ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ಮನೆ ಬಿಟ್ಟುಹೋಗಬೇಕೊ?

ನಾನು ಮನೆ ಬಿಟ್ಟುಹೋಗಬೇಕೊ?

ಅಧ್ಯಾಯ 7

ನಾನು ಮನೆ ಬಿಟ್ಟುಹೋಗಬೇಕೊ?

“ಅಮ್ಮ ಮತ್ತು ಅಪ್ಪ:

“ನಾನು ಕೊನೆಗೂ ಹೊರಟುಹೋಗುತ್ತಿದ್ದೇನೆ. ನಾನು ಈ ಮುಂಚೆ ಹೇಳಿರುವಂತೆ, ನಿಮಗೆ ರೇಗಿಸಲು ಅಥವಾ ಯಾವುದೇ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲು ನಾನು ಇದನ್ನು ಮಾಡುತ್ತಿಲ್ಲ. ನೀವು ಬಯಸುವಂತಹ ರೀತಿಯಲ್ಲಿ ನಿರ್ಬಂಧಿಸಲ್ಪಟ್ಟಿದ್ದು ನಾನು ಸಂತೋಷಿತಳಾಗಿರಸಾಧ್ಯವಿಲ್ಲ. ಬಹುಶಃ ನಾನು ಈ ರೀತಿಯಲ್ಲೂ ಸಂತೋಷಿತಳಾಗಿರಲಿಕ್ಕಿಲ್ಲ, ಆದರೆ ನಾನು ಅದನ್ನು ಕಂಡುಹಿಡಿಯಲು ಇಷ್ಟಪಡುತ್ತೇನೆ.”

ಒಬ್ಬ 17 ವರ್ಷ ಪ್ರಾಯದ ಹುಡುಗಿಯು ತನ್ನ ಹೆತ್ತವರಿಗೆ ಬರೆದ ಒಂದು ಬೀಳ್ಕೊಡುವಿಕೆಯ ಪತ್ರವು ಹೀಗೆ ಆರಂಭಿಸಿತು. ಉದಾಹರಣೆಗಾಗಿ, ಫೆಡರಲ್‌ ರಿಪಬ್ಲಿಕ್‌ ಆಫ್‌ ಜರ್ಮನಿಯಲ್ಲಿ, 15 ಮತ್ತು 24ರ ವಯಸ್ಸುಗಳ ನಡುವಿನ ಪ್ರತಿ ಮೂರು ಹುಡುಗಿಯರಲ್ಲಿ ಒಬ್ಬಳು ಮತ್ತು ಪ್ರತಿ ನಾಲ್ಕು ಹುಡುಗರಲ್ಲಿ ಒಬ್ಬನು ಈಗ ಮನೆಯಿಂದ ದೂರ ವಾಸಿಸುತ್ತಾರೆ. ಪ್ರಾಯಶಃ ಸ್ವತಃ ನೀವು ಮನೆಯನ್ನು ಬಿಟ್ಟುಹೋಗುವುದರ ಕುರಿತಾಗಿ ಯೋಚಿಸಿರಬಹುದು.

ಮದುವೆಯಾಗುವ ಬಯಕೆಯು, ಒಬ್ಬ ವ್ಯಕ್ತಿಯು “ತಂದೆತಾಯಿಗಳನ್ನು ಬಿಟ್ಟು”ಹೋಗುವಂತೆ ಮಾಡುವುದೆಂಬುದನ್ನು ದೇವರು ಮುಂಗಂಡನು. (ಆದಿಕಾಂಡ 2:23, 24) ಮತ್ತು ಬಿಟ್ಟುಹೋಗಲಿಕ್ಕಾಗಿ, ದೇವರಿಗೆ ಒಬ್ಬನ ಸೇವೆಯನ್ನು ವಿಸ್ತರಿಸುವಂತಹ ಇತರ ನ್ಯಾಯಸಮ್ಮತ ಕಾರಣಗಳಿವೆ. (ಮಾರ್ಕ 10:29, 30) ಆದಾಗಲೂ ಅನೇಕ ಯುವ ಜನರಿಗಾದರೋ, ಮನೆಯನ್ನು ಬಿಟ್ಟುಹೋಗುವುದು, ಅವರಿಗೆ ಯಾವುದು ಒಂದು ಸಹಿಸಲಾರದ ಪರಿಸ್ಥಿತಿಯೆಂದು ಅನಿಸುತ್ತದೊ ಅದರಿಂದ ಹೊರಬರುವ ಒಂದು ಮಾರ್ಗವಾಗಿರುತ್ತದೆ. ಒಬ್ಬ ಯುವಕನು ಹೇಳುವುದು: “ಅದು ಕೇವಲ ನೀವು ಹೆಚ್ಚು ಸ್ವತಂತ್ರರಾಗಿರಲು ಬಯಸುವಂತಹ ವಿಷಯವಾಗಿದೆ. ನಿಮ್ಮ ಹೆತ್ತವರೊಂದಿಗೆ ಮನೆಯಲ್ಲಿ ವಾಸಿಸುವುದು ಇನ್ನು ಮುಂದೆ ತೃಪ್ತಿದಾಯಕವಾಗಿರುವುದಿಲ್ಲ. ನೀವು ಯಾವಾಗಲೂ ವಿವಾದಗಳಲ್ಲಿ ಸಿಕ್ಕಿಬೀಳುತ್ತೀರಿ, ಮತ್ತು ಅವರಿಗೆ ನಿಮ್ಮ ಅಗತ್ಯಗಳು ಅರ್ಥವಾಗುವುದಿಲ್ಲ. ಅಲ್ಲದೆ, ನಿಮ್ಮ ಪ್ರತಿಯೊಂದು ಚಲನೆಗಾಗಿ ನಿಮ್ಮ ಹೆತ್ತವರಿಗೆ ಯಾವಾಗಲೂ ಉತ್ತರಿಸಬೇಕಾಗಿರುವುದು, ನಿಮಗೆ ತುಂಬಾ ನಿರ್ಬಂಧಿಸಲ್ಪಟ್ಟ ಅನಿಸಿಕೆಯನ್ನು ಉಂಟುಮಾಡುತ್ತದೆ.”

ಸ್ವಾತಂತ್ರ್ಯಕ್ಕಾಗಿ ಸಿದ್ಧರೊ?

ಆದರೆ ನೀವು ಸ್ವಾತಂತ್ರ್ಯವನ್ನು ಬಯಸುತ್ತೀರೆಂಬ ವಾಸ್ತವಾಂಶವು, ನೀವು ಅದಕ್ಕಾಗಿ ಸಿದ್ಧರಾಗಿದ್ದೀರೆಂಬುದನ್ನು ಅರ್ಥೈಸುತ್ತದೊ? ಒಂದು ವಿಷಯವೇನಂದರೆ, ನಿಮ್ಮಷ್ಟಕ್ಕೇ ಜೀವಿಸುವುದು ನೀವು ನೆನಸುವಷ್ಟು ಸುಲಭವಾಗಿರಲಿಕ್ಕಿಲ್ಲ. ಉದ್ಯೋಗಗಳು ಅನೇಕವೇಳೆ ವಿರಳವಾಗಿವೆ. ಬಾಡಿಗೆಗಳು ಗಗನಕ್ಕೇರಿವೆ. ಮತ್ತು ಆರ್ಥಿಕ ಕಷ್ಟದಲ್ಲಿ ಸಿಕ್ಕಿಬಿದ್ದಿರುವ ಯುವ ಜನರು ಅನೇಕವೇಳೆ ಏನು ಮಾಡುವಂತೆ ಒತ್ತಾಯಿಸಲ್ಪಡುತ್ತಾರೆ? ಬೇರುಗಳನ್ನು ಕೀಳುವುದು (ಇಂಗ್ಲಿಷ್‌) ಎಂಬ ಪುಸ್ತಕದ ಲೇಖಕರು ಹೇಳುವುದು: “ಅವರು ಮನೆಗೆ ಹಿಂದಿರುಗಿ, ತಮ್ಮ ಅನ್ನಬಟ್ಟೆಗಳನ್ನು ಒದಗಿಸುವ ಹೊರೆಯನ್ನು ಹೆತ್ತವರು ಪುನಃ ಹೊತ್ತುಕೊಳ್ಳುವಂತೆ ಅವರು ನಿರೀಕ್ಷಿಸುತ್ತಾರೆ.”

ಮತ್ತು ನಿಮ್ಮ ಮಾನಸಿಕ, ಭಾವನಾತ್ಮಕ, ಮತ್ತು ಆತ್ಮಿಕ ಪ್ರೌಢತೆಯ ಕುರಿತಾಗಿ ಏನು? ನೀವು ನಿಮ್ಮನ್ನು ಪ್ರಾಯಕ್ಕೆ ಬಂದವರಾಗಿ ಎಣಿಸಿಕೊಳ್ಳಬಹುದು, ಆದರೆ ನಿಮ್ಮ ಹೆತ್ತವರು ನಿಮ್ಮಲ್ಲಿ ಇನ್ನೂ “ಒಂದು ಮಗುವಿನ ಗುಣಲಕ್ಷಣಗಳ”ಲ್ಲಿ (NW) ಕೆಲವನ್ನು ನೋಡಬಹುದು. (1 ಕೊರಿಂಥ 13:11) ಮತ್ತು ನಿಜವಾಗಿ, ನೀವು ಎಷ್ಟು ಸ್ವಾತಂತ್ರ್ಯವನ್ನು ನಿರ್ವಹಿಸಲು ಸಿದ್ಧರಿದ್ದೀರೆಂಬುದನ್ನು ನಿರ್ಣಯಿಸುವಂತಹ ಅತ್ಯುತ್ತಮವಾದ ಸ್ಥಾನದಲ್ಲಿ ನಿಮ್ಮ ಹೆತ್ತವರಿದ್ದಾರಲ್ಲವೊ? ಅವರ ತೀರ್ಮಾನಕ್ಕೆ ವಿರುದ್ಧವಾಗಿ ಹೋಗಿ, ನಿಮ್ಮಷ್ಟಕ್ಕೇ ಜೀವಿಸುವುದು, ವಿಪತ್ತನ್ನು ಆಹ್ವಾನಿಸಬಲ್ಲದು!—ಜ್ಞಾನೋಕ್ತಿ 1:8.

‘ನನ್ನ ಹೆತ್ತವರೊಂದಿಗೆ ನನಗೆ ಹೊಂದಿಕೊಂಡು ಹೋಗಲಾಗುವುದಿಲ್ಲ!’

ಇದು ನಿಮ್ಮ ವಿಷಯದಲ್ಲಿ ಸತ್ಯವಾಗಿದೆಯೊ? ಹಾಗಿರುವುದಾದರೂ, ನಿಮ್ಮ ಗಂಟುಮೂಟೆಗಳನ್ನು ಕಟ್ಟಲು ಆರಂಭಿಸಲಿಕ್ಕಾಗಿ ಇದು ಕಾರಣವೇ ಅಲ್ಲ. ಒಬ್ಬ ಯುವ ವ್ಯಕ್ತಿಯೋಪಾದಿ, ನಿಮಗಿನ್ನೂ ನಿಮ್ಮ ಹೆತ್ತವರ ಅಗತ್ಯವಿದೆ ಮತ್ತು ಇನ್ನೂ ಹಲವಾರು ವರ್ಷಗಳ ವರೆಗೆ ಅವರ ಒಳನೋಟ ಹಾಗೂ ವಿವೇಕದಿಂದ ಪ್ರಾಯಶಃ ಪ್ರಯೋಜನ ಪಡೆಯುವಿರಿ. (ಜ್ಞಾನೋಕ್ತಿ 23:22) ಅವರೊಂದಿಗೆ ವ್ಯವಹರಿಸುವುದರಲ್ಲಿ ನೀವು ಕೆಲವೊಂದು ಆತಂಕಗಳಿಗೆ ಗುರಿಯಾಗಿದ್ದೀರೆಂಬ ಕಾರಣ ಮಾತ್ರದಿಂದ ನೀವು ಅವರನ್ನು ನಿಮ್ಮ ಜೀವಿತದಿಂದಲೇ ತೆಗೆದುಹಾಕಬೇಕೊ?

ಒಬ್ಬ ಪೂರ್ಣ ಸಮಯದ ಶುಶ್ರೂಷಕನೋಪಾದಿ ಒಂದು ಜೀವನೋದ್ಯೋಗವನ್ನು ಬೆನ್ನಟ್ಟಲಿಕ್ಕಾಗಿ, ಮನೆಯನ್ನು ಬಿಟ್ಟುಹೋದ ಕಾರ್‌ಸ್ಟನ್‌ ಎಂಬ ಹೆಸರಿನ ಒಬ್ಬ ಯುವ ಜರ್ಮನ್‌ ಪುರುಷನು ಅದನ್ನು ಈ ರೀತಿಯಲ್ಲಿ ಹೇಳಿದನು: “ನಿಮ್ಮ ಹೆತ್ತವರೊಂದಿಗೆ ನೀವು ಹೊಂದಿಕೊಂಡು ಹೋಗಲಾರಿರಿ ಎಂಬ ಕಾರಣಕ್ಕಾಗಿ ಮಾತ್ರ ಮನೆಯನ್ನು ಎಂದೂ ಬಿಟ್ಟುಹೋಗಬೇಡಿ. ನಿಮಗೆ ಅವರೊಂದಿಗೆ ಹೊಂದಿಕೊಂಡು ಹೋಗಲು ಸಾಧ್ಯವಿಲ್ಲದಿದ್ದರೆ, ಬೇರೆ ಜನರೊಂದಿಗೆ ನೀವು ಹೇಗೆ ತಾನೇ ಹೊಂದಿಕೊಂಡು ಹೋಗಲು ಶಕ್ತರಾಗುವಿರಿ? ಹೊರಗೆ ಹೋಗುವುದು ನಿಮ್ಮ ಸಮಸ್ಯೆಯನ್ನು ಬಗೆಹರಿಸದು. ವ್ಯತಿರಿಕ್ತವಾಗಿ, ಅದು ನೀವು ನಿಮ್ಮ ಸ್ವಂತ ಕಾಲುಗಳ ಮೇಲೆ ನಿಲ್ಲಲು ತೀರ ಅಪ್ರೌಢರಾಗಿದ್ದೀರಿ ಎಂಬುದನ್ನು ಮಾತ್ರ ರುಜುಪಡಿಸುವುದು ಮತ್ತು ನಿಮ್ಮ ಹೆತ್ತವರಿಂದ ಹೆಚ್ಚು ಮಹತ್ತಾದ ಅಗಲಿಸುವಿಕೆಗೆ ನಡೆಸುವುದು.”

ನೈತಿಕತೆಗಳು ಮತ್ತು ಹೇತುಗಳು

ಯೋಗ್ಯವಾದ ಸಮಯಕ್ಕೆ ಮುಂಚೆಯೇ ಮನೆಯನ್ನು ಬಿಟ್ಟುಹೋಗುವುದರಲ್ಲಿ ಒಳಗೂಡಿರುವ ನೈತಿಕ ಅಪಾಯಗಳನ್ನು ಯುವ ಜನರು ಉಪೇಕ್ಷಿಸುವ ಪ್ರವೃತ್ತಿಯುಳ್ಳವರೂ ಆಗಿರುತ್ತಾರೆ. ಲೂಕ 15:11-32ರಲ್ಲಿ, ಸ್ವತಂತ್ರನಾಗಿರಲು ಬಯಸಿದ ಮತ್ತು ತನ್ನಷ್ಟಕ್ಕೇ ಜೀವಿಸಲು ಹೊರಟ ಒಬ್ಬ ಯುವ ಪುರುಷನ ಕುರಿತಾಗಿ ಯೇಸು ಹೇಳುತ್ತಾನೆ. ತನ್ನ ಹೆತ್ತವರ ಒಳ್ಳೆಯ ಪ್ರಭಾವದ ಕೆಳಗೆ ಇನ್ನು ಮುಂದೆ ಇರದೆ, ಅವನು ‘ಪಟಿಂಗನಾಗಿ ಬದುಕಲು’ ಆರಂಭಿಸುತ್ತಾ, ಲೈಂಗಿಕ ಅನೈತಿಕತೆಗೆ ಬಲಿಬಿದ್ದನು. ಸ್ವಲ್ಪ ಸಮಯದಲ್ಲೆ ಅವನು ತನ್ನ ಹಣವನ್ನು ಪೋಲುಮಾಡಿದ್ದನು. ಉದ್ಯೋಗ ಸಿಗುವುದು ಎಷ್ಟು ಕಷ್ಟಕರವಾಗಿತ್ತೆಂದರೆ, ಅವನು ಯೆಹೂದ್ಯರು ಮಾಡಲು ಹೇಸುತ್ತಿದ್ದ ಕೆಲಸವನ್ನೂ—ಹಂದಿಗಳನ್ನು ಮೇಯಿಸುವುದು—ಮಾಡಲಾರಂಭಿಸಿದನು. ಆದಾಗಲೂ, ದುಂದುಗಾರನೆಂದು ಕರೆಯಲ್ಪಟ್ಟ, ಅಥವಾ ದುಂದುವೆಚ್ಚ ಮಾಡಿದ ಮಗನಿಗೆ ಬುದ್ಧಿ ಬಂತು. ತನ್ನ ಅಹಂಭಾವವನ್ನು ನುಂಗಿಕೊಳ್ಳುತ್ತಾ, ಅವನು ಮನೆಗೆ ಹಿಂದಿರುಗಿ, ತನ್ನ ತಂದೆಯ ಬಳಿ ಕ್ಷಮಾಪಣೆಯನ್ನು ಬೇಡಿಕೊಂಡನು.

ಈ ಸಾಮ್ಯವು ದೇವರ ಕರುಣೆಯನ್ನು ಎತ್ತಿತೋರಿಸಲು ಹೇಳಲ್ಪಟ್ಟಿತ್ತಾದರೂ, ಅದರಲ್ಲಿ ಈ ವ್ಯಾವಹಾರಿಕ ಪಾಠವೂ ಅಡಕವಾಗಿದೆ: ಒಂದು ಅವಿವೇಕವುಳ್ಳ ಹೇತುವಿನೊಂದಿಗೆ ಮನೆಯನ್ನು ಬಿಟ್ಟುಹೋಗುವುದು, ನಿಮ್ಮನ್ನು ನೈತಿಕವಾಗಿ ಮತ್ತು ಆತ್ಮಿಕವಾಗಿ ಹಾನಿಗೊಳಪಡಿಸಬಲ್ಲದು! ವಿಷಾದಕರವಾಗಿ, ಒಂದು ಸ್ವತಂತ್ರ ಪಥದಲ್ಲಿ ತೊಡಗಿದ ಕೆಲವು ಕ್ರೈಸ್ತ ಯುವ ಜನರು, ಆತ್ಮಿಕ ನಷ್ಟವನ್ನು ಅನುಭವಿಸಿದ್ದಾರೆ. ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿ ಇರಲು ಅಶಕ್ತರಾಗಿದ್ದು, ಕೆಲವರು, ಯಾರ ಜೀವನ ಶೈಲಿಯು ಬೈಬಲ್‌ ತತ್ತ್ವಗಳೊಂದಿಗೆ ಸಂಘರ್ಷಿಸುತ್ತದೊ ಅಂತಹ ಯುವ ಜನರೊಂದಿಗೆ ಖರ್ಚುಗಳಲ್ಲಿ ಪಾಲುದಾರರಾಗುವುದನ್ನು ಅವಲಂಬಿಸಿದ್ದಾರೆ.—1 ಕೊರಿಂಥ 15:33.

ಹಾರ್ಸ್ಟ್‌ ಎಂಬ ಹೆಸರಿನ ಒಬ್ಬ ಜರ್ಮನ್‌ ಯೌವನಸ್ಥನು, ಮನೆಯನ್ನು ಬಿಟ್ಟುಹೋದ ತನ್ನಷ್ಟೇ ವಯಸ್ಸಿನ ಒಬ್ಬ ಯೌವನಸ್ಥನನ್ನು ಜ್ಞಾಪಿಸಿಕೊಳ್ಳುತ್ತಾನೆ: “ವಿವಾಹಿತನಲ್ಲದಿದ್ದರೂ, ಅವನು ತನ್ನ ಗರ್ಲ್‌ಫ್ರೆಂಡಳೊಂದಿಗೆ ವಾಸಿಸಲಾರಂಭಿಸಿದನು. ಎಲ್ಲಿ ಮದ್ಯವು ನಿರ್ಬಂಧವಿಲ್ಲದೆ ಸಿಗುತ್ತಿತೊ ಅಂತಹ ಪಾರ್ಟಿಗಳನ್ನು ಅವರು ನಡಿಸಿದರು, ಮತ್ತು ಅವನು ಅನೇಕವೇಳೆ ಅಂತ್ಯದಲ್ಲಿ ಅಮಲೇರಿದವನಾಗಿರುತ್ತಿದ್ದನು. ಅವನು ಇನ್ನೂ ತನ್ನ ಮನೆಯಲ್ಲಿ ವಾಸಿಸುತ್ತಿದ್ದಲ್ಲಿ, ಅವನ ಹೆತ್ತವರು ಇದರಲ್ಲಿ ಯಾವುದನ್ನೂ ಅನುಮತಿಸುತ್ತಿರಲಿಲ್ಲ.” ಹಾರ್ಸ್ಟ್‌ ಸಮಾಪ್ತಿಗೊಳಿಸಿದ್ದು: “ನೀವು ಮನೆಯನ್ನು ಬಿಟ್ಟುಹೋದಾಕ್ಷಣ ನಿಮಗೆ ಹೆಚ್ಚು ಸ್ವಾತಂತ್ರ್ಯ ಸಿಗುತ್ತದೆಂಬುದು ನಿಜ. ಆದರೆ ಸಂಪೂರ್ಣ ಪ್ರಾಮಾಣಿಕವಾಗಿ ಹೇಳುವುದಾದರೆ, ಅದು ಹೆಚ್ಚಾಗಿ ಕೆಟ್ಟ ವಿಷಯಗಳನ್ನು ಮಾಡಲು ಒಂದು ಅವಕಾಶವಾಗಿ ಉಪಯೋಗಿಸಲ್ಪಡುವುದಿಲ್ಲವೊ?”

ಆದುದರಿಂದ ನೀವು ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ಹಾತೊರೆಯುವುದಾದರೆ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ: ನನಗೆ ಹೆಚ್ಚಿನ ಸ್ವಾತಂತ್ರ್ಯವು ಯಾಕೆ ಬೇಕು? ಪ್ರಾಪಂಚಿಕ ಸ್ವತ್ತುಗಳನ್ನು ಪಡೆಯಲಿಕ್ಕಾಗಿಯೊ ಅಥವಾ ನಾನು ಮನೆಯಲ್ಲಿ ಜೀವಿಸುತ್ತಿದ್ದಲ್ಲಿ ನನ್ನ ಹೆತ್ತವರು ನಿಷೇಧಿಸುತ್ತಿದ್ದ ವಿಧಗಳಲ್ಲಿ ವರ್ತಿಸಲಿಕ್ಕಾಗಿ ಯಥೇಷ್ಟ ಅವಕಾಶವು ಇರಲಿಕ್ಕಾಗಿಯೊ? ಯೆರೆಮೀಯ 17:9ರಲ್ಲಿ ಬೈಬಲ್‌ ಏನನ್ನು ಹೇಳುತ್ತದೊ ಅದನ್ನು ನೆನಪಿನಲ್ಲಿಡಿರಿ: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?”

ನಾನು ಹೊರಹೋಗದಿದ್ದರೆ ಹೇಗೆ ಬೆಳೆಯಬಲ್ಲೆ?

ತರುಣಾವಸ್ಥೆ (ಇಂಗ್ಲಿಷ್‌) ಎಂಬ ಪುಸ್ತಕವು ಅವಲೋಕಿಸುವುದು: “ಕುಟುಂಬದ ಮನೆಯಿಂದ ಕೇವಲ ಹೊರಹೋಗುವುದು [ಪ್ರಾಪ್ತ ವಯಸ್ಸಿಗೆ] ಒಂದು ಯಶಸ್ವೀ ಸ್ಥಿತ್ಯಂತರದ ಖಾತರಿಯನ್ನು ಕೊಡುವುದಿಲ್ಲ. ಅಥವಾ ಮನೆಯಲ್ಲೇ ಉಳಿಯುವುದು ಬೆಳೆಯದೆ ಇರುವುದನ್ನು ಅರ್ಥೈಸುವುದಿಲ್ಲ.” ಖಂಡಿತವಾಗಿಯೂ, ಬೆಳೆಯುವುದು, ಒಬ್ಬನು ಸ್ವಂತ ಹಣ, ಉದ್ಯೋಗ, ಮತ್ತು ಮನೆಯನ್ನು ಹೊಂದಿರುವುದಕ್ಕಿಂತಲೂ ಹೆಚ್ಚಿನದ್ದನ್ನು ಅರ್ಥೈಸುತ್ತದೆ. ಒಂದು ವಿಷಯವೇನಂದರೆ, ಸಮಸ್ಯೆಗಳನ್ನು ನೇರವಾಗಿ ಎದುರಿಸುವ ಮೂಲಕ ಜೀವನವನ್ನು ಹತೋಟಿಯಲ್ಲಿಡಲಾಗುತ್ತದೆ. ನಮಗೆ ಇಷ್ಟಕರವಾಗಿರದ ಪರಿಸ್ಥಿತಿಗಳಿಂದ ಓಡಿಹೋಗುವುದರಿಂದ ಏನೂ ಗಳಿಸಲ್ಪಡುವುದಿಲ್ಲ. “ಯೌವನದಲ್ಲಿ ನೊಗಹೊರುವದು ಮನುಷ್ಯನಿಗೆ ಲೇಸು” ಎಂದು ಪ್ರಲಾಪಗಳು 3:27 ಹೇಳುತ್ತದೆ.

ಉದಾಹರಣೆಗಾಗಿ, ಹೊಂದಿಕೊಂಡು ಹೋಗಲು ಕಷ್ಟಕರವಾಗಿರುವ ಅಥವಾ ತುಂಬ ಕಟ್ಟುನಿಟ್ಟಿನವರಾಗಿರುವ ಹೆತ್ತವರನ್ನು ತೆಗೆದುಕೊಳ್ಳಿರಿ. ಈಗ 47 ವರ್ಷ ಪ್ರಾಯದವನಾಗಿರುವ ಮ್ಯಾಕ್‌ಗೆ, ಶಾಲಾನಂತರದ ಕೆಲಸಗಳನ್ನು ಅವನ ಮೇಲೆ ಹೊರಿಸುತ್ತಿದ್ದ ತಂದೆಯಿದ್ದನು. ಬೇಸಗೆ ರಜೆಯ ಸಮಯದಲ್ಲಿ, ಇತರ ಯುವ ಜನರು ಆಡುತ್ತಿದ್ದಾಗ, ಮ್ಯಾಕ್‌ ಕೆಲಸಮಾಡಬೇಕಾಗಿತ್ತು. “ನಾವು ಆಟವಾಡುತ್ತಾ, ಆನಂದಪಡುತ್ತಾ ಇರುವುದರಿಂದ ನಮ್ಮನ್ನು ತಡೆಯುತ್ತಿದ್ದ ಕಾರಣದಿಂದಾಗಿ, ಅವರು ಜೀವಿಸುತ್ತಿರುವವರಲ್ಲಿಯೇ ಅತ್ಯಂತ ನೀಚ ಮನುಷ್ಯರೆಂದು ನಾನು ನೆನಸಿದೆ” ಎಂದು ಮ್ಯಾಕ್‌ ಹೇಳುತ್ತಾನೆ. “‘ನಾನು ಇಲ್ಲಿಂದ ಓಡಿಹೋಗಿ, ನನ್ನ ಸ್ವಂತ ಮನೆಯನ್ನು ಪಡೆಯಲು ಸಾಧ್ಯವಿರುತ್ತಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು!’ ಎಂದು ನಾನು ಅನೇಕವೇಳೆ ಯೋಚಿಸಿದೆ.” ಆದಾಗಲೂ, ಮ್ಯಾಕ್‌ನಿಗೆ ಈಗ ಈ ವಿಷಯದ ಕುರಿತಾಗಿ ಒಂದು ಭಿನ್ನವಾದ ಯಥಾದೃಷ್ಟಿಯಿದೆ: “ಅಪ್ಪ ನನಗಾಗಿ ಏನನ್ನು ಮಾಡಿದರೋ ಅದು ಬೆಲೆಕಟ್ಟಲಾಗದಂತಹದ್ದು. ಪರಿಶ್ರಮದ ಕೆಲಸವನ್ನು ಮಾಡುವುದು ಮತ್ತು ಕಷ್ಟದೆಸೆಯನ್ನು ತಾಳಿಕೊಳ್ಳುವುದು ಹೇಗೆಂಬುದನ್ನು ಅವರು ನನಗೆ ಕಲಿಸಿದರು. ಅಂದಿನಿಂದ ನನಗೆ ಹೆಚ್ಚು ಅಧಿಕ ಗಂಭೀರವಾದ ಸಮಸ್ಯೆಗಳನ್ನು ಎದುರಿಸಲಿಕ್ಕಿತ್ತು, ಆದರೆ ಅವುಗಳನ್ನು ಹೇಗೆ ನೇರವಾಗಿ ಎದುರಿಸುವುದೆಂಬುದು ನನಗೆ ತಿಳಿದಿದೆ.”

ಒಂದು ಭ್ರಾಂತಿ ಸ್ವರ್ಗ

ಆದಾಗಲೂ, ಕೇವಲ ಮನೆಯಲ್ಲಿ ವಾಸಿಸುವುದು, ನೀವು ಪ್ರೌಢರಾಗುವ ಖಾತರಿಯನ್ನು ಕೊಡುವುದಿಲ್ಲ. ಒಬ್ಬ ಯೌವನಸ್ಥನು ಹೇಳುವುದು: “ನನ್ನ ಹೆತ್ತವರೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದದ್ದು, ಒಂದು ಭ್ರಾಂತಿ ಸ್ವರ್ಗದಲ್ಲಿ ಜೀವಿಸುವಂತಿತ್ತು. ಅವರು ನನಗಾಗಿ ಪ್ರತಿಯೊಂದು ವಿಷಯವನ್ನು ಮಾಡಿದರು.” ನಿಮ್ಮಷ್ಟಕ್ಕೆ ನೀವೇ ಕೆಲಸಗಳನ್ನು ಮಾಡುವ ವಿಧವನ್ನು ಕಲಿತುಕೊಳ್ಳುವುದು, ಬೆಳೆಯುವುದರ ಒಂದು ಭಾಗವಾಗಿದೆ. ಕಚಡವನ್ನು ಹೊರಗೆ ಕೊಂಡೊಯ್ಯುವುದು ಅಥವಾ ಬಟ್ಟೆಗಳನ್ನು ಒಗೆಯುವುದು, ನಿಮ್ಮ ಅಚ್ಚುಮೆಚ್ಚಿನ ರೆಕಾರ್ಡುಗಳನ್ನು ನುಡಿಸುವಷ್ಟು ವಿನೋದಕರವಲ್ಲ ಎಂಬುದು ಒಪ್ಪತಕ್ಕ ವಿಷಯವೇ. ಆದರೆ ನೀವು ಈ ಕೆಲಸಗಳನ್ನು ಮಾಡಲು ಎಂದೂ ಕಲಿಯದಿರುವಲ್ಲಿ, ಏನು ಪರಿಣಮಿಸಬಲ್ಲದು? ನಿಮ್ಮ ಹೆತ್ತವರ ಮೇಲೆ ಅಥವಾ ಇತರರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದು, ನೀವು ಒಬ್ಬ ನಿಸ್ಸಹಾಯಕ ವಯಸ್ಕರಾಗಿ ಪರಿಣಮಿಸಸಾಧ್ಯವಿದೆ.

ನೀವು (ಒಬ್ಬ ಯುವ ಪುರುಷನಾಗಿರಲಿ ಅಥವಾ ಒಬ್ಬ ಯುವ ಸ್ತ್ರೀಯಾಗಿರಲಿ), ಅಡುಗೆ ಮಾಡುವ, ಶುಚಿಗೊಳಿಸುವ, ಇಸ್ತ್ರಿ ಮಾಡುವ, ಅಥವಾ ಮನೆವಾರ್ತೆಯ ಅಥವಾ ಮೋಟಾರುವಾಹನದ ರಿಪೇರಿಗಳನ್ನು ಮಾಡುವ ವಿಧವನ್ನು ಕಲಿಯುವ ಮೂಲಕ ಕಟ್ಟಕಡೆಗಿನ ಸ್ವಾತಂತ್ರ್ಯಕ್ಕಾಗಿ ತಯಾರಿ ನಡೆಸುತ್ತಿದ್ದೀರೊ?

ಆರ್ಥಿಕ ಸ್ವಾತಂತ್ರ್ಯ

ಸಂಪದ್ಭರಿತ ದೇಶಗಳಲ್ಲಿನ ಯುವ ಜನರು ಅನೇಕವೇಳೆ ಹಣವನ್ನು ಸುಲಭವಾಗಿ ಬರುವಂತಹ ವಿಷಯವಾಗಿಯೂ ಖರ್ಚುಮಾಡಲು ಇನ್ನೂ ಹೆಚ್ಚು ಸುಲಭವಾದ ವಿಷಯವಾಗಿಯೂ ವೀಕ್ಷಿಸುತ್ತಾರೆ. ಅವರಿಗೆ ಒಂದು ಅಂಶಕಾಲಿಕ ಉದ್ಯೋಗವಿರುವಲ್ಲಿ, ಅವರು ತಮ್ಮ ಹಣವನ್ನು ಸ್ಟೀರಿಯೋಗಳು ಅಥವಾ ಡಿಸೈನರ್‌ ಬಟ್ಟೆಗಳಿಗಾಗಿ ಖರ್ಚುಮಾಡುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಆದರೂ, ಅಂತಹ ಯುವ ಜನರು, ತಮ್ಮಷ್ಟಕ್ಕೆ ಜೀವಿಸಲು ಹೊರಹೋಗುವಾಗ, ಅದು ಎಂತಹ ಒಂದು ಒರಟಾದ ಜ್ಞಾನೋದಯವಾಗಿರುವುದು! (ಈ ಮುಂಚೆ ತಿಳಿಸಲ್ಪಟ್ಟಿರುವ) ಹಾರ್ಸ್ಟ್‌ ಜ್ಞಾಪಿಸಿಕೊಳ್ಳುವುದು: “[ನನ್ನಷ್ಟಕ್ಕೆ ಜೀವಿಸುತ್ತಿದ್ದಾಗ] ತಿಂಗಳ ಅಂತ್ಯದೊಳಗೆ ನನ್ನ ಪರ್ಸ್‌ ಮತ್ತು ನನ್ನ ಕಪಾಟು ಎರಡೂ ಖಾಲಿಯಾಗಿರುತ್ತಿದ್ದವು.”

ನೀವು ಮನೆಯಲ್ಲಿ ವಾಸಿಸುತ್ತಿರುವಾಗಲೇ ಹಣವನ್ನು ನಿರ್ವಹಿಸುವ ವಿಧವನ್ನು ಏಕೆ ಕಲಿಯಬಾರದು? ಇದನ್ನು ಮಾಡುವುದರಲ್ಲಿ ನಿಮ್ಮ ಹೆತ್ತವರಿಗೆ ಅನೇಕ ವರ್ಷಗಳ ಅನುಭವ ಇದೆ ಮತ್ತು ನೀವು ಅನೇಕ ಮುಚ್ಚುಗಂಡಿಗಳಿಂದ ದೂರವಿರಲು ಅವರು ನಿಮಗೆ ಸಹಾಯಮಾಡಬಲ್ಲರು. ಬೇರುಗಳನ್ನು ಕೀಳುವುದು (ಇಂಗ್ಲಿಷ್‌) ಎಂಬ ಪುಸ್ತಕವು, ಈ ಕೆಳಗಿನ ಪ್ರಶ್ನೆಗಳನ್ನು ಕೇಳುವಂತೆ ಅವರಿಗೆ ಸಲಹೆ ನೀಡುತ್ತದೆ: ‘ಪ್ರತಿ ತಿಂಗಳು ವಿದ್ಯುಚ್ಛಕ್ತಿ, ಶಾಖ, ನೀರು, ಟೆಲಿಫೋನ್‌ಗಾಗಿ ಎಷ್ಟು ಹಣ ವೆಚ್ಚವಾಗುತ್ತದೆ? ನಾವು ಯಾವ ರೀತಿಯ ತೆರಿಗೆಗಳನ್ನು ತೆರುತ್ತೇವೆ? ನಾವು ಎಷ್ಟು ಬಾಡಿಗೆಯನ್ನು ತೆರುತ್ತೇವೆ?’ ಅನೇಕವೇಳೆ ಕೆಲಸಮಾಡುತ್ತಿರುವ ಯುವ ಜನರಲ್ಲಿ, ತಮ್ಮ ಹೆತ್ತವರ ಬಳಿ ಇರುವುದಕ್ಕಿಂತಲೂ ಹೆಚ್ಚು ಕೈವೆಚ್ಚದ ಹಣವಿರುತ್ತದೆಂಬುದನ್ನು ತಿಳಿದು ನೀವು ಆಘಾತಗೊಳ್ಳಬಹುದು! ಆದುದರಿಂದ, ನಿಮಗೆ ಒಂದು ಉದ್ಯೋಗವಿರುವಲ್ಲಿ, ಮನೆವಾರ್ತೆಯ ಖರ್ಚಿಗಾಗಿ ಸಾಕಷ್ಟು ಹಣವನ್ನು ಕೊಡಲು ಸಿದ್ಧರೆಂದು ಹೇಳಿರಿ.

ನೀವು ಮನೆಯನ್ನು ಬಿಟ್ಟುಹೋಗುವ ಮುಂಚೆ ಕಲಿತುಕೊಳ್ಳಿರಿ

ಇಲ್ಲ, ಬೆಳೆಯಲಿಕ್ಕಾಗಿ ನೀವು ನಿಮ್ಮ ಮನೆಯನ್ನು ಬಿಟ್ಟುಹೋಗುವ ಅಗತ್ಯವಿಲ್ಲ. ಆದರೆ ನೀವು ಮನೆಯಲ್ಲಿರುವಾಗ ಒಳ್ಳೆಯ ತೀರ್ಮಾನಶಕ್ತಿ ಮತ್ತು ಸಮಬುದ್ಧಿಯನ್ನು ವಿಕಸಿಸಿಕೊಳ್ಳಲು ಕಠಿನವಾಗಿ ಶ್ರಮಿಸಬೇಕು. ಇತರರೊಂದಿಗೆ ಹೇಗೆ ಹೊಂದಿಕೊಂಡು ಹೋಗಬೇಕೆಂಬುದನ್ನೂ ಕಲಿತುಕೊಳ್ಳಿರಿ. ನೀವು ಟೀಕೆ, ವೈಫಲ್ಯ, ಅಥವಾ ಆಶಾಭಂಗವನ್ನು ಸಹಿಸಬಲ್ಲಿರೆಂಬುದನ್ನು ರುಜುಪಡಿಸಿರಿ. “ದಯೆ ಉಪಕಾರ . . . ಸಾಧುತ್ವ ಶಮೆದಮೆ”ಯನ್ನು ಬೆಳೆಸಿಕೊಳ್ಳಿರಿ. (ಗಲಾತ್ಯ 5:22, 23) ಈ ಗುಣಲಕ್ಷಣಗಳು ಬೆಳೆದುನಿಂತಿರುವ ಒಬ್ಬ ಕ್ರೈಸ್ತ ಪುರುಷ ಅಥವಾ ಸ್ತ್ರೀಯ ನಿಜ ಗುರುತುಗಳಾಗಿವೆ.

ಬೇಗನೆಯೋ ಸಾವಕಾಶವಾಗಿಯೋ, ವಿವಾಹದಂತಹ ಪರಿಸ್ಥಿತಿಗಳು, ನಿಮ್ಮನ್ನು ನಿಮ್ಮ ಹೆತ್ತವರ ಮನೆಯ ಗೂಡಿನಿಂದ ಹೊರಹಾಕಬಹುದು. ಆದರೆ ಅಷ್ಟರ ವರೆಗೆ, ಮನೆಯನ್ನು ಬಿಟ್ಟುಹೋಗಲು ಅವಸರವೇಕೆ? ಅದನ್ನು ನಿಮ್ಮ ಹೆತ್ತವರೊಂದಿಗೆ ಮಾತಾಡಿರಿ. ನೀವು ಉಳಿಯುವುದರಲ್ಲಿ ಅವರು ಸಂತೋಷಪಡಬಹುದು, ವಿಶೇಷವಾಗಿ ನೀವು ಕುಟುಂಬದ ಕ್ಷೇಮಕ್ಕಾಗಿ ನಿಜವಾಗಿ ನೆರವನ್ನೀಯುತ್ತೀರಾದರೆ. ಅವರ ಸಹಾಯದೊಂದಿಗೆ, ನೀವು ಮನೆಯಲ್ಲಿಯೇ ಬೆಳೆಯುತ್ತಾ, ಕಲಿಯುತ್ತಾ, ಪ್ರೌಢರಾಗುತ್ತಾ ಮುಂದುವರಿಯಬಲ್ಲಿರಿ.

ಚರ್ಚೆಗಾಗಿ ಪ್ರಶ್ನೆಗಳು

◻ ಅನೇಕ ಯುವ ಜನರು ಮನೆಯನ್ನು ಬಿಟ್ಟುಹೋಗಲು ಆತುರರಾಗಿದ್ದಾರೆ ಏಕೆ?

◻ ಹೆಚ್ಚಿನ ಯುವ ಜನರು ಅಂತಹ ಒಂದು ಪ್ರಯತ್ನಕ್ಕಾಗಿ ಸಿದ್ಧರಾಗಿಲ್ಲವೇಕೆ?

◻ ಸಮಯಕ್ಕೆ ಮುಂಚೆಯೇ ಮನೆಯನ್ನು ಬಿಟ್ಟುಹೋಗುವುದರಲ್ಲಿರುವ ಅಪಾಯಗಳಲ್ಲಿ ಕೆಲವು ಯಾವುವು?

◻ ಓಡಿಹೋದವರಿಂದ ಎದುರಿಸಲ್ಪಡುವ ಸಮಸ್ಯೆಗಳಲ್ಲಿ ಕೆಲವು ಯಾವುವು?

◻ ಮನೆಯಲ್ಲಿ ಜೀವಿಸುತ್ತಿರುವಾಗಲೇ ನೀವು ಪ್ರೌಢರಾಗುವುದು ಹೇಗೆ ಶಕ್ಯ?

[ಪುಟ 68 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಿಮ್ಮ ಹೆತ್ತವರೊಂದಿಗೆ ನೀವು ಹೊಂದಿಕೊಂಡು ಹೋಗಲಾರಿರಿ ಎಂಬ ಕಾರಣಕ್ಕಾಗಿ ಮಾತ್ರ ಮನೆಯನ್ನು ಎಂದೂ ಬಿಟ್ಟುಹೋಗಬೇಡಿ. . . . ಬೇರೆ ಜನರೊಂದಿಗೆ ನೀವು ಹೇಗೆ ತಾನೇ ಹೊಂದಿಕೊಂಡು ಹೋಗಲು ಶಕ್ತರಾಗುವಿರಿ?”

[60,61వ పేజీలోని బాక్సు]

ಓಡಿಹೋಗುವುದು ಪರಿಹಾರವೊ?

ಪ್ರತಿ ವರ್ಷ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಹದಿವಯಸ್ಕರು ಮನೆಯಿಂದ ಓಡಿಹೋಗುತ್ತಾರೆ. ಕೆಲವರು, ಶಾರೀರಿಕ ಅಥವಾ ಲೈಂಗಿಕ ದುರ್ಬಳಕೆಯಂತಹ ಸಹಿಸಲಸಾಧ್ಯವಾದ ಪರಿಸ್ಥಿತಿಗಳಿಂದ ಓಡಿಹೋಗುತ್ತಿದ್ದಾರೆ. ಆದರೆ ಅನೇಕವೇಳೆ ಓಡಿಹೋಗುವಿಕೆಯು, ಮನೆಗೆ ಹಿಂದಿರುಗುವ ಸಮಯ, ಶಾಲೆಯ ಅಂಕಗಳು, ಮನೆಯಲ್ಲಿನ ಕೆಲಸಗಳು, ಮತ್ತು ಸ್ನೇಹಿತರ ಆಯ್ಕೆಯಂತಹ ವಿಷಯಗಳ ಕುರಿತಾಗಿ ಹೆತ್ತವರೊಂದಿಗಿನ ವಿವಾದಗಳಿಂದ ಹೊತ್ತಿಸಲ್ಪಡುತ್ತದೆ.

ಪ್ರಾಯಶಃ ನಿಮ್ಮ ಹೆತ್ತವರ ಹೊರನೋಟ ಮತ್ತು ವಿಷಯಗಳ ಕುರಿತಾದ ಯೋಚನೆಯು, ನಿಮ್ಮ ಹೊರನೋಟ ಮತ್ತು ಯೋಚನೆಯೊಂದಿಗೆ ತಾಳೆಬೀಳುವುದೇ ಇಲ್ಲ. ಆದರೆ ನಿಮ್ಮ ಹೆತ್ತವರು, ನಿಮ್ಮನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಬೆಳೆಸುತ್ತಾ ಹೋಗುವ ಹಂಗಿನಲ್ಲಿದ್ದಾರೆ ಎಂಬ ವಾಸ್ತವಾಂಶವನ್ನು ನೀವು ಪರಿಗಣಿಸಿದ್ದೀರೊ? (ಎಫೆಸ 6:4, NW) ಆದುದರಿಂದ ಅವರು, ನೀವು ಅವರೊಂದಿಗೆ ಧಾರ್ಮಿಕ ಕೂಟಗಳಿಗೆ ಮತ್ತು ಚಟುವಟಿಕೆಗಳಿಗೆ ಜೊತೆಗೂಡಿ ಹೋಗುವಂತೆ ಪಟ್ಟುಹಿಡಿಯಬಹುದು ಅಥವಾ ಇತರ ಯುವ ಜನರೊಂದಿಗಿನ ನಿಮ್ಮ ಸಹವಾಸವನ್ನು ನಿರ್ಬಂಧಿಸಲೂಬಹುದು. (1 ಕೊರಿಂಥ 15:33) ಪ್ರತಿಭಟಿಸಲು ಅಥವಾ ಓಡಿಹೋಗಲು ಅದು ಒಂದು ಕಾರಣವೊ? ನಿಮಗೂ ದೇವರ ಮುಂದೆ ಒಂದು ಹಂಗು ಇದೆ: “ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು.”—ಎಫೆಸ 6:1-3.

ಅದಲ್ಲದೆ, ಓಡಿಹೋಗುವುದು ಏನನ್ನೂ ಬಗೆಹರಿಸುವುದಿಲ್ಲ. “ಓಡಿಹೋಗುವುದು ನಿಮಗೆ ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಅಷ್ಟೇ,” ಎಂದು 14 ವರ್ಷ ಪ್ರಾಯದಲ್ಲಿ ಓಡಿಹೋದ ಏಮಿ ಜ್ಞಾಪಕಕ್ಕೆ ತಂದುಕೊಳ್ಳುತ್ತಾಳೆ. ನನ್ನ ಮಿತ್ರ ಓಡಿಹೋಗಲು ಬಯಸುತ್ತಾನೆ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಮಾರ್ಗರೆಟ್‌ ಓ. ಹೈಡ್‌ ಹೇಳುವುದು: “ಓಡಿಹೋದವರಲ್ಲಿ ಕೆಲವರಿಗೆ ಉದ್ಯೋಗಗಳು ಸಿಗುತ್ತವೆ ಮತ್ತು ತಮ್ಮಷ್ಟಕ್ಕೆ ಜೀವಿಸಲು ಶಕ್ತರಾಗುತ್ತಾರೆ. ಆದರೆ ಅವರಲ್ಲಿ ಹೆಚ್ಚಿನವರಿಗೆ, ಜೀವನವು ಅವರು ಮನೆ ಬಿಟ್ಟು ಹೋಗುವ ಮುಂಚೆ ಇದ್ದಂತಹ ಪರಿಸ್ಥಿತಿಗಿಂತ ಹೆಚ್ಚು ಕೆಟ್ಟದ್ದಾಗಿರುತ್ತದೆ.” ಮತ್ತು ಟೀನ್‌ ಪತ್ರಿಕೆಯು ಅವಲೋಕಿಸುವುದು: “ಹದಿವಯಸ್ಕರು ಬೀದಿಗಳಲ್ಲಿ ಸ್ವಾತಂತ್ರ್ಯವನ್ನು ಕಂಡುಕೊಳ್ಳುವುದಿಲ್ಲ. ಬದಲಾಗಿ, ಎಲ್ಲಿ ಅವರಿಗೆ ಬಲಾತ್ಕಾರಸಂಭೋಗಿಗಳು ಅಥವಾ ಕಳ್ಳರಿಂದ ರಕ್ಷಣೆಯಿಲ್ಲವೊ ಅಂತಹ ತೊರೆಯಲ್ಪಟ್ಟಿರುವ ಕಟ್ಟಡಗಳಲ್ಲಿ ಜೀವಿಸುತ್ತಿರುವ, ತಮ್ಮಂತೆಯೇ ಓಡಿಹೋದವರಲ್ಲಿ ಅಥವಾ ತೊರೆಯಲ್ಪಟ್ಟವರಲ್ಲಿ ಇತರರನ್ನು ಅವರು ಕಂಡುಕೊಳ್ಳುತ್ತಾರೆ. ಯುವ ಜನರ ಶೋಷಣೆಮಾಡುವುದನ್ನು ತಮ್ಮ ಹೀನ ವ್ಯಾಪಾರವನ್ನಾಗಿ ಮಾಡಿಕೊಳ್ಳುವ ತುಂಬ ಜನರನ್ನು ಸಹ ಅವರು ಕಂಡುಕೊಳ್ಳುತ್ತಾರೆ, ಮತ್ತು ಓಡಿಹೋದ ಹದಿವಯಸ್ಕರು ಒಂದು ಸುಲಭವಾದ ಗುರಿಹಲಗೆಯಾಗಿದ್ದಾರೆ.”

ಏಮಿ ಓಡಿಹೋದಾಗ, 22 ವರ್ಷ ಪ್ರಾಯದ ಒಬ್ಬ ಹುಡುಗನು ಅವಳ “ಸ್ನೇಹ ಬೆಳೆಸಿದನು.” “ಅವನೊಂದಿಗೆ ಮತ್ತು ಅವನ ಒಂಬತ್ತು ಸ್ನೇಹಿತರೊಂದಿಗೆ ಸಂಭೋಗವನ್ನು ನಡಿಸುವುದರ ಮೂಲಕ” ಅವಳು ತನ್ನ ತಂಗುವಿಕೆಗಾಗಿ ಹಣಪಾವತಿ ಮಾಡುವಂತೆ ಅವನು ಮಾಡಿದನು. ಅವಳು “ಮತ್ತಳಾಗಿ, ತುಂಬ ಅಮಲೌಷಧಗಳನ್ನು ಸೇವಿಸಿದಳು” ಸಹ. ಸ್ಯಾಂಡಿ ಎಂಬ ಹೆಸರಿನ ಇನ್ನೊಬ್ಬ ಹುಡುಗಿ, ತನ್ನ ಸಾಕು ಅಜ್ಜನಿಂದ ಲೈಂಗಿಕವಾಗಿ ಪೀಡಿಸಲ್ಪಟ್ಟು, ಓಡಿಹೋದಳು. ಅವಳು ಬೀದಿಗಳಲ್ಲಿ ಜೀವಿಸುವ ಮತ್ತು ಉದ್ಯಾನವನದ ಬೆಂಚುಗಳ ಮೇಲೆ ಅಥವಾ ಸಾಧ್ಯವಿರುವಲ್ಲೆಲ್ಲಾ ಮಲಗುವ ಒಬ್ಬ ವೇಶ್ಯೆಯಾದಳು. ಓಡಿಹೋದವರಲ್ಲಿ ಅನೇಕರ ವಿಷಯದಲ್ಲಿ ಇದು ಪ್ರಾತಿನಿಧಿಕವಾಗಿದೆ.

ಓಡಿಹೋದವರಲ್ಲಿ ಹೆಚ್ಚಿನವರಿಗೆ ಕೆಲವೇ ವಿಕ್ರಯಯೋಗ್ಯ ಕೌಶಲಗಳಿರುತ್ತವೆ. ಸಾಮಾನ್ಯವಾಗಿ ಅವರಲ್ಲಿ ಕೆಲಸಕ್ಕಿಡಲ್ಪಡಲು ಆವಶ್ಯಕವಾಗಿರುವ ಯಾವುದೇ ದಸ್ತಾವೇಜುಗಳೂ—ಜನನ ಪ್ರಮಾಣಪತ್ರ, ಸೋಷಿಯಲ್‌ ಸೆಕ್ಯುರಿಟಿ ಕಾರ್ಡು, ಖಾಯಂ ವಿಳಾಸ—ಇರುವುದಿಲ್ಲ. “ನಾನು ಕಳ್ಳತನಮಾಡಿ, ಭಿಕ್ಷೆಬೇಡಬೇಕಾಯಿತು, ಆದರೆ ಮುಖ್ಯವಾಗಿ ಕಳ್ಳತನಮಾಡಬೇಕಾಗಿತ್ತು, ಯಾಕಂದರೆ ಭಿಕ್ಷೆಬೇಡುವಾಗ ನಿಮಗೆ ಯಾರೂ ಏನನ್ನೂ ಕೊಡುವುದಿಲ್ಲ” ಎಂದು ಲೂಯಿ ಹೇಳುತ್ತಾನೆ. ಓಡಿಹೋದವರಲ್ಲಿ ಸುಮಾರು 60 ಪ್ರತಿಶತ ಹುಡುಗಿಯರಾಗಿದ್ದಾರೆ, ಅವರಲ್ಲಿ ಹೆಚ್ಚಿನವರು ವೇಶ್ಯಾವಾಟಿಕೆಯ ಮೂಲಕ ತಮ್ಮನ್ನು ಪೋಷಿಸಿಕೊಳ್ಳುತ್ತಾರೆ. ಲಂಪಟ ಸಾಹಿತ್ಯಕಾರರು, ಅಮಲೌಷಧ ವ್ಯಾಪಾರಸ್ಥರು, ಮತ್ತು ವೇಶ್ಯಾವಾಟಿಕೆಯ ದಲ್ಲಾಳಿಗಳು, ಶೋಷಣೆಮಾಡಲಿಕ್ಕಾಗಿ ಓಡಿಹೋದವರಿಗಾಗಿ ಹುಡುಕುತ್ತಾ ಬಸ್‌ ನಿಲ್ದಾಣಗಳಿಗೆ ಹೋಗುತ್ತಿರುತ್ತಾರೆ. ಅವರು ಕಂಗಾಲಾಗಿರುವ ಯುವ ಜನರಿಗೆ ಮಲಗಲು ಒಂದು ಜಾಗವನ್ನು ಮತ್ತು ತಿನ್ನಲು ಆಹಾರವನ್ನು ನೀಡಬಹುದು. ಅವರಿಗೆ ಮನೆಯಲ್ಲಿ ಕೊರತೆಯಿದ್ದಂತಹ ವಿಷಯವನ್ನೂ—ಅವರು ಪ್ರೀತಿಸಲ್ಪಡುತ್ತಾರೆ ಎಂಬ ಒಂದು ಅನಿಸಿಕೆ—ಅವರು ಕೊಡಬಹುದು.

ಸಮಯಾನಂತರವಾದರೊ, ಅಂತಹ “ಆಶ್ರಯದಾತರು” ಸಂದಾಯವನ್ನು ಕೇಳಿಕೊಳ್ಳುತ್ತಾರೆ. ಮತ್ತು ಅದು, ಅವರಿಗಾಗಿ ಒಬ್ಬ ವೇಶ್ಯೆಯಾಗಿ ಕೆಲಸಮಾಡುವುದು, ಲೈಂಗಿಕ ವಕ್ರ ಕೃತ್ಯಗಳಲ್ಲಿ ಒಳಗೂಡುವುದು, ಅಥವಾ ಲಂಪಟ ಸಾಹಿತ್ಯ ಚಿತ್ರಗಳಿಗಾಗಿ ಭಂಗಿನೀಡುವುದನ್ನು ಅರ್ಥೈಸಸಾಧ್ಯವಿದೆ. ಓಡಿಹೋದವರಲ್ಲಿ ಅನೇಕರು, ಗಂಭೀರವಾಗಿ ಗಾಯಗೊಂಡವರು—ಅಥವಾ ಮೃತರಾಗಿ—ಅಂತ್ಯಗೊಳ್ಳುವುದು ಆಶ್ಚರ್ಯವಲ್ಲ!

ಹೀಗಿರುವುದರಿಂದ, ನಿಮ್ಮ ಹೆತ್ತವರೊಂದಿಗೆ ಮಾತಾಡಲು ಪ್ರತಿಯೊಂದು ಪ್ರಯತ್ನವನ್ನೂ ಮಾಡುವುದು—ಮತ್ತು ಇದು ಒಂದಕ್ಕಿಂತ ಹೆಚ್ಚು ಬಾರಿ ಪ್ರಯತ್ನಿಸುವುದನ್ನು ಅರ್ಥೈಸುತ್ತದೆ—ವಿವೇಕಯುತ. ನಿಮಗೆ ಹೇಗನಿಸುತ್ತದೆ ಮತ್ತು ಏನು ನಡೆಯುತ್ತಾ ಇದೆಯೆಂಬುದನ್ನು ಅವರಿಗೆ ತಿಳಿಸಿರಿ. (2 ಮತ್ತು 3ನೆಯ ಅಧ್ಯಾಯಗಳನ್ನು ನೋಡಿರಿ.) ಶಾರೀರಿಕ ಅಥವಾ ಲೈಂಗಿಕ ದುರ್ಬಳಕೆಯ ವಿದ್ಯಮಾನಗಳಲ್ಲಿ, ಹೊರಗಿನ ಸಹಾಯವು ಅಗತ್ಯವಾಗಿರಬಹುದು.

ವಿಷಯವು ಏನೇ ಆಗಿರಲಿ, ಮಾತಾಡಿರಿ, ಓಡಿಹೋಗಬೇಡಿರಿ. ಮನೆಯಲ್ಲಿನ ಜೀವಿತವು ಆದರ್ಶಮಯವಾಗಿರದಿದ್ದರೂ, ನೀವು ಓಡಿಹೋಗುವಾಗ ವಿಷಯಗಳು ಇನ್ನೂ ಹೆಚ್ಚು ಕೆಟ್ಟದ್ದಾಗಿರಬಲ್ಲವೆಂಬುದನ್ನು ಮನಸ್ಸಿನಲ್ಲಿಡಿರಿ.

[ಪುಟ 59 ರಲ್ಲಿರುವ ಚಿತ್ರಗಳು]

ಒಬ್ಬನು ತನ್ನಷ್ಟಕ್ಕೇ ಜೀವಿಸಲಿಕ್ಕಾಗಿ ಅಗತ್ಯವಿರುವ ಗೃಹ ಕೌಶಲಗಳನ್ನು ಮನೆಯಲ್ಲಿಯೇ ಕಲಿಯಸಾಧ್ಯವಿದೆ