ಅಪ್ಪ ಮತ್ತು ಅಮ್ಮ ಏಕೆ ಬೇರ್ಪಟ್ಟರು?
ಅಧ್ಯಾಯ 4
ಅಪ್ಪ ಮತ್ತು ಅಮ್ಮ ಏಕೆ ಬೇರ್ಪಟ್ಟರು?
“ನನ್ನ ಅಪ್ಪ ನಮ್ಮನ್ನು ಬಿಟ್ಟುಹೋದ ಸಮಯ ನನಗೆ ನೆನಪಿದೆ. ಏನು ನಡೆಯುತ್ತಾ ಇದೆಯೆಂದು ನಮಗೆ ನಿಜವಾಗಿಯೂ ತಿಳಿದಿರಲಿಲ್ಲ. ಅಮ್ಮ ಕೆಲಸಕ್ಕೆ ಹೋಗಬೇಕಾಗಿತ್ತು ಮತ್ತು ಹೆಚ್ಚಿನ ಸಮಯ ನಮ್ಮನ್ನು ಒಂಟಿಗರನ್ನಾಗಿ ಬಿಡುತ್ತಿದ್ದರು. ಕೆಲವೊಮ್ಮೆ ನಾವು ಕಿಟಕಿಯ ಪಕ್ಕದಲ್ಲಿ ಕುಳಿತುಕೊಂಡು, ಅವರೂ ನಮ್ಮನ್ನು ಬಿಟ್ಟುಹೋಗಿದ್ದಾರೋ ಎಂದು ಚಿಂತೆಮಾಡುತ್ತಿದ್ದೆವು. . . . ”—ವಿಚ್ಛೇದಿತ ಕುಟುಂಬವೊಂದರಿಂದ ಬಂದ ಒಬ್ಬ ಹುಡುಗಿ.
ಒಬ್ಬರ ಹೆತ್ತವರ ವಿಚ್ಛೇದವು, ಲೋಕದ ಅಂತ್ಯದಂತೆ, ಸದಾಕಾಲಕ್ಕೂ ಉಳಿಯಲು ಸಾಕಾಗುವಷ್ಟು ವ್ಯಥೆಯನ್ನು ಉತ್ಪಾದಿಸುವ ಒಂದು ದುರಂತದಂತೆ ತೋರಸಾಧ್ಯವಿದೆ. ಅನೇಕವೇಳೆ ಅದು ನಾಚಿಕೆ, ಕೋಪ, ವ್ಯಾಕುಲತೆ, ತೊರೆಯಲ್ಪಡುವ ಭಯ, ದೋಷಿಭಾವ, ಖಿನ್ನತೆ ಮತ್ತು ಅಗಾಧವಾದ ನಷ್ಟದ ಅನಿಸಿಕೆಗಳ ಒಂದು ದಾಳಿಯನ್ನು—ಸೇಡು ತೀರಿಸುವ ಒಂದು ಅಪೇಕ್ಷೆಯನ್ನೂ—ಕೆರಳಿಸುತ್ತದೆ.
ನಿಮ್ಮ ಹೆತ್ತವರು ಇತ್ತೀಚೆಗೆ ಬೇರ್ಪಟ್ಟಿರುವಲ್ಲಿ, ನೀವೂ ಅಂತಹ ಅನಿಸಿಕೆಗಳನ್ನು ಅನುಭವಿಸುತ್ತಿರಬಹುದು. ಎಷ್ಟೆಂದರೂ, ನೀವು ಒಬ್ಬ ತಂದೆ ಮತ್ತು ಒಬ್ಬ ತಾಯಿ ಇಬ್ಬರಿಂದಲೂ ಬೆಳೆಸಲ್ಪಡಬೇಕೆಂದು ನಮ್ಮ ಸೃಷ್ಟಿಕರ್ತನು ನಿಮಗಾಗಿ ಉದ್ದೇಶಿಸಿದನು. (ಎಫೆಸ 6:1-3) ಆದರೂ, ನೀವು ಪ್ರೀತಿಸುವ ಒಬ್ಬ ಹೆತ್ತವರ ದಿನನಿತ್ಯದ ಉಪಸ್ಥಿತಿಯು ನಿಮಗೆ ಈಗ ಇಲ್ಲದೆ ಹೋಗಿದೆ. “ನಾನು ನಿಜವಾಗಿಯೂ ನನ್ನ ತಂದೆಯನ್ನು ಗೌರವ ಭಾವದಿಂದ ನೋಡುತ್ತಿದ್ದೆ ಮತ್ತು ಅವರೊಂದಿಗೆ ಇರಲು ಬಯಸಿದೆ” ಎಂದು, ಏಳು ವರ್ಷ ಪ್ರಾಯದಲ್ಲಿ ಯಾರ ಹೆತ್ತವರು ಬೇರ್ಪಟ್ಟರೊ ಆ ಪೌಲ್ ಪ್ರಲಾಪಿಸುತ್ತಾನೆ. “ಆದರೆ ನಮ್ಮ ಪಾಲನೆಮಾಡಲು ನಮ್ಮನ್ನು ಅಮ್ಮನಿಗೆ ಒಪ್ಪಿಸಲಾಯಿತು.”
ಹೆತ್ತವರು ಬೇರ್ಪಡುವ ಕಾರಣ
ಅನೇಕವೇಳೆ ಹೆತ್ತವರು ತಮ್ಮ ಸಮಸ್ಯೆಗಳನ್ನು ಚೆನ್ನಾಗಿ ಅಡಗಿಸಿಟ್ಟಿರುತ್ತಾರೆ. “ನನ್ನ ಹೆತ್ತವರು ಜಗಳವಾಡಿದ್ದು ನನಗೆ ನೆನಪಿಲ್ಲ,” ಎಂದು ಲಿನ್ ಹೇಳುತ್ತಾಳೆ. ಅವಳು ಮಗುವಾಗಿದ್ದಾಗಲೇ ಅವಳ ಹೆತ್ತವರು ವಿಚ್ಛೇದಿತರಾದರು. “ಅವರು ಹೊಂದಿಕೊಂಡು ಹೋಗುತ್ತಿದ್ದರೆಂದು ನಾನು ನೆನಸಿದೆ.” ಮತ್ತು ಹೆತ್ತವರು ಕಚ್ಚಾಡುವಾಗಲೂ, ಅವರು ವಾಸ್ತವವಾಗಿ ಬೇರ್ಪಡುವಾಗ, ಅದು ಇನ್ನೂ ಒಂದು ಆಘಾತವಾಗಿ ಬರಬಹುದು!
ಅನೇಕ ಸಂದರ್ಭಗಳಲ್ಲಿ, ಹೆತ್ತವರಲ್ಲಿ ಒಬ್ಬರು ಲೈಂಗಿಕ ದುರ್ನಡತೆಯ ದೋಷಿಯಾಗಿರುವುದರಿಂದ ಮತ್ತಾಯ 19:9) ಇತರ ವಿದ್ಯಮಾನಗಳಲ್ಲಿ, “ಕ್ರೋಧ ಕಲಹ ದೂಷಣೆ”ಯು ಹಿಂಸಾಚಾರದಲ್ಲಿ ಸ್ಫೋಟಿಸಿ, ಇದು ಹೆತ್ತವರಲ್ಲಿ ಒಬ್ಬರು ಅವನ ಅಥವಾ ಅವಳ ಮತ್ತು ಮಕ್ಕಳ ಶಾರೀರಿಕ ಕ್ಷೇಮಕ್ಕಾಗಿ ಭಯಪಡುವಂತೆ ಮಾಡಿದೆ.—ಎಫೆಸ 4:31.
ಬೇರ್ಪಡುವಿಕೆಯು ಸಂಭವಿಸುತ್ತದೆ. ನಿರ್ದೋಷಿ ಸಂಗಾತಿಯು ವಿಚ್ಛೇದವನ್ನು ಪಡೆಯುವಂತೆ ದೇವರು ಅನುಮತಿಸುತ್ತಾನೆ. (ಕೆಲವು ವಿಚ್ಛೇದಗಳನ್ನು ಕ್ಷುಲ್ಲಕ ಆಧಾರಗಳ ಮೇಲೆ ಪಡೆಯಲಾಗುತ್ತದೆಂಬುದು ಒಪ್ಪತಕ್ಕದ್ದು. ಕೆಲವರು ತಮ್ಮ ಸಮಸ್ಯೆಗಳನ್ನು ಸರಿಪಡಿಸುವ ಬದಲಿಗೆ, ತಾವು ‘ಅಸಂತೋಷಿತರು’ ಅಥವಾ ‘ಇನ್ನು ಮುಂದೆ ಪ್ರೀತಿಸುತ್ತಿಲ್ಲ’ ಎಂದು ಹೇಳಿಕೊಳ್ಳುವ ಕಾರಣದಿಂದ ಸ್ವಾರ್ಥದಿಂದ ವಿಚ್ಛೇದಿತರಾಗುತ್ತಾರೆ. ಇದು, “ಪತ್ನೀತ್ಯಾಗವನ್ನೂ [“ವಿಚ್ಛೇದವನ್ನು,” NW] . . . ದ್ವೇಷಿಸುವ” ದೇವರಿಗೆ ಅಪ್ರಸನ್ನಕರವಾದ ವಿಷಯವಾಗಿದೆ. (ಮಲಾಕಿಯ 2:16) ಕೆಲವರು, ತಮ್ಮ ಸಂಗಾತಿಗಳು ಕ್ರೈಸ್ತರಾದುದರಿಂದ ತಮ್ಮ ವಿವಾಹಗಳನ್ನು ಕೊನೆಗೊಳಿಸುವರೆಂದು ಯೇಸು ಸೂಚಿಸಿದನು.—ಮತ್ತಾಯ 10:34-36.
ವಿಷಯವು ಏನೇ ಆಗಿರಲಿ, ನಿಮ್ಮ ಹೆತ್ತವರು ವಿಚ್ಛೇದದ ವಿಷಯದಲ್ಲಿ ಮೌನರಾಗಿರಲು ಅಥವಾ ನಿಮ್ಮ ಪ್ರಶ್ನೆಗಳಿಗೆ ಕೇವಲ ಅಸ್ಪಷ್ಟವಾದ ಉತ್ತರಗಳನ್ನು ಕೊಡಲು ಆರಿಸಿಕೊಂಡಿರಬಹುದಾದ ವಾಸ್ತವಾಂಶವು, ಅವರು ನಿಮ್ಮನ್ನು ಪ್ರೀತಿಸುವುದಿಲ್ಲವೆಂಬುದನ್ನು ಅರ್ಥೈಸುವುದಿಲ್ಲ. * ತಮ್ಮ ಸ್ವಂತ ನೋವಿನ ಗುಂಗಿನಲ್ಲಿರುವವರಾಗಿ, ನಿಮ್ಮ ಹೆತ್ತವರು ವಿಚ್ಛೇದದ ಕುರಿತಾಗಿ ಮಾತಾಡುವುದು ಕಷ್ಟಕರವೆಂಬುದನ್ನು ಕಂಡುಕೊಳ್ಳಬಹುದು. (ಜ್ಞಾನೋಕ್ತಿ 24:10) ತಮ್ಮ ಪರಸ್ಪರ ಕುಂದುಗಳನ್ನು ಒಪ್ಪಿಕೊಳ್ಳುವುದನ್ನೂ ಅವರು ಮುಜುಗರ ಮತ್ತು ಪೇಚಾಟಕ್ಕೊಳಪಡಿಸುವಂತಹದ್ದಾಗಿ ಕಂಡುಕೊಳ್ಳಬಹುದು.
ನೀವು ಮಾಡಸಾಧ್ಯವಿರುವ ವಿಷಯ
ನಿಮ್ಮ ಹೆತ್ತವರೊಂದಿಗೆ ನಿಮ್ಮ ಚಿಂತೆಗಳನ್ನು ಶಾಂತಚಿತ್ತದಿಂದ ಚರ್ಚಿಸಲು ಯೋಗ್ಯವಾಗಿರುವ ಸಮಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿರಿ. (ಜ್ಞಾನೋಕ್ತಿ 25:11) ವಿಚ್ಛೇದದ ಕುರಿತಾಗಿ ನೀವೆಷ್ಟು ದುಃಖಿತರು ಮತ್ತು ಕಳವಳಗೊಂಡವರಾಗಿದ್ದೀರೆಂಬುದನ್ನು ಅವರಿಗೆ ತಿಳಿಯಪಡಿಸಿರಿ. ಪ್ರಾಯಶಃ ಅವರು ನಿಮಗೆ ಒಂದು ತೃಪ್ತಿದಾಯಕ ವಿವರಣೆಯನ್ನು ಕೊಡುವರು. ಇಲ್ಲದಿದ್ದಲ್ಲಿ, ಹತಾಶರಾಗಬೇಡಿ. ಯೇಸು, ತನ್ನ ಶಿಷ್ಯರು ನಿರ್ವಹಿಸಲು ಸಿದ್ಧರಾಗಿಲ್ಲವೆಂದು ತಾನು ನೆನಸಿದಂತಹ ಮಾಹಿತಿಯನ್ನು ಅವರಿಂದ ತಡೆದುಹಿಡಿಯಲಿಲ್ಲವೊ? (ಯೋಹಾನ 16:12) ಮತ್ತು ನಿಮ್ಮ ಹೆತ್ತವರಿಗೆ ಗೋಪ್ಯತೆಯ ಹಕ್ಕು ಇಲ್ಲವೊ?
ಕೊನೆಯದಾಗಿ, ವಿಚ್ಛೇದಕ್ಕೆ ಕಾರಣವು ಏನೇ ಆಗಿರಲಿ, ಅದು ಅವರ ನಡುವಿನ—ನಿಮ್ಮೊಂದಿಗಲ್ಲ—ಒಂದು ವಿವಾದದ ವಿಷಯವಾಗಿದೆ ಎಂಬುದನ್ನು ಗ್ರಹಿಸಿರಿ! ವಾಲರ್‌ಸ್ಟೈನ್ ಮತ್ತು ಕೆಲಿ, 60 ವಿಚ್ಛೇದಿತ ಕುಟುಂಬಗಳ ಅಧ್ಯಯನದಲ್ಲಿ, ದಂಪತಿಗಳು ಪರಸ್ಪರರು, ತಮ್ಮ ಧಣಿಗಳು, ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಮೇಲೆ ವಿಚ್ಛೇದಕ್ಕಾಗಿ ದೋಷಹೊರಿಸುತ್ತಿದ್ದರೆಂಬುದನ್ನು ಕಂಡುಕೊಂಡರು. ಆದರೆ, ಆ ಸಂಶೋಧಕರು ಹೇಳುವುದು: “ಆಸಕ್ತಿಕರವಾಗಿ, ಯಾರೊಬ್ಬರೂ ಮಕ್ಕಳ ಮೇಲೆ ದೋಷಾರೋಪಹೊರಿಸಲಿಲ್ಲ.” ನಿಮ್ಮ ಕಡೆಗಿನ ನಿಮ್ಮ ಹೆತ್ತವರ ಅನಿಸಿಕೆಗಳು ಬದಲಾಯಿಸಲಸಾಧ್ಯವಾದವುಗಳು.
ಸಮಯದ ಗುಣಪಡಿಸುವ ಪರಿಣಾಮಗಳು
“ಸ್ವಸ್ಥಮಾಡುವ ಸಮಯ” ಇದೆ. (ಪ್ರಸಂಗಿ 3:3) ಮತ್ತು ಒಂದು ತುಂಡಾದ ಎಲುಬಿನಂತಹ, ಒಂದು ಅಕ್ಷರಶಃ ಗಾಯವು ಸಂಪೂರ್ಣವಾಗಿ ಗುಣವಾಗಲು ಹಲವಾರು ವಾರಗಳು ಅಥವಾ ತಿಂಗಳುಗಳು ಸಹ ತಗಲಸಾಧ್ಯವಿರುವಂತೆ, ಭಾವನಾತ್ಮಕ ಗಾಯಗಳು ಗುಣವಾಗಲು ಸಮಯವನ್ನು ತೆಗೆದುಕೊಳ್ಳುತ್ತವೆ.
ವಿಚ್ಛೇದವೊಂದರ ಒಂದೆರಡು ವರ್ಷಗಳಲ್ಲೇ, “ವ್ಯಾಪಕವಾದ ಭಯಗಳು, ದುಃಖ, ತಲ್ಲಣಗೊಳಿಸಿದ ಅಪನಂಬಿಕೆ . . . ಮಾಸಿಹೋಗಿದ್ದವು ಅಥವಾ ಕಾಣದೆಹೋಗಿದ್ದವು” ಎಂದು ವಿಚ್ಛೇದ ಸಂಶೋಧಕರಾದ ವಾಲರ್‌ಸ್ಟೈನ್ ಮತ್ತು ಕೆಲಿ ಕಂಡುಕೊಂಡರು. ಒಂದು ವಿಚ್ಛೇದದ ಅತಿ ಕಠಿನ ಭಾಗವು ಕೇವಲ ಮೂರು ವರ್ಷಗಳಲ್ಲಿ ಮುಗಿದುಹೋಗುತ್ತದೆಂದು ಕೆಲವು ಪರಿಣತರಿಗೆ ಅನಿಸುತ್ತದೆ. ಇದು ಒಂದು ದೀರ್ಘ ಸಮಯದಂತೆ ತೋರಬಹುದು, ಆದರೆ ನಿಮ್ಮ ಜೀವನವು ಸುದೃಢವಾಗಲು ಸಾಧ್ಯವಾಗುವ ಮುಂಚೆ ತುಂಬ ವಿಷಯಗಳು ಸಂಭವಿಸಬೇಕು.
ಒಂದು ವಿಷಯವೇನಂದರೆ, ವಿಚ್ಛೇದದಿಂದ ಭಂಗಗೊಳಿಸಲ್ಪಟ್ಟಿರುವ ಮನೆಯ ದಿನಚರಿಯು ಪುನರ್‌ಸಂಘಟಿಸಲ್ಪಡಬೇಕು. ನಿಮ್ಮ ಹೆತ್ತವರು ಭಾವನಾತ್ಮಕವಾಗಿ ಜವಾಬ್ದಾರಿಯನ್ನು ಹೊರಲು ಶಕ್ತರಾಗುವ ತನಕವೂ ಸಮಯವು ಗತಿಸುವುದು. ಆಗ ಮಾತ್ರವೇ ನಿಮಗೆ ಅಗತ್ಯವಿರುವ ಬೆಂಬಲವನ್ನು ಅವರು ಕೊಡಲು ಶಕ್ತರಾಗಿರಬಹುದು. ನಿಮ್ಮ ಜೀವನವು ಪುನಃ ಒಮ್ಮೆ ಕ್ರಮಬದ್ಧತೆಯ ಒಂದು ತೋರಿಕೆಯನ್ನು ಪಡೆದಂತೆ, ನಿಮಗೆ ಪುನಃ ಸಹಜತೆಯ ಅನಿಸಿಕೆಯಾಗಲು ಆರಂಭವಾಗುವುದು.
ಆದಾಗಲೂ, ಸೊಲೊಮೋನನು ಈ ಎಚ್ಚರಿಕೆಯನ್ನು ಕೊಟ್ಟನು: “ಹಿಂದಿನ ಕಾಲವು ಈ ಕಾಲಕ್ಕಿಂತ ಮೇಲಾದದ್ದಕ್ಕೆ ಕಾರಣವೇನು ಅನ್ನಬೇಡ; ನೀನು ಈ ವಿಷಯದಲ್ಲಿ ವಿಚಾರಿಸುವದು ಜ್ಞಾನಕಾರ್ಯವಲ್ಲ.” (ಪ್ರಸಂಗಿ 7:10) ಗತಕಾಲದ ಕುರಿತು ಯೋಚಿಸುತ್ತಾ ಇರುವುದು, ನಿಮ್ಮನ್ನು ಪ್ರಚಲಿತ ಸಮಯಕ್ಕೆ ಕುರುಡರನ್ನಾಗಿ ಮಾಡುವುದು. ವಿಚ್ಛೇದದ ಮೊದಲು ನಿಮ್ಮ ಕುಟುಂಬದ ಪರಿಸ್ಥಿತಿಯು ಹೇಗಿತ್ತು? “ಯಾವಾಗಲೂ ತುಂಬ ಜಗಳಗಳು—ಕಿರಿಚಾಟ ಮತ್ತು ಬೈಗುಳ—ಇರುತ್ತಿದ್ದವು,” ಎಂದು ಆ್ಯನೆಟ್ ಒಪ್ಪಿಕೊಳ್ಳುತ್ತಾಳೆ. ಈಗ ನೀವು ಹೆಚ್ಚಿನ ಗೃಹ ಶಾಂತಿಯನ್ನು ಅನುಭವಿಸುತ್ತಿರಬಹುದೊ?
‘ನಾನು ಅವರನ್ನು ಪುನಃ ಜೊತೆಗೂಡಿಸಬಲ್ಲೆ’
ಕೆಲವು ಯುವ ಜನರು ತಮ್ಮ ಹೆತ್ತವರನ್ನು ಪುನರೈಕ್ಯಗೊಳಿಸುವ ಸ್ವಪ್ನಗಳನ್ನು ಪೋಷಿಸುತ್ತಾರೆ! ತಮ್ಮ ಹೆತ್ತವರು ಪುನರ್ವಿವಾಹವಾದ ನಂತರವೂ ಪ್ರಾಯಶಃ ಅಂತಹ ಕಲ್ಪನಾವಿಷಯಗಳಿಗೆ ಅವರು ಅಂಟಿಕೊಂಡಿರುತ್ತಾರೆ.
ಆದಾಗಲೂ, ವಿಚ್ಛೇದವನ್ನು ಅಲ್ಲಗಳೆಯುವುದು ಏನನ್ನೂ ಬದಲಾಯಿಸದು. ಮತ್ತು ನಿಮ್ಮ ಎಲ್ಲಾ ಕಣ್ಣೀರು, ಬೇಡುವಿಕೆ ಮತ್ತು ಸಂಚುಹೂಡುವಿಕೆಯು ಬಹುಶಃ ನಿಮ್ಮ ಹೆತ್ತವರನ್ನು ಪುನಃ ಒಂದುಗೂಡಿಸಲಾರದು. ಆದುದರಿಂದ ಅಸಂಭವವಾದ ವಿಷಯದ ಕುರಿತಾಗಿ ಚಿಂತಿಸುತ್ತಾ ಇರುವ ಮೂಲಕ ನಿಮ್ಮನ್ನೇ ಏಕೆ ಯಾತನೆಗೀಡುಮಾಡಿಕೊಳ್ಳಬೇಕು? (ಜ್ಞಾನೋಕ್ತಿ 13:12) “ಕಳೆದುಹೋದದ್ದೆಂದು ಬಿಟ್ಟುಬಿಡುವ ಒಂದು ಸಮಯ,” ಇದೆಯೆಂದು ಸೊಲೊಮೋನನು ಹೇಳಿದನು. (ಪ್ರಸಂಗಿ 3:6, NW) ಆದುದರಿಂದ ವಿಚ್ಛೇದದ ವಾಸ್ತವಿಕತೆಯನ್ನೂ, ಸ್ಥಾಯಿತ್ವವನ್ನೂ, ಎರಡನ್ನೂ ಸ್ವೀಕರಿಸಿರಿ. ನೀವು ಅದನ್ನು ನಿಭಾಯಿಸುವುದರ ಕಡೆಗೆ ಇದು ಒಂದು ದೊಡ್ಡ ಹೆಜ್ಜೆಯಾಗಿದೆ.
ನಿಮ್ಮ ಹೆತ್ತವರೊಂದಿಗೆ ರಾಜಿಮಾಡಿಕೊಳ್ಳುವುದು
ನಿಮ್ಮ ಜೀವಿತವನ್ನು ಭಂಗಮಾಡಿದುದಕ್ಕಾಗಿ ನೀವು ನಿಮ್ಮ ಹೆತ್ತವರೊಂದಿಗೆ ಯೋಗ್ಯವಾಗಿಯೇ ಕೋಪದಿಂದಿರಬಹುದು. ಒಬ್ಬ ಯುವ ಪುರುಷನು ಅದನ್ನು ಕಟುವಾಗಿ ಹೇಳಿದಂತೆ: “ನನ್ನ ಹೆತ್ತವರು ಸ್ವಾರ್ಥಿಗಳಾಗಿದ್ದರು. ಅವರು ನಿಜವಾಗಿಯೂ ನಮ್ಮ ಕುರಿತಾಗಿ ಮತ್ತು ಅವರು ಏನನ್ನು ಮಾಡಿದರೊ ಅದು ನಮ್ಮನ್ನು ಹೇಗೆ ಪ್ರಭಾವಿಸುವುದೆಂಬುದರ ಕುರಿತಾಗಿ ಯೋಚಿಸಲಿಲ್ಲ. ಅವರು ಮುಂದೆಹೋಗಿ ತಮ್ಮ ಯೋಜನೆಗಳನ್ನು ಮಾಡಿದರು.” ಇದು ಸತ್ಯವಾಗಿರಬಹುದು. ಆದರೆ ನೀವು ಜೀವನದುದ್ದಕ್ಕೂ ಕೋಪ ಮತ್ತು ಕಟುಭಾವದ ಒಂದು ಭಾರವನ್ನು ಹೊತ್ತುಕೊಂಡು, ನಿಮ್ಮನ್ನೇ ಹಾನಿಗೊಳಿಸಿಕೊಳ್ಳದೆ ಇರಸಾಧ್ಯವಿದೆಯೊ?
ಬೈಬಲ್ ಸಲಹೆ ಕೊಡುವುದು: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ.” (ಎಫೆಸ 4:31, 32) ನಿಮ್ಮನ್ನು ಇಷ್ಟು ಗಾಢವಾಗಿ ನೋಯಿಸಿರುವ ಒಬ್ಬರನ್ನು ನೀವು ಹೇಗೆ ಕ್ಷಮಿಸಬಲ್ಲಿರಿ? ನಿಮ್ಮ ಹೆತ್ತವರನ್ನು ವಸ್ತುನಿಷ್ಠತೆಯಿಂದ—ತಪ್ಪು ಮಾಡುವ, ಅಪರಿಪೂರ್ಣ ಮಾನವರೋಪಾದಿ—ವೀಕ್ಷಿಸಲು ಪ್ರಯತ್ನಿಸಿರಿ. ಹೌದು, ಹೆತ್ತವರು ಕೂಡ ‘ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗುತ್ತಾರೆ.’ (ರೋಮಾಪುರ 3:23) ಇದನ್ನು ಗ್ರಹಿಸುವುದು, ನೀವು ನಿಮ್ಮ ಹೆತ್ತವರೊಂದಿಗೆ ರಾಜಿಮಾಡಿಕೊಳ್ಳುವಂತೆ ಸಹಾಯ ಮಾಡಬಲ್ಲದು.
ನಿಮ್ಮ ಭಾವನೆಗಳ ಕುರಿತಾಗಿ ಮಾತಾಡಿರಿ
“ನನ್ನ ಹೆತ್ತವರ ವಿಚ್ಛೇದದ ಕುರಿತಾಗಿ ನನಗೆ ಹೇಗನಿಸಿತ್ತೆಂಬುದನ್ನು ನಾನು ನಿಜವಾಗಿಯೂ ಎಂದೂ ಚರ್ಚಿಸಿಲ್ಲ,” ಎಂದು ನಮ್ಮಿಂದ ಸಂದರ್ಶನ ಮಾಡಲ್ಪಟ್ಟ ಒಬ್ಬ ಯುವ ಪುರುಷನು ಹೇಳಿದನು. ಆರಂಭದಲ್ಲಿ ಭಾವೋದ್ರೇಕಶೂನ್ಯನಾಗಿದ್ದರೂ, ಆ ಯೌವನಸ್ಥನು ತನ್ನ ಹೆತ್ತವರ ವಿಚ್ಛೇದದ ಕುರಿತಾಗಿ ಮಾತಾಡಿದಂತೆ ಅವನು ಹೆಚ್ಚೆಚ್ಚಾಗಿ ಭಾವೋದ್ರೇಕಿತನಾದನು, ಕಣ್ಣೀರೂ ತುಂಬಿದವನಾದನು. ತುಂಬ ಸಮಯದಿಂದ ಹೂತುಹೋಗಿದ್ದ ಭಾವನೆಗಳು ಹೊರಬಂದವು. ಇದಕ್ಕೆ ಆಶ್ಚರ್ಯಪಡುತ್ತಾ, ಅವನು ನಿವೇದಿಸಿದ್ದು: “ಅದರ ಕುರಿತಾಗಿ ಮಾತಾಡುವುದು ನಿಜವಾಗಿಯೂ ನನಗೆ ಸಹಾಯ ಮಾಡಿತು.”
ತದ್ರೀತಿಯಲ್ಲಿ, ನಿಮ್ಮನ್ನೇ ಪ್ರತ್ಯೇಕರನ್ನಾಗಿರಿಸಿಕೊಳ್ಳುವ ಬದಲಿಗೆ, ಯಾರಾದರೊಬ್ಬರಲ್ಲಿ ನಿಮ್ಮ ಅಂತರಂಗವನ್ನು ತೋಡಿಕೊಳ್ಳುವುದನ್ನು ನೀವು ಸಹಾಯಕರವಾಗಿ ಕಂಡುಕೊಳ್ಳಬಹುದು. ನಿಮಗೆ ಹೇಗನಿಸುತ್ತದೆಂಬುದು, ನಿಮ್ಮ ಭಯಗಳು ಮತ್ತು ವ್ಯಾಕುಲತೆಗಳು ಏನಾಗಿವೆಯೆಂಬುದನ್ನು ನಿಮ್ಮ ಹೆತ್ತವರಿಗೆ ತಿಳಿಯಪಡಿಸಿರಿ. (ಜ್ಞಾನೋಕ್ತಿ 23:26ನ್ನು ಹೋಲಿಸಿರಿ.) ಪ್ರೌಢ ಕ್ರೈಸ್ತರೂ ಸಹಾಯ ಮಾಡಬಲ್ಲರು. ಉದಾಹರಣೆಗಾಗಿ, ಕೀತ್‌ಗೆ ವಿಚ್ಛೇದದಿಂದ ಛಿದ್ರವಾದ ತನ್ನ ಕುಟುಂಬದಿಂದ ಸ್ವಲ್ಪವೇ ಬೆಂಬಲ ಸಿಕ್ಕಿತು ಅಥವಾ ಏನೂ ಸಿಗಲಿಲ್ಲ. ಆದರೂ ಅವನು ಬೇರೆಲ್ಲಿಯೊ ಬೆಂಬಲವನ್ನು ಕಂಡುಕೊಂಡನು. ಕೀತ್ ಹೇಳುವುದು: “ಕ್ರೈಸ್ತ ಸಭೆಯು ನನ್ನ ಕುಟುಂಬವಾಗಿ ಪರಿಣಮಿಸಿತು.”
ಎಲ್ಲಕ್ಕಿಂತಲೂ ಮಿಗಿಲಾಗಿ, “ಪ್ರಾರ್ಥನೆಯನ್ನು ಕೇಳುವವ”ನಾದ ನಿಮ್ಮ ಸ್ವರ್ಗೀಯ ತಂದೆಯು ನಿಮಗೆ ಕಿವಿಗೊಟ್ಟು ಆಲಿಸುವನೆಂಬುದನ್ನು ನೀವು ಕಂಡುಕೊಳ್ಳುವಿರಿ. (ಕೀರ್ತನೆ 65:2) ತನ್ನ ಹೆತ್ತವರ ವಿಚ್ಛೇದವನ್ನು ನಿಭಾಯಿಸಲು ಸಹಾಯ ಮಾಡಿದ ವಿಷಯವನ್ನು ಪೌಲ್ ಎಂಬ ಹೆಸರಿನ ಒಬ್ಬ ಯೌವನಸ್ಥನು ಜ್ಞಾಪಿಸಿಕೊಳ್ಳುತ್ತಾನೆ: “ನಾನು ಎಲ್ಲಾ ಸಮಯ ಪ್ರಾರ್ಥಿಸಿದೆ ಮತ್ತು ಯೆಹೋವನು ಒಬ್ಬ ನಿಜ ವ್ಯಕ್ತಿಯಾಗಿದ್ದಾನೆಂದು ನನಗೆ ಯಾವಾಗಲೂ ಅನಿಸಿತು.”
ನಿಮ್ಮ ಜೀವನದೊಂದಿಗೆ ಮುಂದುವರಿಯುವುದು
ಒಂದು ವಿಚ್ಛೇದದ ನಂತರ, ವಿಷಯಗಳು ಎಂದೂ ಮೊದಲಿನಂತಿರಲಿಕ್ಕಿಲ್ಲ. ಆದರೂ, ನಿಮ್ಮ ಜೀವನವು ಉತ್ಪನ್ನದಾಯಕ ಮತ್ತು ಸಂತೋಷಭರಿತವಾಗಿರಲು ಸಾಧ್ಯವಿಲ್ಲವೆಂಬುದನ್ನು ಇದು ಅರ್ಥೈಸುವುದಿಲ್ಲ. ಬೈಬಲ್ ಬುದ್ಧಿಹೇಳುವುದು, “ನಿಮ್ಮ ಕೆಲಸದಲ್ಲಿ ಅಲೆದಾಡುತ್ತಾ ಕಾಲ ಕಳೆಯಬೇಡಿರಿ.” (ರೋಮಾಪುರ 12:11, NW) ಹೌದು, ದುಃಖ, ನೋವು, ಅಥವಾ ಕೋಪದಿಂದ ನಿಮ್ಮನ್ನೇ ನಿಶ್ಚಲಗೊಳಿಸಿಕೊಳ್ಳುವಂತೆ ಅನುಮತಿಸುವ ಬದಲಿಗೆ, ನಿಮ್ಮ ಜೀವನದೊಂದಿಗೆ ಮುಂದುವರಿಯಿರಿ! ನಿಮ್ಮ ಶಾಲಾಕೆಲಸದಲ್ಲಿ ಒಳಗೂಡಿರಿ. ಒಂದು ಹವ್ಯಾಸವನ್ನು ಬೆನ್ನಟ್ಟಿರಿ. ‘ಕರ್ತನ ಕೆಲಸದಲ್ಲಿ ಹೆಚ್ಚನ್ನು’ (NW) ಮಾಡಿರಿ.—1 ಕೊರಿಂಥ 15:58.
ಅದಕ್ಕೆ ಕೆಲಸ, ದೃಢನಿರ್ಧಾರ, ಮತ್ತು ಸಮಯದ ಗತಿಸುವಿಕೆಯು ತಗಲುವುದು. ಆದರೆ ಕಟ್ಟಕಡೆಗೆ ನಿಮ್ಮ ಹೆತ್ತವರ ವಿವಾಹದ ಒಡೆತವು ಇನ್ನು ಮುಂದೆ ನಿಮ್ಮ ಜೀವನದಲ್ಲಿ ಒಂದು ಪ್ರಧಾನ ವಿಷಯವಾಗಿರದು.
[ಅಧ್ಯಯನ ಪ್ರಶ್ನೆಗಳು]
^ “[ವಿಚ್ಛೇದಿತ ಹೆತ್ತವರ] ತೀರ ಎಳೆಯ ಮಕ್ಕಳಲ್ಲಿ ಐದರಲ್ಲಿ ನಾಲ್ಕು ಭಾಗದಷ್ಟು ಮಕ್ಕಳಿಗೆ ಒಂದೊ ಸಾಕಷ್ಟು ವಿವರಣೆಯು ಇಲ್ಲವೆ ಮುಂದುವರಿದ ಆರೈಕೆಯ ಆಶ್ವಾಸನೆಯು ಒದಗಿಸಲ್ಪಟ್ಟಿರಲಿಲ್ಲ. ಕಾರ್ಯತಃ, ಅವರು ಒಂದು ಬೆಳಗ್ಗೆ ಎದ್ದಾಗ, ಹೆತ್ತವರಲ್ಲಿ ಒಬ್ಬರು ಹೊರಟುಹೋಗಿರುವುದನ್ನು ಕಂಡುಕೊಂಡರು” ಎಂದು ಸಂಶೋಧಕರಾದ ವಾಲರ್‌ಸ್ಟೈನ್ ಮತ್ತು ಕೆಲಿ ಕಂಡುಹಿಡಿದರು.
ಚರ್ಚೆಗಾಗಿ ಪ್ರಶ್ನೆಗಳು
◻ ಹೆತ್ತವರು ಬೇರ್ಪಡುವ ಕಾರಣಗಳಲ್ಲಿ ಕೆಲವು ಯಾವುವು?
◻ ಅದರ ಕುರಿತಾಗಿ ಮಾತಾಡುವುದು ನಿಮ್ಮ ಹೆತ್ತವರಿಗೆ ಯಾಕೆ ಕಷ್ಟಕರವಾಗಿರಬಹುದು? ಮಾತಾಡಲು ಅವರು ಅಂತಹ ಅನಿಚ್ಛೆಯನ್ನು ತೋರಿಸುವಲ್ಲಿ ನೀವು ಏನು ಮಾಡಸಾಧ್ಯವಿದೆ?
◻ ಗತಕಾಲದ ಕುರಿತಾಗಿ ಯೋಚಿಸುತ್ತಾ ಇರುವುದು ಅಥವಾ ನಿಮ್ಮ ಹೆತ್ತವರನ್ನು ಪುನಃ ಒಂದುಗೂಡಿಸುವುದರ ಕುರಿತಾಗಿ ಕಲ್ಪಿಸಿಕೊಳ್ಳುವುದು ಏಕೆ ಅರ್ಥಹೀನವಾದದ್ದಾಗಿದೆ?
◻ ವಿಚ್ಛೇದವನ್ನು ನಿಭಾಯಿಸಲು ನಿಮಗೆ ಸಹಾಯವಾಗುವಂತೆ ನೀವು ಮಾಡಸಾಧ್ಯವಿರುವ ಕೆಲವು ಸಕಾರಾತ್ಮಕ ವಿಷಯಗಳು ಯಾವುವು?
◻ ನಿಮ್ಮ ಹೆತ್ತವರ ಕಡೆಗೆ ನಿಮಗುಂಟಾಗಬಹುದಾದ ಕೋಪದೊಂದಿಗೆ ನೀವು ಹೇಗೆ ವ್ಯವಹರಿಸಬಲ್ಲಿರಿ?
[36,37వ పేజీలోని బాక్సు]
‘ವಿಚ್ಛೇದವು ನನ್ನ ಜೀವನವನ್ನು ಹಾಳುಮಾಡುವುದೊ?’
ತಮ್ಮ ಹೆತ್ತವರ ವಿಚ್ಛೇದವನ್ನು ಅನುಸರಿಸಿ, ಕೆಲವು ಯುವ ಜನರು ತಮ್ಮ ಜೀವನಗಳನ್ನು ಕಾರ್ಯತಃ ಹಾಳುಮಾಡಿಕೊಳ್ಳುತ್ತಾರೆ. ಕೆಲವರು, ಶಾಲೆಯನ್ನು ಬಿಟ್ಟುಬಿಡುವಂತಹ ರೀತಿಯ, ದುಡುಕಿನ ನಿರ್ಣಯಗಳನ್ನು ಮಾಡುತ್ತಾರೆ. ಇನ್ನಿತರರು ಅಯೋಗ್ಯವಾಗಿ ವರ್ತಿಸುವ ಮೂಲಕ—ವಿಚ್ಛೇದವನ್ನು ಮಾಡಿಕೊಂಡದ್ದಕ್ಕಾಗಿ ತಮ್ಮ ಹೆತ್ತವರನ್ನು ಶಿಕ್ಷಿಸುವಂತೆ—ತಮ್ಮ ಆಶಾಭಂಗ ಮತ್ತು ಕೋಪವನ್ನು ಹೊರಸೂಸುತ್ತಾರೆ. ಡೆನಿ ಜ್ಞಾಪಿಸಿಕೊಳ್ಳುವುದು: “ನನ್ನ ಹೆತ್ತವರ ವಿಚ್ಛೇದದ ನಂತರ ನಾನು ಅಸಂತುಷ್ಟನೂ ಖಿನ್ನನೂ ಆಗಿದ್ದೆ. ನನಗೆ ಶಾಲೆಯಲ್ಲಿ ಸಮಸ್ಯೆಗಳು ಆರಂಭವಾದವು ಮತ್ತು ಒಂದು ವರ್ಷ ನಾನು ಅನುತ್ತೀರ್ಣನಾದೆ. ಅದರ ನಂತರ . . . ನಾನು ತರಗತಿಯ ಕೋಡಂಗಿ (ಕ್ಲೌನ್) ಆಗಿ ಪರಿಣಮಿಸಿದೆ ಮತ್ತು ತುಂಬ ಜಗಳಗಳಲ್ಲಿ ಸಿಕ್ಕಿಬಿದ್ದೆ.”
ತಲ್ಲಣಗೊಳಿಸುವ ನಡವಳಿಕೆಯು ಒಬ್ಬನ ಹೆತ್ತವರ ಗಮನವನ್ನು ಉತ್ತಮವಾಗಿ ಆಕರ್ಷಿಸಬಹುದು. ಆದರೆ, ಈಗಾಗಲೇ ಒತ್ತಡಭರಿತವಾದ ಪರಿಸ್ಥಿತಿಗೆ ಒತ್ತಡವನ್ನು ಕೂಡಿಸುವ ಹೊರತು, ನಿಜವಾಗಿ ಇನ್ನೇನು ಸಾಧಿಸಲ್ಪಡುತ್ತದೆ? ನಿಜವಾಗಿ, ತಪ್ಪುಗೈಯುವುದರಿಂದ ಶಿಕ್ಷಿಸಲ್ಪಡುವ ಏಕಮಾತ್ರ ವ್ಯಕ್ತಿ ತಪ್ಪುಗೈಯುವವನೇ ಆಗಿದ್ದಾನೆ. (ಗಲಾತ್ಯ 6:7) ನಿಮ್ಮ ಹೆತ್ತವರು ಸಹ ಕಷ್ಟಾನುಭವಿಸುತ್ತಿದ್ದಾರೆ ಮತ್ತು ನಿಮ್ಮ ವಿಷಯದಲ್ಲಿ ಅವರು ಅಲಕ್ಷ್ಯವುಳ್ಳವರಾಗಿ ತೋರುವಂಥದ್ದು, ಹಗೆಸಾಧನೆಯಲ್ಲವೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಡೆನಿಯ ತಾಯಿ ನಿವೇದಿಸಿದ್ದು: “ನಾನು ಖಂಡಿತವಾಗಿಯೂ ನನ್ನ ಮಕ್ಕಳನ್ನು ಅಲಕ್ಷಿಸಿದೆ. ವಿಚ್ಛೇದದ ನಂತರ, ನಾನೇ ತುಂಬ ಅಸ್ತವ್ಯಸ್ತಳಾಗಿದ್ದುದರಿಂದ ನಾನು ಅವರಿಗೆ ಸಹಾಯ ಮಾಡಲು ಸಾಧ್ಯವೇ ಇರಲಿಲ್ಲ.”
ಇಬ್ರಿಯ 12:13ರಲ್ಲಿ ಬೈಬಲ್ ಬುದ್ಧಿಹೇಳುವುದು: “ನಿಮ್ಮ ಕಾಲುಗಳಿಂದ ನೆಟ್ಟಗೆ ಮುಂದೆ ನಡೆಯಿರಿ; ಹೀಗೆ ಮಾಡಿದರೆ ಕುಂಟಕಾಲು ಉಳುಕಿ ಹೋಗದೆ ವಾಸಿಯಾಗುವದು.” ಹೆತ್ತವರ ಶಿಸ್ತು ಇಲ್ಲದಿದ್ದರೂ, ದುರ್ನಡತೆಗಾಗಿ ಯಾವ ಸಮರ್ಥನೆಯೂ ಇಲ್ಲ. (ಯಾಕೋಬ 4:17) ನಿಮ್ಮ ಕ್ರಿಯೆಗಳಿಗಾಗಿ ಜವಾಬ್ದಾರಿಯನ್ನು ವಹಿಸಿಕೊಂಡು, ಸ್ವಶಿಸ್ತನ್ನು ಅಭ್ಯಸಿಸಿರಿ.—1 ಕೊರಿಂಥ 9:27.
ಉದಾಹರಣೆಗಾಗಿ ಮನೆಯನ್ನು ಬಿಟ್ಟುಹೋಗುವಂತಹ, ದುಡುಕಿನ ನಿರ್ಣಯಗಳನ್ನು ಮಾಡುವುದರಿಂದ ದೂರವಿರಿ. “ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” (ಜ್ಞಾನೋಕ್ತಿ 14:15) ಈ ಹಂತದಲ್ಲಿ ನಿಮಗೆ ಕಿವಿಗೊಡಲು ನಿಮ್ಮ ಹೆತ್ತವರು ತೀರ ಅಪಕರ್ಷಿತರಾಗಿರುವಂತೆ ತೋರುವುದಾದರೆ, ನಿಮ್ಮ ನಿರ್ಣಯಗಳ ಕುರಿತಾಗಿ ಒಬ್ಬ ಹಿರಿಯ ಸ್ನೇಹಿತನೊಂದಿಗೆ ಮಾತಾಡಬಾರದೇಕೆ?
ಇನ್ನೂ, ನಿಮ್ಮ ಭವಿಷ್ಯತ್ತಿನ ಕುರಿತಾಗಿ ನಿಮಗೆ ಹಲವಾರು ಚಿಂತೆಗಳಿರಬಹುದು. ನಿಮ್ಮ ಹೆತ್ತವರು ವಿವಾಹದಲ್ಲಿ ವಿಫಲರಾಗಿರುವುದರಿಂದ, ಒಂದು ಯಶಸ್ವೀ ವಿವಾಹದಲ್ಲಿ ಆನಂದಿಸುವ ನಿಮ್ಮ ಸ್ವಂತ ಪ್ರತೀಕ್ಷೆಯ ಕುರಿತಾಗಿ ನೀವು ಚಿಂತಿಸಬಹುದೆಂಬುದು ಗ್ರಾಹ್ಯ. ಸಂತೋಷಕರವಾಗಿ, ವೈವಾಹಿಕ ಅಸಂತೋಷವು, ನಿಮ್ಮ ಹೆತ್ತವರಿಂದ ನೀವು—ಚರ್ಮದಲ್ಲಿನ ಮಚ್ಚೆಗಳಂತೆ—ಪಿತ್ರಾರ್ಜಿತವಾಗಿ ಪಡೆಯುವಂತಹ ಒಂದು ವಿಷಯವಲ್ಲ. ನೀವು ಒಬ್ಬ ಅಪೂರ್ವ ವ್ಯಕ್ತಿಯಾಗಿದ್ದೀರಿ, ಮತ್ತು ನಿಮ್ಮ ಭಾವೀ
ವಿವಾಹವು ಏನಾಗಿ ಪರಿಣಮಿಸುವುದೊ ಅದು, ನಿಮ್ಮ ಹೆತ್ತವರ ಕುಂದುಗಳ ಮೇಲಲ್ಲ, ಬದಲಾಗಿ, ನೀವು ಮತ್ತು ನಿಮ್ಮ ಸಂಗಾತಿಯು ಎಷ್ಟರ ಮಟ್ಟಿಗೆ ದೇವರ ವಾಕ್ಯವನ್ನು ಅನ್ವಯಿಸುವಿರೊ ಅದರ ಮೇಲೆ ಅವಲಂಬಿಸುವುದು.ಈ ಹಿಂದೆ ಮಾಮೂಲು ಎಂದು ಎಣಿಸಿದಂತಹ ಸಂಗತಿಗಳ—ಆಹಾರ, ಬಟ್ಟೆ, ಆಶ್ರಯ, ಹಣ—ಕುರಿತಾಗಿ ಚಿಂತಿಸುತ್ತೀರೆಂದೂ ನೀವು ಕಂಡುಕೊಳ್ಳುವಿರಿ. ಆದಾಗಲೂ, ಹೆತ್ತವರು ಸಾಮಾನ್ಯವಾಗಿ ವಿಚ್ಛೇದದ ನಂತರ ತಮ್ಮ ಮಕ್ಕಳನ್ನು ಪರಾಮರಿಸಲಿಕ್ಕಾಗಿ ಯಾವುದಾದರೂ ವಿಧವನ್ನು ಏರ್ಪಡಿಸುತ್ತಾರೆ. ಇದಕ್ಕಾಗಿ ಅಮ್ಮ ಐಹಿಕ ಕೆಲಸವನ್ನು ಮಾಡಲು ಆರಂಭಿಸಬೇಕಾದರೂ ಕೂಡ. ಹಾಗಿದ್ದರೂ, ಬೇರ್ಪಡುವಿಕೆಯನ್ನು ಪಾರಾಗುವುದು (ಇಂಗ್ಲಿಷ್) ಎಂಬ ಪುಸ್ತಕವು ವಾಸ್ತವಿಕವಾಗಿ ಎಚ್ಚರಿಸುವುದು: “ಒಂದು ಕುಟುಂಬ ಏಕಾಂಶವನ್ನು ಒಂದು ಕಾಲದಲ್ಲಿ ಬೆಂಬಲಿಸಿದಂತಹದ್ದು ಈಗ ಎರಡು ಕುಟುಂಬಗಳನ್ನು ಬೆಂಬಲಿಸಬೇಕಾಗುತ್ತದೆ, ಇದು ಪ್ರತಿಯೊಂದು ಕುಟುಂಬ ಸದಸ್ಯನಿಗಾಗಿರುವ ಜೀವನ ಮಟ್ಟದಲ್ಲಿ ಒಂದು ಇಳಿತವನ್ನು ಒತ್ತಾಯಪಡಿಸುತ್ತದೆ.”
ಹೀಗಿರುವುದರಿಂದ, ನೀವು ಆನಂದಿಸುತ್ತಿದ್ದ, ಹೊಸ ಬಟ್ಟೆಗಳಂತಹ ವಿಷಯಗಳಿಲ್ಲದೆ ಇರುವುದಕ್ಕೆ ನೀವು ಒಗ್ಗಬೇಕಾದೀತು. ಆದರೆ ಬೈಬಲ್ ನಮಗೆ ನೆನಪಿಸುವುದು: “ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.” (1 ತಿಮೊಥೆಯ 6:7, 8) ಪ್ರಾಯಶಃ ನೀವು ಒಂದು ಹೊಸ ಕುಟುಂಬ ಆಯವ್ಯಯ ಪಟ್ಟಿಯನ್ನು ತಯಾರಿಸುವುದರಲ್ಲಿ ನೆರವನ್ನೂ ನೀಡಬಲ್ಲಿರಿ. ಯೆಹೋವನು “ಪಿತೃವಿಹೀನರಿಗೆ ತಂದೆ” (NW) ಆಗಿದ್ದಾನೆಂಬುದನ್ನೂ ನೆನಪಿನಲ್ಲಿಡಿರಿ. (ಕೀರ್ತನೆ 68:5) ನಿಮ್ಮ ಅಗತ್ಯಗಳ ಕುರಿತಾಗಿ ಆತನು ಗಾಢವಾಗಿ ಚಿಂತಿತನಾಗಿದ್ದಾನೆಂಬುದರ ವಿಷಯದಲ್ಲಿ ನೀವು ಖಚಿತರಾಗಿರಬಲ್ಲಿರಿ.
ಯೆರೆಮೀಯನು ಅವಲೋಕಿಸಿದ್ದು: “ಯೌವನದಲ್ಲಿ ನೊಗಹೊರುವದು ಮನುಷ್ಯನಿಗೆ ಲೇಸು [“ಒಳಿತು,” NW].” (ಪ್ರಲಾಪಗಳು 3:27) ಹೆತ್ತವರು ಬೇರ್ಪಡುವುದನ್ನು ನೋಡುವುದರಲ್ಲಿ “ಒಳಿತು” ಇಲ್ಲವೆಂಬುದು ನಿಜ. ಆದರೆ ಈ ನಕಾರಾತ್ಮಕ ಅನುಭವವನ್ನು ನಿಮ್ಮ ಲಾಭಕ್ಕಾಗಿ ಪರಿವರ್ತಿಸುವುದು ಸಾಧ್ಯ.
ಸಂಶೋಧಕಿಯಾದ ಜೂಡಿತ್ ವಾಲರ್‌ಸ್ಟೈನ್ ಅವಲೋಕಿಸಿದ್ದು: “[ವಿಚ್ಛೇದಿತ ಹೆತ್ತವರ ಮಕ್ಕಳ ನಡುವೆ] ಕುಟುಂಬ ಬಿಕ್ಕಟ್ಟಿನಿಂದ ಉತ್ಪ್ರೇರಿಸಲ್ಪಟ್ಟ ಭಾವನಾತ್ಮಕ ಮತ್ತು ಬುದ್ಧಿಶಕ್ತಿಯ ಬೆಳವಣಿಗೆಯು, ಭಾವೋತ್ಪಾದಕವೂ ಕೆಲವೊಮ್ಮೆ ಮನಕರಗಿಸುವಂತಹದ್ದೂ ಆಗಿತ್ತು. ಆ ಎಳೆಯರು . . . ತಮ್ಮ ಹೆತ್ತವರ ಅನುಭವಗಳನ್ನು ಸಮಮನಸ್ಸಿನಿಂದ ಪರಿಗಣಿಸಿ, ತಮ್ಮ ಸ್ವಂತ ಭವಿಷ್ಯತ್ತುಗಳ ಕುರಿತಾಗಿ ವಿಚಾರಭರಿತ ತೀರ್ಮಾನಗಳನ್ನು ಮಾಡಿದರು. ತಮ್ಮ ಹೆತ್ತವರು ಮಾಡಿದಂತಹ ತಪ್ಪುಗಳಿಂದ ದೂರವಿರುವ ಮಾರ್ಗಗಳನ್ನು ಕಂಡುಕೊಳ್ಳುವ ಕುರಿತಾಗಿ ಅವರು ಚಿಂತಿತರಾಗಿದ್ದರು.”
ಅದರ ಕುರಿತು ಸಂದೇಹವಿಲ್ಲ, ನಿಮ್ಮ ಹೆತ್ತವರ ಬೇರ್ಪಡುವಿಕೆಯು, ನಿಮ್ಮ ಜೀವನದಲ್ಲಿ ಅದರ ಗುರುತನ್ನು ನಿಶ್ಚಯವಾಗಿ ಬಿಟ್ಟುಹೋಗುವುದು. ಆದರೆ ಆ ಗುರುತು ಒಂದು ಮಾಸಿಹೋಗುವ ಕಲೆಯೊ ಅಥವಾ ಒಂದು ಚುಚ್ಚುವ ಗಾಯವಾಗಿದೆಯೊ ಎಂಬುದು, ಬಹುಮಟ್ಟಿಗೆ ನಿಮಗೆ ಸೇರಿದಂತಹದ್ದಾಗಿದೆ.
[ಪುಟ 35 ರಲ್ಲಿರುವ ಚಿತ್ರ]
ನಿಮ್ಮ ಹೆತ್ತವರ ವಿವಾಹದ ವಿಚ್ಛೇದವನ್ನು ನೋಡುವುದು, ಊಹಿಸಸಾಧ್ಯವಿರುವ ಅತಿ ವೇದನಾಮಯ ಅನುಭವಗಳಲ್ಲಿ ಒಂದಾಗಿರಸಾಧ್ಯವಿದೆ
[ಪುಟ 38 ರಲ್ಲಿರುವ ಚಿತ್ರ]
ಜೀವನವು ಹೇಗಿತ್ತು ಎಂಬ ಸ್ಮರಣೆಗಳ ಕುರಿತಾಗಿ ಯೋಚಿಸುತ್ತಾ ಇರುವುದು ನಿಮ್ಮನ್ನು ಕೇವಲ ಖಿನ್ನಗೊಳಿಸಬಹುದು