ಅಧ್ಯಾಯ 33
ಯೇಸು ನಮ್ಮನ್ನು ಸಂರಕ್ಷಿಸುವನು
ಯೇಸು ಬೆಳೆದು ದೊಡ್ಡವನಾದಾಗ ಚಿಕ್ಕ ವಯಸ್ಸಿನಲ್ಲಿ ಹೇಗೆ ದೇವರು ಅವನನ್ನು ಕಾಪಾಡಿದನೆಂದು ಯಾರಾದರೂ ಹೇಳಿರಲೇಬೇಕಲ್ವಾ. ತನ್ನ ಜೀವ ಉಳಿಸಿದಕ್ಕಾಗಿ ಯೇಸು ಯೆಹೋವನಿಗೆ ಧನ್ಯವಾದ ಹೇಳಿರಬಹುದಾ?— ಮರಿಯ ಯೋಸೇಫರು ತನ್ನನ್ನು ಈಜಿಪ್ಟ್‌ಗೆ ಕರೆದುಕೊಂಡು ಹೋಗಿ ಜೀವ ಕಾಪಾಡಿದರು ಅಂತ ಯೇಸುವಿಗೆ ಗೊತ್ತಾದಾಗ ಅವರಿಗೂ ಕೃತಜ್ಞತೆ ಹೇಳಿರಬಹುದಾ?—
ನಿಂಗೊತ್ತಾ, ಯೇಸು ಈಗ ಮಗುವಲ್ಲ. ಅವನು ಭೂಮಿಯಲ್ಲೂ ಇಲ್ಲ. ಹಾಗಿದ್ದರೂ ಇಂದು ಯೇಸುವನ್ನು ಗೋದಲಿಯಲ್ಲಿ ಮಲಗಿಸಿರುವ ನಿಸ್ಸಹಾಯಕ ಮಗುವಿನಂತೆ ಕೆಲವರು ಕಾಣುತ್ತಾರೆ. ಅದು ನಿನಗೆ ಗೊತ್ತಿತ್ತಾ?— ಕ್ರಿಸ್ಮಸ್ ಸಮಯದಲ್ಲಿ ಬಾಲ ಯೇಸುವಿನ ಚಿತ್ರಗಳನ್ನು ಜನರು ಅಲ್ಲಲ್ಲಿ ಇಟ್ಟಿರುವುದನ್ನು ನಾವು ಕಾಣಬಹುದು.
ಯೇಸು ಇಂದು ಭೂಮಿಯಲ್ಲಿ ಜೀವಿಸುತ್ತಿಲ್ಲ ನಿಜ. ಆದರೆ ಆತನು ಜೀವಂತವಾಗಿ ಇದ್ದಾನೆಂದು ನೀನು ನಂಬುತ್ತೀಯಾ?— ಹೌದು, ಅವನು ಜೀವಂತವಾಗಿದ್ದಾನೆ. ಮರಣದ ನಂತರ ದೇವರು ಅವನನ್ನು ಜೀವಂತಗೊಳಿಸಿದ್ದಾನೆ ಮತ್ತು ಅವನೀಗ ಸ್ವರ್ಗದಲ್ಲಿ ಶಕ್ತಿಶಾಲಿ ರಾಜನಾಗಿದ್ದಾನೆ. ತನ್ನ ಮಾತಿಗೆ ವಿಧೇಯರಾಗುವ ಜನರನ್ನು ಅವನು ಹೇಗೆ ಕಾಪಾಡುವನು? ನೀನೇನು ನೆನಸುತ್ತೀ?— ಯೇಸು ತನ್ನನ್ನು ಪ್ರೀತಿಸುವವರನ್ನು ಹೇಗೆ ರಕ್ಷಿಸುವನು ಅನ್ನೋದನ್ನು ಭೂಮಿಯಲ್ಲಿದ್ದಾಗ ತೋರಿಸಿಕೊಟ್ಟನು. ಒಂದು ದಿನ ಅವನು ಶಿಷ್ಯರೊಂದಿಗೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಏನಾಯಿತೆಂದು ನೋಡೋಣ.
ಯೇಸು ಆ ದಿನವೆಲ್ಲ ಗಲಿಲಾಯ ಸಮುದ್ರದ ತೀರದಲ್ಲಿ ಬೋಧನೆ ಮಾಡುವುದರಲ್ಲಿ ನಿರತನಾಗಿದ್ದನು. ಗಲಿಲಾಯ ಸಮುದ್ರವು ಒಂದು ದೊಡ್ಡ ಸರೋವರವಾಗಿದ್ದು, ಅದರ ಉದ್ದ ಸುಮಾರು 20 ಕಿಲೊಮೀಟರ್ ಮತ್ತು ಅಗಲ 12 ಕಿಲೊಮೀಟರ್. ಸಾಯಂಕಾಲವಾದಾಗ ಯೇಸು ತನ್ನ ಶಿಷ್ಯರಿಗೆ, “ನಾವು ಸರೋವರದ ಆಚೇದಡಕ್ಕೆ ಹೋಗೋಣ” ಎಂದು ಹೇಳುತ್ತಾನೆ. ಆಗ ಅವರೆಲ್ಲರೂ ದೋಣಿ ಹತ್ತಿ ಹೊರಡುತ್ತಾರೆ. ಯೇಸುವಿಗೆ ತುಂಬಾ ಆಯಾಸವಾಗಿದ್ದ ಕಾರಣ ದೋಣಿಯ ಹಿಂಭಾಗಕ್ಕೆ ಹೋಗಿ ತಲೆದಿಂಬಿಗೆ ಒರಗಿ ಮಲಗುತ್ತಾನೆ. ಸ್ವಲ್ಪದರಲ್ಲೇ ಗಾಢನಿದ್ರೆ ಹತ್ತುತ್ತದೆ.
ಆದರೆ ಶಿಷ್ಯರು ಎಚ್ಚರವಾಗಿದ್ದು ದೋಣಿಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸುತ್ತಿರುತ್ತಾರೆ. ಸ್ವಲ್ಪ ಸಮಯ ಎಲ್ಲವೂ ಪ್ರಶಾಂತವಾಗಿರುತ್ತದೆ. ಆದರೆ ಇದ್ದಕ್ಕಿದ್ದಂತೆ ಒಂದು ದೊಡ್ಡ ಬಿರುಗಾಳಿ ಏಳುತ್ತದೆ. ಗಾಳಿಯ ರಭಸ ಹೆಚ್ಚುತ್ತಾ ಹೆಚ್ಚುತ್ತಾ ದೊಡ್ಡ ದೊಡ್ಡ ಅಲೆಗಳು ಉಂಟಾಗುತ್ತವೆ. ಅಲೆಗಳು ದೋಣಿಗೆ ಅಪ್ಪಳಿಸಿದ್ದರಿಂದ ನೀರು ದೋಣಿಯೊಳಗೆ ನುಗ್ಗುತ್ತದೆ. ದೋಣಿಯಲ್ಲೆಲ್ಲಾ ನೀರು ತುಂಬಲು ಶುರುವಾಗುತ್ತದೆ.
ತಾವೆಲ್ಲಿ ಮುಳುಗಿಬಿಡುತ್ತೇವೋ ಅಂತ ಶಿಷ್ಯರು ತುಂಬಾ ಭಯಪಡುತ್ತಾರೆ. ಯೇಸುವಿಗೋ ಯಾವ ಭಯ ಇಲ್ಲ. ಅವನು ಗಾಢ ನಿದ್ರೆಯಲ್ಲಿರುತ್ತಾನೆ. ದಿಕ್ಕು ತೋಚದ ಶಿಷ್ಯರು ಅವನನ್ನು ಎಬ್ಬಿಸಿ, ‘ಬೋಧಕನೇ, ಬೋಧಕನೇ, ಕಾಪಾಡು. ಇಲ್ಲದಿದ್ದರೆ ಈ ಬಿರುಗಾಳಿಯಿಂದಾಗಿ ನಾವು ಸತ್ತುಹೋಗುತ್ತೇವೆ’ ಎಂದು ಕೂಗುತ್ತಾರೆ. ಆಗ ಯೇಸು ಎದ್ದು ಗಾಳಿ ಮತ್ತು ಅಲೆಗಳಿಗೆ “ಷ್! ಸುಮ್ಮನಿರು!” ಅಂತ ಅಪ್ಪಣೆ ಕೊಡುತ್ತಾನೆ.
ಏನಾಶ್ಚರ್ಯ! ತಕ್ಷಣವೇ ಗಾಳಿ ಬೀಸುವುದು ನಿಂತುಹೋಗುತ್ತದೆ. ಸರೋವರ ಶಾಂತವಾಗುತ್ತದೆ. ಶಿಷ್ಯರು ಬೆಕ್ಕಸಬೆರಗಾಗುತ್ತಾರೆ. ಹಿಂದೆಂದೂ ಇಂತಹ ಒಂದು ಸಂಗತಿಯನ್ನು ಅವರು ನೋಡಿರಲೇ ಇಲ್ಲ. “ಇವನು ನಿಜವಾಗಿಯೂ ಯಾರು? ಗಾಳಿಯೂ ಸಮುದ್ರವೂ ಇವನ ಮಾತುಗಳನ್ನು ಪಾಲಿಸುತ್ತವಲ್ಲಾ?” ಎಂದವರು ಮಾತಾಡಿಕೊಳ್ಳುತ್ತಾರೆ.—ಯೇಸು ಯಾರೆಂದು ನಿನಗೆ ಗೊತ್ತಾ?— ಅವನಿಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬಂತು?— ಯೇಸು ಜೊತೆಗಿದ್ದಾಗ ಶಿಷ್ಯರು ಯಾವುದಕ್ಕೂ ಭಯಪಡುವ ಅಗತ್ಯವಿರಲಿಲ್ಲ. ಏಕೆಂದರೆ, ಯೇಸು ಒಬ್ಬ ಸಾಮಾನ್ಯ ಮನುಷ್ಯನಾಗಿರಲಿಲ್ಲ. ಅವನು ಮಾಡಿದಂತಹ ಅದ್ಭುತವನ್ನೂ ಭೂಮಿಯಲ್ಲಿ ಬೇರೆ ಯಾರೂ ಮಾಡಸಾಧ್ಯವಿರಲಿಲ್ಲ. ಒಮ್ಮೆ ಇದೇ ರೀತಿ ಬಿರುಗಾಳಿ ಬೀಸುತ್ತಿದ್ದಾಗ ಅವನು ಸಮುದ್ರದ ಮೇಲೆ ಇನ್ನೊಂದು ಅದ್ಭುತ ಮಾಡಿದನು. ಅದೇನೆಂದು ಹೇಳ್ತಿನಿ ತಾಳು.
ಇದು ಬೇರೊಂದು ದಿನ ನಡೆದ ಘಟನೆ. ಅದು ಸಹ ಸಾಯಂಕಾಲದ ಸಮಯವಾಗಿತ್ತು. ಯೇಸು ತನ್ನ ಶಿಷ್ಯರಿಗೆ ದೋಣಿ ಹತ್ತಿ ಆಚೇದಡಕ್ಕೆ ಹೋಗುವಂತೆಯೂ ತಾನು ಆಮೇಲೆ ಬರುವುದಾಗಿಯೂ ಹೇಳುತ್ತಾನೆ. ಆಮೇಲೆ ಯೇಸು ಒಬ್ಬನೇ ಬೆಟ್ಟದ ತುದಿಗೆ ಹೋಗುತ್ತಾನೆ. ತನ್ನ ತಂದೆಯಾದ ಯೆಹೋವ ದೇವರೊಂದಿಗೆ ಮಾತಾಡಲು ಅದೊಂದು ಪ್ರಶಾಂತ ಸ್ಥಳವಾಗಿತ್ತು.
ಶಿಷ್ಯರು ದೋಣಿ ಹತ್ತಿ ಸಮುದ್ರದ ಆಚೇದಡಕ್ಕೆ ಪ್ರಯಾಣಿಸುತ್ತಾರೆ. ಸ್ವಲ್ಪ ದೂರ ಹೋಗುವಷ್ಟರಲ್ಲೇ ಜೋರಾಗಿ ಬಿರುಗಾಳಿ ಬೀಸತೊಡಗುತ್ತದೆ. ರಾತ್ರಿಯಾದರೂ ಅದರ ರಭಸ ಕಡಿಮೆಯಾಗುವುದಿಲ್ಲ. ಹಾಗಾಗಿ ಶಿಷ್ಯರು ದೋಣಿಯ ಹಾಯಿಯನ್ನು ಕೆಳಗಿಳಿಸಿ ಹುಟ್ಟುಹಾಕಲು ಆರಂಭಿಸುತ್ತಾರೆ. ಎಷ್ಟೇ ಪ್ರಯತ್ನಿಸಿದರೂ ಅವರಿಂದ ಹೆಚ್ಚು ಮುಂದೆ ಹೋಗಲು ಆಗುವುದಿಲ್ಲ. ಏಕೆಂದರೆ ಅವರಿಗೆ ಎದುರಾಗಿ ಗಾಳಿ ಬಲವಾಗಿ ಬೀಸುತ್ತಿರುತ್ತದೆ. ಅಲ್ಲೋಲ ಕಲ್ಲೋಲವಾದ ಸಮುದ್ರದಲ್ಲಿ ಎತ್ತರವಾದ ಅಲೆಗಳ ಮಧ್ಯೆ ದೋಣಿ ಅತ್ತಿತ್ತ ಹೋಯ್ದಾಡುತ್ತಿದೆ. ನೀರು ಒಳಗೆ ನುಗ್ಗುತ್ತಿದೆ. ಎಷ್ಟು ಕಷ್ಟಪಟ್ಟರು ದಡ ಸೇರಲು ಮಾತ್ರ ಆಗುತ್ತಿಲ್ಲ.
ಯೇಸು ಇನ್ನೂ ಬೆಟ್ಟದಲ್ಲೇ ಇದ್ದಾನೆ. ಅವನು ಅಲ್ಲಿಗೆ ಹೋಗಿ ಆಗಲೇ ತುಂಬಾ ಹೊತ್ತಾಗಿತ್ತು. ಆದರೆ ತನ್ನ ಶಿಷ್ಯರು ಸಮುದ್ರದ ಅಲೆಗಳ ಮಧ್ಯೆ ಅಪಾಯದಲ್ಲಿ ಸಿಕ್ಕಿಬಿದ್ದಿರುವುದು ಅವನಿಗೀಗ ಗೊತ್ತಾಗುತ್ತದೆ. ನೆರವು ನೀಡಲಿಕ್ಕಾಗಿ ಅವನು ಬೆಟ್ಟದಿಂದ ಇಳಿದು ಸಮುದ್ರ ತೀರಕ್ಕೆ ಬರುತ್ತಾನೆ. ಅಲ್ಲಿಂದ ಬಿರುಗಾಳಿ ಬೀಸುತ್ತಿದ್ದ ಸಮುದ್ರದ ಮೇಲೆ ನಡೆಯುತ್ತಾ ಅವರ ಕಡೆ ಸಾಗುತ್ತಾನೆ.
ಸಮುದ್ರದ ನೀರಿನ ಮೇಲೆ ನಡೆಯಲು ಪ್ರಯತ್ನಿಸಿದರೆ ಏನಾಗುತ್ತದೆ?— ನೀನು ಮುಳುಗಿ ಹೋಗಿಬಿಡ್ತೀಯ. ಆದರೆ ಯೇಸುವಿನ ವಿಷಯದಲ್ಲಿ ಹಾಗಲ್ಲಾ. ಅವನಿಗೆ ವಿಶೇಷ ಶಕ್ತಿಯಿದೆ. ದೋಣಿ ತುಂಬಾ ದೂರದಲ್ಲಿದ್ದ ಕಾರಣ ಯೇಸು ಬಹಳ ಹೊತ್ತು ನೀರಿನ ಮೇಲೆ ನಡೆದುಕೊಂಡು ಹೋಗುತ್ತಾನೆ. ಮುಂಜಾನೆಯಾದಾಗ ಅವನು ದೋಣಿಯ ಹತ್ತಿರ ಬರುತ್ತಿರುವುದು ಶಿಷ್ಯರಿಗೆ ಕಾಣಿಸುತ್ತದೆ. ಆದರೆ ಅವರಿಗೆ ತಮ್ಮ ಕಣ್ಣನ್ನೇ ನಂಬಲಿಕ್ಕೆ ಆಗಲಿಲ್ಲ. ಭಯದಿಂದ ಕಿರಿಚುತ್ತಾರೆ. ಆಗ ಯೇಸು ಅವರಿಗೆ, “ಧೈರ್ಯವಾಗಿರಿ, ನಾನೇ; ಭಯಪಡಬೇಡಿರಿ” ಎಂದು ಹೇಳುತ್ತಾನೆ.
ಯೇಸು ದೋಣಿಯನ್ನು ಹತ್ತಿದ ಕೂಡಲೇ ಬಿರುಗಾಳಿ ನಿಂತುಹೋಗುತ್ತದೆ. ಶಿಷ್ಯರು ಮತ್ತೊಮ್ಮೆ ಬೆರಗಾಗುತ್ತಾರೆ. “ನಿಜವಾಗಿಯೂ ನೀನು ದೇವರ ಮಗನು” ಎಂದು ಹೇಳಿ ಅವನಿಗೆ ಪ್ರಣಾಮ ಮಾಡುತ್ತಾರೆ.—ಮತ್ತಾಯ 14:22-33; ಯೋಹಾನ 6:16-21.
ನಾವು ಆ ಕಾಲದಲ್ಲಿ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ಯೇಸು ಆ ಅದ್ಭುತಗಳನ್ನೆಲ್ಲಾ ಮಾಡುವುದನ್ನು ಕಣ್ಣಾರೆ ನೋಡಬಹುದಿತ್ತು, ಅಲ್ವಾ?— ಅದ್ಸರಿ, ಯೇಸು ಆ ಅದ್ಭುತಗಳನ್ನು ಏಕೆ ಮಾಡಿದನು ಅಂತ ನಿನಗೆ ಗೊತ್ತಿದೆಯಾ?— ಏಕೆಂದರೆ ಅವನು ತನ್ನ ಶಿಷ್ಯರನ್ನು ಗಾಢವಾಗಿ ಪ್ರೀತಿಸುತ್ತಿದ್ದನು. ಅವರಿಗೆ ಸಹಾಯಮಾಡಬೇಕೆಂದು ಬಯಸುತ್ತಿದ್ದನು. ಅಷ್ಟೇ ಅಲ್ಲ, ತನಗಿದ್ದ ಅಪಾರ ಶಕ್ತಿಯನ್ನು ತೋರಿಸಲು ಮತ್ತು ಮುಂದೆ ತಾನು ದೇವರ ರಾಜ್ಯದ ರಾಜನಾದಾಗ ಆ ಶಕ್ತಿಯನ್ನು ಉಪಯೋಗಿಸುವನೆಂದು ತೋರಿಸಲು ಅವನು ಆ ಅದ್ಭುತಗಳನ್ನು ಮಾಡಿದನು.
ಅಪೊಸ್ತಲರ ಕಾರ್ಯಗಳು 12:2; ಪ್ರಕಟನೆ 1:9.
ಇಂದು ಸಹ ಯೇಸು ತನ್ನ ಹಿಂಬಾಲಕರಿಗೆ ರಕ್ಷಣೆ ಒದಗಿಸಲು ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆ. ದೇವರ ರಾಜ್ಯದ ಕುರಿತು ಸಾರುವುದನ್ನು ತಡೆಯಲು ಸೈತಾನನು ಪ್ರಯತ್ನಗಳನ್ನು ಮಾಡುವಾಗ ಯೇಸು ತನ್ನ ಹಿಂಬಾಲಕರಿಗೆ ನೆರವು ನೀಡುತ್ತಾನೆ. ಆದರೆ ಅವರು ಕಾಯಿಲೆ ಬೀಳದಂತೆ ತಡೆಯಲೋ ಕಾಯಿಲೆ ಬಿದ್ದಾಗ ವಾಸಿಮಾಡಲೋ ಯೇಸು ತನ್ನ ಶಕ್ತಿಯನ್ನು ಉಪಯೋಗಿಸುವುದಿಲ್ಲ. ಯೇಸುವಿನ ಅಪೊಸ್ತಲರೆಲ್ಲರೂ ಕಾಲಕ್ರಮೇಣ ಸಾವನ್ನಪ್ಪಿದರು. ಯೋಹಾನನ ಅಣ್ಣನಾದ ಯಾಕೋಬನನ್ನು ಕೊಲೆಮಾಡಲಾಯಿತು. ಯೋಹಾನನನ್ನು ಜೈಲಿಗೆ ಹಾಕಲಾಯಿತು.—ಇಂದು ಸಹ ಹಾಗೆ, ಜನರು ಯೆಹೋವನ ಸೇವೆಮಾಡಲಿ ಮಾಡದಿರಲಿ ಕಾಯಿಲೆ ಬೀಳುತ್ತಾರೆ. ಸಾವನ್ನಪ್ಪುತ್ತಾರೆ. ಆದರೆ ಬೇಗನೆ ಯೇಸು ದೇವರ ಸರಕಾರದ ರಾಜನಾಗಿ ಭೂಮಿಯನ್ನು ಆಳುತ್ತಾನೆ. ಆಗ ವಿಷಯಗಳು ಬದಲಾಗುತ್ತವೆ. ಯಾರೂ ಭಯಪಡಬೇಕಾಗಿಲ್ಲ. ಏಕೆಂದರೆ ತನ್ನ ಮಾತಿಗೆ ವಿಧೇಯರಾಗುವವರ ಒಳಿತಿಗಾಗಿ ಯೇಸು ತನ್ನ ಶಕ್ತಿಯನ್ನು ಉಪಯೋಗಿಸುವನು.—ಯೆಶಾಯ 9:6, 7.
ದೇವರ ರಾಜ್ಯದ ರಾಜನಾಗಿ ನೇಮಕಗೊಂಡಿರುವ ಯೇಸುವಿಗೆ ಇರುವ ಅಪಾರ ಶಕ್ತಿಯನ್ನು ತಿಳಿದುಕೊಳ್ಳಲು ಈ ವಚನಗಳನ್ನು ಓದೋಣ: ದಾನಿಯೇಲ 7:13, 14; ಮತ್ತಾಯ 28:18 ಮತ್ತು ಎಫೆಸ 1:20-22.