ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮದ್ಯಪಾನ—ಏಕೆ ಮಾಡಬಾರದು?

ಮದ್ಯಪಾನ—ಏಕೆ ಮಾಡಬಾರದು?

ಅಧ್ಯಾಯ 33

ಮದ್ಯಪಾನ—ಏಕೆ ಮಾಡಬಾರದು?

‘ಮದ್ಯಪಾನ ಮಾಡುವುದು ತಪ್ಪೊ? ಅದು ನಿಜವಾಗಿಯೂ ಹಾನಿಕರವೊ? ಅಥವಾ ಅದು ನನಗೆ ಮಾತ್ರ ತಪ್ಪಾಗಿದ್ದು ವಯಸ್ಕರಿಗೆ ಪರವಾಗಿಲ್ಲವೊ?’ ಈ ಪ್ರಶ್ನೆಗಳು ಖಂಡಿತವಾಗಿಯೂ ನಿಮ್ಮ ಮನಸ್ಸಿನೊಳಗೆ ಸುಳಿದಾಡಬಹುದು. ಎಷ್ಟೆಂದರೂ, ನಿಮ್ಮ ಹೆತ್ತವರು ಮದ್ಯ ಸೇವಿಸಬಹುದು. ನಿಮ್ಮ ವಯಸ್ಸಿನ ಅನೇಕ ಯುವ ಜನರು (ನ್ಯಾಯಬದ್ಧ ವಯೋಮಿತಿಗಳು ಇರುವಾಗಲೂ) ಮದ್ಯಪಾನ ಮಾಡುತ್ತಿದ್ದಾರೆ. ಟಿವಿ ಪ್ರದರ್ಶನಗಳು ಮತ್ತು ಚಲನ ಚಿತ್ರಗಳು ಅದನ್ನು ಆಕರ್ಷಕವಾಗಿ ತೋರುವಂತೆ ಮಾಡುತ್ತವೆ.

ಮಿತವಾಗಿ ಬಳಸಲ್ಪಟ್ಟಾಗ, ಮದ್ಯಸಾರವು ನಿಜವಾಗಿಯೂ ಆಹ್ಲಾದದ ಒಂದು ಮೂಲವಾಗಿರಸಾಧ್ಯವಿದೆ. ದ್ರಾಕ್ಷಾಮದ್ಯವು ಹೃದಯವನ್ನು ಉಲ್ಲಾಸಗೊಳಿಸಬಲ್ಲದು ಇಲ್ಲವೆ ಒಂದು ಭೋಜನದ ರುಚಿಯನ್ನು ಹೆಚ್ಚಿಸಬಲ್ಲದೆಂಬುದನ್ನು ಬೈಬಲು ಅಂಗೀಕರಿಸುತ್ತದೆ. (ಪ್ರಸಂಗಿ 9:7) ಆದರೆ ದುರುಪಯೋಗಿಸಲ್ಪಟ್ಟಾಗ, ಮದ್ಯಸಾರವು, ಹೆತ್ತವರು, ಶಿಕ್ಷಕರು, ಮತ್ತು ಪೊಲೀಸರೊಂದಿಗಿನ ಜಗಳಗಳಿಂದ ಹಿಡಿದು ಅಕಾಲಿಕ ಮೃತ್ಯುವಿನ ವರೆಗೆ ವ್ಯಾಪಿಸುವ ಗಂಭೀರವಾದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಬೈಬಲು ಹೇಳುವಂತೆ: “ಮಿತಿಮೀರಿ ಕುಡಿಯುವುದು ನಿಮ್ಮನ್ನು ಕೂಗಾಡುವವರಾಗಿಯೂ ಮೂರ್ಖರಾಗಿಯೂ ಮಾಡುತ್ತದೆ. ಕುಡಿದು ಅಮಲೇರುವುದು ಮೂಢತನ.” (ಜ್ಞಾನೋಕ್ತಿ 20:1, NW) ಆದುದರಿಂದ, ಮದ್ಯಪಾನದ ಕುರಿತು ನೀವೊಂದು ಹೊಣೆಯುಳ್ಳ ನಿರ್ಣಯವನ್ನು ಮಾಡಬೇಕಾದುದು ಪ್ರಾಮುಖ್ಯವಾಗಿದೆ.

ಆದರೆ, ಮದ್ಯಸಾರ ಮತ್ತು ಅದರ ಪರಿಣಾಮಗಳ ಕುರಿತು ನಿಮಗೆ ನಿಜವಾಗಿಯೂ ಎಷ್ಟು ತಿಳಿದಿದೆ? ಅದನ್ನು ಕಂಡುಹಿಡಿಯುವಂತೆ, ಈ ಮುಂದಿನ ಪರೀಕ್ಷೆಯು ನಿಮ್ಮನ್ನು ಶಕ್ತರನ್ನಾಗಿಮಾಡುವುದು. ಈ ಕೆಳಗಿನ ಹೇಳಿಕೆಗಳನ್ನು ಸರಿ ಅಥವಾ ತಪ್ಪು ಎಂಬುದಾಗಿ ಗುರುತಿಸಿರಿ:

1. ಮದ್ಯಸಾರದ ಪಾನೀಯಗಳು ಮುಖ್ಯವಾಗಿ ಉತ್ತೇಜಕ ವಸ್ತುಗಳಾಗಿವೆ. ____

2. ಯಾವುದೇ ಪ್ರಮಾಣದಲ್ಲಿ ಸೇವಿಸಲ್ಪಡುವ ಮದ್ಯಸಾರವು ಮಾನವ ಶರೀರಕ್ಕೆ ಹಾನಿಕರವಾಗಿದೆ. ____

3. ಎಲ್ಲ ಮದ್ಯಸಾರ ಪಾನೀಯಗಳು—ಸಾರಾಯಿ, ದ್ರಾಕ್ಷಾಮದ್ಯ, ಬಿಯರ್‌—ಒಂದೇ ಪ್ರಮಾಣದಲ್ಲಿ ನಿಮ್ಮ ರಕ್ತಪ್ರವಾಹದೊಳಗೆ ಹೀರಿಕೊಳ್ಳಲ್ಪಡುತ್ತವೆ. ____

4. ವ್ಯಕ್ತಿಯೊಬ್ಬನು ಕಪ್ಪು ಕಾಫಿಯನ್ನು ಕುಡಿಯುವುದಾದರೆ ಅಥವಾ ತಣ್ಣೀರಿನ ಸ್ನಾನವನ್ನು ಮಾಡುವುದಾದರೆ, ಹೆಚ್ಚು ಬೇಗನೆ ಸ್ತಿಮಿತಕ್ಕೆ ಬರಬಲ್ಲನು. ____

5.ಮದ್ಯಪಾನ ಮಾಡುವ ಪ್ರತಿಯೊಬ್ಬರ ಮೇಲೆ, ಒಂದೇ ಪ್ರಮಾಣದಲ್ಲಿ ಸೇವಿಸಲ್ಪಟ್ಟ ಮದ್ಯಸಾರವು ಒಂದೇ ತೆರನಾದ ಪರಿಣಾಮವನ್ನು ಬೀರುತ್ತದೆ. ____

6. ಕುಡಿಕತನ ಮತ್ತು ಮದ್ಯವ್ಯಸನವು ಒಂದೇ ವಿಷಯವಾಗಿದೆ. ____

7. ಮದ್ಯಸಾರ ಮತ್ತು (ಬಾರ್ಬಿಟ್ಯುರೇಟ್ಸ್‌ಗಳಂತಹ) ಇತರ ನೋವುಶಾಮಕ ಔಷಧಗಳು, ಒಟ್ಟಿಗೆ ತೆಗೆದುಕೊಳ್ಳಲ್ಪಟ್ಟಾಗ, ಪರಸ್ಪರ ಪರಿಣಾಮಗಳನ್ನು ಹೆಚ್ಚಿಸುತ್ತವೆ. ____

8. ಮದ್ಯಸಾರಗಳನ್ನು ಬದಲಿಸುತ್ತಾ ಇರುವುದು, ವ್ಯಕ್ತಿಯೊಬ್ಬನನ್ನು ಅಮಲೇರುವುದಿಂದ ತಡೆಯುವುದು. ____

9. ಶರೀರವು ಮದ್ಯಸಾರವನ್ನು ಆಹಾರದಂತೆಯೇ ಜೀರ್ಣಿಸುತ್ತದೆ. ____

ಈಗ ನಿಮ್ಮ ಉತ್ತರಗಳನ್ನು ಪುಟ 270ರಲ್ಲಿ ಕೊಡಲ್ಪಟ್ಟಿರುವ ಉತ್ತರಗಳೊಂದಿಗೆ ಪರಿಶೀಲಿಸಿರಿ. ಮದ್ಯಸಾರದ ಕುರಿತಾದ ನಿಮ್ಮ ವೀಕ್ಷಣೆಗಳಲ್ಲಿ ಕೆಲವು ತಪ್ಪಾಗಿದ್ದವೊ? ಹಾಗಿರುವಲ್ಲಿ, ಮದ್ಯಸಾರದ ಕುರಿತಾದ ಅಜ್ಞಾನವು ಮಾರಕವಾಗಿರಬಲ್ಲದೆಂಬುದನ್ನು ಗ್ರಹಿಸಿಕೊಳ್ಳಿರಿ. ಅಯೋಗ್ಯವಾಗಿ ಉಪಯೋಗಿಸಲ್ಪಟ್ಟಾಗ, ಮದ್ಯಸಾರವು “ಹಾವಿನಂತೆ ಕಚ್ಚುತ್ತದೆ, ಹೌದು, ನಾಗದ ಹಾಗೆ ಕಡಿಯುತ್ತದೆ,” ಎಂಬುದಾಗಿ ಬೈಬಲು ನಮ್ಮನ್ನು ಎಚ್ಚರಿಸುತ್ತದೆ.—ಜ್ಞಾನೋಕ್ತಿ 23:32.

ಉದಾಹರಣೆಗಾಗಿ ಜಾನ್‌, ಒಬ್ಬ ಹದಿವಯಸ್ಕನಾಗಿದ್ದಾಗ ವಿವಾಹವಾದನು. ಒಂದು ರಾತ್ರಿ, ತನ್ನ ಯುವ ಪತ್ನಿಯೊಂದಿಗೆ ಜಗಳವಾಡಿದ ನಂತರ, ಕುಡಿದು ಅಮಲೇರಬೇಕೆಂದು ನಿಶ್ಚಯಿಸಿಕೊಂಡು, ಅವನು ಆವೇಶದಿಂದ ಮನೆಯಿಂದ ಹೊರಗೆ ಹೋದನು. 0.5 ಲೀಟರಿನಷ್ಟು ವೋಡ್ಕವನ್ನು ಒಂದೇ ಗುಟುಕಿಗೆ ಕುಡಿದ ಬಳಿಕ, ಅವನು ಅತಿಸುಪ್ತಿ (ಕೋಮ)ಗೊಳಗಾದನು. ವೈದ್ಯರು ಮತ್ತು ನರ್ಸುಗಳು ಪ್ರಯತ್ನಿಸದಿದ್ದಲ್ಲಿ, ಜಾನ್‌ ಸತ್ತುಹೋಗುತ್ತಿದ್ದನು. ಕ್ಷಿಪ್ರವಾಗಿ ಬಹಳಷ್ಟು ಪ್ರಮಾಣದ ಮದ್ಯಸಾರವನ್ನು ಒಂದೇ ಗುಟುಕಿಗೆ ಕುಡಿಯುವುದು ವಿನಾಶಕಾರಕವಾಗಿಯೂ ಇರಬಲ್ಲದೆಂಬುದನ್ನು ಅವನು ಗ್ರಹಿಸಲಿಲ್ಲವೆಂಬುದು ಸುವ್ಯಕ್ತ. ಅಜ್ಞಾನವು ಅವನ ಪ್ರಾಣನಷ್ಟಕ್ಕೆ ನಡೆಸಸಾಧ್ಯವಿತ್ತು.

ಹಿನ್ನೆಗೆತ ಪರಿಣಾಮ

ಮದ್ಯಸಾರದ ಅತ್ಯಂತ ಅಗೋಚರವಾದ ಪರಿಣಾಮಗಳಲ್ಲಿ ಇದು ಒಂದಾಗಿದೆ. ಮದ್ಯಸಾರವು ಒಂದು ಉತ್ತೇಜಕ ವಸ್ತುವಲ್ಲ, ಒಂದು ಉಪಶಾಮಕವಾಗಿದೆ. ನೀವು ಮದ್ಯಪಾನ ಮಾಡಿದ ನಂತರ ನಿಮಗನಿಸುವ ತೋರಿಕೆಯ ಉತ್ಕರ್ಷವು ಏಕೆ ಸಂಭವಿಸುತ್ತದೆಂದರೆ, ಮದ್ಯಸಾರವು ಉಪಶಮನಮಾಡುತ್ತದೆ, ಅಥವಾ ನಿಮ್ಮ ವ್ಯಾಕುಲತೆಯ ಮಟ್ಟವನ್ನು ಕೆಳಗಿಳಿಸುತ್ತದೆ. ನೀವು ಮದ್ಯಪಾನ ಮಾಡುವ ಮೊದಲು ಇದ್ದುದಕ್ಕಿಂತಲೂ ಹೆಚ್ಚು ವಿಶ್ರಮಿಸುವವರಾಗಿ, ಕಡಿಮೆ ವ್ಯಾಕುಲಗೊಂಡವರಾಗಿ, ಕಡಿಮೆ ಚಿಂತಿತರಾಗಿ ಇದ್ದೀರೆಂದು ನಿಮಗನಿಸುತ್ತದೆ. ಹೀಗೆ, ಮಿತವಾದ ಪ್ರಮಾಣಗಳಲ್ಲಿ ತೆಗೆದುಕೊಳ್ಳಲ್ಪಟ್ಟಾಗ ಮದ್ಯಸಾರವು, ಒಂದಿಷ್ಟು ಹಂತದ ವರೆಗೆ ‘ತನ್ನ ತೊಂದರೆಗಳನ್ನು ಮರೆತುಬಿಡುವಂತೆ’ ಒಬ್ಬ ವ್ಯಕ್ತಿಗೆ ಸಹಾಯಮಾಡುತ್ತದೆ. (ಜ್ಞಾನೋಕ್ತಿ 31:6, 7) ದೃಷ್ಟಾಂತಕ್ಕಾಗಿ, ಪೌಲ್‌ ಎಂಬ ಹೆಸರಿನ ಯುವಕನು, ಕುಟುಂಬದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಮದ್ಯಪಾನಮಾಡಿದನು. “ನಾನು ಯಾವ ಒತ್ತಡಕ್ಕೆ ಒಳಗಾಗಿದ್ದೆನೊ, ಅದರಿಂದ ಉಪಶಮನ ಪಡೆದುಕೊಳ್ಳುವ ಒಂದು ವಿಧವು ಮದ್ಯಪಾನ ಮಾಡುವುದಾಗಿತ್ತೆಂದು ನಾನು ಬಹಳ ಬೇಗನೆ ತಿಳಿದುಕೊಂಡೆ,’ ಎಂಬುದಾಗಿ ಅವನು ಜ್ಞಾಪಿಸಿಕೊಳ್ಳುತ್ತಾನೆ. “ಅದು ನನ್ನ ಮನಸ್ಸಿಗೆ ವಿಶ್ರಾಂತಿಯನ್ನು ನೀಡಿತು.”

ಯಾವ ಹಾನಿಯೂ ಮಾಡಲ್ಪಟ್ಟಿಲ್ಲ, ಸರಿಯೇ? ತಪ್ಪು! ಮದ್ಯಸಾರಕ್ಕೆ ಹಿನ್ನೆಗೆತ ಪರಿಣಾಮವೊಂದುಂಟು. ಒಂದೆರಡು ತಾಸುಗಳ ಅನಂತರ, ಮದ್ಯಸಾರದ ಶಾಮಕ ಪರಿಣಾಮವು ಇಳಿದುಹೋಗುವಾಗ, ನಿಮ್ಮ ವ್ಯಾಕುಲತೆಯ ಮಟ್ಟವು ಹಿನ್ನೆಗೆಯುತ್ತದೆ—ಆದರೆ ಸಾಮಾನ್ಯ ಸ್ಥಿತಿಗಲ್ಲ. ನೀವು ಮದ್ಯಪಾನ ಮಾಡುವ ಮುಂಚೆ ಇದ್ದ ಮಟ್ಟಕ್ಕಿಂತಲೂ ಹೆಚ್ಚು ಉನ್ನತವಾದ ಮಟ್ಟಕ್ಕೆ ಅದು ಥಟ್ಟನೆ ಏರುತ್ತದೆ! ನಿಮಗೆ ಹಿಂದೆಂದಿಗಿಂತಲೂ ಹೆಚ್ಚು ವ್ಯಾಕುಲ ಅಥವಾ ಹೆಚ್ಚು ಉದ್ವೇಗದ ಅನಿಸಿಕೆ ಆಗುತ್ತದೆ. ಮದ್ಯಸಾರದ ತ್ಯಜನವು 12 ತಾಸುಗಳ ವರೆಗೆ ಉಳಿಯಬಹುದು. ನಿಜ, ನೀವು ಮತ್ತೊಮ್ಮೆ ಮದ್ಯಪಾನ ಮಾಡುವುದಾದರೆ, ನಿಮ್ಮ ವ್ಯಾಕುಲತೆಯ ಮಟ್ಟವು ಪುನಃ ಕೆಳಗಿಳಿಯುವುದು. ಆದರೆ ಒಂದೆರಡು ತಾಸುಗಳ ಅನಂತರ, ಅದು ಏರುವುದು, ಈ ಸಮಯ ಹಿಂದೆ ಇದ್ದ ಮಟ್ಟಕ್ಕಿಂತಲೂ ಇನ್ನೂ ಹೆಚ್ಚು ಉನ್ನತವಾದ ಮಟ್ಟಕ್ಕೆ! ಮತ್ತು ಹೀಗೆ ಅದು ಅಸ್ವಾಭಾವಿಕ ಉನ್ನತ ಮಟ್ಟಗಳು ಮತ್ತು ಅತಿ ಕಡಿಮೆಯಾದ ಹೀನ ಮಟ್ಟಗಳ ಒಂದು ದುರ್ವ್ಯಸನಿ ಸುರುಳಿಯಲ್ಲಿ ಮುಂದುವರಿಯುತ್ತದೆ.

ಹೀಗೆ ಕಟ್ಟಕಡೆಯಲ್ಲಿ, ಮದ್ಯಸಾರವು ನಿಜವಾಗಿಯೂ ನಿಮ್ಮ ವ್ಯಾಕುಲತೆಯನ್ನು ಕಡಿಮೆಮಾಡಲಾರದು. ಅದು ಅದನ್ನು ಹೆಚ್ಚಿಸಬಹುದಷ್ಟೇ. ಮತ್ತು ಮದ್ಯಸಾರದ ಪರಿಣಾಮವು ಇಳಿದುಹೋಗುವಾಗ, ನಿಮ್ಮ ಸಮಸ್ಯೆಗಳು ಇನ್ನೂ ಅಸ್ತಿತ್ವದಲ್ಲಿರುತ್ತವೆ.

ಭಾವನಾತ್ಮಕವಾಗಿ ಕುಂಠಿತಗೊಳಿಸಲ್ಪಟ್ಟದ್ದು

ಮದ್ಯಸಾರವು ಉತ್ತಮವಾಗಿ ಕಾರ್ಯನಡೆಸುವಂತೆ ತಮಗೆ ಸಹಾಯ ಮಾಡುತ್ತದೆಂದು ಇತರರು ವಾದಿಸುತ್ತಾರೆ. ಉದಾಹರಣೆಗೆ ಡೆನಿಸ್‌, ವಿಪರೀತ ಸಂಕೋಚ ಪ್ರವೃತ್ತಿಯುಳ್ಳವನಾಗಿದ್ದು, ಒಂದು ಸರಳವಾದ ಸಂಭಾಷಣೆಯನ್ನೂ ಮುಂದುವರಿಸುವುದನ್ನು ಕಷ್ಟಕರವಾಗಿ ಕಂಡುಕೊಂಡನು. ಆದರೆ ಆಗ ಅವನೊಂದು ಶೋಧವನ್ನು ಮಾಡಿದನು. “ಸ್ವಲ್ಪ ಮದ್ಯಪಾನ ಮಾಡಿದ ನಂತರ ನಾನು ಸಡಿಲವಾಗುತ್ತಿದ್ದೆ,” ಎಂಬುದಾಗಿ ಅವನು ಹೇಳಿದನು.

ಸಮಸ್ಯೆಯು ಏನೆಂದರೆ, ವ್ಯಕ್ತಿಯೊಬ್ಬನು ಪಕ್ವನಾಗುವುದು, ಡೆನಿಸ್‌ ಮಾಡಿದಂತೆ ಕಷ್ಟಕರ ಸನ್ನಿವೇಶಗಳಿಂದ ಓಡಿಹೋಗುವ ಮೂಲಕವಲ್ಲ, ಬದಲಿಗೆ ಅವುಗಳನ್ನು ಎದುರಿಸುವ ಮೂಲಕವೇ. ಯುವ ಜನರೋಪಾದಿ ನೀವು ಎದುರಿಸುವ ಸಮಸ್ಯೆಗಳನ್ನು ನಿಭಾಯಿಸಲು ಕಲಿಯುವುದು, ಪ್ರೌಢವಯಸ್ಸಿನ ಪರೀಕ್ಷೆಗಳಿಗೆ ಕೇವಲ ಒಂದು ಪೂರ್ವಪ್ರಯೋಗವಾಗಿದೆ. ಹೀಗೆ ಕಟ್ಟಕಡೆಯಲ್ಲಿ, ಮದ್ಯಸಾರದ ತಾತ್ಕಾಲಿಕ ಪರಿಣಾಮಗಳು ತನ್ನ ಸಂಕೋಚ ಪ್ರವೃತ್ತಿಯನ್ನು ಜಯಿಸಲು ತನಗೆ ಸಹಾಯ ಮಾಡಲಿಲ್ಲವೆಂಬುದನ್ನು ಡೆನಿಸ್‌ ಕಂಡುಕೊಂಡನು. “ಮದ್ಯಸಾರದ ಪರಿಣಾಮವು ಇಳಿದುಹೋದ ತರುವಾಯ, ನಾನು ಪುನಃ ನನ್ನ ಚಿಪ್ಪಿನೊಳಗೆ ಸೇರಿಕೊಂಡೆ,” ಎಂಬುದಾಗಿ ಅವನು ವರದಿಸುತ್ತಾನೆ. ಈಗ, ಅನೇಕ ವರ್ಷಗಳ ನಂತರ, ಸ್ಥಿತಿಯು ಹೇಗಿದೆ? ಡೆನಿಸ್‌ ಮುಂದುವರಿಸುವುದು: “ನನ್ನ ಸ್ವಂತ ಮಟ್ಟದಲ್ಲಿ ಜನರೊಂದಿಗೆ ಸಂಸರ್ಗ ಮಾಡುವುದು ಹೇಗೆಂದು ನಾನು ನಿಜವಾಗಿಯೂ ಕಲಿಯಲೇ ಇಲ್ಲ. ಈ ರೀತಿಯಲ್ಲಿ ನಾನು ಕುಂಠಿತಗೊಳಿಸಲ್ಪಟ್ಟೆನೆಂದು ನನಗನಿಸುತ್ತದೆ.”

ಒತ್ತಡದೊಂದಿಗೆ ನಿರ್ವಹಿಸುವಾಗ ಮದ್ಯಸಾರವನ್ನು ಒಂದು ಆಧಾರದಂತೆ ಉಪಯೋಗಿಸುವ ವಿಷಯದಲ್ಲೂ ಇದು ಸತ್ಯವಾಗಿದೆ. ಒಬ್ಬ ಹದಿವಯಸ್ಕಳೋಪಾದಿ ಹಾಗೆ ಮಾಡಿದ ಜೋಆ್ಯನ್‌ ಒಪ್ಪಿಕೊಳ್ಳುವುದು: “ಇತ್ತೀಚೆಗೆ, ಒಂದು ಒತ್ತಡಭರಿತ ಸನ್ನಿವೇಶದಲ್ಲಿದ್ದಾಗ ನಾನು ಹೀಗೆ ನೆನಸಿದ್ದು: ‘ಈಗಲೇ ಮದ್ಯಪಾನ ಮಾಡುವಲ್ಲಿ ಎಷ್ಟು ಒಳ್ಳೆಯದಾಗಿರುವುದು.’ ಮದ್ಯಪಾನದೊಂದಿಗೆ ನೀವು ಸನ್ನಿವೇಶವೊಂದನ್ನು ಉತ್ತಮವಾಗಿ ನಿರ್ವಹಿಸಬಲ್ಲಿರೆಂದು ನೀವು ನೆನಸುತ್ತೀರಿ.” ವಿಷಯವು ಹಾಗಿರುವುದಿಲ್ಲ!

ನ್ಯೂ ಯಾರ್ಕ್‌ ಸ್ಟೇಟ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ ಪ್ರಕಟವಾದ ಒಂದು ಲೇಖನವು ಹೇಳುವುದು: “ಅಮಲೌಷಧಗಳು [ಮದ್ಯಸಾರವನ್ನು ಸೇರಿಸಿ] ಕಷ್ಟಕರ ಸನ್ನಿವೇಶಗಳನ್ನು—ಶೈಕ್ಷಣಿಕ, ಸಾಮಾಜಿಕ, ಅಥವಾ ಅಂತರ್‌ವೈಯಕ್ತಿಕ—ಸರಿಪಡಿಸುವ ಸಾಧನವಾಗುವಾಗ, ನಿಭಾಯಿಸುವ ಸ್ವಸ್ಥಕರ ಕೌಶಲಗಳನ್ನು ಕಲಿಯಲಿಕ್ಕಾಗಿರುವ ಆವಶ್ಯಕತೆಯು ತೆಗೆದುಹಾಕಲ್ಪಡುತ್ತದೆ. ಪರಿಣಾಮಗಳು ಪ್ರೌಢವಯಸ್ಸಿನ ವರೆಗೆ—ಯಾವ ಸಮಯದಲ್ಲಿ ವ್ಯಕ್ತಿಯನ್ನು ಭಾವನಾತ್ಮಕವಾಗಿ ಪ್ರತ್ಯೇಕಗೊಳಿಸುತ್ತಾ, ನಿಕಟವಾದ ವೈಯಕ್ತಿಕ ಸಂಬಂಧಗಳನ್ನು ಸ್ಥಾಪಿಸುವುದು ಅನೇಕ ವೇಳೆ ಕಷ್ಟಕರವಾಗಿ ಪರಿಣಮಿಸುತ್ತದೊ, ಅಲ್ಲಿಯ ವರೆಗೆ—ತಟ್ಟದೆ ಇರಬಹುದು.” ಸಮಸ್ಯೆಗಳು ಮತ್ತು ಕಷ್ಟಕರ ಸನ್ನಿವೇಶಗಳನ್ನು ನೇರವಾಗಿ ಎದುರಿಸಿ, ನಿರ್ವಹಿಸುವುದು ಎಷ್ಟೊ ಉತ್ತಮ!

“ಆತನು ತೆಗೆದುಕೊಳ್ಳಲಿಲ್ಲ”

ಯೇಸು ಕ್ರಿಸ್ತನ ಮಾದರಿಯನ್ನು ಪರಿಗಣಿಸಿರಿ. ತನ್ನ ಭೂಜೀವಿತದ ಕೊನೆಯ ರಾತ್ರಿಯಂದು, ಯೇಸು ಭಾರಿ ಒತ್ತಡಭರಿತ ಉಗ್ರಪರೀಕ್ಷೆಯೊಂದನ್ನು ತಾಳಿಕೊಂಡನು. ದ್ರೋಹ ಬಗೆಯಲ್ಪಟ್ಟು, ನಂತರ ದಸ್ತಗಿರಿಮಾಡಲ್ಪಟ್ಟ ಯೇಸು, ಪ್ರಶ್ನೆಗಳ ಸರಣಿಯನ್ನು ತಾಳಿಕೊಂಡನು, ಅವುಗಳಲ್ಲಿ ಅವನ ವಿರುದ್ಧ ಸುಳ್ಳು ಆರೋಪಗಳು ಹೊರಿಸಲ್ಪಟ್ಟವು. ಅಂತಿಮವಾಗಿ, ಇಡೀ ರಾತ್ರಿ ಎಚ್ಚರವಾಗಿದ್ದ ನಂತರ, ಶೂಲಕ್ಕೇರಿಸುವಂತೆ ಅವನನ್ನು ಒಪ್ಪಿಸಲಾಯಿತು.—ಮಾರ್ಕ 14:43–15:15; ಲೂಕ 22:47–23:25.

ನಂತರ ಯೇಸುವಿಗೆ ಅವನ ಸ್ವಸ್ಥಬುದ್ಧಿಯನ್ನು ಮಂದಗೊಳಿಸುವಂತಹ ಏನನ್ನೊ ನೀಡಲಾಯಿತು. ಈ ಕಷ್ಟಕರ ಸನ್ನಿವೇಶವನ್ನು ನಿಭಾಯಿಸಲು ಅವನಿಗೆ ಸುಲಭ ಮಾಡಲಿರುವ, ಮನೋವೃತ್ತಿಯನ್ನು ಬದಲಾಯಿಸುವ ಒಂದು ಪದಾರ್ಥ. ಬೈಬಲು ವಿವರಿಸುವುದು: “ಆತನಿಗೆ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು; ಆದರೆ ಆತನು ತೆಗೆದುಕೊಳ್ಳಲಿಲ್ಲ.” (ಮಾರ್ಕ 15:22, 23) ಯೇಸು ತನ್ನೆಲ್ಲ ಮನಶ್ಶಕ್ತಿಗಳನ್ನು ಸ್ವಾಧೀನದಲ್ಲಿರಿಸಿಕೊಳ್ಳಲು ಬಯಸಿದನು. ಈ ಕಷ್ಟಕರ ಸನ್ನಿವೇಶವನ್ನು ಅವನು ಪ್ರಾಮಾಣಿಕವಾಗಿ ಎದುರಿಸಲು ಬಯಸಿದನು. ಅವನೊಬ್ಬ ಪಲಾಯನವಾದಿಯಾಗಿರಲಿಲ್ಲ! ತದನಂತರವಾದರೊ, ಅವನ ಬಾಯಾರಿಕೆಯನ್ನು ತಣಿಸಲು, ಸ್ಪಷ್ಟವಾಗಿ ಮಿತವಾದ ಪ್ರಮಾಣದಲ್ಲಿ ಬೆರಕೆಯಿಲ್ಲದ ದ್ರಾಕ್ಷಾರಸವು ನೀಡಲ್ಪಟ್ಟಾಗ, ಯೇಸು ಸ್ವೀಕರಿಸಿದನು.—ಯೋಹಾನ 19:28-30.

ಹೋಲಿಕೆಯಲ್ಲಿ ನಿಮ್ಮ ಸಮಸ್ಯೆಗಳು, ಒತ್ತಡಗಳು, ಇಲ್ಲವೆ ಪೀಡನೆಗಳು ಕ್ಷುಲ್ಲಕವಾಗಿ ಪರಿಣಮಿಸುತ್ತವೆ. ಹಾಗಿದ್ದರೂ ಯೇಸುವಿನ ಅನುಭವದಿಂದ ನೀವು ಇನ್ನೂ ಒಂದು ಅಮೂಲ್ಯವಾದ ಪಾಠವನ್ನು ಕಲಿಯಬಲ್ಲಿರಿ. ಸಮಸ್ಯೆಗಳು, ಒತ್ತಡಗಳು, ಮತ್ತು ಅನುಕೂಲಕರವಲ್ಲದ ಸನ್ನಿವೇಶಗಳನ್ನು ನಿಭಾಯಿಸಲು, ಮನೋವೃತ್ತಿಯನ್ನು ಬದಲಾಯಿಸುವ (ಮದ್ಯಸಾರದಂತಹ) ಪದಾರ್ಥವೊಂದನ್ನು ಉಪಯೋಗಿಸುವ ಬದಲು, ಅವುಗಳೊಂದಿಗೆ ನೇರವಾಗಿ ವ್ಯವಹರಿಸುವುದಾದರೆ ನೀವು ಹೆಚ್ಚು ಸೌಖ್ಯವಾಗಿರುವಿರಿ. ಜೀವಿತದ ಸಮಸ್ಯೆಗಳನ್ನು ಎದುರಿಸುವುದರಲ್ಲಿ ನೀವು ಹೆಚ್ಚಿನ ಅನುಭವವನ್ನು ಪಡೆದಷ್ಟು, ಅವುಗಳನ್ನು ಬಗೆಹರಿಸುವುದರಲ್ಲಿ ನೀವು ಹೆಚ್ಚು ಉತ್ತಮರಾಗುವಿರಿ. ಒಂದು ಆರೋಗ್ಯಕರ ಭಾವನಾತ್ಮಕ ರಚನೆಯುಳ್ಳವರಾಗಿ ನೀವು ಬೆಳೆಯುವಿರಿ.

ಪ್ರಾಪ್ತವಯಸ್ಕರಾಗುವಾಗ, ನೀವು ಸಾಂದರ್ಭಿಕವಾಗಿ—ಮತ್ತು ಮಿತವಾಗಿ—ಮದ್ಯಪಾನ ಮಾಡಲು ಆರಿಸಿಕೊಳ್ಳುವಿರೊ ಇಲ್ಲವೊ, ಅದು ನೀವು (ಮತ್ತು ಬಹುಶಃ ನಿಮ್ಮ ಹೆತ್ತವರು) ಮಾಡಬೇಕಾದ ಒಂದು ನಿರ್ಣಯವಾಗಿರುವುದು. ಅದೊಂದು ತಿಳಿವಳಿಕೆಯುಳ್ಳ, ಬುದ್ಧಿವಂತ ನಿರ್ಣಯವಾಗಿರಲಿ. ನೀವು ಮದ್ಯಪಾನ ಮಾಡದಿರಲು ಆರಿಸಿಕೊಳ್ಳುವುದಾದರೆ, ಅದರ ಕುರಿತು ವಿಷಾದಪಡಬೇಕಾಗಿಲ್ಲ. ಆದರೆ ನೀವು ಪ್ರಾಪ್ತವಯಸ್ಕರಾಗಿದ್ದು, ಮದ್ಯಪಾನ ಮಾಡಲು ನಿರ್ಧರಿಸುವುದಾದರೆ, ಹೊಣೆಗಾರಿಕೆಯುಳ್ಳವರಾಗಿ ಮದ್ಯಪಾನ ಮಾಡಿರಿ. ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಅಥವಾ ಕೃತಕ ಧೈರ್ಯವನ್ನು ಪಡೆದುಕೊಳ್ಳುವ ಸಲುವಾಗಿ ಎಂದೂ ಮದ್ಯಪಾನ ಮಾಡದಿರಿ. ಬೈಬಲಿನ ಬುದ್ಧಿವಾದವು ಸರಳವಾಗಿಯೂ ಮುಚ್ಚುಮರೆಯಿಲ್ಲದ್ದೂ ಆಗಿದೆ: “ಮಿತಿಮೀರಿ ಕುಡಿಯುವುದು ನಿಮ್ಮನ್ನು ಕೂಗಾಡುವವರನ್ನಾಗಿಯೂ ಮೂರ್ಖರನ್ನಾಗಿಯೂ ಮಾಡುತ್ತದೆ. ಕುಡಿದು ಅಮಲೇರುವುದು ಮೂಢತನ.”—ಜ್ಞಾನೋಕ್ತಿ 20:1, ಟುಡೇಸ್‌ ಇಂಗ್ಲಿಷ್‌ ವರ್ಷನ್‌.

ಚರ್ಚೆಗಾಗಿ ಪ್ರಶ್ನೆಗಳು

◻ ಮದ್ಯಸಾರದ ಪಾನೀಯಗಳನ್ನು ಕುಡಿಯುವುದರಲ್ಲಿ ಅನೇಕ ಯುವ ಜನರು ಏಕೆ ಒಳಗೊಳ್ಳುತ್ತಾರೆ?

◻ ಮದ್ಯಸಾರದ ಕುರಿತಿರುವ ಕೆಲವೊಂದು ಸಾಮಾನ್ಯ ತಪ್ಪಭಿಪ್ರಾಯಗಳು ಯಾವುವು?

◻ ವಾಹನ ಚಲಾಯಿಸುವುದು ಮತ್ತು ಮದ್ಯಪಾನ ಮಾಡುವುದು—ಇವೆರಡನ್ನೂ ಸೇರಿಸುವುದರಲ್ಲಿರುವ ಅಪಾಯಗಳಾವುವು?

◻ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮದ್ಯಸಾರವನ್ನು ಉಪಯೋಗಿಸುವುದರ ಅಪಾಯಗಳಾವುವು?

◻ ಒಬ್ಬ ಯುವ ವ್ಯಕ್ತಿಯು ಸಮಸ್ಯೆಗಳನ್ನು ಎದುರಿಸುವಾಗ ಏನು ಮಾಡಬೇಕು, ಮತ್ತು ಏಕೆ?

[ಪುಟ 268 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಮದ್ಯಪಾನವು ಒಬ್ಬ ಯುವ ವ್ಯಕ್ತಿಯನ್ನು ಅಸ್ವಾಭಾವಿಕ ಉನ್ನತ ಮಟ್ಟಗಳು ಮತ್ತು ಅತಿ ಕಡಿಮೆಯಾದ ಹೀನ ಮಟ್ಟಗಳ ಒಂದು ದುರ್ವ್ಯಸನಿ ಸುರುಳಿಯಲ್ಲಿ ಸಿಕ್ಕಿಸಬಲ್ಲದು

[ಪುಟ 271 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನ್ನ ಸ್ವಂತ ಮಟ್ಟದಲ್ಲಿ ಜನರೊಂದಿಗೆ ಸಂಸರ್ಗ ಮಾಡುವುದು ಹೇಗೆಂಬುದನ್ನು ನಾನು ನಿಜವಾಗಿಯೂ ಕಲಿಯಲೇ ಇಲ್ಲ. ಈ ರೀತಿಯಲ್ಲಿ ನಾನು ಕುಂಠಿತಗೊಳಿಸಲ್ಪಟ್ಟೆನೆಂದು ನನಗನಿಸುತ್ತದೆ.”—ಒಬ್ಬ ಹದಿವಯಸ್ಕನೋಪಾದಿ ಮದ್ಯಸಾರವನ್ನು ಅಪಪ್ರಯೋಗಿಸಿದ ಒಬ್ಬ ಯುವ ಪುರುಷ

[ಪುಟ 264 ರಲ್ಲಿರುವ ಚೌಕ]

‘ನಾವು ಮದ್ಯಪಾನ ಮಾಡಲಾರಂಭಿಸಿದ ಕಾರಣ’

ಕೆಲವು ಮೊದಲಿನ ಹದಿವಯಸ್ಕ ಕುಡುಕರೊಂದಿಗೆ ಒಂದು ಸಂದರ್ಶನ

ಸಂದರ್ಶಕ: ನೀವು ಏಕೆ ಮದ್ಯಪಾನ ಮಾಡಿದಿರಿ?

ಬಿಲ್‌: ನನ್ನ ವಿಷಯದಲ್ಲಾದರೊ, ಅದು ಪ್ರಥಮವಾಗಿ ನಾನು ಒಳಗೊಂಡಿದ್ದ ಗುಂಪಿನಿಂದಾಗಿತ್ತು. ಅದು, ವಿಶೇಷವಾಗಿ ವಾರಾಂತ್ಯಗಳಲ್ಲಿ ಮಾಡಲ್ಪಡುತ್ತಿದ್ದ “ಆಧುನಿಕ ಶೈಲಿ” ಆಗಿತ್ತು.

ಡೆನಿಸ್‌: ನಾನು ಸುಮಾರು 14ರ ಪ್ರಾಯದಲ್ಲಿ ಮದ್ಯಪಾನ ಮಾಡಲು ತೊಡಗಿದೆ. ನನ್ನ ತಂದೆಯು ಭಾರಿ ಕುಡುಕರಾಗಿದ್ದರು. ಮನೆಯಲ್ಲಿ ಯಾವಾಗಲೂ ಕಾಕ್‌ಟೇಲ್‌ ಪಾರ್ಟಿಗಳಿರುತ್ತಿದ್ದವು. ಮದ್ಯಪಾನವು ಸಾಮಾಜಿಕವಾಗಿ ಮಾಡಲ್ಪಡಬೇಕಾದ ವಿಷಯವೆಂದು ನಾನು ಒಂದು ಮಗುವಿನೋಪಾದಿ ಕಂಡೆ. ಅನಂತರ, ನಾನು ದೊಡ್ಡವನಾದಾಗ, ಒರಟು ಹುಡುಗರ ಒಂದು ಗುಂಪಿನೊಂದಿಗೆ ಸೇರಿಕೊಂಡೆ. ಇತರ ಮಕ್ಕಳಿಂದ ಸ್ವೀಕರಿಸಲ್ಪಡಲಿಕ್ಕಾಗಿ ನಾನು ಮದ್ಯಪಾನ ಮಾಡುತ್ತಿದ್ದೆ.

ಮಾರ್ಕ್‌: ನಾನು ಕ್ರೀಡೆಗಳಲ್ಲಿ ಒಳಗೊಂಡಿದ್ದೆ. ನಾನು ಸುಮಾರು 15ರ ಪ್ರಾಯದಲ್ಲಿ, ಬಾಸ್ಕೆಟ್‌ ಬಾಲ್‌ ತಂಡದಲ್ಲಿದ್ದ ಹುಡುಗರೊಂದಿಗೆ ಮದ್ಯಪಾನಮಾಡಲಾರಂಭಿಸಿದೆ ಎಂದು ನನಗನಿಸುತ್ತದೆ. ಮುಖ್ಯವಾಗಿ ಅದು ಕುತೂಹಲವಾಗಿತ್ತೆಂದು ನನ್ನೆಣಿಕೆ.

ಜೋನ್‌: ನಾನು ಟಿವಿಯಲ್ಲಿ ನೋಡಿದ ವಿಷಯದಿಂದ ಬಹಳವಾಗಿ ಪ್ರಭಾವಿಸಲ್ಪಟ್ಟೆ. ಅಲ್ಲಿಯ ಪಾತ್ರಧಾರಿಗಳು ಮದ್ಯಪಾನಮಾಡುವುದನ್ನು ನಾನು ನೋಡುತ್ತಿದ್ದೆ. ಅದು ಬಹಳ ಚೆನ್ನಾಗಿ ಕಂಡಿತು.

ಪೌಲ್‌: ನನ್ನ ತಂದೆ ಒಬ್ಬ ಮದ್ಯವ್ಯಸನಿ. ನಮ್ಮಲ್ಲಿ ಇಷ್ಟೊಂದು ಸಮಸ್ಯೆಗಳಿದ್ದ ಕಾರಣವು ಮದ್ಯವ್ಯಸನವಾಗಿತ್ತೆಂದು ನಾನು ಈಗ ಗ್ರಹಿಸಬಲ್ಲೆ. ನಾನು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಹಾಸ್ಯವ್ಯಂಗ್ಯವಾಗಿ, ನಾನು ಮದ್ಯಪಾನಮಾಡುವುದನ್ನು ಆರಂಭಿಸಿದ ಕಾರಣಗಳಲ್ಲಿ ಅದು ಒಂದಾಗಿದೆ.

ಜೋನ್‌: ನನ್ನ ಹೆತ್ತವರು ಸಾಮಾನ್ಯವಾಗಿ ಹೆಚ್ಚು ಮದ್ಯಪಾನ ಮಾಡಲಿಲ್ಲ. ಆದರೆ ನನ್ನ ತಂದೆಯ ಕುರಿತು ನಾನು ಒಂದು ವಿಷಯವನ್ನು ಜ್ಞಾಪಿಸಿಕೊಳ್ಳುತ್ತೇನೆ, ಸಾಮಾಜಿಕ ಒಟ್ಟುಗೂಡುವಿಕೆಗಳಲ್ಲಿ ತಾವು ಎಷ್ಟು ಹೆಚ್ಚು ಮದ್ಯಪಾನಮಾಡಬಲ್ಲರೆಂಬ ವಿಷಯವಾಗಿ ಅವರು ಜಂಬಕೊಚ್ಚಿಕೊಳ್ಳುತ್ತಿದ್ದರು. ನಾನು ಅಸಾಧಾರಣವಾಗಿದ್ದೇನೆಂದು ನೆನಸುತ್ತಾ, ಆ ರೀತಿಯ ಮನೋಭಾವವನ್ನು ವಿಕಸಿಸಿಕೊಂಡೆ. ಒಮ್ಮೆ ನನ್ನ ಮಿತ್ರರು ಮತ್ತು ನಾನು ಪಾನಕೇಳಿಯಲ್ಲಿ ಒಳಗೊಂಡೆವು. ಅನೇಕ ತಾಸುಗಳ ವರೆಗೆ ನಾವು ಮದ್ಯಪಾನಮಾಡುತ್ತಾ ಇದ್ದೆವು. ಇತರರನ್ನು ಬಾಧಿಸಿದ ಹಾಗೆ ಅದು ನನ್ನನ್ನು ನಿಜವಾಗಿಯೂ ಬಾಧಿಸಲಿಲ್ಲ. ‘ನಾನು ನನ್ನ ತಂದೆಯಂತೆಯೇ ಇದ್ದೇನೆ’ ಎಂಬುದಾಗಿ ಆಗ ಯೋಚಿಸಿದ್ದು ನನಗೆ ಜ್ಞಾಪಕವಿದೆ. ಮದ್ಯಸಾರದ ಕುರಿತು ಅವರಿಗಿದ್ದ ಮನೋಭಾವವು ನನ್ನನ್ನು ನಿಜವಾಗಿಯೂ ಪ್ರಭಾವಿಸಿತ್ತೆಂದು ನಾನೆಣಿಸುತ್ತೇನೆ.

ಸಂದರ್ಶಕ: ಆದರೆ ಅನೇಕರು ಅಮಲೇರುವ ಮಟ್ಟದ ವರೆಗೆ ಏಕೆ ಮದ್ಯಪಾನಮಾಡುತ್ತಾರೆ?

ಮಾರ್ಕ್‌: ನಾವು ಮದ್ಯಪಾನ ಮಾಡಿದ್ದು ಆ ಕಾರಣಕ್ಕಾಗಿಯೇ—ಅಮಲೇರಲು. ನಾನು ನಿಜವಾಗಿಯೂ ಸ್ವಾದದ ಕುರಿತು ಚಿಂತಿಸಲಿಲ್ಲ.

ಸಂದರ್ಶಕ: ಹಾಗಾದರೆ ನೀವು ಅದರಿಂದಾಗುವ ಪರಿಣಾಮಕ್ಕಾಗಿ ಮದ್ಯಪಾನ ಮಾಡಿದಿರಿ?

ಮಾರ್ಕ್‌: ಹೌದು.

ಹ್ಯಾರಿ: ನಾನೂ ಅದೇ ವಿಷಯವನ್ನೇ ಹೇಳುವೆ. ಅದು ಒಂದು ಏಣಿಯನ್ನು ಏರುವಂತಿದೆ. ನೀವು ಪ್ರತಿಯೊಂದು ಬಾರಿ ಮದ್ಯಪಾನ ಮಾಡುವಾಗ, ನೀವು ಒಂದು ಉತ್ತಮವಾದ ಮಟ್ಟವನ್ನು—ಏಣಿಯ ಮುಂದಿನ ಮೆಟ್ಟಲನ್ನು ಮುಟ್ಟುತ್ತಿದ್ದೀರಿ.

[ಪುಟ 270 ರಲ್ಲಿರುವ ಚೌಕ]

ಸರಿ ಅಥವಾ ತಪ್ಪು ಪರೀಕ್ಷೆಗೆ ಉತ್ತರಗಳು (ಪುಟ 263)

1. ತಪ್ಪು. ಮದ್ಯಸಾರವು ಮುಖ್ಯವಾಗಿ ಒಂದು ಉಪಶಾಮಕವಾಗಿದೆ. ಅದು ನಿಮ್ಮ ಆತಂಕದ ಮಟ್ಟವನ್ನು ಉಪಶಮನಮಾಡುತ್ತಾ ಅಥವಾ ಕಡಿಮೆಮಾಡುತ್ತಾ, ನೀವು ಮದ್ಯಪಾನ ಮಾಡುವ ಮೊದಲು ಇದ್ದುದಕ್ಕಿಂತಲೂ ಹೆಚ್ಚು ವಿಶ್ರಮಿಸುವವರಾಗಿ, ಕಡಿಮೆ ಆತಂಕಗೊಂಡವರಾಗಿ ಮಾಡುವುದರಲ್ಲಿ ನಿಮ್ಮನ್ನು ಉನ್ನತಕ್ಕೇರಿಸಬಲ್ಲದು.

2. ತಪ್ಪು. ಮಿತವಾದ ಅಥವಾ ಅಲ್ಪ ಪ್ರಮಾಣದಲ್ಲಿ ಮದ್ಯಸಾರವನ್ನು ಕುಡಿಯುವುದು, ಶರೀರಕ್ಕೆ ಯಾವುದೇ ಗಂಭೀರವಾದ ಹಾನಿಯನ್ನು ಮಾಡುವಂತೆ ತೋರುವುದಿಲ್ಲ. ಹಾಗಿದ್ದರೂ, ಸುದೀರ್ಘ ಮತ್ತು ವಿಪರೀತ ಮದ್ಯಪಾನವು, ಹೃದಯ, ಮಿದುಳು, ಯಕೃತ್ತು, ಮತ್ತು ಇತರ ಅಂಗಗಳನ್ನು ಹಾನಿಗೊಳಿಸಬಲ್ಲದು.

3. ತಪ್ಪು. ಸಾರಾಯಿ ಅಥವಾ ಮದ್ಯವು ಸಾಮಾನ್ಯವಾಗಿ ದ್ರಾಕ್ಷಾಮದ್ಯ ಅಥವಾ ಬಿಯರ್‌ಗಿಂತಲೂ ಹೆಚ್ಚು ವೇಗವಾಗಿ ಹೀರಿಕೊಳ್ಳಲ್ಪಡುತ್ತದೆ.

4. ತಪ್ಪು. ಕಾಫಿಯು ನಿಮ್ಮನ್ನು ಎಚ್ಚರಗೊಳಿಸಬಲ್ಲದು, ಮತ್ತು ತಣ್ಣೀರಿನ ಸ್ನಾನವು ನಿಮ್ಮನ್ನು ತೊಯಿಸಬಲ್ಲದು, ಆದರೆ ಮದ್ಯಸಾರವು, ಪ್ರತಿ ತಾಸಿಗೆ ಒಂದರ್ಧ ಔನ್ಸ್‌ನಷ್ಟು ಮದ್ಯಸಾರದ ಪ್ರಮಾಣದಲ್ಲಿ ನಿಮ್ಮ ಯಕೃತ್ತಿನ ಮೂಲಕ ಪರಿವರ್ತಿಸಲ್ಪಡುವ ವರೆಗೆ ನಿಮ್ಮ ರಕ್ತಪ್ರವಾಹದಲ್ಲಿ ಮುಂದುವರಿಯುತ್ತದೆ.

5. ತಪ್ಪು. ನಿಮ್ಮ ದೇಹದ ತೂಕ ಮತ್ತು ನೀವು ತಿಂದಿದ್ದೀರೊ ಇಲ್ಲವೊ ಎಂಬಂತಹ ಅನೇಕ ಅಂಶಗಳು, ಮದ್ಯಸಾರವು ನಿಮ್ಮನ್ನು ಹೇಗೆ ಬಾಧಿಸುತ್ತದೆ ಎಂಬುದನ್ನು ಪ್ರಭಾವಿಸಬಲ್ಲದು.

6. ತಪ್ಪು. ಕುಡುಕತನವು ಅತಿಯಾದ ಸೇವನೆಯ ಪರಿಣಾಮವನ್ನು ವರ್ಣಿಸುತ್ತದೆ. ಮದ್ಯವ್ಯಸನವು ಮದ್ಯಪಾನದ ಮೇಲಿನ ನಿಯಂತ್ರಣದ ನಷ್ಟವನ್ನು ವಿವರಿಸುತ್ತದೆ. ಹಾಗಿದ್ದರೂ, ಅಮಲೇರುವ ಪ್ರತಿಯೊಬ್ಬನೂ ಮದ್ಯವ್ಯಸನಿಯಲ್ಲ, ಮತ್ತು ಎಲ್ಲ ಮದ್ಯವ್ಯಸನಿಗಳು ಅಮಲೇರುವುದಿಲ್ಲ.

7. ಸರಿ. ಮದ್ಯಸಾರದೊಂದಿಗೆ ಸೇರಿಸಲ್ಪಟ್ಟಾಗ, ಕೆಲವು ನೋವುಶಾಮಕ ಔಷಧಗಳು, ಮದ್ಯಸಾರ ಅಥವಾ ಆ ಶಾಮಕ ಔಷಧದಿಂದ ಮಾತ್ರ ನಿರೀಕ್ಷಿಸಲ್ಪಟ್ಟ ಸಾಮಾನ್ಯ ಪ್ರತಿಕ್ರಿಯೆಗಳನ್ನು ಮಹತ್ತರವಾಗಿ ಅತಿಶಯಿಸುತ್ತವೆ. ಉದಾಹರಣೆಗೆ, ಮದ್ಯಸಾರ ಮತ್ತು ಶಾಮಕಗಳು ಅಥವಾ ಉಪಶಾಮಕಗಳನ್ನು ಸೇರಿಸುವುದು, ತೀವ್ರವಾದ ತ್ಯಜನ ಲಕ್ಷಣಗಳು, ಅತಿಸುಪ್ತಿ (ಕೋಮ), ಮತ್ತು ಮರಣದಲ್ಲಿಯೂ ಪರಿಣಮಿಸಬಲ್ಲದು. ಹೀಗೆ, ಒಂದು ಮದ್ಯಪಾನ ಮತ್ತು ಒಂದು ಮಾತ್ರೆಗೆ ನೀವು ಊಹಿಸಸಾಧ್ಯವಿರುವುದಕ್ಕಿಂತಲೂ ಬಹಳ ಹೆಚ್ಚಿನ ಪರಿಣಾಮವಿದೆ. ನಿಶ್ಚಯವಾಗಿಯೂ, ಶಾಮಕ ಔಷಧದ ಪರಿಣಾಮವು ಮೂರು ಬಾರಿ, ನಾಲ್ಕು ಬಾರಿ, ಹತ್ತು ಬಾರಿ, ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಹೆಚ್ಚಿಸಲ್ಪಡುತ್ತದೆ!

8. ತಪ್ಪು. ಕುಡುಕತನವು ಬಳಸಲ್ಪಟ್ಟ ಒಟ್ಟು ಮೊತ್ತದ ಮದ್ಯಸಾರದ—ಅದು ಜಿನ್‌, ವಿಸ್ಕಿ, ವೋಡ್ಕ, ಅಥವಾ ಏನೇ ಆಗಿರಲಿ, ಅದರಲ್ಲಿರುವ ಮದ್ಯಸಾರದ—ಪರಿಣಾಮದಿಂದಾಗಿದೆ.

9. ತಪ್ಪು. ಹೆಚ್ಚಿನ ಇತರ ಆಹಾರಗಳು ಜೀರ್ಣಿಸಲ್ಪಡಬೇಕಾದ ನಿಧಾನಗತಿಯಲ್ಲಿ ಮದ್ಯಸಾರವು ಜೀರ್ಣಿಸಲ್ಪಡಬೇಕೆಂದಿಲ್ಲ. ಬದಲಿಗೆ, ಸುಮಾರು 20 ಪ್ರತಿಶತವು ಕೂಡಲೇ ಹೊಟ್ಟೆಯ ಪೊರೆಗಳ ಮುಖಾಂತರ ರಕ್ತಪ್ರವಾಹದೊಳಕ್ಕೆ ಹರಿದುಹೋಗುತ್ತದೆ. ಉಳಿದ ಮದ್ಯಸಾರವು ಹೊಟ್ಟೆಯಿಂದ ಸಣ್ಣಕರುಳಿಗೆ ಹೋಗುತ್ತದೆ, ಮತ್ತು ಅಲ್ಲಿಂದ ಅದು ರಕ್ತಪ್ರವಾಹದೊಳಕ್ಕೆ ಹೀರಿಕೊಳ್ಳಲ್ಪಡುತ್ತದೆ.

[ಪುಟ 266,267ರಲ್ಲಿರುವಚೌಕ]

ವಾಹನ ಚಲಾಯಿಸುವುದು ಮತ್ತು ಮದ್ಯಪಾನ ಮಾಡುವುದು—ಒಂದು ಮಾರಕ ಸಂಯೋಜನೆ

“ಅಮಲೇರಿ ವಾಹನ ಚಲಾಯಿಸುವುದು, 16-24 ವರ್ಷ ವಯಸ್ಸಿನ ಯುವ ಜನರಲ್ಲಿ ಮರಣದ ಪ್ರಧಾನ ಕಾರಣವಾಗಿದೆ,” ಎಂಬುದಾಗಿ ಮದ್ಯಪಾನ ಮಾಡುವುದು ಮತ್ತು ವಾಹನ ಚಲಾಯಿಸುವುದರ ಕುರಿತು ಯುವ ಜನರಿಗಾಗಿರುವ ರಾಷ್ಟ್ರೀಯ ಸಭೆಯ ವರದಿ (ಇಂಗ್ಲಿಷ್‌) 1984 ಹೇಳುತ್ತದೆ. ನಿಶ್ಚಯವಾಗಿಯೂ, “ಬೇರೆ ಯಾವನೇ ಚಾಲಕನಿಗಿಂತ ಒಬ್ಬ ಹದಿವಯಸ್ಕನು ಒಂದು ಮದ್ಯಸಾರ ಸಂಬಂಧಿತ ಅಪಘಾತವನ್ನು ಅನುಭವಿಸುವ ಸಾಧ್ಯತೆಯು ನಾಲ್ಕು ಪಟ್ಟು ಹೆಚ್ಚಾಗಿದೆ.” (ಜಸ್ಟ್‌ ಅಲಾಂಗ್‌ ಫಾರ್‌ ರೈಡ್‌) ಇಂತಹ ಅನಾವಶ್ಯಕವಾದ ಹತ್ಯೆಯು, ಭಾಗಶಃ ಮದ್ಯಸಾರದ ಪರಿಣಾಮಗಳ ಕುರಿತಾಗಿರುವ ಅನೇಕ ಮಿಥ್ಯೆಗಳ ಮುಂದುವರಿಯುವಿಕೆಯಿಂದಾಗಿದೆ. ಇಲ್ಲಿ ಕೆಲವೊಂದು ಪ್ರಾತಿನಿಧಿಕ ಉದಾಹರಣೆಗಳಿವೆ:

ಮಿಥ್ಯೆ: ನೀವು ಕುಡಿದದ್ದು ಒಂದೆರಡು ಗ್ಲಾಸುಗಳಷ್ಟು ಬಿಯರ್‌ ಮಾತ್ರ ಆಗಿದ್ದರೆ, ವಾಹನವನ್ನು ಚಲಾಯಿಸುವುದು ಸುರಕ್ಷಿತ.

ನಿಜಾಂಶ: “ಒಂದು ತಾಸಿಗಿಂತಲೂ ಕಡಿಮೆ ಸಮಯದಲ್ಲಿ ಕುಡಿಯಲ್ಪಟ್ಟ ಬಿಯರ್‌ನ ಎರಡು 12-ಔನ್ಸ್‌ ಕ್ಯಾನ್‌ಗಳಲ್ಲಿರುವ ಮದ್ಯಸಾರವು, ಒಬ್ಬ ಚಾಲಕನ ಪ್ರತಿಕ್ರಿಯೆಯನ್ನು ಒಂದು ಸೆಕೆಂಡಿನ ಐದನೆಯ ಎರಡಂಶದಿಂದ ನಿಧಾನಗೊಳಿಸಬಲ್ಲದು—ಪ್ರತಿ ಗಂಟೆಗೆ 55 ಮೈಲಿ ವೇಗದಲ್ಲಿ ಸಂಚರಿಸುತ್ತಿರುವ ಒಂದು ವಾಹನಕ್ಕೆ 34 ಅಡಿ ಹೆಚ್ಚು ದೂರ ಸಂಚರಿಸುವಂತೆ ಅನುಮತಿಸುತ್ತಾ—ಇದು ಬಹುಶಃ ಅಲ್ಪಾಂತರದ ತಪ್ಪುವಿಕೆ ಹಾಗೂ ಒಂದು ಅಪಘಾತದ ನಡುವಿನ ವ್ಯತ್ಯಾಸವಾಗಿದೆ.”—ಜೇಮ್ಸ್‌ ಎಲ್‌. ಮ್ಯಾಲ್‌ಫೆಟಿ, ಇಡಿ.ಡಿ., ಮತ್ತು ಡಾರ್ಲೀನ್‌ ಜೆ. ವಿಂಟರ್‌, ಪಿಏಚ್‌.ಡಿ. ಅವರಿಂದ ಹಿರಿಯ ವಯಸ್ಕರಿಗಾಗಿ ವಾಹನಸಂಚಾರದ ಸುರಕ್ಷತೆ ಮತ್ತು ಮದ್ಯಸಾರದ ಕುರಿತಾದ ಕಾರ್ಯಕ್ರಮದ ವಿಕಸನ (ಇಂಗ್ಲಿಷ್‌).

ಮಿಥ್ಯೆ: ನಿಮಗೆ ಅಮಲೇರಿರುವ ಅನಿಸಿಕೆ ಆಗದೆ ಇರುವ ವರೆಗೆ ವಾಹನ ಚಲಾಯಿಸಿದರೆ ಏನೂ ತೊಂದರೆ ಇಲ್ಲ.

ನಿಜಾಂಶ: ನಿಮಗೆ ಹೇಗನಿಸುತ್ತದೆ ಎಂಬುದರ ಮೇಲೆ ಆತುಕೊಳ್ಳುವುದು ಅಪಾಯಕಾರಿ. ಮದ್ಯಪಾನ ಮಾಡಿರುವವನ ಸಾಮರ್ಥ್ಯಗಳು ವಾಸ್ತವದಲ್ಲಿ ಕುಗ್ಗಿಹೋಗಿರುವಾಗ, ತಾನು ನಿಯಂತ್ರಣದಲ್ಲಿದ್ದೇನೆಂದು ಭಾವಿಸುವಂತೆ ಮಾಡುತ್ತಾ, ಮದ್ಯಸಾರವು ಕ್ಷೇಮದಿಂದಿರುವ ಒಂದು ಭ್ರಮೆಯನ್ನು ಸೃಷ್ಟಿಸುತ್ತದೆ.

ಯಾವನೇ ವ್ಯಕ್ತಿಗೆ ಮದ್ಯಪಾನ ಮಾಡುವುದು ಮತ್ತು ವಾಹನ ಚಲಾಯಿಸುವುದು, ಇವೆರಡನ್ನು ಸೇರಿಸುವುದು ಅಪಾಯಕಾರಿಯಾಗಿರುವಂತೆಯೇ, ಅದು ಯುವ ಜನರಿಗೆ ಇನ್ನೂ ಗಂಡಾಂತರದ ವಿಷಯವಾಗಿದೆ. ಮದ್ಯಪಾನ ಮಾಡುತ್ತಿರುವ ಯುವ ಜನರ ವಾಹನ ಚಲಾಯಿಸುವ ಕ್ರಿಯೆಯು, “ವಯಸ್ಕರಿಗಿಂತ ಹೆಚ್ಚು ವೇಗವಾಗಿ ಕೀಳಾಗುತ್ತದೆ ಏಕೆಂದರೆ, ವಾಹನ ಚಲಾಯಿಸುವುದು ಅವರಿಗೆ ಒಂದು ಹೊಸ ಹಾಗೂ ಕಡಿಮೆ ನಿಯತಕ್ರಮದ ಕೌಶಲವಾಗಿದೆ. ಎರಡು ಮಾತಿನಲ್ಲಿ ಹೇಳುವುದಾದರೆ, ಹೆಚ್ಚಿನ ಹದಿವಯಸ್ಕರು ಅನನುಭವಿ ವಾಹನ ಚಾಲಕರು ಮತ್ತು ಅನನುಭವಿ ಮದ್ಯಪಾನ ಮಾಡುವವರೂ ಆಗಿದ್ದಾರೆ, ಮತ್ತು ಮದ್ಯಪಾನ ಮಾಡುವುದನ್ನು ಹಾಗೂ ವಾಹನ ಚಲಾಯಿಸುವುದನ್ನು ಸಂಯೋಜಿಸುವುದರಲ್ಲಿ ಇನ್ನೂ ಹೆಚ್ಚು ಅನನುಭವಿಗಳು.”—ಡಾರ್ಲೀನ್‌ ಜೆ. ವಿಂಟರ್‌, ಪಿಏಚ್‌.ಡಿ. ಅವರಿಂದ ಹಿರಿಯ ವಯಸ್ಕರು, ವಾಹನಸಂಚಾರ ಸುರಕ್ಷತೆ ಮತ್ತು ಮದ್ಯಸಾರ ಕಾರ್ಯಕ್ರಮದ ಮುಖ್ಯಸ್ಥನ ಮಾರ್ಗದರ್ಶಕ (ಇಂಗ್ಲಿಷ್‌).

ಒಬ್ಬ ವಯಸ್ಕನಿಗಿಂತ ಒಬ್ಬ ಯೌವನಸ್ಥನನ್ನು ಅಮಲೇರಿಸಲು ಕಡಿಮೆ ಮದ್ಯಸಾರವು ಸಾಕಾಗಿರುತ್ತದೆ. ಯುವ ಜನರು ಸಾಮಾನ್ಯವಾಗಿ ವಯಸ್ಕರಿಗಿಂತ ಕಡಿಮೆ ತೂಕವುಳ್ಳವರು, ಮತ್ತು ವ್ಯಕ್ತಿಯೊಬ್ಬನು ಕಡಿಮೆ ತೂಕವುಳ್ಳವನಾಗಿದ್ದಷ್ಟು, ಅವನ ದೇಹದಲ್ಲಿ ಕುಡಿಯುವ ಮದ್ಯಸಾರವನ್ನು ನಿಸ್ಸಾರಮಾಡಲು ಕಡಿಮೆ ದ್ರವ್ಯವಿರುತ್ತದೆ. ನಿಮ್ಮ ರಕ್ತಪ್ರವಾಹದಲ್ಲಿ ಮದ್ಯಸಾರದ ಸಾರೀಕರಣವು ಹೆಚ್ಚಾಗಿರುವಷ್ಟು ನೀವು ಹೆಚ್ಚು ಅಮಲೇರುತ್ತೀರಿ.

“ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.” (ಜ್ಞಾನೋಕ್ತಿ 22:3) ಮದ್ಯಪಾನ ಮಾಡುವುದು ಮತ್ತು ವಾಹನ ಚಲಾಯಿಸುವುದು, ಇವೆರಡನ್ನು ಸೇರಿಸುವುದರ ಅಪಾಯಗಳ ಕುರಿತು ತಿಳಿದುಕೊಂಡ ತರುವಾಯ, ಎರಡನ್ನೂ ಸೇರಿಸದಿರುವಿರೆಂದು ಸ್ವತಃ ಮಾತು ಕೊಡುವುದಾದರೆ ನೀವು “ಜಾಣ”ರು. ಹೀಗೆ ಸ್ವತಃ ನಿಮಗೇ ಹಾನಿಮಾಡುವ—ಅಥವಾ ಮಾರಕ—ಗಾಯಗಳಿಂದ ನೀವು ತಪ್ಪಿಸಿಕೊಳ್ಳುವಿರಿ ಮಾತ್ರವಲ್ಲ, ಇತರರ ಜೀವಗಳಿಗೂ ಗೌರವವನ್ನು ತೋರಿಸುವಿರಿ.

ನೀವು ಇನ್ನೂ ಹೆಚ್ಚಾಗಿ ನಿರ್ಧರಿಸಬೇಕು ಏನೆಂದರೆ, ನೀವು (1) ಮದ್ಯಪಾನ ಮಾಡಿರುವ ಚಾಲಕನೊಂದಿಗೆ ಎಂದಿಗೂ ಕಾರಿನೊಳಗೆ ಕುಳಿತುಕೊಳ್ಳುವುದಿಲ್ಲ ಮತ್ತು (2) ಮಿತ್ರನೊಬ್ಬನು ಮದ್ಯಪಾನ ಮಾಡಿರುವಲ್ಲಿ ವಾಹನ ಚಲಾಯಿಸುವಂತೆ ಅವನನ್ನು ಎಂದಿಗೂ ಬಿಡುವುದಿಲ್ಲ. ಇದು ನಿಮ್ಮ ಮಿತ್ರನನ್ನು ರೇಗಿಸಬಹುದು, ಆದರೆ ಒಮ್ಮೆ ಅವನು ತನ್ನ ಸ್ತಿಮಿತಕ್ಕೆ ಬಂದಾಗ ನೀವು ಮಾಡಿದ್ದನ್ನು ಅವನು ಗಣ್ಯಮಾಡಬಹುದು.—ಹೋಲಿಸಿ ಕೀರ್ತನೆ 141:5.

[ಚಿತ್ರಗಳು]

ಮದ್ಯಪಾನ ಮಾಡಿರುವ ಚಾಲಕನೊಂದಿಗೆ ಎಂದಿಗೂ ಕಾರಿನೊಳಗೆ ಕುಳಿತುಕೊಳ್ಳಬೇಡಿ, ಮತ್ತು ಮಿತ್ರನೊಬ್ಬನು ಮದ್ಯಪಾನ ಮಾಡಿರುವಲ್ಲಿ ವಾಹನ ಚಲಾಯಿಸುವಂತೆ ಅವನನ್ನು ಎಂದಿಗೂ ಬಿಡಬೇಡಿರಿ

[ಪುಟ 262 ರಲ್ಲಿರುವ ಚಿತ್ರಗಳು]

ಯುವ ಜನರು ಮದ್ಯಪಾನ ಮಾಡುವುದನ್ನು ಆರಂಭಿಸುವಂತೆ, ಸಮಾನಸ್ಥರು, ಟೆಲಿವಿಷನ್‌, ಮತ್ತು ಕೆಲವೊಮ್ಮೆ ಹೆತ್ತವರು ಸಹ ಪ್ರಭಾವಬೀರಬಲ್ಲರು

[ಪುಟ 265 ರಲ್ಲಿರುವ ಚಿತ್ರಗಳು]

ದುರುಪಯೋಗಿಸಲ್ಪಟ್ಟಾಗ, ಮದ್ಯಸಾರವು ‘ಹಾವಿನಂತೆ ಕಚ್ಚ’ಬಲ್ಲದು

[ಪುಟ 269 ರಲ್ಲಿರುವ ಚಿತ್ರಗಳು]

ಮದ್ಯಪಾನ ಮಾಡುವುದು ಮತ್ತು ವಾಹನ ಚಲಾಯಿಸುವುದು ಅನೇಕ ವೇಳೆ ಇದಕ್ಕೆ ನಡೆಸುತ್ತದೆ