ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅದು ನಿಜ ಪ್ರೀತಿಯೆಂದು ನಾನು ಹೇಗೆ ತಿಳಿಯಬಲ್ಲೆ?

ಅದು ನಿಜ ಪ್ರೀತಿಯೆಂದು ನಾನು ಹೇಗೆ ತಿಳಿಯಬಲ್ಲೆ?

ಅಧ್ಯಾಯ 31

ಅದು ನಿಜ ಪ್ರೀತಿಯೆಂದು ನಾನು ಹೇಗೆ ತಿಳಿಯಬಲ್ಲೆ?

ಪ್ರೀತಿ—ನಕ್ಷತ್ರಮಯ ಕಣ್ಣುಗಳ್ಳುಳ್ಳ ಪ್ರಣಯಿಗಳಿಗೆ ಅದು ನಿಮ್ಮನ್ನು ಸ್ವಾಧೀನಪಡಿಸಿಕೊಳ್ಳುವ ಒಂದು ಗೂಢವಾದ ಭೇಟಿಯಾಗಿದ್ದು, ಜೀವಮಾನದಲ್ಲಿ ಒಮ್ಮೆ ಮಾತ್ರ ಆಗುವ ಶುದ್ಧ ಹರ್ಷೋನ್ಮಾದದ ಅನಿಸಿಕೆಯಾಗಿದೆ. ಅವರು ನಂಬುವ ಪ್ರಕಾರ, ಪ್ರೀತಿಯು, ಅರ್ಥಮಾಡಿಕೊಳ್ಳಲಾಗದ, ಕೇವಲ ಅನುಭವಿಸಸಾಧ್ಯವಿರುವ ಹೃದಯದ ಒಂದು ವಿಷಯವಾಗಿದೆ. ಪ್ರೀತಿ ಸಕಲವನ್ನೂ ಜಯಿಸಿ, ಸದಾಕಾಲ ಬಾಳುತ್ತದೆ . . .

ಪ್ರಣಯಾತ್ಮಕ ನುಡಿಗಳು ಹೀಗೆಲ್ಲ ಹೇಳುತ್ತವೆ. ಒಬ್ಬರನ್ನು ಪ್ರೀತಿಸುವುದು ಒಂದು ಅಪೂರ್ವವಾದ ಸುಂದರ ಅನುಭವವಾಗಿರಸಾಧ್ಯವಿದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ನಿಜವಾದ ಪ್ರೀತಿಯು ತಾನೇ ಏನಾಗಿದೆ?

ಪ್ರಥಮ ನೋಟದಲ್ಲಿ ಪ್ರೀತಿ?

ಡೇವಿಡ್‌ ಪ್ರಥಮ ಬಾರಿ ಜ್ಯಾನೆಟಳನ್ನು ಒಂದು ಪಾರ್ಟಿಯಲ್ಲಿ ಸಂಧಿಸಿದನು. ಅವನು ಕೂಡಲೇ ಆಕೆಯ ಅಂದವಾದ ಮೈಕಟ್ಟು ಮತ್ತು ಆಕೆ ನಗುವಾಗ ಆಕೆಯ ಕಣ್ಣಿನ ಮೇಲೆ ಬೀಳುತ್ತಿದ್ದ ಆಕೆಯ ಕೂದಲಿನ ರೀತಿಯಿಂದ ಆಕರ್ಷಿತನಾದನು. ಜ್ಯಾನೆಟ್‌ ಅವನ ಗಾಢವಾದ ಕಂದು ಬಣ್ಣದ ಕಣ್ಣುಗಳಿಂದ ಮತ್ತು ಅವನ ಸ್ವಾರಸ್ಯಕರವಾದ ಸಂಭಾಷಣೆಯಿಂದ ಮೋಹಗೊಂಡಳು. ಅದು ಪ್ರಥಮ ನೋಟದಲ್ಲಿಯೇ ಪರಸ್ಪರ ಪ್ರೀತಿಯ ಸಂಗತಿಯಂತೆ ತೋರಿತು!

ಮುಂದಿನ ಮೂರು ವಾರಗಳ ಅವಧಿಯಲ್ಲಿ, ಡೇವಿಡ್‌ ಮತ್ತು ಜ್ಯಾನೆಟ್‌ ಅಗಲಿಸಲಾಗದ ಜೋಡಿಯಾಗಿದ್ದರು. ನಂತರ ಒಂದು ರಾತ್ರಿ, ಜ್ಯಾನೆಟ್‌ ತನ್ನ ಹಿಂದಿನ ಬಾಯ್‌ಫ್ರೆಂಡ್‌ನಿಂದ ಒಂದು ವಿಧ್ವಂಸಕ ಫೋನ್‌ಕರೆಯನ್ನು ಪಡೆದಳು. ಸಾಂತ್ವನಕ್ಕಾಗಿ ಆಕೆ ಡೇವಿಡ್‌ಗೆ ಫೋನ್‌ ಮಾಡಿದಳು. ಆದರೆ ಡೇವಿಡ್‌, ಬೆದರಿದವನಾಗಿ, ಗಲಿಬಿಲಿಗೊಂಡು, ನೀರಸವಾಗಿ ಪ್ರತಿಕ್ರಿಯಿಸಿದನು. ಸದಾಕಾಲ ಬಾಳುವುದೆಂದು ಅವರು ನೆನಸಿದ ಪ್ರೀತಿಯು ಆ ರಾತ್ರಿಯೇ ಕೊನೆಗೊಂಡಿತು.

ಪ್ರಥಮ ನೋಟದಲ್ಲಿನ ಪ್ರೀತಿಯು ಸದಾಕಾಲ ಬಾಳುತ್ತದೆ ಎಂಬುದನ್ನು ನೀವು ನಂಬಬೇಕೆಂದು, ಚಲನ ಚಿತ್ರಗಳು, ಪುಸ್ತಕಗಳು ಮತ್ತು ಟೆಲಿವಿಷನ್‌ ಪ್ರದರ್ಶನಗಳು ಬಯಸುತ್ತವೆ. ಸಾಮಾನ್ಯವಾಗಿ ಪ್ರಥಮ ಹಂತದಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರರನ್ನು ಗಮನಿಸುವಂತೆ ಮಾಡುವಂತಹದ್ದು ಶಾರೀರಿಕ ಆಕರ್ಷಣೆಯೇ ಎಂಬುದು ಒಪ್ಪತಕ್ಕ ವಿಷಯವು. ಒಬ್ಬ ಯುವ ಪುರುಷನು ಅದನ್ನು ನುಡಿದಂತೆ: “ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ‘ನೋಡುವುದು’ ಕಷ್ಟಕರ.” ಆದರೆ ಸಂಬಂಧವು ಕೆಲವೇ ತಾಸುಗಳ ಅಥವಾ ದಿನಗಳ ಸಂಬಂಧವಾಗಿರುವಾಗ, ಒಬ್ಬನು ಯಾವ ವಿಷಯವನ್ನು “ಪ್ರೀತಿಸು”ವವನಾಗಿದ್ದಾನೆ? ಆ ವ್ಯಕ್ತಿಯು ಹೊರಸೂಸುವ ಸ್ವರೂಪವನ್ನಲ್ಲವೊ? ನಿಜವಾಗಿ ನಿಮಗೆ ಆ ವ್ಯಕ್ತಿಯ ಆಲೋಚನೆಗಳು, ನಿರೀಕ್ಷೆಗಳು, ಭೀತಿಗಳು, ಯೋಜನೆಗಳು, ಹವ್ಯಾಸಗಳು, ಕೌಶಲಗಳು, ಅಥವಾ ಸಾಮರ್ಥ್ಯಗಳ ಕುರಿತು ಹೆಚ್ಚಿನ ಅರಿವು ಇರುವುದಿಲ್ಲ. ನೀವು “ಒಳಗಣ ಭೂಷಣ”ವನ್ನಲ್ಲ, ಹೊರಗಿನ ಚಿಪ್ಪನ್ನು ಮಾತ್ರ ಸಂಧಿಸಿದ್ದೀರಿ. (1 ಪೇತ್ರ 3:4) ಅಂತಹ ಪ್ರೀತಿಯು ಎಷ್ಟರ ತನಕ ಬಾಳಸಾಧ್ಯವಿದೆ?

ತೋರಿಕೆಗಳು ಮೋಸಕರವಾಗಿವೆ

ಇನ್ನೂ ಹೆಚ್ಚಾಗಿ, ಹೊರತೋರಿಕೆಗಳು ಮೋಸಕರವಾಗಿರಬಲ್ಲವು. ಬೈಬಲ್‌ ಹೇಳುವುದು: “ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ.” ಒಂದು ಕೊಡುಗೆಯ ಥಳಥಳಿಸುವ ಹೊದಿಕೆಯು, ಒಳಗೆ ಇರುವ ವಸ್ತುವಿನ ಕುರಿತು ಏನನ್ನೂ ಹೇಳುವುದಿಲ್ಲ. ವಾಸ್ತವದಲ್ಲಿ, ಅತ್ಯಂತ ಅಂದವಾದ ಹೊದಿಕೆಯು, ನಿಷ್ಪ್ರಯೋಜಕವಾದ ಕೊಡುಗೆಯೊಂದನ್ನು ಮುಚ್ಚಬಹುದು.—ಜ್ಞಾನೋಕ್ತಿ 31:30.

ಜ್ಞಾನೋಕ್ತಿ ಹೇಳುವುದು: “ಹಂದಿಯ ಮೂತಿಗೆ ಚಿನ್ನದ ಮೂಗುತಿಯು ಹೇಗೋ ಅವಿವೇಕಳಿಗೆ ಸೌಂದರ್ಯವು ಹಾಗೆ.” (ಜ್ಞಾನೋಕ್ತಿ 11:22) ಬೈಬಲ್‌ ಸಮಯಗಳಲ್ಲಿ ಮೂಗುತಿಗಳು ಒಂದು ಜನಪ್ರಿಯ ಆಭರಣವಾಗಿದ್ದವು. ಅವು ಅನೇಕ ವೇಳೆ ಗಟ್ಟಿ ಚಿನ್ನದ್ದಾಗಿದ್ದು, ಮನೋಹರವಾಗಿದ್ದವು. ಸ್ವಾಭಾವಿಕವಾಗಿಯೇ, ಅಂತಹ ಮೂಗುತಿಯು ಸ್ತ್ರೀಯೊಬ್ಬಳ ಮೇಲೆ ನೀವು ಗಮನಿಸುವ ಪ್ರಥಮ ಒಡವೆಯಾಗಿರಲಿತ್ತು.

ಸೂಕ್ತವಾಗಿಯೇ, ಜ್ಞಾನೋಕ್ತಿಯು “ವಿವೇಕ”ವಿಲ್ಲದ, ಹೊರತೋರಿಕೆಗೆ ಸುಂದರವಾಗಿರುವ ಒಬ್ಬ ಸ್ತ್ರೀಯನ್ನು, ‘ಹಂದಿಯ ಮೂತಿಯಲ್ಲಿರುವ ಚಿನ್ನದ ಮೂಗುತಿ’ಯೊಂದಕ್ಕೆ ಹೋಲಿಸುತ್ತದೆ. ಒಬ್ಬ ಅವಿವೇಕಿ ಸ್ತ್ರೀಗೆ ಸೌಂದರ್ಯವು ತಕ್ಕದ್ದಾಗಿರುವುದಿಲ್ಲ; ಅವಳ ಮೇಲೆ ಅದೊಂದು ನಿಷ್ಪ್ರಯೋಜಕ ಆಭರಣವಾಗಿದೆ. ಕಟ್ಟಕಡೆಗೆ, ಆಡಂಬರದ ಮೂಗುತಿಯೊಂದು ಹಂದಿಯನ್ನು ಅಂದಗೊಳಿಸದೆ ಇರುವಂತೆಯೇ, ಸೌಂದರ್ಯವು ಆಕೆಯನ್ನು ಆಕರ್ಷಕವಾಗಿ ಮಾಡದು! ಆದುದರಿಂದ ವ್ಯಕ್ತಿಯು ಅಂತರಂಗದಲ್ಲಿ ಹೇಗಿದ್ದಾನೆಂಬುದನ್ನು ಕಡೆಗಣಿಸಿ, ಒಬ್ಬನ ಹೊರತೋರಿಕೆಗಳನ್ನು ‘ಪ್ರೀತಿ’ಸುವುದು ಎಂತಹ ಒಂದು ತಪ್ಪು.

“ಇರುವಂತಹ ವಿಷಯಗಳಲ್ಲೇ . . . ಅತಿ ವಂಚಕವಾದ ವಿಷಯ”

ಆದರೆ, ಮಾನವ ಹೃದಯಕ್ಕೆ ನಿಶ್ಚಿತವಾದ ಪ್ರಣಯಾತ್ಮಕ ನಿರ್ಣಯವನ್ನು ಮಾಡುವ ಸಾಮರ್ಥ್ಯವಿದೆಯೆಂದು ಕೆಲವರಿಗೆ ಅನಿಸುತ್ತದೆ. ‘ಕೇವಲ ನಿಮ್ಮ ಹೃದಯಕ್ಕೆ ಕಿವಿಗೊಡಿರಿ’ ಎಂಬುದಾಗಿ ಅವರು ವಾದಿಸುತ್ತಾರೆ. ‘ಅದು ನಿಜವಾದ ಪ್ರೀತಿಯಾಗಿರುವಾಗ ನಿಮಗೆ ತಿಳಿಯುವುದು!’ ಅಸಂತೋಷಕರವಾಗಿ, ನಿಜಾಂಶಗಳು ಈ ಅಭಿಪ್ರಾಯಕ್ಕೆ ವಿರುದ್ಧವಾಗಿವೆ. ಒಂದು ಸಮೀಕ್ಷೆಯು ನಡೆಸಲ್ಪಟ್ಟಿತು. ಅದರಲ್ಲಿ (18ರಿಂದ 24 ವಯಸ್ಸಿನ) 1,079 ಯುವ ಜನರು ಆ ಸಮಯದ ವರೆಗೆ ಸರಾಸರಿ ಏಳು ಪ್ರಣಯಾತ್ಮಕ ಒಳಗೊಳ್ಳುವಿಕೆಗಳನ್ನು ಅನುಭವಿಸಿರುವುದಾಗಿ ವರದಿಸಿದರು. ಅವರ ಹಿಂದಿನ ಪ್ರಣಯಗಳು ಕೇವಲ ಮೋಹಪರವಶತೆ—ಒಂದು ಗತಿಸಿಹೋಗುವ, ಮಾಸಿಹೋಗುವ ಭಾವನೆ—ಗಳು ಎಂಬುದಾಗಿ ಹೆಚ್ಚಿನವರು ಒಪ್ಪಿಕೊಂಡರು. ಆದರೂ ಈ ಯುವ ಜನರು, “ತಮ್ಮ ಪ್ರಚಲಿತ ಅನುಭವವನ್ನು ಪ್ರೀತಿಯೆಂಬುದಾಗಿ ದೃಢವಿಶ್ವಾಸದಿಂದ ವರ್ಣಿಸಿದರು”! ಆದರೂ ಹೆಚ್ಚಿನವರು, ಬಹುಶಃ ಒಂದು ದಿನ ತಮ್ಮ ಪ್ರಚಲಿತ ಒಳಗೊಳ್ಳುವಿಕೆಗಳನ್ನು ತಮ್ಮ ಹಿಂದಿನ ಒಳಗೊಳ್ಳುವಿಕೆಗಳಂತೆ—ಬರಿಯ ಮೋಹಪರವಶತೆಗಳೋಪಾದಿ ವೀಕ್ಷಿಸುವರು.

ದುಃಖಕರ ಸಂಗತಿಯೇನೆಂದರೆ, ಪ್ರತಿ ವರ್ಷ ಸಾವಿರಾರು ದಂಪತಿಗಳು ಒಬ್ಬರನ್ನೊಬ್ಬರು ‘ಪ್ರೀತಿಸುತ್ತಿರುವ’ ಭ್ರಾಂತಿಯಲ್ಲಿ ವಿವಾಹವಾಗುತ್ತಾರೆ. ಆದರೆ, ಸ್ವಲ್ಪ ಸಮಯದಲ್ಲೇ ತಾವು ಗಂಭೀರವಾಗಿ ತಪ್ಪು ಮಾಡಿದ್ದೇವೆಂದು ಅವರು ಕಂಡುಕೊಳ್ಳುತ್ತಾರೆ. ಮೋಹಪರವಶತೆಯು, “ಕುರಿಮರಿಗಳನ್ನು ವಧೆಗೆ ಆಕರ್ಷಿಸುವಂತೆ, ನ್ಯೂನ ವಿವಾಹಗಳೊಳಗೆ ಶಂಕಿಸದ ಸ್ತ್ರೀಪುರುಷರನ್ನು ಆಕರ್ಷಿಸುತ್ತದೆ,” ಎಂಬುದಾಗಿ ರೇ ಶಾರ್ಟ್‌, ಸಂಭೋಗ, ಪ್ರೀತಿ, ಅಥವಾ ಮೋಹಪರವಶತೆ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ.

“ತನ್ನಲ್ಲೇ ಭರವಸವಿಡುವವನು ಮೂಢನು.” (ಜ್ಞಾನೋಕ್ತಿ 28:26) ಅನೇಕ ವೇಳೆ, ನಮ್ಮ ಹೃದಯದ ನಿರ್ಣಯವು, ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟ ಇಲ್ಲವೆ ನಿರ್ದೇಶಿಸಲ್ಪಟ್ಟ ನಿರ್ಣಯವಾಗಿದೆ. ವಾಸ್ತವದಲ್ಲಿ, ಬೈಬಲ್‌ ಹೇಳುವುದು: “ಇರುವಂತಹ ವಿಷಯಗಳಲ್ಲೇ ಹೃದಯವು ಅತಿ ವಂಚಕವಾದ ವಿಷಯವಾಗಿದೆ.” (ಯೆರೆಮೀಯ 17:9, ದ ಲಿವಿಂಗ್‌ ಬೈಬಲ್‌) ಆದರೂ, ಮೇಲೆ ಉಲ್ಲೇಖಿಸಲ್ಪಟ್ಟ ಜ್ಞಾನೋಕ್ತಿಯು ಮುಂದುವರಿಸುವುದು: “ಜ್ಞಾನದಿಂದ ನಡೆಯುವವನು ಉದ್ಧಾರವನ್ನು ಪಡೆಯುವನು.” ಮೋಹಪರವಶತೆ ಮತ್ತು ಬೈಬಲಿನಲ್ಲಿ ವರ್ಣಿಸಲ್ಪಟ್ಟಿರುವ ಪ್ರೀತಿ—ಎಂದಿಗೂ ವಿಫಲವಾಗದ ಪ್ರೀತಿ—ಯ ನಡುವಿನ ವ್ಯತ್ಯಾಸವನ್ನು ನೀವು ಅರಿತುಕೊಳ್ಳುವುದಾದರೆ, ನೀವು ಸಹ ಇತರ ಯುವ ಜನರು ಅನುಭವಿಸಿರುವ ಅಪಾಯಗಳು ಮತ್ತು ಆಶಾಭಂಗಗಳಿಂದ ಪಾರಾಗಸಾಧ್ಯವಿದೆ.

ಪ್ರೀತಿಯ ಪ್ರತಿಯಾಗಿ ಮೋಹಪರವಶತೆ

“ಮೋಹಪರವಶತೆಯು ಕುರುಡಾಗಿದ್ದು, ಹಾಗೆಯೇ ಉಳಿಯಲು ಇಷ್ಟಪಡುತ್ತದೆ. ಅದು ವಾಸ್ತವಿಕತೆಯ ಕಡೆಗೆ ನೋಡಬಯಸುವುದಿಲ್ಲ,” ಎಂಬುದಾಗಿ 24 ವರ್ಷ ಪ್ರಾಯದ ಕ್ಯಾಲ್ವಿನ್‌ ಒಪ್ಪಿಕೊಳ್ಳುತ್ತಾನೆ. 16 ವರ್ಷ ಪ್ರಾಯದ ಹುಡುಗಿ, ಕೆನ್ಯ ಕೂಡಿಸಿದ್ದು, “ನೀವು ಒಬ್ಬ ವ್ಯಕ್ತಿಯಲ್ಲಿ ಮೋಹಪರವಶರಾಗಿರುವಾಗ, ಅವರು ಮಾಡುವ ಪ್ರತಿಯೊಂದು ವಿಷಯವೂ ಪರಿಪೂರ್ಣವೆಂದು ನೀವು ನೆನಸುತ್ತೀರಿ.”

ಮೋಹಪರವಶತೆಯು ಕೃತಕ ಪ್ರೀತಿಯಾಗಿದೆ. ಅದು ಅವಾಸ್ತವಿಕವೂ ಸ್ವಾರ್ಥಮಗ್ನವೂ ಆದದ್ದಾಗಿದೆ. ಮೋಹಪರವಶಗೊಂಡ ವ್ಯಕ್ತಿಗಳು ಹೀಗೆ ಹೇಳುವ ಪ್ರವೃತ್ತಿಯುಳ್ಳವರಾಗಿರುತ್ತಾರೆ: ‘ನಾನು ಅವನೊಂದಿಗೆ ಇರುವಾಗ, ನನಗೆ ನಿಜವಾಗಿಯೂ ಪ್ರತಿಷ್ಠೆಯ ಅನಿಸಿಕೆಯಾಗುತ್ತದೆ. ನನಗೆ ನಿದ್ರೆ ಬರುವುದಿಲ್ಲ. ಇದು ಎಷ್ಟು ಕಲ್ಪನಾಮಯವಾಗಿದೆ ಎಂಬುದನ್ನು ನನಗೆ ನಂಬಲಾಗುವುದಿಲ್ಲ’ ಅಥವಾ, ‘ಆಕೆ ನಿಜವಾಗಿಯೂ ನನಗೆ ಹಿತವೆನಿಸುವಂತೆ ಮಾಡುತ್ತಾಳೆ.’ “ನಾನು” ಅಥವಾ “ನನಗೆ” ಎಂಬ ಪದಗಳು ಎಷ್ಟು ಬಾರಿ ಉಪಯೋಗಿಸಲ್ಪಟ್ಟಿವೆ ಎಂಬುದನ್ನು ಗಮನಿಸಿದಿರೊ? ಸ್ವಾರ್ಥತೆಯ ಮೇಲೆ ಆಧರಿಸಿದ ಒಂದು ಸಂಬಂಧವು ಖಂಡಿತವಾಗಿಯೂ ವಿಫಲಗೊಳ್ಳುವುದು! ಆದರೂ, ನಿಜ ಪ್ರೀತಿಯ ಕುರಿತಾದ ಬೈಬಲಿನ ವರ್ಣನೆಯನ್ನು ಗಮನಿಸಿರಿ: “ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು. ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ, ಹೊಗಳಿಕೊಳ್ಳುವದಿಲ್ಲ; ಉಬ್ಬಿಕೊಳ್ಳುವದಿಲ್ಲ; ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ.”—1 ಕೊರಿಂಥ 13:4, 5.

ಅದು “ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ”ವಾದುದರಿಂದ, ಬೈಬಲ್‌ ತತ್ವಾಧಾರಿತ ಪ್ರೀತಿಯು ಸ್ವಾರ್ಥಮಗ್ನವೂ ಅಲ್ಲ, ಸ್ವಾರ್ಥಪರವೂ ಅಲ್ಲ. ಒಬ್ಬ ದಂಪತಿಗಳಿಗೆ ಬಲವಾದ ಪ್ರಣಯಾತ್ಮಕ ಭಾವನೆಗಳು ಮತ್ತು ಪರಸ್ಪರ ಆಕರ್ಷಣೆಯು ಇರಬಹುದು ನಿಜ. ಆದರೆ ಈ ಭಾವನೆಗಳು ವಿವೇಚನೆಯಿಂದ ಮತ್ತು ಬೇರೊಬ್ಬ ವ್ಯಕ್ತಿಗಾಗಿರುವ ಆಳವಾದ ಗೌರವದಿಂದ ಸಮತೂಕಗೊಳಿಸಲ್ಪಡುತ್ತವೆ. ನೀವು ನಿಜವಾಗಿಯೂ ಒಬ್ಬರನ್ನು ಪ್ರೀತಿಸುವಲ್ಲಿ, ನಿಮ್ಮ ಸ್ವಂತ ಕ್ಷೇಮ ಮತ್ತು ಸಂತೋಷಕ್ಕಾಗಿ ನೀವು ಕಾಳಜಿ ವಹಿಸುವಷ್ಟೇ ಹೆಚ್ಚಾಗಿ ಮತ್ತೊಬ್ಬ ವ್ಯಕ್ತಿಯ ಕ್ಷೇಮ ಮತ್ತು ಸಂತೋಷಕ್ಕಾಗಿ ಕಾಳಜಿ ವಹಿಸುವಿರಿ. ಅತಿಶಯಿಸುವ ಭಾವನೆಯು ಒಳ್ಳೆಯ ತೀರ್ಮಾನವನ್ನು ನಾಶಮಾಡುವಂತೆ ನೀವು ಬಿಡುವುದಿಲ್ಲ.

ನಿಜ ಪ್ರೀತಿಯ ಒಂದು ಮಾದರಿ

ಯಾಕೋಬ ಮತ್ತು ರಾಹೇಲರ ಬೈಬಲ್‌ ವೃತ್ತಾಂತವು ಇದನ್ನು ಸುಸ್ಪಷ್ಟವಾಗಿ ದೃಷ್ಟಾಂತಿಸುತ್ತದೆ. ಈ ಜೋಡಿಯು, ಎಲ್ಲಿ ರಾಹೇಲಳು ತನ್ನ ತಂದೆಯ ಕುರಿಗಳಿಗೆ ನೀರನ್ನು ಕುಡಿಸಲು ಬಂದಳೊ, ಆ ಬಾವಿಯ ಹತ್ತಿರ ಸಂಧಿಸಿತು. ಯಾಕೋಬನು ಕೂಡಲೇ ಆಕೆಯ ಕಡೆಗೆ ಆಕರ್ಷಿತನಾದನು. ಆಕೆ “ರೂಪವತಿಯೂ ಲಾವಣ್ಯವತಿಯೂ” ಆಗಿದ್ದರಿಂದ ಮಾತ್ರವಲ್ಲ, ಆಕೆ ಯೆಹೋವನ ಆರಾಧಕಳೂ ಆಗಿದ್ದಳು ಎಂಬ ಕಾರಣದಿಂದ.—ಆದಿಕಾಂಡ 29:1-12, 17.

ರಾಹೇಲಳ ಕುಟುಂಬದೊಂದಿಗೆ ವಾಸಿಸುತ್ತಾ, ಒಂದು ಇಡೀ ತಿಂಗಳನ್ನು ಕಳೆದ ಬಳಿಕ, ತಾನು ರಾಹೇಲಳನ್ನು ಪ್ರೀತಿಸುತ್ತೇನೆ ಮತ್ತು ವಿವಾಹವಾಗಲು ಬಯಸುತ್ತೇನೆಂದು ಯಾಕೋಬನು ತಿಳಿಯಪಡಿಸಿದನು. ಬರಿಯ ಪ್ರಣಯಾತ್ಮಕ ಮೋಹಪರವಶತೆಯೊ? ಇಲ್ಲವೇ ಇಲ್ಲ! ಆ ತಿಂಗಳು, ಅವನು ರಾಹೇಲಳನ್ನು ಆಕೆಯ ಸ್ವಾಭಾವಿಕ ಪರಿಸ್ಥಿತಿಯಲ್ಲಿ—ಆಕೆ ತನ್ನ ಹೆತ್ತವರನ್ನು ಹಾಗೂ ಇತರರನ್ನು ಹೇಗೆ ಉಪಚರಿಸಿದಳು, ಕುರಿಗಳನ್ನು ಮೇಯಿಸುವ ತನ್ನ ಕೆಲಸವನ್ನು ಆಕೆ ಹೇಗೆ ಮಾಡಿದಳು, ಯೆಹೋವನ ಆರಾಧನೆಯನ್ನು ಆಕೆ ಎಷ್ಟು ಗಂಭೀರವಾಗಿ ಪರಿಗಣಿಸಿದಳು ಎಂಬುದನ್ನು—ಗಮನಿಸಿದ್ದನು. ನಿಸ್ಸಂದೇಹವಾಗಿ ಅವನು ಆಕೆಯನ್ನು, ಆಕೆಯ “ಉತ್ತಮ” ಹಾಗೂ “ಕೆಟ್ಟ”—ಈ ಎರಡೂ ಸ್ಥಿತಿಗಳಲ್ಲಿ ನೋಡಿದನು. ಆದುದರಿಂದ ಆಕೆಗಾಗಿದ್ದ ಅವನ ಪ್ರೀತಿಯು, ಅಂಕೆಯಿಲ್ಲದ ಭಾವಾವೇಶವಾಗಿರಲಿಲ್ಲ ಬದಲಿಗೆ ವಿವೇಚನೆ ಮತ್ತು ಆಳವಾದ ಗೌರವಾಧಾರಿತ ನಿಸ್ವಾರ್ಥ ಪ್ರೀತಿಯಾಗಿತ್ತು.

ವಿಷಯವು ಹಾಗಿದ್ದ ಕಾರಣ, ಆಕೆಯನ್ನು ಪತ್ನಿಯಾಗಿ ಪಡೆಯಶಕ್ತನಾಗುವುದಕ್ಕೆ ಆಕೆಯ ತಂದೆಯ ಬಳಿಯಲ್ಲಿ ಏಳು ವರ್ಷಗಳ ವರೆಗೆ ಕೆಲಸಮಾಡಲು ತಾನು ಸಿದ್ಧನೆಂದು ಯಾಕೋಬನು ಪ್ರಕಟಿಸಸಾಧ್ಯವಿತ್ತು. ಖಂಡಿತವಾಗಿಯೂ ಯಾವ ಮೋಹಪರವಶತೆಯೂ ಅಷ್ಟು ದೀರ್ಘ ಸಮಯ ಬಾಳುತ್ತಿರಲಿಲ್ಲ! ಯಥಾರ್ಥವಾದ ಪ್ರೀತಿ, ಮತ್ತೊಬ್ಬ ವ್ಯಕ್ತಿಯಲ್ಲಿ ನಿಸ್ವಾರ್ಥವಾದ ಆಸಕ್ತಿಯು ಮಾತ್ರ, ಆ ವರ್ಷಗಳನ್ನು “ಸ್ವಲ್ಪ ದಿವಸದಂತೆ” ತೋರುವಂತೆ ಮಾಡಬಹುದಿತ್ತು. ಆ ಯಥಾರ್ಥವಾದ ಪ್ರೀತಿಯ ಕಾರಣ, ಆ ಅವಧಿಯಲ್ಲಿ ಅವರು ತಮ್ಮ ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳಲು ಶಕ್ತರಾಗಿದ್ದರು.—ಆದಿಕಾಂಡ 29:20, 21.

ಅದಕ್ಕೆ ಸಮಯ ತಗಲುತ್ತದೆ!

ಆದುದರಿಂದ ನಿಜ ಪ್ರೀತಿಯು ಕಾಲಾವಧಿಯಿಂದ ನಷ್ಟಕ್ಕೊಳಗಾಗುವುದಿಲ್ಲ. ನಿಶ್ಚಯವಾಗಿಯೂ, ಒಬ್ಬ ವ್ಯಕ್ತಿಗಾಗಿರುವ ನಿಮ್ಮ ಅನಿಸಿಕೆಗಳನ್ನು ಪರೀಕ್ಷಿಸಿನೋಡುವ ಅತ್ಯುತ್ತಮವಾದ ವಿಧವು, ಒಂದಿಷ್ಟು ಸಮಯವು ಗತಿಸಿಹೋಗುವಂತೆ ಬಿಡುವುದೇ ಆಗಿದೆ. ಅಲ್ಲದೆ, ಸ್ಯಾಂಡ್ರ ಎಂಬ ಹೆಸರಿನ ಯುವತಿಯು ಗಮನಿಸಿದಂತೆ: “ವ್ಯಕ್ತಿಯೊಬ್ಬನು, ‘ಇದು ನನ್ನ ವ್ಯಕ್ತಿತ್ವ. ಈಗ ನಿನಗೆ ನನ್ನ ಕುರಿತು ಎಲ್ಲ ವಿಷಯಗಳೂ ತಿಳಿದಿವೆ,’ ಎಂದು ಸರಳವಾಗಿ ಹೇಳುತ್ತಾ ತನ್ನ ವ್ಯಕ್ತಿತ್ವವನ್ನು ನಿಮಗೆ ಒಪ್ಪಿಸುವುದಿಲ್ಲ.” ಇಲ್ಲ, ನೀವು ಯಾರಲ್ಲಿ ಆಸಕ್ತರಾಗಿದ್ದೀರೊ ಆ ವ್ಯಕ್ತಿಯನ್ನು ಅರಿತುಕೊಳ್ಳಲು ಸಹ ಸಮಯ ತಗಲುತ್ತದೆ.

ನಿಮ್ಮ ಪ್ರಣಯಾತ್ಮಕ ಆಸಕ್ತಿಯನ್ನು ಬೈಬಲಿನ ಬೆಳಕಿನಲ್ಲಿ ಪರಿಶೀಲಿಸುವಂತೆಯೂ ಕಾಲಾವಧಿಯು ನಿಮ್ಮನ್ನು ಅನುಮತಿಸುತ್ತದೆ. ಪ್ರೀತಿಯು, “ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ” ಎಂಬುದನ್ನು ಜ್ಞಾಪಿಸಿಕೊಳ್ಳಿ. ನಿಮ್ಮ ಸಂಗಾತಿಯು ನಿಮ್ಮ ಯೋಜನೆಗಳ ಯಶಸ್ಸಿಗಾಗಿ ಆತುರನಾಗಿದ್ದಾನೊ—ಇಲ್ಲವೆ ಅವನ ಅಥವಾ ಅವಳ ಸ್ವಂತ ಯೋಜನೆಗಳ ಯಶಸ್ಸಿಗಾಗಿಯೊ? ಅವನು ಅಥವಾ ಅವಳು ನಿಮ್ಮ ದೃಷ್ಟಿಕೋನ, ನಿಮ್ಮ ಅನಿಸಿಕೆಗಳಿಗೆ ಗೌರವವನ್ನು ತೋರಿಸುತ್ತಾರೊ? ಸ್ವಾರ್ಥ ಕಾಮೋದ್ರೇಕಗಳನ್ನು ತಣಿಸಲಿಕ್ಕಾಗಿ, ನಿಜವಾಗಿಯೂ ‘ಅಸಭ್ಯ’ವಾಗಿರುವ ವಿಷಯಗಳನ್ನು ಮಾಡುವಂತೆ ಅವನು ಅಥವಾ ಅವಳು ನಿಮ್ಮನ್ನು ಒತ್ತಾಯಪಡಿಸಿದ್ದಾರೊ? ಇತರರ ಎದುರಿನಲ್ಲಿ ಈ ವ್ಯಕ್ತಿಯು ನಿಮ್ಮನ್ನು ತೆಗಳುತ್ತಾನೊ ಇಲ್ಲವೆ ಹೊಗಳುತ್ತಾನೊ? ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳುವುದು, ನಿಮ್ಮ ಅನಿಸಿಕೆಗಳನ್ನು ಹೆಚ್ಚು ವಾಸ್ತವವಾಗಿ ಅಂದಾಜು ಮಾಡುವಂತೆ ಸಹಾಯ ಮಾಡಬಲ್ಲದು.

ಅವಸರದ ಪ್ರಣಯವು ಆಪತ್ತನ್ನು ಆಮಂತ್ರಿಸುತ್ತದೆ. “ನಾನು ಶೀಘ್ರವಾಗಿ ಮತ್ತು ಗಾಢವಾಗಿ ಪ್ರೀತಿಸತೊಡಗಿದೆ,” ಎಂಬುದಾಗಿ 20 ವರ್ಷ ಪ್ರಾಯದ ಜಿಲ್‌ ವಿವರಿಸಿದಳು. ಎರಡು ತಿಂಗಳುಗಳ ಅತಿವೇಗದ ಪ್ರಣಯದ ನಂತರ, ಆಕೆ ವಿವಾಹವಾದಳು. ಆದರೆ ಈ ಹಿಂದೆ ಅಡಗಿಸಿಡಲ್ಪಟ್ಟಿದ್ದ ದೋಷಗಳು ತಲೆದೋರಲಾರಂಭಿಸಿದವು. ಜಿಲ್‌ ತನ್ನ ಕೆಲವು ಅಭದ್ರತೆ ಮತ್ತು ಸ್ವಾರ್ಥಮಗ್ನತೆಯನ್ನು ಪ್ರದರ್ಶಿಸಲಾರಂಭಿಸಿದಳು. ಆಕೆಯ ಗಂಡನಾದ ರಿಕ್‌, ತನ್ನ ಪ್ರಣಯಾತ್ಮಕ ಆಕರ್ಷಣೆಯನ್ನು ಕಳೆದುಕೊಂಡು, ಸ್ವಾರ್ಥಿಯಾದನು. ಸುಮಾರು ಎರಡು ವರ್ಷಗಳ ಕಾಲ ವಿವಾಹವಾಗಿದ್ದ ತರುವಾಯ, ಒಂದು ದಿನ ಜಿಲ್‌ ತನ್ನ ಗಂಡ “ಕೀಳಾದವನು,” “ಸೋಮಾರಿ,” ಮತ್ತು ಗಂಡನೋಪಾದಿ “ನಿಷ್ಪ್ರಯೋಜಕ”ನಾದ ವ್ಯಕ್ತಿಯೆಂದು ಅರಚಿದಳು. ಅವಳ ಕೆನ್ನೆಗೆ ಜೋರಾಗಿ ಹೊಡೆಯುವ ಮೂಲಕ ರಿಕ್‌ ಪ್ರತಿಕ್ರಿಯಿಸಿದನು. ಅಳುತ್ತಾ ಜಿಲ್‌ ತಮ್ಮ ಮನೆಯಿಂದ ಮತ್ತು ತಮ್ಮ ವಿವಾಹದಿಂದ ಹೊರಗೆ ಹೋಗಿಬಿಟ್ಟಳು.

ಬೈಬಲಿನ ಸಲಹೆಯನ್ನು ಅನುಸರಿಸುವುದು, ನಿಸ್ಸಂದೇಹವಾಗಿ ಅವರಿಗೆ ತಮ್ಮ ವಿವಾಹವನ್ನು ಕಾಪಾಡಿಕೊಳ್ಳುವಂತೆ ಸಹಾಯ ಮಾಡಿರುತ್ತಿತ್ತು. (ಎಫೆಸ 5:22-33) ಆದರೆ ವಿವಾಹದ ಮುಂಚೆ ಅವರು ಪರಸ್ಪರರೊಂದಿಗೆ ಉತ್ತಮವಾಗಿ ಪರಿಚಿತರಾಗಿರುತ್ತಿದ್ದಲ್ಲಿ ವಿಷಯಗಳು ಎಷ್ಟು ಭಿನ್ನವಾಗಿರುತ್ತಿದ್ದವು! ಅವರ ಪ್ರೀತಿಯು ಒಂದು “ಸ್ವರೂಪ”ಕ್ಕಾಗಿರುವ ಪ್ರೀತಿಯಲ್ಲ ಬದಲಿಗೆ ನಿಜವಾದ ವ್ಯಕ್ತಿತ್ವ—ದೋಷಗಳೂ ಸಾಮರ್ಥ್ಯಗಳೂ ಇರುವ ವ್ಯಕ್ತಿತ್ವ—ಕ್ಕಾಗಿರುವ ಪ್ರೀತಿಯಾಗಿರುತ್ತಿತ್ತು. ಅವರ ನಿರೀಕ್ಷೆಗಳು ಹೆಚ್ಚು ವಾಸ್ತವಿಕವಾಗಿರುತ್ತಿದ್ದವು.

ನಿಜ ಪ್ರೀತಿಯು ರಾತ್ರಿ ಬೆಳಗಾಗುವುದರೊಳಗೆ ಸಂಭವಿಸುವುದಿಲ್ಲ. ಇಲ್ಲವೆ ನಿಮಗೆ ಒಳ್ಳೆಯ ವಿವಾಹ ಸಂಗಾತಿ ಆಗಿರಬೇಕೆಂಬ ವ್ಯಕ್ತಿಯು, ಅನಿವಾರ್ಯವಾಗಿ ಬಹಳಷ್ಟು ಆಕರ್ಷಕವಾಗಿರುವ ವ್ಯಕ್ತಿಯಾಗಿರಬೇಕೆಂದಿಲ್ಲ. ಉದಾಹರಣೆಗೆ, ಬಾರ್‌ಬ್ರ, ಯಾವ ವ್ಯಕ್ತಿಯ ಕಡೆಗೆ ತಾನು ಮೊದಲಲ್ಲಿ ಬಹಳವಾಗಿ ಆಕರ್ಷಿತಳಾಗಲಿಲ್ಲವೆಂದು ಒಪ್ಪಿಕೊಳ್ಳುತ್ತಾಳೊ, ಆ ಯುವ ಪುರುಷನನ್ನು ಭೇಟಿಯಾದಳು. “ಆದರೆ ನನಗೆ ಅವನ ಪರಿಚಯ ಹೆಚ್ಚಾದಂತೆ, ವಿಷಯಗಳು ಬದಲಾದವು,” ಎಂಬುದಾಗಿ ಬಾರ್‌ಬ್ರ ಜ್ಞಾಪಿಸಿಕೊಳ್ಳುತ್ತಾಳೆ. “ಇತರರಿಗಾಗಿ ಸ್ಟೀಫನನಿಗಿದ್ದ ಚಿಂತೆಯನ್ನು ಮತ್ತು ತನ್ನ ಸ್ವಂತ ಅಭಿರುಚಿಗಳಿಗಿಂತ ಇತರರ ಅಭಿರುಚಿಗಳನ್ನು ಅವನು ಹೇಗೆ ಯಾವಾಗಲೂ ಪ್ರಥಮವಾಗಿಟ್ಟನೆಂಬುದನ್ನು ನಾನು ಅವಲೋಕಿಸಿದೆ. ಒಬ್ಬ ಒಳ್ಳೆಯ ಪತಿಗಾಗಿ ಬೇಕಾಗಿರುವ ಗುಣಗಳು ಇವೇ ಎಂಬುದನ್ನು ನಾನು ಮನಗಂಡೆ. ನಾನು ಅವನ ಕಡೆಗೆ ಸೆಳೆಯಲ್ಪಟ್ಟೆ, ಮತ್ತು ಅವನನ್ನು ಪ್ರೀತಿಸತೊಡಗಿದೆ.” ಒಂದು ಸ್ಥಿರವಾದ ವಿವಾಹವು ಫಲಿಸಿತು.

ಆದುದರಿಂದ ನೀವು ನಿಜ ಪ್ರೀತಿಯನ್ನು ಹೇಗೆ ತಿಳಿಯಬಲ್ಲಿರಿ? ನಿಮ್ಮ ಹೃದಯವು ಸೂಚಿಸಬಹುದು, ಆದರೆ ನಿಮ್ಮ ಬೈಬಲ್‌ ಶಿಕ್ಷಿತ ಮನಸ್ಸಿನ ಮೇಲೆ ಭರವಸೆಯಿಡಿರಿ. ಆ ವ್ಯಕ್ತಿಯ ಬಾಹ್ಯ “ಸ್ವರೂಪ”ಕ್ಕಿಂತ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿರಿ. ಆ ಸಂಬಂಧವು ಅರಳಲಿಕ್ಕೆ ಕಾಲಾವಧಿಯನ್ನು ಕೊಡಿರಿ. ಮೋಹಪರವಶತೆಯು ಅಲ್ಪ ಸಮಯದಲ್ಲಿ ಒಂದು ಗರಿಷ್ಠ ಮಟ್ಟವನ್ನು ತಲಪುತ್ತದಾದರೂ ನಂತರ ಮಾಸಿಹೋಗುತ್ತದೆ ಎಂಬುದು ಜ್ಞಾಪಕದಲ್ಲಿರಲಿ. ಯಥಾರ್ಥವಾದ ಪ್ರೀತಿಯು ಸಮಯದೊಂದಿಗೆ ಬಲವಾಗುತ್ತದೆ ಮತ್ತು “ಐಕ್ಯದ ಪರಿಪೂರ್ಣ ಬಂಧ”ವಾಗುತ್ತದೆ.—ಕೊಲೊಸ್ಸೆ 3:14, NW.

ಚರ್ಚೆಗಾಗಿ ಪ್ರಶ್ನೆಗಳು

◻ ಒಬ್ಬ ವ್ಯಕ್ತಿಯ ತೋರಿಕೆಗಳನ್ನು ಪ್ರೀತಿಸುವುದರಲ್ಲಿ ಯಾವ ಅಪಾಯವಿದೆ?

◻ ನಿಜ ಪ್ರೀತಿಯನ್ನು ಗುರುತಿಸಲು ನಿಮ್ಮ ಹೃದಯವನ್ನು ನೆಚ್ಚಸಾಧ್ಯವಿದೆಯೊ?

◻ ಪ್ರೀತಿ ಮತ್ತು ಮೋಹಪರವಶತೆಯ ನಡುವೆ ಇರುವ ಕೆಲವು ಭಿನ್ನತೆಗಳಾವುವು?

◻ ಡೇಟಿಂಗ್‌ ಮಾಡುತ್ತಿರುವ ಜೊತೆಗಳು ಅನೇಕ ವೇಳೆ ಬೇರೆಯಾಗುವುದು ಏಕೆ? ಇದು ಯಾವಾಗಲೂ ತಪ್ಪೊ?

◻ ಒಂದು ಪ್ರಣಯಾಚರಣೆಯು ಕೊನೆಗಾಣಿಸಲ್ಪಟ್ಟಿರುವಲ್ಲಿ, ತಿರಸ್ಕಾರದ ಅನಿಸಿಕೆಗಳೊಂದಿಗೆ ನೀವು ಹೇಗೆ ನಿರ್ವಹಿಸಬಲ್ಲಿರಿ?

◻ ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಸಮಯವನ್ನು ತೆಗೆದುಕೊಳ್ಳುವುದು ಏಕೆ ಪ್ರಾಮುಖ್ಯವಾಗಿದೆ?

[ಪುಟ 242 ರಲ್ಲಿರುವ ಸಂಕ್ಷಿಪ್ತ ವಿವರಣೆ]

ನೀವು ಪ್ರೀತಿಸುವುದು ಒಬ್ಬ ವ್ಯಕ್ತಿಯನ್ನೊ ಇಲ್ಲವೆ ಕೇವಲ ಒಂದು “ಸ್ವರೂಪ”ವನ್ನೊ?

[ಪುಟ 247 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಮೋಹಪರವಶತೆಯು ಕುರುಡಾಗಿದ್ದು, ಹಾಗೆಯೇ ಉಳಿಯಲು ಇಷ್ಟಪಡುತ್ತದೆ. ಅದು ವಾಸ್ತವಿಕತೆಯ ಕಡೆಗೆ ನೋಡಬಯಸುವುದಿಲ್ಲ.”—24 ವರ್ಷ ಪ್ರಾಯದ ಪುರುಷ

[ಪುಟ 250 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಾನು ಈಗ ‘ಹಲೋ, ಹೇಗಿದ್ದೀರಿ?’ ಎಂದಷ್ಟೇ ಕೇಳುವ ವ್ಯಕ್ತಿಯಾಗಿರಬಲ್ಲೆ. ಯಾವ ವ್ಯಕ್ತಿಯೂ ನನಗೆ ಆಪ್ತನಾಗುವಂತೆ ನಾನು ಬಿಡುವುದಿಲ್ಲ”

[ಪುಟ 248,249ರಲ್ಲಿರುವಚೌಕ]

ಒಂದು ಎದೆಯೊಡೆತದಿಂದ ನಾನು ಹೇಗೆ ಚೇತರಿಸಿಕೊಳ್ಳಬಲ್ಲೆ?

ನೀವು ವಿವಾಹವಾಗುವುದು ಈ ವ್ಯಕ್ತಿಯನ್ನೇ ಎಂದು ನೀವು ಬಲ್ಲಿರಿ. ನೀವು ಒಬ್ಬರು ಮತ್ತೊಬ್ಬರ ಸಾಂಗತ್ಯವನ್ನು ಆನಂದಿಸುತ್ತೀರಿ, ಸಾಮಾನ್ಯ ಅಭಿರುಚಿಗಳನ್ನು ಹಂಚಿಕೊಳ್ಳುತ್ತೀರಿ, ಮತ್ತು ಪರಸ್ಪರ ಆಕರ್ಷಣೆಯನ್ನು ಗ್ರಹಿಸುತ್ತೀರಿ. ಅನಂತರ, ಹಠಾತ್ತಾಗಿ ಆ ಸಂಬಂಧವು, ಕೋಪದ ಆವೇಶದಲ್ಲಿ ಸ್ಫೋಟಿಸುತ್ತಾ ಅಥವಾ ಕಣ್ಣೀರಿನಲ್ಲಿ ಕರಗುತ್ತಾ ಕೊನೆಗೊಳ್ಳುತ್ತದೆ.

ತಮ್ಮ ಪುಸ್ತಕವಾದ ಪ್ರೀತಿಯ ಸಂಯೋಜನೆ (ಇಂಗ್ಲಿಷ್‌)ಯಲ್ಲಿ ಡಾ. ಮೈಕಲ್‌ ಲಿಬೊವಿಟ್ಸ್‌, ಪ್ರೀತಿಯ ಆರಂಭವನ್ನು ಒಂದು ಶಕ್ತಿಶಾಲಿ ಅಮಲೌಷಧದ ಆಕ್ರಮಣಕ್ಕೆ ಹೋಲಿಸುತ್ತಾರೆ. ಆದರೆ ಇಂತಹ ಪ್ರೀತಿಯು ಕೊನೆಗೊಳ್ಳುವಲ್ಲಿ, ಒಂದು ಔಷಧದಂತೆ ಅತ್ಯುಗ್ರವಾದ ‘ತ್ಯಜನ ಲಕ್ಷಣಗಳನ್ನು’ ಕೆರಳಿಸಬಲ್ಲದು. ಮತ್ತು ಆ ಪ್ರೀತಿಯು ಬರಿಯ ಮೋಹಪರವಶತೆಯಾಗಿರಲಿ ಇಲ್ಲವೆ ‘ನಿಜವಾದ ಸಂಗತಿ’ಯಾಗಿರಲಿ, ಅದು ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಎರಡೂ ತಲೆ ತಿರುಗಿಸುವ ಎತ್ತರಗಳನ್ನು, ಮತ್ತು ಸಂಬಂಧವು ಕೊನೆಗೊಳ್ಳುವಲ್ಲಿ ತೀವ್ರ ವೇದನೆಯ ಕೀಳುಗತಿಗಳನ್ನು ಸೃಷ್ಟಿಸಬಲ್ಲವು.

ಒಂದು ಅಗಲಿಕೆಯಿಂದ ಉಂಟಾಗುವ ತಿರಸ್ಕಾರದ ಅನಿಸಿಕೆಗಳು, ನೋವು, ಮತ್ತು ಬಹುಶಃ ಕೋಪಾವೇಶವು, ಭವಿಷ್ಯತ್ತಿನ ಕುರಿತಾದ ನಿಮ್ಮ ವೀಕ್ಷಣೆಯನ್ನು ಕಠೋರವಾಗಿಸಬಹುದು. ಪ್ರಣಯಭಂಗಗೊಂಡ ಕಾರಣ, ತಾನು ‘ಗಾಯಗೊಂಡವಳೆಂದು’ ಒಬ್ಬ ಯುವ ಸ್ತ್ರೀಯು ತನ್ನ ಕುರಿತಾಗಿ ಹೇಳಿಕೊಳ್ಳುತ್ತಾಳೆ. “ನಾನು [ವಿರುದ್ಧ ಲಿಂಗದ] ವ್ಯಕ್ತಿಯೊಂದಿಗೆ ಈಗ, ‘ಹಲೋ, ಹೇಗಿದ್ದೀರಿ?’ ಎಂದಷ್ಟೇ ಕೇಳುವ ವ್ಯಕ್ತಿಯಾಗಿರಬಲ್ಲೆ” ಎಂದು ಅವಳು ಹೇಳುತ್ತಾಳೆ. “ಯಾವ ವ್ಯಕ್ತಿಯೂ ನನಗೆ ಆಪ್ತನಾಗುವಂತೆ ನಾನು ಬಿಡುವುದಿಲ್ಲ.” ಒಂದು ಸಂಬಂಧದಲ್ಲಿ ನಿಮಗನಿಸುವ ಬದ್ಧತೆಯು ಎಷ್ಟು ಆಳವಾಗಿರುತ್ತದೊ, ಅದರ ಅಗಲಿಕೆಯು ಉಂಟುಮಾಡಬಲ್ಲ ಹಾನಿಯೂ ಅಷ್ಟೇ ಆಳವಾಗಿರುತ್ತದೆ.

ಹೌದು, ನೀವು ಇಷ್ಟಪಡುವ ವ್ಯಕ್ತಿಯೊಂದಿಗೆ ಪ್ರಣಯಾಚರಣೆ ಮಾಡುವ ಸ್ವಾತಂತ್ರ್ಯವು ಭಾರಿ ಬೆಲೆಯನ್ನು ಪಡೆದಿರುತ್ತದೆ: ತಿರಸ್ಕಾರದ ನಿಜ ಸಂಭವನೀಯತೆ. ನಿಜ ಪ್ರೀತಿ ವಿಕಸಿಸುವುದು ಎಂಬುದಕ್ಕೆ ಯಾವ ಖಾತರಿಯೂ ಇರುವುದಿಲ್ಲ. ಆದುದರಿಂದ ಯಾರಾದರೊಬ್ಬರು ನಿಮ್ಮನ್ನು ಪ್ರಾಮಾಣಿಕವಾದ ಉದ್ದೇಶಗಳೊಂದಿಗೆ ಪ್ರೀತಿಸಲು ತೊಡಗಿದರೂ ತದನಂತರ ವಿವಾಹವು ಅವಿವೇಕಯುತವಾಗಿರುವುದೆಂದು ತೀರ್ಮಾನಿಸುವುದಾದರೆ, ಆ ವ್ಯಕ್ತಿಯು ನಿಮ್ಮೊಂದಿಗೆ ಅನ್ಯಾಯವಾಗಿ ನಡೆದುಕೊಂಡಿದ್ದಾನೆಂಬ ಅರ್ಥವನ್ನು ಅದು ಕೊಡುವುದಿಲ್ಲ.

ಸಮಸ್ಯೆಯು ಏನೆಂದರೆ, ಒಂದು ಅಗಲಿಕೆಯು ಅತ್ಯಂತ ಜಾಣ್ಮೆ ಮತ್ತು ದಯೆಯಿಂದ ನಿರ್ವಹಿಸಲ್ಪಟ್ಟಾಗಲೂ, ನಿಮಗೆ ನೋವು ಮತ್ತು ತಿರಸ್ಕೃತ ಅನಿಸಿಕೆಯಾಗುವುದು ಖಂಡಿತ. ಹಾಗಿದ್ದರೂ, ನಿಮ್ಮ ಸ್ವಗೌರವವನ್ನು ಕಳೆದುಕೊಳ್ಳಲು ಯಾವ ಕಾರಣವೂ ಇರುವುದಿಲ್ಲ. ಈ ವ್ಯಕ್ತಿಯ ನೋಟದಲ್ಲಿ ನೀವು “ಯೋಗ್ಯ” ವ್ಯಕ್ತಿಯಾಗಿರದಿದ್ದ ನಿಜಾಂಶವು, ನೀವು ಬೇರೆ ಯಾರಾದರೊಬ್ಬರ ನೋಟದಲ್ಲಿ ಯೋಗ್ಯರಾಗಿರಲಾರಿರಿ ಎಂಬುದನ್ನು ಅರ್ಥೈಸುವುದಿಲ್ಲ!

ಗತ ಪ್ರಣಯವನ್ನು ಶಾಂತವಾದ ದೃಷ್ಟಿಯಿಂದ ನೋಡಪ್ರಯತ್ನಿಸಿರಿ. ಅಗಲಿಕೆಯು, ನೀವು ಯಾವ ವ್ಯಕ್ತಿಯೊಂದಿಗೆ ಒಳಗೂಡಿದ್ದಿರೊ ಅವನ ಕುರಿತಾದ ಕ್ಷೋಭೆಗೊಳಿಸುವ ವಿಷಯಗಳನ್ನು ಎತ್ತಿತೋರಿಸಿದ್ದಿರಬಹುದು—ಭಾವಾತ್ಮಕ ಅಪಕ್ವತೆ, ಅನಿರ್ಧಾರ, ಅನಮ್ಯತೆ, ಅಸಹಿಷ್ಣುತೆ, ನಿಮ್ಮ ಅನಿಸಿಕೆಗಳಿಗೆ ಪರಿಗಣನೆಯ ಕೊರತೆ. ಇವು ಒಬ್ಬ ವಿವಾಹದ ಸಂಗಾತಿಯಲ್ಲಿ ಇರಬೇಕಾದ ಅಪೇಕ್ಷಣೀಯ ಗುಣಗಳಾಗಿರುವುದೇ ಇಲ್ಲ.

ಅಗಲಿಕೆಯು ಸಂಪೂರ್ಣವಾಗಿ ಏಕಪಕ್ಷೀಯವಾಗಿರುವಲ್ಲಿ ಮತ್ತು ಒಂದು ವಿವಾಹವು ಕಾರ್ಯಸಾಧಕವಾಗಿದ್ದಿರಸಾಧ್ಯ ಎಂದು ನಿಮಗೆ ಮನವರಿಕೆಯಾಗಿರುವಲ್ಲಿ ಆಗೇನು? ನಿಮಗೆ ಹೇಗನಿಸುತ್ತದೆ ಎಂಬುದನ್ನು ಆ ವ್ಯಕ್ತಿಗೆ ತಿಳಿಯಪಡಿಸುವ ಹಕ್ಕು ನಿಮಗೆ ಖಂಡಿತವಾಗಿಯೂ ಇದೆ. ಬಹುಶಃ ಕೆಲವೊಂದು ಭಿನ್ನಾಭಿಪ್ರಾಯಗಳಿದ್ದವು. ಭಾವಾತ್ಮಕ ಅಬ್ಬರಿಸುವಿಕೆ ಹಾಗೂ ಕೂಗಾಟವು ಏನನ್ನೂ ಸಾಧಿಸುವುದಿಲ್ಲ. ಮತ್ತು ಅವನು ಅಥವಾ ಅವಳು ಅಗಲುವುದರ ಕುರಿತು ಪಟ್ಟುಹಿಡಿಯುವುದಾದರೆ, ನಿಮಗಾಗಿ ಯಾವುದೇ ಅನಿಸಿಕೆಗಳಿರದ ಒಬ್ಬ ವ್ಯಕ್ತಿಯ ಮಮತೆಗಾಗಿ ಕಣ್ಣೀರಿಡುತ್ತಾ ಬೇಡಿಕೊಳ್ಳುವುದು, ಮತ್ತು ಸ್ವತಃ ತಗ್ಗಿಸಿಕೊಳ್ಳುವುದರ ಅಗತ್ಯ ನಿಮಗಿರುವುದಿಲ್ಲ. “ಗಳಿಸುವ ಸಮಯ, ಕಳೆಯುವ ಸಮಯ” ಇದೆಯೆಂದು ಸೊಲೊಮೋನನು ಹೇಳಿದನು.—ಪ್ರಸಂಗಿ 3:6.

ಮೊದಲನೆಯದಾಗಿ ವಿವಾಹದಲ್ಲಿ ಒಂದು ಯಥಾರ್ಥವಾದ ಆಸಕ್ತಿ ಇರದಿದ್ದ ಯಾರೊ ಒಬ್ಬರಿಂದ ನೀವು ಕೇವಲ ಬಳಸಲ್ಪಟ್ಟಿರಿ ಎಂಬುದನ್ನು ಸಂಶಯಿಸಲು ನಿಮಗೆ ಬಲವಾದ ಕಾರಣವಿರುವಲ್ಲಿ ಆಗೇನು? ಕ್ಷಮೆ ತೋರದ ಪ್ರತೀಕಾರಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಅವನ ಅಥವಾ ಅವಳ ವಂಚನೆಯು ದೇವರಿಂದ ಗಮನಿಸಲ್ಪಡದೆ ಹೋಗಿರುವುದಿಲ್ಲ ಎಂಬುದರ ಕುರಿತು ನಿಶ್ಚಿತರಾಗಿರಿ. ಆತನ ವಾಕ್ಯವು ಹೇಳುವುದು: “ಕ್ರೂರನು ತನ್ನ ಶರೀರಕ್ಕೆ ಭ್ರಷ್ಟತೆಯನ್ನು ತರುತ್ತಾನೆ.”—ಜ್ಞಾನೋಕ್ತಿ 11:17, NW; ಜ್ಞಾನೋಕ್ತಿ 6:12-15ನ್ನು ಹೋಲಿಸಿರಿ.

ಆಗಿಂದಾಗ್ಗೆ ನೀವು ಒಂಟಿತನದಿಂದ ಇಲ್ಲವೆ ಪ್ರಣಯಾತ್ಮಕ ಸ್ಮರಣೆಗಳಿಂದ ಇನ್ನೂ ಪೀಡಿಸಲ್ಪಡಬಹುದು. ಹಾಗಿರುವಲ್ಲಿ, ಮನಸಾರೆ ಅತ್ತುಬಿಡುವುದರಲ್ಲಿ ತಪ್ಪೇನಿಲ್ಲ. ಬಹುಶಃ ಯಾವುದೊ ಶಾರೀರಿಕ ಚಟುವಟಿಕೆಯಲ್ಲಿ ಇಲ್ಲವೆ ಕ್ರೈಸ್ತ ಶುಶ್ರೂಷೆಯಲ್ಲಿ ಕಾರ್ಯಮಗ್ನರಾಗುವುದೂ ಸಹಾಯಕರ. (ಜ್ಞಾನೋಕ್ತಿ 18:1) ಉಲ್ಲಾಸಕರ ಹಾಗೂ ಭಕ್ತಿವೃದ್ಧಿಮಾಡುವ ವಿಷಯಗಳ ಮೇಲೆ ಮನಸ್ಸನ್ನಿಡಿರಿ. (ಫಿಲಿಪ್ಪಿ 4:8) ಆಪ್ತ ಮಿತ್ರನಲ್ಲಿ ಅಂತರಂಗವನ್ನು ತೋಡಿಕೊಳ್ಳಿರಿ. (ಜ್ಞಾನೋಕ್ತಿ 18:24) ನೀವು ಸ್ವಾವಲಂಬಿಗಳಾಗಿರುವಷ್ಟು ದೊಡ್ಡವರಾಗಿದ್ದೀರೆಂದು ನಿಮಗೆ ಅನಿಸಿದರೂ, ನಿಮ್ಮ ಹೆತ್ತವರು ಸಹ ಹೆಚ್ಚಿನ ಸಾಂತ್ವನವನ್ನು ನೀಡಬಹುದು. (ಜ್ಞಾನೋಕ್ತಿ 23:22) ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಯೆಹೋವನಲ್ಲಿ ಅಂತರಂಗವನ್ನು ಹೇಳಿಕೊಳ್ಳಿರಿ.

ನಿಮ್ಮ ವ್ಯಕ್ತಿತ್ವದ ಕೆಲವೊಂದು ವಿಷಯಗಳ ಕುರಿತು ಕೆಲಸಮಾಡುವ ಅಗತ್ಯವನ್ನು ನೀವು ಈಗ ಕಾಣಬಹುದು. ಒಬ್ಬ ವಿವಾಹ ಸಂಗಾತಿಯಲ್ಲಿ ನೀವು ಬಯಸುವ ವಿಷಯಗಳ ಕುರಿತಾದ ನಿಮ್ಮ ನೋಟವು ಹಿಂದೆಂದಿಗಿಂತಲೂ ಸ್ಪಷ್ಟವಾಗಿರಬಹುದು. ಮತ್ತು ಪ್ರೀತಿಸಿ, ಕಳೆದುಕೊಂಡಿರುವಾಗ, ಮತ್ತೊಬ್ಬ ಅಪೇಕ್ಷಣೀಯ ವ್ಯಕ್ತಿಯು ನಿಮ್ಮ ಜೀವಿತದಲ್ಲಿ ಪ್ರವೇಶಿಸುವಾಗ—ಅದರ ಸಾಧ್ಯತೆಯು ನೀವು ಯೋಚಿಸುವುದಕ್ಕಿಂತ ಹೆಚ್ಚಾಗಿರಬಹುದು—ನೀವು ಪ್ರಣಯಾಚರಣೆಯನ್ನು ಸ್ವಲ್ಪ ಹೆಚ್ಚು ವಿವೇಕಯುತವಾಗಿ ನಿರ್ವಹಿಸಲು ನಿರ್ಧರಿಸಬಹುದು.

[ಪುಟ 245 ರಲ್ಲಿರುವ ಚಿತ್ರ]

ಅದು ಪ್ರೀತಿಯೊ ಮೋಹಪರವಶತೆಯೊ?

ಪ್ರೀತಿ ಮೋಹಪರವಶತೆ

1. ಇತರ ವ್ಯಕ್ತಿಯ ಅಭಿರುಚಿಗಳ ಬಗ್ಗೆ 1. ಸ್ವಾರ್ಥ, ನಿರ್ಬಂಧಕವಾಗಿದೆ.

‘ಇದರಿಂದ ನನಗೇನು

ಪ್ರಯೋಜನ?’

ನಿಸ್ವಾರ್ಥ ಚಿಂತನೆ ಎಂದು ಒಬ್ಬನು ಯೋಚಿಸುತ್ತಾನೆ

2. ಪ್ರಣಯವು ಅನೇಕ 2. ಪ್ರಣಯವು ಒಡನೆ ಆರಂಭಿಸಿ,

ವೇಳೆ ನಿಧಾನವಾಗಿ ಆರಂಭಿಸಿ, ಬಹುಶಃ ಅದಕ್ಕೆ ತಾಸುಗಳು

ಬಹುಶಃ ಅದಕ್ಕೆ ತಿಂಗಳುಗಳು ಅಥವಾ ದಿನಗಳು

ಅಥವಾ ವರ್ಷಗಳು ಹಿಡಿಯುತ್ತದೆ ಹಿಡಿಯುತ್ತದೆ

3. ನೀವು ಇತರ ವ್ಯಕ್ತಿಯ 3. ನೀವು ಇತರ ವ್ಯಕ್ತಿಯ

ಸಂಪೂರ್ಣ ವ್ಯಕ್ತಿತ್ವದಿಂದ ಮತ್ತು ಶಾರೀರಿಕ ತೋರಿಕೆಯಿಂದ

ಆತ್ಮಿಕ ಗುಣಗಳಿಂದ ಆಳವಾಗಿ ಪ್ರಭಾವಿಸಲ್ಪಟ್ಟಿದ್ದೀರಿ

ಆಕರ್ಷಿತರಾಗುತ್ತೀರಿ ಇಲ್ಲವೆ ಆಸಕ್ತರಾಗಿದ್ದೀರಿ.

(‘ಅವನಿಗೆ ಎಂತಹ

ಸ್ಪಪ್ನಮಯ ಕಣ್ಣುಗಳಿವೆ.’

‘ಅವಳಿಗೆ ಬಲು ಅಂದವಾದ ಮೈಕಟ್ಟಿದೆ’)

4. ನಿಮ್ಮ ಮೇಲೆ ಆಗುವ 4. ಒಂದು ವಿನಾಶಕಾರಿ,

ಪರಿಣಾಮವೇನೆಂದರೆ, ಕ್ರಮಗೆಡಿಸುವ

ಅದು ನಿಮ್ಮನ್ನು ಒಬ್ಬ ಹೆಚ್ಚು ಪರಿಣಾಮ

ಉತ್ತಮ ವ್ಯಕ್ತಿಯಾಗಿ ಮಾಡುತ್ತದೆ

5. ನೀವು ಇತರ ವ್ಯಕ್ತಿಯನ್ನು 5. ಅವಾಸ್ತವಿಕವಾಗಿದೆ.

ವಾಸ್ತವವಾಗಿ ವೀಕ್ಷಿಸುತ್ತೀರಿ. ಇತರ ವ್ಯಕ್ತಿಯು ಪರಿಪೂರ್ಣನಾಗಿ

ಅವನ ಅಥವಾ ಅವಳ ತೋರುತ್ತಾನೆ. ಗಂಭೀರವಾದ

ದೋಷಗಳನ್ನು ವ್ಯಕ್ತಿತ್ವದ ದೋಷಗಳ

ನೋಡಿಯೂ ಆ ವ್ಯಕ್ತಿಯನ್ನು ಕುರಿತಾದ ಯಾವುದೇ

ಪ್ರೀತಿಸುತ್ತೀರಿ ಸಂದೇಹಗಳನ್ನು ನೀವು ಕಡೆಗಣಿಸುತ್ತೀರಿ

6. ನಿಮ್ಮಲ್ಲಿ 6. ವಾಗ್ವಾದಗಳು ಪದೇ

ಭಿನ್ನಾಭಿಪ್ರಾಯಗಳಿವೆ ಯಾದರೂ, ಪದೇ ಸಂಭವಿಸುತ್ತವೆ.

ನೀವು ಅವುಗಳ ಕುರಿತು ಮಾತಾಡಿ, ಯಾವ ವಿಷಯವೂ

ಅವುಗಳನ್ನು ನಿಜವಾಗಿಯೂ

ಬಗೆಹರಿಸಬಲ್ಲಿರೆಂದು ಬಗೆಹರಿಸಲ್ಪಡುವುದಿಲ್ಲ.

ನೀವು ಅನೇಕ ವಾಗ್ವಾದಗಳು

ಕಂಡುಕೊಳ್ಳುತ್ತೀರಿ “ಚುಂಬನ”ದಿಂದ

ಬಗೆಹರಿಸಲ್ಪಡುತ್ತವೆ

7. ನೀವು ಇತರ ವ್ಯಕ್ತಿಗೆ ಕೊಡಲು 7. ವಿಶೇಷವಾಗಿ ಲೈಂಗಿಕ

ಮತ್ತು ಹಂಚಿಕೊಳ್ಳಲು ಪ್ರಚೋದನೆಗಳನ್ನು

ಬಯಸುತ್ತೀರಿ ತೃಪ್ತಿಪಡಿಸಿಕೊಳ್ಳುವ ವಿಷಯದಲ್ಲಿ,

ತೆಗೆದುಕೊಳ್ಳುವ ಅಥವಾ

ಪಡೆದುಕೊಳ್ಳುವ ವಿಷಯಕ್ಕೆ

ಮಹತ್ವವಿರುತ್ತದೆ

[ಪುಟ 244 ರಲ್ಲಿರುವ ಚಿತ್ರಗಳು]

ಶಾರೀರಿಕ ವಿಧದಲ್ಲಿ ಆಕರ್ಷಕರಾದ, ಆದರೆ ವಿವೇಕವಿಲ್ಲದ ಪುರುಷ ಅಥವಾ ಸ್ತ್ರೀಯು, ‘ಹಂದಿಯ ಮೂತಿಯಲ್ಲಿರುವ ಚಿನ್ನದ ಮೂಗುತಿಯಂತೆ’ ಇದ್ದಾರೆ

[ಪುಟ 246 ರಲ್ಲಿರುವ ಚಿತ್ರಗಳು]

ಇತರರ ಮುಂದೆ ನಿಮ್ಮನ್ನು ಸತತವಾಗಿ ತೆಗಳುವ ಒಬ್ಬ ವ್ಯಕ್ತಿಯಲ್ಲಿ, ನಿಮಗಾಗಿ ಯಥಾರ್ಥವಾದ ಪ್ರೀತಿಯ ಕೊರತೆಯಿರಬಹುದು