ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಲ್ಪಕಾಲದ ವ್ಯಾಮೋಹವನ್ನು ನಾನು ಹೇಗೆ ಜಯಿಸಬಲ್ಲೆ?

ಅಲ್ಪಕಾಲದ ವ್ಯಾಮೋಹವನ್ನು ನಾನು ಹೇಗೆ ಜಯಿಸಬಲ್ಲೆ?

ಅಧ್ಯಾಯ 28

ಅಲ್ಪಕಾಲದ ವ್ಯಾಮೋಹವನ್ನು ನಾನು ಹೇಗೆ ಜಯಿಸಬಲ್ಲೆ?

“ಹೆಚ್ಚಿನ ಹದಿವಯಸ್ಕರಿಗೆ, ಅಲ್ಪಕಾಲದ ವ್ಯಾಮೋಹಗಳು ನೆಗಡಿಯಷ್ಟು ಸಾಮಾನ್ಯವಾಗಿವೆ,” ಎಂದು ಯುವಜನಾಭಿಮುಖವಾದ ಪತ್ರಿಕೆಯೊಂದು ಬರೆಯಿತು. ಬಹುಮಟ್ಟಿಗೆ ಎಲ್ಲ ಯುವ ಜನರು ಅವನ್ನು ಅನುಭವಿಸುತ್ತಾರೆ, ಮತ್ತು ಬಹುಮಟ್ಟಿಗೆ ಎಲ್ಲರು ತಮ್ಮ ಪ್ರತಿಷ್ಠೆ ಹಾಗೂ ಹಾಸ್ಯದೃಷ್ಟಿಗೆ ಯಾವ ಕುಂದೂ ತರದೆ, ಪ್ರೌಢಾವಸ್ಥೆಯನ್ನು ತಲಪಲು ಸಮರ್ಥರಾಗುತ್ತಾರೆ. ಆದರೆ, ನೀವು ಅಲ್ಪಕಾಲದ ವ್ಯಾಮೋಹವೊಂದರ ಹಿಡಿತದಲ್ಲಿ ಸಿಕ್ಕಿಕೊಂಡಿರುವಾಗ, ಅದು ನಗುವಂಥ ವಿಷಯವಾಗಿರುವುದಿಲ್ಲ. “ಅದರ ಬಗ್ಗೆ ನನಗೆ ಏನನ್ನೂ ಮಾಡಲು ಸಾಧ್ಯವಿಲ್ಲದಿದ್ದ ಕಾರಣ, ನಾನು ಆಶಾಭಂಗಗೊಂಡೆ. ಅವಳು ನನ್ನ ಪ್ರಾಯಕ್ಕೆ ತೀರ ದೊಡ್ಡವಳಾಗಿದ್ದಳೆಂದು ನನಗೆ ಗೊತ್ತಿತ್ತಾದರೂ, ನಾನು ಅವಳನ್ನು ಇಷ್ಟಪಟ್ಟೆ. ಆ ಇಡೀ ವಿಷಯದಿಂದ ನಾನು ನಿಜವಾಗಿಯೂ ಜುಗುಪ್ಸೆಗೊಂಡೆ,” ಎಂಬುದಾಗಿ ಯುವಕನೊಬ್ಬನು ಜ್ಞಾಪಿಸಿಕೊಳ್ಳುತ್ತಾನೆ.

ಅಲ್ಪಕಾಲ ವ್ಯಾಮೋಹದ ವಿಶ್ಲೇಷಣೆ

ಯಾರೊ ಒಬ್ಬರಿಗಾಗಿ ಬಲವಾದ ಅನಿಸಿಕೆಗಳಿರುವುದು—ಅವು ಅನೈತಿಕ ಇಲ್ಲವೆ ಅಯೋಗ್ಯ (ವಿವಾಹವಾಗಿರುವ ಯಾರೊ ಒಬ್ಬರಿಗಾಗಿರುವಂತಹ) ಅನಿಸಿಕೆಗಳಾಗಿರದ ಪಕ್ಷ—ಪಾಪವಲ್ಲ. (ಜ್ಞಾನೋಕ್ತಿ 5:15-18) ಆದರೆ, ನೀವು ಎಳೆಯವರಾಗಿರುವಾಗ, “ಯೌವನದ ಇಚ್ಛೆ”ಗಳು ಅನೇಕ ವೇಳೆ ನಿಮ್ಮ ಆಲೋಚನೆಗಳು ಹಾಗೂ ಕೃತ್ಯಗಳನ್ನು ನಿಗ್ರಹಿಸುತ್ತವೆ. (2 ತಿಮೊಥೆಯ 2:22) ಪ್ರೌಢಾವಸ್ಥೆಯಿಂದ ಹೊರಚಿಮ್ಮುವ ಹೊಸ ಹಾಗೂ ತೀವ್ರವಾದ ಬಯಕೆಗಳನ್ನು ನಿಯಂತ್ರಿಸಲು ಇನ್ನೂ ಕಲಿಯುತ್ತಿರುವುದರಿಂದ, ಯುವ ವ್ಯಕ್ತಿಯಲ್ಲಿ ಕೆರಳಿಸಲ್ಪಟ್ಟ ಬಹಳಷ್ಟು ಪ್ರಣಯಸಂಬಂಧಿತ ಅನಿಸಿಕೆಗಳಿದ್ದು, ಅವುಗಳನ್ನು ಧಾರಾಳವಾಗಿ ವ್ಯಕ್ತಪಡಿಸಲು ಯಾರೊಬ್ಬರೂ ಇಲ್ಲದಿರಬಹುದು.

ಅಲ್ಲದೆ, “ಹುಡುಗಿಯರು ಹುಡುಗರಿಗಿಂತ ಕಡಿಮೆ ವಯಸ್ಸಿನಲ್ಲೇ ಸಮಚಿತ್ತರೂ ಸಂಘಪ್ರಿಯರೂ ಆಗಿ ಪರಿಣಮಿಸುತ್ತಾರೆ.” ಫಲಸ್ವರೂಪವಾಗಿ, “ಶಿಕ್ಷಕರಿಗೆ” ಇಲ್ಲವೆ ಇತರ ಪ್ರಾಯಸ್ಥ, ಅಪ್ರಾಪ್ಯ ಪುರುಷರಿಗೆ “ಹೋಲಿಸುವಾಗ, ಅವರು ತಮ್ಮ ಗಂಡು ಶಾಲಾಸಂಗಾತಿಗಳನ್ನು ಅನೇಕ ವೇಳೆ ಅಪ್ರೌಢರಾಗಿಯೂ ಅನುತ್ತೇಜಕರಾಗಿಯೂ ಕಂಡುಕೊಳ್ಳುತ್ತಾರೆ.” (ಹದಿನೇಳು ಎಂಬ ಇಂಗ್ಲಿಷ್‌ ಪತ್ರಿಕೆ) ಹೀಗೆ ಒಬ್ಬ ಅಚ್ಚುಮೆಚ್ಚಿನ ಶಿಕ್ಷಕ, ಪಾಪ್‌ ಗಾಯಕ, ಇಲ್ಲವೆ ವಯಸ್ಸಾದ ಯಾವನೊ ಪರಿಚಿತನು “ಆದರ್ಶ” ಪುರುಷನಾಗಿದ್ದಾನೆಂದು ಹುಡುಗಿಯೊಬ್ಬಳು ಊಹಿಸಿಕೊಳ್ಳಬಹುದು. ಅನೇಕ ವೇಳೆ ಹುಡುಗರೂ ತದ್ರೀತಿಯಲ್ಲಿ ಮೋಹಪರವಶರಾಗುತ್ತಾರೆ. ಹಾಗಿದ್ದರೂ, ಇಂತಹ ದೂರದ ವ್ಯಕ್ತಿಗಳಿಗಾಗಿರುವ ಪ್ರೇಮವು, ವಾಸ್ತವಿಕತೆಗಿಂತ ಹೆಚ್ಚಾಗಿ ಭ್ರಮೆಯಲ್ಲಿ ಬೇರೂರಿರುತ್ತದೆ.

ಅಲ್ಪಕಾಲದ ವ್ಯಾಮೋಹಗಳು—ಅವು ಹಾನಿಕಾರಕವಾಗಿರಬಲ್ಲ ಕಾರಣ

ಹೆಚ್ಚಿನ ಅಲ್ಪಕಾಲದ ವ್ಯಾಮೋಹಗಳು ಕ್ಷಣಿಕವಾಗಿದ್ದರೂ, ಅವು ಒಬ್ಬ ಯುವ ವ್ಯಕ್ತಿಗೆ ಬಹಳಷ್ಟು ನಷ್ಟವನ್ನುಂಟುಮಾಡಬಲ್ಲವು. ಒಂದು ವಿಷಯವೇನೆಂದರೆ, ಹದಿವಯಸ್ಕರು ಪ್ರೀತಿಸುವ ಅನೇಕ ವಿಷಯಗಳು ನಿಜವಾಗಿಯೂ ಗೌರವಕ್ಕೆ ಯೋಗ್ಯವಾಗಿರುವುದಿಲ್ಲ. ಜ್ಞಾನಿಯೊಬ್ಬನು ಹೇಳಿದ್ದು: “ಮೂರ್ಖತನವನ್ನು ಅನೇಕ ಉನ್ನತ ಸ್ಥಾನಗಳಲ್ಲಿ ಇರಿಸಲಾಗಿದೆ.” (ಪ್ರಸಂಗಿ 10:6, NW) ಆದುದರಿಂದ ಒಬ್ಬ ಗಾಯಕನು, ನಯವಾದ ಧ್ವನಿ ಇಲ್ಲವೆ ಆಕರ್ಷಕವಾದ ಮುಖಲಕ್ಷಣಗಳನ್ನು ಪಡೆದಿರುವುದರಿಂದ ಪ್ರೀತಿಸಲ್ಪಡುತ್ತಾನೆ. ಆದರೆ ಅವನ ನೈತಿಕತೆಗಳು ಪ್ರಶಂಸಾರ್ಹವಾಗಿವೆಯೊ? ಅವನು ಅಥವಾ ಅವಳು ಸಮರ್ಪಿತ ಕ್ರೈಸ್ತರೋಪಾದಿ “ಕರ್ತನಲ್ಲಿ”ದ್ದಾರೋ?—1 ಕೊರಿಂಥ 7:39.

“ಇಹಲೋಕಸ್ನೇಹವು ದೇವವೈರವೆಂದು” ಸಹ ಬೈಬಲ್‌ ಎಚ್ಚರಿಸುತ್ತದೆ. (ಯಾಕೋಬ 4:4) ಯಾರ ನಡತೆಯನ್ನು ದೇವರು ಖಂಡಿಸುತ್ತಾನೊ ಅಂತಹ ಒಬ್ಬ ವ್ಯಕ್ತಿಯ ಮೇಲೆ ನಿಮ್ಮ ಮನಸ್ಸನ್ನು ಇಡುವಲ್ಲಿ, ಅದು ದೇವರೊಂದಿಗಿನ ನಿಮ್ಮ ಸ್ನೇಹವನ್ನು ಗಂಡಾಂತರಕ್ಕೆ ಈಡುಮಾಡಲಾರದೊ? “ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ” ಎಂದು ಸಹ ಬೈಬಲ್‌ ಆಜ್ಞಾಪಿಸುತ್ತದೆ. (1 ಯೋಹಾನ 5:21) ಯುವ ವ್ಯಕ್ತಿಯೊಬ್ಬನು ಅವನ ಅಥವಾ ಅವಳ ಕೋಣೆಯ ಗೋಡೆಗಳ ಮೇಲೆಲ್ಲಾ ಒಬ್ಬ ಪ್ರಸಿದ್ಧ ಗಾಯಕನ ಚಿತ್ರಗಳನ್ನು ಅಂಟಿಸುವಲ್ಲಿ, ನೀವು ಅದನ್ನು ಏನೆಂದು ಕರೆಯುವಿರಿ? “ಮೂರ್ತಿಪೂಜೆ” ಎಂಬ ಪದವು ಸೂಕ್ತವಾಗಿರದೊ? ಇದು ದೇವರನ್ನು ಹೇಗೆ ಮೆಚ್ಚಿಸಸಾಧ್ಯವಿದೆ?

ತಮ್ಮ ಭ್ರಮೆಗಳು ವಿವೇಚನೆಯನ್ನು ತಳ್ಳಿಹಾಕುವಂತೆಯೂ ಕೆಲವು ಯುವ ಜನರು ಅನುಮತಿಸುತ್ತಾರೆ. ಯುವತಿಯೊಬ್ಬಳು ಹೇಳುವುದು: “ಅವನಿಗೆ ಹೇಗೆ ಅನಿಸುತ್ತದೆ ಎಂದು ನಾನು ಕೇಳುವಾಗಲೆಲ್ಲ—ನನಗಾಗಿ ಯಾವುದೇ ಅನಿಸಿಕೆಗಳಿರುವುದನ್ನು ಅವನು ಅಲ್ಲಗಳೆಯುತ್ತಾನೆ. ಆದರೆ ಅದು ಸುಳ್ಳೆಂದು ಅವನು ನೋಡುವ ಮತ್ತು ವರ್ತಿಸುವ ವಿಧದಿಂದ ನಾನು ಹೇಳಬಲ್ಲೆ.” ಚರ್ಚಾವಿಷಯವಾಗಿರುವ ಆ ಯುವ ಪುರುಷನು, ತನ್ನ ಅನಾಸಕ್ತಿಯನ್ನು ದಯಾಪರವಾಗಿ ವ್ಯಕ್ತಪಡಿಸಲು ಪ್ರಯತ್ನಿಸಿದ್ದಾನೆ, ಆದರೆ ಆಕೆ ಇಲ್ಲ ಎಂಬ ಉತ್ತರವನ್ನು ಸ್ವೀಕರಿಸಲು ಸಿದ್ಧಳಾಗಿರುವುದಿಲ್ಲ.

ಜನಪ್ರಿಯ ಗಾಯಕನೊಬ್ಬನೊಂದಿಗಿನ ತನ್ನ ಮೋಹಪರವಶತೆಯ ಕುರಿತು ಮತ್ತೊಬ್ಬ ಹುಡುಗಿಯು ಬರೆಯುವುದು: ‘ಆತ ನನ್ನ ಬಾಯ್‌ಫ್ರೆಂಡ್‌ ಆಗಿರಬೇಕೆಂದು ನಾನು ಬಯಸುತ್ತೇನೆ ಮತ್ತು ಅದು ನಿಜವಾಗಲೆಂದು ನಾನು ಪ್ರಾರ್ಥಿಸಿದ್ದೇನೆ! ಅವನ ರೆಕಾರ್ಡುಗಳೇ ನನಗೆ ಅವನ ಅತಿ ಸಮೀಪವಿರುವ ಮಾರ್ಗವಾಗಿದ್ದುದದಿಂದ ನಾನು ಅವುಗಳೊಂದಿಗೆ ಮಲಗುತ್ತಿದ್ದೆ. ಅವನನ್ನು ಪಡೆಯದಿದ್ದಲ್ಲಿ ನಾನು ನನ್ನನ್ನೇ ಕೊಂದುಕೊಳ್ಳುವ ಹಂತದಲ್ಲಿದ್ದೇನೆ.’ ‘ಸ್ವಸ್ಥವಾದ ಮನಸ್ಸಿನೊಂದಿಗೆ’ (NW) ತನ್ನನ್ನು ಸೇವಿಸಬೇಕೆಂದು ಆಜ್ಞಾಪಿಸುವ ದೇವರಿಗೆ, ಇಂತಹ ಮೂರ್ಖ ಅನುರಾಗವು ಮೆಚ್ಚಿಕೆಯ ವಿಷಯವಾಗಿರಸಾಧ್ಯವೊ?—ರೋಮಾಪುರ 12:3.

ಜ್ಞಾನೋಕ್ತಿ 13:12ರಲ್ಲಿ ಬೈಬಲ್‌ ಹೇಳುವುದು: “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು.” ಆದುದರಿಂದ ಅಸಾಧ್ಯವಾದ ಒಂದು ಸಂಬಂಧಕ್ಕಾಗಿ ಪ್ರಣಯಾತ್ಮಕ ನಿರೀಕ್ಷೆಗಳನ್ನು ಬೆಳೆಸಿಕೊಳ್ಳುವುದು ಅನಾರೋಗ್ಯಕರವಾಗಿದೆ. ಹಿಂದಿರುಗಿಸಲ್ಪಡದ ಪ್ರೀತಿಯು, “ಖಿನ್ನತೆ, ಆತಂಕ, ಮತ್ತು ಸಾಮಾನ್ಯ ಸಂಕಟ . . . ನಿದ್ರಾಹೀನತೆ ಅಥವಾ ಜಡತೆ, ಎದೆನೋವು ಇಲ್ಲವೆ ಏದುಸಿರಿ”ನ ಕಾರಣವಾಗಿ ವೈದ್ಯರಿಂದ ಸೂಚಿಸಲ್ಪಡುತ್ತದೆ. (ಹೋಲಿಸಿ 2 ಸಮುವೇಲ 13:1, 2.) ಮೋಹಪರವಶಗೊಂಡ ಹುಡುಗಿಯೊಬ್ಬಳು ಒಪ್ಪಿಕೊಂಡದ್ದು: “ನನಗೆ ತಿನ್ನಲಿಕ್ಕಾಗುವುದಿಲ್ಲ. . . . ಇನ್ನುಮುಂದೆ ಅಭ್ಯಾಸಮಾಡಲಿಕ್ಕಾಗುವುದಿಲ್ಲ. ನಾನು . . . ಅವನ ಬಗ್ಗೆ ಹಗಲುಗನಸು ಕಾಣುತ್ತೇನೆ. . . . ನನ್ನ ಪರಿಸ್ಥಿತಿಯು ಶೋಚನೀಯ.”

ನಿಮ್ಮ ಜೀವಿತವನ್ನು ಭ್ರಮೆಯು ಆಳುವಂತೆ ನೀವು ಅನುಮತಿಸುವಾಗ, ನೀವು ಬರಮಾಡಿಕೊಳ್ಳುವ ಹಾವಳಿಯ ಕುರಿತು ನೆನಸಿಕೊಳ್ಳಿ. ಹತೋಟಿ ಮೀರಿದ ಅಲ್ಪಕಾಲ ವ್ಯಾಮೋಹದ ಮೊದಲ ಗುರುತುಗಳಲ್ಲೊಂದು, “ಶಾಲಾಕೆಲಸದಲ್ಲಿನ ಆಲಸ್ಯ”ವಾಗಿದೆ ಎಂದು ಡಾ. ಲಾರೆನ್ಸ್‌ ಬಾಮೆನ್‌ ಗಮನಿಸುತ್ತಾರೆ. ಸ್ನೇಹಿತರು ಮತ್ತು ಕುಟುಂಬದಿಂದ ಪ್ರತ್ಯೇಕವಾಗುವುದು ಮತ್ತೊಂದು ಸಾಮಾನ್ಯ ಪರಿಣಾಮವಾಗಿದೆ. ಅಪಮಾನವೂ ಫಲಿಸಬಲ್ಲದು. “ಇದನ್ನು ಒಪ್ಪಿಕೊಳ್ಳಲು ನನಗೆ ಮುಜುಗರವಾಗುತ್ತದೆ, ಆದರೆ ಜೂಡಿಯ ಮೇಲೆ ನಾನು ವ್ಯಾಮೋಹಗೊಂಡಾಗ, ಒಬ್ಬ ವಿದೂಷಕನಂತೆ ನಾನು ವರ್ತಿಸಿದೆ,” ಎಂದು ಬರಹಗಾರ ಗಿಲ್‌ ಶ್ವಾರ್ಟ್ಸ್‌ ಹೇಳುತ್ತಾರೆ. ಅಲ್ಪಕಾಲದ ವ್ಯಾಮೋಹವು ಅಳಿದುಹೋದ ಬಹಳ ಸಮಯದ ನಂತರ, ಯಾರೊ ಒಬ್ಬರನ್ನು ಹಿಂಬಾಲಿಸಿದ, ಬಹಿರಂಗವಾಗಿ ರಂಪ ಎಬ್ಬಿಸಿದ, ಮತ್ತು ಒಟ್ಟಿನಲ್ಲಿ ಸ್ವತಃ ಒಬ್ಬ ಹುಚ್ಚನಾಗಿ ವರ್ತಿಸಿದ ನೆನಪುಗಳು ಸುಳಿದಾಡಬಲ್ಲವು.

ವಾಸ್ತವಿಕತೆಯನ್ನು ಎದುರಿಸುವುದು

ಜೀವಿಸಿರುವವರಲ್ಲೇ ಅತ್ಯಂತ ಜ್ಞಾನವಂತ ಪುರುಷರಲ್ಲಿ ಒಬ್ಬನಾದ ರಾಜ ಸೊಲೊಮೋನನು, ತನ್ನ ಅನಿಸಿಕೆಗಳನ್ನು ಹಿಂದಿರುಗಿಸದಿದ್ದ ಒಬ್ಬ ಹುಡುಗಿಯನ್ನು ಬಹಳವಾಗಿ ಪ್ರೀತಿಸಿದನು. ಬರೆಯಲ್ಪಟ್ಟಿರುವ ಅತ್ಯಂತ ಸುಂದರವಾದ ಕವಿತೆಗಳಲ್ಲಿ ಕೆಲವನ್ನು ಆಕೆಗಾಗಿ ಬರೆದನು. ಆಕೆ “ಚಂದ್ರನಂತೆ ಸೌಮ್ಯಳು, ಸೂರ್ಯನಂತೆ ಶುಭ್ರಳು” ಆಗಿದ್ದಳೆಂದು ಹೇಳಿದರೂ, ಅವಳೊಂದಿಗೆ ಯಾವ ಸಾಫಲ್ಯವನ್ನೂ ಅವನು ಪಡೆಯಲಿಲ್ಲ!—ಪರಮ ಗೀತ 6:10.

ಆದರೂ, ಸೊಲೊಮೋನನು ಆಕೆಯ ಮನಸ್ಸನ್ನು ಗೆಲ್ಲುವ ತನ್ನ ಪ್ರಯತ್ನಗಳನ್ನು ಕಟ್ಟಕಡೆಗೆ ನಿಲ್ಲಿಸಿದನು. ನೀವು ಸಹ ನಿಮ್ಮ ಅನಿಸಿಕೆಗಳನ್ನು ಹೇಗೆ ಮತ್ತೆ ಸ್ವಾಧೀನಪಡಿಸಿಕೊಳ್ಳಬಲ್ಲಿರಿ? “ತನ್ನಲ್ಲೇ ಭರವಸವಿಡುವವನು ಮೂಢನು,” ಎಂಬುದಾಗಿ ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 28:26) ನೀವು ಒಂದು ಪ್ರಣಯಾತ್ಮಕ ಭ್ರಮೆಯಲ್ಲಿ ಸಿಲುಕಿಕೊಂಡಿರುವಾಗ ಇದು ವಿಶೇಷವಾಗಿ ಸತ್ಯವಾಗಿರುತ್ತದೆ. ಆದರೆ, “ಜ್ಞಾನದಿಂದ ನಡೆಯುವವನು ಉದ್ಧಾರವನ್ನು ಪಡೆಯುವನು.” ಇದರ ಅರ್ಥ, ವಿಷಯಗಳ ವಾಸ್ತವ ಸ್ಥಿತಿಯನ್ನು ಅವಲೋಕಿಸುವುದಾಗಿದೆ.

“ನಿರಾಧಾರದ ನಿರೀಕ್ಷೆ ಹಾಗೂ ಖಚಿತವಾದ ನಿರೀಕ್ಷೆಯ ನಡುವಣ ವ್ಯತ್ಯಾಸ ತಿಳಿಯುವುದು ಹೇಗೆ?” ಎಂಬುದಾಗಿ ಡಾ. ಹಾವರ್ಡ್‌ ಹಾಲ್ಪರ್ನ್‌ ಕೇಳುತ್ತಾರೆ. “ನಿಜಾಂಶಗಳನ್ನು ಜಾಗರೂಕವಾಗಿ ಹಾಗೂ ಭಾವಶೂನ್ಯವಾಗಿ ನೋಡುವುದರ ಮೂಲಕವೇ.” ಇದನ್ನು ಪರಿಗಣಿಸಿರಿ: ಈ ವ್ಯಕ್ತಿಯೊಂದಿಗೆ ನಿಜವಾದ ಪ್ರಣಯವು ಅರಳುವ ಸಾಧ್ಯತೆಗಳೆಷ್ಟು? ಆ ವ್ಯಕ್ತಿಯು ಪ್ರಖ್ಯಾತನಾಗಿದ್ದರೆ, ಅವನನ್ನು ನೀವು ಎಂದೂ ಭೇಟಿಯಾಗದಿರುವ ಸಂಭವವೇ ಹೆಚ್ಚು! ಒಬ್ಬ ಶಿಕ್ಷಕನಂತಹ ಯಾವನೊ ಹಿರಿಯ ವ್ಯಕ್ತಿಯು ಒಳಗೊಂಡಿರುವಾಗಲೂ ನಿಮ್ಮ ಸಾಧ್ಯತೆಗಳು ಕಡಿಮೆಯಾಗಿರುತ್ತವೆ.

ಇನ್ನೂ ಹೆಚ್ಚಾಗಿ, ನೀವು ಇಷ್ಟಪಡುವ ವ್ಯಕ್ತಿಯು ಇಷ್ಟರ ವರೆಗೆ ನಿಮ್ಮಲ್ಲಿ ಯಾವುದೇ ಆಸಕ್ತಿಯನ್ನು ತೋರಿಸಿದ್ದಾನೊ? ತೋರಿಸಿರದಿದ್ದಲ್ಲಿ, ವಿಷಯಗಳು ಭವಿಷ್ಯತ್ತಿನಲ್ಲಿ ಬದಲಾಗುವವು ಎಂದು ನಂಬಲು ವಾಸ್ತವವಾದ ಕಾರಣವಿದೆಯೊ? ಅಥವಾ ಅವನ ಇಲ್ಲವೆ ಅವಳ ಮುಗ್ಧ ಮಾತುಗಳು ಮತ್ತು ಕ್ರಿಯೆಗಳಿಗೆ ನೀವು ಸುಮ್ಮನೆ ಪ್ರಣಯಾಸಕ್ತಿಯ ಅರ್ಥವನ್ನು ಕೊಡುತ್ತಿದ್ದೀರೊ? ಹೆಚ್ಚಿನ ದೇಶಗಳಲ್ಲಿ, ಪ್ರಣಯದ ವಿಷಯಗಳಲ್ಲಿ ಪುರುಷರು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವುದು ರೂಢಿಯಾಗಿರುತ್ತದೆ. ಅನಾಸಕ್ತನಾಗಿರುವ ಒಬ್ಬನನ್ನು ಬಿಡದೆ ಬೆನ್ನಟ್ಟುವ ಮೂಲಕ ಹುಡುಗಿಯೊಬ್ಬಳು ತನ್ನನ್ನು ಅಪಮಾನಕ್ಕೆ ಗುರಿಮಾಡಿಕೊಳ್ಳಸಾಧ್ಯವಿದೆ.

ಅಲ್ಲದೆ, ವ್ಯಕ್ತಿಯು ನಿಮ್ಮ ಪ್ರೀತಿಗೆ ಪ್ರತಿಕ್ರಿಯಿಸುವಲ್ಲಿ, ನೀವು ಏನು ಮಾಡುವಿರಿ? ವಿವಾಹದ ಜವಾಬ್ದಾರಿಗಳಿಗೆ ನೀವು ಸಿದ್ಧರಾಗಿದ್ದೀರೊ? ಇಲ್ಲವಾದಲ್ಲಿ, ಭ್ರಮೆಯ ಮೇಲೆ ಲಕ್ಷ್ಯವಿಡಲು ನಿರಾಕರಿಸುವ ಮೂಲಕ, ‘ನಿಮ್ಮ ಹೃದಯದಿಂದ ಕರಕರೆಯನ್ನು . . . ತೊಲಗಿಸಿ.’ “ಪ್ರೀತಿಸುವ ಸಮಯ”ವಿದೆ ಮತ್ತು ಅದು ಅನೇಕ ವರ್ಷಗಳ ನಂತರ, ನಿಮಗೆ ಪ್ರಾಪ್ತವಯಸ್ಸಾದಾಗ ಆಗಿರಬಹುದು.—ಪ್ರಸಂಗಿ 3:8; 11:10.

ನಿಮ್ಮ ಅನಿಸಿಕೆಗಳನ್ನು ವಿಶ್ಲೇಷಿಸುವುದು

“ವ್ಯಕ್ತಿಯೊಬ್ಬನು ತಾನು ಮೋಹಪರವಶಗೊಂಡಿರುವ ವ್ಯಕ್ತಿಯನ್ನು, ಅವಳು ಅಥವಾ ಅವನು ‘ಪರಿಪೂರ್ಣ ಪ್ರೇಮಿ’ಯೆಂದು ಭಾವಿಸುವಾಗ, ಅಂದರೆ, ಒಬ್ಬ ಸಂಗಾತಿಯಲ್ಲಿ ಇರಬೇಕಾದ ಎಲ್ಲ ವೈಶಿಷ್ಟ್ಯಗಳು ಆ ವ್ಯಕ್ತಿಯಲ್ಲಿವೆ ಎಂದು ತೀರ್ಮಾನಿಸುವಾಗ ಮೋಹಪರವಶತೆಯು ಸಂಭವಿಸುತ್ತದೆ,” ಎಂದು ಡಾ. ಚಾರ್ಲ್ಸ್‌ ಸಾಸ್ಟ್ರೋ ಗಮನಿಸುತ್ತಾರೆ. ಹಾಗಿದ್ದರೂ, ಅಂತಹ “ಪರಿಪೂರ್ಣ ಪ್ರೇಮಿ”ಯು ಅಸ್ತಿತ್ವದಲ್ಲಿರುವುದಿಲ್ಲ. “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” ಎಂದು ಬೈಬಲ್‌ ಹೇಳುತ್ತದೆ.—ರೋಮಾಪುರ 3:23.

ಆದುದರಿಂದ ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ನಾನು ಯಾವ ವ್ಯಕ್ತಿಯ ಮೇಲೆ ಮನಸ್ಸನ್ನು ಇಟ್ಟಿದ್ದೇನೊ ಆ ವ್ಯಕ್ತಿಯನ್ನು ನಾನು ನಿಜವಾಗಿ ಎಷ್ಟು ಚೆನ್ನಾಗಿ ಬಲ್ಲೆ? ನಾನೊಂದು ಕಾಲ್ಪನಿಕ ಸ್ವರೂಪವನ್ನು ಪ್ರೀತಿಸುತ್ತಿದ್ದೇನೊ? ಈ ವ್ಯಕ್ತಿಯ ದೋಷಗಳಿಗೆ ನಾನು ಕುರುಡಾಗುತ್ತಿದ್ದೇನೊ? ನಿಮ್ಮ ಕನಸಿನ ಪ್ರೇಮಿಯ ಕಡೆಗಿನ ಒಂದು ವಾಸ್ತವವಾದ ನೋಟವು, ನಿಮ್ಮನ್ನು ನಿಮ್ಮ ಪ್ರಣಯಾತ್ಮಕ ಮಂಪರದಿಂದ ಹೊರಗೆಳೆಯಲು ಸಾಕಾಗಿರಬಹುದು! ಈ ವ್ಯಕ್ತಿಗಾಗಿರುವ ನಿಮ್ಮ ಪ್ರೇಮವನ್ನು ವಿಶ್ಲೇಷಿಸುವುದೂ ಸಹಾಯಕಾರಿಯಾಗಿದೆ. ಬರಹಗಾರ್ತಿ ಕ್ಯಾಥಿ ಮೆಕಾಯ್‌ ಹೇಳುವುದು: “ಅಪಕ್ವ ಪ್ರೀತಿಯು ಒಂದೇ ಗಳಿಗೆಯಲ್ಲಿ ಬಂದು ಹೋಗಬಲ್ಲದು . . . ಗಮನದ ಕೇಂದ್ರಬಿಂದು ನೀವಾಗಿದ್ದೀರಿ, ಮತ್ತು ಮೋಹಿತರಾಗಿರುವ ವಿಚಾರದೊಂದಿಗೆ ನೀವು ಮೋಹಿತರಾಗಿದ್ದೀರಿ ಅಷ್ಟೇ . . . ಅಪಕ್ವ ಪ್ರೀತಿಯು ಅಂಟಿಕೊಳ್ಳುವಂತಹದ್ದೂ, ಅಧೀನಪಡಿಸಿಕೊಳ್ಳುವಂತಹದ್ದೂ, ಅಸೂಯೆಪಡುವಂತಹದ್ದೂ ಆಗಿದೆ. . . . ಅಪಕ್ವ ಪ್ರೀತಿಯು ಪರಿಪೂರ್ಣತೆಯನ್ನು ಕೇಳಿಕೊಳ್ಳುತ್ತದೆ.”—1 ಕೊರಿಂಥ 13:4, 5ರ ವ್ಯತ್ಯಾಸತೋರಿಸಿರಿ.

ಅವನನ್ನು ಅಥವಾ ಅವಳನ್ನು ನಿಮ್ಮ ಮನಸ್ಸಿನಿಂದ ಹೊರಹಾಕುವುದು

ನಿಮಗೆ ಹೇಗನಿಸುತ್ತದೆ ಎಂಬ ವಿಚಾರವನ್ನು, ಲೋಕದಲ್ಲಿರುವ ಎಲ್ಲ ತರ್ಕವು ಸಂಪೂರ್ಣವಾಗಿ ತೊಡೆದುಹಾಕುವುದಿಲ್ಲ ಎಂಬುದು ಒಪ್ಪತಕ್ಕ ವಿಷಯವೇ. ಆದರೆ ಸಮಸ್ಯೆಯನ್ನು ಪೋಷಿಸುವುದರಿಂದ ನೀವು ದೂರವಿರಸಾಧ್ಯವಿದೆ. ಕಾಮಸಂಬಂಧವಾದ ಪ್ರಣಯ ಕಾದಂಬರಿಗಳನ್ನು ಓದುವುದು, ಟಿವಿ ಪ್ರೇಮ ಕಥೆಗಳನ್ನು ವೀಕ್ಷಿಸುವುದು, ಅಥವಾ ನಿರ್ದಿಷ್ಟ ಪ್ರಕಾರದ ಸಂಗೀತಕ್ಕೆ ಕಿವಿಗೊಡುವುದು—ಇವು ನಿಮ್ಮ ಒಂಟಿತನದ ಅನಿಸಿಕೆಗಳನ್ನು ಹೆಚ್ಚು ಕೆಡಿಸಬಲ್ಲವು. ಆ ಸನ್ನಿವೇಶದ ಕುರಿತು ದೀರ್ಘಾಲೋಚಿಸುವುದನ್ನು ನಿಲ್ಲಿಸಿ. “ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು.”—ಜ್ಞಾನೋಕ್ತಿ 26:20.

ನಿಮ್ಮನ್ನು ನಿಜವಾಗಿಯೂ ಪ್ರೀತಿಸುವ ಮತ್ತು ನಿಮಗಾಗಿ ಚಿಂತಿಸುವ ಜನರಿಗೆ, ಒಂದು ಭ್ರಾಮಕ ಪ್ರಣಯ ಕಾದಂಬರಿಯು ಬದಲಿಯಾಗಿರುವುದಿಲ್ಲ. ‘ನಿಮ್ಮನ್ನು ಪ್ರತ್ಯೇಕಿಸಿ’ಕೊಳ್ಳಬೇಡಿ. (ಜ್ಞಾನೋಕ್ತಿ 18:1, NW) ನಿಮ್ಮ ಹೆತ್ತವರು ಬಹಳ ಸಹಾಯಕಾರಿ ಆಗಿರಬಲ್ಲರೆಂದು ನೀವು ಕಂಡುಕೊಳ್ಳಬಹುದು. ನಿಮ್ಮ ಅನಿಸಿಕೆಗಳನ್ನು ಅಡಗಿಸಲು ನೀವು ಮಾಡಿದ ಎಲ್ಲ ಪ್ರಯತ್ನಗಳ ಹೊರತೂ, ಯಾವುದೊ ವಿಷಯವು ನಿಮ್ಮನ್ನು ಕೊರೆಯುತ್ತಿದೆ ಎಂಬುದನ್ನು ಅವರು ಈಗಾಗಲೇ ವಿವೇಚಿಸಿರಬಹುದು. ಏಕೆ ಅವರನ್ನು ಸಮೀಪಿಸಿ, ಅವರೊಂದಿಗೆ ಮನಬಿಚ್ಚಿ ಮಾತಾಡಬಾರದು? (ಹೋಲಿಸಿ ಜ್ಞಾನೋಕ್ತಿ 23:26.) ಪ್ರೌಢ ಕ್ರೈಸ್ತನೊಬ್ಬನು ಒಬ್ಬ ಒಳ್ಳೆಯ ಕೇಳುಗನಾಗಿಯೂ ಪರಿಣಮಿಸಬಹುದು.

“ಕಾರ್ಯಮಗ್ನರಾಗಿರಿ” ಎಂಬುದಾಗಿ ಹದಿವಯಸ್ಕರಿಗಾಗಿ ಬರೆಯುವ ಎಸ್ತರ್‌ ಡೇವಿಡೊವಿಟ್ಸ್‌ ಉತ್ತೇಜಿಸುತ್ತಾರೆ. ಒಂದು ಹವ್ಯಾಸವನ್ನು ಆರಂಭಿಸಿರಿ, ಒಂದಿಷ್ಟು ವ್ಯಾಯಾಮವನ್ನು ಮಾಡಿರಿ, ಭಾಷೆಯೊಂದನ್ನು ಕಲಿಯಿರಿ, ಒಂದು ಬೈಬಲ್‌ ಸಂಶೋಧನಾ ಯೋಜನೆಯನ್ನು ಆರಂಭಿಸಿರಿ. ಉಪಯುಕ್ತ ಚಟುವಟಿಕೆಗಳಲ್ಲಿ ತಲ್ಲೀನರಾಗಿರುವುದು, ಸ್ವಲ್ಪ ಮಟ್ಟಿಗೆ ತ್ಯಜನ ಲಕ್ಷಣಗಳನ್ನು ಸರಾಗಗೊಳಿಸಬಲ್ಲದು.

ಅಲ್ಪಕಾಲದ ವ್ಯಾಮೋಹವನ್ನು ಜಯಿಸುವುದು ಸುಲಭವಲ್ಲ. ಆದರೆ ಸಮಯವು ದಾಟಿದಂತೆ, ವೇದನೆಯು ಕಡಿಮೆಯಾಗುವುದು. ನೀವು ನಿಮ್ಮ ಕುರಿತು, ನಿಮ್ಮ ಅನಿಸಿಕೆಗಳ ಕುರಿತು ಹೆಚ್ಚನ್ನು ಕಲಿತಿರುವಿರಿ, ಮತ್ತು ಭವಿಷ್ಯತ್ತಿನಲ್ಲಿ ನಿಜವಾದ ಪ್ರೀತಿಯು ಎದುರಾಗುವಲ್ಲಿ ಅದರೊಂದಿಗೆ ವ್ಯವಹರಿಸಲು ನೀವು ಉತ್ತಮವಾಗಿ ಸಿದ್ಧರಾಗಿರುವಿರಿ! ಆದರೆ ‘ನಿಜವಾದ ಪ್ರೀತಿ’ಯನ್ನು ನೀವು ಹೇಗೆ ಗುರುತಿಸಶಕ್ತರಾಗುವಿರಿ?

ಚರ್ಚೆಗಾಗಿ ಪ್ರಶ್ನೆಗಳು

◻ ಯುವ ಜನರಲ್ಲಿ ಅಲ್ಪಕಾಲದ ವ್ಯಾಮೋಹಗಳು ಏಕೆ ಸಾಮಾನ್ಯವಾಗಿವೆ?

◻ ಯೌವನದ ಪ್ರಣಯಾತ್ಮಕ ಭ್ರಮೆಗಳ ಕೇಂದ್ರಬಿಂದುಗಳು ಅನೇಕ ವೇಳೆ ಯಾರಾಗಿರುತ್ತಾರೆ, ಮತ್ತು ಏಕೆ?

◻ ಅಲ್ಪಕಾಲದ ವ್ಯಾಮೋಹಗಳು ಏಕೆ ಹಾನಿಕಾರಕವಾಗಿರಬಲ್ಲವು?

◻ ಅಲ್ಪಕಾಲದ ವ್ಯಾಮೋಹವನ್ನು ಜಯಿಸಲು ಯುವ ವ್ಯಕ್ತಿಯು ಮಾಡಬಲ್ಲ ಕೆಲವು ವಿಷಯಗಳಾವುವು?

◻ ಒಂದು ಪ್ರಣಯಾತ್ಮಕ ಭ್ರಮೆಯನ್ನು ಪೋಷಿಸುವುದರಿಂದ ಯುವ ವ್ಯಕ್ತಿಯು ಹೇಗೆ ದೂರವಿರಸಾಧ್ಯವಿದೆ?

[ಪುಟ 223 ರಲ್ಲಿರುವ ಸಂಕ್ಷಿಪ್ತ ವಿವರಣೆ]

‘ನನಗೆ ತಿನ್ನಲಿಕ್ಕಾಗುವುದಿಲ್ಲ. ಇನ್ನುಮುಂದೆ ಅಭ್ಯಾಸಮಾಡಲಿಕ್ಕಾಗುವುದಿಲ್ಲ. ನಾನು ಅವನ ಬಗ್ಗೆ ಹಗಲುಗನಸು ಕಾಣುತ್ತೇನೆ. ನನ್ನ ಪರಿಸ್ಥಿತಿಯು ಶೋಚನೀಯ’

[ಪುಟ 220 ರಲ್ಲಿರುವ ಚಿತ್ರಗಳು]

ವಿರುದ್ಧ ಲಿಂಗದವರಲ್ಲಿ ಹಿರಿಯ, ಅಪ್ರಾಪ್ಯ ಸದಸ್ಯರ ಮೇಲಿನ ಅಲ್ಪಕಾಲದ ವ್ಯಾಮೋಹಗಳು ಬಹಳ ಸಾಮಾನ್ಯ

[ಪುಟ 221 ರಲ್ಲಿರುವ ಚಿತ್ರಗಳು]

ಈ ವ್ಯಕ್ತಿಯ ಕಡೆಗೆ ಒಂದು ಭಾವಶೂನ್ಯ, ವಾಸ್ತವವಾದ ನೋಟವನ್ನು ಬೀರುವುದು, ನಿಮ್ಮ ಪ್ರಣಯಾತ್ಮಕ ಭಾವನೆಗಳನ್ನು ಪರಿಹರಿಸಬಹುದು