ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಹೆತ್ತವರು ನನ್ನನ್ನು ಏಕೆ ಅರ್ಥಮಾಡಿಕೊಳ್ಳುವುದಿಲ್ಲ?

ನನ್ನ ಹೆತ್ತವರು ನನ್ನನ್ನು ಏಕೆ ಅರ್ಥಮಾಡಿಕೊಳ್ಳುವುದಿಲ್ಲ?

ಅಧ್ಯಾಯ 2

ನನ್ನ ಹೆತ್ತವರು ನನ್ನನ್ನು ಏಕೆ ಅರ್ಥಮಾಡಿಕೊಳ್ಳುವುದಿಲ್ಲ?

ಅರ್ಥಮಾಡಿಕೊಳ್ಳಲ್ಪಡಬೇಕೆಂದು ಬಯಸುವುದು ಮಾನವ ಪ್ರಕೃತಿಯಾಗಿದೆ. ಮತ್ತು ನೀವು ಪ್ರೀತಿಸುವ ಅಥವಾ ಪ್ರಾಮುಖ್ಯವೆಂದು ಎಣಿಸುವ ವಿಷಯಗಳ ಕುರಿತು ನಿಮ್ಮ ಹೆತ್ತವರು ಟೀಕಾತ್ಮಕರಾಗಿರುವುದಾದರೆ ಅಥವಾ ಆಸಕ್ತಿಯಿಲ್ಲದವರಾಗಿರುವುದಾದರೆ, ನಿಮಗೆ ತುಂಬ ಆಶಾಭಂಗವಾಗಬಹುದು.

ಸಂಗೀತದ ತನ್ನ ಆಯ್ಕೆಯನ್ನು ತನ್ನ ತಂದೆ ಅರ್ಥಮಾಡಿಕೊಳ್ಳುವುದಿಲ್ಲವೆಂದು ಹದಿನಾರು ವರ್ಷ ಪ್ರಾಯದ ರಾಬರ್ಟ್‌ ಭಾವಿಸುತ್ತಾನೆ. “ಅವರು ಕಿರಿಚುತ್ತಾ ‘ಅದನ್ನು ಆಫ್‌ ಮಾಡಿಬಿಡು!’ ಎಂದು ಹೇಳುತ್ತಾರೆ ಅಷ್ಟೇ” ಅಂದನು ರಾಬರ್ಟ್‌. “ಆದುದರಿಂದ ನಾನು ಅದನ್ನು ಮತ್ತು ಅವರನ್ನು ಆಫ್‌ ಮಾಡಿಬಿಡುತ್ತೇನೆ.” ಹೆತ್ತವರ ಅರ್ಥಮಾಡಿಕೊಳ್ಳುವಿಕೆಯಲ್ಲಿ ಕೊರತೆಯಿರುವಂತೆ ತೋರುವಾಗ, ಅನೇಕ ಯುವ ಜನರು ಅದೇ ರೀತಿಯಲ್ಲಿ ಭಾವನಾತ್ಮಕವಾಗಿ ತಮ್ಮ ಸ್ವಂತ ಖಾಸಗಿ ಲೋಕಕ್ಕೆ ಹಿಂದೆರಳುತ್ತಾರೆ. ಯುವ ಜನರ ಕುರಿತಾದ ಒಂದು ವಿಸ್ತೃತ ಅಧ್ಯಯನದಲ್ಲಿ, ಸಮೀಕ್ಷೆ ಮಾಡಲ್ಪಟ್ಟ ಯುವ ಜನರಲ್ಲಿ 26 ಪ್ರತಿಶತ ಮಂದಿ, “ನಾನು ಹೆಚ್ಚಿನ ಸಮಯ ಮನೆಯಿಂದ ಹೊರಗಿರಲು ಪ್ರಯತ್ನಿಸುತ್ತೇನೆ” ಎಂದು ಒಪ್ಪಿಕೊಂಡರು.

ಹೀಗೆ ಯುವ ಜನರ ಮತ್ತು ಹೆತ್ತವರ ನಡುವಿನ ಒಂದು ದೊಡ್ಡ ಬಿರುಕು, ಅಥವಾ ಅಂತರವು ಅನೇಕ ಮನೆಗಳಲ್ಲಿ ಅಸ್ತಿತ್ವದಲ್ಲಿದೆ. ಅದನ್ನು ಯಾವುದು ಉಂಟುಮಾಡುತ್ತದೆ?

“ತಲೆನರೆತ”ಕ್ಕೆ ಪ್ರತಿಯಾಗಿ “ಶಕ್ತಿ”

ಜ್ಞಾನೋಕ್ತಿ 20:29 ತಿಳಿಸುವುದು: “ಯುವಕರಿಗೆ [ಅಥವಾ ಯುವತಿಯರಿಗೆ] ಬಲವು [“ಶಕ್ತಿಯು,” NW] ಭೂಷಣ.” ಈ ಬಲ, ಅಥವಾ “ಶಕ್ತಿ”ಯಾದರೊ ನಿಮ್ಮ ಮತ್ತು ನಿಮ್ಮ ಹೆತ್ತವರ ನಡುವಿನ ಎಲ್ಲಾ ವಿಧದ ಘರ್ಷಣೆಗಳಿಗೆ ತಳಪಾಯವನ್ನು ಹಾಕಸಾಧ್ಯವಿದೆ. ಜ್ಞಾನೋಕ್ತಿಯು ಮುಂದುವರಿಸುವುದು: “ಮುದುಕರಿಗೆ ನರೆಯು [“ತಲೆನರೆತವು,” NW] ಒಡವೆ.” ನಿಮ್ಮ ಹೆತ್ತವರು ಅಕ್ಷರಾರ್ಥಕವಾಗಿ ‘ತಲೆನರೆತವರು’ ಆಗಿರಲಿಕ್ಕಿಲ್ಲ, ಆದರೆ ಅವರು ಹಿರಿಯರೂ ಜೀವನವನ್ನು ಭಿನ್ನವಾಗಿ ವೀಕ್ಷಿಸುವ ಪ್ರವೃತ್ತಿಯುಳ್ಳವರೂ ಆಗಿದ್ದಾರೆ. ಜೀವಿತದಲ್ಲಿನ ಪ್ರತಿಯೊಂದು ಸನ್ನಿವೇಶಕ್ಕೆ ಒಂದು ಸುಖಾಂತ್ಯವಿರುವುದಿಲ್ಲವೆಂಬುದನ್ನು ಅವರು ಗ್ರಹಿಸುತ್ತಾರೆ. ವೈಯಕ್ತಿಕವಾದ ಕಹಿ ಅನುಭವವು, ಯುವ ಜನರೋಪಾದಿ ಒಂದು ಕಾಲದಲ್ಲಿ ಅವರಿಗಿದ್ದಂತಹ ಆದರ್ಶ ಭಾವನಾವಾದವನ್ನು ತಗ್ಗಿಸಿರಬಹುದು. ಅನುಭವದಿಂದ—“ತಲೆನರೆತ”ವೊ ಎಂಬಂತೆ—ಜನ್ಮತಳೆದ ಈ ವಿವೇಕದಿಂದಾಗಿ, ನಿರ್ದಿಷ್ಟ ವಿಷಯಗಳ ಕುರಿತಾದ ನಿಮ್ಮ ಉತ್ಸಾಹದಲ್ಲಿ ಅವರು ಪಾಲಿಗರಾಗದಿರಬಹುದು.

ಯುವ ಜಿಮ್‌ ಹೇಳುವುದು: “ಪ್ರಾಮುಖ್ಯ ವಸ್ತುಗಳನ್ನು ಖರೀದಿಸಲು ಅಥವಾ ಅವುಗಳಿಗಾಗಿ ಖರ್ಚುಮಾಡಲು ಹಣವು ಉಳಿಸಲ್ಪಡಬೇಕೆಂದು ನನ್ನ ಹೆತ್ತವರಿಗೆ (ಆರ್ಥಿಕ ಕುಸಿತದ ಶಕದ ಮಕ್ಕಳು) ಅನಿಸುತ್ತದೆ. ಆದರೆ ನಾನು ಈಗಲೂ ಜೀವಿಸುತ್ತಾ ಇದ್ದೇನೆ. . . . ನನಗೆ ತುಂಬ ಪ್ರಯಾಣಿಸಬೇಕೆಂಬ ಬಯಕೆಯಿದೆ.” ಹೌದು, ಒಬ್ಬನ ಯೌವನಭರಿತ “ಶಕ್ತಿ” ಮತ್ತು ಒಬ್ಬನ ಹೆತ್ತವರ “ತಲೆನರೆತ”ದ ನಡುವೆ ಒಂದು ದೊಡ್ಡ ಅಂತರವಿರಬಹುದು. ಹೀಗಿರುವುದರಿಂದ ಅನೇಕ ಕುಟುಂಬಗಳು, ಉಡುಪು ಮತ್ತು ಕೇಶಶೈಲಿ, ವಿರುದ್ಧಲಿಂಗಜಾತಿಯವರೊಂದಿಗಿನ ನಡವಳಿಕೆ, ಅಮಲೌಷಧ ಮತ್ತು ಮದ್ಯಸಾರದ ಉಪಯೋಗ, ಮನೆಗೆ ಹಿಂದಿರುಗಬೇಕಾದ ಸಮಯಗಳು, ಸಹವಾಸಿಗಳು, ಮತ್ತು ಮನೆಕೆಲಸಗಳಂತಹ ವಿವಾದಾಂಶಗಳ ಕಾರಣದಿಂದಾಗಿ ನಿರ್ದಯವಾಗಿ ವಿಭಾಗಿತವಾಗಿವೆ. ಈ ಸಂತತಿ ಅಂತರವನ್ನು ಜೋಡಿಸಲು ಸಾಧ್ಯವಿದೆ. ಆದರೆ ನಿಮ್ಮ ಹೆತ್ತವರು ನಿಮ್ಮನ್ನು ಅರ್ಥಮಾಡಿಕೊಳ್ಳುವಂತೆ ನೀವು ನಿರೀಕ್ಷಿಸುವ ಮುಂಚೆ, ನೀವು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.

ಹೆತ್ತವರು ಕೂಡ ಮನುಷ್ಯರೇ

“ನಾನು ಎಳೆಯವನಾಗಿದ್ದಾಗ, ಅಮ್ಮ ‘ಪರಿಪೂರ್ಣ’ರಾಗಿದ್ದರೆಂದು ಮತ್ತು ನನಗಿದ್ದಂತಹ ಯಾವುದೇ ರೀತಿಯ ಬಲಹೀನತೆಗಳು ಮತ್ತು ಭಾವನೆಗಳು ಅವರಿಗಿರಲಿಲ್ಲವೆಂದು ನನಗೆ ಸ್ವಾಭಾವಿಕವಾಗಿ ಅನಿಸಿತು” ಅನ್ನುತ್ತಾನೆ ಜಾನ್‌. ಅನಂತರ ಅವನ ಹೆತ್ತವರು ವಿವಾಹ ವಿಚ್ಛೇದನ ಪಡೆದುಕೊಂಡು, ಅವನ ತಾಯಿ ಏಳು ಮಕ್ಕಳನ್ನು ಒಬ್ಬರೇ ಪರಾಮರಿಸುವಂತೆ ಬಿಡಲ್ಪಟ್ಟರು. ಜಾನ್‌ನ ಸಹೋದರಿ ಏಪ್ರಿಲ್‌ ಜ್ಞಾಪಿಸಿಕೊಳ್ಳುವುದು: “ಎಲ್ಲವನ್ನು ಸಮಯದಲ್ಲಿ ಮಾಡಿ ಮುಗಿಸಲು ಪ್ರಯತ್ನಿಸುವುದರಿಂದ ಫಲಿಸುವ ಆಶಾಭಂಗದಿಂದಾಗಿ ಅವರು ಅಳುತ್ತಿರುವುದನ್ನು ನೋಡಿದ ನೆನಪು ನನಗಿದೆ. ನಮಗೆ ಒಂದು ತಪ್ಪಾದ ದೃಷ್ಟಿಕೋನವಿತ್ತೆಂಬುದನ್ನು ನಾನು ಆಗ ಗ್ರಹಿಸಿದೆ. ಅವರು ಯಾವಾಗಲೂ ಎಲ್ಲವನ್ನೂ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಮಾಡಲಾರರು. ಅವರಿಗೂ ಭಾವನೆಗಳಿದ್ದವು ಮತ್ತು ಅವರೂ ಮನುಷ್ಯರಾಗಿದ್ದರೆಂಬುದನ್ನು ನಾವು ನೋಡಿದೆವು.”

ನಿಮ್ಮ ಹೆತ್ತವರು ನಿಮಗಿರುವಂತಹದ್ದೇ ಭಾವನೆಗಳಿರುವ ಮನುಷ್ಯರಾಗಿದ್ದಾರೆಂಬುದನ್ನು ಅಂಗೀಕರಿಸುವುದು, ನೀವು ಅವರನ್ನು ಅರ್ಥಮಾಡಿಕೊಳ್ಳುವುದರ ಕಡೆಗೆ ಒಂದು ದೊಡ್ಡ ಹೆಜ್ಜೆಯಾಗಿದೆ. ಉದಾಹರಣೆಗಾಗಿ, ನಿಮ್ಮನ್ನು ಯೋಗ್ಯವಾಗಿ ಪಾಲನೆಮಾಡುವ ತಮ್ಮ ಸಾಮರ್ಥ್ಯದ ಕುರಿತಾಗಿ ಅವರಿಗೆ ತುಂಬ ಅನಿಶ್ಚಿತ ಭಾವನೆಯಿರಬಹುದು. ಅಥವಾ, ನೀವು ಎದುರಿಸುವ ಎಲ್ಲಾ ನೈತಿಕ ಅಪಾಯಗಳು ಮತ್ತು ದುಷ್ಪ್ರೇರಣೆಗಳಿಂದ ಭಾವಪರವಶರಾಗಿ, ಅವರು ಕೆಲವೊಮ್ಮೆ ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸುವ ಪ್ರವೃತ್ತಿಯವರಾಗಬಹುದು. ಅವರು ಶಾರೀರಿಕ, ಆರ್ಥಿಕ, ಅಥವಾ ಭಾವನಾತ್ಮಕ ಕಷ್ಟಗಳೊಂದಿಗೆ ಹೋರಾಡುತ್ತಿರಲೂಬಹುದು. ದೃಷ್ಟಾಂತಕ್ಕಾಗಿ, ಒಬ್ಬ ತಂದೆಯು ತನ್ನ ಉದ್ಯೋಗವನ್ನು ಇಷ್ಟಪಡದಿರಬಹುದು ಆದರೆ ಅದರ ಕುರಿತಾಗಿ ಎಂದೂ ದೂರಲಿಕ್ಕಿಲ್ಲ. ಹೀಗಿರುವುದರಿಂದ ಮಗನು “ನನಗೆ ಶಾಲೆ ಇಷ್ಟವಿಲ್ಲ” ಎಂದು ಹೇಳುವಾಗ ಅವನು ಸಹಾನುಭೂತಿಯಿಂದ ಪ್ರತಿಕ್ರಿಯಿಸುವ ಬದಲಿಗೆ, “ನಿನಗೇನಾಗಿದೆ? ನಿಮಗೆ ಮಕ್ಕಳಿಗೆ ತುಂಬ ಸುಲಭದ ಜೀವನ!” ಎಂಬ ಚುಚ್ಚುವ ಉತ್ತರವನ್ನು ಕೊಡುವುದು ಆಶ್ಚರ್ಯಕರವಲ್ಲ.

“ವೈಯಕ್ತಿಕ ಆಸಕ್ತಿ”ಯನ್ನು ವಹಿಸಿರಿ

ಹಾಗಾದರೆ, ನಿಮ್ಮ ಹೆತ್ತವರಿಗೆ ಹೇಗನಿಸುತ್ತದೆಂಬುದನ್ನು ನೀವು ಹೇಗೆ ಕಂಡುಹಿಡಿಯಸಾಧ್ಯವಿದೆ? “ಕೇವಲ ನಿಮ್ಮ ಸ್ವಂತ ವಿಷಯಗಳ ಮೇಲಿರುವ ವೈಯಕ್ತಿಕ ಆಸಕ್ತಿಯಲ್ಲಲ್ಲ, ಇತರರ ವಿಷಯಗಳ ಮೇಲಿರುವ ವೈಯಕ್ತಿಕ ಆಸಕ್ತಿಯಲ್ಲಿಯೂ ಕಣ್ಣಿ”ಡುವ ಮೂಲಕವೇ. (ಫಿಲಿಪ್ಪಿ 2:4, NW) ನಿಮ್ಮ ತಾಯಿ ಒಬ್ಬ ಹದಿವಯಸ್ಕರಾಗಿದ್ದಾಗ ಹೇಗಿದ್ದರೆಂಬುದನ್ನು ಅವರಲ್ಲಿ ಕೇಳಲು ಪ್ರಯತ್ನಿಸಿರಿ. ಅವರ ಭಾವನೆಗಳು, ಅವರ ಗುರಿಗಳು ಏನಾಗಿದ್ದವು? “ಅವರ ಭಾವನೆಗಳ ವಿಷಯದಲ್ಲಿ ನೀವು ಆಸಕ್ತರಾಗಿದ್ದೀರಿ, ಮತ್ತು ಅವುಗಳಲ್ಲಿ ಕೆಲವೊಂದರ ಕಾರಣಗಳ ಅರಿವುಳ್ಳವರಾಗಿದ್ದೀರಿ ಎಂದು ಅವರಿಗೆ ಅನಿಸುವಲ್ಲಿ, ಅವರು ನಿಮ್ಮ ಭಾವನೆಗಳ ಕುರಿತಾಗಿ ಹೆಚ್ಚು ಅರಿವುಳ್ಳವರಾಗಿರಲು ಪ್ರಯತ್ನಿಸುವ ಸಂಭವಗಳಿವೆ” ಎಂದು ಟೀನ್‌ ಪತ್ರಿಕೆಯು ಹೇಳಿತು. ನಿಸ್ಸಂದೇಹವಾಗಿ ಇದು ನಿಮ್ಮ ತಂದೆಯ ವಿಷಯದಲ್ಲಿಯೂ ಸತ್ಯವಾಗಿರಬಹುದು.

ಘರ್ಷಣೆಯೊಂದು ಏಳುವಲ್ಲಿ, ನಿಮ್ಮ ಹೆತ್ತವರು ಭಾವಶೂನ್ಯರಾಗಿದ್ದಾರೆಂದು ಅವರನ್ನು ಆ ಕೂಡಲೇ ಆಪಾದಿಸಬೇಡಿರಿ. ನಿಮ್ಮನ್ನೇ ಕೇಳಿಕೊಳ್ಳಿರಿ: ‘ನನ್ನ ಹೆತ್ತವರಿಗೆ ಸೌಖ್ಯವಿರಲಿಲ್ಲವೊ ಅಥವಾ ಯಾವುದೊ ವಿಷಯದ ಕುರಿತಾಗಿ ಚಿಂತಿತರಾಗಿದ್ದರೊ? ನನ್ನ ವತಿಯಿಂದ ಗೈದ ಯಾವುದೊ ವಿಚಾರಹೀನ ಕೃತ್ಯ ಅಥವಾ ಮಾತಿನಿಂದಾಗಿ ಅವರು ನೊಂದಿರಬಹುದೊ? ನನ್ನ ಉದ್ದೇಶವನ್ನು ಅವರು ತಪ್ಪಾಗಿ ಗ್ರಹಿಸಿಕೊಳ್ಳುತ್ತಾರೊ?’ (ಜ್ಞಾನೋಕ್ತಿ 12:18) ಅಂತಹ ಅನುಭೂತಿಯನ್ನು ತೋರಿಸುವುದು, ಆ ಸಂತತಿ ಅಂತರವನ್ನು ಮುಚ್ಚುವುದರಲ್ಲಿ ಒಂದು ಒಳ್ಳೆಯ ಆರಂಭವಾಗಿದೆ. ನಿಮ್ಮ ಹೆತ್ತವರು ನಿಮ್ಮನ್ನು ಅರ್ಥಮಾಡಿಕೊಳ್ಳುವಂತೆ ನೀವು ಈಗ ಕಾರ್ಯನಡಿಸಬಲ್ಲಿರಿ! ಅನೇಕ ಯುವ ಜನರಾದರೊ, ಅದನ್ನು ವಿಪರೀತವಾಗಿ ಕಷ್ಟಕರವಾದದ್ದಾಗಿ ಮಾಡುತ್ತಾರೆ. ಹೇಗೆ?

ಇಬ್ಬಗೆಯ ಜೀವಿತವನ್ನು ನಡೆಸುವುದು

ಹದಿನೇಳು ವರ್ಷ ಪ್ರಾಯದ ವಿಕಿ, ತನ್ನ ಹೆತ್ತವರ ಇಚ್ಛೆಗಳ ವಿರುದ್ಧವಾಗಿ ಒಬ್ಬ ಹುಡುಗನೊಂದಿಗೆ ಗುಪ್ತವಾಗಿ ಡೇಟಿಂಗ್‌ ಮಾಡುವ ಮೂಲಕ ಅದನ್ನೇ ಮಾಡುತ್ತಿದ್ದಳು. ತನ್ನ ಬಾಯ್‌ಫ್ರೆಂಡ್‌ಗಾಗಿ ತನ್ನಲ್ಲಿದ್ದ ಭಾವನೆಗಳನ್ನು ತನ್ನ ಹೆತ್ತವರು ಅರ್ಥವೇ ಮಾಡಿಕೊಳ್ಳಲಾರರು ಎಂದು ಅವಳು ಖಚಿತಳಾಗಿದ್ದಳು. ಸ್ವಾಭಾವಿಕವಾಗಿಯೇ, ಅವಳ ಮತ್ತು ಅವರ ನಡುವಿನ ಅಂತರವು ಅಗಲವಾಯಿತು. “ನಾವು ಒಬ್ಬರು ಇನ್ನೊಬ್ಬರಿಗೆ ಸಂಕಟವನ್ನುಂಟುಮಾಡುತ್ತಿದ್ದೆವು,” ಅನ್ನುತ್ತಾಳೆ ವಿಕಿ. “ನಾನು ಮನೆಗೆ ಹಿಂದಿರುಗಿ ಬರಲು ಇಷ್ಟಪಡುತ್ತಿರಲಿಲ್ಲ.” ಅವಳು ವಿವಾಹವಾಗಲು—ಅದನ್ನಾದರೂ ಮಾಡಿ ಮನೆಬಿಟ್ಟು ಹೋಗಬೇಕೆಂದು—ನಿರ್ಣಯಿಸಿದಳು!

ಅನೇಕ ಯುವ ಜನರು ತದ್ರೀತಿಯಲ್ಲಿ ಇಬ್ಬಗೆಯ ಜೀವಿತಗಳನ್ನು—ತಮ್ಮ ಹೆತ್ತವರಿಗೆ ತಿಳಿದಿರದ ಮತ್ತು ಅವರಿಂದ ನಿಷಿದ್ಧಗೊಳಿಸಲ್ಪಟ್ಟಿರುವ ವಿಷಯಗಳನ್ನು ಮಾಡುವ ಮೂಲಕ—ನಡೆಸುತ್ತಾರೆ, ಮತ್ತು ಅನಂತರ, ತಮ್ಮ ಹೆತ್ತವರು ‘ತಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ’ ಎಂದು ಗೋಳಾಡುತ್ತಾರೆ! ಸಂತೋಷಕರವಾಗಿ, ಒಬ್ಬ ಪ್ರಾಯಸ್ಥ ಕ್ರೈಸ್ತ ಸಹೋದರಿಯು ವಿಕಿಗೆ ಸಹಾಯ ಮಾಡಿದಳು. ಅವಳು ವಿಕಿಗೆ ಹೇಳಿದ್ದು: “ವಿಕಿ, ನಿನ್ನ ಹೆತ್ತವರ ಕುರಿತಾಗಿ ಸ್ಪಲ್ಪ ಯೋಚಿಸು . . . ನಿನ್ನನ್ನು ಬೆಳೆಸಿದವರು ಅವರು. ನಿನಗೆ ಈ ಸಂಬಂಧವನ್ನು ನಿರ್ವಹಿಸಲು ಸಾಧ್ಯವಿಲ್ಲದಿದ್ದರೆ, ನಿನ್ನಷ್ಟೇ ವಯಸ್ಸಿನ ಮತ್ತು ನಿನಗೆ 17 ವರ್ಷಗಳ ಪ್ರೀತಿಯನ್ನು ಕೊಟ್ಟಿರದ ಒಬ್ಬನೊಂದಿಗಿನ ಸಂಬಂಧವನ್ನು ನೀನು ಹೇಗೆ ನಿರ್ವಹಿಸುವಿ?”

ವಿಕಿ ತನ್ನೆಡೆಗೆ ಒಂದು ಪ್ರಾಮಾಣಿಕ ನೋಟವನ್ನು ಹರಿಸಿದಳು. ತನ್ನ ಹೆತ್ತವರು ಸರಿಯಾಗಿದ್ದರು ಮತ್ತು ತನ್ನ ಸ್ವಂತ ಹೃದಯವು ತಪ್ಪಾಗಿತ್ತೆಂಬುದನ್ನು ಅವಳು ಬೇಗನೆ ಗ್ರಹಿಸಿದಳು. ಅವಳು ತನ್ನ ಬಾಯ್‌ಫ್ರೆಂಡ್‌ನೊಂದಿಗಿನ ಸಹವಾಸವನ್ನು ಕೊನೆಗೊಳಿಸಿದಳು ಮತ್ತು ತನ್ನ ಹಾಗೂ ತನ್ನ ಹೆತ್ತವರ ನಡುವಿನ ಬಿರುಕನ್ನು ಅವಳು ಮುಚ್ಚಲು ಆರಂಭಿಸಿದಳು. ತದ್ರೀತಿಯಲ್ಲಿ ನೀವು ನಿಮ್ಮ ಜೀವಿತದ ಒಂದು ಪ್ರಮುಖ ಭಾಗವನ್ನು ನಿಮ್ಮ ಹೆತ್ತವರಿಂದ ರಹಸ್ಯವಾಗಿಟ್ಟಿರುವುದಾದರೆ, ಅವರೊಂದಿಗೆ ಪ್ರಾಮಾಣಿಕರಾಗಿರಲು ಇದು ಸಮಯವಲ್ಲವೊ?—“ನನ್ನ ಹೆತ್ತವರಿಗೆ ನಾನು ಹೇಗೆ ಹೇಳಬಲ್ಲೆ?” ಎಂಬ ಪುರವಣಿಯನ್ನು ನೋಡಿರಿ.

ಮಾತಾಡಲು ಸಮಯವನ್ನು ತೆಗೆದುಕೊಳ್ಳಿರಿ

‘ನಾನು ನನ್ನ ಅಪ್ಪನೊಂದಿಗೆ ಕಳೆದ ಸಮಯದಲ್ಲಿಯೇ ಅತ್ಯಂತ ಉತ್ತಮ ಸಮಯವು ಅದಾಗಿತ್ತು!’ ಎಂದು ಜಾನ್‌ ತಾನು ಮತ್ತು ತನ್ನ ತಂದೆ ಜೊತೆಯಾಗಿ ಮಾಡಿದ ಒಂದು ಸಂಚಾರದ ಕುರಿತಾಗಿ ಹೇಳಿದನು. “ನನ್ನ ಇಡೀ ಜೀವನದಲ್ಲಿ ನಾನು ಅವರೊಂದಿಗೆ ಏಕಾಂಗಿಯಾಗಿ ಆರು ತಾಸುಗಳನ್ನು ಕಳೆದಿರಲಿಲ್ಲ. ಹೋಗುವಾಗ ಆರು ತಾಸುಗಳು, ಹಿಂದೆ ಬರುವಾಗ ಆರು ತಾಸುಗಳು. ಕಾರ್‌ ರೇಡಿಯೊ ಇರಲಿಲ್ಲ. ನಾವು ನಿಜವಾಗಿಯೂ ಮಾತಾಡಿದೆವು. ನಾವು ಪರಸ್ಪರವಾಗಿ ಕಂಡುಹಿಡಿದೆವೋ ಎಂಬಂತೆ ಅದಿತ್ತು. ನಾನು ನೆನಸಿದುದಕ್ಕಿಂತಲೂ ಹೆಚ್ಚಿನದ್ದು ಅವರಲ್ಲಿದೆ. ಅದು ನಮ್ಮನ್ನು ಸ್ನೇಹಿತರನ್ನಾಗಿ ಮಾಡಿತು.” ತದ್ರೀತಿಯಲ್ಲಿ ನಿಮ್ಮ ಅಮ್ಮ ಅಥವಾ ಅಪ್ಪನೊಂದಿಗೆ—ಕ್ರಮವಾಗಿ—ಒಂದು ಪಕ್ಕಾ ಮಾತುಕತೆಯನ್ನು ನಡೆಸಲು ಏಕೆ ಪ್ರಯತ್ನಿಸಬಾರದು?

ಇತರ ವಯಸ್ಕರೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವುದೂ ಸಹಾಯಕರವಾಗಿರುತ್ತದೆ. ವಿಕಿ ಜ್ಞಾಪಿಸಿಕೊಳ್ಳುವುದು: “ವೃದ್ಧ ವ್ಯಕ್ತಿಗಳೊಂದಿಗೆ ನನಗೆ ವಿಶ್ವಾಸದ ಸಂಬಂಧವು ಇರಲೇ ಇಲ್ಲ. ಆದರೆ ನನ್ನ ಹೆತ್ತವರು ಇತರ ವಯಸ್ಕರೊಂದಿಗೆ ಜೊತೆಗೂಡಿದಾಗ, ನಾನು ಅವರೊಂದಿಗೆ ಇರುವುದನ್ನು ಒಂದು ಪ್ರಾಮುಖ್ಯ ವಿಷಯವಾಗಿ ಮಾಡಿಕೊಂಡೆ. ಸಮಯಾನಂತರ, ನನ್ನ ಹೆತ್ತವರ ವಯಸ್ಸಿನವರಾಗಿದ್ದವರೊಂದಿಗೆ ನಾನು ಗೆಳೆತನವನ್ನು ವಿಕಸಿಸಿಕೊಂಡೆ, ಮತ್ತು ಇದು ನನಗೆ ಹೆಚ್ಚು ಅಖಂಡವಾದ ಒಂದು ಹೊರನೋಟವನ್ನು ಕೊಟ್ಟಿತು. ನನ್ನ ಹೆತ್ತವರೊಂದಿಗೆ ಸಂಭಾಷಣೆಗಳನ್ನು ನಡೆಸುವುದು ಹೆಚ್ಚು ಸುಲಭವಾಯಿತು. ಮನೆಯಲ್ಲಿನ ವಾತಾವರಣವು ಪರಿಣಾಮಕಾರಿಯಾಗಿ ಉತ್ತಮಗೊಂಡಿತು.”

ನೀವು ನಿಮ್ಮ ಯುವಪ್ರಾಯದ ಸಮಾನಸ್ಥರೊಂದಿಗೆ ಮಾತ್ರ ಜೊತೆಗೂಡುವಲ್ಲಿ, ಜೀವಿತದ ಕುರಿತಾದ ಒಂದು ಸಂಕುಚಿತವಾದ, ಸೀಮಿತ ಹೊರನೋಟವನ್ನು ಸ್ವೀಕರಿಸುವ ಸಾಧ್ಯತೆಯಿರುವುದರಿಂದ, ಅನೇಕ ವರ್ಷಗಳಿಂದ ವಿವೇಕವನ್ನು ಗಳಿಸಿರುವವರೊಂದಿಗೆ ಜೊತೆಗೂಡುವುದು, ಇಂತಹ ಹೊರನೋಟವನ್ನು ಸ್ವೀಕರಿಸುವುದರಿಂದಲೂ ನಿಮ್ಮನ್ನು ತಡೆಗಟ್ಟುವುದು.—ಜ್ಞಾನೋಕ್ತಿ 13:20.

ನಿಮ್ಮ ಭಾವನೆಗಳನ್ನು ತಿಳಿಯಪಡಿಸಿರಿ

“ನಾನು ನೇರವಾಗಿ ನನ್ನ ಹೃದಯದಿಂದ ಮಾತಾಡಿ, ನನ್ನ ತುಟಿಗಳಿಂದ ಬರುವ ಜ್ಞಾನವನ್ನು ಪ್ರಾಮಾಣಿಕವಾಗಿ ನುಡಿಯುತ್ತೇನೆ,” ಅಂದನು ಯುವ ಎಲೀಹು. (ಯೋಬ 33:3, ದ ಹೋಲಿ ಬೈಬಲ್‌ ಇನ್‌ ದ ಲ್ಯಾಂಗ್ವೇಜ್‌ ಆಫ್‌ ಟುಡೇ, ವಿಲ್ಯಮ್‌ ಬೆಕ್‌ರಿಂದ) ಬಟ್ಟೆಬರೆ, ಮನೆಗೆ ಹಿಂದಿರುಗಬೇಕಾದ ಸಮಯ ಅಥವಾ ಸಂಗೀತದಂತಹ ವಿಷಯಗಳ ಕುರಿತಾಗಿ ನಿಮಗೆ ವಿರುದ್ಧಾಭಿಪ್ರಾಯವಿರುವಾಗ, ನೀವು ನಿಮ್ಮ ಹೆತ್ತವರೊಂದಿಗೆ ಇದೇ ರೀತಿಯಲ್ಲಿ ಮಾತಾಡುತ್ತೀರೊ?

ತನ್ನ ಅಮ್ಮ ಪೂರ್ತಿಯಾಗಿ ವಿವೇಚನಾಹೀನರೆಂದು ಯುವ ಗ್ರೆಗರಿಗೆ ಅನಿಸಿತು. ತನ್ನಿಂದ ಸಾಧ್ಯವಿರುವಷ್ಟು ಹೆಚ್ಚು ಸಮಯ ಮನೆಯಿಂದ ಹೊರಗಿರುವ ಮೂಲಕ, ಭಾವೋದ್ರೇಕದ ಘರ್ಷಣೆಯನ್ನು ಅವನು ನಿಭಾಯಿಸಿದನು. ಆದರೆ ಅನಂತರ ಅವನು ಕೆಲವು ಕ್ರೈಸ್ತ ಹಿರಿಯರ ಸಲಹೆಗನುಸಾರ ಕ್ರಿಯೆಗೈದನು. ಅವನು ಹೇಳುವುದು, “ನನಗೆ ಹೇಗನಿಸಿತೆಂಬುದನ್ನು ನಾನು ಅಮ್ಮನಿಗೆ ಹೇಳಲಾರಂಭಿಸಿದೆ. ಅವರಿಗೆ ತಿಳಿದಿದೆಯೆಂದು ಕೇವಲ ಊಹಿಸಿಕೊಳ್ಳದೆ, ನಾನು ಏಕೆ ಆ ಸಂಗತಿಗಳನ್ನು ಮಾಡಲು ಬಯಸಿದೆನೆಂದು ನಾನು ಅವರಿಗೆ ತಿಳಿಸಿದೆ. ಅನೇಕ ವೇಳೆ ನಾನು ಮನಬಿಚ್ಚಿ ಮಾತಾಡಿ, ನಾನು ಯಾವುದೇ ತಪ್ಪನ್ನು ಮಾಡಲು ಪ್ರಯತ್ನಿಸುತ್ತಿರಲಿಲ್ಲವೆಂಬುದನ್ನು ಮತ್ತು ಅವರು ನನ್ನನ್ನು ಒಂದು ಚಿಕ್ಕ ಮಗುವಿನೋಪಾದಿ ಉಪಚರಿಸುತ್ತಿದ್ದುದರಿಂದ ನನಗೆಷ್ಟು ಕೆಡುಕೆನಿಸುತ್ತಿತ್ತೆಂಬುದನ್ನು ವಿವರಿಸಿದೆ. ಆಗ ಅವರು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು ಮತ್ತು ನಿಧಾನವಾಗಿ ಪರಿಸ್ಥಿತಿಯು ತುಂಬ ಉತ್ತಮಗೊಂಡಿತು.”

‘ನೇರವಾಗಿ ಹೃದಯದಿಂದ’ ಮಾತಾಡುವುದು, ಅನೇಕ ತಪ್ಪುತಿಳಿವಳಿಕೆಗಳನ್ನು ಬಗೆಹರಿಸಲು ಸಹಾಯ ಮಾಡಸಾಧ್ಯವಿದೆಯೆಂಬುದನ್ನು ನೀವೂ ತದ್ರೀತಿಯಲ್ಲಿ ಕಂಡುಕೊಳ್ಳಬಹುದು.

ಭಿನ್ನಾಭಿಪ್ರಾಯಗಳನ್ನು ನಿರ್ವಹಿಸುವುದು

ಆದಾಗಲೂ, ನಿಮ್ಮ ಹೆತ್ತವರು ತತ್‌ಕ್ಷಣವೇ ವಿಷಯಗಳನ್ನು ನೀವು ವೀಕ್ಷಿಸುವ ರೀತಿಯಲ್ಲಿ ವೀಕ್ಷಿಸಲಾರಂಭಿಸುವರೆಂಬುದು ಇದರ ಅರ್ಥವಲ್ಲ. ಆದುದರಿಂದ ನೀವು ನಿಮ್ಮ ಭಾವನೆಗಳ ಮೇಲೆ ಬಲವಾದ ಹಿಡಿತವನ್ನಿಡಬೇಕು. “ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು; ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.” (ಜ್ಞಾನೋಕ್ತಿ 29:11) ನಿಮ್ಮ ದೃಷ್ಟಿಕೋನದ ಶ್ರೇಷ್ಠತೆಗಳನ್ನು ಶಾಂತಚಿತ್ತರಾಗಿ ಚರ್ಚಿಸಿರಿ. “ಇತರರೆಲ್ಲರೂ ಅದನ್ನು ಮಾಡುತ್ತಾರೆ!” ಎಂದು ವಾದಿಸುವ ಬದಲಿಗೆ, ವಿವಾದಾಂಶಗಳಿಗೆ ಅಂಟಿಕೊಳ್ಳಿರಿ.

ಕೆಲವೊಮ್ಮೆ ನಿಮ್ಮ ಹೆತ್ತವರು ಇಲ್ಲ ಎಂದು ಹೇಳುವರು. ಅವರು ನಿಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂಬುದನ್ನು ಇದು ಅರ್ಥೈಸುವುದಿಲ್ಲ. ಅವರು ಕೇವಲ ವಿಪತ್ತನ್ನು ತಡೆಯಲು ಬಯಸುತ್ತಿರಬಹುದು. “ನನ್ನ ತಾಯಿ ನನ್ನ ವಿಷಯದಲ್ಲಿ ಕಟ್ಟುನಿಟ್ಟಾಗಿದ್ದಾರೆ,” ಎಂದು 16 ವರ್ಷ ಪ್ರಾಯದ ಒಬ್ಬ ಹುಡುಗಿ ಒಪ್ಪಿಕೊಳ್ಳುತ್ತಾಳೆ. “ನನಗೆ ಇಷ್ಟವಾಗುವಂತಹ ಯಾವುದೊ ಒಂದು ವಿಷಯವನ್ನು ನಾನು ಮಾಡಸಾಧ್ಯವಿಲ್ಲವೆಂದು, ಅಥವಾ ಒಂದು ನಿರ್ದಿಷ್ಟ ಸಮಯದೊಳಗೆ [ನಾನು] ಮನೆಯೊಳಗಿರಬೇಕೆಂದು ಅವರು ಹೇಳುವುದು ನನ್ನನ್ನು ಕಿರಿಕಿರಿಗೊಳಿಸುತ್ತದೆ. ಆದರೆ ಅಂತರಂಗದಲ್ಲಿ, ಅವರು ನಿಜವಾಗಿ ಕಾಳಜಿವಹಿಸುತ್ತಾರೆ. . . . ಅವರು ನನಗಾಗಿ ಎದುರುನೋಡುತ್ತಿರುತ್ತಾರೆ.”

ಪರಸ್ಪರ ಅರ್ಥಮಾಡಿಕೊಳ್ಳುವಿಕೆಯು ಒಂದು ಕುಟುಂಬಕ್ಕೆ ತರುವ ಸುರಕ್ಷತೆ ಮತ್ತು ಹೃದಯೋಲ್ಲಾಸವನ್ನು ಮಾತುಗಳಲ್ಲಿ ಹೇಳಲಾಗದು. ಅದು ಮನೆಯನ್ನು, ಸಂಕಷ್ಟದ ಸಮಯಗಳಲ್ಲಿ ಒಂದು ಆಶ್ರಯವನ್ನಾಗಿ ಮಾಡುತ್ತದೆ. ಆದರೆ ಒಳಗೂಡಿರುವವರೆಲ್ಲರ ವತಿಯಿಂದ ನಿಜವಾದ ಪ್ರಯತ್ನವು ಅಗತ್ಯ.

ಚರ್ಚೆಗಾಗಿ ಪ್ರಶ್ನೆಗಳು

◻ ಯುವ ಜನರು ಮತ್ತು ಹೆತ್ತವರು ಅನೇಕ ವೇಳೆ ಏಕೆ ಘರ್ಷಿಸುತ್ತಾರೆ?

◻ ನಿಮ್ಮ ಹೆತ್ತವರ ಕುರಿತಾದ ಹೆಚ್ಚು ಉತ್ತಮವಾದ ತಿಳಿವಳಿಕೆಯು, ಅವರ ಕುರಿತಾದ ನಿಮ್ಮ ನೋಟವನ್ನು ಹೇಗೆ ಪ್ರಭಾವಿಸಬಹುದು?

◻ ನೀವು ನಿಮ್ಮ ಹೆತ್ತವರನ್ನು ಹೆಚ್ಚು ಉತ್ತಮವಾಗಿ ಹೇಗೆ ಅರ್ಥಮಾಡಿಕೊಳ್ಳಬಲ್ಲಿರಿ?

◻ ಇಬ್ಬಗೆಯ ಜೀವಿತವೊಂದನ್ನು ನಡೆಸುವುದು ನಿಮ್ಮ ಮತ್ತು ನಿಮ್ಮ ಹೆತ್ತವರ ನಡುವಿನ ಬಿರುಕನ್ನು ಆಳಗೊಳಿಸುವುದೇಕೆ?

◻ ನಿಮಗೆ ಗಂಭೀರವಾದ ಸಮಸ್ಯೆಗಳಿರುವಾಗ ನಿಮ್ಮ ಹೆತ್ತವರಿಗೆ ತಿಳಿಯಪಡಿಸುವುದು ಏಕೆ ಅತ್ಯುತ್ತಮ? ನೀವು ಅವರಿಗೆ ಹೇಗೆ ಹೇಳಬಲ್ಲಿರಿ?

◻ ನಿಮ್ಮ ಹೆತ್ತವರು ನಿಮ್ಮನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವಂತೆ ನೀವು ಹೇಗೆ ಸಹಾಯ ಮಾಡಬಲ್ಲಿರಿ?

[ಪುಟ 22 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಅವರ ಭಾವನೆಗಳ ವಿಷಯದಲ್ಲಿ ನೀವು ಆಸಕ್ತರಾಗಿದ್ದೀರಿ, ಮತ್ತು ಅವುಗಳ ಕಾರಣಗಳ ಅರಿವುಳ್ಳವರಾಗಿದ್ದೀರಿ ಎಂದು ಅವರಿಗೆ [ನಿಮ್ಮ ತಾಯಿಗೆ] ಅನಿಸುವಲ್ಲಿ, ಅವರು ನಿಮ್ಮ ಭಾವನೆಗಳ ಕುರಿತಾಗಿ ಹೆಚ್ಚು ಅರಿವುಳ್ಳವರಾಗಿರಲು ಪ್ರಯತ್ನಿಸುವ”ರು.—ಟೀನ್‌ ಪತ್ರಿಕೆ

[ಪುಟ 20,21ರಲ್ಲಿರುವಚೌಕ]

ನನ್ನ ಹೆತ್ತವರಿಗೆ ನಾನು ಹೇಗೆ ಹೇಳಬಲ್ಲೆ?

ನಿಮ್ಮ ಹೆತ್ತವರಿಗೆ ಒಂದು ತಪ್ಪನ್ನು ನಿವೇದಿಸಿಕೊಳ್ಳುವ ಕೆಲಸವು ಹಿತಕರವಾಗಿರುವುದಿಲ್ಲ. ಯುವ ವಿನ್ಸ್‌ ಹೇಳುವುದು: “ನನ್ನ ಹೆತ್ತವರಿಗೆ ನನ್ನಲ್ಲಿ ತುಂಬ ವಿಶ್ವಾಸವಿತ್ತೆಂಬುದನ್ನು ನಾನು ಯಾವಾಗಲೂ ಗ್ರಹಿಸಿದೆ ಮತ್ತು ನಾನು ಅವರನ್ನು ನೋಯಿಸಲು ಬಯಸದಿದ್ದುದರಿಂದ ಅವರನ್ನು ಸಮೀಪಿಸುವುದನ್ನು ಅದು ನನಗೆ ಕಷ್ಟಕರವನ್ನಾಗಿ ಮಾಡಿತು.”

ತಮ್ಮ ತಪ್ಪುಗಳನ್ನು ಮುಚ್ಚಿಡಲು ಪ್ರಯತ್ನಿಸುವ ಯುವ ಜನರು ಅನೇಕ ವೇಳೆ ಘಾಸಿಗೊಂಡ ಮನಸ್ಸಾಕ್ಷಿಯೊಂದರ ಶೂಲೆಗಳನ್ನು ಅನುಭವಿಸುತ್ತಾರೆ. (ರೋಮಾಪುರ 2:15) ಅವರ ತಪ್ಪುಗಳು, ಹೊರಲು ಭಾರಿ ತೂಕವುಳ್ಳ, ಒಂದು “ಭಾರವಾದ ಹೊರೆ”ಯಾಗಬಲ್ಲವು. (ಕೀರ್ತನೆ 38:4) ಬಹುಮಟ್ಟಿಗೆ ಅನಿವಾರ್ಯವಾಗಿ, ಸುಳ್ಳು ಹೇಳುವ ಮೂಲಕ, ಹೀಗೆ ಇನ್ನೂ ಹೆಚ್ಚಿನ ತಪ್ಪುಗಳನ್ನು ಮಾಡುತ್ತಾ, ತಮ್ಮ ಹೆತ್ತವರನ್ನು ವಂಚಿಸುವಂತೆ ಅವರು ಒತ್ತಾಯಿಸಲ್ಪಡುತ್ತಾರೆ. ಹೀಗೆ ದೇವರೊಂದಿಗಿನ ಅವರ ಸಂಬಂಧವು ಹಾನಿಗೊಳಗಾಗುತ್ತದೆ.

ಬೈಬಲ್‌ ಹೇಳುವುದು: “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.” (ಜ್ಞಾನೋಕ್ತಿ 28:13) 19 ವರ್ಷ ಪ್ರಾಯದ ಬೆಟಿ ಹೇಳುವುದು: “ಯೆಹೋವನು ಹೇಗೂ ಎಲ್ಲವನ್ನೂ ನೋಡುತ್ತಾನೆ.”

ವಿಷಯವು ಗಂಭೀರವಾದ ತಪ್ಪುಗೈಯುವಿಕೆಯನ್ನು ಒಳಗೂಡುವುದಾದರೆ, ನಿಮ್ಮ ತಪ್ಪನ್ನು ಪ್ರಾರ್ಥನೆಯಲ್ಲಿ ನಿವೇದಿಸಿಕೊಳ್ಳುತ್ತಾ, ಯೆಹೋವನ ಕ್ಷಮಾಪಣೆಗಾಗಿ ಪ್ರಯತ್ನಿಸಿರಿ. (ಕೀರ್ತನೆ 62:8) ಅನಂತರ, ನಿಮ್ಮ ಹೆತ್ತವರಿಗೆ ತಿಳಿಸಿರಿ. (ಜ್ಞಾನೋಕ್ತಿ 23:26) ಅವರಿಗೆ ಜೀವನದಲ್ಲಿ ಅನುಭವವಿದೆ ಮತ್ತು ನಿಮ್ಮ ತಪ್ಪುಗಳನ್ನು ಹಿಂದೆಬಿಟ್ಟು ಅವುಗಳನ್ನು ಪುನಃ ಮಾಡುವುದರಿಂದ ದೂರವಿರುವಂತೆ ಅವರು ಅನೇಕ ವೇಳೆ ನಿಮಗೆ ಸಹಾಯ ಮಾಡಬಲ್ಲರು. “ನೀವು ಅದರ ಕುರಿತಾಗಿ ಮಾತಾಡುವುದು ನಿಜವಾಗಿ ಸಹಾಯ ಮಾಡಸಾಧ್ಯವಿದೆ,” ಎಂದು 18 ವರ್ಷ ಪ್ರಾಯದ ಕ್ರಿಸ್‌ ವರದಿಸುತ್ತಾಳೆ. “ಅದನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕುವುದು ಕೊನೆಗೆ ಒಂದು ಉಪಶಮನವಾಗಿರುತ್ತದೆ.” ಸಮಸ್ಯೆಯೇನೆಂದರೆ, ನೀವು ನಿಮ್ಮ ಹೆತ್ತವರಿಗೆ ತಿಳಿಸುವುದು ಹೇಗೆ?

ಬೈಬಲ್‌ “ಸಮಯೋಚಿತವಾದ ಮಾತುಗಳ” ಕುರಿತಾಗಿ ಮಾತಾಡುತ್ತದೆ. (ಜ್ಞಾನೋಕ್ತಿ 25:11; ಹೋಲಿಸಿ ಪ್ರಸಂಗಿ 3:1, 7.) ಅದು ಯಾವಾಗ ಇರಬಹುದು? ಕ್ರಿಸ್‌ ಮುಂದುವರಿಸುವುದು: “ನಾನು ರಾತ್ರಿಯೂಟದ ತನಕ ಕಾದುಕೊಂಡಿದ್ದು, ತದನಂತರ, ನಾನು ನಿಮ್ಮೊಂದಿಗೆ ಮಾತಾಡಬೇಕಾಗಿದೆ ಎಂದು ಅಪ್ಪನಿಗೆ ಹೇಳುತ್ತೇನೆ.” ಒಬ್ಬ ಏಕ ಹೆತ್ತವಳ ಮಗನು ಇನ್ನೊಂದು ಸಮಯವನ್ನು ಉಪಯೋಗಿಸಿದನು: “ನಾನು ಸಾಮಾನ್ಯವಾಗಿ ಅಮ್ಮನೊಂದಿಗೆ ಮಲಗುವ ಸಮಯಕ್ಕೆ ಮುಂಚೆ ಮಾತಾಡುತ್ತಿದ್ದೆ; ಆಗ ಅವರು ಹೆಚ್ಚು ಆರಾಮದಿಂದಿರುತ್ತಿದ್ದರು. ಅವರು ಕೆಲಸದಿಂದ ಮನೆಗೆ ಬಂದಾಗ ಬಿಗಿದಿರುತ್ತಿದ್ದರು.”

ಪ್ರಾಯಶಃ ನೀವು ಹೀಗೇನನ್ನಾದರೂ ಹೇಳಬಹುದು, “ಅಮ್ಮ, ಅಪ್ಪ, ಯಾವುದೊ ಒಂದು ವಿಷಯವು ನನಗೆ ತೊಂದರೆಕೊಡುತ್ತಿದೆ.” ಮತ್ತು ಕಾಳಜಿವಹಿಸಲು ನಿಮ್ಮ ಹೆತ್ತವರು ತೀರ ಕಾರ್ಯಮಗ್ನರಾಗಿರುವಂತೆ ತೋರುವಲ್ಲಿ ಆಗೇನು? ನೀವು ಹೀಗೆ ಹೇಳಬಹುದು, “ನೀವು ಕಾರ್ಯಮಗ್ನರಿದ್ದೀರೆಂದು ನನಗೆ ತಿಳಿದಿದೆ, ಆದರೆ ಯಾವುದೊ ಒಂದು ವಿಷಯವು ನಿಜವಾಗಿಯೂ ನನಗೆ ತೊಂದರೆಕೊಡುತ್ತಿದೆ. ನಾವು ಅದರ ಕುರಿತಾಗಿ ಮಾತಾಡೋಣವೊ?” ಅನಂತರ ನೀವು ಹೀಗೆ ಕೇಳಬಹುದು: “ಯಾವುದರ ಕುರಿತಾಗಿ ಮಾತಾಡಲು ನೀವು ತುಂಬಾ ನಾಚಿಕೆಪಟ್ಟಿರೊ ಅಂತಹ ಒಂದು ವಿಷಯವನ್ನು ನೀವು ಎಂದಾದರೂ ಮಾಡಿದ್ದೀರೊ?”

ಈಗ ಬರುವುದು ಕಠಿನವಾದ ಭಾಗ: ತಪ್ಪಿನ ಕುರಿತಾಗಿಯೇ ನಿಮ್ಮ ಹೆತ್ತವರಿಗೆ ಹೇಳುವುದು. ನಮ್ರರಾಗಿರಿ ಮತ್ತು ನಿಮ್ಮ ದೋಷದ ಗಂಭೀರತೆಯ ತೀಕ್ಷ್ಣತೆಯನ್ನು ಕಡಮೆಮಾಡದೆ ಅಥವಾ ಹೆಚ್ಚು ಅಹಿತಕರವಾದ ವಿವರಗಳನ್ನು ಹೇಳದೆ ಇರಲು ಪ್ರಯತ್ನಿಸದೆ, ‘ಸತ್ಯವನ್ನೇ ಆಡಿರಿ.’ (ಎಫೆಸ 4:25; ಹೋಲಿಸಿರಿ ಲೂಕ 15:21.) ಕೇವಲ ಯುವ ಜನರಿಗೆ ವಿಶೇಷಾರ್ಥವಿರುವ ಅಭಿವ್ಯಕ್ತಿಗಳನ್ನಲ್ಲ, ಬದಲಾಗಿ ನಿಮ್ಮ ಹೆತ್ತವರು ಅರ್ಥಮಾಡಿಕೊಳ್ಳುವಂತಹ ಶಬ್ದಗಳನ್ನು ಉಪಯೋಗಿಸಿರಿ.

ಸ್ವಾಭಾವಿಕವಾಗಿಯೇ, ಮೊದಮೊದಲು ನಿಮ್ಮ ಹೆತ್ತವರಿಗೆ ನೋವಾಗಬಹುದು ಮತ್ತು ಅವರು ನಿರಾಶರಾಗಬಹುದು. ಆದುದರಿಂದ, ಭಾವನಾತ್ಮಕ ಮಾತುಗಳು ನಿಮ್ಮ ಮೇಲೆ ಸುರಿಸಲ್ಪಡುವಲ್ಲಿ ಆಶ್ಚರ್ಯಗೊಳ್ಳಬೇಡಿರಿ ಅಥವಾ ಕೆರಳಬೇಡಿರಿ! ಅವರ ಆರಂಭದ ಎಚ್ಚರಿಕೆಗಳಿಗೆ ಲಕ್ಷ್ಯಕೊಟ್ಟಿದ್ದಲ್ಲಿ, ಬಹುಶಃ ನೀವು ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಆದುದರಿಂದ ಶಾಂತಚಿತ್ತರಾಗಿ ಉಳಿಯಿರಿ. (ಜ್ಞಾನೋಕ್ತಿ 17:27) ನಿಮ್ಮ ಹೆತ್ತವರಿಗೆ ಕಿವಿಗೊಟ್ಟು, ಅವರ ಪ್ರಶ್ನೆಗಳಿಗೆ—ಅವರು ಅವುಗಳನ್ನು ಯಾವುದೇ ರೀತಿಯಲ್ಲಿ ಕೇಳಲಿ—ಉತ್ತರಿಸಿರಿ.

ನಿಸ್ಸಂದೇಹವಾಗಿ, ವಿಷಯಗಳನ್ನು ಸರಿಪಡಿಸುವುದರ ಕುರಿತಾದ ನಿಮ್ಮ ತೀವ್ರಾಪೇಕ್ಷೆಯು, ಅವರನ್ನು ಗಾಢವಾಗಿ ಪ್ರಭಾವಿಸಬಹುದು. (2 ಕೊರಿಂಥ 7:11ನ್ನು ಹೋಲಿಸಿರಿ.) ಹಾಗಿದ್ದರೂ, ಸಮರ್ಪಕವಾದ ಶಿಸ್ತನ್ನು ಸ್ವೀಕರಿಸಲು ತಯಾರಾಗಿರಿ. “ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ.” (ಇಬ್ರಿಯ 12:11) ನಿಮ್ಮ ಹೆತ್ತವರ ಸಹಾಯ ಮತ್ತು ಪ್ರೌಢ ಸಲಹೆಯು ನಿಮಗೆ ಅಗತ್ಯವಿರುವುದು ಇದೇ ಕೊನೆಯ ಬಾರಿಯಲ್ಲವೆಂಬುದನ್ನೂ ನೆನಪಿಡಿರಿ. ಚಿಕ್ಕಪುಟ್ಟ ಸಮಸ್ಯೆಗಳ ಕುರಿತಾಗಿ ಅವರಲ್ಲಿ ಅಂತರಂಗವನ್ನು ತೋಡಿಕೊಳ್ಳುವ ಅಭ್ಯಾಸವನ್ನು ಮಾಡಿಕೊಳ್ಳಿರಿ. ಹೀಗೆ ಮಾಡುವಲ್ಲಿ, ದೊಡ್ಡ ಸಮಸ್ಯೆಗಳು ಏಳುವಾಗ, ನಿಮ್ಮ ಮನಸ್ಸಿನಲ್ಲಿರುವಂಥದ್ದನ್ನು ಅವರಿಗೆ ಹೇಳಲು ನೀವು ಭಯಪಡದಿರುವಿರಿ.

[ಚಿತ್ರ]

ನಿಮ್ಮ ಹೆತ್ತವರು ಹೆಚ್ಚು ಸ್ಪಂದಿಸುವ ಮನಸ್ಥಿತಿಯಲ್ಲಿರುವ ಒಂದು ಸಮಯವನ್ನು ಆರಿಸಿಕೊಳ್ಳಿರಿ