದ ಯೇಸು ಸೈತಾನನಿಗೆ, ‘ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು’ ಎಂದು ಬೈಬಲಿನಲ್ಲಿ ಬರೆದಿರುವ ವಚನವನ್ನು ಹೇಳಿದನು. ಯೆಹೋವನ ಮೆಚ್ಚುಗೆಯನ್ನು ಪಡೆಯುವುದು ಆಹಾರ ತಿಂಡಿಗಿಂತ ಎಷ್ಟೋ ಮುಖ್ಯ ಅಂತ ಯೇಸುವಿಗೆ ಗೊತ್ತಿತ್ತು. ತಿನ್ನಲು ಏನೂ ಇಲ್ಲದಿದ್ದರೂ ಸರಿ ಯೆಹೋವನ ಮೆಚ್ಚುಗೆಯನ್ನು ಕಳೆದುಕೊಳ್ಳಬಾರದು ಎಂದು ಅವನು ತೋರಿಸಿದನು.

ಆದರೆ ಪಿಶಾಚನು ಬಿಟ್ಟುಕೊಡಲಿಲ್ಲ. ಪುನಃ ಮತ್ತೊಂದು ರೀತಿಯಲ್ಲಿ ಯೇಸುವನ್ನು ಪ್ರಲೋಭನೆಗೊಳ್ಳಿಸಲು ಪ್ರಯತ್ನಿಸಿದನು. ಅವನು ಯೇಸುವನ್ನು ಯೆರೂಸಲೇಮಿನ ದೇವಾಲಯದ ಒಂದು ಎತ್ತರವಾದ ಸ್ಥಳಕ್ಕೆ ಕರೆದುಕೊಂಡು ಹೋದನು. ಅಲ್ಲಿ ಸೈತಾನನು, ‘ನೀನು ದೇವರ ಮಗನಾಗಿರುವಲ್ಲಿ ಕೆಳಕ್ಕೆ ಧುಮುಕು; ಏಕೆಂದರೆ ನಿನಗೆ ನೋವಾಗದಂತೆ ದೇವದೂತರು ನಿನ್ನನ್ನು ಕಾಪಾಡುವರು ಎಂದು ಬರೆದಿದೆ’ ಅಂತ ಯೇಸುವಿಗೆ ಹೇಳಿದನು.

ಸೈತಾನನು ಹೀಗೆ ಹೇಳಿದ್ದೇಕೆ?— ಒಂದು ಹುಚ್ಚುಸಾಹಸ ಮಾಡುವಂತೆ ಯೇಸುವನ್ನು ಪ್ರಲೋಭಿಸಲಿಕ್ಕಾಗಿಯೇ. ಆದರೆ ಈ ಬಾರಿಯೂ ಸೈತಾನನ ಮಾತನ್ನು ಯೇಸು ಕಿವಿಗೆ ಹಾಕಿಕೊಳ್ಳಲಿಲ್ಲ. ಅವನು ಸೈತಾನನಿಗೆ, “‘ನಿನ್ನ ದೇವರಾಗಿರುವ ಯೆಹೋವನನ್ನು ಪರೀಕ್ಷಿಸಬಾರದು’ ಎಂದು ಸಹ ಬರೆದಿದೆ” ಅಂತ ಹೇಳಿದನು. ಈ ಹುಚ್ಚುಸಾಹಸದಿಂದ ತನ್ನ ಜೀವವನ್ನು ಅಪಾಯಕ್ಕೆ ಒಡ್ಡಿ ನಂತರ ಯೆಹೋವನು ತನ್ನನ್ನು ಕಾಪಾಡಬೇಕೆಂದು ಅಪೇಕ್ಷಿಸುವುದು ಸರಿನಾ? ಈ ರೀತಿಯಲ್ಲಿ ಯೆಹೋವನನ್ನು ಪರೀಕ್ಷಿಸುವುದು ತಪ್ಪೆಂದು ಯೇಸುವಿಗೆ ತಿಳಿದಿತ್ತು.

ಆದರೆ ಸೈತಾನನು ಅಷ್ಟಕ್ಕೆ ಬಿಡುತ್ತಾನಾ? ಮರಳಿ ಯತ್ನವ ಮಾಡು ಎನ್ನುವ ಹಾಗೆ ಪುನಃ ಪ್ರಯತ್ನಮಾಡಿದನು. ಈ ಬಾರಿ ಸೈತಾನನು ಯೇಸುವನ್ನು ಎತ್ತರವಾದ ಒಂದು ಬೆಟ್ಟಕ್ಕೆ ಕರೆದುಕೊಂಡು ಹೋದನು. ಅಲ್ಲಿಂದ ಅವನು ಯೇಸುವಿಗೆ ಎಲ್ಲಾ ರಾಜ್ಯಗಳನ್ನು ಅಂದರೆ ಲೋಕದ ಸರಕಾರಗಳನ್ನು ತೋರಿಸಿದನು. ಆ ರಾಜ್ಯಗಳ ಸೊಬಗು, ಐಶ್ವರ್ಯ ಎಲ್ಲವನ್ನು ತೋರಿಸುತ್ತಾ ಸೈತಾನನು, “ನೀನು ಅಡ್ಡಬಿದ್ದು ನನಗೆ ಒಂದು ಆರಾಧನಾ ಕ್ರಿಯೆಯನ್ನು ಮಾಡಿದರೆ ನಾನು ಇವೆಲ್ಲವನ್ನೂ ನಿನಗೆ ಕೊಡುವೆನು” ಎಂದು ಯೇಸುವಿಗೆ ಹೇಳಿದನು.

ಸ್ವಲ್ಪ ಯೋಚಿಸು, ಪಿಶಾಚನು ಯೇಸುವಿಗೆ ಈ ಎಲ್ಲಾ ರಾಜ್ಯಗಳನ್ನು ಕೊಡುತ್ತೇನೆ ಎಂದು ಹೇಳಬೇಕಾದ್ರೆ ಅವೆಲ್ಲಾ ಸೈತಾನನ ಕೈಕೆಳಗೆ ಇದ್ದಿರಬೇಕಲ್ವಾ. ನಿನಗೇನು ಅನಿಸುತ್ತೆ?— ಹೌದು ಅವೆಲ್ಲಾ ಸೈತಾನನ ಕೈಕೆಳಗೇ ಇದ್ದವು. ಎಲ್ಲಾ ರಾಜ್ಯಗಳನ್ನು ನಿನಗೆ ಕೊಡುತ್ತೇನೆ ಎಂದು ಸೈತಾನನು ಹೇಳಿದಾಗ ಯೇಸು “ಇವೆಲ್ಲ ನಿನ್ನದ್ದಲ್ಲ. ಮತ್ತೆ ನನಗೆ ಹೇಗೆ ಕೊಡುತ್ತೀ?” ಅಂತ ಪ್ರಶ್ನೆ ಕೇಳಲಿಲ್ಲ. ಇದರರ್ಥ ಅವೆಲ್ಲಾ ಸೈತಾನನ ಕೈಕೆಳಗೆ ಇದ್ದವು ಅಂತ ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. ಹೌದು, ಸೈತಾನನು ನಿಜವಾಗಿಯೂ ಲೋಕದ ಎಲ್ಲ ರಾಷ್ಟ್ರಗಳ ಅಧಿಪತಿಯಾಗಿದ್ದಾನೆ. ಆದುದರಿಂದಲೇ ಬೈಬಲ್‌ ಅವನನ್ನು “ಈ ಲೋಕದ ಅಧಿಪತಿ” ಅಂತ ಕರೆಯುತ್ತದೆ.—ಯೋಹಾನ 12:31.

ಈ ಎಲ್ಲ ರಾಜ್ಯಗಳನ್ನು ಕೊಡುತ್ತೇನೆಂದು ಸೈತಾನನು ಯೇಸುವಿಗೆ ಹೇಳಿದ್ದು ಏನನ್ನು ಸೂಚಿಸುತ್ತದೆ?

ಒಂದುವೇಳೆ ಸೈತಾನನು, ನಿನಗೆ ಏನು ಬೇಕೋ ಅದನ್ನೆಲ್ಲಾ ಕೊಡುತ್ತೇನೆ ಆದರೆ ನೀನು ನನ್ನನ್ನು ಆರಾಧಿಸಬೇಕು ಅಂತ ಹೇಳಿದರೆ ನೀನೇನು ಮಾಡ್ತಿಯಾ?— ಎಲ್ಲವನ್ನೂ ಕೊಡುತ್ತೀನಿ ಅಂದರೂ ಪಿಶಾಚನನ್ನು ಆರಾಧಿಸುವುದು ಮಾತ್ರ ತಪ್ಪು ಅಂತ ಯೇಸುವಿಗೆ ಗೊತ್ತಿತ್ತು. ಆದುದರಿಂದಲೇ ಯೇಸು, ‘ಸೈತಾನನೇ ತೊಲಗಿಹೋಗು! ದೇವರಾಗಿರುವ ಯೆಹೋವನನ್ನೇ ಆರಾಧಿಸಬೇಕು. ಆತನೊಬ್ಬನಿಗೇ ಸೇವೆಯನ್ನು ಸಲ್ಲಿಸಬೇಕು ಎಂದು ಬೈಬಲ್‌ ತಿಳಿಸುತ್ತದೆ’ ಅಂತ ಖಡಾಖಂಡಿತವಾಗಿ ಸೈತಾನನಿಗೆ ಹೇಳಿದನು.—ಮತ್ತಾಯ 4:1-10; ಲೂಕ 4:1-13.

ನಿನಗೆ ಪ್ರಲೋಭನೆ ಎದುರಾದರೆ ಏನು ಮಾಡುವಿ?

ನಮಗೆ ಕೂಡ ಪ್ರಲೋಭನೆಗಳು ಬರುತ್ತವೆ. ನಿನಗೆ ಯಾವೆಲ್ಲ ಪ್ರಲೋಭನೆಗಳು ಬರಬಹುದು ಅಂತ ಯೋಚಿಸು.— ಆಯ್ತು ಮರಿ, ಇಲ್ಲಿ ಒಂದು ಉದಾಹರಣೆ ಕೊಟ್ಟಿದೆ ನೋಡು. ಅಮ್ಮ ಎಲ್ಲರಿಗೆ ಅಂತ ರುಚಿರುಚಿಯಾದ ಪಾಯಸ ಅಥವಾ ಕೇಕನ್ನು ಮಾಡಿದ್ದಾಳೆ ಅಂತ ಇಟ್ಕೋ. ಊಟದ ಸಮಯದ ತನಕ ಅದನ್ನು ತಿನ್ನಬಾರದು ಅಂತ ಹೇಳಿದ್ದಾಳೆ. ಆದರೆ ನಿನಗೆ ತುಂಬ ಹಸಿವೆ ಆಗುತ್ತಿದೆ. ಅದರಲ್ಲೂ ಪಾಯಸ, ಕೇಕು ಅಂದ್ರೆ ನಿನಗೆ ತುಂಬಾ ಇಷ್ಟ. ತಿನ್ನಬೇಕಂತ ತುಂಬಾ ಆಸೆ ಆಗುತ್ತಿದೆ. ಈಗ ನೀನೇನು ಮಾಡುತ್ತೀಯಾ? ಅಮ್ಮನ ಮಾತಿಗೆ ವಿಧೇಯತೆ ತೋರಿಸುತ್ತೀಯಾ ಅಥವಾ ಹಸಿವಾಗುತ್ತಿದೆ ಅಂತ ತಿಂದುಬಿಡುತ್ತೀಯಾ?— ಅಮ್ಮನ ಮಾತಿಗೆ ನೀನು ವಿಧೇಯತೆ ತೋರಿಸಬಾರದು ಎಂದೇ ಸೈತಾನನು ಬಯಸುತ್ತಾನೆ.

ಯೇಸು ಏನು ಮಾಡಿದ ನೆನಪಿದೆಯಾ? ಅವನಿಗೂ ತುಂಬ ಹಸಿವೆಯಾಗಿತ್ತು. ಆದರೆ ಹಸಿವು ನೀಗಿಸಿಕೊಳ್ಳುವುದಕ್ಕಿಂತ ದೇವರನ್ನು ಸಂತೋಷಪಡಿಸುವುದು ತುಂಬ ಪ್ರಾಮುಖ್ಯ ಅಂತ ಅವನಿಗೆ ತಿಳಿದಿತ್ತು. ಅಮ್ಮ ಹೇಳಿದ ಮಾತನ್ನು ನೀನು ಕೇಳಿದರೆ ನೀನು ಸಹ ಯೇಸುವನ್ನು ಅನುಸರಿಸುತ್ತಿ.

ಇನ್ನೊಂದು ಉದಾಹರಣೆ ನೋಡೋಣ. ನಿನ್ನ ಸ್ನೇಹಿತರು ನಿನಗೆ ಕೆಲವು ಮಾತ್ರೆಗಳನ್ನು ಕೊಟ್ಟು ಇವನ್ನು ನುಂಗು ಮಜಾ ಸಿಗುತ್ತೆ ಅಂತ ನಿನ್ನನ್ನು ಪುಸಲಾಯಿಸಬಹುದು. ಆದರೆ ಮಾತ್ರೆಗಳಂತೆ ಕಾಣುವ ಈ ಪದಾರ್ಥಗಳು ಮಾದಕ ವಸ್ತುಗಳಾಗಿರಬಹುದು ಅಂದರೆ ಡ್ರಗ್ಸ್‌ ಆಗಿರಬಹುದು. ಇದನ್ನು ನುಂಗಿದರೆ ಏನೆಲ್ಲಾ ಆಗಬಹುದು ಗೊತ್ತಾ? ನಿನ್ನ ಆರೋಗ್ಯ ಎಷ್ಟು ಕೆಡಬಹುದು ಎಂದರೆ ನೀನು ಸತ್ತುಹೋಗುವ ಸಾಧ್ಯತೆ ಇದೆ. ಸಿಗರೇಟ್‌ ಬಗ್ಗೆ ಏನು? ಯಾರಾದರೂ ನಿನಗೆ ಸಿಗರೇಟ್‌ ಕೊಟ್ಟು, ‘ಧಮ್‌ ಇದ್ದರೆ ಸೇದು ನೋಡೋಣ’ ಅಂತ ಸವಾಲು ಹಾಕಬಹುದು. ಸಿಗರೇಟಲ್ಲೂ ಮಾದಕ ವಸ್ತು ಇದೆ. ಈಗ ಹೇಳು ನೀನು ಏನು ಮಾಡುತ್ತೀ?—

ಅಂಥ ಪ್ರಲೋಭನೆ ಬಂದಾಗ ಯೇಸು ಏನು ಮಾಡಿದ? ಸೈತಾನನು ಯೇಸುವಿಗೆ ದೇವಾಲಯದ ಮೇಲಿನಿಂದ ಧುಮುಕುವಂತೆ ಹೇಳಿದಾಗ, ಯೇಸು ತನ್ನ ಜೀವವನ್ನು ಅಪಾಯಕ್ಕೆ ಒಡ್ಡಬೇಕೆಂದು ಅವನು ಹೇಳುತ್ತಿದ್ದನು. ಜೀವಕ್ಕೆ ಅಪಾಯ ತರುವ ಯಾವುದೇ ಸವಾಲನ್ನು ಯೇಸು ತಿರಸ್ಕರಿಸಿದನು. ನಿನಗೆ ಯಾರಾದರೂ ಅಂಥ ಸವಾಲು ಹಾಕಿದರೆ ನೀನು ಏನು ಮಾಡುತ್ತಿಯಾ?— ಯೇಸು ಸೈತಾನನ ಮಾತನ್ನು ಕೇಳಲಿಲ್ಲ. ನೀನೂ ಹಾಗೆಯೇ ಇರಬೇಕು. ಕೆಟ್ಟ ವಿಷಯಗಳನ್ನು ಮಾಡಲು ಯಾರಾದರು ನಿನ್ನನ್ನು ಒತ್ತಾಯಿಸಿದರೆ ಅವರ ಮಾತನ್ನು ಕೇಳಬಾರದು.

ವಿಗ್ರಹಗಳನ್ನು ಆರಾಧಿಸುವುದು ತಪ್ಪೇಕೆ?

ಒಂದು ವಿಗ್ರಹಕ್ಕೆ ಕೈ ಮುಗಿಯಬೇಕು ಅಂತ ನಿನಗೆ ಯಾರಾದರೂ ಹೇಳುತ್ತಾರೆ ಅಂತ ಇಟ್ಕೋ. ಹೀಗೆ ಮಾಡಬಾರದು ಅಂತ ಬೈಬಲ್‌ ಹೇಳುತ್ತದೆ. ಇದು ನಿನಗೂ ಗೊತ್ತು. (ವಿಮೋಚನಕಾಂಡ 20:4, 5) ಆದರೆ, ಶಾಲೆಯಲ್ಲಿ ಒಂದು ಆಚರಣೆ ನಡೆಯುತ್ತಿರುವಾಗ ವಿಗ್ರಹಕ್ಕೆ ಕೈ ಮುಗಿಯಬೇಕು ಅಂತ ನಿನ್ನನ್ನು ಒತ್ತಾಯಿಸಬಹುದು. ‘ನೀನು ಇದನ್ನು ಮಾಡಲಿಲ್ಲ ಅಂದರೆ ಶಾಲೆಯಿಂದ ಓಡಿಸಿಬಿಡುತ್ತೇವೆ’ ಅಂತನೂ ಬೆದರಿಸಬಹುದು. ಆಗ ನೀನೇನು ಮಾಡುತ್ತೀ?—

ಎಲ್ಲರೂ ಸರಿಯಾದದ್ದನೇ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ! ಆದರೆ ಏನ್‌ ಮಾಡೋದು, ತಪ್ಪು ಮಾಡುವವರೇ ಹೆಚ್ಚು. ನಾವೂ ತಪ್ಪು ಕೆಲಸ ಮಾಡಬೇಕೆಂದು ಅವರು ಒತ್ತಾಯಿಸುತ್ತಾರೆ. ಆಗ ಸರಿಯಾದದ್ದನ್ನು ಮಾಡುವುದು ಅಬ್ಬಾ, ಎಷ್ಟು ಕಷ್ಟ. ಅದರಲ್ಲೂ, ನಾವು ಮಾಡುತ್ತಿರುವುದು ಅಷ್ಟೇನು ಕೆಟ್ಟದಲ್ಲ ಅಂತ ಅವರು ವಾದಿಸುವಾಗಲಂತೂ ನಮಗೂ ಹಾಗೆಯೇ ಅನಿಸಬಹುದು. ಆದರೆ ನಾವು ಮಾಡುವ ವಿಷಯದ ಬಗ್ಗೆ ದೇವರಿಗೆ ಹೇಗೆ ಅನಿಸುತ್ತೆ ಅಂತ ನಾವು ತಿಳಿದುಕೊಳ್ಳಬೇಕು. ಏಕೆಂದರೆ ಯಾವುದು ಸರಿ ಯಾವುದು ತಪ್ಪು ಅಂತ ನಮ್ಮೆಲ್ಲರಿಗಿಂತ ಅವನಿಗೆ ಚೆನ್ನಾಗಿ ಗೊತ್ತು.

ಅದಕ್ಕೆ ಕಂದಾ, ದೇವರು ಯಾವುದು ತಪ್ಪು ಅಂತ ಹೇಳುತ್ತಾನೋ ಅದನ್ನು ನಾವು ಮಾಡಕೂಡದು. ಯಾರು ಏನೇ ಹೇಳಲಿ ಎಷ್ಟೇ ಒತ್ತಾಯಿಸಲಿ ನಾವು ದೇವರ ಮಾತನ್ನು ಯಾವಾಗಲೂ ಕೇಳಬೇಕು. ಹೀಗೆ ಮಾಡುವಾಗ ಪಿಶಾಚನಿಗೆ ಸಂತೋಷ ಆಗುವುದಿಲ್ಲ ಆದರೆ ದೇವರಿಗಂತೂ ತುಂಬಾ ಆನಂದ ಆಗುತ್ತೆ.

ಕೆಟ್ಟದ್ದನ್ನು ಮಾಡುವ ಪ್ರಲೋಭನೆ ಎದುರಾದಾಗ ಏನು ಮಾಡಬೇಕು? ಕೀರ್ತನೆ 1:1, 2; ಜ್ಞಾನೋಕ್ತಿ 1:10, 11; ಮತ್ತಾಯ 26:41 ಮತ್ತು 2 ತಿಮೊಥೆಯ 2:22 ಓದಿ ನೋಡೋಣ.