ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಹೆತ್ತವರು ನನಗೆ ಹೆಚ್ಚು ಸ್ವಾತಂತ್ರ್ಯವನ್ನು ಕೊಡುವಂತೆ ಮಾಡುವುದು ಹೇಗೆ?

ನನ್ನ ಹೆತ್ತವರು ನನಗೆ ಹೆಚ್ಚು ಸ್ವಾತಂತ್ರ್ಯವನ್ನು ಕೊಡುವಂತೆ ಮಾಡುವುದು ಹೇಗೆ?

ಅಧ್ಯಾಯ 3

ನನ್ನ ಹೆತ್ತವರು ನನಗೆ ಹೆಚ್ಚು ಸ್ವಾತಂತ್ರ್ಯವನ್ನು ಕೊಡುವಂತೆ ಮಾಡುವುದು ಹೇಗೆ?

ವಾರಾಂತ್ಯಗಳಲ್ಲಿ ರಾತ್ರಿ ಬಹಳ ಹೊತ್ತು ಹೊರಗೆ ಉಳಿಯುವಷ್ಟು ದೊಡ್ಡವರಾಗಿದ್ದೀರೆಂದು ನೀವು ಹೇಳುತ್ತೀರಿ. ನೀವು ಮನೆಗೆ ಬೇಗ ಬರಬೇಕೆಂದು ಅವರು ಹೇಳುತ್ತಾರೆ. ಎಲ್ಲರೂ ಮಾತಾಡುತ್ತಿರುವ ಆ ಹೊಸ ಚಲನ ಚಿತ್ರವನ್ನು ನೋಡಲು ಬಯಸುತ್ತೀರೆಂದು ನೀವು ಹೇಳುತ್ತೀರಿ. ನೀವು ಅದನ್ನು ನೋಡಬಾರದೆಂದು ಅವರು ಹೇಳುತ್ತಾರೆ. ನೀವು ಜೊತೆಯಲ್ಲಿ ಹೊರಹೋಗಲು ಬಯಸುವ ಕೆಲವು ಒಳ್ಳೆಯ ಮಕ್ಕಳನ್ನು ಭೇಟಿಯಾಗಿದ್ದೀರೆಂದು ನೀವು ಹೇಳುತ್ತೀರಿ. ನಿಮ್ಮ ಮಿತ್ರರನ್ನು ಮೊದಲು ಭೇಟಿಯಾಗಲು ಇಷ್ಟಪಡುತ್ತೇವೆಂದು ಅವರು ಹೇಳುತ್ತಾರೆ.

ನೀವು ಹದಿವಯಸ್ಕರಾಗಿರುವಾಗ, ನಿಮ್ಮ ಹೆತ್ತವರಿಗೆ ನಿಮ್ಮ ಜೀವಿತದ ಮೇಲೆ ಒಂದು ಉಸಿರುಕಟ್ಟಿಸುವ ಹಿಡಿತವಿದೆಯೆಂಬಂತೆ ಕೆಲವೊಮ್ಮೆ ಅನಿಸಸಾಧ್ಯವಿದೆ. ನೀವು ಪ್ರತಿ ಸಲ “ನಾನು ಬಯಸುತ್ತೇನೆ” ಎಂದು ಹೇಳುವಾಗಲೆಲ್ಲಾ, ಒಂದು ಅನಿವಾರ್ಯ “ಇಲ್ಲ, ನೀನು ಮಾಡಸಾಧ್ಯವಿಲ್ಲ” ಎಂಬ ಉತ್ತರವು ಬರುವಂತೆ ತೋರುತ್ತದೆ. ಅಲ್ಲದೆ, ನಿಮ್ಮ ಜೀವಿತದ ಯಾವುದೇ ಭಾಗವೂ ನಿಮ್ಮ ಹೆತ್ತವರ “ಇಣಿಕಿ ನೋಡುವ ಕಣ್ಣು”ಗಳಿಂದ ಸುರಕ್ಷಿತವಾಗಿರುವುದಿಲ್ಲ. 15 ವರ್ಷ ಪ್ರಾಯದ ಡೆಬಿ ಹೇಳುವುದು: “ನಾನು ಎಲ್ಲಿದ್ದೇನೆ, ಎಷ್ಟು ಗಂಟೆಗೆ ಮನೆಯಲ್ಲಿರುವೆನೆಂಬುದನ್ನು ನನ್ನ ಅಪ್ಪ ಯಾವಾಗಲೂ ತಿಳಿಯಬಯಸುತ್ತಾರೆ. ಹೆಚ್ಚಿನ ಹೆತ್ತವರು ಹಾಗೆ ಮಾಡುತ್ತಾರೆ. ಅವರು ಪ್ರತಿಯೊಂದು ವಿಷಯವನ್ನೂ ತಿಳಿಯಲೇಬೇಕೆಂದಿದೆಯೊ? ಅವರು ನನಗೆ ಹೆಚ್ಚು ಸ್ವಾತಂತ್ರ್ಯವನ್ನು ಕೊಡಬೇಕು.”

ಇದಲ್ಲದೆ ತಮ್ಮ ಹೆತ್ತವರು ತಮ್ಮನ್ನು ಗೌರವಿಸುವುದಿಲ್ಲವೆಂದೂ ಯುವ ಜನರು ದೂರುತ್ತಾರೆ. ಅವರಲ್ಲಿ ಭರವಸೆಯನ್ನಿಡುವ ಬದಲಿಗೆ, ಏನಾದರೂ ತಪ್ಪು ಸಂಭವಿಸುವಲ್ಲಿ, ವಿಚಾರಣೆಯಿಲ್ಲದೆ ಅವರನ್ನು ದೋಷಿಗಳೆಂದು ನಿರ್ಣಯಿಸಲಾಗುತ್ತದೆ. ತಾವೇ ತಮ್ಮ ಆಯ್ಕೆಯನ್ನು ಮಾಡಿಕೊಳ್ಳುವಂತೆ ಅನುಮತಿಸಲ್ಪಡುವ ಬದಲಿಗೆ, ಅವರು ನಿಯಮಗಳಿಂದ ಪ್ರತಿಬಂಧಿಸಲ್ಪಡುತ್ತಾರೆ.

“ಮಾನಸಿಕ ಬಾಧೆ”

ನಿಮ್ಮ ಹೆತ್ತವರು ನಿಮ್ಮನ್ನು ಕೆಲವೊಮ್ಮೆ ಒಬ್ಬ ಚಿಕ್ಕ ಮಗುವಿನೋಪಾದಿ ಉಪಚರಿಸುತ್ತಾರೊ? ಹಾಗಿರುವಲ್ಲಿ, ಸ್ವಲ್ಪ ಸಮಯದ ಹಿಂದೆ, ನೀವು ನಿಜವಾಗಿಯೂ ಒಬ್ಬ ಮಗು ಆಗಿದ್ದಿರಿ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ಒಬ್ಬ ನಿಸ್ಸಹಾಯಕ ಶಿಶುವಿನೋಪಾದಿ ನಿಮ್ಮ ಕುರಿತಾದ ನಿಮ್ಮ ಹೆತ್ತವರ ಚಿತ್ರಣವು, ಅವರ ಮನಸ್ಸುಗಳಲ್ಲಿ ಹಚ್ಚಹಸಿರಾಗಿದೆ ಮತ್ತು ಅದನ್ನು ಅಷ್ಟು ಸುಲಭವಾಗಿ ತಳ್ಳಿಹಾಕಸಾಧ್ಯವಿಲ್ಲ. ನೀವು ಮಾಡುತ್ತಿದ್ದ ಬಾಲಿಶ ತಪ್ಪುಗಳನ್ನು ಇನ್ನೂ ಜ್ಞಾಪಿಸಿಕೊಂಡು, ನಿಮಗೆ ಅಂತಹ ಸಂರಕ್ಷಣೆಯು ಬೇಕಾಗಿರಲಿ ಬೇಕಾಗದಿರಲಿ, ಅವರು ನಿಮ್ಮನ್ನು ಸಂರಕ್ಷಿಸಲು ಬಯಸುತ್ತಾರೆ.

ನಿಮ್ಮನ್ನು ಸಂರಕ್ಷಿಸುವುದಕ್ಕಾಗಿರುವ ಆ ಪ್ರೇರಣೆಯು ತುಂಬ ಬಲವಾದದ್ದಾಗಿದೆ. ಅಪ್ಪಅಮ್ಮ ನಿಮಗಾಗಿ ಮನೆಯನ್ನು ಒದಗಿಸುತ್ತಾ, ನಿಮಗೆ ಬಟ್ಟೆಗಳನ್ನು ಒದಗಿಸುತ್ತಾ, ಅಥವಾ ನಿಮಗಾಗಿ ಊಟವನ್ನು ಒದಗಿಸುವುದರಲ್ಲಿ ನಿರತರಾಗಿರದ ಸಮಯದಲ್ಲಿ, ನಿಮಗೆ ಹೇಗೆ ಕಲಿಸುವುದು, ಹೇಗೆ ತರಬೇತಿಗೊಳಿಸುವುದು, ಮತ್ತು ಹೌದು, ನಿಮ್ಮನ್ನು ಹೇಗೆ ಸಂರಕ್ಷಿಸುವುದು ಎಂಬ ಸಮಸ್ಯೆಗಳೊಂದಿಗೆ ಅವರು ಅನೇಕ ವೇಳೆ ಹೋರಾಡುತ್ತಿರುತ್ತಾರೆ. ನಿಮ್ಮಲ್ಲಿ ಅವರಿಗಿರುವ ಆಸಕ್ತಿಯು, ಬೇಜವಾಬ್ದಾರಿಯದ್ದಾಗಿರುವುದಿಲ್ಲ. ಅವರು ನಿಮ್ಮನ್ನು ಯಾವ ವಿಧದಲ್ಲಿ ಬೆಳೆಸುತ್ತಾರೊ ಅದಕ್ಕಾಗಿ ಅವರು ದೇವರ ಮುಂದೆ ಜವಾಬ್ದಾರರಾಗಿದ್ದಾರೆ. (ಎಫೆಸ 6:4) ಮತ್ತು ಯಾವುದೊ ವಿಷಯವು ನಿಮ್ಮ ಹಿತಕ್ಕೆ ಬೆದರಿಕೆಯನ್ನುಂಟುಮಾಡುವಂತೆ ತೋರುವಾಗ, ಅವರು ಚಿಂತೆಮಾಡುತ್ತಾರೆ.

ಯೇಸು ಕ್ರಿಸ್ತನ ಹೆತ್ತವರನ್ನು ಪರಿಗಣಿಸಿರಿ. ಯೆರೂಸಲೇಮಿಗೆ ಒಂದು ಭೇಟಿಯನ್ನಿತ್ತ ಬಳಿಕ, ಅವರು ಅರಿವಿಲ್ಲದೆ ಅವನನ್ನು ಬಿಟ್ಟು ಮನೆಗೆ ಹೊರಟರು. ಅವನ ಗೈರುಹಾಜರಿಯ ಕುರಿತಾಗಿ ಅವರಿಗೆ ಅರಿವಾದಾಗ, ಅವರು ಅವನಿಗಾಗಿ ಒಂದು ಶ್ರದ್ಧಾಪೂರ್ವಕವಾದ—ಗಾಬರಿಗೊಂಡ—ಹುಡುಕಾಟವನ್ನು ನಡೆಸಿದರು! ಮತ್ತು ಕೊನೆಗೆ ಅವರು ‘ಆತನನ್ನು ದೇವಾಲಯದಲ್ಲಿ ಕಂಡಾಗ’ ಯೇಸುವಿನ ತಾಯಿ, “ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟೋ ತಳಮಳಗೊಂಡು [“ಮಾನಸಿಕ ಬಾಧೆಯಿಂದ,” NW] ನಿನ್ನನ್ನು ಹುಡುಕಿ ಬಂದೆವಲ್ಲಾ” ಎಂದು ಉದ್ಗರಿಸಿದಳು. (ಓರೆಅಕ್ಷರಗಳು ನಮ್ಮವು.) (ಲೂಕ 2:41-48) ಈಗ, ಒಬ್ಬ ಪರಿಪೂರ್ಣ ಮಗುವಾಗಿದ್ದ ಯೇಸು, ತನ್ನ ಹೆತ್ತವರಿಗೆ ವ್ಯಾಕುಲವನ್ನು ಉಂಟುಮಾಡಿದ್ದಲ್ಲಿ, ನೀವು ನಿಮ್ಮ ಹೆತ್ತವರಿಗೆ ಎಷ್ಟು ಚಿಂತೆಯನ್ನು ಉಂಟುಮಾಡುತ್ತೀರೆಂಬುದರ ಕುರಿತಾಗಿ ಯೋಚಿಸಿರಿ!

ಉದಾಹರಣೆಗಾಗಿ, ನೀವು ಯಾವ ಸಮಯಕ್ಕೆ ಮನೆಗೆ ಬರಬೇಕೆಂಬುದರ ಕುರಿತಾದ ಆ ಅಂತ್ಯವಿಲ್ಲದ ಘರ್ಷಣೆಯನ್ನು ತೆಗೆದುಕೊಳ್ಳಿ. ಈ ರೀತಿಯಲ್ಲಿ ನಿರ್ಬಂಧಿಸಲ್ಪಡಲು ಪ್ರಾಯಶಃ ಯಾವ ಕಾರಣವನ್ನೂ ನೀವು ಕಾಣಲಾರಿರಿ. ಆದರೆ ನೀವು ಎಂದಾದರೂ ವಿಷಯಗಳನ್ನು ನಿಮ್ಮ ಹೆತ್ತವರ ದೃಷ್ಟಿಕೋನದಿಂದ ನೋಡಿದ್ದೀರೊ? ಹೆತ್ತವರ ಕುರಿತಾದ ಮಕ್ಕಳ ಪುಸ್ತಕ (ಇಂಗ್ಲಿಷ್‌)ದ ಶಾಲಾ ವಯಸ್ಸಿನ ಲೇಖಕರು ಹಾಗೆ ಮಾಡಲು ಪ್ರಯತ್ನಿಸಿದರು. “ತಮ್ಮ ಮಕ್ಕಳು ಸರಿಯಾದ ಸಮಯದೊಳಗೆ ಮನೆಯಲ್ಲಿರದಿದ್ದರೆ, ಹೆತ್ತವರ ತಲೆಗಳಲ್ಲಿ ಸುಳಿದಾಡುತ್ತಿರುವ ಮನಶ್ಚಿತ್ರ”ಗಳೆಂದು ಅವರು ಕರೆದಂತಹ ಸಂಗತಿಗಳ ಒಂದು ಪಟ್ಟಿಯನ್ನು ಅವರು ಸಂಘಟಿಸಿದರು. ಈ ಪಟ್ಟಿಯಲ್ಲಿ ‘ಅಮಲೌಷಧಗಳನ್ನು ಸೇವಿಸುವದು, ಕಾರ್‌ ಅಪಘಾತದಲ್ಲಿ ಸಿಕ್ಕಿಬೀಳುವುದು, ಉದ್ಯಾನವನಗಳಲ್ಲಿ ತಿರುಗಾಡುವುದು, ದಸ್ತಗಿರಿ ಮಾಡಲ್ಪಡುವುದು, ಅಶ್ಲೀಲ ಚಲನ ಚಿತ್ರಗಳನ್ನು ನೋಡಲು ಹೋಗುವುದು, ಮಾದಕವಸ್ತುಗಳನ್ನು ಮಾರುವುದು, ಬಲಾತ್ಕಾರ ಸಂಭೋಗ ಮಾಡಲ್ಪಡುವುದು ಅಥವಾ ಹಿಂದಾಕ್ರಮಣಕ್ಕೊಳಗಾಗುವುದು, ಜೈಲಿನಲ್ಲಿ ಕೊನೆಗೊಳ್ಳುವುದು ಅಥವಾ ಕುಟುಂಬದ ಹೆಸರನ್ನು ಅಪಕೀರ್ತಿಗೊಳಪಡಿಸುವುದು’ ಎಂಬಂತಹ ಸಂಗತಿಗಳು ಸೇರಿದ್ದವು.

ಎಲ್ಲಾ ಹೆತ್ತವರು ವಿಪರೀತವೆಂದು ತೋರುವ ಅಂತಹ ತೀರ್ಮಾನಗಳಿಗೆ ಹಾರಿಬಿಡಲಿಕ್ಕಿಲ್ಲ. ಆದರೆ ಅನೇಕ ಯುವ ಜನರು ಅಂತಹ ವಿಷಯಗಳಲ್ಲಿ ಒಳಗೂಡಿರುತ್ತಾರೆ ಎಂಬುದು ಸತ್ಯ ಸಂಗತಿಯಾಗಿರುವುದಿಲ್ಲವೊ? ಆದುದರಿಂದ ತಡವಾಗಿ ಹೊರಗಿರುವುದು ಮತ್ತು ತಪ್ಪಾದ ರೀತಿಯ ಸಹವಾಸವನ್ನಿಡುವುದು ಹಾನಿಕರವಾಗಿರಬಲ್ಲದೆಂಬ ಸೂಚನೆಯ ಕಡೆಗೆ ನೀವು ತೀವ್ರ ಅಸಮಾಧಾನ ತೋರಿಸಬೇಕೊ? ಯೇಸುವಿನ ಹೆತ್ತವರು ಕೂಡ ಅವನು ಎಲ್ಲಿದ್ದನೆಂಬುದನ್ನು ತಿಳಿಯಲು ಬಯಸಿದರು!

ಅವರು ನಿಗ್ರಹಿಸುವ ಕಾರಣ

ತಮಗೆ ಬರುವ ಹಾನಿಯ ಕುರಿತಾದ ತಮ್ಮ ಹೆತ್ತವರ ಭಯವು, ಹೆಚ್ಚುಕಡಿಮೆ ಮತಿಭ್ರಂಶವೇ ಆಗಿರುತ್ತದೆಂದು ಕೆಲವು ಯುವಕರು ಹೇಳುತ್ತಾರೆ! ಆದರೆ ನೆನಪಿಡಿರಿ, ನಿಮಗಾಗಿ ತುಂಬ ಸಮಯ ಮತ್ತು ಭಾವನೆಯನ್ನು ಖರ್ಚು ಮಾಡಲಾಗಿದೆ. ನೀವು ಬೆಳೆದು ದೊಡ್ಡವರಾಗಿ, ಕಟ್ಟಕಡೆಗೆ ಮನೆಯನ್ನು ಬಿಟ್ಟುಹೋಗುವಿರೆಂಬ ಯೋಚನೆಯು, ನಿಮ್ಮ ಹೆತ್ತವರನ್ನು ಕ್ಷೋಭೆಗೊಳಿಸಬಹುದು. ಒಬ್ಬ ಹೆತ್ತವರು ಬರೆದುದು: “ನನ್ನ ಏಕಮಾತ್ರ ಮಗುವಾದ, ಒಬ್ಬ ಮಗನು, ಈಗ ಹತ್ತೊಂಬತ್ತು ವರ್ಷ ವಯಸ್ಸಿನವನಾಗಿದ್ದಾನೆ, ಮತ್ತು ಅವನು ಹೊರಟುಹೋಗುವ ವಿಚಾರವನ್ನು ನಾನು ಸಹಿಸಲಾರೆ.”

ಹೀಗಿರುವುದರಿಂದ ಕೆಲವು ಹೆತ್ತವರು ತಮ್ಮ ಮಕ್ಕಳನ್ನು ನಿಗ್ರಹಿಸುವ ಅಥವಾ ಅತಿಯಾಗಿ ಸಂರಕ್ಷಿಸುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಆದರೆ ಅದಕ್ಕೆ ಪ್ರತಿಯಾಗಿ ನೀವು ಅತಿಯಾಗಿ ಪ್ರತಿಕ್ರಿಯಿಸುವುದು, ಒಂದು ಶುದ್ಧ ತಪ್ಪಾಗಿರುವುದು. ಒಬ್ಬ ಯುವತಿಯು ಜ್ಞಾಪಿಸಿಕೊಳ್ಳುವುದು: “ನಾನು ಸುಮಾರು 18 ವರ್ಷ ವಯಸ್ಸನ್ನು ತಲಪುವ ತನಕ, ನನ್ನ ತಾಯಿ ಮತ್ತು ನಾನು ತೀರ ಆಪ್ತರಾಗಿದ್ದೆವು. . . . [ಆದರೆ] ನಾನು ದೊಡ್ಡವಳಾದಂತೆ ನಮ್ಮಲ್ಲಿ ಸಮಸ್ಯೆಗಳು ಆರಂಭವಾದವು. ನಾನು ಸ್ವಲ್ಪ ಸ್ವಾತಂತ್ರ್ಯವನ್ನು ಚಲಾಯಿಸಲು ಬಯಸಿದೆ, ಅದನ್ನು ಅವರು ನಮ್ಮ ಸಂಬಂಧಕ್ಕೆ ಒಂದು ಬೆದರಿಕೆಯೋಪಾದಿ ಕಂಡಿರಬೇಕು. ಪ್ರತಿಯಾಗಿ, ಅವರು ನನ್ನ ಮೇಲೆ ಇನ್ನೂ ಹೆಚ್ಚು ಬಿಗಿಯಾದ ಹಿಡಿತವನ್ನಿಡಲು ಆರಂಭಿಸಿದರು, ಮತ್ತು ನಾನು ಹೆಚ್ಚು ದೂರ ಸರಿಯುವ ಮೂಲಕ ಪ್ರತಿಕ್ರಿಯಿಸಿದೆ.”

ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯವು ಉತ್ತಮ, ಆದರೆ ನಿಮ್ಮ ಕುಟುಂಬ ಸಂಬಂಧಗಳನ್ನು ನಷ್ಟಮಾಡಿ ಅದನ್ನು ಪಡೆದುಕೊಳ್ಳದಿರಿ. ನಿಮ್ಮ ಹೆತ್ತವರೊಂದಿಗಿನ ನಿಮ್ಮ ಸಂಬಂಧವನ್ನು ನೀವು, ಪರಸ್ಪರ ತಿಳಿವಳಿಕೆ, ಸಹಿಷ್ಣುತೆ, ಮತ್ತು ಗೌರವದ ಮೇಲೆ ಆಧರಿತವಾದ ಒಂದು ಹೆಚ್ಚು ವಯಸ್ಕ ಭದ್ರನೆಲೆಯ ಮೇಲೆ ಹೇಗೆ ಇಡಸಾಧ್ಯವಿದೆ? ಒಂದು ವಿಷಯವೇನಂದರೆ, ಗೌರವವು ಗೌರವವನ್ನು ಪಡೆಯುತ್ತದೆ. ಅಪೊಸ್ತಲ ಪೌಲನು ಒಮ್ಮೆ ಜ್ಞಾಪಿಸಿಕೊಂಡದ್ದು: “ನಮ್ಮನ್ನು ಶಿಸ್ತಿಗೊಳಪಡಿಸಿದಂಥ ಶರೀರ ಸಂಬಂಧವಾದ ತಂದೆಗಳು ನಮಗಿದ್ದರು, ಮತ್ತು ನಾವು ಅವರಿಗೆ ಗೌರವವನ್ನು ಕೊಡುತ್ತಿದ್ದೆವು.” (ಇಬ್ರಿಯ 12:9, NW) ಈ ಆದಿ ಕ್ರೈಸ್ತರ ಹೆತ್ತವರು ತಪ್ಪುಮಾಡದಿರುವವರಾಗಿರಲಿಲ್ಲ. ಪೌಲನು ಮುಂದುವರಿಸಿದ್ದು (ವಚನ 10): “ನಮ್ಮ ಮಾನವ ಪಿತೃಗಳು . . . ಅವರು ಏನನ್ನು ಅತ್ಯುತ್ತಮವೆಂದು ಎಣಿಸಿದರೋ ಅದನ್ನೇ ಮಾಡಸಾಧ್ಯವಿತ್ತು.”—ದ ಜೆರೂಸಲೇಮ್‌ ಬೈಬಲ್‌.

ಕೆಲವೊಮ್ಮೆ ಈ ಮನುಷ್ಯರು ತಮ್ಮ ತೀರ್ಪುಗಳಲ್ಲಿ ತಪ್ಪನ್ನು ಮಾಡಿದರು. ಆದರೂ ಅವರು ತಮ್ಮ ಮಕ್ಕಳ ಗೌರವವನ್ನು ಪಡೆಯಲು ಯೋಗ್ಯರಾಗಿದ್ದರು. ನಿಮ್ಮ ಹೆತ್ತವರು ಹಾಗೆಯೇ ಯೋಗ್ಯರಾಗಿದ್ದಾರೆ. ಅವರು ನಿಗ್ರಹಿಸುವ ಸ್ವಭಾವದವರಾಗಿದ್ದಾರೆಂಬ ವಾಸ್ತವಾಂಶವು, ನೀವು ದಂಗೆಕೋರರಾಗಿರಬೇಕೆಂಬುದಕ್ಕೆ ಕಾರಣವಾಗಿರುವುದಿಲ್ಲ. ನೀವು ಸ್ವತಃ ನಿಮಗಾಗಿ ಬಯಸುವಂತಹ ರೀತಿಯ ಗೌರವವನ್ನೇ ಅವರಿಗೆ ನೀಡಿರಿ.

ತಪ್ಪುತಿಳುವಳಿಕೆಗಳು

ನಿಮ್ಮ ಹತೋಟಿಗೆ ಮೀರಿದಂತಹ ಪರಿಸ್ಥಿತಿಗಳಿಂದಾಗಿ ನೀವು ಮನೆಗೆ ಬರುವಾಗ ಎಂದಾದರೂ ತಡವಾಗಿದೆಯೊ? ನಿಮ್ಮ ಹೆತ್ತವರು ಅತಿಯಾಗಿ ಪ್ರತಿಕ್ರಿಯಿಸಿದರೊ? ಅಂತಹ ತಪ್ಪುತಿಳುವಳಿಕೆಗಳು ನಿಮಗೆ ಗೌರವವನ್ನು ಗಳಿಸಲು ಇನ್ನೊಂದು ಅವಕಾಶವನ್ನು ಒದಗಿಸುತ್ತವೆ. ಯೇಸುವಿನ ಕ್ಷೋಭೆಗೊಂಡಿದ್ದ ಹೆತ್ತವರು, ಅವನು ದೇವಾಲಯದಲ್ಲಿ ಕೆಲವು ಶಿಕ್ಷಕರೊಂದಿಗೆ ದೇವರ ವಾಕ್ಯವನ್ನು ಮುಗ್ಧವಾಗಿ ಚರ್ಚಿಸುತ್ತಿರುವುದನ್ನು ಕೊನೆಯಲ್ಲಿ ಕಂಡುಹಿಡಿದಾಗ, ಯುವ ಯೇಸು ತನ್ನನ್ನು ನಿರ್ವಹಿಸಿಕೊಂಡ ವಿಧವನ್ನು ಜ್ಞಾಪಿಸಿಕೊಳ್ಳಿರಿ. ಅವರು ತನ್ನ ಹೇತುಗಳನ್ನು ಆಕ್ಷೇಪಿಸುವದು ತೀರ ಅಸಂಬದ್ಧವಾಗಿತ್ತೆಂಬುದರ ಕುರಿತಾಗಿ ಯೇಸು, ಭಾವನಾತ್ಮಕವಾಗಿ ಬೈದು, ಅತ್ತು, ಗೋಳಾಡಿದನೊ? ಅವನ ಶಾಂತಚಿತ್ತ ಉತ್ತರವನ್ನು ಗಮನಕ್ಕೆ ತಂದುಕೊಳ್ಳಿರಿ: “ನೀವು ನನ್ನನ್ನು ಹುಡುಕಿದ್ದೇನು? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ?” (ಲೂಕ 2:49) ಯೇಸು ಇಲ್ಲಿ ಪ್ರದರ್ಶಿಸಿದಂತಹ ಪ್ರೌಢತೆಯಿಂದ ಅವನ ಹೆತ್ತವರು ಪ್ರಭಾವಿತರಾದುದರಲ್ಲಿ ಸಂದೇಹವಿಲ್ಲ. ಹೀಗೆ “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು” ಮಾತ್ರವಲ್ಲ, ನಿಮ್ಮ ಹೆತ್ತವರ ಗೌರವವನ್ನು ಸಂಪಾದಿಸುವಂತೆಯೂ ಸಹಾಯ ಮಾಡಸಾಧ್ಯವಿದೆ.—ಜ್ಞಾನೋಕ್ತಿ 15:1.

ನಿಯಮಗಳು ಮತ್ತು ನಿಬಂಧನೆಗಳು

ನಿಮ್ಮ ಹೆತ್ತವರ ಬೇಡಿಕೆಗಳಿಗೆ ನೀವು ಪ್ರತಿಕ್ರಿಯಿಸುವ ವಿಧವೂ, ನೀವು ಹೇಗೆ ಉಪಚರಿಸಲ್ಪಡುವಿರಿ ಎಂಬುದಕ್ಕೆ ಅತಿಯಾಗಿ ಸಂಬಂಧಿಸುತ್ತದೆ. ಕೆಲವು ಯುವ ಜನರು ಮುನಿಯುತ್ತಾರೆ, ಸುಳ್ಳು ಹೇಳುತ್ತಾರೆ ಅಥವಾ ಬಹಿರಂಗವಾಗಿ ಅವಿಧೇಯರಾಗುತ್ತಾರೆ. ಹೆಚ್ಚು ಪ್ರೌಢ ದೃಷ್ಟಿಯೊಂದಿಗೆ ಪ್ರಸ್ತಾಪಿಸಲು ಪ್ರಯತ್ನಿಸಿರಿ. ನಿಮಗೆ ಬಹಳ ಹೊತ್ತು ಹೊರಗಿರಲು ಅನುಮತಿ ಬೇಕಿರುವಲ್ಲಿ, ಬಾಲಿಶ ಬೇಡಿಕೆಗಳನ್ನು ಮಾಡಬೇಡಿರಿ ಅಥವಾ “ಬೇರೆ ಎಲ್ಲಾ ಮಕ್ಕಳು ಬಹಳ ಹೊತ್ತು ಹೊರಗಿರಸಾಧ್ಯವಿದೆ” ಎಂದು ರಾಗ ಎಳೆಯಬೇಡಿರಿ. ಲೇಖಕಿ ಆ್ಯಂಡ್ರಿಯ ಈಗನ್‌ ಸಲಹೆ ಕೊಡುವುದು: “ಅವರು ಪರಿಸ್ಥಿತಿಯನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವಂತೆ, ನೀವು ಏನು ಮಾಡಬಯಸುತ್ತೀರೆಂಬುದರ ಕುರಿತು ನಿಮಗೆ ಸಾಧ್ಯವಿರುವಷ್ಟನ್ನು ಅವರಿಗೆ [ಹೇಳಿರಿ]. . . . ನೀವು ಎಲ್ಲಿ ಇರುವಿರಿ ಮತ್ತು ಯಾರೊಂದಿಗೆ ಇರುವಿರಿ ಮತ್ತು ನೀವು ಬಹಳ ಹೊತ್ತು ಹೊರಗಿರುವುದು ಏಕೆ ಪ್ರಾಮುಖ್ಯವೆಂಬುದರ ಕುರಿತಾಗಿ ನೀವು ಎಲ್ಲವನ್ನು ಅವರಿಗೆ ಹೇಳುವಲ್ಲಿ . . . , ಅವರು ಒಪ್ಪಿಕೊಳ್ಳಬಹುದು.”

ಅಥವಾ ನಿಮ್ಮ ಹೆತ್ತವರು ನಿಮ್ಮ ಸ್ನೇಹಿತರನ್ನು ಪರೀಕ್ಷಿಸಲು ಬಯಸುವುದಾದರೆ—ಅವರು ಹಾಗೆ ಮಾಡತಕ್ಕದ್ದು—ಒಂದು ಮಗುವಿನಂತೆ ಗೊಣಗುತ್ತಾ ಅಳಬೇಡಿರಿ. ಸೆವೆಂಟೀನ್‌ ಪತ್ರಿಕೆಯು ಶಿಫಾರಸ್ಸು ಮಾಡಿದ್ದು: “ಸ್ನೇಹಿತರನ್ನು ಸಾಂದರ್ಭಿಕವಾಗಿ ನಿಮ್ಮೊಂದಿಗೆ ಮನೆಗೆ ಕರೆತನ್ನಿರಿ, ಹೀಗೆ ನೀವು ಬಿಲ್‌ನೊಂದಿಗೆ ಚಲನ ಚಿತ್ರಗಳಿಗೆ ಹೋಗುತ್ತೀರೆಂದು ಹೇಳುವಾಗ, ‘ಬಿಲ್‌? ಬಿಲ್‌ ಯಾರು?’ ಎಂದು ಇನ್ನೊಂದು ಕೋಣೆಯಿಂದ ನಿಮ್ಮ ತಂದೆಗೆ ಅಬ್ಬರಿಸಲು ಯಾವ ಕಾರಣವೂ ಇರದು.”

“ಹೆಚ್ಚು ಕೊಡಲ್ಪಡುವುದು”

ಜಿಮ್‌ ತನ್ನ ತಮ್ಮನಾದ ರಾನ್‌ನ ಕುರಿತಾಗಿ ಮಾತಾಡುವಾಗ ನಸುನಗುತ್ತಾನೆ. “ನಮ್ಮ ನಡುವೆ ಕೇವಲ 11 ತಿಂಗಳುಗಳ ವ್ಯತ್ಯಾಸವಿದೆ, ಆದರೆ ನಮ್ಮ ಹೆತ್ತವರು ನಮ್ಮಿಬ್ಬರನ್ನು ತೀರ ಭಿನ್ನವಾಗಿ ಉಪಚರಿಸಿದರು” ಎಂದವನು ಹೇಳುತ್ತಾನೆ. “ಅವರು ನನಗೆ ತುಂಬ ಸ್ವಾತಂತ್ರ್ಯವನ್ನು ಕೊಟ್ಟರು. ನಾನು ಕುಟುಂಬದ ಕಾರನ್ನು ಉಪಯೋಗಿಸಬಹುದಿತ್ತು. ಒಂದು ವರ್ಷ, ನಾನು ಒಬ್ಬ ತಮ್ಮನನ್ನು ನ್ಯೂ ಯಾರ್ಕ್‌ ನಗರಕ್ಕೆ ಒಂದು ಸಂಚಾರಕ್ಕೆ ಕರೆದುಕೊಂಡು ಹೋಗುವಂತೆಯೂ ಅನುಮತಿಸಿದರು.

“ರಾನ್‌ನ ವಿಷಯದಲ್ಲಿಯಾದರೊ ಅದು ಭಿನ್ನವಾಗಿತ್ತು” ಎಂದು ಜಿಮ್‌ ಮುಂದುವರಿಸುತ್ತಾನೆ. “ಅವನಿಗೆ ಹೆಚ್ಚು ಸ್ವಾತಂತ್ರ್ಯವು ಕೊಡಲ್ಪಟ್ಟಿರಲೇ ಇಲ್ಲ. ಅವನು ವಯಸ್ಸಿಗೆ ಬಂದಾಗ ಅಪ್ಪ ಅವನಿಗೆ ವಾಹನ ಚಲಾಯಿಸುವುದನ್ನು ಕಲಿಸುವ ಗೋಜಿಗೂ ಹೋಗಲಿಲ್ಲ. ಮತ್ತು ಅವನು ಡೇಟಿಂಗ್‌ ಮಾಡುವಷ್ಟು ದೊಡ್ಡವನಾದಾಗ, ನನ್ನ ಹೆತ್ತವರು ಅವನಿಗೆ ಡೇಟಿಂಗ್‌ ಮಾಡಲು ಬಿಡುತ್ತಿರಲಿಲ್ಲ.”

ಸ್ವಪಕ್ಷಪಾತವೊ? ಇಲ್ಲ. ಜಿಮ್‌ ವಿವರಿಸುವುದು: “ರಾನ್‌ ಬೇಜವಾಬ್ದಾರಿಯ ಪ್ರವೃತ್ತಿಯುಳ್ಳವನಾಗಿದ್ದನು. ಅವನಲ್ಲಿ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವ ಕೊರತೆಯಿತ್ತು. ಅವನಿಗೆ ನೇಮಿಸಲ್ಪಟ್ಟ ಕೆಲಸವನ್ನು ಅವನು ಅನೇಕವೇಳೆ ಮಾಡಲು ತಪ್ಪುತ್ತಿದ್ದನು. ಮತ್ತು ನಾನು ನನ್ನ ಹೆತ್ತವರಿಗೆ ಎಂದೂ ಎದುರುತ್ತರ ಕೊಡುತ್ತಿರಲಿಲ್ಲವಾದರೂ, ರಾನ್‌ ತಾನು ಅಸಮ್ಮತಿಸುತ್ತೇನೆಂಬುದನ್ನು ಅವರಿಗೆ ತಿಳಿಯುವಂತೆ ಮಾಡುತ್ತಿದ್ದನು. ಇದು ಸದಾ ಅವನಿಗೆ ತಿರುಗುಬಾಣವಾಗುತ್ತಿತ್ತು.” ಮತ್ತಾಯ 25:29ರಲ್ಲಿ ಯೇಸು ಹೇಳಿದ್ದು: “ಇದ್ದವರಿಗೆಲ್ಲಾ ಕೊಡಲ್ಪಡುವದು, ಅವರಿಗೆ ಮತ್ತೂ ಹೆಚ್ಚಾಗುವದು [“ಹೆಚ್ಚು ಕೊಡಲ್ಪಡುವುದು,” NW]; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು.”

ನಿಮಗೆ ಹೆಚ್ಚು ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಬೇಕೊ? ಹಾಗಾದರೆ ನೀವು ಜವಾಬ್ದಾರಿಯುತರಾಗಿದ್ದೀರಿ ಎಂಬುದನ್ನು ತೋರಿಸಿಕೊಡಿ. ನಿಮ್ಮ ಹೆತ್ತವರು ನಿಮಗೆ ನೇಮಿಸುವಂತಹ ಯಾವುದೇ ಕೆಲಸಗಳನ್ನು ಗಂಭೀರವಾಗಿ ತೆಗೆದುಕೊಳ್ಳಿರಿ. ಯೇಸುವಿನ ಸಾಮ್ಯಗಳಲ್ಲೊಂದರಲ್ಲಿನ ಯೌವನಸ್ಥನಂತೆ ಇರಬೇಡಿರಿ. “ಮಗನೇ, ಹೋಗಿ ಈ ಹೊತ್ತು ದ್ರಾಕ್ಷೇತೋಟದಲ್ಲಿ ಕೆಲಸಮಾಡು” ಎಂದು ಅವನ ತಂದೆ ಹೇಳಿದಾಗ, ಅವನು “ಹೋಗುತ್ತೇನಪ್ಪಾ” ಎಂದು ಹೇಳಿದನು, ಆದರೆ “ಹೋಗಲೇ ಇಲ್ಲ.” (ಮತ್ತಾಯ 21:28, 30) ನಿಮ್ಮ ಹೆತ್ತವರು ನಿಮಗೆ ಏನನ್ನಾದರೂ ಮಾಡಲು ಕೇಳಿಕೊಳ್ಳುವಲ್ಲಿ, ಅದು ಎಷ್ಟೇ ಚಿಕ್ಕ ಕೆಲಸವಾಗಿದ್ದರೂ, ಅದು ಮಾಡಿ ತೀರಿಸಲ್ಪಟ್ಟಂತೆಯೇ ಎಂದು ಅವರಿಗೆ ಮನಗಾಣಿಸಿರಿ.

“ನಾನು ಜವಾಬ್ದಾರಿಯನ್ನು ನಿರ್ವಹಿಸಬಲ್ಲೆನೆಂದು ನಾನು ನನ್ನ ಹೆತ್ತವರಿಗೆ ತೋರಿಸಿದೆ,” ಎಂದು ಜಿಮ್‌ ಜ್ಞಾಪಿಸಿಕೊಳ್ಳುತ್ತಾನೆ. “ಅವರು ನನ್ನನ್ನು ಬ್ಯಾಂಕ್‌ಗೆ ಕಳುಹಿಸುತ್ತಿದ್ದರು, ನಮ್ಮ ಸೇವಾಸೌಕರ್ಯಗಳ ಬಿಲ್‌ಗಳನ್ನು ಪಾವತಿಮಾಡಲು ಬಿಡುತ್ತಿದ್ದರು, ಸೂಪರ್‌ಮಾರ್ಕೆಟ್‌ಗೆ ಹೋಗಿ ಖರೀದಿ ಮಾಡಲು ನನ್ನನ್ನು ಅನುಮತಿಸುತ್ತಿದ್ದರು. ಮತ್ತು ಅಮ್ಮ ಹೊರಗೆ ಉದ್ಯೋಗಕ್ಕೆ ಹೋಗಬೇಕಾದಾಗ, ನಾನು ಕುಟಂಬಕ್ಕಾಗಿ ಅಡಿಗೆಯನ್ನೂ ಮಾಡಿದೆ.”

ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವುದು

ನಿಮ್ಮ ಹೆತ್ತವರು ನಿಮಗೆ ಅಂತಹ ಕೆಲಸಗಳನ್ನು ಮಾಡಲು ನೇಮಿಸಿಯೇ ಇಲ್ಲವಾದರೆ ಆಗೇನು? ವಿವಿಧ ಆರಂಭದ ಹೆಜ್ಜೆಗಳನ್ನು ಬೆನ್ನಟ್ಟಿರಿ. ಸೆವೆಂಟೀನ್‌ ಪತ್ರಿಕೆಯು ಸಲಹೆ ಕೊಟ್ಟದ್ದು: “ಕುಟುಂಬಕ್ಕಾಗಿ ಒಂದು ಊಟವನ್ನು ತಯಾರಿಸುವಿರೆಂದು ಹೇಳಿರಿ, ಮತ್ತು ನೀವು ಎಲ್ಲವನ್ನೂ—ಊಟವನ್ನು ಯೋಜಿಸುವುದು, ಕಿರಾಣಿ ಪಟ್ಟಿಯನ್ನು ತಯಾರಿಸುವುದು, ಆಯವ್ಯಯ ಪಟ್ಟಿಯನ್ನು ತಯಾರಿಸುವುದು, ಖರೀದಿಸುವುದು, ಅಡುಗೆ ಮಾಡುವುದು, ಶುಚಿಗೊಳಿಸುವುದು—ಮಾಡಲು ಬಯಸುತ್ತೀರೆಂದು ನಿಮ್ಮ ಹೆತ್ತವರಿಗೆ ಹೇಳಿರಿ.” ಮತ್ತು ಅಡುಗೆ ಮಾಡುವುದು ನಿಮ್ಮ ವೈಶಿಷ್ಟ್ಯವಾಗಿರದಿದ್ದಲ್ಲಿ, ಸುತ್ತಲೂ ಕಣ್ಣಾಡಿಸಿ ಬೇರೆ ಯಾವ ಕೆಲಸವನ್ನು ಮಾಡಲಿಕ್ಕಿದೆಯೆಂಬುದನ್ನು ನೋಡಿರಿ. ಪಾತ್ರೆಗಳನ್ನು ತೊಳೆಯಲಿಕ್ಕಿರುವಾಗ, ನೆಲವನ್ನು ಗುಡಿಸಲಿಕ್ಕಿರುವಾಗ, ಅಥವಾ ಕೋಣೆಗಳನ್ನು ಸರಿಪಡಿಸಲು ಇರುವಾಗ, ಕ್ರಿಯೆಗೈಯಲು ನಿಮ್ಮ ಹೆತ್ತವರಿಂದ ಒಂದು ನಿರ್ದಿಷ್ಟ ಕಟ್ಟಳೆಯ ಅಗತ್ಯವಿಲ್ಲ.

ಅನೇಕ ಯುವ ಜನರು ಬೇಸಗೆಕಾಲ ಅಥವಾ ವಾರಾಂತ್ಯಗಳಲ್ಲಿ ಅಂಶಕಾಲಿಕ ಕೆಲಸವನ್ನು ಮಾಡುತ್ತಾರೆ. ನೀವು ಇದನ್ನು ಮಾಡುತ್ತಿರುವಲ್ಲಿ, ನಿಮ್ಮ ಹಣವನ್ನು ಉಳಿಸಲು ಮತ್ತು ನಿರ್ವಹಿಸಲು ಸಮರ್ಥರಾಗಿದ್ದೀರೆಂದು ನೀವು ರುಜುಪಡಿಸಿದ್ದೀರೊ? ನಿಮ್ಮ ಕೋಣೆ ಮತ್ತು ಊಟಕ್ಕಾಗಿ ಕಾಣಿಕೆಯನ್ನು ಕೊಡಲು ನೀವು ಸ್ವಯಂ ಆಗಿ ಮುಂದೆ ಬಂದಿದ್ದೀರೊ? (ನಿಮ್ಮ ಸಮುದಾಯದಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಚಾಲ್ತಿಯಲ್ಲಿರುವ ದರವನ್ನು ಪರಿಶೀಲಿಸಿ ನೋಡುವುದರಿಂದ ನಿಮ್ಮ ಕಣ್ದೆರೆಯಬಹುದು.) ಹಾಗೆ ಮಾಡುವುದು ಕಡಮೆ ಕೈವೆಚ್ಚದ ಹಣವನ್ನು ಅರ್ಥೈಸಬಹುದು, ಆದರೆ ಪ್ರಾಯಕ್ಕೆ ಬಂದವರ ಹಾಗೆ ಹಣವನ್ನು ನಿರ್ವಹಿಸುವ ನಿಮ್ಮ ವಿಧವನ್ನು ನಿಮ್ಮ ಹೆತ್ತವರು ಅವಲೋಕಿಸಿದಂತೆ, ನಿಸ್ಸಂದೇಹವಾಗಿ ಅವರು ನಿಮಗೆ ಹೆಚ್ಚು ಸ್ವಾತಂತ್ರ್ಯವನ್ನು ಕೊಡುವ ಪ್ರವೃತ್ತಿಯುಳ್ಳವರಾಗಿರುವರು.

ವಶವರ್ತಿಯಾಗಿರುವುದರಿಂದ ಬಿಡಿಸಿಕೊಳ್ಳುವುದು

ಹೆತ್ತವರು, ಬುದ್ಧಿವಾದ ಮತ್ತು ಸಲಹೆಯ ಸಮೃದ್ಧ ಮೂಲಗಳಾಗಿದ್ದು, ನಮ್ಮ ವಿಶ್ವಾಸಾರ್ಹ ಸ್ನೇಹಿತರಾಗಿರಬೇಕು. (ಯೆರೆಮೀಯ 3:4ನ್ನು ಹೋಲಿಸಿರಿ.) ಆದಾಗಲೂ, ಪ್ರತಿಯೊಂದು ಅಲ್ಪ ನಿರ್ಣಯವನ್ನು ಮಾಡಲಿಕ್ಕಾಗಿ ನೀವು ಅವರ ಮೇಲೆ ಆತುಕೊಳ್ಳಬೇಕೆಂಬುದು ಇದರ ಅರ್ಥವಲ್ಲ. ನಿಮ್ಮ “ಜ್ಞಾನೇಂದ್ರಿಯಗಳನ್ನು” ಉಪಯೋಗಿಸುವ ಮೂಲಕ ಮಾತ್ರವೇ, ನಿರ್ಣಯಗಳನ್ನು ಮಾಡುವ ನಿಮ್ಮ ಸಾಮರ್ಥ್ಯದಲ್ಲಿ ನೀವು ವಿಶ್ವಾಸವನ್ನು ಗಳಿಸುತ್ತೀರಿ.—ಇಬ್ರಿಯ 5:14.

ಆದುದರಿಂದ, ಅಲ್ಪ ಆಪತ್ತಿನ ಪ್ರಥಮ ಸೂಚನೆಯಲ್ಲೇ ನಿಮ್ಮ ಹೆತ್ತವರ ಬಳಿ ಓಡಿಹೋಗುವ ಬದಲಿಗೆ, ಮೊದಲು ನಿಮ್ಮ ಸ್ವಂತ ಮನಸ್ಸಿನಲ್ಲಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿರಿ. ವಿಷಯಗಳ ಕುರಿತಾಗಿ “ಆತುರಗಾರ”ರು, ಅಥವಾ ಆವೇಗಪರರಾಗಿರುವ ಬದಲಿಗೆ, ಪ್ರಥಮವಾಗಿ ‘ಜ್ಞಾನವನ್ನು ಪರಿಗಣಿಸುವ’ ಕುರಿತಾದ ಬೈಬಲಿನ ಬುದ್ಧಿವಾದವನ್ನು ಅನುಸರಿಸಿರಿ. (ಯೆಶಾಯ 32:4) ಸ್ವಲ್ಪ ಸಂಶೋಧನೆಯನ್ನು ಮಾಡಿರಿ, ವಿಶೇಷವಾಗಿ ಬೈಬಲ್‌ ತತ್ವಗಳು ಒಳಗೊಂಡಿರುವಲ್ಲಿ. ವಿಷಯಗಳನ್ನು ಶಾಂತಚಿತ್ತರಾಗಿ ತೂಗಿನೋಡಿ, ಅನಂತರ ನಿಮ್ಮ ಹೆತ್ತವರನ್ನು ಸಮೀಪಿಸಿರಿ. ‘ಅಪ್ಪ, ನಾನೇನು ಮಾಡಬೇಕು?’ ಅಥವಾ ‘ಅಮ್ಮ, ನೀವೇನು ಮಾಡುವಿರಿ?’ ಎಂದು ಹೇಳುವ ಬದಲು, ಪರಿಸ್ಥಿತಿಯನ್ನು ವಿವರಿಸಿರಿ. ನೀವು ಪರಿಸ್ಥಿತಿಯ ಕುರಿತಾಗಿ ವಿವೇಚಿಸಿರುವ ವಿಧವನ್ನು ಅವರು ಕೇಳಿಸಿಕೊಳ್ಳಲಿ. ಅನಂತರ ಅವರ ಅಭಿಪ್ರಾಯೋಕ್ತಿಗಳಿಗಾಗಿ ಕೇಳಿರಿ.

ನೀವು ಒಬ್ಬ ಮಗುವಿನೋಪಾದಿ ಅಲ್ಲ, ಬದಲಾಗಿ ಒಬ್ಬ ವಯಸ್ಕರೋಪಾದಿ ಮಾತಾಡುತ್ತಿರುವುದನ್ನು ನಿಮ್ಮ ಹೆತ್ತವರು ಈಗ ನೋಡುತ್ತಾರೆ. ನೀವು ಸ್ವಲ್ಪಮಟ್ಟಿಗಿನ ಸ್ವಾತಂತ್ರ್ಯಕ್ಕೆ ಅರ್ಹರಾಗಿರುವ ಒಬ್ಬ ವಯಸ್ಕರಾಗಿ ಪರಿಣಮಿಸುತ್ತಿದ್ದೀರೆಂದು ರುಜುಪಡಿಸುವುದರ ಕಡೆಗೆ ನೀವು ಒಂದು ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡಿದ್ದೀರಿ. ನಿಮ್ಮ ಹೆತ್ತವರು ನಿಮ್ಮನ್ನು ಒಬ್ಬ ವಯಸ್ಕರೋಪಾದಿ ಉಪಚರಿಸಲು ಆರಂಭಿಸಬಹುದು.

ಚರ್ಚೆಗಾಗಿ ಪ್ರಶ್ನೆಗಳು

◻ ತಮ್ಮ ಮಕ್ಕಳನ್ನು ಸಂರಕ್ಷಿಸುವುದರ ಕುರಿತಾಗಿ ಮತ್ತು ಅವರು ಎಲ್ಲಿರುತ್ತಾರೆಂಬುದರ ಕುರಿತಾಗಿ ಹೆತ್ತವರು ಅನೇಕ ವೇಳೆ ತುಂಬ ಚಿಂತಿತರಾಗಿರುತ್ತಾರೇಕೆ?

◻ ನೀವು ನಿಮ್ಮ ಹೆತ್ತವರನ್ನು ಗೌರವದಿಂದ ಉಪಚರಿಸುವುದು ಏಕೆ ಪ್ರಾಮುಖ್ಯ?

◻ ನಿಮ್ಮ ಹೆತ್ತವರೊಂದಿಗಿನ ತಪ್ಪುತಿಳಿವಳಿಕೆಗಳು ಅತ್ಯುತ್ತಮವಾಗಿ ಹೇಗೆ ನಿರ್ವಹಿಸಲ್ಪಡಬಲ್ಲವು?

◻ ನಿಮ್ಮ ಹೆತ್ತವರ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಸಹಕರಿಸಿಯೂ, ನೀವು ಇನ್ನೂ ಸ್ವಲ್ಪ ಸ್ವಾತಂತ್ರ್ಯವನ್ನು ಹೇಗೆ ಹೊಂದಬಲ್ಲಿರಿ?

◻ ನೀವು ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದೀರೆಂಬುದನ್ನು ನಿಮ್ಮ ಹೆತ್ತವರಿಗೆ ನೀವು ರುಜುಪಡಿಸಸಾಧ್ಯವಿರುವ ಕೆಲವು ವಿಧಗಳು ಯಾವುವು?

[ಪುಟ 29 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಾನು ಎಲ್ಲಿದ್ದೇನೆ, ಎಷ್ಟು ಗಂಟೆಗೆ ಮನೆಯಲ್ಲಿರುವೆನೆಂಬುದನ್ನು ನನ್ನ ಅಪ್ಪ ಯಾವಾಗಲೂ ತಿಳಿಯಬಯಸುತ್ತಾರೆ. . . . ಅವರು ಪ್ರತಿಯೊಂದು ವಿಷಯವನ್ನೂ ತಿಳಿಯಲೇಬೇಕೆಂದಿದೆಯೊ?”

[ಪುಟ 27 ರಲ್ಲಿರುವ ಚಿತ್ರ]

ನಿಮ್ಮ ಹೆತ್ತವರು ನಿಮ್ಮನ್ನು ಬೇಲಿಯೊಳಗೆ ಇಡುತ್ತಿದ್ದಾರೆಂದು ನಿಮಗನಿಸುತ್ತದೊ?

[ಪುಟ 30 ರಲ್ಲಿರುವ ಚಿತ್ರ]

ತಪ್ಪುತಿಳಿವಳಿಕೆಗಳು ಸಂಭವಿಸಿರುವಾಗ ಶಾಂತಚಿತ್ತರಾಗಿ ಉಳಿಯುವುದು, ಗೌರವವನ್ನು ಸಂಪಾದಿಸಿಕೊಳ್ಳುವ ಒಂದು ವಿಧವಾಗಿದೆ