ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಹೆತ್ತವರ ಪುನರ್ವಿವಾಹದೊಂದಿಗೆ ನಾನು ಹೇಗೆ ವ್ಯವಹರಿಸಬಲ್ಲೆ?

ನನ್ನ ಹೆತ್ತವರ ಪುನರ್ವಿವಾಹದೊಂದಿಗೆ ನಾನು ಹೇಗೆ ವ್ಯವಹರಿಸಬಲ್ಲೆ?

ಅಧ್ಯಾಯ 5

ನನ್ನ ಹೆತ್ತವರ ಪುನರ್ವಿವಾಹದೊಂದಿಗೆ ನಾನು ಹೇಗೆ ವ್ಯವಹರಿಸಬಲ್ಲೆ?

“ಅಪ್ಪ ರೀಟಳನ್ನು ಮದುವೆಯಾದ ದಿನವು, ನನ್ನ ಜೀವಿತದಲ್ಲಿಯೇ ಅತ್ಯಂತ ಕೆಟ್ಟದಾದ ದಿನವಾಗಿತ್ತು,” ಎಂದು ಶೇನ್‌ ಜ್ಞಾಪಿಸಿಕೊಂಡನು. “ನಾನು ತುಂಬ ಸಿಟ್ಟಿನಿಂದಿದ್ದೆ. ನನ್ನ ಅಮ್ಮನಿಗೆ ದ್ರೋಹಬಗೆದುದಕ್ಕಾಗಿ ಅಪ್ಪನ ಮೇಲೆ ಸಿಟ್ಟಿತ್ತು. ನ್ಯಾಯಶಾಸ್ತ್ರ ಶಾಲೆಗೆ ಸೇರಿ, ನಮ್ಮನ್ನು ಒಬ್ಬೊಂಟಿಗರನ್ನಾಗಿ ಬಿಟ್ಟದ್ದಕ್ಕಾಗಿ ಅಮ್ಮನ ಮೇಲೆ ಸಿಟ್ಟಿತ್ತು. ನಮ್ಮ ಮನೆಯಲ್ಲಿ ವಾಸಿಸಲು ಬರಲಿದ್ದ ರೀಟಳ ಮಕ್ಕಳಾದ, ಆ ಇಬ್ಬರು ಚಿಳ್ಳೆಗಳ ಮೇಲೆ ಸಿಟ್ಟಿತ್ತು . . . ಆದರೆ ಎಲ್ಲಕ್ಕಿಂತಲೂ ಮಿಗಿಲಾಗಿ, ನನಗೆ ರೀಟಳ ಮೇಲೆ ಸಿಟ್ಟಿತ್ತು . . . ನಾನು ಅವಳನ್ನು ದ್ವೇಷಿಸಿದೆ. ಮತ್ತು ದ್ವೇಷಿಸುವುದು ಸರಿಯಲ್ಲವೆಂದು ನಾನು ನಂಬಿದ್ದರಿಂದ, ನನಗೆ ನನ್ನ ಮೇಲೆಯೂ ಸಿಟ್ಟಿತ್ತು.”—ಮಲಕುಟುಂಬಗಳು—ಸಾಮರಸ್ಯದಲ್ಲಿ ಹೊಸ ನಮೂನೆಗಳು (ಇಂಗ್ಲಿಷ್‌), ಲಿಂಡ ಕ್ರೇವನ್‌ರಿಂದ.

ಹೆತ್ತವರಲ್ಲಿ ಒಬ್ಬರ ಪುನರ್ವಿವಾಹವು, ನಿಮ್ಮ ಹೆತ್ತವರು ಎಂದಾದರೂ ಪುನಃ ಒಂದಾಗುವರು ಎಂಬ ನಿರೀಕ್ಷೆಯನ್ನು ಧ್ವಂಸಗೊಳಿಸುತ್ತದೆ. ಅದು ನಿಮ್ಮನ್ನು ಅಸುರಕ್ಷಿತರೂ, ದ್ರೋಹವೆಸಗಲ್ಪಟ್ಟವರೂ, ಮತ್ತು ಈರ್ಷ್ಯೆಯುಳ್ಳವರೂ ಆಗುವಂತೆ ಮಾಡಬಲ್ಲದು.

ಹೆತ್ತವರಲ್ಲಿ ಪ್ರಿಯರಾದ ಒಬ್ಬರ ಮರಣದ ಬೆನ್ನಲ್ಲೇ ಪುನರ್ವಿವಾಹವು ಆಗುವುದಾದರೆ, ಅದು ನಿರ್ದಿಷ್ಟವಾಗಿ ವೇದನಾಮಯವಾಗಿರಬಲ್ಲದು. “ನನ್ನ ತಾಯಿಯ ಮರಣವು ನನ್ನನ್ನು ತುಂಬ ಕಟುವಾಗಿ ಮಾಡಿತು,” ಎಂದು 16 ವರ್ಷ ಪ್ರಾಯದ ಮಿಸ್ಸಿ ಒಪ್ಪಿಕೊಂಡಳು. “ನನ್ನ ತಂದೆಯ ನಿಶ್ಚಯಾರ್ಥ ವಧುವು, ನನ್ನ ತಾಯಿಯ ಸ್ಥಾನವನ್ನು ಆಕ್ರಮಿಸುತ್ತಿದ್ದಳೆಂದು ನಾನು ನೆನಸಿದೆ, ಆದುದರಿಂದ ನಾನು ಅವಳೊಂದಿಗೆ ತುಂಬ ನೀಚಳಾಗಿ ವರ್ತಿಸಿದೆ.” ನಿಮ್ಮ ಸ್ವಾಭಾವಿಕ ಹೆತ್ತವರಿಗೆ ನಿಷ್ಠರಾಗಿದ್ದ ನಿಮಗೆ, ಒಬ್ಬ ಮಲಹೆತ್ತವರ ಕಡೆಗೆ ಪ್ರೀತಿಯ ಭಾವನೆಯು ಆರಂಭವಾಗುವಲ್ಲಿ, ನಿಮಗೆ ದೋಷಿಭಾವನೆಯೂ ಅನಿಸಬಹುದು.

ಹಾಗಾದರೆ, ಅನೇಕ ಯುವ ಜನರು ತಮ್ಮ ಭಾವನಾತ್ಮಕ ವೇದನೆಯನ್ನು ನಾಶಕಾರಕ ವಿಧಗಳಲ್ಲಿ ಹೊರಸೂಸುವುದು ಆಶ್ಚರ್ಯಕರವಲ್ಲ. ಕೆಲವರು ತಮ್ಮ ಹೆತ್ತವರ ಹೊಸ ವಿವಾಹವನ್ನು ಮುರಿಯಲಿಕ್ಕೂ ಸಂಚನ್ನು ಹೂಡುತ್ತಾರೆ. ಆದರೆ ನೆನಪಿಡಿರಿ, ನಿಮ್ಮ ಸ್ವಾಭಾವಿಕ ಹೆತ್ತವರಲ್ಲಿ ಒಬ್ಬರು ಮತ್ತು ಮಲಹೆತ್ತವರು ದೇವರ ಮುಂದೆ ಪ್ರತಿಜ್ಞೆಗಳನ್ನು ಮಾಡಿದ್ದಾರೆ. “ದೇವರು ಕೂಡಿಸಿದ್ದನ್ನು ಮನುಷ್ಯರು [ಅಥವಾ ಮಗು] ಅಗಲಿಸಬಾರದು.” (ಮತ್ತಾಯ 19:6) ಮತ್ತು ನೀವು ಅವರನ್ನು ಬೇರ್ಪಡಿಸಲು ಸಾಧ್ಯವಾಗುವುದಾದರೂ, ಇದು ನಿಮ್ಮ ಸ್ವಾಭಾವಿಕ ಹೆತ್ತವರನ್ನು ಪುನರೈಕ್ಯಗೊಳಿಸದು.

ಒಬ್ಬ ಮಲಹೆತ್ತವರೊಂದಿಗೆ ಸತತವಾದ ಘರ್ಷಣೆಯಲ್ಲಿರುವುದು ಅರ್ಥರಹಿತವಾದದ್ದಾಗಿದೆ. ಜ್ಞಾನೋಕ್ತಿ 11:29 ಎಚ್ಚರಿಸುವುದು: “ತನ್ನ ಕುಟುಂಬವನ್ನು ಬಾಧಿಸುವವನಿಗೆ ಗಾಳಿಯೇ ಗಂಟು,” ಅಂದರೆ, ಅವನು ಏನನ್ನೂ ಸಾಧಿಸುವುದಿಲ್ಲ. (ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) ತನ್ನ ಮಲತಾಯಿಯ ವಿಷಯದಲ್ಲಿ ಹದಿನೈದು ವರ್ಷ ಪ್ರಾಯದ ಜೆರಿಯ ತೀವ್ರ ಅಸಮಾಧಾನವು, ಕೊನೆಗೆ ಒಂದು ಕಟುವಾದ ಜಗಳದಲ್ಲಿ ಅಂತ್ಯಗೊಂಡಿತು. ಫಲಿತಾಂಶವೇನಾಯಿತು? ಜೆರಿಯ ತಂದೆ, ತನ್ನ ಅಥವಾ ಅವನ ಮಗಳ ಮಧ್ಯೆ, ಯಾರಾದರೊಬ್ಬರನ್ನು ಆರಿಸಿಕೊಳ್ಳುವಂತೆ ಅವಳ ಮಲತಾಯಿ ತಗಾದೆಮಾಡಿದಳು. ಕೊನೆಗೆ ಜೆರಿ ತನ್ನ ಹೆತ್ತ ತಾಯಿಯೊಂದಿಗೆ—ಅವಳೂ ಪುನರ್ವಿವಾಹವಾಗಿದ್ದಳು—ಜೀವಿಸಲು ಹೋಗಬೇಕಾಯಿತು.

ಪ್ರೀತಿಯು ನಿಮಗೆ ನಿಭಾಯಿಸುವಂತೆ ಸಹಾಯ ಮಾಡುತ್ತದೆ

ಹೆತ್ತವರಲ್ಲಿ ಒಬ್ಬರ ಪುನರ್ವಿವಾಹವನ್ನು ಯಶಸ್ವಿಯಾಗಿ ನಿಭಾಯಿಸುವುದರ ರಹಸ್ಯವೇನು? 1 ಕೊರಿಂಥ 13:4-8ರಲ್ಲಿ ವರ್ಣಿಸಲ್ಪಟ್ಟಿರುವಂತಹ ರೀತಿಯ ತತ್ತ್ವಾಧಾರಿತ ಪ್ರೀತಿಯನ್ನು ತೋರಿಸುವುದೇ:

ಪ್ರೀತಿಯು “ಸ್ವಂತ ಅಭಿರುಚಿಗಳನ್ನು ಹುಡುಕುವುದಿಲ್ಲ” (NW). ಇದರ ಅರ್ಥ ‘ನಮ್ಮ ಸ್ವಂತ ಲಾಭವನ್ನಲ್ಲ, ಬದಲಾಗಿ ಇತರ ವ್ಯಕ್ತಿಯ ಲಾಭವನ್ನು ಹುಡುಕುವುದು.’ (1 ಕೊರಿಂಥ 10:24, NW) ಹೆತ್ತವರಲ್ಲಿ ಒಬ್ಬರು, ಅವನಿಗೆ ಅಥವಾ ಅವಳಿಗೆ ಪುನಃ ಒಬ್ಬ ವಿವಾಹ ಸಂಗಾತಿಯ ಸಾಂಗತ್ಯದ ಅಗತ್ಯವಿದೆಯೆಂದು ನಿರ್ಣಯಿಸಿರುವಲ್ಲಿ, ಇದಕ್ಕೆ ನೀವು ಅಸಮಾಧಾನಪಡಬೇಕೊ?

“ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ.” ಅನೇಕವೇಳೆ ಯುವ ಜನರು ತಮ್ಮ ಸ್ವಾಭಾವಿಕ ಹೆತ್ತವರ ಪ್ರೀತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ. ಆದರೆ, ಪ್ರೀತಿಯು ವಿಸ್ತರಿಸಸಾಧ್ಯವಿರುವುದರಿಂದ, ನಿಮ್ಮ ಹೆತ್ತವರಲ್ಲಿ ಪ್ರೀತಿಯು ಇಲ್ಲದೆ ಹೋಗುವುದೆಂದು ನೀವು ಭಯಪಡಬೇಕಾಗಿಲ್ಲ. (2 ಕೊರಿಂಥ 6:11-13ನ್ನು ಹೋಲಿಸಿರಿ.) ನಿಮ್ಮ ಸ್ವಾಭಾವಿಕ ಹೆತ್ತವರು ನಿಮಗಾಗಿ ಯಾವುದೇ ವಾತ್ಸಲ್ಯವನ್ನು ಕಳೆದುಕೊಳ್ಳದೆ, ಒಬ್ಬ ಹೊಸ ಸಂಗಾತಿಯನ್ನು ಒಳಗೂಡಿಸಲು ಅವನ ಅಥವಾ ಅವಳ ಪ್ರೀತಿಯನ್ನು ವಿಸ್ತರಿಸಸಾಧ್ಯವಿದೆ! ಒಬ್ಬ ಮಲಹೆತ್ತವರನ್ನು ಒಳಗೂಡಿಸಲು ನೀವು ನಿಮ್ಮ ಹೃದಯವನ್ನು ವಿಶಾಲಗೊಳಿಸುವಿರೊ? ಹಾಗೆ ಮಾಡುವುದು, ನೀವು ನಿಮ್ಮ ಅಗಲಿದ ಹೆತ್ತವರಿಗೆ ಯಾವುದೇ ರೀತಿಯಲ್ಲಿ ನಿಷ್ಠಾಹೀನರಾಗಿದ್ದೀರೆಂಬುದನ್ನು ಅರ್ಥೈಸುವುದಿಲ್ಲ.

ಪ್ರೀತಿಯು “ಮರ್ಯಾದೆಗೆಟ್ಟು ನಡೆಯುವದಿಲ್ಲ.” ವಿರುದ್ಧ ಲಿಂಗಜಾತಿಯ ಹೊಸ ಸಹೋದರರು ಅಥವಾ ಸಹೋದರಿಯರೊಂದಿಗೆ ವಾಸಿಸುವುದು, ನೈತಿಕ ಒತ್ತಡಗಳನ್ನು ಉಂಟುಮಾಡಬಲ್ಲದು. ವರದಿಗನುಸಾರವಾಗಿ, 25 ಪ್ರತಿಶತ ಮಲಕುಟುಂಬಗಳಲ್ಲಿ, ಕುಟುಂಬ ಸದಸ್ಯರ ನಡುವೆ ನಿಯಮಬಾಹಿರ ಲೈಂಗಿಕ ಸಂಬಂಧಗಳು ಸಂಭವಿಸುತ್ತವೆ.

ಯಾರ ತಾಯಿಯ ವಿವಾಹವು, ಮನೆಯೊಳಗೆ ನಾಲ್ಕು ಹದಿವಯಸ್ಕ ಮಲಸಹೋದರಿಯರನ್ನು ತಂದಿತೋ ಆ ಡೇವಿಡ್‌ ಹೇಳುವದು, “ಲೈಂಗಿಕ ಅನಿಸಿಕೆಗಳ ಕುರಿತಾಗಿ ಒಂದು ಮಾನಸಿಕ ತಡೆಯನ್ನು ಹಾಕುವುದು ಆವಶ್ಯಕವಾಗಿತ್ತು.” ನಿಮ್ಮ ಉಡುಪು ಅಥವಾ ನಿಮ್ಮ ನಡವಳಿಕೆಯು, ಲೈಂಗಿಕವಾಗಿ ಉದ್ರೇಕಕಾರಿಯಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುತ್ತಾ, ಅನುಚಿತವಾದ ಸಲಿಗೆಯಿಂದ ದೂರವಿರಲೂ ನೀವು ಬಯಸುವಿರಿ.—ಕೊಲೊಸ್ಸೆ 3:5.

ಪ್ರೀತಿಯು “ಎಲ್ಲ ವಿಷಯಗಳನ್ನು ಸಹಿಸಿಕೊಳ್ಳುತ್ತದೆ . . . ಅದು ನಮಗೆ ಯಾವುದೇ ವಿಷಯವನ್ನೂ ತಾಳಿಕೊಳ್ಳಲು ಶಕ್ತಿಯನ್ನು ಕೊಡುತ್ತದೆ.” (ಚಾರ್ಲ್ಸ್‌ ಬಿ. ವಿಲ್ಯಮ್ಸ್‌ ಭಾಷಾಂತರ) ಕೆಲವೊಮ್ಮೆ ಯಾವುದೇ ವಿಷಯವು ನಿಮ್ಮ ವೇದನಾಭರಿತ ಅನಿಸಿಕೆಗಳನ್ನು ಹೋಗಲಾಡಿಸಲು ಸಾಧ್ಯವಿಲ್ಲವೆಂಬಂತೆ ತೋರುತ್ತದೆ! ಮಾರ್ಲ ಒಪ್ಪಿಕೊಂಡದ್ದು: “ನನಗೆ ಮನೆಯಲ್ಲಿ ಯಾವುದೇ ಸ್ಥಳವಿಲ್ಲ ಎಂದು ನನಗನಿಸಿತು. ನಾನು ಎಂದೂ ಜನಿಸಿದ್ದಿರಲೇಬಾರದಿತ್ತೆಂದು ನಾನು ತಾಯಿಗೆ ಹೇಳಿದೆ.” ಮಾರ್ಲ ಪ್ರತಿಭಟಿಸಿ, ಓಡಿ ಹೋದಳು ಕೂಡ! ಆದಾಗಲೂ, ಅವಳು ಈಗ ಹೇಳುವುದು: “ತಾಳಿಕೊಳ್ಳುವುದೇ ಅತ್ಯುತ್ತಮವಾದ ವಿಷಯ.” ನೀವು ತದ್ರೀತಿಯಲ್ಲಿ ತಾಳಿಕೊಂಡರೆ, ಸಮಯಾನಂತರ, ಆರಂಭದಲ್ಲಿ ನಿಮಗೆ ಅನಿಸಿದ ಆ ಕಟುಭಾವ, ದಿಗ್ಭ್ರಾಂತಿ ಮತ್ತು ನೋವು ಶಮನವಾಗುವುದು.

‘ನೀವು ನನ್ನ ನಿಜವಾದ ತಾಯಿ/ತಂದೆಯಲ್ಲ!’

ಒಬ್ಬ ಹೊಸ ಹೆತ್ತವರ ಶಿಸ್ತಿಗೆ ಒಳಗಾಗುವುದು ಸುಲಭವಲ್ಲ, ಮತ್ತು ಏನನ್ನಾದರೂ ಮಾಡುವಂತೆ ಒಬ್ಬ ಮಲಹೆತ್ತವರಿಂದ ಕೇಳಲ್ಪಡುವಾಗ, ‘ನೀವು ನನ್ನ ನಿಜವಾದ ತಾಯಿ/ತಂದೆಯಲ್ಲ!’ ಎಂದು ಥಟ್ಟನೆ ಹೇಳಿಬಿಡುವಂತೆ ಪ್ರಚೋದಿಸಲ್ಪಡಬಹುದು. ಆದರೆ 1 ಕೊರಿಂಥ 14:20ರಲ್ಲಿ ತಿಳಿಸಲ್ಪಟ್ಟಿರುವ ಮೂಲತತ್ತ್ವವನ್ನು ಜ್ಞಾಪಿಸಿಕೊಳ್ಳಿರಿ: “ನಿಮ್ಮ ಯೋಚನೆಯಲ್ಲಿ ಬೆಳೆಯಿರಿ.”—ದ ಹೋಲಿ ಬೈಬಲ್‌ ಇನ್‌ ದ ಲ್ಯಾಂಗ್ವೇಜ್‌ ಆಫ್‌ ಟುಡೇ, ವಿಲ್ಯಮ್‌ ಬೆಕ್‌ ಅವರಿಂದ.

ನಿಮ್ಮನ್ನು ಶಿಸ್ತಿಗೊಳಪಡಿಸುವ ನಿಮ್ಮ ಮಲಹೆತ್ತವರ ಅಧಿಕಾರವನ್ನು ಅಂಗೀಕರಿಸುವುದು, ನೀವು ‘ನಿಮ್ಮ ಯೋಚನೆಯಲ್ಲಿ ಬೆಳೆ’ದಿದ್ದೀರಿ ಎಂಬುದನ್ನು ತೋರಿಸುವ ಒಂದು ವಿಧವಾಗಿದೆ. ಅವರು ಒಬ್ಬ ಸ್ವಾಭಾವಿಕ ಹೆತ್ತವರ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ನಿಮ್ಮ ಗೌರವಕ್ಕೆ ಅರ್ಹರಾಗಿದ್ದಾರೆ. (ಜ್ಞಾನೋಕ್ತಿ 1:8; ಎಫೆಸ 6:1-4) ಬೈಬಲ್‌ ಸಮಯಗಳಲ್ಲಿ, ಎಸ್ತೇರಳ ಹೆತ್ತವರು ಸತ್ತಾಗ, ಅವಳು ಒಬ್ಬ ದತ್ತು ತಂದೆಯಿಂದ ಅಥವಾ “ಸಾಕುವವ”ನಿಂದ ಪೋಷಿಸಲ್ಪಟ್ಟಿದ್ದಳು. ಮೊರ್ದೆಕೈ ಅವಳ ಸ್ವಾಭಾವಿಕ ಹೆತ್ತವನಾಗಿರದಿದ್ದರೂ, ಅವನು ಕೊಟ್ಟ ‘ಆಜ್ಞೆಗಳನ್ನು’ ಅವಳು ವಯಸ್ಕಳಾದಾಗಲೂ ಪಾಲಿಸಿದಳು! (ಎಸ್ತೇರ 2:7, 15, 17, 20) ನಿಜವಾಗಿಯೂ, ಒಬ್ಬ ಮಲಹೆತ್ತವರ ಶಿಸ್ತು ಸಾಮಾನ್ಯವಾಗಿ, ನಿಮಗಾಗಿ ಅವರಿಗಿರುವ ಪ್ರೀತಿ ಮತ್ತು ಚಿಂತೆಯ ಒಂದು ಅಭಿವ್ಯಕ್ತಿಯಾಗಿದೆ.—ಜ್ಞಾನೋಕ್ತಿ 13:24.

ಆದರೂ, ನ್ಯಾಯಸಮ್ಮತವಾದ ದೂರುಗಳು ಖಂಡಿತವಾಗಿ ಸಂಭವಿಸುವವು. ಹಾಗಿರುವಲ್ಲಿ, ಕೊಲೊಸ್ಸೆ 3:13 ಪ್ರೇರೇಪಿಸುವಂತೆ ಮಾಡುವ ಮೂಲಕ ನೀವು ‘ಬೆಳೆದಿದ್ದೀರಿ’ ಎಂದು ರುಜುಪಡಿಸಿರಿ: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ.”

ಹಂಚಿಕೊಳ್ಳಲು ಕಲಿಯಿರಿ, ಸಂಧಾನಮಾಡಿಕೊಳ್ಳಲು ಕಲಿಯಿರಿ

15 ವರ್ಷ ಪ್ರಾಯದ ಜೇಮಿ ತನ್ನ ತಾಯಿಯೊಂದಿಗೆ ಒಬ್ಬಳೇ ಜೀವಿಸುತ್ತಿದ್ದಾಗ, ಅವಳಿಗೆ ತನ್ನದೇ ಆದ ಕೋಣೆ ಇತ್ತು ಮತ್ತು ಅವಳು ಬೆಲೆಬಾಳುವ ಉಡುಪುಗಳನ್ನು ಧರಿಸುತ್ತಿದ್ದಳು. ಅವಳ ತಾಯಿ ಪುನರ್ವಿವಾಹವಾದಾಗ ಮತ್ತು ಜೇಮಿ ತನ್ನನ್ನು ನಾಲ್ಕು ಮಕ್ಕಳುಳ್ಳ ಒಂದು ಕುಟುಂಬದಲ್ಲಿ ಕಂಡುಕೊಂಡಾಗ, ವಿಷಯಗಳು ಬದಲಾದವು. “ಈಗ ನನಗೆ ನನ್ನ ಸ್ವಂತ ಕೋಣೆಯೂ ಇಲ್ಲ,” ಎಂದು ಅವಳು ಪ್ರಲಾಪಿಸಿದಳು. “ನಾನು ಎಲ್ಲವನ್ನೂ ಹಂಚಿಕೊಳ್ಳಬೇಕು.”

ಹಿರಿಯವನಾಗಿರುವ ಅಥವಾ ಒಬ್ಬನೇ ಮಗುವಾಗಿರುವ ನಿಮ್ಮ ಸ್ಥಾನವನ್ನು ನೀವು ಬಿಟ್ಟುಕೊಡಬೇಕಾಗಬಹುದು ಕೂಡ. ನೀವು ಒಬ್ಬ ಮಗನಾಗಿರುವಲ್ಲಿ, ನೀವು ದೀರ್ಘ ಸಮಯದಿಂದ ಮನೆಯ ಪುರುಷನಾಗಿ ಕಾರ್ಯನಡಿಸಿದ್ದಿರಬಹುದು. ಈಗ ಆ ಸ್ಥಾನವು ನಿಮ್ಮ ಮಲತಂದೆಯಿಂದ ಆಕ್ರಮಿಸಲ್ಪಟ್ಟಿದೆ. ಅಥವಾ ನೀವು ಒಬ್ಬ ಮಗಳಾಗಿರುವಲ್ಲಿ, ಒಂದೇ ಕೋಣೆಯಲ್ಲಿ ಮಲಗುತ್ತಲೂ, ನೀವೂ ನಿಮ್ಮ ತಾಯಿಯೂ ಸಹೋದರಿಯರಂತೆ ಇದ್ದಿರಬಹುದು, ಆದರೆ ಈಗ ನಿಮ್ಮ ಮಲತಂದೆಯಿಂದಾಗಿ ನೀವು ಕೋಣೆಯಿಂದ ಹೊರಹೋಗುವಂತೆ ಮಾಡಲ್ಪಟ್ಟಿದ್ದೀರಿ.

“ನಿಮ್ಮ ವಿವೇಚನಾಶಕ್ತಿಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ,” ಎಂದು ಬೈಬಲ್‌ ಶಿಫಾರಸ್ಸು ಮಾಡುತ್ತದೆ. (ಫಿಲಿಪ್ಪಿ 4:5, NW) ಉಪಯೋಗಿಸಲ್ಪಟ್ಟ ಮೂಲ ಶಬ್ದವು, “ಮಣಿಯುವುದು” ಎಂಬುದನ್ನು ಅರ್ಥೈಸಿತು ಮತ್ತು ಕಾನೂನುಸಮ್ಮತವಾದ ತನ್ನ ಎಲ್ಲಾ ಹಕ್ಕುಗಳ ವಿಷಯದಲ್ಲಿ ಪಟ್ಟುಹಿಡಿಯದ ಒಬ್ಬನ ಮನೋಭಾವವನ್ನು ತಿಳಿಯಪಡಿಸುತ್ತದೆ. ಆದುದರಿಂದ, ಮಣಿಯುವವರಾಗಿರಲು, ಸಂಧಾನಮಾಡುವವರಾಗಿರಲು ಪ್ರಯತ್ನಿಸಿರಿ. ನಿಮ್ಮ ಹೊಸ ಪರಿಸ್ಥಿತಿಯಿಂದ ಆದಷ್ಟು ಹೆಚ್ಚು ಪ್ರಯೋಜನವನ್ನು ಪಡೆದುಕೊಂಡು, ಹಿಂದಿನ ವಿಷಯಗಳ ಕುರಿತಾಗಿ ಚಿಂತಿಸುತ್ತಾ ಇರುವುದರಿಂದ ದೂರವಿರಿ. (ಪ್ರಸಂಗಿ 7:10) ಮಲಸಹೋದರರು ಮತ್ತು ಮಲಸಹೋದರಿಯರನ್ನು ಹೊರಗಿನವರಂತೆ ಉಪಚರಿಸದೆ, ಅವರೊಂದಿಗೆ ಪಾಲಿಗರಾಗಲು ಸಿದ್ಧಮನಸ್ಕರಾಗಿರಿ. (1 ತಿಮೊಥೆಯ 6:18) ಎಷ್ಟು ಬೇಗ ನೀವು ಒಬ್ಬರನ್ನೊಬ್ಬರು ನಿಜವಾದ ಸಹೋದರರು ಮತ್ತು ಸಹೋದರಿಯರಾಗಿ ಉಪಚರಿಸಲು ಆರಂಭಿಸುತ್ತೀರೊ, ಅಷ್ಟು ಬೇಗನೆ ನಿಮ್ಮ ಪರಸ್ಪರ ಭಾವನೆಗಳು ಬೆಳೆಯುವವು. ಮತ್ತು ಮನೆಯ ಹೊಸ ಪುರುಷನ ಕುರಿತಾದರೊ, ಅವನ ಮೇಲೆ ಅಸಮಾಧಾನಪಡಬೇಡಿರಿ. ಮನೆವಾರ್ತೆಯ ಜವಾಬ್ದಾರಿಗಳ ಹೊರೆಯನ್ನು ಹೊತ್ತುಕೊಳ್ಳಲಿಕ್ಕಾಗಿ ಸಹಾಯಮಾಡಲು ಅವನು ಇರುವುದಕ್ಕಾಗಿ ಸಂತೋಷಪಡಿರಿ.

ಅಸಮಾನವಾದ ಉಪಚಾರವನ್ನು ನಿಭಾಯಿಸುವುದು

ತನ್ನ ಮಲತಂದೆ ಪ್ರೀತಿಯನ್ನು ತೋರಿಸುತ್ತಾರೆಂಬುದನ್ನು ಒಪ್ಪಿಕೊಂಡ ನಂತರ, ಒಬ್ಬ ಯುವ ಹುಡುಗಿ ಕೂಡಿಸಿದ್ದು: “ಆದರೆ ಒಂದು ವ್ಯತ್ಯಾಸವಿದೆ. ನಮ್ಮ ವಯಸ್ಸಿನವರೇ ಆಗಿರುವ ಅವರ ಸ್ವಂತ ಮಕ್ಕಳಿಂದ ಅವರು ಅಪೇಕ್ಷಿಸುವುದಕ್ಕಿಂತಲೂ . . . ಹೆಚ್ಚನ್ನು ನಮ್ಮಿಂದ ಅಪೇಕ್ಷಿಸುತ್ತಾರೆ, ಹೆಚ್ಚು ಶಿಸ್ತಿಗೊಳಪಡಿಸುತ್ತಾರೆ, ನಮ್ಮ ಕಡೆಗೆ ಕಡಿಮೆ ತಿಳಿವಳಿಕೆಯುಳ್ಳವರಾಗಿದ್ದಾರೆ. ಅದು ನಮಗೆ ವ್ಯಥೆಗೊಳಿಸುವ ಒಂದು ವಿಷಯವಾಗಿದೆ.”

ಸಾಮಾನ್ಯವಾಗಿ ಒಬ್ಬ ಮಲಹೆತ್ತವನಿಗೆ, ತನ್ನ ಸ್ವಾಭಾವಿಕ ಮಗುವಿನ ಕಡೆಗೆ ತನಗಿರುವಂತಹದ್ದೇ ರೀತಿಯ ಭಾವನೆಗಳು, ಒಬ್ಬ ಮಲಮಗುವಿನ ಕಡೆಗೆ ಇರುವುದಿಲ್ಲ ಎಂಬುದನ್ನು ಗ್ರಹಿಸಿರಿ. ಇದು, ಅವರ ಸ್ವಾಭಾವಿಕ ಮಗುವಿನೊಂದಿಗಿನ ರಕ್ತಸಂಬಂಧದಿಂದ ಮಾತ್ರವಲ್ಲ, ಜೀವಿಸುವುದರಲ್ಲಿ ಅವರು ಜೊತೆಯಾಗಿ ಪಾಲಿಗರಾಗಿರುವ ಅನುಭವದ ಕಾರಣದಿಂದಾಗಿರುವುದು. ಎಷ್ಟೆಂದರೂ, ಒಬ್ಬ ರಕ್ತ ಸಂಬಂಧಿ ಹೆತ್ತವರು ಕೂಡ, ಒಂದು ಮಗುವನ್ನು ಇನ್ನೊಂದು ಮಗುವಿಗಿಂತ ಹೆಚ್ಚು ಪ್ರೀತಿಸಬಹುದು. (ಆದಿಕಾಂಡ 37:3) ಆದಾಗಲೂ, ಸಮಾನ ಮತ್ತು ನ್ಯಾಯ ಎಂಬುದರ ನಡುವೆ ದೊಡ್ಡ ವ್ಯತ್ಯಾಸವಿದೆ. ಜನರಿಗೆ ವೈಯಕ್ತಿಕ ವ್ಯಕ್ತಿತ್ವಗಳು ಮತ್ತು ಭಿನ್ನವಾದ ಅಗತ್ಯಗಳಿರುತ್ತವೆ. ಆದುದರಿಂದ, ನೀವು ಸಮಾನರಾಗಿ ಉಪಚರಿಸಲ್ಪಡುತ್ತಿದ್ದೀರೊ ಇಲ್ಲವೊ ಎಂಬುದರ ಕುರಿತಾಗಿ ಅತಿಯಾಗಿ ಚಿಂತಿತರಾಗಿರುವ ಬದಲಿಗೆ, ನಿಮ್ಮ ಮಲಹೆತ್ತವರು ನಿಮ್ಮ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತಿದ್ದಾರೊ ಎಂಬುದನ್ನು ನೋಡಲು ಪ್ರಯತ್ನಿಸಿರಿ. ಇವುಗಳನ್ನು ಪೂರೈಸಲಾಗುತ್ತಿಲ್ಲ ಎಂದು ನಿಮಗೆ ಅನಿಸುವಲ್ಲಿ, ಆಗ ನಿಮಗೆ ಈ ವಿಷಯವನ್ನು ನಿಮ್ಮ ಮಲಹೆತ್ತವರೊಂದಿಗೆ ಚರ್ಚಿಸಲು ಕಾರಣವಿದೆ.

ನಿಮ್ಮ ಮಲಸಹೋದರರು ಅಥವಾ ಮಲಸಹೋದರಿಯರು ಕೂಡ ಕಲಹದ ಒಂದು ಮೂಲವಾಗಿರಬಲ್ಲರು. ಮಲಕುಟುಂಬದ ಪರಿಸ್ಥಿತಿಯೊಂದಿಗೆ ಹೊಂದಿಕೊಂಡುಹೋಗುವುದು ಅವರಿಗೂ ಕಷ್ಟವಾಗುತ್ತಿರಬಹುದೆಂಬುದನ್ನು ಎಂದೂ ಮರೆಯದಿರಿ. ಪ್ರಾಯಶಃ ಅವರು ನಿಮ್ಮನ್ನು ತಮ್ಮ ಕುಟುಂಬದೊಳಗೆ ಬಲವಂತವಾಗಿ ನುಗ್ಗಿದವರೋಪಾದಿ, ನಿಮ್ಮ ವಿಷಯದಲ್ಲಿ ಅಸಮಾಧಾನಪಡುತ್ತಿರಲೂಬಹುದು. ಆದುದರಿಂದ ದಯಾಪರರಾಗಿರಲು ನಿಮ್ಮಿಂದ ಸಾಧ್ಯವಿರುವಷ್ಟನ್ನು ಮಾಡಿರಿ. ಅವರು ನಿಮಗೆ ದಬಾಯಿಸುವಲ್ಲಿ, ‘ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸಲು’ ಪ್ರಯತ್ನಿಸಿರಿ. (ರೋಮಾಪುರ 12:21) ಅಲ್ಲದೆ, ಸ್ವಂತ ಸಹೋದರರು ಸಹೋದರಿಯರು ಸಹ ಆಗಾಗ್ಗೆ ಘರ್ಷಿಸುವುದು ವಿಚಿತ್ರವಲ್ಲ.—ಅಧ್ಯಾಯ 6ನ್ನು ನೋಡಿರಿ.

ತಾಳ್ಮೆಯು ಪ್ರತಿಫಲವನ್ನು ತರುತ್ತದೆ!

“ಆದಿಗಿಂತ ಅಂತ್ಯವು ಲೇಸು; ಹಮ್ಮುಗಾರನಿಗಿಂತ ತಾಳ್ಮೆಯುಳ್ಳವನು ಉತ್ತಮ.” (ಪ್ರಸಂಗಿ 7:8) ಒಂದು ಮಲಕುಟುಂಬದ ಸದಸ್ಯರು, ಒಬ್ಬರು ಇನ್ನೊಬ್ಬರೊಂದಿಗೆ ಹಾಯಾದ ಅನಿಸಿಕೆಯನ್ನು ಅನುಭವಿಸುವ ಹಂತದ ವರೆಗೆ ಭರವಸೆಯು ಬೆಳೆಯಲಿಕ್ಕಾಗಿ, ಸಾಧಾರಣವಾಗಿ ಹಲವಾರು ವರ್ಷಗಳು ಬೇಕಾಗಿರುತ್ತವೆ. ಆಗ ಮಾತ್ರವೇ ವಿಭಿನ್ನವಾದ ಹವ್ಯಾಸಗಳು ಮತ್ತು ಮೌಲ್ಯಗಳು ಒಂದು ಕಾರ್ಯಸಾಧ್ಯ ನಿಯತಕ್ರಮದಲ್ಲಿ ಬೆರೆಯಬಹುದು. ಆದುದರಿಂದ ತಾಳ್ಮೆಯಿಂದಿರಿ! “ತತ್‌ಕ್ಷಣದ ಪ್ರೀತಿ”ಯನ್ನು ಅನುಭವಿಸುವುದನ್ನು ಅಥವಾ ಒಂದು “ತತ್‌ಕ್ಷಣದ ಕುಟುಂಬವು” ಪರಿಣಮಿಸುವುದನ್ನು ನಿರೀಕ್ಷಿಸಬೇಡಿರಿ.

ತಾಮಸ್‌ನ ತಾಯಿ ಪುನರ್ವಿವಾಹವಾದಾಗ, ಮಿತವಾಗಿ ಹೇಳುವುದಾದರೆ, ಅವನು ನೆಮ್ಮದಿಯಿಲ್ಲದವನಾಗಿದ್ದನು. ಅವನ ತಾಯಿಗೆ ನಾಲ್ಕು ಮಂದಿ ಮಕ್ಕಳಿದ್ದರು, ಮತ್ತು ಅವರು ವಿವಾಹವಾದ ಮನುಷ್ಯನಿಗೆ ಮೂರು ಮಕ್ಕಳಿದ್ದರು. “ನಮ್ಮಲ್ಲಿ ಜಗಳಗಳು, ವಿವಾದಗಳು, ಒಡಕುಗಳು, ಭಯಂಕರವಾದ ಭಾವನಾತ್ಮಕ ಒತ್ತಡಗಳು ಇದ್ದವು,” ಎಂದು ತಾಮಸ್‌ ಬರೆದನು. ಕಟ್ಟಕಡೆಯ ಯಶಸ್ಸನ್ನು ಯಾವುದು ತಂದಿತು? “ಬೈಬಲ್‌ ತತ್ತ್ವಗಳನ್ನು ಅನ್ವಯಿಸುವ ಮೂಲಕ, ವಿಷಯಗಳು ಬಗೆಹರಿಸಲ್ಪಟ್ಟವು; ಯಾವಾಗಲೂ ತತ್‌ಕ್ಷಣವಲ್ಲ, ಆದರೆ ಸಮಯ ಮತ್ತು ದೇವರ ಆತ್ಮದ ಫಲಗಳ ಅನ್ವಯದೊಂದಿಗೆ, ಪರಿಸ್ಥಿತಿಗಳು ಕಟ್ಟಕಡೆಗೆ ಸುಗಮಗೊಂಡವು.”—ಗಲಾತ್ಯ 5:22, 23.

ಬೈಬಲ್‌ ತತ್ತ್ವಗಳಿಗೆ ಬದ್ಧತೆಯು, ಒಂದು ಮಲಕುಟುಂಬದಲ್ಲಿ ಯಶಸ್ಸನ್ನು ನಿಜವಾಗಿಯೂ ತರುತ್ತದೆಂಬುದು, ನಾವು ಸಂದರ್ಶಿಸಿದ ಈ ಮುಂದಿನ ಯುವ ಜನರ ಅನುಭವಗಳಿಂದ ದೃಷ್ಟಾಂತಿಸಲ್ಪಡುತ್ತದೆ:

ಯಶಸ್ವೀ ಮಲಕುಟುಂಬಗಳಲ್ಲಿರುವ ಯುವ ಜನರು

ಸಂದರ್ಶಕ: ನಿಮ್ಮ ಮಲಹೆತ್ತವರ ಶಿಸ್ತಿನ ವಿಷಯದಲ್ಲಿ ತೀವ್ರವಾಗಿ ಅಸಮಾಧಾನಪಡುವುದನ್ನು ನೀವು ಹೇಗೆ ದೂರಮಾಡಿದಿರಿ?

ಲಿಂಚ್‌: ನನ್ನ ತಾಯಿ ಮತ್ತು ಮಲತಂದೆ ಯಾವಾಗಲೂ ಶಿಸ್ತಿನ ವಿಷಯದಲ್ಲಿ ಒಮ್ಮತದಿಂದಿರುತ್ತಿದ್ದರು. ಏನಾದರೂ ಸಂಭವಿಸಿದಾಗ, ಅವರಿಬ್ಬರೂ ಅದನ್ನು ಮಾಡುವ ಒಂದು ನಿರ್ಣಯಕ್ಕೆ ಬರುತ್ತಿದ್ದರು, ಆದುದರಿಂದ ನನಗೆ ಏಟು ಸಿಗುತ್ತಿದ್ದಾಗ, ಅದು ಇಬ್ಬರಿಂದಲೂ ಎಂದು ನನಗೆ ತಿಳಿದಿತ್ತು.

ಲಿಂಡ: ಆರಂಭದಲ್ಲಿ ಅದು ತುಂಬ ಕಷ್ಟಕರವಾಗಿತ್ತು, ಯಾಕಂದರೆ ನಾನು, “ನನಗೆ ಇದನ್ನು ಹೇಳಲು ನಿಮಗೆ ಯಾವ ಹಕ್ಕಿದೆ?” ಎಂದು ಹೇಳುತ್ತಿದ್ದೆ. ಆದರೆ ಅನಂತರ ‘ನಿನ್ನ ತಂದೆ ಮತ್ತು ತಾಯಿಯನ್ನು ಸನ್ಮಾನಿಸು’ ಎಂದು ಬೈಬಲ್‌ ಹೇಳುವಂತಹ ವಿಷಯದ ಕುರಿತಾಗಿ ನಾನು ಯೋಚಿಸಿದೆ. ಅವರು ನನ್ನ ಸ್ವಾಭಾವಿಕ ತಂದೆಯಾಗಿರದಿದ್ದರೂ, ದೇವರ ದೃಷ್ಟಿಯಲ್ಲಿ ಅವರು ಇನ್ನೂ ನನ್ನ ತಂದೆಯಾಗಿದ್ದರು.

ರಾಬಿನ್‌: ನನ್ನ ತಾಯಿಯು ಪ್ರೀತಿಸುತ್ತಿದ್ದ ವ್ಯಕ್ತಿಯ ವಿಷಯದಲ್ಲಿ ತೀವ್ರ ಅಸಮಾಧಾನವನ್ನು ತೋರಿಸುವುದು ಅವಳನ್ನು ಗಾಢವಾಗಿ ನೋಯಿಸುವುದೆಂದು ನನಗೆ ತಿಳಿದಿತ್ತು.

ಸಂದರ್ಶಕ: ಒಳ್ಳೆಯ ಸಂವಾದವನ್ನು ಯಾವುದು ಪ್ರವರ್ಧಿಸಿತು?

ಲಿಂಚ್‌: ನಿಮ್ಮ ಮಲಹೆತ್ತವರು ಏನನ್ನು ಮಾಡುತ್ತಾರೊ ಅದರಲ್ಲಿ ನೀವು ಆಸಕ್ತಿಯುಳ್ಳವರಾಗಬೇಕು. ನಾನು ಅವರ ಐಹಿಕ ಕೆಲಸದಲ್ಲಿ ಅವರಿಗೆ ಸಹಾಯ ಮಾಡಿದೆ. ಮತ್ತು ನಾವು ಕೆಲಸಮಾಡುತ್ತಿದ್ದಂತೆ ಮಾತಾಡುತ್ತಾ ಇರುತ್ತಿದ್ದೆವು. ಇದು ನನಗೆ ಅವರು ಯೋಚಿಸುವ ವಿಧವನ್ನು ಅರಿತುಕೊಳ್ಳಲು ಸಹಾಯ ಮಾಡಿತು. ಬೇರೆ ಸಮಯಗಳಲ್ಲಿ ನಾನು ಅವರೊಂದಿಗೆ ಸುಮ್ಮನೆ ಕುಳಿತುಕೊಳ್ಳುತ್ತಿದ್ದೆ, ಮತ್ತು ನಾವು ‘ಕ್ಷುಲ್ಲಕ’ವಾದ ವಿಷಯಗಳ ಕುರಿತಾಗಿ ಮಾತಾಡುತ್ತಿದ್ದೆವು.

ವ್ಯಾಲರಿ: ನನ್ನ ಮಲತಾಯಿ ಮತ್ತು ನಾನು ಜೊತೆಯಾಗಿ ತುಂಬ ಸಮಯವನ್ನು ಕಳೆದೆವು, ಮತ್ತು ನನಗೆ ಅವರನ್ನು ಅರ್ಥಮಾಡಿಕೊಳ್ಳಲು ನಿಜವಾಗಿಯೂ ಸಾಧ್ಯವಾಯಿತು. ನಾವು ಅತ್ಯಂತ ಆಪ್ತ ಸ್ನೇಹಿತರಾದೆವು.

ರಾಬಿನ್‌: ನನ್ನ ತಾಯಿಯ ಪುನರ್ವಿವಾಹದ ಒಂದು ವರ್ಷದ ಹಿಂದೆಯಷ್ಟೇ ನನ್ನ ತಂದೆ ಸತ್ತುಹೋಗಿದ್ದರು. ನಾನು ನನ್ನ ಮಲತಂದೆಗೆ ಆಪ್ತನಾಗಲು ನಿರಾಕರಿಸಿದೆ, ಏಕಂದರೆ ಅವರು ನನ್ನ ತಂದೆಯ ಸ್ಥಾನಭರ್ತಿಮಾಡುವುದನ್ನು ನಾನು ಬಯಸಲಿಲ್ಲ. ನಾನು ನನ್ನ ತಂದೆಯ ಮರಣದ ದುಃಖವನ್ನು ಮರೆಯುವಂತೆ ಮತ್ತು ನನ್ನ ಮಲತಂದೆಗೆ ಹೆಚ್ಚು ಆಪ್ತನಾಗುವಂತೆ ಸಹಾಯ ಮಾಡಲು ದೇವರಿಗೆ ಪ್ರಾರ್ಥಿಸಿದೆ. ನಾನು ಬಹಳಷ್ಟು ಪ್ರಾರ್ಥಿಸಿದೆ. ಯೆಹೋವನು ನಿಜವಾಗಿಯೂ ಈ ಪ್ರಾರ್ಥನೆಗಳನ್ನು ಉತ್ತರಿಸಿದನು.

ಸಂದರ್ಶಕ: ಹೆಚ್ಚು ಆಪ್ತರಾಗಲು ನೀವು ಏನು ಮಾಡಿದಿರಿ?

ವ್ಯಾಲರಿ: ಕೆಲವೊಮ್ಮೆ ನಾನು ನನ್ನ ಮಲತಾಯಿಗೆ, ನನ್ನೊಂದಿಗೆ—ನಾವಿಬ್ಬರೇ—ಒಂದು ಪ್ರದರ್ಶನಕ್ಕೆ ಬರುವಂತೆ ಕೇಳಿಕೊಳ್ಳುತ್ತಿದ್ದೆ. ಅಥವಾ ನಾನು ಹೊರಗಿರುತ್ತಿದ್ದಾಗ, ನಾನು ಅವರ ಕುರಿತಾಗಿ ಯೋಚಿಸುತ್ತಿದ್ದೆನೆಂದು ತೋರಿಸಲಿಕ್ಕಾಗಿ, ಏನನ್ನಾದರೂ—ಕೆಲವು ಹೂವುಗಳನ್ನು ಅಥವಾ ಒಂದು ಹೂದಾನಿಯನ್ನು—ಖರೀದಿಸುತ್ತಿದ್ದೆ. ಅವರು ಇದನ್ನು ನಿಜವಾಗಿಯೂ ಗಣ್ಯಮಾಡಿದರು.

ಎರಿಕ್‌: ನೀವಿಬ್ಬರೂ ಆನಂದಿಸುವ ಯಾವುದೋ ವಿಷಯಕ್ಕಾಗಿ ನೀವು ಹುಡುಕಬೇಕು. ನನ್ನ ಮಲತಂದೆಯಲ್ಲಿ ಮತ್ತು ನನ್ನಲ್ಲಿ ಸಾಮಾನ್ಯವಾಗಿದ್ದ ಏಕಮಾತ್ರ ಸಂಗತಿಯೇನಂದರೆ, ಅವರು ನನ್ನ ತಾಯಿಗೆ ವಿವಾಹವಾಗಿದ್ದರು ಮತ್ತು ನಾವು ಒಂದೇ ಮನೆಯಲ್ಲಿ ವಾಸಿಸಿದೆವು. ಬೈಬಲಿನಲ್ಲಿ ಅವರಿಗಿದ್ದಂತಹದ್ದೇ ರೀತಿಯ ಆಸಕ್ತಿಯನ್ನು ನಾನು ತೆಗೆದುಕೊಳ್ಳಲು ಆರಂಭಿಸಿದಾಗ, ಅತಿ ದೊಡ್ಡದಾದ ಸಹಾಯವು ಒದಗಿಬಂತು. ನಾನು ಯೆಹೋವ ದೇವರಿಗೆ ಹೆಚ್ಚು ಆಪ್ತನಾದಂತೆ, ನಾನು ನನ್ನ ಮಲತಂದೆಗೆ ಹೆಚ್ಚು ಆಪ್ತನಾದೆ. ಈಗ ನಮ್ಮಲ್ಲಿ ನಿಜವಾಗಿಯೂ ಸಾಮಾನ್ಯವಾದ ಒಂದು ಸಂಗತಿಯಿತ್ತು!

ಸಂದರ್ಶಕ: ನೀವು ವೈಯಕ್ತಿಕವಾಗಿ ಹೇಗೆ ಪ್ರಯೋಜನ ಪಡೆದಿದ್ದೀರಿ?

ರಾಬಿನ್‌: ನಾನು ನನ್ನ ತಾಯಿಯೊಂದಿಗೆ ಮಾತ್ರ ವಾಸಿಸುತ್ತಿದ್ದಾಗ, ನಾನು ಪ್ರತಿಭಟಕನೂ, ಸ್ವಾರ್ಥಿಯೂ ಆಗಿದ್ದೆ. ಯಾವಾಗಲೂ ನಾನು ಹೇಳಿದಂತೆ ಆಗಬೇಕೆಂದು ಬಯಸುತ್ತಿದ್ದೆ. ಈಗ ನಾನು ಇತರರನ್ನು ಪರಿಗಣಿಸಲು ಮತ್ತು ಹೆಚ್ಚು ನಿಸ್ವಾರ್ಥಿಯಾಗಿರಲು ಕಲಿತಿದ್ದೇನೆ.

ಲಿಂಚ್‌: ನನ್ನ ಮಲತಂದೆ ನನಗೆ ಒಬ್ಬ ಪುರುಷನಂತೆ ಯೋಚಿಸಲು ಸಹಾಯ ಮಾಡಿದರು. ನಾನು ಕೌಶಲಗಳನ್ನು ಕಲಿತುಕೊಳ್ಳುವಂತೆ ಮತ್ತು ನನ್ನ ಕೈಗಳನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ತಿಳಿಯುವಂತೆ ಅವರು ನನಗೆ ಸಹಾಯ ಮಾಡಿದ್ದಾರೆ. ಸಮಯಗಳು ಕಷ್ಟಕರವಾಗಿದ್ದು, ನನಗೆ ಯಾರಾದರೊಬ್ಬರ ಅಗತ್ಯವಿದ್ದಾಗ, ಅವರು ಸಹಾಯ ಮಾಡಲು ಸಿದ್ಧರಿದ್ದರು. ಹೌದು, ಯಾರಿಗೂ ಇರಸಾಧ್ಯವಿರುವ ಅತಿ ಉತ್ತಮವಾದ ತಂದೆ ಅವರಾಗಿದ್ದಾರೆ.

ಚರ್ಚೆಗಾಗಿ ಪ್ರಶ್ನೆಗಳು

◻ ತಮ್ಮ ಹೆತ್ತವರು ಪುನರ್ವಿವಾಹವಾಗುವಾಗ ಅನೇಕ ಯುವ ಜನರಿಗೆ ಹೇಗನಿಸುತ್ತದೆ? ಏಕೆ?

◻ ಕ್ರೈಸ್ತ ಪ್ರೀತಿಯನ್ನು ತೋರಿಸುವುದು, ಒಬ್ಬ ಯುವ ವ್ಯಕ್ತಿಗೆ ನಿಭಾಯಿಸಲು ಹೇಗೆ ಸಹಾಯ ಮಾಡುತ್ತದೆ?

◻ ಒಬ್ಬ ಮಲಹೆತ್ತವರ ಶಿಸ್ತಿಗೆ ನೀವು ಅಧೀನರಾಗಲೇಬೇಕೊ?

◻ ಸಂಧಾನಮಾಡಿಕೊಳ್ಳುವುದು ಮತ್ತು ಹಂಚಿಕೊಳ್ಳುವುದು ಹೇಗೆಂದು ತಿಳಿದಿರುವುದು ಪ್ರಾಮುಖ್ಯವೇಕೆ?

◻ ಮಲಸಹೋದರರು ಮತ್ತು ಮಲಸಹೋದರಿಯರೊಂದಿಗೆ ಸಮಾನವಾದ ಉಪಚಾರವನ್ನು ನೀವು ನಿರೀಕ್ಷಿಸಬೇಕೊ? ನಿಮ್ಮನ್ನು ಅನ್ಯಾಯವಾಗಿ ಉಪಚರಿಸಲಾಗುತ್ತಿದೆಯೆಂದು ನಿಮಗನಿಸುವಲ್ಲಿ, ಆಗೇನು?

◻ ಒಬ್ಬ ಮಲಹೆತ್ತವರೊಂದಿಗೆ ಹೆಚ್ಚು ಉತ್ತಮವಾಗಿ ಹೊಂದಿಕೊಂಡು ಹೋಗಲು ಸಹಾಯ ಮಾಡುವ ಯಾವ ಕೆಲವು ವಿಷಯಗಳನ್ನು ನೀವು ಮಾಡಸಾಧ್ಯವಿದೆ?

[ಪುಟ 45 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನ್ನ ತಂದೆಯ ನಿಶ್ಚಯಾರ್ಥ ವಧುವು, ನನ್ನ ತಾಯಿಯ ಸ್ಥಾನವನ್ನು ಆಕ್ರಮಿಸುತ್ತಿದ್ದಳೆಂದು ನಾನು ನೆನಸಿದೆ, ಆದುದರಿಂದ ನಾನು ಅವಳೊಂದಿಗೆ ತುಂಬ ನೀಚಳಾಗಿ ವರ್ತಿಸಿದೆ”

[ಪುಟ 43 ರಲ್ಲಿರುವ ಚಿತ್ರ]

ಹೆತ್ತವರಲ್ಲೊಬ್ಬರ ಪುನರ್ವಿವಾಹವು ಅನೇಕ ವೇಳೆ, ಕೋಪ, ಅಸುರಕ್ಷೆ, ಮತ್ತು ಈರ್ಷ್ಯೆಯ ಅನಿಸಿಕೆಗಳನ್ನು ಹೊತ್ತಿಸಬಲ್ಲದು

[ಪುಟ 46 ರಲ್ಲಿರುವ ಚಿತ್ರ]

ಒಬ್ಬ ಮಲಹೆತ್ತವರಿಂದ ಬರುವ ಶಿಸ್ತಿಗೆ ಅನೇಕವೇಳೆ ತೀವ್ರ ಅಸಮಾಧಾನವು ವ್ಯಕ್ತಪಡಿಸಲ್ಪಡುತ್ತದೆ