ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ಏಕೆ ‘ನನ್ನ ತಂದೆತಾಯಿಗಳನ್ನು ಸನ್ಮಾನಿಸ’ಬೇಕು?

ನಾನು ಏಕೆ ‘ನನ್ನ ತಂದೆತಾಯಿಗಳನ್ನು ಸನ್ಮಾನಿಸ’ಬೇಕು?

ಅಧ್ಯಾಯ 1

ನಾನು ಏಕೆ ‘ನನ್ನ ತಂದೆತಾಯಿಗಳನ್ನು ಸನ್ಮಾನಿಸ’ಬೇಕು?

‘ನಿನ್ನ ತಂದೆತಾಯಿಗಳನ್ನು ಸನ್ಮಾನಿಸು.’ ಅನೇಕ ಯುವ ಜನರಿಗೆ ಈ ಮಾತುಗಳು ಅಂಧಕಾರ ಯುಗಗಳಿಂದ ಹೊರಬಂದಂತಹವುಗಳಾಗಿ ಧ್ವನಿಸುತ್ತವೆ.

ಯುವ ವೀಡ, ಅಮಲೌಷಧ ಮತ್ತು ಮದ್ಯಸಾರವನ್ನು ದುರುಪಯೋಗಿಸುತ್ತಿದ್ದ ಒಬ್ಬ ಹುಡುಗನೊಂದಿಗೆ ಡೇಟಿಂಗ್‌ (ವಿಹಾರನಿಶ್ಚಯ) ಮಾಡುವ ಮೂಲಕ, ತನ್ನ ತಂದೆಯ ವಿರುದ್ಧ ಬಹಿರಂಗವಾಗಿ ಪ್ರತಿಭಟಿಸಿದಳು. ಧಿಕ್ಕರಿಸುತ್ತ, ಅವಳು ಮುಂಜಾವದ ತನಕ ಡ್ಯಾನ್ಸ್‌ ಮಾಡಲೂ ಹೊರಹೋಗುತ್ತಿದ್ದಳು. “ಅವರು ತುಂಬ ಕಟ್ಟುನಿಟ್ಟಿನವರು ಎಂದು ನನಗೆ ಅನಿಸಿತು,” ಎಂದು ವೀಡ ವಿವರಿಸುತ್ತಾಳೆ. “ನಾನು 18 ವರ್ಷ ಪ್ರಾಯದವಳಾಗಿದ್ದೆ, ಮತ್ತು ನನಗೆ ಎಲ್ಲಾ ತಿಳಿದಿದೆ ಎಂದು ನೆನಸಿದೆ. ನನ್ನ ತಂದೆ ಕೀಳುಮನಸ್ಸಿನವರಾಗಿದ್ದು, ನಾನು ಸುಸಮಯ ಅನುಭವಿಸುವುದನ್ನು ಬಯಸುತ್ತಿರಲಿಲ್ಲವೆಂದು ನನಗನಿಸಿತು. ಆದುದರಿಂದ ನಾನು ಹೊರಹೋಗಿ, ನಾನು ಮಾಡಬಯಸಿದಂಥದ್ದನ್ನು ಮಾಡಿದೆ.”

ಹೆಚ್ಚಿನ ಯುವ ಜನರು ವೀಡಳ ವರ್ತನೆಯ ವಿಷಯದಲ್ಲಿ ಬಹುಶಃ ಅಸಮ್ಮತಿಯನ್ನು ಸೂಚಿಸಾರು. ಆದರೂ, ತಮ್ಮ ಕೋಣೆಯನ್ನು ಶುಚಿಗೊಳಿಸುವಂತೆ, ತಮ್ಮ ಶಾಲಾ ಮನೆಕೆಲಸವನ್ನು ಮಾಡುವಂತೆ, ಅಥವಾ ಒಂದು ನಿರ್ದಿಷ್ಟ ತಾಸಿನೊಳಗೆ ಮನೆಯಲ್ಲಿರುವಂತೆ ಅವರ ಹೆತ್ತವರು ಆಜ್ಞಾಪಿಸಿದರೆ, ಅನೇಕರು ತೀವ್ರ ಅಸಮಾಧಾನದಿಂದ ಕುದಿಯುತ್ತಾರೆ, ಅಥವಾ ಇನ್ನೂ ಕೆಟ್ಟದ್ದಾಗಿ, ತಮ್ಮ ಹೆತ್ತವರ ವಿರುದ್ಧವಾಗಿ ಮುಚ್ಚುಮರೆಯಿಲ್ಲದೆ ಪ್ರತಿಭಟಿಸುತ್ತಾರೆ! ಒಬ್ಬ ಯೌವನಸ್ಥನು ತನ್ನ ಹೆತ್ತವರನ್ನು ದೃಷ್ಟಿಸುವ ವಿಧವಾದರೊ, ಕಟ್ಟಕಡೆಗೆ ಮನೆಯಲ್ಲಿ ಯುದ್ಧ ಮತ್ತು ಶಾಂತಿಯ ನಡುವಿನ ವ್ಯತ್ಯಾಸವನ್ನು ಮಾತ್ರವಲ್ಲ, ಅವನ ಸ್ವಂತ ಜೀವವನ್ನೇ ಅರ್ಥೈಸಬಲ್ಲದು. ಯಾಕಂದರೆ ‘ನಿನ್ನ ಹೆತ್ತವರನ್ನು ಸನ್ಮಾನಿಸು’ ಎಂಬ ಆಜ್ಞೆಯು ದೇವರಿಂದ ಬರುತ್ತದೆ, ಮತ್ತು ಈ ಆಜ್ಞೆಯೊಂದಿಗೆ ಆತನು ಈ ಮುಂದಿನ ಪ್ರೇರಕವನ್ನು ಜೋಡಿಸುತ್ತಾನೆ: “ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.” (ಎಫೆಸ 6:2, 3) ಪ್ರಯೋಜನಗಳಾಗಲಿ ನಷ್ಟಗಳಾಗಲಿ ಅಧಿಕವಾಗಿವೆ. ಹೀಗಿರುವುದರಿಂದ, ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸುವುದು ನಿಜವಾಗಿಯೂ ಏನನ್ನು ಅರ್ಥೈಸುತ್ತದೆಂಬುದರ ಕಡೆಗೆ ನಾವು ಒಂದು ನೂತನ ನೋಟವನ್ನು ಹರಿಸೋಣ.

ಅವರನ್ನು ‘ಸನ್ಮಾನಿಸುವುದು’ ಎಂಬುದರ ಅರ್ಥ

“ಸನ್ಮಾನ”ವು, ಯೋಗ್ಯವಾಗಿ ನಿಯೋಜಿಸಲ್ಪಟ್ಟಿರುವ ಅಧಿಕಾರದ ಅಂಗೀಕಾರವನ್ನು ಒಳಗೂಡುತ್ತದೆ. ದೃಷ್ಟಾಂತಕ್ಕಾಗಿ, ಕ್ರೈಸ್ತರು “ಅರಸನನ್ನು ಸನ್ಮಾನಿ”ಸುವಂತೆ ಆಜ್ಞಾಪಿಸಲ್ಪಟ್ಟಿದ್ದಾರೆ. (1 ಪೇತ್ರ 2:17) ನೀವು ಒಬ್ಬ ರಾಷ್ಟ್ರದ ಅಧಿಪತಿಯೊಂದಿಗೆ ಯಾವಾಗಲೂ ಸಮ್ಮತಿಸಲಿಕ್ಕಿಲ್ಲವಾದರೂ, ಅವನ ಸ್ಥಾನ ಅಥವಾ ಹುದ್ದೆಯನ್ನು ಆಗಲೂ ಗೌರವಿಸಲೇಬೇಕು. ತದ್ರೀತಿಯಲ್ಲಿ, ದೇವರು ಹೆತ್ತವರಿಗೆ ಕುಟುಂಬದಲ್ಲಿ ನಿರ್ದಿಷ್ಟ ಅಧಿಕಾರವನ್ನು ವಹಿಸಿದ್ದಾನೆ. ಇದರ ಅರ್ಥ, ನಿಮಗಾಗಿ ಕಟ್ಟಳೆಗಳನ್ನು ಮಾಡುವ ಅವರ ದೇವದತ್ತ ಹಕ್ಕನ್ನು ನೀವು ಅಂಗೀಕರಿಸಲೇಬೇಕು. ಬೇರೆ ಹೆತ್ತವರು ನಿಮ್ಮ ಹೆತ್ತವರಿಗಿಂತ ಹೆಚ್ಚು ಸೌಮ್ಯಭಾವದವರಾಗಿರಬಹುದು, ನಿಜ. ನಿಮ್ಮ ಹೆತ್ತವರಿಗಾದರೊ, ನಿಮಗೆ ಯಾವುದು ಅತ್ಯುತ್ತಮವಾಗಿದೆಯೊ ಅದನ್ನು ನಿರ್ಣಯಿಸುವ ಕೆಲಸವಿದೆ—ಮತ್ತು ವಿಭಿನ್ನ ಕುಟುಂಬಗಳಿಗೆ ವಿಭಿನ್ನ ಮಟ್ಟಗಳಿರಬಹುದು.

ಹೆತ್ತವರಲ್ಲಿ ಅತ್ಯುತ್ತಮರಾಗಿರುವವರೂ ಆಗಾಗ್ಗೆ ಸ್ವೇಚ್ಛಾನುವಾದಿಗಳೂ—ಪಕ್ಷಪಾತಿಗಳೂ—ಆಗಿರಬಲ್ಲರೆಂಬುದು ಕೂಡ ಸತ್ಯ. ಆದರೆ ಜ್ಞಾನೋಕ್ತಿ 7:1, 2ರಲ್ಲಿ ಒಬ್ಬ ವಿವೇಕಿ ಹೆತ್ತವನು ಹೇಳಿದ್ದು: “ಕಂದಾ, . . . ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು.” ಹಾಗೆಯೇ, ನಿಮ್ಮ ಹೆತ್ತವರ ನಿಯಮಗಳು, ಅಥವಾ ‘ಆಜ್ಞೆಗಳು’ ಸಾಮಾನ್ಯವಾಗಿ ನಿಮ್ಮ ಒಳಿತಿನ ಉದ್ದೇಶದಿಂದಾಗಿರುತ್ತವೆ ಮತ್ತು ಅವರ ಪ್ರಾಮಾಣಿಕವಾದ ಪ್ರೀತಿ ಮತ್ತು ಚಿಂತೆಯ ಅಭಿವ್ಯಕ್ತಿಯಾಗಿವೆ.

ಉದಾಹರಣೆಗಾಗಿ, ಜಾನ್‌ಗೆ, ಅವರ ಮನೆಯ ಹತ್ತಿರದಲ್ಲಿದ್ದ ಆರು-ಸಂದಿಯುಳ್ಳ ಹೆದ್ದಾರಿಯ ಮೇಲಿನಿಂದ ಹೋಗುವ ಕಾಲುದಾರಿಯನ್ನು ಯಾವಾಗಲೂ ಉಪಯೋಗಿಸಬೇಕೆಂದು, ಅವನ ತಾಯಿಯಿಂದ ಪದೇಪದೇ ಹೇಳಲಾಗಿತ್ತು. ಒಂದು ದಿನ, ಶಾಲೆಯ ಇಬ್ಬರು ಹುಡುಗಿಯರು, ನೇರವಾಗಿ ರಸ್ತೆಯ ಅಡ್ಡಹಾದಿಯಿಂದಲೇ ಹೋಗಲು ಅವನನ್ನು ಆಹ್ವಾನಿಸಿದರು. “ಪುಕ್ಕಲು!” ಎಂಬ ಅವರ ಮೂದಲಿಕೆಗಳನ್ನು ಅಲಕ್ಷಿಸುತ್ತಾ, ಜಾನ್‌ ಕಾಲುದಾರಿಯನ್ನು ಹಿಡಿದನು. ಸ್ವಲ್ಪದೂರ ಹೋಗಿರುವಾಗ, ಟೈಅರ್‌ಗಳ ಕಿರ್ರ್‌ ಎಂಬ ಶಬ್ದವನ್ನು ಜಾನ್‌ ಕೇಳಿಸಿಕೊಂಡನು. ಕೆಳಗೆ ನೋಡಿದಾಗ, ಆ ಇಬ್ಬರು ಹುಡುಗಿಯರಿಗೆ ಒಂದು ಕಾರ್‌ ಬಡಿದು, ಗಾಳಿಯಲ್ಲಿ ಎಸೆಯಲ್ಪಟ್ಟದ್ದನ್ನು ಅವನು ದಿಗಿಲುಗೊಂಡು ನೋಡಿದನು! ನಿಮ್ಮ ಹೆತ್ತವರಿಗೆ ವಿಧೇಯರಾಗುವುದು, ಜೀವಮರಣಗಳ ವಿಷಯವಾಗಿರುವುದು ಅಪರೂಪವೆಂಬುದು ಒಪ್ಪತಕ್ಕ ವಿಷಯವೇ. ಹಾಗಿದ್ದರೂ, ವಿಧೇಯತೆಯು ಸಾಮಾನ್ಯವಾಗಿ ನಿಮಗೆ ಪ್ರಯೋಜನವನ್ನು ತರುತ್ತದೆ.

‘ನಿಮ್ಮ ಹೆತ್ತವರನ್ನು ಸನ್ಮಾನಿಸುವುದು,’ ತಿದ್ದುಪಾಟನ್ನು ಸ್ವೀಕರಿಸುವುದನ್ನೂ ಅರ್ಥೈಸುತ್ತದೆ. ತಿದ್ದುಪಾಟು ನೀಡಲ್ಪಡುವಾಗ ಮುನಿಯುವುದು ಅಥವಾ ಸಿಡುಕುವುದಲ್ಲ. ಕೇವಲ ಒಬ್ಬ ಮೂರ್ಖನು ತಾನೇ “ತಂದೆಯ ಶಿಕ್ಷೆಯನ್ನು ತಿರಸ್ಕರಿಸುವನು” ಎಂದು ಜ್ಞಾನೋಕ್ತಿ 15:5 ಹೇಳುತ್ತದೆ.

ಕೊನೆಯಲ್ಲಿ, ಸನ್ಮಾನವನ್ನು ತೋರಿಸುವುದು, ಬರಿಯ ಔಪಚಾರಿಕ ಗೌರವವನ್ನು ಅಥವಾ ಅಸಮಾಧಾನಪಡುತ್ತಾ ವಿಧೇಯತೆಯನ್ನು ಸಲ್ಲಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಅರ್ಥೈಸುತ್ತದೆ. ಬೈಬಲಿನಲ್ಲಿ “ಸನ್ಮಾನ” ಎಂಬ ಪದದ ಮೂಲ ಗ್ರೀಕ್‌ ಕ್ರಿಯಾಪದವು, ಮೂಲತಃ ಒಬ್ಬರನ್ನು ಉಚ್ಚ ಮೌಲ್ಯವುಳ್ಳವರಾಗಿ ಪರಿಗಣಿಸುವುದನ್ನು ಅರ್ಥೈಸುತ್ತದೆ. ಹೀಗೆ ಹೆತ್ತವರು, ಅಮೂಲ್ಯರು, ಬಹಳ ಮಾನ್ಯರು, ಮತ್ತು ನಿಮಗೆ ಪ್ರಿಯರಾಗಿ ವೀಕ್ಷಿಸಲ್ಪಡಬೇಕು. ಇದು ಅವರಿಗಾಗಿ ಹೃದಯೋಲ್ಲಾಸದ, ಗಣ್ಯತಾಭಾವದ ಭಾವನೆಗಳನ್ನು ಹೊಂದಿರುವುದನ್ನು ಒಳಗೊಳ್ಳುತ್ತದೆ. ಆದಾಗಲೂ, ಕೆಲವು ಯುವ ಜನರಿಗೆ ತಮ್ಮ ಹೆತ್ತವರ ಕಡೆಗೆ ಹೃದಯೋಲ್ಲಾಸದ ಭಾವನೆಗಳನ್ನು ಬಿಟ್ಟು ಬೇರೆಲ್ಲಾ ರೀತಿಯ ಭಾವನೆಗಳು ಇರುತ್ತವೆ.

ಸಮಸ್ಯಾತ್ಮಕ ಹೆತ್ತವರು—ಸನ್ಮಾನಕ್ಕೆ ಯೋಗ್ಯರೋ?

ಜೀನಾ ಎಂಬ ಹೆಸರಿನ ಒಬ್ಬ ಯೌವನಸ್ಥೆಯು ಬರೆದುದು: “ನನ್ನ ಅಪ್ಪ ತುಂಬಾ ಕುಡಿಯುತ್ತಿದ್ದರು, ಮತ್ತು ನನ್ನ ಹೆತ್ತವರು ವಾದಿಸುತ್ತಾ, ತುಂಬ ಕಿರಿಚಾಡುತ್ತಿದ್ದುದರಿಂದ ನನಗೆ ಮಲಗಲು ಸಾಧ್ಯವಾಗುತ್ತಿರಲಿಲ್ಲ. ನಾನು ಮಂಚದ ಮೇಲೆ ಸುಮ್ಮನೆ ಬಿದ್ದುಕೊಂಡು ಅಳುತ್ತಿರುತ್ತಿದ್ದೆ. ಅದರ ಕುರಿತು ನನಗೆ ಹೇಗನಿಸುತ್ತಿತ್ತೆಂದು ನಾನು ಅವರಿಗೆ ಹೇಳಸಾಧ್ಯವಿರಲಿಲ್ಲ, ಯಾಕಂದರೆ ಬಹುಶಃ ಅಮ್ಮ ನನ್ನನ್ನು ಹೊಡೆಯುತ್ತಿದ್ದರು. ‘ನಿನ್ನ ತಂದೆಯನ್ನು ಸನ್ಮಾನಿಸು’ ಎಂದು ಬೈಬಲು ಹೇಳುತ್ತದೆ, ಆದರೆ ನನಗೆ ಸನ್ಮಾನಿಸಲಿಕ್ಕೆ ಆಗುವುದಿಲ್ಲ.”

ಸಿಡುಕಿನ ಅಥವಾ ಅನೈತಿಕರಾಗಿರುವ ಹೆತ್ತವರು, ಕುಡುಕರು, ಅಥವಾ ಪರಸ್ಪರ ಕಾದಾಡುವ ಹೆತ್ತವರು, ನಿಜವಾಗಿಯೂ ಸನ್ಮಾನಕ್ಕೆ ಯೋಗ್ಯರಾಗಿದ್ದಾರೊ? ಹೌದು, ಯಾಕಂದರೆ ಯಾವ ಹೆತ್ತವನನ್ನೂ “ತಿರಸ್ಕಾರ”ದಿಂದ (NW) ನೋಡುವುದನ್ನು ಬೈಬಲ್‌ ಖಂಡಿಸುತ್ತದೆ. (ಜ್ಞಾನೋಕ್ತಿ 30:17) ಇದಲ್ಲದೆ, ನಿಮ್ಮ ಹೆತ್ತವರು “ನಿನ್ನ ಜನನಕ್ಕೆ ಕಾರಣರಾಗಿದ್ದಾರೆ” ಎಂದು ಜ್ಞಾನೋಕ್ತಿ 23:22 (NW) ನಮಗೆ ಇನ್ನೂ ಮುಂದಕ್ಕೆ ಜ್ಞಾಪಕಹುಟ್ಟಿಸುತ್ತದೆ. ಅವರನ್ನು ಸನ್ಮಾನಿಸಲು ಈ ಕಾರಣವೊಂದೇ ಸಾಕು. ಒಂದು ಸಮಯದಲ್ಲಿ ತುಂಬ ಅಗೌರವಭಾವದವನಾಗಿದ್ದ ಗ್ರೆಗರಿ, ಈಗ ಹೇಳುವುದು: “[ನನ್ನ ತಾಯಿ] ನನ್ನ ಗರ್ಭಪಾತ ಮಾಡದಿದ್ದುದಕ್ಕಾಗಿ ಅಥವಾ ನಾನು ಮಗುವಾಗಿದ್ದಾಗ ನನ್ನನ್ನು ಕಸದ ಡಬ್ಬಿಯಲ್ಲಿ ಎಸೆಯದಿದ್ದುದಕ್ಕಾಗಿ ನಾನು ಯೆಹೋವ ದೇವರಿಗೆ ಉಪಕಾರ ಹೇಳುತ್ತೇನೆ. ಅವರು ಒಂಟಿ ಹೆತ್ತವರು, ಮತ್ತು ನಾವು ಆರು ಮಂದಿ ಮಕ್ಕಳಿದ್ದೆವು. ಅದು ಅವರಿಗೆ ಕಷ್ಟದ ಕೆಲಸವಾಗಿತ್ತೆಂಬುದು ನನಗೆ ಗೊತ್ತು.”

ನಿಮ್ಮ ಹೆತ್ತವರು ಪರಿಪೂರ್ಣರಾಗಿಲ್ಲದಿರುವುದಾದರೂ, ಅವರು ನಿಮಗಾಗಿ ಅನೇಕ ತ್ಯಾಗಗಳನ್ನೂ ಮಾಡಿದ್ದಾರೆ. “ಒಂದು ಸಮಯದಲ್ಲಿ ನಮಗೆ ತಿನ್ನಲಿಕ್ಕಾಗಿ ಉಳಿದಂಥದ್ದು, ಒಂದು ಡಬ್ಬಿ ಜೋಳ ಮತ್ತು ತುಸು ಅಂಬಲಿ ಮಾತ್ರ,” ಎಂದು ಗ್ರೆಗರಿ ಮುಂದುವರಿಸುತ್ತಾನೆ. “ನನ್ನ ಅಮ್ಮ ಅದನ್ನು ಮಕ್ಕಳಾದ ನಮಗಾಗಿ ಸಿದ್ಧಪಡಿಸಿದರು, ಆದರೆ ಅವರು ತಿನ್ನಲಿಲ್ಲ. ನಾನು ಹೊಟ್ಟೆತುಂಬ ತಿಂದು ಮಲಗಲು ಹೋದೆ, ಆದರೆ ಅಮ್ಮ ಏಕೆ ತಿನ್ನಲಿಲ್ಲವೆಂದು ಯೋಚಿಸುತ್ತಾ ಇದ್ದೆ. ಈಗ ನನಗೆ ನನ್ನ ಸ್ವಂತ ಕುಟುಂಬವಿರುವುದರಿಂದ, ಅವರು ನಮಗಾಗಿ ತ್ಯಾಗ ಮಾಡುತ್ತಿದ್ದರೆಂಬುದನ್ನು ನಾನು ಗ್ರಹಿಸುತ್ತೇನೆ.” (ಒಂದು ಮಗುವನ್ನು 18 ವರ್ಷ ಪ್ರಾಯದ ತನಕ ಬೆಳೆಸುವುದರ ವೆಚ್ಚವು, 66,400 ಡಾಲರುಗಳಷ್ಟಾಗುತ್ತದೆಂದು ಒಂದು ಸಂಶೋಧನಾ ಅಧ್ಯಯನವು ತಿಳಿಸುತ್ತದೆ.)

ಕೇವಲ ಒಬ್ಬ ಹೆತ್ತವರ ಮಾದರಿಯು ಅತ್ಯುತ್ತಮವಾಗಿಲ್ಲವೆಂಬ ಕಾರಣದಿಂದ, ಅವರು ನಿಮಗೆ ಹೇಳುವಂತಹ ಎಲ್ಲಾ ವಿಷಯವು ತಪ್ಪಾಗಿದೆಯೆಂಬುದನ್ನು ಇದು ಅರ್ಥೈಸುವುದಿಲ್ಲ ಎಂಬುದನ್ನೂ ಗ್ರಹಿಸಿರಿ. ಯೇಸುವಿನ ದಿನದಲ್ಲಿ, ಧಾರ್ಮಿಕ ಮುಖಂಡರು ಭ್ರಷ್ಟರಾಗಿದ್ದರು. ಆದರೂ, ಯೇಸು ಜನರಿಗೆ ಹೇಳಿದ್ದು: “ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಾಡಿಕೊಳ್ಳಿರಿ; ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ.” (ಮತ್ತಾಯ 23:1-3, 25, 26) ಇದೇ ತತ್ತ್ವವನ್ನು ಕೆಲವು ಹೆತ್ತವರಿಗೆ ಅನ್ವಯಿಸಸಾಧ್ಯವಿಲ್ಲವೊ?

ಅಸಮಾಧಾನದ ಅನಿಸಿಕೆಗಳೊಂದಿಗೆ ವ್ಯವಹರಿಸುವುದು

ಒಬ್ಬ ಹೆತ್ತವನು ತನ್ನ ಅಧಿಕಾರವನ್ನು ಗಂಭೀರವಾಗಿ ದುರುಪಯೋಗಿಸುತ್ತಿದ್ದಾನೆಂದು ನಿಮಗನಿಸುವಲ್ಲಿ ಆಗೇನು? * ಶಾಂತಚಿತ್ತರಾಗಿರಿ. ಪ್ರತಿಭಟಿಸುವುದು, ಅಥವಾ ದ್ವೇಷಭರಿತ, ಸೇಡಿನ ನಡವಳಿಕೆಯು ಏನನ್ನೂ ಸಾಧಿಸುವುದಿಲ್ಲ. (ಪ್ರಸಂಗಿ 8:3, 4; ಪ್ರಸಂಗಿ 10:4ನ್ನು ಹೋಲಿಸಿರಿ.) 17 ವರ್ಷ ಪ್ರಾಯದ ಒಬ್ಬ ಹುಡುಗಿಯು, ತನ್ನ ಹೆತ್ತವರು ತಮ್ಮ ಸ್ವಂತ ಕಚ್ಚಾಟಗಳಲ್ಲಿ ಮಗ್ನರಾಗಿದ್ದು, ತನ್ನ ಕಡೆಗೆ ಉದಾಸೀನಭಾವವುಳ್ಳವರಾಗಿ ತೋರಿದ್ದರಿಂದ ಅವರ ಕಡೆಗೆ ತೀವ್ರ ಅಸಮಾಧಾನವನ್ನು ತೋರಿಸಿದಳು. ಅವರ ಕಡೆಗಿನ ಅವಳ ತೀವ್ರ ಅಸಮಾಧಾನವು ಅನಂತರ, ತನ್ನ ಹೆತ್ತವರು ತನಗೆ ಕಲಿಸಲು ಪ್ರಯತ್ನಿಸಿದ್ದಂತಹ ಬೈಬಲ್‌ ತತ್ತ್ವಗಳ ಕಡೆಗೆ ನಿರ್ದೇಶಿಸಲ್ಪಟ್ಟಿತು. ಕೇವಲ ಸೇಡು ತೀರಿಸುವುದಕ್ಕಾಗಿ, ಅವಳು ಲೈಂಗಿಕ ಅನೈತಿಕತೆ ಮತ್ತು ಅಮಲೌಷಧದ ದುರುಪಯೋಗಕ್ಕೆ ತನ್ನನ್ನು ಒಡ್ಡಿಕೊಂಡಳು. “ನಾನು ನನ್ನ ಹೆತ್ತವರಿಗೆ ಸೇಡನ್ನು ತೀರಿಸಲು ಹಂಗಿಗಳೆಂದು ನನಗನಿಸಿತು” ಎಂಬುದು ಅವಳ ಕಟುವಾದ ವಿವರಣೆಯಾಗಿತ್ತು. ಆದರೆ ಸೇಡಿನ ಭಾವವುಳ್ಳವಳಾಗಿದ್ದು, ಅವಳು ಸ್ವತಃ ತನಗೇ ಕೆಡುಕನ್ನುಂಟುಮಾಡಿಕೊಂಡಳು.

ಬೈಬಲ್‌ ಎಚ್ಚರಿಸುವುದು: “ಸಿಟ್ಟು ನಿನ್ನನ್ನು ಸೇಡಿನ [ಕೃತ್ಯಗಳೊಳಗೆ] ಮರುಳುಗೊಳಿಸದಂತೆ ನೋಡಿಕೋ . . . ಕೆಡುಕುಳ್ಳದ್ದಾಗಿರುವ ವಿಷಯಕ್ಕೆ ತಿರುಗದಂತೆ ನೀನು ಜಾಗರೂಕನಾಗಿರು” (NW). (ಯೋಬ 36:18-21) ಹೆತ್ತವರು ತಮ್ಮ ನಡತೆಗಾಗಿ ಯೆಹೋವನ ಮುಂದೆ ಜವಾಬ್ದಾರರಾಗಿದ್ದಾರೆಂದು ಮತ್ತು ಯಾವುದೇ ಗಂಭೀರ ಅನ್ಯಾಯಗಳಿಗಾಗಿ ಲೆಕ್ಕಕೊಡುವರೆಂಬುದನ್ನು ಗ್ರಹಿಸಿರಿ.—ಕೊಲೊಸ್ಸೆ 3:25.

ಜ್ಞಾನೋಕ್ತಿ 19:11 ಹೇಳುವುದು: “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.” ಕೆಲವೊಮ್ಮೆ ಒಬ್ಬ ಹೆತ್ತವನ ನೋಯಿಸುವಂತಹ ಕ್ರಿಯೆಗಳನ್ನು ಕ್ಷಮಿಸಿ, ಮರೆತುಬಿಡಲು ಪ್ರಯತ್ನಿಸುವುದು ಅತ್ಯುತ್ತಮ. ಅವನ ದೋಷಗಳ ಕುರಿತಾಗಿ ಆಲೋಚಿಸುತ್ತಾ ಇರುವ ಬದಲಿಗೆ, ಅವನ ಒಳ್ಳೆಯ ಗುಣಗಳ ಮೇಲೆ ಕೇಂದ್ರೀಕರಿಸಿರಿ. ಉದಾಹರಣೆಗಾಗಿ ಡಾಡಿ ಎಂಬುವಳಿಗೆ, ಒಬ್ಬ ಭಾವಶೂನ್ಯ ತಾಯಿ ಮತ್ತು ಮದ್ಯವ್ಯಸನಿ ಮಲತಂದೆಯಿದ್ದರು. ಅವರ ನ್ಯೂನತೆಗಳ ಕುರಿತಾದ ಅವಳ ಒಳನೋಟವು, ಕಟುಭಾವವನ್ನು ಅದುಮಿದ ವಿಧವನ್ನು ಗಮನಿಸಿರಿ. ಅವಳು ಹೇಳುವುದು: “ನನ್ನ ಅಮ್ಮ ನಮಗೆ ಪ್ರಾಯಶಃ ಎಂದೂ ಪ್ರೀತಿಯನ್ನು ತೋರಿಸಲಿಲ್ಲ, ಯಾಕಂದರೆ ಅವರು ಒಬ್ಬ ಅಪಪ್ರಯೋಗಿಸಲ್ಪಟ್ಟ ಮಗುವಾಗಿದ್ದರು. ಹೇಗೆ ಪ್ರೀತಿಸಬೇಕೆಂಬುದು ಅವರಿಗೆ ಕಲಿಸಲ್ಪಟ್ಟಿರಲಿಲ್ಲ. ನನ್ನ ಮಲತಂದೆಯು, ಮತ್ತಿನಲ್ಲಿರದಿದ್ದಾಗ ನಮ್ಮ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ತೋರಿಸಿದರೂ ಅದು ತೀರ ಅಪರೂಪವೇ. ಆದರೂ, ನನ್ನ ತಂಗಿಗೆ ಮತ್ತು ನನಗೆ ಯಾವಾಗಲೂ ಒಂದು ಮನೆಯಿತ್ತು ಮತ್ತು ರೆಫ್ರಿಜರೇಟರ್‌ನಲ್ಲಿ ಆಹಾರವು ಇರುತ್ತಿತ್ತು.”

ಸಂತೋಷಕರವಾಗಿ, ದಾರಿತಪ್ಪಿದ ಅಥವಾ ಅಲಕ್ಷ್ಯಭಾವದ ಹೆತ್ತವರು ತೀರ ಕಡಿಮೆ. ನಿಮ್ಮ ಹೆತ್ತವರು ನಿಮ್ಮಲ್ಲಿ ಆಸಕ್ತಿಯನ್ನು ವಹಿಸಿ, ಒಂದು ಒಳ್ಳೆಯ ಮಾದರಿಯನ್ನಿಡಲು ಪ್ರಯತ್ನಿಸುವುದು ಹೆಚ್ಚು ಸಂಭವನೀಯ. ಹಾಗಿದ್ದರೂ, ಕೆಲವೊಮ್ಮೆ ನಿಮಗೆ ಅವರ ಕುರಿತು ತುಸು ಅಸಮಾಧಾನದ ಅನಿಸಿಕೆಯಾಗಬಹುದು. “ನನ್ನ ಅಮ್ಮನೊಂದಿಗೆ ನಾನು ಕೆಲವೊಮ್ಮೆ ಒಂದು ಸಮಸ್ಯೆಯನ್ನು ಚರ್ಚಿಸುತ್ತಿದ್ದು, ಅವರು ನನ್ನ ವಿಚಾರವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ, ನಾನು ಸಿಟ್ಟಿಗೆದ್ದು, ಅವರನ್ನು ನೋಯಿಸಲಿಕ್ಕಾಗಿ ಸೇಡಿನಿಂದ ಏನನ್ನಾದರೂ ಹೇಳಿಬಿಡುತ್ತಿದ್ದೆ. ಅವರಿಗೆ ಮುಯ್ಯಿತೀರಿಸುವ ನನ್ನ ರೀತಿ ಅದಾಗಿತ್ತು. ಆದರೆ ನಾನು ಎದ್ದುಹೋಗುತ್ತಿದ್ದಾಗ ನನಗೆ ತುಂಬ ಕೆಟ್ಟ ಅನಿಸಿಕೆಯಾಗುತ್ತಿತ್ತು, ಮತ್ತು ಅವರಿಗೂ ಹಿತವೆನಿಸುತ್ತಿರಲಿಲ್ಲವೆಂಬುದು ನನಗೆ ತಿಳಿದಿತ್ತು,” ಎಂದು ರಾಜರ್‌ ಎಂಬ ಹೆಸರಿನ ಒಬ್ಬ ಯುವಕನು ಒಪ್ಪಿಕೊಳ್ಳುತ್ತಾನೆ.

ವಿಚಾರಹೀನ ಮಾತುಗಳು ‘ತಿವಿದು,’ ‘ನೋವನ್ನುಂಟು ಮಾಡ’ಬಹುದಾದರೂ (NW) ಅವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲಾರವು. “ಮತಿವಂತರ ಮಾತೇ ಮದ್ದು.” (ಜ್ಞಾನೋಕ್ತಿ 12:18; 15:1) “ಅದು ಕಷ್ಟಕರವಾಗಿತ್ತಾದರೂ, ನಾನು ಹಿಂದೆ ಹೋಗಿ, ಕ್ಷಮೆಯಾಚಿಸುತ್ತಿದ್ದೆ,” ಎಂದು ರಾಜರ್‌ ವಿವರಿಸುತ್ತಾನೆ. “ಆಗ ನಾವು ಸಮಸ್ಯೆಯನ್ನು ಹೆಚ್ಚು ಶಾಂತಚಿತ್ತವಾಗಿ ಚರ್ಚಿಸಿ, ಅದನ್ನು ಬಗೆಹರಿಸಸಾಧ್ಯವಿತ್ತು.”

‘ನನ್ನ ಅಪ್ಪ ಹೇಳಿದ್ದು ಸರಿಯಾಗಿತ್ತು’

ಆಸಕ್ತಿಕರವಾಗಿ, ಕೆಲವು ಯುವ ಜನರು ಹೆತ್ತವರ ಉಪದೇಶಗಳನ್ನು ಪ್ರತಿರೋಧಿಸುತ್ತಾ ತಮ್ಮನ್ನೂ ತಮ್ಮ ಹೆತ್ತವರನ್ನೂ ಬಳಲಿಸುತ್ತಾರೆ. ತಮ್ಮ ಹೆತ್ತವರು ಆರಂಭದಿಂದಲೇ ಹೇಳುತ್ತಿದ್ದ ವಿಷಯವು ಸರಿಯಾಗಿತ್ತೆಂಬುದನ್ನು ಅವರು ಅನಂತರ ಕಂಡುಕೊಳ್ಳುತ್ತಾರೆ. ಉದಾಹರಣೆಗಾಗಿ, (ಆರಂಭದಲ್ಲಿ ತಿಳಿಸಲ್ಪಟ್ಟ) ವೀಡಳನ್ನು ಪರಿಗಣಿಸಿರಿ. ಒಂದು ದಿನ ಅವಳು ತನ್ನ ಪ್ರಿಯತಮನೊಂದಿಗೆ ಕಾರ್‌ನಲ್ಲಿ ಹೋದಳು. ಅವನು ಮಾರಿವಾನ ಮತ್ತು ಬಿಯರ್‌ನಿಂದ ಮತ್ತನಾಗಿದ್ದನು. ಕಾರ್‌ ಪ್ರತಿ ತಾಸಿಗೆ 60 ಮೈಲುಗಳ ವೇಗದಲ್ಲಿ ಹೋಗಿ, ನಿಯಂತ್ರಣ ತಪ್ಪಿ, ಒಂದು ಬೀದಿ ದೀಪಕಂಬಕ್ಕೆ ಬಡಿಯಿತು. ತನ್ನ ಹಣೆಯಲ್ಲಿ ಒಂದು ತೀವ್ರವಾದ ಗಾಯದೊಂದಿಗೆ, ವೀಡ ಪಾರಾದಳು. ಆ ಪ್ರಿಯತಮನು ಅಲ್ಲಿಂದ ಓಡಿಹೋದನು, ಅವಳಿಗೆ ಸಹಾಯ ಮಾಡಲು ಆಸ್ಪತ್ರೆಗೂ ಬರಲಿಲ್ಲ.

“ಅಪ್ಪ ಹೇಳಿದ್ದೆಲ್ಲವೂ ಸರಿಯಾಗಿತ್ತು ಮತ್ತು ನಾನು ಅವರಿಗೆ ತುಂಬ ಸಮಯದ ಹಿಂದೆಯೇ ಕಿವಿಗೊಡಬೇಕಾಗಿತ್ತೆಂದು ನನ್ನ ಹೆತ್ತವರು ಆಸ್ಪತ್ರೆಗೆ ಆಗಮಿಸಿದಾಗ ನಾನು ಅವರಿಗೆ ಹೇಳಿದೆ. . . . ನಾನೊಂದು ದೊಡ್ಡ ತಪ್ಪನ್ನು ಮಾಡಿದ್ದೆ ಮತ್ತು ಅದು ಬಹುಮಟ್ಟಿಗೆ ನನ್ನ ಜೀವವನ್ನೇ ಬಲಿತೆಗೆದುಕೊಂಡಿತು” ಎಂದು ವೀಡ ನಿವೇದಿಸಿದಳು. ತದನಂತರ, ವೀಡ ತನ್ನ ಹೆತ್ತವರ ಕಡೆಗಿನ ತನ್ನ ಮನೋಭಾವದಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಮಾಡಿದಳು.

ಪ್ರಾಯಶಃ ನಿಮ್ಮ ವತಿಯಿಂದಲೂ ಕೆಲವು ಬದಲಾವಣೆಗಳು ಸೂಕ್ತವಾಗಿರಬಹುದು. ‘ನಿಮ್ಮ ಹೆತ್ತವರನ್ನು ಸನ್ಮಾನಿಸುವುದು’ ಒಂದು ಹಳೆಯ ಕಾಲದ ವಿಚಾರವಾಗಿ ತೋರಬಹುದು ನಿಜ. ಆದರೆ ಅದು ಮಾಡಲು ಸೊಗಸಾದ ವಿಷಯವಾಗಿದೆ ಮಾತ್ರವಲ್ಲ, ದೇವರ ದೃಷ್ಟಿಯಲ್ಲಿ ಸರಿಯಾದ ಸಂಗತಿಯೂ ಆಗಿದೆ. ನೀವು ನಿಮ್ಮ ಹೆತ್ತವರಿಗೆ ಗೌರವವನ್ನು ತೋರಿಸಬಯಸುವುದಾದರೂ, ನಿಮ್ಮನ್ನು ತಪ್ಪಾಗಿ ಅರ್ಥಮಾಡಲಾಗಿದೆ ಅಥವಾ ಪ್ರಾಯಶಃ ನಿರ್ಬಂಧಗಳಿಂದ ಬಂಧಿಸಲಾಗಿದೆಯೆಂಬ ಅನಿಸಿಕೆ ನಿಮಗಾಗುವಲ್ಲಿ ಆಗೇನು? ಅಂತಹ ಪರಿಸ್ಥಿತಿಗಳಲ್ಲಿ ನೀವು ನಿಮ್ಮ ಸನ್ನಿವೇಶವನ್ನು ಹೇಗೆ ಉತ್ತಮಗೊಳಿಸಿಕೊಳ್ಳಲು ಸಾಧ್ಯವಿದೆಯೆಂಬುದನ್ನು ನಾವು ಪರೀಕ್ಷಿಸೋಣ.

[ಅಧ್ಯಯನ ಪ್ರಶ್ನೆಗಳು]

^ ಒಬ್ಬ ಯುವ ವ್ಯಕ್ತಿಯು ಮನೆಯ ಹೊರಗಿನ ವೃತ್ತಿಪರ ಸಹಾಯವನ್ನು ಹುಡುಕಲು ಅಗತ್ಯವಿರಬಹುದಾದ, ಶಾರೀರಿಕ ಅಥವಾ ಲೈಂಗಿಕ ದುರ್ಬಳಕೆಯ ವಿದ್ಯಮಾನಗಳಿಗೆ ನಾವು ಇಲ್ಲಿ ಸೂಚಿಸುತ್ತಿಲ್ಲ.

ಚರ್ಚೆಗಾಗಿ ಪ್ರಶ್ನೆಗಳು

◻ ಒಬ್ಬನ ಹೆತ್ತವರನ್ನು ಸನ್ಮಾನಿಸುವುದು ಏನನ್ನು ಅರ್ಥೈಸುತ್ತದೆ?

◻ ಹೆತ್ತವರು ಅಷ್ಟೊಂದು ನಿಯಮಗಳನ್ನು ಏಕೆ ಮಾಡುತ್ತಾರೆ? ಆ ನಿಯಮಗಳು ನಿಮಗೆ ಪ್ರಯೋಜನಕರವಾಗಿರಬಲ್ಲವೊ?

◻ ನಿಮ್ಮ ಹೆತ್ತವರ ನಡತೆಯು ನಿಂದಾರ್ಹವಾಗಿರುವಲ್ಲಿ ನೀವು ಅವರನ್ನು ಸನ್ಮಾನಿಸಬೇಕೊ? ಏಕೆ?

◻ ನಿಮ್ಮ ಹೆತ್ತವರ ಕಡೆಗೆ ನಿಮಗೆ ಆಗಾಗ್ಗೆ ಉಂಟಾಗುವ ತೀವ್ರ ಅಸಮಾಧಾನದೊಂದಿಗೆ ವ್ಯವಹರಿಸುವ ಕೆಲವು ಫಲಪ್ರದ ವಿಧಗಳಾವುವು? ಕೆಲವು ಮೂರ್ಖ ವಿಧಗಳಾವುವು?

[ಪುಟ 16 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನ್ನ ತಂದೆ ಕೀಳುಮನಸ್ಸಿನವರಾಗಿದ್ದು, ನಾನು ಸುಸಮಯ ಅನುಭವಿಸುವುದನ್ನು ಬಯಸುತ್ತಿರಲಿಲ್ಲವೆಂದು ನನಗನಿಸಿತು. ಆದುದರಿಂದ ನಾನು ಹೊರಹೋಗಿ, ನಾನು ಮಾಡಬಯಸಿದಂಥದ್ದನ್ನು ಮಾಡಿದೆ”

[ಪುಟ 12 ರಲ್ಲಿರುವ ಚಿತ್ರ]

ನೀವು ನಿಮ್ಮ ಹೆತ್ತವರ ನಿಯಮಗಳನ್ನು ಹೇಗೆ ವೀಕ್ಷಿಸಬೇಕು?

[ಪುಟ 14 ರಲ್ಲಿರುವ ಚಿತ್ರ]

ನಿಂದಾರ್ಹ ನಡತೆಯುಳ್ಳ ಹೆತ್ತವರನ್ನು ನೀವು ಸನ್ಮಾನಿಸಬೇಕೊ?